ಬಿಜೆಪಿ ಆಡಳಿತದ ರಾಜ್ಯಗಳ ಎಲ್ಲಾ ಕಲ್ಲಿದ್ದಲು ವಿದ್ಯುತ್ ಟೆಂಡರ್ಗಳನ್ನು ತನ್ನದಾಗಿಸಿಕೊಂಡ ಅದಾನಿ ಗ್ರೂಪ್: reporters-collective.in ವರದಿ

Photo : PTI
ಭಾರತ ಸರ್ಕಾರವು 2024ರಿಂದ ಕಲ್ಲಿದ್ದಲು ಆಧಾರಿತ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳನ್ನು (PPAs) ಪುನರಾರಂಭಿಸಿದಾಗಿನಿಂದ, ಅದಾನಿ ಗ್ರೂಪ್ ಮುಂದಿನ 25 ವರ್ಷಗಳಲ್ಲಿ ಬರೋಬ್ಬರಿ 13.27 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಆದಾಯ ತಂದುಕೊಡಬಲ್ಲ ಸರ್ಕಾರಿ ಕಾಂಟ್ರಾಕ್ಟ್ಗಳನ್ನು ತನ್ನದಾಗಿಸಿಕೊಂಡಿದೆ ಎಂದು reporters-collective.in ವರದಿ ಮಾಡಿದೆ.
ವಿಶೇಷವೆಂದರೆ, ಈ ವಿದ್ಯುತ್ ಖರೀದಿ ಒಪ್ಪಂದಗಳ ಪೈಕಿ ಕೇವಲ ಒಂದನ್ನು ಹೊರತುಪಡಿಸಿ, ಉಳಿದೆಲ್ಲಾ ಕಾಂಟ್ರಾಕ್ಟ್ಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಿಂದಲೇ ಲಭಿಸಿವೆ.
ಮಾರ್ಚ್ 2024 ಮತ್ತು ಜನವರಿ 2026ರ ನಡುವೆ ದೇಶದಲ್ಲಿ ಇಂತಹ ಹನ್ನೆರಡು ದೀರ್ಘಾವಧಿ ಒಪ್ಪಂದಗಳಿಗಾಗಿ ಟೆಂಡರ್ ಕರೆಯಲಾಗಿತ್ತು. ಈ ಪೈಕಿ ಎಂಟು ಟೆಂಡರ್ಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳೇ ಕರೆದಿದ್ದವು. ಈ ಎಂಟೂ ಟೆಂಡರ್ಗಳನ್ನು ಅದಾನಿ ಗ್ರೂಪ್ ಒಂದೋ ಸ್ವತಂತ್ರವಾಗಿ ಅಥವಾ ಇತರ ಕಂಪನಿಗಳೊಂದಿಗೆ ಜಂಟಿಯಾಗಿ ತನ್ನದಾಗಿಸಿಕೊಂಡಿದೆ.
ಇದೇ ಅವಧಿಯಲ್ಲಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ಕರೆದಿದ್ದ ಉಳಿದ ನಾಲ್ಕು ದೊಡ್ಡ ಮಟ್ಟದ ಟೆಂಡರ್ಗಳನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಪರಿಶೀಲಿಸಿದೆ. ಈ ವೇಳೆ ವಿರೋಧ ಪಕ್ಷಗಳ ರಾಜ್ಯಗಳಲ್ಲಿ ಅದಾನಿ ಗ್ರೂಪ್ ಕೇವಲ ಒಂದು ಬಾರಿ ಮಾತ್ರ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕನಿಷ್ಠ ಒಂದು ಪ್ರಕರಣದಲ್ಲಿ ಅಂದರೆ, ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿದ್ದ ಪಶ್ಚಿಮ ಬಂಗಾಳದಲ್ಲಿ, ಬಿಡ್ ಮಾಡಲು ಅರ್ಹತೆ ಪಡೆದಿದ್ದರೂ ಅದಾನಿ ಗ್ರೂಪ್ ಕೊನೆ ಕ್ಷಣದಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು.
ಕೇವಲ ಎರಡು ವಿಷಯಗಳು ಏಕಕಾಲಕ್ಕೆ ನಡೆದ ತಕ್ಷಣ ಅವೆರಡರ ನಡುವೆ ನೇರ ಸಂಬಂಧವಿದೆ ಎಂದು ಹೇಳಲಾಗದು . ಆದರೆ, ಕೆಲವು ಪ್ರಕರಣಗಳಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳು ಅದಾನಿ ಗ್ರೂಪ್ಗೆ ಅನುಕೂಲವಾಗುವಂತೆ ಟೆಂಡರ್ ನಿಯಮಗಳನ್ನು ಹೇಗೆ ಬದಲಾಯಿಸಿದ್ದವು ಎಂಬುದನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಈ ಹಿಂದೆ ವರದಿಗಳನ್ನು ಪ್ರಕಟಿಸಿತ್ತು.
ಪ್ರತಿ ವಿದ್ಯುತ್ ಖರೀದಿ ಒಪ್ಪಂದಕ್ಕೆ ನಿಗದಿಪಡಿಸಲಾದ ದರ ಮತ್ತು ಆ ಒಪ್ಪಂದದ ಕಾಲಾವಧಿಯನ್ನು ಆಧರಿಸಿ, ಅದಾನಿ ಗ್ರೂಪ್ ಈ ಒಪ್ಪಂದಗಳಿಂದ ಮುಂದಿನ ದಿನಗಳಲ್ಲಿ ಒಟ್ಟು 13.27 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಲಿದೆ ಎಂದು ಅಂದಾಜಿಸಲಾಗಿದೆ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ವರದಿ ಮಾಡಿದೆ.
'ದಿ ರಿಪೋರ್ಟರ್ಸ್ ಕಲೆಕ್ಟಿವ್' ವಿಶ್ಲೇಷಿಸಿದ ವಿದ್ಯುತ್ ಖರೀದಿ ಒಪ್ಪಂದಗಳು ದೀರ್ಘಾವಧಿಯದ್ದಾಗಿವೆ. ಇವು ಖಾಸಗಿ ಕಂಪನಿಗಳಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಕಲ್ಲಿದ್ದಲು ಆಧಾರಿತ ವಿದ್ಯುತ್ ಖರೀದಿಸಲು ರಾಜ್ಯಗಳನ್ನು ನಿರ್ಬಂಧಿಸುತ್ತವೆ. ಇವುಗಳಲ್ಲಿ ಕೆಲವು ಒಪ್ಪಂದಗಳು ಕಲ್ಲಿದ್ದಲು ವಿದ್ಯುತ್ನೊಂದಿಗೆ ನವೀಕರಿಸಬಹುದಾದ ಇಂಧನವನ್ನೂ ಒದಗಿಸಬೇಕಾದ ಹೆಚ್ಚುವರಿ ಷರತ್ತನ್ನು ಒಳಗೊಂಡಿವೆ. ಇಂತಹ ಒಪ್ಪಂದಗಳು ಖಾಸಗಿ ಕಂಪನಿಯೊಂದಕ್ಕೆ ಈ ಕಾಂಟ್ರಾಕ್ಟ್ನ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುವುದನ್ನು ಖಾತರಿಪಡಿಸುತ್ತವೆ.
ರಾಜ್ಯಗಳು ಸಹಿ ಮಾಡಿರುವ ಇಂತಹ ಥರ್ಮಲ್ ವಿದ್ಯುತ್ ಖರೀದಿ ಒಪ್ಪಂದಗಳ ಯಾವುದೇ ಅಧಿಕೃತ ಮಾಹಿತಿ ಸಾರ್ವಜನಿಕವಾಗಿ ಎಲ್ಲಿಯೂ ಲಭ್ಯವಿಲ್ಲ. ಈ ವಿಶ್ಲೇಷಣೆಗಾಗಿ 'ದಿ ರಿಪೋರ್ಟರ್ಸ್ ಕಲೆಕ್ಟಿವ್' ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ಹೊರಡಿಸಿದ ಆದೇಶಗಳು, ಕಲ್ಲಿದ್ದಲು ಪಡೆಯಲು ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಕೇಂದ್ರ ಕಲ್ಲಿದ್ದಲು ಸಚಿವಾಲಯಕ್ಕೆ ಬಂದ ಪ್ರಸ್ತಾವನೆಗಳು, ವಿದ್ಯುತ್ ಕ್ಷೇತ್ರದ ಸ್ವತಂತ್ರ ಕಾವಲು ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿ, ರೇಟಿಂಗ್ ಏಜೆನ್ಸಿಗಳ ವಿಶ್ಲೇಷಣೆಗಳು, ಕಂಪನಿ ಹಾಗೂ ಸರ್ಕಾರದ ಪತ್ರಿಕಾ ಪ್ರಕಟಣೆಗಳು ಮತ್ತು ಷೇರು ಮಾರುಕಟ್ಟೆಗೆ ಸಲ್ಲಿಸಲಾದ ದಾಖಲೆಗಳಿಂದ ಡೇಟಾವನ್ನು ಕಲೆಹಾಕಿದೆ. ನಂತರ 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಕೇಂದ್ರ ಇಂಧನ ಸಚಿವಾಲಯ, ಕೇಂದ್ರ ವಿದ್ಯುತ್ ಪ್ರಾಧಿಕಾರ , ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ ಮತ್ತು ಅದಾನಿ ಗ್ರೂಪ್ಗೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅದಾನಿ ಪವರ್, "ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ನಂತರವೇ ವಿದ್ಯುತ್ ಖರೀದಿ ಒಪ್ಪಂದಗಳನ್ನು ಪಡೆದುಕೊಳ್ಳಲಾಗಿದೆ. ಬಿಡ್ಡಿಂಗ್ ಪ್ರಕ್ರಿಯೆಯು ಪಾರದರ್ಶಕವಾಗಿದೆ ಮತ್ತು ನಿಗದಿಪಡಿಸಲಾದ ದರವು ಸ್ಪರ್ಧಾತ್ಮಕವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಆಯಾ ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳು ಈ ದರಗಳನ್ನು ಅನುಮೋದಿಸಿವೆ" ಎಂದು ತಿಳಿಸಿದೆ.
"ಅದಾನಿ ಪವರ್ ಎಲ್ಲಿಯೂ ಕಾನೂನುಬಾಹಿರವಾಗಿ ಭಾಗವಹಿಸಿಲ್ಲ. ಮುಕ್ತ, ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಗಳ ಮೂಲಕವೇ ಭಾಗವಹಿಸಿದೆ. ಯಾವುದೇ ರಾಜ್ಯ ಸರ್ಕಾರದ ರಾಜಕೀಯ ಒಲವು ಅದಾನಿ ಪವರ್ನ ಇಂತಹ ಪ್ರಕ್ರಿಯೆಗಳ ಭಾಗವಹಿಸುವಿಕೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ನಾವು ಕೇವಲ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವಲ್ಲದೆ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲೂ ವಿದ್ಯುತ್ ಖರೀದಿ ಒಪ್ಪಂದಗಳ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದನ್ನು ಇಲ್ಲಿ ಎತ್ತಿ ತೋರಿಸುವುದು ಸೂಕ್ತವಾಗಿದೆ" ಎಂದು ಹೇಳಿರುವುದಾಗಿ 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಉಲ್ಲೇಖಿಸಿದೆ.
ಕಂಪನಿಯ ಸಂಪೂರ್ಣ ಪ್ರತಿಕ್ರಿಯೆ ಇಲ್ಲಿದೆ https://drive.google.com/file/d/1vxHPUrlt_qm8MHzZDoYif9tqmsiEZO_Q/view
►ಪವರ್ ಪ್ಲೇ
ರಾಜ್ಯಗಳು ತಮ್ಮ ನಾಗರಿಕರಿಗೆ ಮತ್ತು ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇರುವ ಒಂದು ಮಾರ್ಗವೆಂದರೆ, ಟೆಂಡರ್ ಪ್ರಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಕರಿಂದ ಒಪ್ಪಂದದ ಆಧಾರದ ಮೇಲೆ ವಿದ್ಯುತ್ ಖರೀದಿಸುವುದು.
ವಿದ್ಯುತ್ ಸಾಮರ್ಥ್ಯದ ಆಧಾರದ ಮೇಲೆ ಈ ಟೆಂಡರ್ನ ಗಾತ್ರವನ್ನು ನಿರ್ಧರಿಸಲಾಗುತ್ತದೆ. ಭವಿಷ್ಯದ ವಿದ್ಯುತ್ ಬೇಡಿಕೆಯ ಮುನ್ಸೂಚನೆಗಳನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರವು ಅನುಮೋದಿಸಿದ ನಂತರವೇ ಈ ಗಾತ್ರ ನಿಗದಿಯಾಗುತ್ತದೆ ಮತ್ತು ರಾಜ್ಯಗಳು ಇದಕ್ಕೆ ಬದ್ಧವಾಗಿರಬೇಕಾಗುತ್ತದೆ.
ಆರ್ಥಿಕ ಮುನ್ಸೂಚನೆಗಳ ಆಧಾರದ ಮೇಲೆ ಇಂತಹ ದೀರ್ಘಾವಧಿ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ, ರಾಜ್ಯ ಸರ್ಕಾರಗಳು ಮುಂಬರುವ ವರ್ಷಗಳಲ್ಲಿ ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ, ದೀರ್ಘಾವಧಿಗೆ ವಿದ್ಯುತ್ ಖರೀದಿ ದರಗಳನ್ನು ನಿಗದಿಪಡಿಸುವ ಇಂತಹ ಒಪ್ಪಂದಗಳಿಗೆ ರಾಜ್ಯಗಳನ್ನು ಸಿಲುಕಿಸದಂತೆ ತಜ್ಞರು ಆಗಾಗ್ಗೆ ಎಚ್ಚರಿಸುತ್ತಲೇ ಇರುತ್ತಾರೆ. ಏಕೆಂದರೆ, ಒಂದು ವೇಳೆ ರಾಜ್ಯಗಳು ಆ ವಿದ್ಯುತ್ ಅನ್ನು ಬಳಸಿಕೊಳ್ಳಲು ಸಾಧ್ಯವಾಗದಿದ್ದರೂ ಸಹ, ಒಪ್ಪಂದದ ಪ್ರಕಾರ ನಿಗದಿತ ದರವನ್ನು ಪಾವತಿಸಲೇಬೇಕಾಗುತ್ತದೆ. ಅಂತಿಮವಾಗಿ, ಈ ಹಣಕಾಸಿನ ಹೊರೆಯನ್ನು ಸರ್ಕಾರಗಳು ನೇರವಾಗಿ ಅಥವಾ ಪರೋಕ್ಷವಾಗಿ ಗ್ರಾಹಕರ ಮೇಲೆಯೇ ಹಾಕುತ್ತವೆ.
ಪ್ರಧಾನಿ ಮೋದಿಯವರ ಮೊದಲ ಮತ್ತು ಎರಡನೇ ಅವಧಿಯ ಬಹುಪಾಲು ವರ್ಷಗಳಲ್ಲಿ, ಭಾರತದಲ್ಲಿ ಇಂತಹ ದೀರ್ಘಾವಧಿ ಥರ್ಮಲ್ ವಿದ್ಯುತ್ ಒಪ್ಪಂದಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿತ್ತು. ಈ ಕುಸಿತಕ್ಕೆ ಮೂರು ಮುಖ್ಯ ಕಾರಣಗಳಿದ್ದವು. ಮೊದಲನೆಯದಾಗಿ, ದೇಶದ ವಿದ್ಯುತ್ ಅಗತ್ಯವನ್ನು ಲೆಕ್ಕಹಾಕಲು ಬಳಸಲಾದ ಆರ್ಥಿಕ ಪ್ರಗತಿಯ ಅಂದಾಜುಗಳು, ವಾಸ್ತವದಲ್ಲಿ ಮಂದಗತಿಯಲ್ಲಿದ್ದ ಆರ್ಥಿಕ ಚಟುವಟಿಕೆಗಳಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಎರಡನೆಯದಾಗಿ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ನೀಡಿದ ಭರವಸೆಯಂತೆ ಕಲ್ಲಿದ್ದಲು ಬಳಕೆಯಿಂದ ದೂರ ಸರಿಯಲು ಭಾರತ ಬದ್ಧವಾಗಿತ್ತು. ಮೂರನೆಯದಾಗಿ, ಸೌರ ವಿದ್ಯುತ್ ಬೆಲೆಗಳು ಕುಸಿದಿದ್ದರಿಂದ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಉತ್ತೇಜನ ಸಿಗುತ್ತಿತ್ತು.
ಆದರೆ, 2024ರಲ್ಲಿ ಈ ಪ್ರವೃತ್ತಿ ಸಂಪೂರ್ಣ ಉಲ್ಟಾ ಆಯಿತು.
ವಿದ್ಯುತ್ ಕ್ಷೇತ್ರದ ತಜ್ಞರು ಇದಕ್ಕೆ ಒಂದು ಪ್ರಮುಖ ಕಾರಣವನ್ನು ಗುರುತಿಸುತ್ತಾರೆ. ಅದೇನೆಂದರೆ ನವೀಕರಿಸಬಹುದಾದ ಇಂಧನ ಮೂಲಗಳ ವೆಚ್ಚ ಕಡಿಮೆಯಾಗಿದ್ದರೂ, ಅವು ನಿರಂತರವಾಗಿ ಸಿಗುವಂತಹದ್ದಲ್ಲ. ಸೌರ ವಿದ್ಯುತ್ ಸೂರ್ಯನಿರುವಾಗ ಮಾತ್ರ ಉತ್ಪತ್ತಿಯಾಗುತ್ತದೆ ಮತ್ತು ಅದನ್ನು ನಂತರದ ಬಳಕೆಗಾಗಿ ಸಂಗ್ರಹಿಸಿಡುವುದು ಇಂದಿಗೂ ದುಬಾರಿ ವ್ಯವಹಾರವಾಗಿದೆ. ಮತ್ತೊಂದೆಡೆ, ನಿರಂತರವಾಗಿ ವಿದ್ಯುತ್ ಉತ್ಪಾದಿಸಲು ಮತ್ತು ಪೂರೈಸಲು ಕಲ್ಲಿದ್ದಲನ್ನು ದಿನದ 24 ಗಂಟೆಯೂ ಬಳಸಬಹುದು. ಜಾಗತಿಕ ರಾಜಕೀಯ ಉದ್ವಿಗ್ನತೆಗಳು ನವೀಕರಿಸಬಹುದಾದ ಇಂಧನದ ಪೂರೈಕೆ ಜಾಲದ ಮೇಲೆ ಬೀರಿದ ಪ್ರಭಾವವೂ ಸಹ, ಇಂಧನ ಭದ್ರತೆ ಮತ್ತು ಸ್ವಾವಲಂಬನೆಗಾಗಿ ಭಾರತ ಕಲ್ಲಿದ್ದಲನ್ನೇ ನೆಚ್ಚಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು.
"ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಗಳ ನಡುವೆ, ಥರ್ಮಲ್ ವಿದ್ಯುತ್ ಒಂದು ನಂಬಿಕಸ್ಥ ಮೂಲವಾಗಿ ಕೆಲಸ ಮಾಡುತ್ತದೆ ಮತ್ತು ಗ್ರಿಡ್ ಸ್ಥಿರತೆಗೆ ಸಹಾಯ ಮಾಡುತ್ತದೆ" ಎಂದು ರೇಟಿಂಗ್ ಏಜೆನ್ಸಿ 'ಐಸಿಆರ್ಎ' ಕಾರ್ಪೊರೇಟ್ ರೇಟಿಂಗ್ಸ್ನ ಕೋ-ಗ್ರೂಪ್ ಹೆಡ್ ಮತ್ತು ವೈಸ್ ಪ್ರೆಸಿಡೆಂಟ್ ಅಂಕೀತ್ ಜೈನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಕೋವಿಡ್ ನಂತರದ ದಿನಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು ಸರ್ಕಾರವನ್ನು ಚಿಂತೆಗೀಡು ಮಾಡಿತು. ಇದು ರಾಜ್ಯಗಳು ಇಂತಹ ಟೆಂಡರ್ಗಳನ್ನು ಹೊರಡಿಸುವಂತೆ ಮಾಡಿತು ಮತ್ತು ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಉತ್ತೇಜನ ನೀಡಿತು ಎಂದು ಹೆಸರು ಹೇಳಲು ಇಚ್ಛಿಸದ ತಜ್ಞರೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ವಾಸ್ತವವಾಗಿ, ಈ ಬದಲಾವಣೆಯು 2024ರ ಭಾರತದ ಲೋಕಸಭೆ ಚುನಾವಣೆಯ ಆಸುಪಾಸಿನಲ್ಲಿ ಪ್ರಾರಂಭವಾಯಿತು. ಅಷ್ಟರಲ್ಲಾಗಲೇ ಕೇಂದ್ರ ಸರ್ಕಾರವು ದೀರ್ಘಾವಧಿ ಥರ್ಮಲ್ ವಿದ್ಯುತ್ ಒಪ್ಪಂದಗಳನ್ನು ಹೊಂದಿರುವ ಉತ್ಪಾದಕರಿಗೆ ಕಲ್ಲಿದ್ದಲನ್ನು ಹೆಚ್ಚು ಸುಲಭವಾಗಿ ಮತ್ತು ವೇಗವಾಗಿ ಪೂರೈಸಲು ತನ್ನ ನೀತಿಯಲ್ಲಿ ಬದಲಾವಣೆಗಳನ್ನು ಮಾಡುತ್ತಿತ್ತು.
ಕೇಂದ್ರ ಸರ್ಕಾರವು ಕಚ್ಚಾ ವಸ್ತುವಾದ ಕಲ್ಲಿದ್ದಲಿನ ಸುಲಭ ಮತ್ತು ಖಚಿತ ಪೂರೈಕೆಯನ್ನು ನೋಡಿಕೊಂಡರೆ, ರಾಜ್ಯಗಳು ಆ ಉತ್ಪನ್ನಕ್ಕೆ (ವಿದ್ಯುತ್) ಹಕ್ಕುದಾರರಾದ ಖರೀದಿದಾರರನ್ನು ಒದಗಿಸುತ್ತಿದ್ದವು. ಥರ್ಮಲ್ ವಿದ್ಯುತ್ ವಲಯದ ಕಂಪನಿಗಳಿಗೆ ಇಷ್ಟು ಒಳ್ಳೆಯ ದಿನಗಳು ಇತ್ತೀಚಿನ ವರ್ಷಗಳಲ್ಲಿ ಎಂದೂ ಬಂದಿರಲಿಲ್ಲ.
►ಕಲ್ಲಿದ್ದಲು ವಿದ್ಯುತ್ ಮಾರುಕಟ್ಟೆ ಚುರುಕುಗೊಂಡಿದ್ದು ಹೀಗೆ
ಇದರಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಮಹಾರಾಷ್ಟ್ರ ಸರ್ಕಾರ. ಅದು ಥರ್ಮಲ್ ಮತ್ತು ಸೋಲಾರ್ ಎರಡೂ ಮಾದರಿಯ ವಿದ್ಯುತ್ ಅನ್ನು ಒಂದೇ ಸಂಸ್ಥೆಯಿಂದ ಖರೀದಿಸಲು ಟೆಂಡರ್ ಕರೆಯಿತು.
ಸರ್ಕಾರದ ನಿಯಮಗಳ ಪ್ರಕಾರ, ಯಾವುದೇ ಸರ್ಕಾರಿ ಸ್ವಾಮ್ಯದ ಕಂಪನಿಯು ಇಂತಹ ಟೆಂಡರ್ ಕರೆಯುವ ಮುನ್ನ, ತನಗೆ ಆ ವಿದ್ಯುತ್ನ ಅಗತ್ಯ ಏಕಿದೆ ಮತ್ತು ಒಪ್ಪಂದದ ಸ್ವರೂಪ ಎಂತಹುದ್ದು ಎಂಬುದನ್ನು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟು ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಆದರೆ, ಈ ನಿಯಮವನ್ನು ಉಲ್ಲಂಘಿಸಿ ಮಹಾರಾಷ್ಟ್ರ ಸರ್ಕಾರ ಟೆಂಡರ್ ಹೊರಡಿಸಿತು.
ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಅನುಮತಿ ಪ್ರಕ್ರಿಯೆಗೆ ಹೋದರೆ ಮಾದರಿ ನೀತಿ ಸಂಹಿತೆಯ ಕಾರಣ ವಿಳಂಬವಾಗಬಹುದು ಎಂಬ ನೆಪವನ್ನು ಮಹಾರಾಷ್ಟ್ರ ಸರ್ಕಾರದ ಸ್ವಾಮ್ಯದ ಕಂಪನಿ ನೀಡಿತು. ಆದರೆ, ಕಾನೂನುಬದ್ಧವಾಗಿ ಇದು ಒಪ್ಪಿಕೊಳ್ಳಬಹುದಾದ ಕಾರಣವಾಗಿರಲಿಲ್ಲ.
ಹೆಚ್ಚಿನ ಪ್ರಮಾಣದ ಸೌರ ವಿದ್ಯುತ್ನೊಂದಿಗೆ ಥರ್ಮಲ್ ವಿದ್ಯುತ್ ಎರಡನ್ನೂ ಒಟ್ಟಿಗೆ ಪೂರೈಸಬಲ್ಲ ಒಂದೇ ಕಂಪನಿಯಿಂದ ವಿದ್ಯುತ್ ಖರೀದಿಸುವಂತೆ ಈ ಟೆಂಡರ್ ಅನ್ನು ವಿನ್ಯಾಸಗೊಳಿಸಲಾಗಿತ್ತು. ಭಾರತದಲ್ಲಿ ಇಂತಹ ಸಾಮರ್ಥ್ಯ ಹೊಂದಿರುವ ವಿದ್ಯುತ್ ಉತ್ಪಾದಕರು ಕೆಲವೇ ಕೆಲವು ಕಂಪನಿಗಳಷ್ಟೇ ಇದ್ದಾರೆ. ಅದರಲ್ಲಿ ಅದಾನಿ ಗ್ರೂಪ್ ಕೂಡ ಒಂದು.
ಇದರ ವಿರುದ್ಧ ಕೆಲವು ಕಂಪನಿಗಳು ದೂರು ನೀಡಿದ್ದವು, "ಇಷ್ಟು ದೊಡ್ಡ ಮಟ್ಟದ ವಿದ್ಯುತ್ ಯೋಜನೆಯನ್ನು ಒಂದೇ ಕಂಪನಿಗೆ ವಹಿಸುವುದರಿಂದ ಯೋಜನೆಯ ಜಾರಿ ವಿಳಂಬವಾಗುವ ಅಪಾಯ ಹೆಚ್ಚಿರುತ್ತದೆ. ಅಲ್ಲದೆ, ಇದು ಇತರೆ ಕಂಪನಿಗಳು ಭಾಗವಹಿಸುವುದನ್ನು ತಡೆಯುತ್ತದೆ ಮತ್ತು ಸ್ಪರ್ಧಾತ್ಮಕ ದರ ನಿಗದಿಯಾಗದಂತೆ ಮಾಡುತ್ತದೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ, ಮಹಾರಾಷ್ಟ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಈ ಕುರಿತು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಪ್ರಶ್ನೆಗೆ ಪ್ರತಿಕ್ರಿಯಿಸಿದ ಅದಾನಿ ಗ್ರೂಪ್, ಮಹಾರಾಷ್ಟ್ರದ ಬಿಡ್ಡಿಂಗ್ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದವು. ಹಾಗಾಗಿ, ಇದು ಸ್ಪರ್ಧೆಯನ್ನು ಕುಗ್ಗಿಸಿತು ಎಂದು ಹೇಳುವುದು ತಪ್ಪು ಎಂದು ತಿಳಿಸಿದೆ.
ಕೊನೆಗೆ, ವಿವಾದಕ್ಕೀಡಾಗಿದ್ದ ಈ ಟೆಂಡರ್ ಅನ್ನು ಅದಾನಿ ಗ್ರೂಪ್ ತನ್ನದಾಗಿಸಿಕೊಂಡಿತು.
ಈ ಟೆಂಡರ್ ಮತ್ತು ಅದೇ ವರ್ಷದ ನಂತರದ ದಿನಗಳಲ್ಲಿ ಬಿಜೆಪಿ ಆಡಳಿತವಿದ್ದ ರಾಜಸ್ಥಾನ ಸರ್ಕಾರ ಹೊರಡಿಸಿದ ಮತ್ತೊಂದು ಟೆಂಡರ್, ಅದಾನಿ ಗ್ರೂಪ್ಗೆ ಲಾಭ ಮಾಡಿಕೊಡುವಂತೆಯೇ ಸಿದ್ಧಪಡಿಸಲಾಗಿತ್ತು ಎಂಬುದನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಈ ಹಿಂದೆ ತನ್ನ ವರದಿಯಲ್ಲಿ ಬಹಿರಂಗಪಡಿಸಿತ್ತು. ಈ ವರದಿ ಪ್ರಕಟವಾದ ನಂತರ ರಾಜಸ್ಥಾನ ಸರ್ಕಾರ ಆ ಟೆಂಡರ್ ಅನ್ನು ರದ್ದುಗೊಳಿಸಿತು.
ಮಹಾರಾಷ್ಟ್ರದ ಈ ಟೆಂಡರ್ ಪ್ರಕ್ರಿಯೆಯು ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳಿಗೆ ಬಿದ್ದಿದ್ದ ಸುದೀರ್ಘ ಬಿಡುವಿಗೆ ಮುಕ್ತಾಯ ಹಾಡಿತು.
ಮಹಾರಾಷ್ಟ್ರದಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿದ್ದಾಗಲೇ, ಕೇಂದ್ರ ಸರ್ಕಾರವು ಕಲ್ಲಿದ್ದಲು ವಿದ್ಯುತ್ ಮಾರುಕಟ್ಟೆಗೆ ಮರುಜೀವ ನೀಡುತ್ತಿರುವುದಾಗಿ ಘೋಷಿಸಿತು. ಆಗಸ್ಟ್ 2024ರಲ್ಲಿ ಕೇಂದ್ರ ಸರ್ಕಾರವು, 2031-32ರ ವೇಳೆಗೆ 80 ಗಿಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವುದಾಗಿ ತಿಳಿಸಿತು. ಇದು 2024ರಲ್ಲಿದ್ದ ಭಾರತದ ಒಟ್ಟು ಥರ್ಮಲ್ ವಿದ್ಯುತ್ ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ. 36.8ರಷ್ಟು ಭಾರೀ ಏರಿಕೆಯಾಗಿತ್ತು.
ಖಾಸಗಿ ಕಲ್ಲಿದ್ದಲು ವಿದ್ಯುತ್ ಕಂಪನಿಗಳಿಗೆ ನೆಮ್ಮದಿ ನೀಡುವ ಕೇಂದ್ರ ಸರ್ಕಾರದ ಈ ಘೋಷಣೆ ಹೊರಬಿದ್ದ ಒಂದು ವರ್ಷದ ಒಳಗೆ, ಅಂದರೆ ಜುಲೈ 2025ರಲ್ಲಿ ರೇಟಿಂಗ್ ಏಜೆನ್ಸಿ 'ಕ್ರಿಸಿಲ್' (CRISIL) ಒಂದು ಮಹತ್ವದ ಅಂಶವನ್ನು ಗಮನಿಸಿತು. "ಥರ್ಮಲ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹೂಡಿಕೆ ಮಾಡಲಾಗುವ ಮೊತ್ತವು 2028ರವರೆಗಿನ ಮೂರು ಹಣಕಾಸು ವರ್ಷಗಳಲ್ಲಿ ದುಪ್ಪಟ್ಟಾಗಲಿದ್ದು, 2.3 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಲಿದೆ" ಎಂದು ಅದು ತಿಳಿಸಿತು.
ಖಾಸಗಿ ಕಂಪನಿಗಳು ಪಡೆದುಕೊಳ್ಳುತ್ತಿರುವ ಈ ಹೊಸ ಅವಕಾಶಗಳ ಪೈಕಿ ಬಹುಪಾಲು, ಅವುಗಳ ಬಳಿ ಈಗಾಗಲೇ ಇರುವ ವಿದ್ಯುತ್ ಸ್ಥಾವರಗಳ ವಿಸ್ತರಣೆಯ ಮೂಲಕವೇ ಆಗುತ್ತಿವೆ. 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಕೇವಲ ರಾಜ್ಯ ಸರ್ಕಾರಗಳು ನೀಡುತ್ತಿರುವ ದೀರ್ಘಾವಧಿ ಖರೀದಿ ಒಪ್ಪಂದಗಳಿಗೆ ಸಂಬಂಧಿಸಿದ ಕಲ್ಲಿದ್ದಲು ವಿದ್ಯುತ್ ಯೋಜನೆಗಳನ್ನು ಮಾತ್ರ ಪರಿಶೀಲಿಸಿದೆ. ಇದು ಒಟ್ಟಾರೆಯಾಗಿ 16.7 ಗಿಗಾವ್ಯಾಟ್ ಥರ್ಮಲ್ ವಿದ್ಯುತ್ ಸಾಮರ್ಥ್ಯದ ಸೇರ್ಪಡೆಯನ್ನು ತೋರಿಸುತ್ತದೆ.
►ಅದಾನಿ ಯುಗ
ವಿದ್ಯುತ್ ವಲಯದಲ್ಲಿ ಅದಾನಿ ಗ್ರೂಪ್ನ ಈ ಅಭೂತಪೂರ್ವ ಯಶಸ್ಸಿಗೆ ಕೆಲವು ಬಾರಿ ರಾಜ್ಯ ಸರ್ಕಾರಗಳು ನೀಡಿದ ಅಸಾಮಾನ್ಯ ರಿಯಾಯಿತಿಗಳೂ ಕಾರಣವಾಗಿವೆ.
ಉದಾಹರಣೆಗೆ ಅಸ್ಸಾಂನಲ್ಲಿ, ಅದಾನಿ ಗ್ರೂಪ್ ನಿರ್ಮಿಸಲಿರುವ 3200 ಮೆಗಾವ್ಯಾಟ್ ಸಾಮರ್ಥ್ಯದ ಥರ್ಮಲ್ ವಿದ್ಯುತ್ ಸ್ಥಾವರದಿಂದ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಖರೀದಿಸಲು ರಾಜ್ಯ ಸರ್ಕಾರವು ತನ್ನದೇ ಆದ ಹಣವನ್ನು ನೀಡಲು ಒಪ್ಪಿಕೊಂಡಿದೆ. ರಾಜ್ಯಕ್ಕೆ ಇಷ್ಟು ದೊಡ್ಡ ಪ್ರಮಾಣದ ಹೆಚ್ಚುವರಿ ವಿದ್ಯುತ್ ಅಗತ್ಯವಿಲ್ಲ ಎಂದು ಅಲ್ಲಿನ ವಿದ್ಯುತ್ ವಲಯದ ನೌಕರರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರಾಜ್ಯ ಸರ್ಕಾರ ಹಣ ನೀಡುವುದಾಗಿ ಒಪ್ಪಿಕೊಂಡಿದ್ದ ಆ ಪತ್ರ ಮತ್ತು ಈ ಒಪ್ಪಂದದಲ್ಲಿದ್ದ ಇತರ ಲೋಪದೋಷಗಳನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ತನ್ನ ಹಿಂದಿನ ತನಿಖಾ ವರದಿಯಲ್ಲಿ ಬಹಿರಂಗಪಡಿಸಿತ್ತು.
ಬಿಹಾರದಲ್ಲಿ, ಥರ್ಮಲ್ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಅದಾನಿ ಗ್ರೂಪ್ಗೆ ಅಲ್ಲಿನ ಸರ್ಕಾರ ಬರೋಬ್ಬರಿ 1,000 ಎಕರೆ ಜಮೀನನ್ನು "ವರ್ಷಕ್ಕೆ ಕೇವಲ 1 ರೂಪಾಯಿ" ಬಾಡಿಗೆ ಆಧಾರದ ಮೇಲೆ ಹಸ್ತಾಂತರಿಸಿದೆ. ಬಿಡ್ ಗೆಲ್ಲುವ ಕಂಪನಿಗೆ 'ನಾಮಮಾತ್ರದ ಲೀಸ್ ಬಾಡಿಗೆ'ಯಲ್ಲಿ ಜಮೀನು ನೀಡುವುದಾಗಿ ಬಿಹಾರ ಸರ್ಕಾರ ಮಾತು ಕೊಟ್ಟಿತ್ತು.
ಇತರ ಕೆಲವು ಪ್ರಕರಣಗಳಲ್ಲಿ, ಮೇಲ್ನೋಟಕ್ಕೆ ಯಾವುದೇ ತಪ್ಪುಗಳು ಕಾಣಿಸದೆ ಕಾಗದದ ಮೇಲೆ ಸಂಪೂರ್ಣ ಪಾರದರ್ಶಕ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ. ಅಲ್ಲೂ ಸಹ ಅದಾನಿ ಗ್ರೂಪ್ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ.
ಮಧ್ಯಪ್ರದೇಶ ಸರ್ಕಾರ 4,100 ಮೆಗಾವ್ಯಾಟ್ ಥರ್ಮಲ್ ವಿದ್ಯುತ್ ಖರೀದಿಸಲು ಕರೆದಿದ್ದ ಟೆಂಡರ್ ಅನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ಅನುಮೋದನೆಯ ನಂತರ 2025 ಜನವರಿಯಲ್ಲಿ ಈ ಟೆಂಡರ್ ಹೊರಡಿಸಲಾಗಿತ್ತು.
ಕೊನೆಗೆ ಜುಲೈ 2025ರಲ್ಲಿ ಹಿಂದೂಸ್ತಾನ್ ಥರ್ಮಲ್ಪ್ರಾಜೆಕ್ಟ್ಸ್ ಲಿಮಿಟೆಡ್ 800 ಮೆಗಾವ್ಯಾಟ್, ಟೊರೆಂಟ್ ಪವರ್ ಲಿಮಿಟೆಡ್ 1600 ಮೆಗಾವ್ಯಾಟ್ ಮತ್ತು ಅದಾನಿ ಪವರ್ 800 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಬಿಡ್ಗಳನ್ನು ಗೆದ್ದುಕೊಂಡವು.
ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯವು ಆ ರಾಜ್ಯಕ್ಕೆ ಹೆಚ್ಚುವರಿ ಕಲ್ಲಿದ್ದಲು ಪೂರೈಕೆಯನ್ನು ಮಂಜೂರು ಮಾಡಿತು. ಇದರಿಂದಾಗಿ, ರಾಜ್ಯ ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಕ ಸಂಸ್ಥೆಗೆ ಮೊದಲ ಬಾರಿಗೆ "ಗ್ರೀನ್ಶೂ ಆಪ್ಷನ್" ಅಡಿಯಲ್ಲಿ ಹೆಚ್ಚುವರಿ 800 ಮೆಗಾವ್ಯಾಟ್ ವಿದ್ಯುತ್ ಖರೀದಿಸುವ ಅವಕಾಶ ಸಿಕ್ಕಿತು. ಈ ನಿಯಮದ ಪ್ರಕಾರ, ಮೂಲ ಟೆಂಡರ್ ಅನ್ನು ಯಾವ ದರಕ್ಕೆ ಗೆಲ್ಲಲಾಗಿತ್ತೋ, ಅದೇ ದರದಲ್ಲಿ ಬಿಡ್ ಗೆದ್ದ ಕಂಪನಿಯಿಂದ ಮತ್ತಷ್ಟು ಹೆಚ್ಚುವರಿ ವಿದ್ಯುತ್ ಅನ್ನು ಖರೀದಿಸಬಹುದಾಗಿದೆ. ಇದರಿಂದ ಸರ್ಕಾರಕ್ಕೆ ಮತ್ತೊಮ್ಮೆ ಹೊಸದಾಗಿ ಹರಾಜು ಪ್ರಕ್ರಿಯೆ ನಡೆಸುವ ಶ್ರಮ ಉಳಿಯುತ್ತದೆ. ಆದರೆ, ಇದೇ ವೇಳೆ ಈಗಾಗಲೇ ಬಿಡ್ ಗೆದ್ದಿರುವ ಕಂಪನಿಗೆ ಮತ್ತೊಂದು ದೊಡ್ಡ ಅವಕಾಶ ಸುಲಭವಾಗಿ ಸಿಕ್ಕಂತಾಗುತ್ತದೆ.
2025 ಆಗಸ್ಟ್ 29ರಂದು ಮಧ್ಯಪ್ರದೇಶ ಸರ್ಕಾರವು ಈ ಗ್ರೀನ್ಶೂ ಆಪ್ಷನ್ ಅನ್ನು ಬಳಸಿಕೊಳ್ಳುವಂತೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಕ ಸಂಸ್ಥೆಗೆ ಸೂಚಿಸಿತು.
2025 ಸೆಪ್ಟೆಂಬರ್ ಮೊದಲ ವಾರದಲ್ಲಿ, ಈ ಹೆಚ್ಚುವರಿ ವಿದ್ಯುತ್ ಪೂರೈಸುವ ಅವಕಾಶವನ್ನು ಮೊದಲು 'ಹಿಂದೂಸ್ತಾನ್ ಥರ್ಮಲ್ಪ್ರಾಜೆಕ್ಟ್ಸ್' ಕಂಪನಿಗೆ ನೀಡಲಾಯಿತು, ಆದರೆ ಅವರು ಅದನ್ನು ನಿರಾಕರಿಸಿದರು. ನಂತರ 'ಟೊರೆಂಟ್ ಪವರ್' ಕಂಪನಿಗೂ ಆಫರ್ ಮಾಡಲಾಯಿತು, ಅವರೂ ಬೇಡ ಎಂದರು. ಕೊನೆಗೆ ಇದನ್ನು ಅದಾನಿ ಗ್ರೂಪ್ಗೆ ಆಫರ್ ಮಾಡಿದಾಗ, ಸೆಪ್ಟೆಂಬರ್ 8, 2025ರಂದು ಅದಾನಿ ಗ್ರೂಪ್ ಇದನ್ನು ಒಪ್ಪಿಕೊಂಡಿತು.
ಇದರಿಂದ ಸಂತಸಗೊಂಡ ಅದಾನಿ ಪವರ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, "ಭಾರತದ ಥರ್ಮಲ್ ವಿದ್ಯುತ್ ಟೆಂಡರ್ ಇತಿಹಾಸದಲ್ಲೇ ಗ್ರೀನ್ಶೂ ಆಪ್ಷನ್ ಅನ್ನು ಬಳಸಿಕೊಂಡ ಮೊದಲ ಪ್ರಕರಣ ಇದಾಗಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.
"ಕಳೆದ 12 ತಿಂಗಳುಗಳಲ್ಲಿ ಕಂಪನಿಗೆ ಸಿಕ್ಕ ಐದನೇ ಪ್ರಮುಖ ವಿದ್ಯುತ್ ಪೂರೈಕೆ ಆದೇಶ ಇದಾಗಿದ್ದು, ಇದರೊಂದಿಗೆ ಒಟ್ಟು ಲಭಿಸಿದ ಕಾಂಟ್ರಾಕ್ಟ್ ಸಾಮರ್ಥ್ಯ 7,200 ಮೆಗಾವ್ಯಾಟ್ಗೆ ತಲುಪಿದೆ" ಎಂದು ಅದು ಹೇಳಿದೆ.
ಅದಾನಿ ಗ್ರೂಪ್ ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ 2,500 ಮೆಗಾವ್ಯಾಟ್ನ ದಿನದ 24 ಗಂಟೆಯೂ ವಿದ್ಯುತ್ ಪೂರೈಸುವ ಒಪ್ಪಂದವನ್ನೂ ಮುಡಿಗೇರಿಸಿಕೊಂಡಿದೆ. ಈ ಟೆಂಡರ್ ಪ್ರಕಾರ ಶೇ. 51ರಷ್ಟು ವಿದ್ಯುತ್ ಪರಿಸರ ಸ್ನೇಹಿ 'ಹಸಿರು ಇಂಧನ' ಮೂಲದಿಂದಲೇ ಬರಬೇಕು ಮತ್ತು ಉಳಿದ ವಿದ್ಯುತ್ ಅನ್ನು ಯಾವುದೇ ಮೂಲದಿಂದ ಪಡೆಯಬಹುದು ಎಂದು ತಿಳಿಸಲಾಗಿತ್ತು. ನವೀಕರಿಸಬಹುದಾದ ಇಂಧನವು ನಿರಂತರವಾಗಿ ಸಿಗದ ಕಾರಣ, ದಿನದ 24 ಗಂಟೆಯೂ ವಿದ್ಯುತ್ ಪೂರೈಸಲು ಅದಾನಿ ಗ್ರೂಪ್ ಕಲ್ಲಿದ್ದಲು ಆಧಾರಿತ ಥರ್ಮಲ್ ವಿದ್ಯುತ್ ಅನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.
ಹೀಗೆ ಸಾಲು ಸಾಲು ಯೋಜನೆಗಳನ್ನು ತನ್ನದಾಗಿಸಿಕೊಂಡಿರುವ ಅದಾನಿ ಗ್ರೂಪ್ನ ಒಟ್ಟು ಅಂದಾಜು ಗಳಿಕೆ ಬರೋಬ್ಬರಿ 13.27 ಲಕ್ಷ ಕೋಟಿ ರೂಪಾಯಿಗಳಾಗಲಿದೆ.
ವಿದ್ಯುತ್ ಸ್ಥಾವರಗಳು ವರ್ಷವಿಡೀ ತಮ್ಮ ಒಟ್ಟು ಸಾಮರ್ಥ್ಯದ ಮುಕ್ಕಾಲು ಭಾಗದಷ್ಟು ಕಾರ್ಯನಿರ್ವಹಿಸುತ್ತವೆ ಎಂಬ ಕಲ್ಪನೆಯ ಆಧಾರದ ಮೇಲೆ ಈ ವೆಚ್ಚವನ್ನು ಅಂದಾಜಿಸಲಾಗಿದೆ. ಪ್ರತಿ ವಿದ್ಯುತ್ ಖರೀದಿ ಒಪ್ಪಂದದ ವಾರ್ಷಿಕ ವೆಚ್ಚವನ್ನು ಲೆಕ್ಕಹಾಕಲು, ವಾರ್ಷಿಕವಾಗಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ ಅನ್ನು ಬಿಡ್ಡಿಂಗ್ನಲ್ಲಿ ನಿಗದಿಯಾದ ದರದಿಂದ ಗುಣಿಸಲಾಗಿದೆ. ಒಪ್ಪಂದಗಳ ಪ್ರಕಾರ, ಮುಂದಿನ ದಿನಗಳಲ್ಲಿ ಹಣದುಬ್ಬರಕ್ಕೆ ತಕ್ಕಂತೆ ಸರ್ಕಾರಗಳು ಕಂಪನಿಯ ಆದಾಯವನ್ನು ಹೆಚ್ಚಿಸಬೇಕಾಗುತ್ತದೆ. ಆದರೆ, ನಾವು ಆ ಹೆಚ್ಚುವರಿ ಮೊತ್ತವನ್ನು ಈ ಲೆಕ್ಕಾಚಾರದಲ್ಲಿ ಸೇರಿಸಿಲ್ಲ. ಹಾಗಾಗಿ ಈ ಆದಾಯದ ಅಂದಾಜು ತೀರಾ ಕನಿಷ್ಠ ಮಟ್ಟದ್ದಾಗಿದೆ. ಮುಂದಿನ 25 ವರ್ಷಗಳವರೆಗೆ ಇಂಧನ, ಸಾರಿಗೆ ಅಥವಾ ಇತರ ವೆಚ್ಚಗಳಲ್ಲಿ ಆಗಬಹುದಾದ ಯಾವುದೇ ಬೆಲೆ ಏರಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ವಿದ್ಯುತ್ ದರವು ಬದಲಾಗದೆ ಹಾಗೇ ಇರುತ್ತದೆ ಎಂದು ಭಾವಿಸಿ ಈ ಒಟ್ಟು ಮೊತ್ತವನ್ನು ಅಂದಾಜಿಸಲಾಗಿದೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ವಿಸ್ತರಣೆಗೆ ಕೇಂದ್ರ ಸರ್ಕಾರ ಹಾಕಿಕೊಂಡಿರುವ ಮಹತ್ವಾಕಾಂಕ್ಷೆಯ ಗುರಿಗಳು ಮತ್ತು ಈ ವಲಯದಲ್ಲಿ ಅದಾನಿ ಹೊಂದಿರುವ ಪ್ರಶ್ನಾತೀತ ನಾಯಕತ್ವವನ್ನು ಗಮನಿಸಿದರೆ, ಈ ಕ್ಷೇತ್ರದ ಭವಿಷ್ಯವು ಮುಂದಿನ ದಿನಗಳಲ್ಲಿ ತೀವ್ರ ನಿಗಾ ಇಡಬೇಕಾದ ಪ್ರಮುಖ ವಿಷಯವಾಗಿದೆ.
ಅದಾನಿ ಗ್ರೂಪ್ ಕೂಡ ಈ ವಿಷಯವನ್ನು ಮುಚ್ಚಿಟ್ಟಿಲ್ಲ. ಹೂಡಿಕೆದಾರರೊಂದಿಗಿನ ಸಭೆಯಲ್ಲಿ ಅದು ಹೀಗೆ ಹೇಳಿದೆ, "ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸರ್ಕಾರ ಈಗಾಗಲೇ 80 ಗಿಗಾವ್ಯಾಟ್ ಹೆಚ್ಚುವರಿ ಥರ್ಮಲ್ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ನೀಡಿದೆ. ಸದ್ಯದ ಟ್ರೆಂಡ್ ನೋಡಿದರೆ ಈ ಗುರಿಯನ್ನು ಈಗ 95 ಗಿಗಾವ್ಯಾಟ್ಗೆ ಏರಿಸಲಾಗುತ್ತಿದೆ. ಇದು ಒಂದು ಆಕರ್ಷಕ ಅವಕಾಶವನ್ನು ಸೃಷ್ಟಿಸುತ್ತಿದ್ದು, ಆರ್ಥಿಕವಾಗಿ ಸದೃಢವಾಗಿರುವ ಮತ್ತು ಅನುಭವ ಹೊಂದಿರುವ ಖಾಸಗಿ ವಲಯದ ಕಂಪನಿಗಳು ಇದರ ಲಾಭ ಪಡೆಯಲು ಸೂಕ್ತ ಸ್ಥಾನದಲ್ಲಿವೆ."
ಒಟ್ಟಿನಲ್ಲಿ, ಭಾರತದಲ್ಲಿ ಕಲ್ಲಿದ್ದಲು ವಿದ್ಯುತ್ ಸಾಮ್ರಾಜ್ಯದ ಹೊಸ ದೊರೆಯ ಉದಯವಾಗಿದೆ ಎಂದೇ ಹೇಳಬಹುದು.
ಕೃಪೆ: reporters-collective.in






