ಅಡಿಡಾಸ್ ನಲ್ಲಿ ಉದ್ಯೋಗ ಕಡಿತ: ಗುರುಗ್ರಾಮದಲ್ಲಿರುವ ತನ್ನ ತಂತ್ರಜ್ಞಾನ ವಿಭಾಗದಲ್ಲಿ ಇಂಜಿನಿಯರ್ ಗಳು ಮತ್ತು ಡೇಟಾ ಸೈಂಟಿಸ್ಟ್ ಗಳನ್ನು ವಜಾಗೊಳಿಸಿದ್ದು ಯಾಕೆ?
Firstpost. com ವರದಿ

Photo Credit: firstpost
ಗುರುಗ್ರಾಮದಲ್ಲಿರುವ ಅಡಿಡಾಸ್ ನ ಭಾರತದ ತಂತ್ರಜ್ಞಾನ ಕೇಂದ್ರದ ಉದ್ಯೋಗಿಗಳಿಗೆ ಮಂಗಳವಾರ (ಸೆಪ್ಟೆಂಬರ್ 15) ಟೌನ್ ಹಾಲ್ ಸಭೆ ಮತ್ತು ಬೇರೆ ಕೆಲಸ ಹುಡುಕಿಕೊಳ್ಳುವಂತೆ ಬಂದ ನೋಟಿಸ್ ಅನಿರೀಕ್ಷಿತ ಆಘಾತ ತಂದಿದೆ. ಈ ಉದ್ಯೋಗ ಕಡಿತದ ಘೋಷಣೆಯಿಂದಾಗಿ ಸಿಬ್ಬಂದಿ ಅನಿಶ್ಚಿತ ಭವಿಷ್ಯವನ್ನು ಎದುರಿಸುವಂತಾಗಿದೆ. ಜರ್ಮನಿಯ ಕ್ರೀಡಾ ಉಡುಪು ತಯಾರಿಕಾ ದೈತ್ಯ ಸಂಸ್ಥೆಯು ಭಾರತದ ಗುರುಗ್ರಾಮದಲ್ಲಿರುವ ತನ್ನ ತಂತ್ರಜ್ಞಾನ ವಿಭಾಗದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಕಡಿತಗೊಳಿಸಿದೆ. ಸಾಫ್ಟ್ವೇರ್ ಇಂಜಿನಿಯರ್ ಗಳು, ಡೇಟಾ ಸೈಂಟಿಸ್ಟ್ ಗಳು ಮತ್ತು ಡೇಟಾ ಇಂಜಿನಿಯರ್ ಗಳು ಈ ವಲಯದಿಂದ ಉದ್ಯೋಗ ಕಳೆದುಕೊಂಡವರಲ್ಲಿ ಸೇರಿದ್ದಾರೆ.
ಬುಧವಾರ (ಸೆಪ್ಟೆಂಬರ್ 16) ಉದ್ಯೋಗ ಕಡಿತವನ್ನು ದೃಢಪಡಿಸಿರುವ ಅಡಿಡಾಸ್, ಇದನ್ನು "ಕಷ್ಟದ ನಿರ್ಧಾರ" ಎಂದಿದೆ. ಆದರೆ, ಎಷ್ಟು ಉದ್ಯೋಗಿಗಳು ಅಥವಾ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತಗೊಳಿಸಲಾಗಿದೆ ಎಂಬ ನಿಖರವಾದ ಸಂಖ್ಯೆಯನ್ನು ಕಂಪೆನಿ ಬಹಿರಂಗಪಡಿಸಿಲ್ಲ.
"ವ್ಯವಹಾರದ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ನಮ್ಮ ಕಾರ್ಯಾಚರಣೆಯ ಮಾದರಿಯನ್ನು ಜೋಡಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ಭಾರತದಲ್ಲಿರುವ ನಮ್ಮ ತಂತ್ರಜ್ಞಾನ ಸಂಸ್ಥೆಯ ಒಳಗಿನ ಕೆಲವು ಹುದ್ದೆಗಳನ್ನು ಕಡಿತಗೊಳಿಸುವ ಕಷ್ಟಕರ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ" ಎಂದು ವೋಕಲ್ಟ್ (Wocult) ಜತೆಗೆ ಹಂಚಿಕೊಂಡ ಹೇಳಿಕೆಯಲ್ಲಿ ಅಡಿಡಾಸ್ ತಿಳಿಸಿದೆ.
►ಟೌನ್ ಹಾಲ್ ಸಭೆಯಲ್ಲಿ ನಡೆದಿದ್ದೇನು?
ಉದ್ಯೋಗ ಕಡಿತದ ವಿಚಾರವನ್ನು ಟೌನ್ ಹಾಲ್ ಸಭೆಯಲ್ಲೇ ಉದ್ಯೋಗಿಗಳಿಗೆ ತಿಳಿಸಲಾಯಿತು. ಈ ಘೋಷಣೆ ಮಾಡಿದ ಸಂದರ್ಭದಲ್ಲಿ, ಸಂತ್ರಸ್ತ ಉದ್ಯೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಕೆಲವರಿಗೆ ಸೆಪ್ಟೆಂಬರ್ 15ರಂದೇ ಎಕ್ಸಿಟ್ ಲೆಟರ್ ನೀಡಲಾಯಿತು. ಅಂದರೆ, ಅಂದೇ ಕಂಪೆನಿ ಬಿಟ್ಟು ಹೋಗುವಂತೆ ಅವರಿಗೆ ಸೂಚಿಸಲಾಯಿತು ಎಂದು ಪ್ರಕ್ರಿಯೆಯ ಬಗ್ಗೆ ತಿಳಿದಿರುವವರನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
ಉಳಿದ ಉದ್ಯೋಗಿಗಳಿಗೆ ಡಿಸೆಂಬರ್ 15ರವರೆಗೆ ಕಂಪೆನಿಯಲ್ಲೇ ಮುಂದುವರಿಯಲು ತಿಳಿಸಲಾಗಿದೆ. ಇತರ ತಂತ್ರಜ್ಞಾನ ಕೇಂದ್ರಗಳಲ್ಲಿರುವ ಸಹೋದ್ಯೋಗಿಗಳಿಗೆ ಕೆಲಸದ ಹೊಣೆಯನ್ನು ಹಸ್ತಾಂತರಿಸುವುದು ಈ ಅವಧಿಯಲ್ಲಿ ಅವರ ಜವಾಬ್ದಾರಿಯಾಗಿದೆ.
ಡಿಸೆಂಬರ್ 15ರವರೆಗೆ ಸಮಯ ನೀಡಿರುವ ಉದ್ಯೋಗಿಗಳಿಗೆ ಕಂಪೆನಿಯಲ್ಲೇ ಬೇರೆ ಹುದ್ದೆಯನ್ನು ಹುಡುಕಿಕೊಳ್ಳುವಂತೆ ಸೂಚಿಸಲಾಗಿದೆ. ನಿರ್ದಿಷ್ಟ ಗಡುವಿನೊಳಗೆ ಅವರಿಗೆ ಬೇರೆ ಕೆಲಸ ಸಿಗದಿದ್ದರೆ, ಡಿಸೆಂಬರ್ 15 ಅವರ ಕೊನೆಯ ಕೆಲಸದ ದಿನವಾಗಲಿದೆ ಎಂದು ಈ ಬಗ್ಗೆ ತಿಳಿದವರು ಹೇಳಿರುವುದಾಗಿ ಫಸ್ಟ್ ಪೋಸ್ಟ್ ವರದಿ ಉಲ್ಲೇಖಿಸಿದೆ.
►ಅಡಿಡಾಸ್ ಹೇಳಿದ್ದೇನು?
ಭಾರತದಲ್ಲಿರುವ ತನ್ನ ತಂತ್ರಜ್ಞಾನ ಸಂಸ್ಥೆಯಲ್ಲಿ ಹುದ್ದೆಗಳನ್ನು ಕಡಿತಗೊಳಿಸಿರುವುದನ್ನು ಅಡಿಡಾಸ್ ದೃಢಪಡಿಸಿದೆ. ಆದರೆ, ನಿಖರವಾದ ಉದ್ಯೋಗಿಗಳ ಸಂಖ್ಯೆಯನ್ನು ಅದು ಬಹಿರಂಗಪಡಿಸಿಲ್ಲ. ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳಿಗೆ ತಕ್ಕಂತೆ ತನ್ನ ತಂತ್ರಜ್ಞಾನ ಮಾದರಿಯನ್ನು ಹೊಂದಿಸಿಕೊಳ್ಳುವ ಉದ್ದೇಶದಿಂದ ಈ "ಕಷ್ಟದ ನಿರ್ಧಾರ" ತೆಗೆದುಕೊಳ್ಳಲಾಗಿದೆ ಎಂದು ಕಂಪೆನಿ ತಿಳಿಸಿದೆ.
NDTV ಉಲ್ಲೇಖಿಸಿದ 'ವೋಕಲ್ಟ್' ವರದಿಯ ಪ್ರಕಾರ, ಅಡಿಡಾಸ್ ತನ್ನ ಗುರುಗ್ರಾಮದ ಇಂಡಿಯಾ ಟೆಕ್ ಹಬ್ನಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಕಡಿತವನ್ನು ಆರಂಭಿಸಿದೆ. ಇಲ್ಲಿರುವ ಸುಮಾರು 700 ಉದ್ಯೋಗಿಗಳ ಪೈಕಿ ಅರ್ಧಾಂಶದಷ್ಟು, ಅಂದರೆ 350ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಈ ವಜಾಗೊಳಿಸುವಿಕೆ ಪ್ರಭಾವ ಬೀರಿದೆ.
ಈ ಸಂಖ್ಯೆಗಳು ನಿಜವಾಗಿದ್ದರೆ, ಸಂತ್ರಸ್ತ ಉದ್ಯೋಗಿಗಳು ಈ ಕೇಂದ್ರದ ಒಟ್ಟು ಕಾರ್ಯಪಡೆಯ ಶೇಕಡಾ 45ರಿಂದ 50ರಷ್ಟು ಇರಬಹುದು.
ಈ ಅಂಕಿಅಂಶಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ವಜಾಗೊಳಿಸುವಿಕೆಯು 350 ಅಥವಾ ಅದಕ್ಕಿಂತ ಹೆಚ್ಚಿನ ಸಿಬ್ಬಂದಿಯ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಕಂಪೆನಿಯು ಯಾವುದೇ ಸಂಖ್ಯೆಗಳನ್ನು ನೀಡಿ ದೃಢಪಡಿಸಿಲ್ಲ.
ಅಡಿಡಾಸ್ ನ ಸಂಪೂರ್ಣ ಹೇಳಿಕೆ ಹೀಗಿದೆ: "ವ್ಯವಹಾರದ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ನಮ್ಮ ಕಾರ್ಯಾಚರಣೆಯ ಮಾದರಿಯನ್ನು ಜೋಡಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ಭಾರತದಲ್ಲಿರುವ ನಮ್ಮ ತಂತ್ರಜ್ಞಾನ ಸಂಸ್ಥೆಯ ಒಳಗಿನ ಕೆಲವು ಹುದ್ದೆಗಳನ್ನು ಕಡಿತಗೊಳಿಸುವ ಕಷ್ಟಕರ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ನಮ್ಮ ಸಂಸ್ಥೆಯ ಕೆಲವು ಭಾಗಗಳನ್ನು ಸರಳೀಕರಿಸುವುದು, ಪ್ರಮುಖ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ವೇಗವಾಗಿ ಬದಲಾಗುತ್ತಿರುವ ವ್ಯಾಪಾರ ಹಾಗೂ ತಂತ್ರಜ್ಞಾನ ಪರಿಸರದಲ್ಲಿ ಅಡಿಡಾಸ್ ನ ದೀರ್ಘಕಾಲೀನ ಯಶಸ್ಸಿಗೆ ಅನುವು ಮಾಡಿಕೊಡುವುದು ಈ ಬದಲಾವಣೆಗಳ ಮುಖ್ಯ ಉದ್ದೇಶವಾಗಿದೆ."
ಅಡಿಡಾಸ್ಗೆ ನಮ್ಮ ಸಹೋದ್ಯೋಗಿಗಳು ನೀಡಿರುವ ಅಪಾರ ಕೊಡುಗೆಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಉದ್ಯೋಗಿಗಳಿಗೆ ಸೂಕ್ತ ಕಾಳಜಿ, ಗೌರವ ಮತ್ತು ಸಹಾಯದೊಂದಿಗೆ ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಭಾರತವು ಅಡಿಡಾಸ್ಗೆ ಅತ್ಯಂತ ಮುಖ್ಯವಾದ ಮಾರುಕಟ್ಟೆಯಾಗಿ ಮುಂದುವರಿಯುತ್ತದೆ. ಕಂಪೆನಿಯ ಬೆಳವಣಿಗೆ, ನಾವೀನ್ಯತೆ ಮತ್ತು ಡಿಜಿಟಲ್ ರೂಪಾಂತರದ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವಲ್ಲಿ ನಮ್ಮ ತಂತ್ರಜ್ಞಾನ ಕೇಂದ್ರವು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಲಿದೆ ಎಂದು ತಿಳಿಸಲಾಗಿದೆ.
ವರದಿಯಾಗಿರುವಂತೆ 350 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳ ಸಂಖ್ಯೆಯನ್ನು ಕಂಪೆನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿಲ್ಲ.
ಅಡಿಡಾಸ್ ನ ಗುರುಗ್ರಾಮ ಕಚೇರಿಯು ಸ್ಥಳೀಯ ಮಾರುಕಟ್ಟೆ ಸಂಸ್ಥೆಯ ಜೊತೆಗೆ ಜಾಗತಿಕ ಎಂಜಿನಿಯರಿಂಗ್ ಟೆಕ್ ಹಬ್ ಗಳಲ್ಲಿ ಒಂದನ್ನು ಹೊಂದಿದೆ. ಇದು ಭಾರತದಲ್ಲಿ ತಂತ್ರಜ್ಞಾನ ಮತ್ತು ವ್ಯಾಪಾರ ಕಾರ್ಯಾಚರಣೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಅಡಿಡಾಸ್ 2024ರಲ್ಲಿ ಚೆನ್ನೈನಲ್ಲಿ ಜಾಗತಿಕ ವ್ಯಾಪಾರ ಸೇವಾ ಕೇಂದ್ರವನ್ನು ಆರಂಭಿಸಿತ್ತು. ಇದರ ವೆಬ್ಸೈಟ್ ಪ್ರಕಾರ, ಈ ಸಂಸ್ಥೆಯು ಗುರುಗ್ರಾಮ ಮತ್ತು ಚೆನ್ನೈ ಕೇಂದ್ರಗಳಲ್ಲಿ ಸುಮಾರು 650 ಜನರಿಗೆ ಉದ್ಯೋಗ ನೀಡಿದೆ.
ಇತ್ತೀಚಿನ ಉದ್ಯೋಗ ಕಡಿತವು ಪ್ರಮುಖವಾಗಿ ತಂತ್ರಜ್ಞಾನ ವಿಭಾಗದ ಮೇಲೆಯೇ ಕೇಂದ್ರೀಕೃತವಾಗಿದೆ ಎಂದು ವರದಿಯಾಗಿದೆ.
ಸೌಜನ್ಯ: firstpost.com






