ಅದಾನಿ ಗ್ರೀನ್ ಎನರ್ಜಿ ಯೋಜನಾ ವೆಚ್ಚ ಶೇ.99ರಷ್ಟು ಕಡಿತ: ತನಿಖೆಗೆ ಕೇಂದ್ರದ ಆದೇಶ
ವನ್ಯಜೀವಿ ಸಂರಕ್ಷಣಾ ಠೇವಣಿ 227 ಕೋಟಿಯಿಂದ 2.27 ಕೋಟಿ ರೂ.ಗೆ ಇಳಿಕೆ; ಪಾವತಿಸಿದ್ದು 56.75 ಲಕ್ಷ ರೂ.!

Photo: Chandan Haygunde
ಮಹಾರಾಷ್ಟ್ರದಲ್ಲಿ 1,500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಯ ಅಂದಾಜು ವೆಚ್ಚವನ್ನು ಶೇ.99ರಷ್ಟು ಕಡಿತಗೊಳಿಸಿರುವ ಅದಾನಿ ಗ್ರೀನ್ ಎನರ್ಜಿ ಕಂಪೆನಿಯ ಕ್ರಮ ವಿವಾದಕ್ಕೆ ಕಾರಣವಾಗಿದೆ. ವನ್ಯಜೀವಿ ಸಂರಕ್ಷಣೆಗಾಗಿ ಪಾವತಿಸಬೇಕಿದ್ದ ಠೇವಣಿ ಮೊತ್ತವನ್ನು 227 ಕೋಟಿ ರೂ.ಯಿಂದ 2.27 ಕೋಟಿ ರೂ.ಗೆ ಇಳಿಸಿರುವ ಪ್ರಕರಣದ ಕುರಿತು ಕೇಂದ್ರ ಪರಿಸರ ಸಚಿವಾಲಯ ತನಿಖೆಗೆ ಆದೇಶಿಸಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ತರ್ಲಿ ಅಣೆಕಟ್ಟಿನ ಜಲಾಶಯದ ಮೇಲೆ ನಿರ್ಮಾಣವಾಗುತ್ತಿರುವ 1,500 ಮೆಗಾವ್ಯಾಟ್ ಸಾಮರ್ಥ್ಯದ ತರ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅಂದಾಜು ವೆಚ್ಚವನ್ನು ಅದಾನಿ ಗ್ರೀನ್ ಎನರ್ಜಿ 5,675 ಕೋಟಿ ರೂ.ಯಿಂದ 56.75 ಕೋಟಿ ರೂ.ಗೆ ಇಳಿಸಿದೆ. ಇದರಿಂದ ವನ್ಯಜೀವಿ ಸಂರಕ್ಷಣಾ ಠೇವಣಿಯ ಮೊತ್ತವೂ 227 ಕೋಟಿ ರೂ.ಯಿಂದ 2.27 ಕೋಟಿ ರೂ.ಗೆ ಇಳಿದಿದೆ. ಈ ಮೂಲಕ ಸುಮಾರು 225 ಕೋಟಿ ರೂ.ಗಳ ಠೇವಣಿ ಪಾವತಿಯನ್ನು ತಪ್ಪಿಸಲು ಕಂಪೆನಿ ಯತ್ನಿಸಿದೆಯೇ ಎಂಬ ಪ್ರಶ್ನೆ ಎದ್ದಿದೆ.
ವನ್ಯಜೀವಿ ಸಂರಕ್ಷಣಾ ಠೇವಣಿ ಪಾವತಿಸುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಯೋಜನಾ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ತನಿಖಾ ವರದಿ ಆರೋಪಿಸಿದೆ. ಯೋಜನಾ ವೆಚ್ಚದ ಆಧಾರದಲ್ಲಿ ಸಂರಕ್ಷಣಾ ಠೇವಣಿ ಸಂಗ್ರಹಿಸಬೇಕಿದ್ದ ಮಹಾರಾಷ್ಟ್ರ ಅರಣ್ಯ ಇಲಾಖೆ, ಕಂಪೆನಿಯ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಿದ್ದೇಕೆ ಎಂಬ ಪ್ರಶ್ನೆಯನ್ನೂ ವರದಿ ಎತ್ತಿದೆ.
►ವೆಚ್ಚ ಕಡಿತದ ಹಿಂದಿನ ಲೆಕ್ಕಾಚಾರವೇನು?
ಕೇಂದ್ರ ಪರಿಸರ ಸಚಿವಾಲಯ ಯೋಜನೆಗೆ ಪ್ರಾಥಮಿಕ ಅನುಮತಿ ನೀಡಿದಾಗ ಅಧಿಕೃತ ದಾಖಲೆಗಳಲ್ಲಿ ಅದರ ಅಂದಾಜು ವೆಚ್ಚವನ್ನು 5,675 ಕೋಟಿ ರೂ. ಎಂದು ನಮೂದಿಸಲಾಗಿತ್ತು. ಬಳಿಕ ಅದಾನಿ ಗ್ರೀನ್ ಎನರ್ಜಿ ಅರಣ್ಯ ಇಲಾಖೆಗೆ ಹೊಸ ಅಫಿಡವಿಟ್ ಸಲ್ಲಿಸಿ, ಈ ಮೊತ್ತ ಕೇವಲ ಅಂದಾಜು ಮಾತ್ರವಾಗಿದ್ದು, ಯೋಜನೆಯ ನೈಜ ವೆಚ್ಚ 56.75 ಕೋಟಿ ರೂ. ಎಂದು ಪರಿಗಣಿಸುವಂತೆ ಕೋರಿತ್ತು. ಅರಣ್ಯ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿತ್ತು.
ಸತಾರಾ ಜಿಲ್ಲೆಯ ವಿವಿಧ ಗ್ರಾಮಗಳ ವ್ಯಾಪ್ತಿಯ ಸುಮಾರು 150 ಹೆಕ್ಟೇರ್ ಅರಣ್ಯೇತರ ಭೂಮಿಯಲ್ಲಿ ಯೋಜನೆ ಹರಡಿಕೊಂಡಿದೆ. ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ ಅರಣ್ಯ ಇಲಾಖೆಯ ಪ್ರಕಾರ, ಯೋಜನೆಯು ಕೊಯ್ನಾ ವನ್ಯಜೀವಿ ಅಭಯಾರಣ್ಯದ ಬಫರ್ ವಲಯ ಅಥವಾ ಡೀಮ್ಡ್ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದುಹೋಗುತ್ತದೆ. ಈ ಅಭಯಾರಣ್ಯವು ಸಹ್ಯಾದ್ರಿ ಹುಲಿ ಮೀಸಲು ಪ್ರದೇಶದ ಪ್ರಮುಖ ಭಾಗವಾಗಿದೆ.
ಕೊಯ್ನಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯಕ್ಕೆ (ESZ) ಇನ್ನೂ ಅಧಿಕೃತ ಅಧಿಸೂಚನೆ ಹೊರಡಿಸಲಾಗಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ, ಅಭಯಾರಣ್ಯದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಡೀಮ್ಡ್ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗುತ್ತದೆ. ತರ್ಲಿ ಯೋಜನೆ ಈ ವ್ಯಾಪ್ತಿಗೆ ಬರುತ್ತದೆ.
ಪ್ರಸ್ತುತ ನಿಯಮಗಳ ಪ್ರಕಾರ, ಪರಿಸರ ಸೂಕ್ಷ್ಮ ವಲಯದಲ್ಲಿ ಯೋಜನೆ ಕೈಗೊಳ್ಳುವ ಖಾಸಗಿ ಕಂಪೆನಿಗಳು ಯೋಜನಾ ವೆಚ್ಚದ ಶೇ.4ರಷ್ಟು ಮೊತ್ತವನ್ನು ಠೇವಣಿಯಾಗಿ ಇಡಬೇಕು. ಈ ಹಣವನ್ನು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಬಳಸಲಾಗುತ್ತದೆ. ಅದಾನಿ ಕಂಪೆನಿಗೂ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಇದೇ ಷರತ್ತು ವಿಧಿಸಲಾಗಿತ್ತು.
5,675 ಕೋಟಿ ರೂ. ಯೋಜನಾ ವೆಚ್ಚದ ಶೇ.4ರಷ್ಟು ಮೊತ್ತ 227 ಕೋಟಿ ರೂ. ಆಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್ನಲ್ಲಿ ಮಹಾರಾಷ್ಟ್ರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ. ಶ್ರೀನಿವಾಸ್ ರೆಡ್ಡಿ ಅವರು ಕಂಪೆನಿಗೆ ಪತ್ರ ಬರೆದು ಅಷ್ಟೂ ಮೊತ್ತವನ್ನು ಠೇವಣಿಯಾಗಿ ಇಡುವಂತೆ ಸೂಚಿಸಿದ್ದರು. ಮಂಡಳಿ ಚರ್ಚಿಸಿದ ಉಳಿದ 14 ಷರತ್ತುಗಳನ್ನು ಪೂರೈಸುವುದಾಗಿ ತಿಳಿಸುವ ಅಫಿಡವಿಟ್ ಸಲ್ಲಿಸುವಂತೆಯೂ ಕೇಳಿದ್ದರು.
ಇದಕ್ಕೆ ಪ್ರತಿಯಾಗಿ ಕಂಪೆನಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಯೋಜನಾ ವೆಚ್ಚವನ್ನು 56.75 ಕೋಟಿ ರೂ. ಎಂದು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಇದನ್ನು ಒಪ್ಪಿಕೊಂಡ ಎಂ. ಶ್ರೀನಿವಾಸ್ ರೆಡ್ಡಿ ಅವರು ಅಕ್ಟೋಬರ್ 12ರಂದು ಕಂಪೆನಿಗೆ ಪತ್ರ ಬರೆದರು. ಪರಿಷ್ಕೃತ ಯೋಜನಾ ವೆಚ್ಚದ ಶೇ.1ರಷ್ಟು ಅಂದರೆ 56.75 ಲಕ್ಷ ರೂ.ಯನ್ನು ತಕ್ಷಣ ಠೇವಣಿ ಇಡುವಂತೆ ಹಾಗೂ ಉಳಿದ ಶೇ.3ರಷ್ಟು ಅಂದರೆ ಸುಮಾರು 1.70 ಕೋಟಿ ರೂ. ಮೊತ್ತವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಅನುಮೋದನೆ ದೊರೆತ ಬಳಿಕ ಠೇವಣಿ ಇಡುವಂತೆ ಸೂಚಿಸಿದರು.
ಹೀಗಾಗಿ ಪರಿಷ್ಕೃತ ಯೋಜನಾ ವೆಚ್ಚದ ಶೇ.4ರಷ್ಟು ಒಟ್ಟು ಠೇವಣಿ ಮೊತ್ತ 2.27 ಕೋಟಿ ರೂ. ಆಗುತ್ತದೆ. ಈ ಪೈಕಿ ಕಂಪೆನಿ ಸದ್ಯ 56.75 ಲಕ್ಷ ರೂ. ಪಾವತಿಸಿದೆ. ಉಳಿದ ಮೊತ್ತವನ್ನು ಅನುಮೋದನೆ ದೊರೆತ ಬಳಿಕ ಪಾವತಿಸಬೇಕಿದೆ. ಕಂಪೆನಿ ಠೇವಣಿ ಇಟ್ಟಿರುವುದನ್ನು ಎಸ್ಟಿಆರ್ ಕ್ಷೇತ್ರ ನಿರ್ದೇಶಕ ತುಷಾರ್ ಚವಾಣ್ ಖಚಿತಪಡಿಸಿರುವುದಾಗಿ ವರದಿ ತಿಳಿಸಿದೆ.
►ವನ್ಯಜೀವಿ ತಜ್ಞರಿಂದ ದೂರು
ಕಂಪೆನಿ 56.75 ಲಕ್ಷ ರೂ. ಠೇವಣಿ ಇಟ್ಟ ಬಳಿಕ ಅಕ್ಟೋಬರ್ 30ರಂದು ಸತಾರಾ ಜಿಲ್ಲೆಯ ಗೌರವ ವನ್ಯಜೀವಿ ಪಾಲಕ ರೋಹನ್ ಭಾಟೆ ದೂರು ದಾಖಲಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಕುಂದುಕೊರತೆ ಪರಿಹಾರ ಪೋರ್ಟಲ್ ನಲ್ಲಿಯೂ ಆಕ್ಷೇಪಣೆ ಸಲ್ಲಿಸಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಗೂ ದೂರನ್ನು ರವಾನಿಸಿದರು. ಯೋಜನೆಯ ವೆಚ್ಚವನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬುದು ಅವರ ಆರೋಪವಾಗಿತ್ತು.
ದೂರು ಮುಖ್ಯಮಂತ್ರಿಯವರನ್ನು ತಲುಪಿದ ಬಳಿಕ ನ. 5ರಂದು ಕೊಯ್ನಾ ವನ್ಯಜೀವಿ ಅಭಯಾರಣ್ಯದ ಉಪ ನಿರ್ದೇಶಕರಿಗೆ ಪ್ರಕರಣದ ತನಿಖೆ ನಡೆಸಿ, ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಬಳಿಕ ನ. 6ರಂದು ಕೇಂದ್ರ ಪರಿಸರ ಸಚಿವಾಲಯವೂ ತನಿಖೆಗೆ ಆದೇಶಿಸಿತು.
ಮೂಲ ಯೋಜನಾ ವೆಚ್ಚದ ಪ್ರಕಾರ ಕಂಪೆನಿ 227 ಕೋಟಿ ರೂ. ಠೇವಣಿ ಇಡಬೇಕಿತ್ತು. ಆದರೆ, ಈ ಮೊತ್ತ ಪಾವತಿಸುವುದನ್ನು ತಪ್ಪಿಸಲು ಯೋಜನಾ ವೆಚ್ಚವನ್ನು ಶೇ.99ರಷ್ಟು ಕಡಿತಗೊಳಿಸಿ ಹೊಸ ಅಫಿಡವಿಟ್ ಸಲ್ಲಿಸಲಾಗಿದೆ ಮತ್ತು ಅರಣ್ಯ ಇಲಾಖೆ ಅದನ್ನು ಅನುಮೋದಿಸಿದೆ ಎಂಬುದು ದೂರಿನ ಪ್ರಮುಖ ಆರೋಪವಾಗಿದೆ.
ಅರಣ್ಯ ಇಲಾಖೆ ಕಂಪೆನಿಯ ಹೊಸ ಅಫಿಡವಿಟ್ ಅನ್ನು ಒಪ್ಪಿಕೊಂಡಿರುವುದು ಆಘಾತಕಾರಿ ಎಂದು ರೋಹನ್ ಭಾಟೆ ಹೇಳಿದ್ದಾರೆ. ಇಷ್ಟು ದೊಡ್ಡ ವಿದ್ಯುತ್ ಯೋಜನೆಯನ್ನು ಕೇವಲ 56.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ವ್ಯಕ್ತಿಗೂ ಅರ್ಥವಾಗುತ್ತದೆ ಎಂದಿದ್ದಾರೆ.
ಕಂಪೆನಿಗೆ ಸುಮಾರು 225 ಕೋಟಿ ರೂ.ಗಳ ಅಸಮಂಜಸ ರಿಯಾಯಿತಿ ನೀಡಲಾಗಿದೆ ಎಂದು ಆರೋಪಿಸಿರುವ ಅವರು, ಈ ನಿರ್ಧಾರವನ್ನು ತಕ್ಷಣ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದ್ದಾರೆ.
►ಕಂಪೆನಿಯಿಂದ ಸಮರ್ಥನೆ
ಯೋಜನಾ ವೆಚ್ಚವನ್ನು ತಪ್ಪಾಗಿ ನಮೂದಿಸಿರುವ ಆರೋಪದ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ಅದಾನಿ ಗ್ರೂಪ್ ವಕ್ತಾರರನ್ನು ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಕ್ತಾರರು, ಯೋಜನೆ ಸಂಪೂರ್ಣವಾಗಿ ಖಾಸಗಿ ಜಮೀನಿನಲ್ಲಿ ನಿರ್ಮಾಣವಾಗುತ್ತಿದ್ದು, ಅದರ ಕಾರ್ಯಾಚರಣೆಯಿಂದ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಯೋಜನೆಯ ಭಾಗವಾಗಿ ನಿರ್ಮಿಸಲಾಗುವ ಸಣ್ಣ ಕೆರೆಗಳು ಜೀವವೈವಿಧ್ಯಕ್ಕೆ ಅನುಕೂಲವಾಗಲಿವೆ. ಅವುಗಳ ಸುತ್ತಲಿನ ಗಾಳಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ವರ್ಷವಿಡೀ ಸುತ್ತಮುತ್ತಲಿನ ಸಸ್ಯ ಮತ್ತು ಪ್ರಾಣಿಗಳಿಗೆ ನೆರವಾಗಲಿದೆ ಎಂದೂ ಹೇಳಿದ್ದಾರೆ.
ಆದರೆ, ಯೋಜನೆಯ ಪರಿಷ್ಕೃತ ವೆಚ್ಚದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಕಂಪೆನಿಯ ವಕ್ತಾರರು ಉತ್ತರಿಸಿಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ.






