ವಿವಾದದ ನಡುವೆ ಆಫ್ರಿಕಾ ಕಪ್ ಆಫ್ ನೇಷನ್ಸ್ ಫುಟ್ಬಾಲ್ ಪಂದ್ಯಾವಳಿ ಗೆದ್ದುಕೊಂಡ ಸೆನೆಗಲ್

Photo Credit : aljazeera.com
ಸೆನೆಗಲ್ ತಂಡದ ಆಟಗಾರರು ರೆಫ್ರಿ ನಿರ್ಧಾರವನ್ನು ಪ್ರತಿಭಟಿಸಿ ಮೈದಾನದಿಂದ ಹೊರನಡೆದಿದ್ದರು. ನಂತರ ಮರಳಿ ಆಗಮಿಸಿ ಬ್ರಾಹಿಮ್ ಡಿಯಾಜ್ ಅವರ ಪೆನಾಲ್ಟಿಯನ್ನು ತಡೆದರು. ನಂತರ ಹೆಚ್ಚುವರಿ ಅವಧಿಯಲ್ಲಿ ಪೆಪ್ ಗುಯೆ ಗೋಲು ಭಾರಿಸಿ ತಂಡಕ್ಕೆ ವಿಜಯ ತಂದುಕೊಟ್ಟರು.
ವಿವಾದದ ನಡುವೆ ಆಫ್ರಿಕಾ ಕಪ್ ಆಫ್ ನೇಷನ್ಸ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ನಲ್ಲಿ ಅಂತಿಮವಾಗಿ ಸೆನೆಗಲ್ ತಂಡವು 1-0 ಗೋಲಿನಿಂದ ಅತಿಥೇಯ ಮೊರಕ್ಕೊ ತಂಡವನ್ನು ಮಣಿಸಿ ರವಿವಾರ ಚಾಂಪಿಯನ್ ಆಗಿದೆ.
ಸೆನೆಗಲ್ ತಂಡದ ಆಟಗಾರರು ರೆಫ್ರಿ ನಿರ್ಧಾರವನ್ನು ಪ್ರತಿಭಟಿಸಿ ಮೈದಾನದಿಂದ ಹೊರನಡೆದಿದ್ದರು. ನಂತರ ಮರಳಿ ಆಗಮಿಸಿ ಬ್ರಾಹಿಂ ಡಿಯಾಜ್ ಪೆನೆನ್ಕಾ ಅವರ ಪೆನಾಲ್ಟಿಯನ್ನು ತಡೆದರು. ನಂತರ ಹೆಚ್ಚುವರಿ ಅವಧಿಯಲ್ಲಿ ಪೆಪ್ ಗುಯೆ (90 + 4ನೇ ನಿಮಿಷ) ಅವರು ಸೆನೆಗಲ್ ಪರ ಗೆಲುವಿನ ಗೋಲು ಭಾರಿಸಿ ತಂಡಕ್ಕೆ ವಿಜಯ ತಂದುಕೊಟ್ಟರು.
ವಿವಾದಕ್ಕೆ ಕಾರಣವಾದ ಪೆನಾಲ್ಟಿ
ರಬಾತ್ನ ಪ್ರಿನ್ಸ್ ಮೌಲಾಯ್ ಅಬ್ದುಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಿಗದಿತ ಅವಧಿ ಗೋಲು ರಹಿತವಾಗಿತ್ತು. ಹೆಚ್ಚುವರಿ ಅವಧಿಯ ಆರಂಭದಲ್ಲಿ 98ನೇ ನಿಮಿಷದಲ್ಲಿ ಮೊರಕ್ಕೊ ತಂಡಕ್ಕೆ ನೀಡಿದ ಪೆನಾಲ್ಟಿ ವಿವಾದಕ್ಕೆ ಕಾರಣವಾಯಿತು. ವಿವಿಆರ್ ಪರಿಶೀಲನೆಯ ನಂತರ ಮೊರಕ್ಕೊಗೆ ಪೆನಾಲ್ಟಿ ನೀಡಲಾಯಿತು. ರೆಫ್ರಿ ನಿರ್ಧಾರವನ್ನು ಪ್ರತಿಭಟಿಸಿ ಸೆನೆಗಲ್ ಕೋಚ್ ಪೆಪೆ ಥೀಯಾವ್ ಸೆನೆಗಲ್ ಆಟಗಾರರು ಮೈದಾನದಿಂದ ಹೊರಗೆ ಕರೆದರು.
ಕೆಲವು ಕ್ಷಣಗಳ ಮೊದಲು ರೆಫ್ರಿ ಜೀನ್-ಜಾಕ್ವೆಸ್ ಎನ್ಡಾಲಾ ಅವರು ಇಸ್ಮಾಯಿಲ್ ಸರ್ ಹೆಡರ್ನಿಂದ ಗೋಲು ಗಳಿಸುವ ಅವಕಾಶವನ್ನು ತಳ್ಳಿ ಹಾಕಿದ್ದಕ್ಕೆ ಅದಾಗಲೇ ಕೋಪದಲ್ಲಿದ್ದರು. ಸೆನೆಗಲ್ ಆಟಗಾರರು ಹೊರನಡೆದ ನಂತರ ರಬಾತ್ ಸ್ಟೇಡಿಯಂನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸೆನೆಗಲ್ ಪಂದ್ಯ ಮುಂದುವರಿಸಲು ನಿರಾಕರಿಸಿದ ಕಾರಣ ಹೇಗೆ ಅಂತ್ಯಗೊಳ್ಳಲಿದೆ ಎನ್ನುವ ಗೊಂದಲವಿತ್ತು. ಈ ವೇಳೆ ಸ್ಟ್ಯಾಂಡ್ಗಳಲ್ಲಿಯೇ ಪರಿಸ್ಥಿತಿ ಬಿಗಡಾಯಿಸಿ ಸೆನೆಗಲ್ ಅಭಿಮಾನಿಗಳು ಮೈದಾನಕ್ಕೆ ನುಗ್ಗಲು ಪ್ರಯತ್ನಿಸಿದರು. ಭದ್ರತಾ ಪಡೆ ಸಿಬ್ಬಂದಿಯೊಂದಿಗೆ ಜಟಾಪಟಿ ನಡೆಸಿದರು.
ಫೀಲ್ಡ್ ಗೋಲ್ ಭಾರಿಸಿದ ಗುಯೆ
ಪಂದ್ಯ ಸುಮಾರು 20 ನಿಮಿಷ ಸ್ಥಗಿತಗೊಂಡಿತ್ತು. ಮಾತುಕತೆಯ ಬಳಿಕ ಪಂದ್ಯ ಆರಂಭಗೊಂಡಾಗ ಸೆನೆಗಲ್ ಗೋಲ್ ಕೀಪರ್ ಎಡ್ವರ್ಡ್ ಮೆಂಡಿ ಅವರು ಎದುರಾಳಿ ಡಿಯಾಜ್ರ ಪೆನಾಲ್ಟಿ ಅವಕಾಶವನ್ನು ಯಶಸ್ವಿಯಾಗಿ ತಡೆದರು. ಪಂದ್ಯಾವಳಿಯಲ್ಲಿ ಅತ್ಯಧಿಕ ಐದು ಗೋಲ್ಗಳನ್ನು ಮಾಡಿರುವ ಡಿಯಾಜ್ ಅವರ ಗೋಲನ್ನು ತಡೆದ ಬೆನ್ನಲ್ಲೇ ಗುಯೆ ಫೀಲ್ಡ್ ಗೋಲು ಮೂಲಕ ಸೆನೆಗಲ್ ತಂಡಕ್ಕೆ ಗೆಲುವನ್ನು ತಂದಿತ್ತರು. ಹೀಗೆ 50 ವರ್ಷಗಳಲ್ಲಿ ಮೊದಲ ಬಾರಿಗೆ ಪಂದ್ಯಾವಳಿ ಗೆಲ್ಲುವ ಮೊರೊಕ್ಕೊ ಕನಸು ನನಸಾಗಲಿಲ್ಲ.
ಕೆಚ್ಚಿನಲ್ಲಿ ಮರಳಿ ಬಂದ ತಂಡ
ತರಬೇತುದಾರ ಥೀಯಾವ್ ನೇತೃತ್ವದಲ್ಲಿ ಸೆನೆಗಲ್ ತಂಡ ತಮಗಾದ ಅನ್ಯಾಯದ ಕೆಚ್ಚಿನಲ್ಲಿ ಮರಳಿ ಗುಂಪುಗೂಡಿದರು ಮತ್ತು ಗೋಲಿಗಾಗಿ ದಾಳಿ ನಡೆಸಿದ್ದರು. ಗುಯೆ ಮುಂದಕ್ಕೆ ಹಾರಿ ಎಡಗಾಲಿನಿಂದ ಬಲವಾಗಿ ತಳ್ಳುವ ಮೂಲಕ ಗೋಲ್ಕೀಪರ್ ಯಾಸಿನ್ ಬೌನೌ ಅವರನ್ನು ದಾಟಿ ಚೆಂಡನ್ನು ಮೇಲಿನ ಮೂಲೆಗೆ ಹೊಡೆದರು. ಇದು ಸೆನೆಗಲ್ ತಂಡಕ್ಕೆ ಎರಡನೇ ಆಫ್ರಿಕಾ ಕಪ್ ಗೆಲುವು. 2021ರಲ್ಲಿ ಈಜಿಪ್ಟ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಗೆದ್ದು ಮೊದಲ ಬಾರಿ ಚಾಂಪಿಯನ್ ಆಗಿತ್ತು.
ಸೆನೆಗಲ್ ತಂಡದ ನಾಯಕ ಕಾಲಿಡೌ ಕೌಲಿಬಲಿ ಅಂತಿಮ ಪಂದ್ಯ ಆಡದಂತೆ ಅಮಾನತು ಹೊಂದಿದ್ದರು. ತಂಡ ಗೋಲು ಬಾರಿಸಿದ ನಂತರ ಜೊತೆಗೂಡಿ ಸಂಭ್ರಮಿಸಿದರು. ಕಾಲಿಡೌ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರಿಂದ ಕಪ್ ಸ್ವೀಕರಿಸಿದ ನಂತರ ಸಾಡಿಯೊ ಮಾನೆಗೆ ಅದನ್ನು ಒಪ್ಪಿಸಿದರು. ಸಾಡಿಯೊ ಮಾನೆ ಅವರ ಕೊನೆಯ ಆಫ್ರಿಕಾ ಕಪ್ ಆಫ್ ನೇಷನ್ಸ್ ಫುಟ್ಬಾಲ್ ಪಂದ್ಯಾವಳಿ ಇದಾಗಿರುವ ಸಾಧ್ಯತೆಯಿದೆ.
“ಎದುರಾಳಿ ತಂಡಕ್ಕೆ ನೀಡಿದ ಪೆನಾಲ್ಟಿಯಿಂದ ನಮಗೆ ಅನ್ಯಾಯವಾಗಿದೆ ಎಂಬ ಭಾವನೆ ಇತ್ತು. ಆ ಪೆನಾಲ್ಟಿಗೆ ಸ್ವಲ್ಪ ಮೊದಲು ನಮಗೆ ಗೋಲು ಗಳಿಸುವ ಅವಕಾಶವಿತ್ತು. ರೆಫ್ರಿ ಅವರು ವಿಎಆರ್ ಪರಿಶೀಲನೆ ಮಾಡಲಿಲ್ಲ” ಎಂದು ಗುಯೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.
ಸೆನೆಗಲ್ ವರ್ತನೆ ಖಂಡಿಸಿದ ಫಿಫಾ
ಈ ನಡುವೆ ಫೈನಲ್ ಪಂದ್ಯದಿಂದ ಹೊರನಡೆದ ಸೆನೆಗಲ್ ತಂಡದ ಆಟಗಾರರ ವರ್ತನೆಯನ್ನು ಫಿಫಾ ಅಧ್ಯಕ್ಷರು ಖಂಡಿಸಿದ್ದಾರೆ. “ಇದು ಸ್ವೀಕಾರಾರ್ಹವಲ್ಲದ ಬೆಳವಣಿಗೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಅಂತಿಮವಾಗಿ ಸೆನೆಗಲ್ ತಂಡದ ಆಟಗಾರ ಸಾಡಿಯೊ ಮಾನೆ ಭಿನ್ನವಾಗಿ ನಿಂತಿದ್ದಾರೆ. ಅವರು ತಮ್ಮ ತಂಡದ ಆಟಗಾರರನ್ನು ಮರಳಿ ಮೈದಾನಕ್ಕೆ ಬರುವಂತೆ ಒತ್ತಾಯಿಸಿ ಕರೆತಂದಿದ್ದಾರೆ. ಸ್ಟೇಡಿಯಂನಲ್ಲಿ ಸೆನೆಗಲ್ ತಂಡದ ಅಭಿಮಾನಿಗಳು ಗದ್ದಲಕ್ಕೆ ಸಿದ್ಧವಾದಾಗ ಅವರನ್ನು ಶಾಂತಗೊಳಿಸುವಲ್ಲೂ ಮಾನೆ ಪ್ರಮುಖ ಪಾತ್ರವಹಿಸಿದ್ದಾರೆ.
“ಮಾನೆ ಡ್ರೆಸ್ಸಿಂಗ್ ರೂಂಗೆ ಹೋಗಿ ಆಟಗಾರರನ್ನು ಮರಳಿ ಕರೆತಂದರು. ಇಲ್ಲಿ ಆಫ್ರಿಕನ್ ಫುಟ್ಬಾಲ್ ಸೋಲುತ್ತಿತ್ತು. ಆದರೆ ಅದನ್ನು ಎತ್ತಿಹಿಡಿದವರು ಮಾನೆ” ಎಂದು ಮೊರಕ್ಕೊದ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಹಸನ್ ಕಚ್ಲೌಲ್ ಹೇಳಿದ್ದಾರೆ.
ಕ್ಷಮೆಯಾಚಿಸಿದ ಬ್ರಾಹಿಂ ಡಿಯಾಜ್
ಸೆನೆಗಲ್ ಆಟಗಾರರಿಗೆ ಗೆಲುವಿನ ಕ್ಷಣವಾದರೆ ಮೊರಕ್ಕೊ ಆಟಗಾರ ಬ್ರಾಹಿಮ್ ಡಿಯಾಜ್ಗೆ ದುಸ್ವಪ್ನವಾಗಿ ಪರಿಣಮಿಸಿದೆ. ತನಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇಡೀ ಪಂದ್ಯಾವಳಿಯಲ್ಲಿ ಐದು ಗೋಲುಗಳನ್ನು ಹೊಡೆದಿದ್ದ ಅವರು ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿರುವ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದು, “ನನ್ನ ಆತ್ಮಕ್ಕೆ ನೋವಾಗಿದೆ” ಎಂದು ಹೇಳಿದ್ದಾರೆ.
66,500ಕ್ಕೂ ಹೆಚ್ಚು ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದರು.







