ವೈರಲ್ ಆಗುತ್ತಿದೆ ‘ಮೋದಿಯ ಅಪ್ಪುಗೆ ರಾಜತಾಂತ್ರಿಕತೆ’ಯ ಟ್ರೋಲ್ ವಿಡಿಯೊ!
ಜೆನ್ ಝೀ ಮೇಲೆ ರಾಹುಲ್ ಗಾಂಧಿಯ ‘ಡರೋ ಮತ್’ ಅಭಿಯಾನದ ಪ್ರಭಾವ?

ರಾಹುಲ್ ಗಾಂಧಿ |Photo Credit : x
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಿಮಿಕ್ರಿ ಹಾಗೂ ರಾಜಕೀಯ ವಿಡಂಬನೆ ಮೂಲಕ ಗಮನ ಸೆಳೆದಿರುವ ಸ್ಟ್ಯಾಂಡ್ಅಪ್ ಕಾಮಿಡಿಯನ್ ಪುಲ್ಕಿತ್ ಮಣಿ ಅವರು ಸೆ.19ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಕಾಂಗ್ರೆಸ್ ನ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಪ್ರತಿಧ್ವನಿ) ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡು, ಪ್ರಧಾನಿ ಮೋದಿ ಅವರನ್ನು ವ್ಯಂಗ್ಯಾತ್ಮಕವಾಗಿ ಅಭಿನಯಿಸಿ ತೋರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಕಾಂಗ್ರೆಸ್ ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊಗೆ “My friend!! Great Harassment!!” ಎಂಬ ಹಾಸ್ಯಮಯ ಶೀರ್ಷಿಕೆ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಪುಲ್ಕಿತ್ ಮಣಿ ಅವರು ಮೋದಿ ಅವರ ಧ್ವನಿ, ಮಾತನಾಡುವ ಶೈಲಿ, ಹಾವಭಾವ ಹಾಗೂ ದೇಹಭಾಷೆಯನ್ನು ಅನುಕರಿಸಿದ್ದಾರೆ.
ವಿಶೇಷವಾಗಿ ಮೋದಿ ಅವರು ವಿದೇಶಿ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ತೋರುವ ಆತ್ಮೀಯತೆ, ಕೈಕುಲುಕುವಿಕೆ ಮತ್ತು ಪದೇಪದೇ ಅಪ್ಪಿಕೊಳ್ಳುವ ಶೈಲಿಯನ್ನು ಮಣಿ ಅವರು ಉತ್ಪ್ರೇಕ್ಷಿತವಾಗಿ ಬಿಂಬಿಸಿ ರಾಜಕೀಯ ವಿಡಂಬನೆ ಮಾಡಿದ್ದಾರೆ. ಮೋದಿ ಅವರು ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ರೀತಿಯನ್ನೇ ಅನುಕರಿಸುವಂತೆ ರಾಹುಲ್ ಗಾಂಧಿ ಅವರನ್ನು ಪದೇಪದೇ ಅಪ್ಪಿಕೊಳ್ಳುವ ಮೂಲಕ ಮೋದಿ ಅವರ ‘ಅಪ್ಪುಗೆ ರಾಜತಾಂತ್ರಿಕತೆ’ಯನ್ನು ವ್ಯಂಗ್ಯಗೊಳಿಸಲಾಗಿದೆ.
ಈ ವಿಡಿಯೊಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರನ್ನು ಸಾರ್ವಜನಿಕವಾಗಿ ವ್ಯಂಗ್ಯಗೊಳಿಸುವ ಪ್ರವೃತ್ತಿ ಬೆಳೆಯುತ್ತಿರುವುದರತ್ತ ಗಮನ ಸೆಳೆದಿದ್ದಾರೆ. ಮುಖ್ಯವಾಗಿ, ಕೆಲವು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾನ್ಯ ಜನರು ಸಾರ್ವಜನಿಕವಾಗಿ ಟೀಕಿಸಲು ಹಿಂಜರಿಯುತ್ತಿದ್ದ ವಾತಾವರಣ ಹೇಗೆ ಬದಲಾಯಿತು ಎಂಬ ಚರ್ಚೆಯೂ ನಡೆಯುತ್ತಿದೆ.
ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಎಕ್ಸ್ ಮೂಲಕ ಸಂದೇಶವನ್ನು ಸಂಘಟಿತವಾಗಿ ಹರಡುವಲ್ಲಿ ಬಿಜೆಪಿ ದೀರ್ಘಕಾಲದಿಂದ ಬಲಿಷ್ಠ ಡಿಜಿಟಲ್ ಜಾಲವನ್ನು ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕಂಟೆಂಟ್ ಕ್ರಿಯೇಟರ್ಗಳನ್ನು ಸಂಘಟಿತವಾಗಿ ಹಣಿಯುವ ಬೃಹತ್ ಸೋಶಿಯಲ್ ಮೀಡಿಯಾ ಟ್ರೋಲರ್ಗಳ ಪಡೆಗಳೂ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿರುವುದರಿಂದ ಪ್ರಧಾನಿ ಮೋದಿ ಕುರಿತು ಯಾವುದೇ ನಕಾರಾತ್ಮಕ ಟೀಕೆಗಳನ್ನು ಮಾಡಲು ಬಹುತೇಕರು ಹಿಂಜರಿಯುವಂತಹ ಪರಿಸ್ಥಿತಿ ಇತ್ತು. ಆದರೆ, ಜೆನ್ ಝೀಗಳೇ ಅಧಿಕ ಬಳಕೆದಾರರಾಗಿರುವ ಇನ್ಸ್ಟಾಗ್ರಾಮ್ನಲ್ಲಿ ಬಿಜೆಪಿ ಪರವಾದ ಅಲ್ಗಾರಿದಂ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಪ್ರಧಾನಿ ಮೋದಿಯನ್ನು ಟ್ರೋಲ್ ಮಾಡುವುದು ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಅದರಲ್ಲೂ ಮುಖ್ಯವಾಗಿ, ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆ ಸಂದರ್ಭದಲ್ಲಿ ಈ ಟ್ರೋಲ್ಗಳು ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಚಳುವಳಿಗಳಲ್ಲಿ ಸ್ಥಾನ ಪಡೆಯಲು ತೊಡಗಿದ್ದವು.
ಇದರೊಂದಿಗೆ, ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡ ರಾಜಕೀಯ ವ್ಯಂಗ್ಯವೂ ಹೊಸ ಡಿಜಿಟಲ್ ಭಾಷೆಯನ್ನು ಪಡೆದುಕೊಳ್ಳುತ್ತಿರುವುದು ಗಮನಾರ್ಹ. ಜೆನ್ಝಡ್ ಬಳಕೆದಾರರ ಪ್ರಾಬಲ್ಯವಿರುವ ಇನ್ಸ್ಟಾಗ್ರಾಮ್ನಲ್ಲಿ ಮಿಮಿಕ್ರಿ, ವಿಡಿಯೊ ಮೀಮ್, ವ್ಯಂಗ್ಯಾತ್ಮಕ ರೀಲ್ಸ್ ಮತ್ತು ರಾಜಕೀಯ ಪ್ಯಾರಡಿಗಳ ಮೂಲಕ ನಾಯಕನ ಸಾರ್ವಜನಿಕ ವ್ಯಕ್ತಿತ್ವವನ್ನೇ ಹಾಸ್ಯದ ವಿಷಯವನ್ನಾಗಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.
‘ಡರೋ ಮತ್’ ಎಂಬ ರಾಹುಲ್ ಗಾಂಧಿ ಅಭಿಯಾನ
ಇಲ್ಲಿ ರಾಹುಲ್ ಗಾಂಧಿಯವರ ‘ಡರೋ ಮತ್’ (ಭಯಪಡಬೇಡಿ) ಎಂಬ ರಾಜಕೀಯ ಸಂದೇಶವನ್ನು ಗಮನಿಸಬೇಕಾಗುತ್ತದೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಅಭಿಯಾನ ಆರಂಭಿಸುವ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದ ರಾಜಕಾರಣಿಗಳು, ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್ಗಳ ಸಂಖ್ಯೆ ಇಂದಿನ ಸಾಮಾಜಿಕ ಮಾಧ್ಯಮದ ಪರಿಸ್ಥಿತಿಗೆ ಹೋಲಿಸಿದರೆ ಸೀಮಿತವಾಗಿತ್ತು. ರಾಹುಲ್ ಗಾಂಧಿ ಅವರು ‘ಡರೋ ಮತ್’ ಅನ್ನು ಕಾಂಗ್ರೆಸ್ನ ರಾಜಕೀಯ ತತ್ವದ ಭಾಗವಾಗಿ ಪ್ರತಿಪಾದಿಸಿದ್ದರು. ಜನರು ಸತ್ಯವನ್ನು ಎದುರಿಸಲು ಮತ್ತು ಪ್ರಶ್ನಿಸಲು ಭಯಪಡಬಾರದು ಎಂಬ ಸಂದೇಶವನ್ನು ಅವರು ಇದರ ಮೂಲಕ ಮುಂದಿಟ್ಟಿದ್ದರು.
ಭಾರತ್ ಜೋಡೋ ಯಾತ್ರೆಯಲ್ಲಿ ಈ ಸಂದೇಶ ಇನ್ನಷ್ಟು ಸಾರ್ವಜನಿಕ ಸ್ವರೂಪ ಪಡೆದುಕೊಂಡಿತು. ರಾಹುಲ್ ಗಾಂಧಿ ಅವರು ಯಾತ್ರೆಯುದ್ದಕ್ಕೂ “ಡರೋ ಮತ್, ಡರೋ ಮತ್” ಎಂದು ಹೇಳುತ್ತಾ ಜನರು, ವಿದ್ಯಾರ್ಥಿಗಳು ಮತ್ತು ಯುವಜನರು ತಮ್ಮ ಪ್ರಶ್ನೆಗಳನ್ನು ಮುಕ್ತವಾಗಿ ಮುಂದಿಡಬೇಕು ಎಂಬ ಸಂದೇಶವನ್ನು ನೀಡುತ್ತಿದ್ದರು.
ಅಷ್ಟೇ ಅಲ್ಲ, ರಾಹುಲ್ ಗಾಂಧಿಯವರ ಈ ರಾಜಕೀಯ ಭಾಷೆ ಪ್ರಧಾನಿ ಮೋದಿ ಅವರ ಟೀಕೆಯಲ್ಲೇ ನಿಲ್ಲಲಿಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧವೂ ಅವರು ಬಹಿರಂಗವಾಗಿ ತೀಕ್ಷ್ಣ ರಾಜಕೀಯ ಟೀಕೆಗಳನ್ನು ಮಾಡುತ್ತಾ ಬಂದರು. ಭಾರತ್ ಜೋಡೋ ಯಾತ್ರೆಯ ಅಂತ್ಯದಲ್ಲಿಯೂ ಅವರು ಬಿಜೆಪಿ ನಾಯಕತ್ವ, ಆರ್ಎಸ್ಎಸ್ ಮತ್ತು ನರೇಂದ್ರ ಮೋದಿ ವಿರುದ್ಧ ನೇರ ಆರೋಪಗಳನ್ನು ಮುಂದಿಟ್ಟಿದ್ದರು.
ಜೆನ್ಝಡ್ ಮೇಲೆ ‘ಡರೋ ಮತ್’ ಬೀರಿದ ಪ್ರಭಾವವೇ?
ಇಂದಿನ ಜೆನ್ಝಡ್ ರಾಜಕೀಯ ವ್ಯಂಗ್ಯ ಸಂಸ್ಕೃತಿಯನ್ನು ನೋಡಿದಾಗ ಈ ಪ್ರಶ್ನೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರ ‘ಡರೋ ಮತ್’ ಅಭಿಯಾನಕ್ಕೂ ಇಂದಿನ ಇನ್ಸ್ಟಾಗ್ರಾಮ್ ಮೀಮ್ ಸಂಸ್ಕೃತಿಗೂ ನೇರ ಕಾರಣ-ಪರಿಣಾಮ ಸಂಬಂಧವಿದೆ ಎಂದು ಸಾಬೀತುಪಡಿಸುವ ಅಂಕಿಅಂಶಗಳು ಇಲ್ಲದಿದ್ದರೂ, ರಾಜಕೀಯವಾಗಿ ಭಯಪಡದೆ ಪ್ರಶ್ನಿಸಬೇಕು, ಅಧಿಕಾರದಲ್ಲಿರುವವರನ್ನೂ ಪ್ರಶ್ನಿಸಬಹುದು ಮತ್ತು ಅವರ ಸಾರ್ವಜನಿಕ ವ್ಯಕ್ತಿತ್ವವನ್ನೂ ವ್ಯಂಗ್ಯಗೊಳಿಸಬಹುದು ಎಂಬ ಮನೋಭಾವವನ್ನು ಬೆಳೆಸುವಲ್ಲಿ ರಾಹುಲ್ ಗಾಂಧಿಯವರ ನಿರಂತರ ಅಭಿಯಾನವು ಒಂದು ಪ್ರಮುಖ ಪ್ರಭಾವ ಬೀರಿದೆ ಎಂಬ ವಾದವನ್ನು ಮುಂದಿಡಲು ಸಾಕಷ್ಟು ರಾಜಕೀಯ ಸಂದರ್ಭಗಳಿವೆ.
ವಿಶೇಷವಾಗಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ದೇಶದಾದ್ಯಂತ ಯುವಜನರೊಂದಿಗೆ ನೇರವಾಗಿ ಸಂವಾದ ನಡೆಸಿದರು. ಉದ್ಯೋಗ, ಪರೀಕ್ಷಾ ಅಕ್ರಮ, ಶಿಕ್ಷಣ ಮತ್ತು ಭವಿಷ್ಯದ ಕುರಿತ ಪ್ರಶ್ನೆಗಳನ್ನು ರಾಜಕೀಯ ಚರ್ಚೆಯ ಕೇಂದ್ರಕ್ಕೆ ತಂದರು. ಯುವಜನರ ಪ್ರಶ್ನೆಗಳಿಗೆ ರಾಜಕೀಯ ವೇದಿಕೆಯಲ್ಲಿ ಜಾಗ ಕಲ್ಪಿಸುವ ಈ ವಿಧಾನವೂ ‘ಪ್ರಶ್ನಿಸು’ ಎಂಬ ಸಂದೇಶದ ಭಾಗವಾಗಿತ್ತು.
ಇದರ ಪರಿಣಾಮವನ್ನು ಇಂದು ಕಾಣುತ್ತಿರುವ ಯುವಜನರ ಡಿಜಿಟಲ್ ರಾಜಕೀಯ ಅಭಿವ್ಯಕ್ತಿಯೊಂದಿಗೆ ಹೋಲಿಸಿ ನೋಡುವುದು ಅಗತ್ಯ. ಮೋದಿ ಅವರನ್ನು ಟೀಕಿಸುವುದಷ್ಟೇ ಅಲ್ಲ, ಅವರನ್ನು ಮಿಮಿಕ್ರಿ ಮಾಡುವುದು, ಅವರ ಧ್ವನಿಯನ್ನು ಅನುಕರಿಸುವುದು, ಅವರ ಹಾವಭಾವವನ್ನು ವಿಡಂಬಿಸುವುದು ಮತ್ತು ಅವರ ಸಾರ್ವಜನಿಕ ಚಿತ್ರಣವನ್ನೇ ಮೀಮ್ ಆಗಿ ಪರಿವರ್ತಿಸುವುದು—ಇವೆಲ್ಲವೂ ‘ಅಧಿಕಾರದಲ್ಲಿರುವ ವ್ಯಕ್ತಿಯನ್ನೂ ಹಾಸ್ಯದ ಮೂಲಕ ಪ್ರಶ್ನಿಸಬಹುದು’ ಎಂಬ ಸಂಸ್ಕೃತಿಯ ಭಾಗವಾಗಿದೆ.
ಒಂದು ಕಾಲದಲ್ಲಿ ಪ್ರಧಾನಿಯ ವಿರುದ್ಧ ತೀಕ್ಷ್ಣವಾಗಿ ಮಾತನಾಡುವುದು ಮುಖ್ಯವಾಗಿ ವಿರೋಧ ಪಕ್ಷದ ನಾಯಕರು, ಕೆಲವು ಪತ್ರಕರ್ತರು ಅಥವಾ ನಿರ್ದಿಷ್ಟ ರಾಜಕೀಯ ಕಾರ್ಯಕರ್ತರ ವಲಯಕ್ಕೆ ಸೀಮಿತವಾಗಿದ್ದರೆ, ಇಂದು 20–30 ಸೆಕೆಂಡುಗಳ ಇನ್ಸ್ಟಾಗ್ರಾಮ್ ರೀಲ್ನಲ್ಲಿ ಸಾಮಾನ್ಯ ಹಿನ್ನೆಲೆಯ ಯುವ ಕಂಟೆಂಟ್ ಕ್ರಿಯೇಟರ್ಗಳು ಕೂಡ ನಿರ್ಭೀತಿಯಿಂದ ಪ್ರಧಾನಿಯ ಧ್ವನಿ, ಹಾವಭಾವ ಮತ್ತು ರಾಜಕೀಯ ಶೈಲಿಯನ್ನು ಅನುಕರಿಸಿ ಲಕ್ಷಾಂತರ ಜನರನ್ನು ತಲುಪುತ್ತಿದ್ದಾರೆ. ಪುಲ್ಕಿತ್ ಮಣಿ ಅವರ ಇಂದೋರ್ ವೇದಿಕೆಯ ಪ್ರದರ್ಶನ ಇದೇ ಬದಲಾವಣೆಯ ಗಮನಾರ್ಹ ಉದಾಹರಣೆ. 2014ರ ನಂತರದ ಭಾರತದ ರಾಜಕೀಯ ಭಾಷೆಯನ್ನು ಗಮನಿಸುತ್ತಾ ಬಂದವರಿಗೆ ಈ ಬದಲಾವಣೆಯು ಗಮನಾರ್ಹ ತಿರುವಿನಂತೆ ಕಾಣುತ್ತಿದ್ದರೆ, ಅದರಲ್ಲಿ ಅತಿಶಯೋಕ್ತಿಯಿಲ್ಲ!






