ಕೃತಕ ಬುದ್ಧಿಮತ್ತೆ ಹೂಡಿಕೆಯಿಂದ ಜಾಗತಿಕ ವೃದ್ಧಿಗೆ ಬೆಂಬಲ; ಯುದ್ಧ, ಸಾಲದ ಹೊರೆಯಿಂದ ಆತಂಕ: IMF

ಸಾಂದರ್ಭಿಕ ಚಿತ್ರ | Photo Credit : magnific.com
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಂಧನ ಕ್ಷೇತ್ರದಲ್ಲಿ ಬಿಕ್ಕಟ್ಟು ಎದುರಾಗಿದ್ದರೂ, ಕೃತಕ ಬುದ್ಧಿಮತ್ತೆ (AI) ವಲಯದಲ್ಲಿನ ಬಲವಾದ ಹೂಡಿಕೆಯು ಜಾಗತಿಕ ಆರ್ಥಿಕತೆಗೆ ಚೇತರಿಕೆ ನೀಡಿದೆ. ಹೀಗಾಗಿ, ಈ ವರ್ಷ ಜಾಗತಿಕ ಜಿಡಿಪಿ ಪ್ರಗತಿಯು ಶೇಕಡಾ 3ಕ್ಕಿಂತ ಹೆಚ್ಚಿರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಂಗಳವಾರ ತಿಳಿಸಿದೆ. ಅದೇ ಸಮಯದಲ್ಲಿ, ಆರ್ಥಿಕ ಹಿಂಜರಿತದ ಅಪಾಯಗಳು ಹೆಚ್ಚುತ್ತಿದ್ದು, ಏರುತ್ತಿರುವ ಸಾಲದ ಹೊರೆಯಿಂದಾಗಿ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಎಚ್ಚರಿಸಿದೆ.
ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚಾಗಿದ್ದರೂ, ಐಎಮ್ಎಫ್ 2026ರ ಜಾಗತಿಕ ಪ್ರಗತಿ ದರವನ್ನು ಶೇಕಡಾ 3.1 ಎಂದು ಅಂದಾಜಿಸಿದೆ. ಇದು ಜುಲೈನಲ್ಲಿ ನೀಡಿದ್ದ ಶೇಕಡಾ 3.0ರ ಪ್ರಗತಿಯ ಅಂದಾಜಿಗಿಂತ ಸ್ವಲ್ಪ ಹೆಚ್ಚಾಗಿದೆ.
ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಐಎಮ್ಎಫ್ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ ಸಭೆಯಲ್ಲಿ 'ವರ್ಲ್ಡ್ ಎಕನಾಮಿಕ್ ಔಟ್ಲುಕ್' ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ವರದಿಯ ಪ್ರಕಾರ, 2025ರ ಶೇಕಡಾ 3.5ರ ಜಾಗತಿಕ ಪ್ರಗತಿಗೆ ಹೋಲಿಸಿದರೆ ಈ ಬಾರಿಯ ಅಂದಾಜು ಸ್ವಲ್ಪ ಕಡಿಮೆಯಾಗಿದೆ. 2027ರ ಜಾಗತಿಕ ಬೆಳವಣಿಗೆ ದರ ಶೇಕಡಾ 3.4 ಇರಲಿದೆ ಎಂದು ಜುಲೈನಲ್ಲಿ ಅಂದಾಜಿಸಿದ್ದಂತೆಯೇ ಈಗಲೂ ತಿಳಿಸಲಾಗಿದೆ.
ಎಐ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ನಿರಂತರವಾಗಿ ಹೆಚ್ಚುತ್ತಿರುವುದು ಈ ಸಣ್ಣ ಮಟ್ಟದ ಚೇತರಿಕೆಗೆ ಪ್ರಮುಖ ಕಾರಣವಾಗಿದೆ. ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಅಭಿವೃದ್ಧಿ ಹೊಂದಿದ ದೇಶಗಳು ಹಾಗೂ ಎಐ ಹಾರ್ಡ್ವೇರ್ ಪೂರೈಸುವ ದಕ್ಷಿಣ ಕೊರಿಯಾ, ಮಲೇಷ್ಯಾ, ಮೆಕ್ಸಿಕೊ ಮತ್ತು ಥಾಯ್ಲೆಂಡ್ನಂತಹ ದೇಶಗಳ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಐಎಮ್ಎಫ್ ಹೆಚ್ಚಿಸಿದೆ.
"ಜಾಗತಿಕ ಆರ್ಥಿಕತೆಯು ದೃಢವಾಗಿ ಮುನ್ನಡೆಯುತ್ತಿದೆಯಾದರೂ, ಈ ಸಾಮರ್ಥ್ಯಕ್ಕೆ ಒಂದು ಮಿತಿ ಇದೆ. ಹೀಗಾಗಿ, ನಾವು ಕೇವಲ ಪರಿಸ್ಥಿತಿಯನ್ನು ನಿಭಾಯಿಸುವುದಷ್ಟೇ ಅಲ್ಲದೆ, ಆರ್ಥಿಕತೆಯನ್ನು ಪುನರ್ನಿರ್ಮಿಸುವತ್ತ ಗಮನಹರಿಸಬೇಕಿದೆ" ಎಂದು ಐಎಮ್ಎಫ್ನ ಮುಖ್ಯ ಅರ್ಥಶಾಸ್ತ್ರಜ್ಞೆ ಸಿಲ್ವಾನಾ ಟೆನ್ರೇರೊ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡು ಹಣದುಬ್ಬರ ಹೆಚ್ಚಾಗುವುದು, ಸರ್ಕಾರಗಳ ಸಾಲದ ವೆಚ್ಚವನ್ನು ಹೆಚ್ಚಿಸುವ ಬಾಂಡ್ಗಳ ಬಡ್ಡಿದರ ಏರಿಕೆ, ಎಲ್ ನಿನೊ ಪ್ರಭಾವದಿಂದ ಉಂಟಾಗುವ ತೀವ್ರ ಹವಾಮಾನ ವೈಪರೀತ್ಯಗಳು ಹಾಗೂ ಎಐ ಹೂಡಿಕೆಯ ಲಾಭದಾಯಕತೆಯ ಮರುಪರಿಶೀಲನೆಯಿಂದ ಹೂಡಿಕೆ ತಗ್ಗುವುದು ಜಾಗತಿಕ ಪ್ರಗತಿಗೆ ಎದುರಾಗಿರುವ ಪ್ರಮುಖ ಸವಾಲುಗಳಾಗಿವೆ ಎಂದು ಅವರು ವಿವರಿಸಿದರು.
ಇಂಧನ ಬೆಲೆಗಳ ಏರಿಕೆಯ ಆಘಾತವನ್ನು ಕಡಿಮೆ ಮಾಡಲು ದೇಶಗಳು ಮತ್ತು ಕಂಪನಿಗಳು ತ್ವರಿತವಾಗಿ ಸ್ಪಂದಿಸಿವೆ. ಮೀಸಲು ತೈಲವನ್ನು ಬಳಸಿಕೊಳ್ಳುವುದು, ಪರ್ಯಾಯ ಪೂರೈಕೆದಾರರು ಮತ್ತು ಇಂಧನ ಮೂಲಗಳನ್ನು ಕಂಡುಕೊಳ್ಳುವುದು ಹಾಗೂ ತೈಲ ಬಳಕೆಯನ್ನು ಕಡಿತಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಐಎಮ್ಎಫ್ನ ಉಪ ಸಂಶೋಧನಾ ನಿರ್ದೇಶಕಿ ಪೆಟ್ಯಾ ಕೊಯೆವಾ ಬ್ರೂಕ್ಸ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈ ರೀತಿಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಜಾಗತಿಕ ಪ್ರಗತಿ ದರವು ಶೇಕಡಾ 2.5ಕ್ಕೆ ಕುಸಿಯುತ್ತಿತ್ತು. ಆದರೆ, ಯುದ್ಧ ಸುದೀರ್ಘವಾಗುತ್ತಿದ್ದಂತೆ ಈ ಕ್ರಮಗಳ ಪ್ರಭಾವ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.
ಎಐ ತಂತ್ರಜ್ಞಾನದ ಲಾಭ ಪಡೆಯುತ್ತಿರುವ ದೇಶಗಳು ಮತ್ತು ಅದರಿಂದ ದೂರ ಉಳಿದಿರುವ ದೇಶಗಳ ನಡುವಿನ ಅಂತರ ಹೆಚ್ಚುತ್ತಿರುವುದನ್ನು ಐಎಮ್ಎಫ್ ಗಮನಿಸಿದೆ. ಪ್ರಸ್ತುತ ಜಾಗತಿಕ ಆರ್ಥಿಕ ಬೆಳವಣಿಗೆಯ ಶೇಕಡಾ 95ರಷ್ಟು ಭಾಗವು ಕೇವಲ 32 ದೇಶಗಳಿಂದ ಬರುತ್ತಿದ್ದು, ಏಪ್ರಿಲ್ನಲ್ಲಿ ಈ ಸಂಖ್ಯೆ 54 ಆಗಿತ್ತು.
ಆರ್ಥಿಕ ಬೆಳವಣಿಗೆಯ ಅಂದಾಜನ್ನು ಇಳಿಕೆ ಮಾಡುತ್ತಿರುವ ಪ್ರಮಾಣ ಹೆಚ್ಚಾಗಿದೆ. ಏಪ್ರಿಲ್ನ ಅಂದಾಜಿಗೆ ಹೋಲಿಸಿದರೆ, ಶೇಕಡಾ 47ರಷ್ಟು ದೇಶಗಳ ಬೆಳವಣಿಗೆ ದರವನ್ನು ಐಎಮ್ಎಫ್ ತಗ್ಗಿಸಿದೆ. ಇದರಲ್ಲಿ ಎಐ ತಂತ್ರಜ್ಞಾನದ ಸರಪಳಿಯಿಂದ ಹೊರಗಿರುವ ಮತ್ತು ಇಂಧನ ಆಮದು ಮಾಡಿಕೊಳ್ಳುವ ಹಲವು ದೇಶಗಳು ಸೇರಿವೆ.
ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ನೇರ ಪರಿಣಾಮ ಎದುರಿಸುತ್ತಿರುವ ಗಲ್ಫ್ ದೇಶಗಳ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಜುಲೈನಲ್ಲಿ ಶೇಕಡಾ 1.7ರಷ್ಟು ಬೆಳೆಯಲಿದೆ ಎಂದು ಅಂದಾಜಿಸಲಾಗಿದ್ದ ಸೌದಿ ಅರೇಬಿಯಾದ ಜಿಡಿಪಿ, ಈ ವರ್ಷ ಶೇಕಡಾ 3.3ರಷ್ಟು ಕುಸಿಯುವ ಸಾಧ್ಯತೆಯಿದೆ.
ಇರಾನ್, ಇರಾಕ್, ಕುವೈತ್, ಖತರ್ ಮತ್ತು ಯುಎಇ ದೇಶಗಳೂ ತೀವ್ರ ಆರ್ಥಿಕ ಹಿಂಜರಿತಕ್ಕೆ ಸಿಲುಕುವ ನಿರೀಕ್ಷೆಯಿದೆ. 2026ರಲ್ಲಿ ಈ ದೇಶಗಳ ಆರ್ಥಿಕತೆಗಳು ಕ್ರಮವಾಗಿ ಶೇಕಡಾ 7.6, ಶೇಕಡಾ 16, ಶೇಕಡಾ 16.7, ಶೇಕಡಾ 15.6 ಮತ್ತು ಶೇಕಡಾ 3.9ರಷ್ಟು ಕುಸಿತ ಕಾಣಲಿವೆ ಎಂದು ಅಂದಾಜಿಸಲಾಗಿದೆ.
ಅಮೆರಿಕದ ಆರ್ಥಿಕತೆ ಸ್ಥಿರ; ಯುರೋಪ್ನಲ್ಲಿ ಸುಧಾರಣೆ
ಪ್ರಮುಖ ಆರ್ಥಿಕತೆಗಳ ಪೈಕಿ ಅಮೆರಿಕದ ಬೆಳವಣಿಗೆ ದರವು 2026 ಮತ್ತು 2027ರ ಎರಡೂ ವರ್ಷಗಳಲ್ಲಿ ಶೇಕಡಾ 2.3ರಷ್ಟಿರಲಿದೆ ಎಂದು ಐಎಮ್ಎಫ್ ಅಂದಾಜಿಸಿದೆ. ಖಾಸಗಿ ಬಳಕೆ, ತೆರಿಗೆ ಕಡಿತ ಮತ್ತು ಎಐ ವಲಯದ ಹೂಡಿಕೆಗಳು ಅಮೆರಿಕದ ಆರ್ಥಿಕತೆಗೆ ಬೆಂಬಲ ನೀಡಲಿವೆ.
ಎಐ ವಲಯದಲ್ಲಿನ ಬಲವಾದ ಹೂಡಿಕೆ, ಜರ್ಮನಿಯ ರಾಸಾಯನಿಕ ಉತ್ಪಾದನೆಯಂತಹ ವಲಯಗಳ ಕೊಡುಗೆ ಹಾಗೂ ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಹೆಚ್ಚಿದ ರಕ್ಷಣಾ ವೆಚ್ಚದ ಕಾರಣದಿಂದ ಯುರೋಪ್ನ 2026ರ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇಕಡಾ 0.9ರಿಂದ ಶೇಕಡಾ 1.1ಕ್ಕೆ ಹೆಚ್ಚಿಸಲಾಗಿದೆ. ಎಐ ಹೂಡಿಕೆ ಹೆಚ್ಚಿರುವುದರಿಂದ ಬ್ರಿಟನ್ನ 2026ರ ಬೆಳವಣಿಗೆಯ ಅಂದಾಜನ್ನೂ ಶೇಕಡಾ 1.3ಕ್ಕೆ ಹೆಚ್ಚಿಸಲಾಗಿದೆ.
ಉತ್ತಮ ರಫ್ತಿನ ಹೊರತಾಗಿಯೂ, ಹೆಚ್ಚುತ್ತಿರುವ ತೈಲ ಬೆಲೆಗಳು ದೇಶೀಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಚೀನಾದ ಬೆಳವಣಿಗೆ ದರವು 2026ರಲ್ಲಿ ಶೇಕಡಾ 4.5 ಮತ್ತು 2027ರಲ್ಲಿ ಶೇಕಡಾ 4.0ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.
ಹೆಚ್ಚಿನ ದೇಶೀಯ ಬೇಡಿಕೆ, ಸೇವಾ ವಲಯದ ಸಕ್ರಿಯತೆ ಮತ್ತು ಎಐ ವಲಯದ ಹೂಡಿಕೆಯ ಬೆಂಬಲದಿಂದ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದೆ. ಜುಲೈ ತಿಂಗಳ ಅಂದಾಜಿಗೆ ಹೋಲಿಸಿದರೆ, ಈ ವರ್ಷದ ಬೆಳವಣಿಗೆಯ ಅಂದಾಜನ್ನು ಶೇಕಡಾ 0.6ರಷ್ಟು ಮತ್ತು ಮುಂದಿನ ವರ್ಷದ ಅಂದಾಜನ್ನು ಶೇಕಡಾ 0.3ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ಭಾರತದ ಬೆಳವಣಿಗೆ ದರವು 2026 ಮತ್ತು 2027ರ ಎರಡೂ ವರ್ಷಗಳಲ್ಲಿ ಶೇಕಡಾ 7.0ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.
ಎಐ ವಲಯದಲ್ಲಿ ಹೂಡಿಕೆ ಹೆಚ್ಚುತ್ತಿರುವುದು ಬೆಲೆಗಳ ಏರಿಕೆಗೆ ಕಾರಣವಾಗಲಿದೆ. ಜಾಗತಿಕ ಗ್ರಾಹಕ ಬೆಲೆ ಹಣದುಬ್ಬರವು 2026ರಲ್ಲಿ ಶೇಕಡಾ 4.7 ಮತ್ತು 2027ರಲ್ಲಿ ಶೇಕಡಾ 4.1ರಷ್ಟಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಇಂಧನ ಬೆಲೆ ಹಾಗೂ ಎಐ ವಲಯದ ಅಪಾಯಗಳು
ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಐಎಮ್ಎಫ್ ಮತ್ತು ವಿಶ್ವಬ್ಯಾಂಕ್ ಸಭೆಯಲ್ಲಿ ಪ್ರತಿನಿಧಿಗಳು ಆರ್ಥಿಕತೆಯ ಈ ಅನಿಶ್ಚಿತ ಪರಿಸ್ಥಿತಿಯನ್ನು ಪರಾಮರ್ಶಿಸಲಿದ್ದಾರೆ. 2027ರ ಮಾರ್ಚ್ ವೇಳೆಗೆ ಹಾರ್ಮುಝ್ ಜಲಸಂಧಿ ತೆರೆಯಲಿದ್ದು, 2027ರ ಅಕ್ಟೋಬರ್ ವೇಳೆಗೆ ಯುದ್ಧಪೂರ್ವದ ಹಡಗು ಸಂಚಾರ ಸ್ಥಿತಿ ಮರಳಲಿದೆ ಎಂಬ ನಿರೀಕ್ಷೆಯ ಆಧಾರದ ಮೇಲೆ ಐಎಮ್ಎಫ್ ಈ ಮುನ್ಸೂಚನೆಗಳನ್ನು ನೀಡಿದೆ. 2026ರಲ್ಲಿ ತೈಲ ಬೆಲೆ ಸರಾಸರಿ ಪ್ರತಿ ಬ್ಯಾರೆಲ್ಗೆ 96 ಡಾಲರ್ ಹಾಗೂ 2027ರಲ್ಲಿ 87 ಡಾಲರ್ ಇರಲಿದೆ ಎಂದು ಐಎಮ್ಎಫ್ ಅಂದಾಜಿಸಿದೆ.
ಒಂದು ವೇಳೆ ಯುದ್ಧ ತೀವ್ರಗೊಂಡು 2027ರ ಮೊದಲ ತ್ರೈಮಾಸಿಕದವರೆಗೆ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 130 ಡಾಲರ್ಗೆ ಏರಿಕೆಯಾದರೆ, ಜಾಗತಿಕ ಬೆಳವಣಿಗೆ ದರವು 2026ರಲ್ಲಿ ಶೇಕಡಾ 0.2ರಷ್ಟು ಮತ್ತು 2027ರಲ್ಲಿ ಶೇಕಡಾ 0.5ರಷ್ಟು ಕುಸಿಯಲಿದೆ ಎಂದು ವರದಿ ಎಚ್ಚರಿಸಿದೆ. ಇದರಿಂದ 2027ರಲ್ಲಿ ಹಣದುಬ್ಬರವು ಶೇಕಡಾ 1.1ರಷ್ಟು ಏರಿಕೆಯಾಗಿ ಶೇಕಡಾ 5.2ಕ್ಕೆ ತಲುಪಬಹುದು.
ಎಐ ವಲಯವು ಸವಾಲುಗಳ ಜೊತೆಗೆ ಅವಕಾಶಗಳನ್ನೂ ಒದಗಿಸುತ್ತಿದ್ದು, ಆರ್ಥಿಕತೆಗೆ ದೊಡ್ಡ ಮಟ್ಟದ ಅನಿಶ್ಚಿತತೆಯ ಮೂಲವಾಗಿದೆ ಎಂದು ಐಎಮ್ಎಫ್ ಹೇಳಿದೆ. ಎಐ ತಂತ್ರಜ್ಞಾನದ ಅಳವಡಿಕೆ ಮತ್ತು ಹೂಡಿಕೆ ವೇಗ ಪಡೆದುಕೊಂಡರೆ, 2029ರ ವೇಳೆಗೆ ಜಾಗತಿಕ ಜಿಡಿಪಿ ಹೆಚ್ಚುವರಿಯಾಗಿ ಶೇಕಡಾ 0.6ರಷ್ಟು ಬೆಳವಣಿಗೆ ಕಾಣಬಹುದು. ಇದರ ಹೆಚ್ಚಿನ ಲಾಭ ಅಮೆರಿಕ ಮತ್ತು ಚೀನಾ ದೇಶಗಳಿಗೆ ಸಿಗಲಿದೆ.
ಎಐ ತಂತ್ರಜ್ಞಾನದಿಂದ ನಿರೀಕ್ಷಿತ ಕಾರ್ಯಕ್ಷಮತೆ ಸಿಗದೆ ಹೂಡಿಕೆ ದಿಢೀರ್ ಕುಸಿದರೆ, ಅಮೆರಿಕದ ಜಿಡಿಪಿ ನೇರವಾಗಿ ಶೇಕಡಾ 0.8ರಷ್ಟು ಕುಸಿಯಬಹುದು. ಇದರ ಪರಿಣಾಮವಾಗಿ ಏಷ್ಯಾದ ತಂತ್ರಜ್ಞಾನ ರಫ್ತುದಾರರ ಜಿಡಿಪಿಯ ಮೇಲೂ ಶೇಕಡಾ 0.4ರಷ್ಟು ಧಕ್ಕೆಯಾಗಲಿದೆ.
ಈ ಸ್ಥಿತಿಯು ಆಸ್ತಿ ಮೌಲ್ಯಗಳ ಕುಸಿತ ಮತ್ತು ಹಣಕಾಸು ಬಿಕ್ಕಟ್ಟಿಗೆ ಕಾರಣವಾಗಲಿದ್ದು, ವಿಶೇಷವಾಗಿ ಅಮೆರಿಕದಲ್ಲಿ ಗ್ರಾಹಕರ ವೆಚ್ಚ ಭಾರೀ ಪ್ರಮಾಣದಲ್ಲಿ ತಗ್ಗಲಿದೆ ಎಂದು ಐಎಮ್ಎಫ್ ತಿಳಿಸಿದೆ. ಬಾಂಡ್ಗಳ ಮೇಲಿನ ಬಡ್ಡಿದರ ಏರಿಕೆಯು ಜಾಗತಿಕ ಆರ್ಥಿಕ ಚಟುವಟಿಕೆಯನ್ನು ಇನ್ನಷ್ಟು ಕುಗ್ಗಿಸಲಿದ್ದು, 2028ರ ವೇಳೆಗೆ ಜಾಗತಿಕ ಉತ್ಪಾದನೆಯಲ್ಲಿ ಶೇಕಡಾ 1.1ರಷ್ಟು ಮತ್ತು ಅಮೆರಿಕದ ಉತ್ಪಾದನೆಯಲ್ಲಿ ಶೇಕಡಾ 1.8ರಷ್ಟು ಇಳಿಕೆಯಾಗಲಿದೆ.
ಹೆಚ್ಚುತ್ತಿರುವ ಸಾರ್ವಜನಿಕ ಸಾಲದ ಪ್ರಮಾಣವು, ವಿಶೇಷವಾಗಿ ಮುಂದುವರಿದ ದೇಶಗಳಲ್ಲಿ, ಸಾಲದ ವೆಚ್ಚವನ್ನು ಹೆಚ್ಚಿಸುವ ಅಪಾಯವನ್ನು ಹೊಂದಿದೆ ಎಂದು ಐಎಮ್ಎಫ್ ಎಚ್ಚರಿಸಿದೆ. ಆರ್ಥಿಕ ಚೇತರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರಕಾರಗಳು ವಿಳಂಬ ಮಾಡಬಾರದು ಮತ್ತು ಸಾಲದ ಹೊರೆಯನ್ನು ಸುಸ್ಥಿರ ಮಟ್ಟಕ್ಕೆ ತರಲು ಮಧ್ಯಮಾವಧಿಯ ಯೋಜನೆಯನ್ನು ರೂಪಿಸಬೇಕು ಎಂದು ಐಎಮ್ಎಫ್ ಸಲಹೆ ನೀಡಿದೆ.
ಸೌಜನ್ಯ: deccanherald.com






