ಅಬ್ದುಲ್ ಅಲ್-ಸಯೀದ್ ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್: ಅವರ ಈ ಗೆಲುವು ಏಕೆ ಪ್ರಾಮುಖ್ಯತೆ ಪಡೆದಿದೆ?

ಅಬ್ದುಲ್ ಎಲ್-ಸಯೀದ್ | Photo Credit ; AP/Julia Demaree Nikhinson
2026ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್ ಅಭ್ಯರ್ಥಿ ಅಬ್ದುಲ್ ಅಲ್-ಸಯೀದ್ ಅವರು ಮಿಷಿಗನ್ ನ ಸೆನೆಟ್ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಜಯದೊಂದಿಗೆ, 2027ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗ ಅವರು ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಎನಿಸಿಕೊಳ್ಳಲಿದ್ದಾರೆ.
ಇಸ್ರೇಲ್ ವಿರುದ್ಧ ಬಹಿರಂಗವಾಗಿಯೇ ಧ್ವನಿ ಎತ್ತುತ್ತಿದ್ದ ಅಲ್-ಸಯೀದ್, ತೀವ್ರ ಕುತೂಹಲ ಮತ್ತು ಪೈಪೋಟಿಯಿಂದ ಕೂಡಿದ್ದ ಈ ಚುನಾವಣೆಯಲ್ಲಿ ಮಾಜಿ ಸೆನೆಟರ್ ಹಾಗೂ ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿದರು. ರೋಜರ್ಸ್ ಅವರಿಗೆ ಇದು ಸೆನೆಟ್ ಚುನಾವಣೆಯಲ್ಲಿ ಎರಡನೇ ಸ್ಪರ್ಧೆಯಾಗಿತ್ತು. ಪ್ರಚಾರದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲ್-ಸಯೀದ್ ಅವರನ್ನು "ಜಿಹಾದಿ ಮರುಳ" ಎಂದು ಕರೆದಿದ್ದರು.
ತಮ್ಮ ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡು ಟ್ರಂಪ್ ಅವರು ತಮ್ಮ ಮಧ್ಯದ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದ ಅಲ್-ಸಯೀದ್ (ಪೂರ್ಣ ಹೆಸರು: ಅಬ್ದುಲ್ ರಹಮಾನ್ ಮೊಹಮ್ಮದ್ ಅಲ್-ಸಯೀದ್), "ನಾನು ನಿಮಗೆ ಇನ್ಮುಂದೆ 'ಸೆನೆಟರ್ ಮೊಹಮ್ಮದ್', ಅರ್ಥವಾಯಿತೇ?" ಎಂದು ತಿರುಗೇಟು ನೀಡಿದ್ದರು.
ಈಗ ಅವರು ನಿಜಕ್ಕೂ "ಸೆನೆಟರ್ ಮೊಹಮ್ಮದ್" ಆಗಿ ಆಯ್ಕೆಯಾಗಿದ್ದಾರೆ. ಅವರ ಈ ಗೆಲುವು ಕೇವಲ ಅವರ ಧಾರ್ಮಿಕ ಗುರುತಿಗೆ ಮಾತ್ರ ಸೀಮಿತವಾಗಿರದೆ, ಅವರ ಪಕ್ಷ, ಅಮೆರಿಕದ ರಾಜಕೀಯ ಮತ್ತು ಜಾಗತಿಕ ಮಟ್ಟದಲ್ಲೂ ಪ್ರಮುಖ ಮಹತ್ವ ಪಡೆದುಕೊಂಡಿದೆ. ಅದಕ್ಕೆ ಕಾರಣಗಳು ಇಲ್ಲಿವೆ.
►ಯಾರು ಈ ಅಬ್ದುಲ್ ಅಲ್-ಸಯೀದ್?
42 ವರ್ಷದ ಅಲ್-ಸಯೀದ್ ಅವರು ಜನಿಸಿದ್ದು ಮಿಷಿಗನ್ ನಲ್ಲಿ. ಈಜಿಪ್ಟ್ ನಿಂದ ವಲಸೆ ಬಂದ ತಂದೆ ಮತ್ತು ಮಿಷಿಗನ್ ಮೂಲದ ಮಲತಾಯಿಯ ಆರೈಕೆಯಲ್ಲಿ ಬೆಳೆದರು. ಸರ್ಕಾರಿ ಶಾಲೆಯಲ್ಲಿ ಓದಿದ ಅವರು ಫುಟ್ಬಾಲ್, ಕುಸ್ತಿ ಮತ್ತು ಲ್ಯಾಕ್ರೋಸ್ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ನಂತರ ಮಿಷಿಗನ್ ವಿಶ್ವವಿದ್ಯಾಲಯ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ಆ ಬಳಿಕ ರೋಡ್ಸ್ ಸ್ಕಾಲರ್ ಆಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಎರಡನೇ ಡಾಕ್ಟರೇಟ್ ಪದವಿ ಗಳಿಸಿದರು.
ಅವರು ವೃತ್ತಿನಿರತ ವೈದ್ಯರೆಂದು ತಮ್ಮನ್ನು ಬಿಂಬಿಸಿಕೊಂಡಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳು ಉಂಟಾಗಿ ಪರಿಶೀಲನೆಗೆ ಒಳಪಟ್ಟಿದ್ದವು. 'ಪೊಲಿಟಿಕೊ' ವರದಿಯ ಪ್ರಕಾರ, ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ ನಂತರ, "ವೈಯಕ್ತಿಕ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಶ್ರಮಿಸಬೇಕು" ಎಂದು ನಿರ್ಧರಿಸಿ ವೈದ್ಯಕೀಯ ವೃತ್ತಿ ಮಾಡದಿರಲು ತೀರ್ಮಾನಿಸಿದೆ ಎಂದು ಅಲ್-ಸಯೀದ್ ಈ ಹಿಂದೆ ಹೇಳಿದ್ದರು.
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರು ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಶೈಕ್ಷಣಿಕ ಹುದ್ದೆಗಳನ್ನೂ ನಿರ್ವಹಿಸಿದ್ದಾರೆ. ಅವರು ಭಾರತೀಯ ಮೂಲದ ವಲಸಿಗರ ಮಗಳಾದ ಸಾರಾ ಜಕಾಕು ಅವರನ್ನು ವಿವಾಹವಾಗಿದ್ದಾರೆ. ಸಾರಾ ಅವರು ವೃತ್ತಿಯಲ್ಲಿ ಮನೋವೈದ್ಯೆ.
►ಸಾರಾ ಜಕಾಕು ಅವರ ಭಟ್ಕಳ ನಂಟು
ಅಲ್-ಸಯೀದ್ ಅವರ ಪತ್ನಿ ಸಾರಾ ಜಕಾಕು ಅವರ ಮೂಲ ಕರ್ನಾಟಕದ ಭಟ್ಕಳ ಪಟ್ಟಣಕ್ಕೆ ಸೇರಿದ್ದಾಗಿದೆ.
ಸಾರಾ ಅವರ ತಂದೆ ಡಾ. ಜಕಾಕು ಎಸ್. ತಯ್ಯಬ್ ಭಟ್ಕಳದಲ್ಲೇ ಬೆಳೆದವರು. ಅವರ ಅಜ್ಜ ಜಕಾಕು ಶಂಸುದ್ದೀನ್ ಅವರು ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ಸಚಿವ ಸಂಪುಟದಲ್ಲಿ ಮೈಸೂರು ರಾಜ್ಯದ ಉಪ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಇಂದು ಅವರ ಕುಟುಂಬದ ಹಲವು ಸದಸ್ಯರು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರೂ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಮೂಲಕ ಜಕಾಕು ಕುಟುಂಬದ ನೆನಪು ಭಟ್ಕಳದಲ್ಲಿ ಇಂದಿಗೂ ಜೀವಂತವಾಗಿದೆ. 'ದಿ ಅಮೆರಿಕನ್ ಬಜಾರ್' ವರದಿಯ ಪ್ರಕಾರ, ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಹಾಗೂ ಮೂಲಸೌಕರ್ಯಗಳನ್ನು ತರಲು ಸಾರಾ ಅವರ ಅಜ್ಜ ಶಂಸುದ್ದೀನ್ ಶ್ರಮಿಸಿದ್ದರು. ಶಿಕ್ಷಣದ ಅವಕಾಶಗಳು ಕಡಿಮೆಯಿದ್ದ ಆ ಕಾಲದಲ್ಲಿ, ಶೈಕ್ಷಣಿಕ ಮತ್ತು ಸಮುದಾಯ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಅವರ ಈ ಕೊಡುಗೆಯನ್ನು ಗೌರವಿಸಲು, ಭಟ್ಕಳ ಪಟ್ಟಣದ ಪ್ರಮುಖ ಹಾಗೂ ಜನನಿಬಿಡ ವೃತ್ತವೊಂದಕ್ಕೆ 'ಶಂಸುದ್ದೀನ್ ಸರ್ಕಲ್' ಎಂದು ಹೆಸರಿಡಲಾಗಿದೆ.
ಸಾರಾ ಅವರ ತಂದೆ 1976ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಪದವಿ ಪಡೆದ ನಂತರ, ತಮ್ಮ ವೃತ್ತಿಜೀವನಕ್ಕಾಗಿ ಅಮೆರಿಕದ ಮಿಷಿಗನ್ ಗೆ ತೆರಳಿದರು. ಮಿಷಿಗನ್ ನ ಡೆಟ್ರಾಯಿಟ್ ನಲ್ಲಿ ಡಾ. ಜಕಾಕು ಎಸ್. ತಯ್ಯಬ್ ಅವರು ವೈದ್ಯಕೀಯ ಸೇವೆ ಆರಂಭಿಸಿದರು.
►ಅಬ್ದುಲ್ ಅಲ್-ಸಯೀದ್ ಅವರ ಚುನಾವಣಾ ಪ್ರಚಾರದ ವಿಷಯಗಳೇನಾಗಿದ್ದವು?
ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಮತ್ತು ನ್ಯೂಯಾರ್ಕ್ ಸಂಸದೆ ಅಲೆಕ್ಸಾಂಡ್ರಿಯಾ ಒಕಾಸಿಯೋ-ಕಾರ್ಟೆಜ್ ಅವರಂತಹ ಡೆಮೋಕ್ರಾಟಿಕ್ ಪಕ್ಷದ ಇತರ ಯುವ ನಾಯಕರಂತೆ ಅಲ್-ಸಯೀದ್ ತಮ್ಮನ್ನು 'ಡೆಮೋಕ್ರಾಟಿಕ್ ಸೋಷಿಯಲಿಸ್ಟ್' ಎಂದು ಕರೆದುಕೊಂಡಿಲ್ಲ.
ಅಷ್ಟೇ ಅಲ್ಲದೆ, ಅವರು ಬದುಕಿನ ವೆಚ್ಚ ಮತ್ತು ಉಚಿತ ವೈದ್ಯಕೀಯ ಸೇವೆಯಂತಹ ಶ್ರಮಿಕ ವರ್ಗಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಗಮನ ಹರಿಸಿದ್ದಾರೆ. ತಮ್ಮ ವೆಬ್ ಸೈಟ್ ನಲ್ಲಿ ಅಲ್-ಸಯೀದ್, "ವಿಶ್ವದ ಅತ್ಯಂತ ಶ್ರೀಮಂತ ಮತ್ತು ಶಕ್ತಿಯುತ ದೇಶದಲ್ಲಿ ಯಾರೊಬ್ಬರೂ ಅಗತ್ಯ ಚಿಕಿತ್ಸೆ ಪಡೆಯುವುದು ಮತ್ತು ಸಾಲ ಮಾಡುವುದರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು. ಯಾವುದೇ ಕಂತುಗಳು ಅಥವಾ ಹೆಚ್ಚುವರಿ ವೆಚ್ಚವಿಲ್ಲದೆ, ಅಗತ್ಯವಿರುವ ಎಲ್ಲಾ ಆರೋಗ್ಯ ಸೇವೆಗಳನ್ನು ಒಳಗೊಳ್ಳುವಂತೆ 'ಮೆಡಿಕೇರ್' (ಸರ್ಕಾರದ ಆರೋಗ್ಯ ವಿಮಾ ಯೋಜನೆ) ವಿಸ್ತರಿಸಲು ನಾನು ಹೋರಾಡುತ್ತೇನೆ" ಎಂದು ತಿಳಿಸಿದ್ದಾರೆ.
ವಿಶೇಷವೆಂದರೆ, ಹೊರದೇಶಗಳಿಗೆ ನೀಡಲಾದ ಅಮೆರಿಕದ ಉತ್ಪಾದನಾ ಉದ್ಯೋಗಗಳನ್ನು ಹಿಂಪಡೆಯುವುದು ಮತ್ತು ಹಾಲಿ ಇರುವ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸುವುದರ ಬಗ್ಗೆ ಟ್ರಂಪ್ ಅವರ ಕೆಲವು ನಿಲುವುಗಳನ್ನೇ ಇವರೂ ಪ್ರತಿಪಾದಿಸಿದ್ದಾರೆ. "ನ್ಯಾಫ್ಟಾ (NAFTA) ದಂತಹ ವ್ಯಾಪಾರ ಒಪ್ಪಂದಗಳು ಅಮೆರಿಕದ ಉತ್ಪಾದನಾ ಕ್ಷೇತ್ರಕ್ಕೆ ಮಾರಕವಾಗಿದ್ದು, ನಮ್ಮ ನಗರಗಳನ್ನು ಹಾಳುಗೆಡವಿವೆ. ತಾರತಮ್ಯದಿಂದ ಕೂಡಿದ ಟ್ರಂಪ್ ಅವರ ಸುಂಕದ (Tariffs) ನೀತಿಗಳು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿವೆ. ಮಿಷಿಗನ್ ನ ಉತ್ಪಾದನಾ ಕ್ಷೇತ್ರವನ್ನು ರಕ್ಷಿಸುವ ಮತ್ತು ಕಾರ್ಮಿಕ ಸಂಘಟನೆಗಳಿಗೆ ಆದ್ಯತೆ ನೀಡಿ ಭವಿಷ್ಯದ ಕೈಗಾರಿಕೆಗಳನ್ನು ಬೆಳೆಸುವ ನಿಖರ ಹಾಗೂ ಜಾಣತನದ ಸುಂಕದ ನೀತಿಗಳನ್ನು ನಾನು ಬೆಂಬಲಿಸುತ್ತೇನೆ" ಎಂದು ವೆಬ್ಸೈಟ್ನಲ್ಲಿ ಹೇಳಿದ್ದಾರೆ.
ಮಿಷಿಗನ್ ಅಮೆರಿಕದ ಈಶಾನ್ಯ ಭಾಗದ 'ರಸ್ಟ್-ಬೆಲ್ಟ್' (Rust-belt) ರಾಜ್ಯಗಳಲ್ಲಿ ಒಂದಾಗಿದೆ. ಇವು ಉಕ್ಕು ಮುಂತಾದ ವಲಯಗಳ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿದ್ದವು. ಆದರೆ, 20ನೇ ಶತಮಾನದ ಮಧ್ಯಭಾಗದಿಂದೀಚೆಗೆ ಇವುಗಳ ಬೆಳವಣಿಗೆ ಕ್ಷೀಣಿಸಿತು.
ಫೆಲೆಸ್ತೀನ್ ಮೇಲಿನ ಯುದ್ಧದಿಂದಾಗಿ ಗಾಝಾ ಪಟ್ಟಿ ಸಂಪೂರ್ಣವಾಗಿ ನಾಶವಾಗಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಮತ್ತು ಅದಕ್ಕೆ ಅಮೆರಿಕ ನೀಡುತ್ತಿರುವ ಬೆಂಬಲವನ್ನು ಅಲ್-ಸಯೀದ್ ಕಠಿಣವಾಗಿ ಟೀಕಿಸಿದ್ದಾರೆ. ಮಿಷಿಗನ್ ರಾಜ್ಯದಲ್ಲಿ ಡೆಮೋಕ್ರಾಟ್ಗಳಿಗೆ ಸಾಂಪ್ರದಾಯಿಕವಾಗಿ ಬೆಂಬಲ ನೀಡುತ್ತಾ ಬಂದಿರುವ ಯಹೂದಿ ಸಮುದಾಯದ ನಡುವೆ ಈ ನಿಲುವು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಈ ಕಾರಣಕ್ಕಾಗಿಯೇ ಮಿಷಿಗನ್ ನ ಡೆಮೋಕ್ರಾಟಿಕ್ ಸಂಸದೆ ಹೇಲಿ ಸ್ಟೀವನ್ಸ್ ಅವರೊಂದಿಗಿನ ಭಿನ್ನಾಭಿಪ್ರಾಯ ಹೆಚ್ಚಾಯಿತು. ಕೊನೆಯ ಕ್ಷಣದಲ್ಲಿ ತಮ್ಮ ನಿಲುವು ಬದಲಿಸಿದ ಸ್ಟೀವನ್ಸ್, ಅಲ್-ಸಯೀದ್ ಬದಲಿಗೆ ರಿಪಬ್ಲಿಕನ್ ಅಭ್ಯರ್ಥಿ ರೋಜರ್ಸ್ ಅವರನ್ನು ಬೆಂಬಲಿಸಿದರು. ಈ ನಿರ್ಧಾರ ತೀವ್ರ ಟೀಕೆಗೆ ಗುರಿಯಾಯಿತು.
ಈ ಬೆಳವಣಿಗೆಗಳು ಅವರ ಧಾರ್ಮಿಕ ಗುರುತಿನ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಮಾಡಿದವು. ಆದರೆ, ಟ್ರಂಪ್ ಅವರಂತಹ ನಾಯಕರ ಟೀಕೆಗಳಿಗೆ ಅಲ್-ಸಯೀದ್ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ರೋಜರ್ಸ್ ತಮ್ಮ ಹೆಸರಿನ ಬಗ್ಗೆ ಮಾತನಾಡಿದಾಗ, "ಮೈಕ್, ಕೇಳು, ನಿನಗೆ ನನ್ನ ಹೆಸರು 'ಅಬ್ದುಲ್ ರಹಮಾನ್' ಎಂದು ಹೇಳಲು ಆಗದಿದ್ದರೆ, ಆ ಹೆಸರನ್ನು ಹೇಳಬೇಡ" ಎಂದು ತಿರುಗೇಟು ನೀಡಿದರು. ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ನನ್ನ ಹೆಸರಿನಿಂದ ನಿಮ್ಮ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿಲ್ಲ. ನನ್ನ ಹೆಸರಿನಿಂದ ಯುದ್ಧ ನಡೆಯುತ್ತಿಲ್ಲ. ನಿಮ್ಮ ದಿನಸಿ ವಸ್ತುಗಳ ಬೆಲೆ ಏರಿಕೆಗೆ ನನ್ನ ಹೆಸರು ಕಾರಣವಲ್ಲ. ಹಾಗಾದರೆ ಕಾರಣವೇನು ಗೊತ್ತೇ? ಅವರ ಕೆಟ್ಟ ನೀತಿಗಳು!" ಎಂದು ಹೇಳಿದರು.
►ಅಲ್-ಸಯೀದ್ ಅವರ ಸ್ಪರ್ಧೆ ಏಕೆ ಮುಖ್ಯ?
ಮಧ್ಯಂತರ ಚುನಾವಣೆಗಿಂತ ಮುಂಚಿತವಾಗಿ, ಅಮೆರಿಕನ್ ಕಾಂಗ್ರೆಸ್ನ ಎರಡೂ ಮನೆಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರ ಮೇಲೂ ರಿಪಬ್ಲಿಕನ್ನರು ನಿಯಂತ್ರಣ ಹೊಂದಿದ್ದರು. ಕೆಳಮನೆಯ ಒಟ್ಟು 435 ಸ್ಥಾನಗಳಿಗೆ ಮತ್ತು ಸೆನೆಟ್ ನ 100 ಸ್ಥಾನಗಳ ಪೈಕಿ 35 ಸ್ಥಾನಗಳಿಗೆ ಮತದಾನ ನಡೆದಿತ್ತು.
ಆದರೆ, ಈ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷಕ್ಕೆ ಗೆಲುವಿನ ಅವಕಾಶಗಳು ಸ್ಪಷ್ಟವಾಗಿ ಕಂಡುಬರುತ್ತಿದ್ದವು. ಇಂಧನ ಬೆಲೆ ಏರಿಕೆ ಮತ್ತು ಹಣದುಬ್ಬರದ ಬಗ್ಗೆ ಮತದಾರರಲ್ಲಿ ಅಸಮಾಧಾನವಿತ್ತು. ಜೊತೆಗೆ, ಈ ಪರಿಸ್ಥಿತಿಗೆ ಮೂಲ ಕಾರಣವಾಗಿದ್ದ ಟ್ರಂಪ್ ಅವರ ಇರಾನ್ ವಿರುದ್ಧದ ಯುದ್ಧ ನೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಜನಪ್ರಿಯ ಅಭಿಪ್ರಾಯಗಳು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿವೆ. ಈ ಮಹತ್ವದ "ಬ್ಲೂ ವೇವ್" (ಡೆಮೋಕ್ರಾಟ್ಗಳ ಅಲೆ) ಫಲಿತಾಂಶದಲ್ಲಿ, ಇತ್ತೀಚಿನ ಅಂಕಿಅಂಶಗಳ ಪ್ರಕಾರ ಡೆಮೋಕ್ರಾಟ್ಗಳು ಸೆನೆಟ್ನಲ್ಲಿ 54 ಸ್ಥಾನಗಳನ್ನು (ಬಹುಮತಕ್ಕೆ 51 ಸ್ಥಾನಗಳು ಬೇಕಿದ್ದವು) ಹಾಗೂ ಕೆಳಮನೆಯಲ್ಲಿ 225 ಸ್ಥಾನಗಳನ್ನು (ಬಹುಮತಕ್ಕೆ 218 ಸ್ಥಾನಗಳು ಬೇಕಿದ್ದವು) ಗೆದ್ದು ಎರಡೂ ಮನೆಗಳ ನಿಯಂತ್ರಣ ಸಾಧಿಸಿದ್ದಾರೆ.
ಈ ನಿರ್ಣಾಯಕ ಫಲಿತಾಂಶಗಳು ರಿಪಬ್ಲಿಕನ್ ಪಕ್ಷ ಮತ್ತು ಟ್ರಂಪ್ ತಮ್ಮ ಆಡಳಿತಾತ್ಮಕ ನಿರ್ಧಾರಗಳನ್ನು ಜಾರಿಗೊಳಿಸುವುದಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡಿವೆ. ಇದು ಭಾರತದಂತಹ ದೇಶಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸುಂಕ ಮತ್ತು ವೀಸಾ ನೀತಿಗಳ ಮೇಲೆಯೂ ಪ್ರಭಾವ ಬೀರಬಹುದು.
ಇನ್ನು ಸೆನೆಟ್ನಲ್ಲಿ ರಿಪಬ್ಲಿಕನ್ನರು 53-47 ಅಂತರದ ಮೇಲುಗೈ ಹೊಂದಿದ್ದರು. ಮಿಷಿಗನ್ ರಾಜ್ಯದ ಡೆಮೋಕ್ರಾಟ್ ಸೆನೆಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ತೆರವಾಗಿತ್ತು.
ಸಂಪುಟದ ಸಚಿವರು ಮತ್ತು ಫೆಡರಲ್ ನ್ಯಾಯಾಧೀಶರು ಸೇರಿದಂತೆ ಅಧ್ಯಕ್ಷೀಯ ನೇಮಕಾತಿಗಳನ್ನು ದೃಢೀಕರಿಸುವ ಹಾಗೂ ಮೂರನೇ ಎರಡರಷ್ಟು ಬಹುಮತದೊಂದಿಗೆ ಒಪ್ಪಂದಗಳಿಗೆ ಅನುಮೋದನೆ ನೀಡುವ ಅಧಿಕಾರ ಸೆನೆಟ್ಗೆ ಮಾತ್ರ ಇರುತ್ತದೆ.
ಆದ್ದರಿಂದ, ಅಲ್-ಸಯೀದ್ ಅವರ ಈ ಸೆನೆಟ್ ಗೆಲುವು ಸೆನೆಟ್ ಮೇಲಿನ ಡೆಮೋಕ್ರಾಟ್ ಗಳ ನಿಯಂತ್ರಣವನ್ನು ಮತ್ತಷ್ಟು ಭದ್ರಪಡಿಸಿದೆ. ಜೊತೆಗೆ, ಯುದ್ಧಗಳು ಮತ್ತು ಇಸ್ರೇಲ್ಗೆ ನೀಡುವ ಬೆಂಬಲದ ಬದಲಿಗೆ ಕಲ್ಯಾಣ ಯೋಜನೆಗಳು ಹಾಗೂ ಆರ್ಥಿಕತೆಯತ್ತ ಗಮನಹರಿಸಬೇಕು ಎಂದು ಪ್ರತಿಪಾದಿಸುವ ಪಕ್ಷದ ಯುವ ನಾಯಕರ ವಾದಕ್ಕೆ ಈ ಗೆಲುವು ಇನ್ನಷ್ಟು ಶಕ್ತಿ ತುಂಬಿದೆ. ನ್ಯೂಯಾರ್ಕ್ನಂತಹ ಉದಾರವಾದಿ ಭದ್ರಕೋಟೆಗಳ ಹೊರತಾಗಿಯೂ ದೇಶದ ಇತರ ಭಾಗಗಳ ಮತದಾರರು ಇಂತಹ ಪ್ರಚಾರ ಸಿದ್ಧಾಂತಗಳನ್ನು ಬೆಂಬಲಿಸುತ್ತಾರೆ ಎಂಬುದನ್ನು ಈ ಗೆಲುವು ತೋರಿಸಿಕೊಟ್ಟಿದೆ.






