ಕಾರ್ಮಿಕರ ಬದಲಾಗಿ AI ಮೊರೆ ಹೋಗುತ್ತಿರುವ ಕಂಪನಿಗಳಿಗೂ ಹಾನಿಯಾಗಲಿದೆ!; ಕಾರಣವೇನು?

ಸಾಂದರ್ಭಿಕ ಚಿತ್ರ | Photo Credit : freepik
AI ಹೇಗೆ ಹೆಚ್ಚಿನ ಬೆಳವಣಿಗೆ ಮತ್ತು ಆರ್ಥಿಕ ಮೌಲ್ಯವನ್ನು ಸಾಧಿಸಲು ನೆರವಾಗಲಿದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ, ಇತ್ತೀಚೆಗಿನ ಅಧ್ಯಯನವೊಂದು ಅತಿಯಾದ AI ಉದ್ಯಮಕ್ಕೆ ಉತ್ತಮವಲ್ಲ ಎಂದು ಹೇಳಿದೆ.
ಕಳೆದ ಕೆಲವು ವರ್ಷಗಳಲ್ಲಿ ತಂತ್ರಜ್ಞಾನ ಉದ್ಯಮವು ಸಾಮೂಹಿಕ ವಜಾಗಳು ಮತ್ತು ಆರ್ಥಿಕ ಅನಿಶ್ಚಿತತೆಯಿಂದ ಬಳಲುತ್ತಿವೆ. ಬಹುತೇಕ ಕಂಪನಿಗಳು ಒಪ್ಪಿಕೊಳ್ಳದಿದ್ದರೂ, ಕೃತಕ ಬುದ್ಧಿಮತ್ತೆಯಲ್ಲಿ (AI) ತ್ವರಿತ ಬೆಳವಣಿಗೆಗಳೇ ವಜಾಗೆ ಪ್ರಮುಖ ಕಾರಣವಾಗಿದೆ. ಕಂಪನಿಗಳು AI ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದಂತೆ ತಮ್ಮ ವಿಭಾಗಗಳಲ್ಲಿ ಉದ್ಯೋಗಿಗಳನ್ನು ಕಡಿಮೆ ಮಾಡುತ್ತಿವೆ. AI ಹೇಗೆ ಹೆಚ್ಚಿನ ಬೆಳವಣಿಗೆ ಮತ್ತು ಆರ್ಥಿಕ ಮೌಲ್ಯವನ್ನು ಸಾಧಿಸಲು ನೆರವಾಗಲಿದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ, ಇತ್ತೀಚೆಗಿನ ಅಧ್ಯಯನವೊಂದು AI ಉದ್ಯಮಕ್ಕೆ ಉತ್ತಮವಲ್ಲ ಎಂದು ಹೇಳಿದೆ.
ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಬ್ರೆಟ್ ಹೆಮೆನ್ವೇ ಫಾಕ್ ಮತ್ತು ಬೋಸ್ಟನ್ ವಿಶ್ವ್ವಿದ್ಯಾಲಯದ ಗೆರ್ರಿ ತ್ಸೌಕಲಾಸ್ ಅವರ ‘ದಿ AI ಲೇಆಫ್ ಟ್ರ್ಯಾಪ್’ ಎಂಬ ಸಂಶೋಧನಾ ವರದಿಯು AI ಬಗ್ಗೆ ವ್ಯಾಪಕವಾಗಿ ಬೆಳೆದಿರುವ ಕಲ್ಪನೆಯನ್ನು ಪ್ರಶ್ನಿಸಿದೆ ಮತ್ತು ಮಾನವರ ಬದಲಾಗಿ ಯಂತ್ರಗಳನ್ನು ನೇಮಿಸುವುದು ಉದ್ಯಮಕ್ಕೆ ಒಳಿತಲ್ಲ ಎಂದು ತೋರಿಸಿದೆ. ಪ್ರತ್ಯೇಕವಾಗಿ ಕಂಪನಿಗಳಿಗೆ AI ನಿಂದ ವೆಚ್ಚ ಕಡಿಮೆಯಾಗಿ ಲಾಭ ಬರಬಹುದು. ಆದರೆ ಉದ್ದೇಶರಹಿತವಾಗಿ ಇದು ವ್ಯಾಪಕ ಅರ್ಥವ್ಯವಸ್ಥೆಗೆ ಹಾನಿ ಉಂಟು ಮಾಡಿ AI ಅಲೆಯಲ್ಲಿ ಲಾಭ ಮಾಡಿಕೊಳ್ಳುತ್ತಿರುವ ಕಂಪನಿಗಳಿಗೇ ಘಾತಕವಾಗಿ ಪರಿಣಮಿಸಲಿದೆ ಎಂದು ಅಧ್ಯಯನ ಹೇಳಿದೆ.
ಅಧ್ಯಯನದಲ್ಲಿ ಮುಖ್ಯವಾಗಿ ಕಾರ್ಮಿಕರನ್ನು ಉದ್ಯೋಗಿ ಮಾತ್ರವಲ್ಲ, ಗ್ರಾಹಕರಾಗಿಯೂ ನೋಡಲಾಗಿದೆ. ಸರಳವಾಗಿ ಹೇಳಬೇಕೆಂದರೆ ಕಂಪನಿಗಳು ಉದ್ಯೋಗಿಗಳನ್ನು AI ಜೊತೆಗೆ ಬದಲಿಸಿದಾಗ ಕಾರ್ಮಿಕರು ಆದಾಯ ಕಳೆದುಕೊಳ್ಳುತ್ತಾರೆ. ಅವರ ವೆಚ್ಚ ಕಡಿಮೆಯಾಗುತ್ತದೆ. ಗ್ರಾಹಕರ ವೆಚ್ಚದಿಂದ ಸರಕುಗಳು ಮತ್ತು ಸೇವೆಗಳಿಗೆ ಬೇಡಿಕೆ ಬರುತ್ತದೆ. ವ್ಯಾಪಕ ವಜಾಗಳು ಅರ್ಥವ್ಯವಸ್ಥೆಯ ಒಟ್ಟು ಬೇಡಿಕೆಯನ್ನು ಕಡಿಮೆ ಮಾಡಲಿದೆ.
ಸಂಶೋಧಕರ ಪ್ರಕಾರಿದೊಂದು ಪ್ರತಿಕ್ರಿಯೆಯ ಕುಣಿಕೆಯನ್ನು ಸೃಷ್ಟಿಸುತ್ತದೆ. ಬೇಡಿಕೆ ದುರ್ಬಲಗೊಂಡರೆ ಕಂಪನಿಗಳಿಗೆ ಆದಾಯ ಕಡಿಮೆಯಾಗಲಿದೆ. ತೀವ್ರವಾದ ಪ್ರಕರಣಗಳಲ್ಲಿ ಯಾಂತ್ರೀಕರಣವನ್ನು ಹೆಚ್ಚು ಉಗ್ರವಾಗಿ ಮಾಡಿದಷ್ಟು ತಾವು ಅವಲಂಬಿತವಾಗಿರುವ ಮಾರುಕಟ್ಟೆಯನ್ನು ಕಡಿಮೆ ಅಂದಾಜು ಮಾಡಿರುತ್ತಾರೆ. ಯಾಂತ್ರೀಕರಣದಿಂದ ವ್ಯಾಪಕ ಉತ್ಪನ್ನ ಸಿದ್ಧವಾದರೂ, ಅವುಗಳಿಗೆ ಶೂನ್ಯ ಬೇಡಿಕೆ ಬರಲಿದೆ.
ಅಧ್ಯಯನ ಆಶ್ಚರ್ಯ ವ್ಯಕ್ತಪಡಿಸಿದ ವಿಷಯವೆಂದರೆ, ಕಂಪನಿಗಳು ಈ ಅಪಾಯವನ್ನು ಅರ್ಥಮಾಡಿಕೊಂಡಿದ್ದರೂ, ಇನ್ನೂ ಅತಿಯಾದ ಯಾಂತ್ರೀಕರಣಕ್ಕೆ ಮುಂದಾಗುವ ಸಾಧ್ಯತೆಯಿದೆ. ಈ ಬೆಳವಣಿಗೆಯನ್ನು ಅರ್ಥಶಾಸ್ತ್ರಜ್ಞರು ‘ಎಕ್ಸ್ಟರ್ನಲಿಟಿ’ (ಬಾಹ್ಯ) ಎಂದು ಕರೆದಿದ್ದಾರೆ. ಸರಳವಾಗಿ ಹೇಳುವುದಾದರೆ ಕಂಪನಿಗಳು ಮಾನವರ ಬದಲಾಗಿ AI ನೇಮಿಸಿಕೊಳ್ಳುತ್ತಾರೆ. ಅವರು ಪೂರ್ಣ ಲಾಭಗಳು ಮತ್ತು ವೆಚ್ಚ ಉಳಿತಾಯ ಮಾಡುತ್ತಾರೆ. ಆದರೆ ಋಣಾತ್ಮಕ ಪರಿಣಾಮದಲ್ಲಿ ಗ್ರಾಹಕ ವೆಚ್ಚ ಕಡಿಮೆಯಾಗಲಿದೆ.
ತೀವ್ರ ಸ್ಪರ್ಧೆಯ ನಡುವೆಯೂ ಪ್ರತಿ ಕಂಪನಿಯು ಸೃಷ್ಟಿಸುವ ಬೇಡಿಕೆ ನಷ್ಟದ ಕೇವಲ ಒಂದು ಭಾಗವನ್ನು ಮಾತ್ರ ಭರಿಸುತ್ತದೆ. ಪರಿಣಾಮವಾಗಿ ಎಲ್ಲಾ ಸಂಸ್ಥೆಗಳು ಒಟ್ಟಾರೆ ನಿಧಾನಗೊಳಿಸುವುದು ಉತ್ತಮವಾದರೂ ಯಾಂತ್ರೀಕರಣ ತೀವ್ರಗತಿಯಲ್ಲಿಯೇ ಸಾಗಲಿದೆ. ಅಧ್ಯಯನದ ಪ್ರಕಾರ ಈ ಕ್ರಿಯಾತ್ಮಕತೆಯು ಪರಿಣಾಮಕಾರಿಯಾಗಿ ಯಾಂತ್ರೀಕೃತಗೊಳಿಸುವ ಸ್ಪರ್ಧೆಗೆ ಕಾರಣವಾಗಲಿದ್ದು, ಕಂಪನಿಗಳು ಹೆಚ್ಚು ಕಾರ್ಮಿಕರನ್ನು AI ಜೊತೆಗೆ ಬದಲಿಸಲಿವೆ.
ಅಧ್ಯಯನ ಮಾದರಿಯಲ್ಲಿ ಕಂಪನಿಗಳು ಎಷ್ಟು ಪ್ರಮಾಣದಲ್ಲಿ ಕಾರ್ಮಿಕಪಡೆಯನ್ನು ಯಂತ್ರಗಳಿಂದ ಬದಲಿಸಲಿವೆ ಎಂದು ಪರಿಗಣಿಸಿದ್ದಾರೆ. ಅವರು ಕಂಡುಕೊಂಡಿರುವ ಪ್ರಕಾರ ಕಂಪನಿಗಳು ಎಲ್ಲರಿಗೂ ಅಗತ್ಯ ಮತ್ತು ಉತ್ತಮವಾಗಿರುವ ಪ್ರಮಾಣಕ್ಕಿಂತ ಹೆಚ್ಚು ಯಾಂತ್ರೀಕರಣಗೊಳಿಸಲಿವೆ. ಸರಳವಾಗಿ ಹೇಳುವುದಾದರೆ, ಪ್ರತಿ ಕಂಪನಿಯು ತನಗಾಗಿ ತಾರ್ಕಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೂ ಒಟ್ಟಾಗಿ ಅವು ಆರ್ಥಿಕತೆ ಮತ್ತು ತಮ್ಮ ಸ್ವಂತ ಲಾಭಕ್ಕೆ ಹಾನಿಯನ್ನುಂಟು ಮಾಡುತ್ತವೆ. ಈ ನಷ್ಟಗಳು ಕಾರ್ಮಿಕರಿಗೆ ಮಾತ್ರ ಸೀಮಿತವಾಗಿಲ್ಲ. ಉದ್ಯೋಗಿಗಳು ವೇತನ ನಷ್ಟದಿಂದ ಬಳಲುವ ಕಾರಣದಿಂದ ಕಂಪನಿಗಳು ಕಡಿಮೆ ಲಾಭ ಅನುಭವಿಸುತ್ತವೆ. ಈ ಹಂತದಲ್ಲಿ ಮೌಲ್ಯ ಕುಗ್ಗುತ್ತದೆಯೇ ವಿನಾ ವಿಭಿನ್ನ ಗುಂಪುಗಳ ನಡುವೆ ಹಂಚಿ ಹೋಗುವುದಿಲ್ಲ.
ಸಾಮಾನ್ಯವಾಗಿ ಪ್ರಸ್ತಾಪಿಸಲಾಗುವ ನೀತಿ ಪ್ರತಿಕ್ರಿಯೆಗಳನ್ನು ಅಧ್ಯಯನ ಮೌಲ್ಯಮಾಪನ ಮಾಡಿದೆ. ಸಾರ್ವತ್ರಿಕ ಮೂಲ ಆದಾಯ, ಬಂಡವಾಳ ಆದಾಯ ತೆರಿಗೆಗಳು ಮತ್ತು ಕಾರ್ಮಿಕರ ಲಾಭ ಹಂಚಿಕೆಯಂತಹ ಕ್ರಮಗಳು ಉದ್ಯೋಗ ನಷ್ಟದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುವ ವಾದವಿದೆ. ಆದರೆ ಅವು ಪ್ರಮುಖ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಈ ನೀತಿಗಳು ಆದಾಯ ಮಟ್ಟ ಸುಧಾರಿಸಬಹುದು ಮತ್ತು ಸಂಪತ್ತನ್ನು ಮರುಹಂಚಿಕೆ ಮಾಡಬಹುದಾದರೂ, ಕಂಪನಿಗಳು ಯಾಂತ್ರೀಕರಣ ಮಾಡಲು ಇರುವ ಒತ್ತಡವನ್ನು ಬದಲಿಸುವುದಿಲ್ಲ.
ಏನೇ ಆದರೂ ಅಧ್ಯಯನದ ಪ್ರಕಾರ ಏನೇ ಕ್ರಮ ಕೈಗೊಂಡರೂ ವಾಸ್ತವಿಕ ಸಂದರ್ಭದಲ್ಲಿ ಆಗುವ ಬೇಡಿಕೆಯ ನಷ್ಟವನ್ನು ಸಂಪೂರ್ಣವಾಗಿ ಸಮತೋಲನಗೊಳಿಸಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ನೇರವಾಗಿ ಪರಿಹರಿಸಲು ಏಕೈಕ ನೀತಿಯೆಂದರೆ ಪಿಗೋವಿಯನ್ ಯಾಂತ್ರೀಕೃತ ತೆರಿಗೆ. ಅಂದರೆ ವ್ಯಕ್ತಿ ಇತರರ ಒಪ್ಪಿಗೆ ಇಲ್ಲದೆ ಇತರರಿಗೆ ಹಾನಿ ಮಾಡುವ ನಡವಳಿಕೆಯಲ್ಲಿ ತೊಡಗಿದಾಗ ಉಂಟಾಗು ಬಾಹ್ಯತೆ ಸರಿಪಡಿಸಲು ವಿಧಿಸುವ ತೆರಿಗೆ. ಈ ಸಂದರ್ಭದಲ್ಲಿ ಕಡಿಮೆಯಾದ ಗ್ರಾಹಕ ಬೇಡಿಕೆಯಿಂದ ಉಂಟಾಗುವ ವಿಶಾಲ ಆರ್ಥಿಕ ಹಾನಿ ಪ್ರತಿಬಿಂಬಿಸಲು ಪ್ರತಿ AIನೊಂದಿಗೆ ಬದಲಿಸುವ ಕಾರ್ಮಿಕ ಘಟಕದ ಮೇಲೂ ತೆರಿಗೆ ವಿಧಿಸುವುದು. ಅಂತಹ ತೆರಿಗೆ ಅತಿ ಯಾಂತ್ರೀಕರಣವನ್ನು ನಿರುತ್ಸಾಹಗೊಳಿಸುತ್ತದೆ. ಕೈಗಾರಿಕೆಗಳಲ್ಲಿ AI ಅಳವಡಿಕೆ ವೇಗವಾಗುತ್ತಿದ್ದಂತೆ ಯಾಂತ್ರೀಕೃತಗೊಂಡ ಪರಿಣಾಮಗಳನ್ನು ನಿರ್ವಹಿಸುವುದನ್ನು ಮೀರಿದ ಮತ್ತು ಅದನ್ನು ಪ್ರೇರೇಪಿಸುವ ಪ್ರೋತ್ಸಾಹಗಳನ್ನು ಪರಿಹರಿಸುವ ನೀತಿಗಳ ಅಗತ್ಯವನ್ನು ಅಧ್ಯಯನ ಒತ್ತಿ ಹೇಳಿದೆ.






