ಮಾಧ್ಯಮಗಳ ಕಂಟೆಂಟ್ ಕದಿಯುವ AI ಬಾಟ್ ಗಳಿಗೆ ಜಂಟಿ ತಡೆ; ತಂತ್ರಜ್ಞಾನ ದೈತ್ಯರ ಭರವಸೆ

Photo: Reuters
ಮಾಧ್ಯಮಗಳು ಮತ್ತು ಇತರ ವೆಬ್ಸೈಟ್ಗಳಿಗೆ ಕೃತಕ ಬುದ್ಧಿಮತ್ತೆ (AI) ಮಾದರಿಗಳಿಗೆ ತರಬೇತಿ ನೀಡಲು ತಮ್ಮ ವಿಷಯವನ್ನು ಸ್ಕ್ರ್ಯಾಪ್ ಮಾಡುವುದನ್ನು ತಡೆಯಲು ಒಂದು ಮಾರ್ಗವನ್ನು ಒದಗಿಸುವುದಾಗಿ ತಂತ್ರಜ್ಞಾನ ಕಂಪೆನಿಗಳು ಹೇಳಿವೆ.
ಸುದ್ದಿ ಪ್ರಕಾಶಕರಿಂದ ಹೆಚ್ಚುತ್ತಿರುವ ಟೀಕೆಗಳು ಮತ್ತು ಕಾನೂನು ಹೋರಾಟಗಳ ನಡುವೆ, ಮಾಧ್ಯಮಗಳು ಮತ್ತು ಇತರ ವೆಬ್ಸೈಟ್ ಗಳ ಅನುಮತಿ ಇಲ್ಲದೆ AI ಮಾದರಿಗಳಿಗೆ ತರಬೇತಿ ನೀಡಲು ಮಾಹಿತಿ ಪಡೆದುಕೊಳ್ಳುವುದನ್ನು ತಡೆಯಲು ಒಂದೇ ಮಾರ್ಗವನ್ನು ಒದಗಿಸುವುದಾಗಿ OpenAI, Google, Microsoft ಮತ್ತು Anthropic ಕಂಪನಿಗಳು ಹೇಳಿವೆ. ಮೆಟಾ ಈ ಪ್ರಯತ್ನಕ್ಕೆ ಬೆಂಬಲ ಸೂಚಿಸಿದೆ.
OpenAI, Google, Microsoft ಮತ್ತು Anthropic ನಂತಹ ದೊಡ್ಡ AI ಕಂಪೆನಿಗಳು ತಮ್ಮ AI ತಂತ್ರಜ್ಞಾನಕ್ಕೆ ತರಬೇತಿ ನೀಡಲು ಇಂಟರ್ ನೆಟ್ ನಲ್ಲಿರುವ ಲೇಖನಗಳು, ಸುದ್ದಿ ಮತ್ತು ವೆಬ್ ಸೈಟ್ ಗಳ ಮಾಹಿತಿಯನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳುತ್ತಿದ್ದವು. ಇದನ್ನು ಸ್ಕ್ರ್ಯಾಪಿಂಗ್ ಎಂದು ಕರೆಯಲಾಗುತ್ತದೆ. ತಮ್ಮ ಶ್ರಮದ ಬರವಣಿಗೆಯನ್ನು ಯಾವುದೇ ಅನುಮತಿ ಅಥವಾ ಹಣ ಪಾವತಿಸದೆ AI ತರಬೇತಿಗೆ ಬಳಸುತ್ತಿರುವುದನ್ನು ವಿರೋಧಿಸಿ ನ್ಯೂಯಾರ್ಕ್ ಟೈಮ್ಸ್ನಂತಹ ದೊಡ್ಡ ಮಾಧ್ಯಮಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು.
ಹೀಗೆ, ಮಾಧ್ಯಮಗಳು ಮತ್ತು ಇತರ ವೆಬ್ಸೈಟ್ಗಳಿಗೆ AI ಮಾದರಿಗಳಿಗೆ ತರಬೇತಿ ನೀಡಲು ತಮ್ಮ ವಿಷಯವನ್ನು ಸ್ಕ್ರ್ಯಾಪ್ ಮಾಡುವುದನ್ನು ತಡೆಯಲು ಒಂದು ಮಾರ್ಗವನ್ನು ಒದಗಿಸುವುದಾಗಿ ಕಂಪೆನಿಗಳು ಹೇಳಿವೆ. ಪ್ರಕಾಶಕರು ಪ್ರಸ್ತುತ ಡೇಟಾ ಸಂಗ್ರಹಿಸಲು ವೆಬ್ ನಲ್ಲಿ ಕ್ರಾಲ್ ಮಾಡುವ ಪ್ರತಿಯೊಂದು ಬಾಟ್ ಗೂ ಪ್ರತ್ಯೇಕ ನಿರ್ಬಂಧಿತ ಆಜ್ಞೆಗಳನ್ನು ಕಾರ್ಯಗತಗೊಳಿಸಬೇಕಾಗಿದೆ. ಆದರೆ, ಪ್ರಸ್ತಾವಿತ ಪರಿಹಾರವು ಈ ಪ್ರೋಟೋಕಾಲ್ ಅಳವಡಿಸಿಕೊಳ್ಳುವ ಯಾವುದೇ AI ಕಂಪೆನಿಯಿಂದ ಗುರುತಿಸಲ್ಪಟ್ಟು ಗೌರವಿಸಲ್ಪಡುವ ಒಂದೇ ಪ್ರಾಮಾಣೀಕೃತ ಸೂಚನೆಯನ್ನು ನಮೂದಿಸಲು ಅವಕಾಶ ನೀಡುತ್ತದೆ.
ಅಂದರೆ, ಈ ಹಿಂದೆ ಪ್ರತಿಯೊಂದು AI ಕಂಪನಿಯನ್ನು ಪ್ರತ್ಯೇಕವಾಗಿ ಬ್ಲಾಕ್ ಮಾಡಬೇಕಾಗುತ್ತಿತ್ತು. ಆದರೆ, ಈಗ ಜಾರಿಗೆ ತರಲಿರುವ ಹೊಸ ತಾಂತ್ರಿಕ ವ್ಯವಸ್ಥೆಯಿಂದಾಗಿ ವೆಬ್ಸೈಟ್ ಪ್ರಕಾಶಕರು ಒಂದೇ ಆಯ್ಕೆಯ ಮೂಲಕ ಎಲ್ಲ ಪ್ರಮುಖ AI ಕಂಪೆನಿಗಳಿಂದ ತಮ್ಮ ಕಂಟೆಂಟ್ ಅನ್ನು ಸುಲಭವಾಗಿ ರಕ್ಷಿಸಿಕೊಳ್ಳಬಹುದು.
ಆದರೆ, ಈ ಪರಿಹಾರಗಳು ಸದ್ಯಕ್ಕೆ ಜಾರಿಗೆ ಬರುವುದಿಲ್ಲ. ಮೈಕ್ರೋಸಾಫ್ಟ್ 2027ರ ಫೆಬ್ರುವರಿ 1ರಿಂದ ಇದನ್ನು ಕಾರ್ಯಗತಗೊಳಿಸಲಿದೆ. ಗೂಗಲ್ 2027ರ ಸುಮಾರಿಗೆ ಇದನ್ನು ಜಾರಿಗೆ ತರಲಿದೆ. ಚಾಟ್ಜಿಪಿಟಿ ತಯಾರಕ OpenAI ಮುಂಬರುವ ತಿಂಗಳುಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಹೇಳಿದೆ. ಆದರೆ, ಕ್ಲೌಡ್ ತಯಾರಕ Anthropic ಇದನ್ನು ಈಗಾಗಲೇ ಪ್ರಾರಂಭಿಸಿರುವುದಾಗಿ ತಿಳಿಸಿದೆ.
ಈ ಹಿಂದೆ ಪ್ರತಿಯೊಂದು AI ಕಂಪೆನಿಯನ್ನು ಪ್ರತ್ಯೇಕವಾಗಿ ಬ್ಲಾಕ್ ಮಾಡಬೇಕಾಗುತ್ತಿತ್ತು. ಈಗ ಜಾರಿಗೆ ಬರಲಿರುವ ಹೊಸ ತಾಂತ್ರಿಕ ವ್ಯವಸ್ಥೆಯಿಂದ ವೆಬ್ಸೈಟ್ ಪ್ರಕಾಶಕರು ಒಂದೇ ಆಯ್ಕೆಯ ಮೂಲಕ ಎಲ್ಲ ಪ್ರಮುಖ AI ಕಂಪನಿಗಳಿಂದ ತಮ್ಮ ಕಂಟೆಂಟ್ ಅನ್ನು ಸುಲಭವಾಗಿ ರಕ್ಷಿಸಿಕೊಳ್ಳಬಹುದು.
ಪ್ರಸ್ತುತ ಇಂಟರ್ನೆಟ್ ನಲ್ಲಿ ಮಾಧ್ಯಮಗಳ ಲೇಖನಗಳನ್ನು ಸ್ವಯಂಚಾಲಿತವಾಗಿ ಕದಿಯುವ AI ಬಾಟ್ಗಳ ಹಾವಳಿ ವಿಪರೀತವಾಗಿದೆ. ಇದರಿಂದ ಬೇಸತ್ತ ಪ್ರಕಾಶಕರು ಕಾನೂನು ಹೋರಾಟದ ಹಾದಿ ಹಿಡಿದಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಮತ್ತು OpenAI ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ಜಗತ್ತಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾದ ದಿ ನ್ಯೂಯಾರ್ಕ್ ಟೈಮ್ಸ್ ತನ್ನ ದಾವೆಯಲ್ಲಿ, ಚಾಟ್ಜಿಪಿಟಿ ತನ್ನ ಲಕ್ಷಾಂತರ ಗುಣಮಟ್ಟದ ಲೇಖನಗಳನ್ನು ಕದ್ದು ಓದಿದೆ ಮತ್ತು ಅದಕ್ಕಾಗಿ ತಮಗೆ ಯಾವುದೇ ರಾಯಲ್ಟಿ ಅಥವಾ ಹಣ ಪಾವತಿಸಿಲ್ಲ ಎಂದು ಆರೋಪಿಸಿದೆ.
AI ಮಾದರಿಗಳಿಗೆ ತರಬೇತಿ ನೀಡಲು ತಮ್ಮ ಲೇಖನಗಳನ್ನು ಸ್ಕ್ರ್ಯಾಪ್ ಮಾಡುವ ಬಾಟ್ಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯನ್ನು ಪ್ರಕಾಶಕರು ಎದುರಿಸುತ್ತಿರುವ ಸಂದರ್ಭದಲ್ಲೇ ಈ ಜಂಟಿ ಪ್ರಕಟಣೆ ಹೊರಬಿದ್ದಿದೆ. 2023ರ ಡಿಸೆಂಬರ್ ನಲ್ಲಿ ಚಾಟ್ಜಿಪಿಟಿ ತರಬೇತಿಗಾಗಿ ಯಾವುದೇ ಅನುಮತಿ ಅಥವಾ ಹಣ ಪಾವತಿಸದೆ ಲಕ್ಷಾಂತರ ಲೇಖನಗಳನ್ನು ಕಾನೂನುಬಾಹಿರವಾಗಿ ಬಳಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಆರೋಪಿಸಿತ್ತು. ಆದರೆ, OpenAI ಮತ್ತು Microsoft ಕಂಪನಿಗಳು ಕೃತಿಸ್ವಾಮ್ಯ ಕಾಯ್ದೆಯಲ್ಲಿರುವ ‘ಫೇರ್ ಯೂಸ್’ ಎಂಬ ವಿನಾಯಿತಿಯನ್ನು ಆಧರಿಸಿ ವಾದಿಸುತ್ತಿವೆ.
ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ, ಸಂಶೋಧನೆ, ವಿಮರ್ಶೆ, ಶಿಕ್ಷಣ ಅಥವಾ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗಾಗಿ ಬೇರೆಯವರ ಕೃತಿಸ್ವಾಮ್ಯ ಹೊಂದಿರುವ ಮಾಹಿತಿಯನ್ನು ಅನುಮತಿ ಇಲ್ಲದೆಯೂ ಸ್ವಲ್ಪ ಮಟ್ಟಿಗೆ ಬಳಸಬಹುದು. ಇದನ್ನು ಫೇರ್ ಯೂಸ್ (ನ್ಯಾಯಸಮ್ಮತ ಬಳಕೆ) ಎನ್ನಲಾಗುತ್ತದೆ. OpenAI ಮತ್ತು Microsoft ಕಂಪನಿಗಳು, “ನಾವು ಮಾಹಿತಿ ಕದಿಯುತ್ತಿಲ್ಲ. ಬದಲಿಗೆ, ಅದರಿಂದ AIಗೆ ತರಬೇತಿ ನೀಡುತ್ತಿದ್ದೇವೆ. ಇದು ಕಾನೂನಿನ ಪ್ರಕಾರ ಫೇರ್ ಯೂಸ್ ವ್ಯಾಪ್ತಿಗೆ ಬರುತ್ತದೆ” ಎಂದು ವಾದಿಸುತ್ತಿವೆ.
OpenAI ಮತ್ತು Microsoft ಕಂಪನಿಗಳು ಜಂಟಿ ವ್ಯವಸ್ಥೆ ತರುವ ಮೊದಲೇ, ವೆಬ್ಸೈಟ್ ಗಳಿಗೆ ಭದ್ರತೆ ಒದಗಿಸುವ Cloudflare ಕಂಪೆನಿಯು 2025ರ ಜುಲೈನಿಂದಲೇ ತನ್ನ ಹೊಸ ಗ್ರಾಹಕರ ವೆಬ್ಸೈಟ್ ಗಳಿಗೆ AI ಬಾಟ್ಗಳು ಪ್ರವೇಶಿಸದಂತೆ ತಡೆಗೋಡೆ ನಿರ್ಮಿಸಿದೆ. ಹಾಗೆಯೇ, ‘Really Simple Licensing’ ಎಂಬ ತಂತ್ರಜ್ಞಾನದ ಮೂಲಕ ವೆಬ್ಸೈಟ್ ಮಾಲೀಕರು ತಮ್ಮ ಮಾಹಿತಿ ಬಳಸುವ AI ಬಾಟ್ ಗಳಿಗೆ ಬಿಲ್ ವಿಧಿಸಿ ಹಣ ವಸೂಲಿ ಮಾಡುವ ವ್ಯವಸ್ಥೆಯೂ ಈಗಾಗಲೇ ಜಾರಿಯಲ್ಲಿದೆ.
ಈ ಹೊಸ ಕೋಡ್ ಬಳಸಿದರೆ ಭವಿಷ್ಯದಲ್ಲಿ ತರಬೇತಿ ಪಡೆಯುವ AI ಮಾದರಿಗಳನ್ನು ತಡೆಯಬಹುದೇ ಹೊರತು, ಈಗಾಗಲೇ ಹಿಂದಿನ ವರ್ಷಗಳಲ್ಲಿ ವೆಬ್ಸೈಟ್ ಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ.
AI ತರಬೇತಿಯಿಂದ ಹೊರಗುಳಿದರೆ ಪ್ರಕಾಶಕರ ಕಂಟೆಂಟ್ AI ಆ್ಯಪ್ಗಳು ಮತ್ತು ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಬಹುದು ಎಂದು Microsoft ಮತ್ತು Google ಪ್ರತ್ಯೇಕ ಬ್ಲಾಗ್ ಪೋಸ್ಟ್ಗಳಲ್ಲಿ ತಿಳಿಸಿವೆ.
“ಇಂತಹ ಆದ್ಯತೆಗಳನ್ನು ಒಂದೇ ಬಾರಿಗೆ ಅನೇಕ ಸಂಸ್ಥೆಗಳಿಗೆ ತಲುಪಿಸುವ ಸಾಮಾನ್ಯ ಸಿಗ್ನಲ್ (ಸೂಚನೆ) ರಚಿಸುವುದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ನಾವು ನಂಬುತ್ತೇವೆ. ಈ ಮಾನದಂಡಗಳನ್ನು ಇಡೀ ಉದ್ಯಮದಾದ್ಯಂತ ಜಾರಿಗೆ ತರಲು ಇತರ AI ಕಂಪನಿಗಳೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ” ಎಂದು ಮೆಟಾ ಕಂಪನಿಯ ವಕ್ತಾರ ಆಂಡಿ ಸ್ಟೋನ್ ಈ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.






