2026 ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಭಾರತೀಯ ಪ್ರವಾಸಿಗರಿಗೆ ಉಚಿತ UAE ಪ್ರವೇಶ ವೀಸಾ ಯೋಜನೆ ಪ್ರಕಟಿಸಿದ ಅಬುಧಾಬಿ: ಬುಕಿಂಗ್ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ |Photo Credit : X \ @Aviationa2z
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ–ಅಬುಧಾಬಿ (DCT Abu Dhabi) ಭಾರತೀಯ ಪಾಸ್ಪೋರ್ಟ್ ಹೊಂದಿರುವ ಪ್ರವಾಸಿಗರಿಗಾಗಿ ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ. ಇದರಡಿ ಸಂಸ್ಥೆಯ ಪಾಲುದಾರ ಏಜೆನ್ಸಿಗಳ ಮೂಲಕ ಅಬುಧಾಬಿ ಪ್ರವಾಸ ಕಾಯ್ದಿರಿಸುವ ಭಾರತೀಯರಿಗೆ ಉಚಿತ UAE ಪ್ರವೇಶ ವೀಸಾ ಲಭ್ಯವಾಗಲಿದೆ ಎಂದು Times of India ವರದಿ ಮಾಡಿದೆ.
ಈ ಕೊಡುಗೆಯು 2026ರ ಆಗಸ್ಟ್ 1ರಿಂದ ಅಕ್ಟೋಬರ್ 31ರವರೆಗೆ ಲಭ್ಯವಿರಲಿದೆ. ಕನಿಷ್ಠ ಮೂರು ರಾತ್ರಿಗಳ ಕಾಲ ಅಬುಧಾಬಿಯಲ್ಲಿ ತಂಗಲು ಬುಕಿಂಗ್ ಮಾಡುವ ಪ್ರವಾಸಿಗರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಈ ಯೋಜನೆಯಡಿ ಅರ್ಹ ಬುಕಿಂಗ್ ಗಳ ಪೂರ್ಣ ವೀಸಾ ವೆಚ್ಚವನ್ನು ಅಬುಧಾಬಿ ಪ್ರವಾಸೋದ್ಯಮ ಇಲಾಖೆಯೇ ಭರಿಸಲಿದೆ. ಇದರಿಂದ ಪ್ರವಾಸಿಗರ ಆರಂಭಿಕ ಪ್ರಯಾಣ ವೆಚ್ಚ ಕಡಿಮೆಯಾಗಲಿದ್ದು, ಪ್ರವಾಸೋದ್ಯಮ ಸಂಸ್ಥೆಗಳಿಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಸಾಧ್ಯವಾಗಲಿದೆ. ಈ ಯೋಜನೆಯನ್ನು ಅಧಿಕೃತ ಪ್ರವಾಸ ಸಂಸ್ಥೆಗಳು ಮತ್ತು ಆನ್ಲೈನ್ ಟ್ರಾವೆಲ್ ಏಜೆನ್ಸಿಗಳಿಗೆ ಮಾತ್ರ ಸೀಮಿತವಾಗಿ ರೂಪಿಸಲಾಗಿದೆ.
ಭಾಗವಹಿಸುವ ಪಾಲುದಾರ ಸಂಸ್ಥೆಗಳ ಮೂಲಕ ಕನಿಷ್ಠ ಮೂರು ರಾತ್ರಿಗಳ ಅಬುಧಾಬಿ ಪ್ರವಾಸದ ಪ್ಯಾಕೇಜ್ ಬುಕ್ ಮಾಡುವ ಪ್ರವಾಸಿಗರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ UAE ಪ್ರವೇಶ ವೀಸಾವನ್ನು ಪಡೆಯಬಹುದು.
"ಭಾರತವು ನಮಗೆ ಅತ್ಯಂತ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭಾರತೀಯ ಪ್ರವಾಸಿಗರಿಗೆ ಅಬುಧಾಬಿಯನ್ನು ಮತ್ತಷ್ಟು ಸುಲಭವಾಗಿ ತಲುಪುವಂತೆ ಮಾಡಲು ನಮ್ಮ ಪ್ರವಾಸೋದ್ಯಮ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. UAE ಪ್ರವೇಶ ವೀಸಾ ವೆಚ್ಚವನ್ನು ನಾವೇ ಭರಿಸುವ ಮೂಲಕ ಭಾರತೀಯ ಪ್ರವಾಸಿಗರು ಅಬುಧಾಬಿಯನ್ನು ಸುಲಭವಾಗಿ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತಿದ್ದೇವೆ. ಜತೆಗೆ ನಮ್ಮ ಪ್ರವಾಸೋದ್ಯಮ ಪಾಲುದಾರರಿಗೂ ಈ ತಾಣವನ್ನು ಶಿಫಾರಸು ಮಾಡಲು ಬಲವಾದ ಕಾರಣವನ್ನು ನೀಡುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸಿ, ಅಬುಧಾಬಿಯ ಸಂಸ್ಕೃತಿ, ಮನರಂಜನೆ, ಆತಿಥ್ಯ ಮತ್ತು ನೈಸರ್ಗಿಕ ಸೌಂದರ್ಯವನ್ನು ಸುದೀರ್ಘವಾಗಿ ಆನಂದಿಸುವುದನ್ನು ನಾವು ಎದುರುನೋಡುತ್ತಿದ್ದೇವೆ" ಎಂದು ಅಬುಧಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ನಿರ್ದೇಶಕ ಅಬ್ದುಲ್ಲಾ ಯೂಸುಫ್ ಹೇಳಿರುವುದಾಗಿ Times of India ವರದಿ ಉಲ್ಲೇಖಿಸಿದೆ.
ಈ ಯೋಜನೆಯು ಭಾರತದಿಂದ ಪ್ರಯಾಣಿಸುವ ಮತ್ತು ಭಾಗವಹಿಸುವ ಅಧಿಕೃತ ಪ್ರವಾಸ ಸಂಸ್ಥೆಗಳ ಮೂಲಕ ಅಬುಧಾಬಿ ಪ್ರವಾಸ ಬುಕ್ ಮಾಡುವ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಲಭ್ಯವಿರಲಿದೆ.
ಅರ್ಹ ಬುಕಿಂಗ್ಗಳಲ್ಲಿ ಕನಿಷ್ಠ ಮೂರು ರಾತ್ರಿಗಳ ಕಾಲ ಅಬುಧಾಬಿಯ ಹೋಟೆಲ್ ನಲ್ಲಿ ತಂಗುವುದು ಮತ್ತು ಭಾರತಕ್ಕೆ ಹಿಂತಿರುಗುವ ವಿಮಾನ ಟಿಕೆಟ್ ಇರುವುದು ಕಡ್ಡಾಯವಾಗಿದೆ.
ಭಾಗವಹಿಸುವ ಪ್ರವಾಸ ಸಂಸ್ಥೆಗಳಿಗೆ ಈ ಯೋಜನೆಯಡಿ ಎರಡು ಆಯ್ಕೆಗಳನ್ನು ನೀಡಲಾಗಿದೆ. ಪ್ರವಾಸ ಸಂಸ್ಥೆಗಳು ಇಲಾಖೆ ಗೊತ್ತುಪಡಿಸಿದ ಡೆಸ್ಟಿನೇಷನ್ ಮ್ಯಾನೇಜ್ಮೆಂಟ್ ಕಂಪೆನಿ ಮೂಲಕ ಕೆಲಸ ಮಾಡಬಹುದು. ಇದರಲ್ಲಿ ವೀಸಾ ವೆಚ್ಚವನ್ನು ಇಲಾಖೆಯೇ ನೇರವಾಗಿ ಭರಿಸುತ್ತದೆ. ಇಲ್ಲವೇ ಸಂಸ್ಥೆಗಳು ತಮ್ಮದೇ ಹಾಲಿ DMC ಪಾಲುದಾರರ ಸೇವೆ ಮುಂದುವರಿಸಬಹುದು. ಈ ಸಂದರ್ಭದಲ್ಲಿ ನೀಡಲಾಗುವ ಪ್ರತಿಯೊಂದು ವೀಸಾಗೆ ಇಲಾಖೆಯು 285 UAE ದಿರಹಂ (AED) ಹಣವನ್ನು ಮರುಪಾವತಿ ಮಾಡಲಿದೆ.
ಪ್ರಾಯೋಗಿಕ ಹಂತದಲ್ಲಿ ಈ ಯೋಜನೆಯು ಆರಂಭದಲ್ಲಿ 20,000 ವೀಸಾಗಳಿಗೆ ಅವಕಾಶ ಕಲ್ಪಿಸಲಿದ್ದು, ಇದು ಭಾರತೀಯ ಮಾರುಕಟ್ಟೆಯೊಂದಿಗೆ ಅಬುಧಾಬಿ ಪ್ರವಾಸೋದ್ಯಮ ಇಲಾಖೆಯು ಹೊಂದಿರುವ ನಿರಂತರ ಬಾಂಧವ್ಯದ ಭಾಗವಾಗಿದೆ.
ವಿಮಾನ ಸಂಪರ್ಕವನ್ನು ಬಲಪಡಿಸುವುದು, ಪ್ರವಾಸೋದ್ಯಮ ಪಾಲುದಾರಿಕೆಯನ್ನು ವಿಸ್ತರಿಸುವುದು ಹಾಗೂ ಭಾರತೀಯ ಪ್ರವಾಸಿಗರಿಗೆ ಅಬುಧಾಬಿಯ ಸೌಂದರ್ಯವನ್ನು ಅನುಭವಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುವ ಇತ್ತೀಚಿನ ಕ್ರಮಗಳ ಮುಂದುವರಿದ ಭಾಗವಾಗಿ ಈ ಯೋಜನೆ ಜಾರಿಗೆ ಬಂದಿದೆ.
2026ರ ಆಗಸ್ಟ್ 1ರಿಂದ ಅಕ್ಟೋಬರ್ 31ರವರೆಗೆ ಅಬುಧಾಬಿಯಲ್ಲಿ ಕನಿಷ್ಠ ಮೂರು ರಾತ್ರಿಗಳ ತಂಗುವಿಕೆಯನ್ನು ಬುಕ್ ಮಾಡುವ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಉಚಿತ UAE ಪ್ರವೇಶ ವೀಸಾ ನೀಡಲು ಪ್ರವಾಸ ಸಂಸ್ಥೆಗಳಿಗೆ ಈ ಯೋಜನೆ ಅನುವು ಮಾಡಿಕೊಡುತ್ತದೆ.






