Ai ಪೊಲೀಸರಿದ್ದಾರೆ ಎಚ್ಚರಿಕೆ!

ಸಾಂದರ್ಭಿಕ ಚಿತ್ರ | Photo Credit : freepik
‘ಸೇಫ್ ಸಿಟಿ ಪ್ರಾಜೆಕ್ಟ್’ ಅಡಿಯಲ್ಲಿ, ರಾಷ್ಟ್ರ ರಾಜಧಾನಿಯಾದ್ಯಂತ 10,000 ಕೃತಕ ಬುದ್ಧಿಮತ್ತೆ ಹೊಂದಿರುವ ಕ್ಯಾಮೆರಾಗಳನ್ನು ಸ್ಥಾಪಿಸುವುದಾಗಿ ದಿಲ್ಲಿ ಪೊಲೀಸರು ಕಳೆದ ತಿಂಗಳು ಘೋಷಿಸಿದ್ದಾರೆ. ಈ ಕ್ಯಾಮೆರಾಗಳು ಮುಖ ಗುರುತಿಸುವಿಕೆ ವ್ಯವಸ್ಥೆ ಮತ್ತು ಸಮಸ್ಯೆ ಪತ್ತೆ ತಂತ್ರಜ್ಞಾನಗಳಂತಹ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳ್ಳಲಿದ್ದು, ತುರ್ತು ಪರಿಸ್ಥಿತಿಗಳಿಗೆ ಸಂಬಂಧಿಸಿದ ಶಬ್ದಗಳು ಮತ್ತು ಮುಖಭಾವಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಮಹಾರಾಷ್ಟ್ರ ಸರ್ಕಾರವು ರಾಜ್ಯ ಪೊಲೀಸರಿಗಾಗಿ MahaCrime OS AI ಎಂದು ಕರೆಯಲ್ಪಡುವ AI-ಚಾಲಿತ ತನಿಖಾ ವೇದಿಕೆಯನ್ನು ಬಿಡುಗಡೆ ಮಾಡಿದೆ. ದೂರುಗಳನ್ನು ವೇಗವಾಗಿ ಪ್ರಕ್ರಿಯೆಗೊಳಿಸಲು, ಸಂಕೀರ್ಣ ಡೇಟಾವನ್ನು ವಿಶ್ಲೇಷಿಸಲು ಮತ್ತು ತನಿಖಾ ಕಾರ್ಯವಿಧಾನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಇದನ್ನು ಬಳಸಲಾಗುತ್ತದೆ.
ಪೊಲೀಸ್ ಇಲಾಖೆಯಲ್ಲಿ AI ಬಳಕೆಯು ದಕ್ಷತೆಯನ್ನು ಹೆಚ್ಚಿಸಲು ಮತ್ತು ಮಾನವಶಕ್ತಿಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಪೊಲೀಸರು ಹೇಳಿದ್ದರೂ, ತಜ್ಞರು ಈ ಹೊಸ ತಂತ್ರಜ್ಞಾನದ ಬಗ್ಗೆ ಹಲವಾರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆಗಳಲ್ಲಿ AI ಬಳಕೆ
ಪೊಲೀಸರು ತಮ್ಮ ಕಾರ್ಯಾಚರಣೆಗಳಲ್ಲಿ ಸೆಮಿ-ಆಟೋಮೇಟೆಡ್ ವ್ಯವಸ್ಥೆಗಳನ್ನು ಸಂಯೋಜಿಸುವ ಮೂಲಕ AI ಅನ್ನು ಬಳಸುತ್ತಿದ್ದಾರೆ ಎಂದು ಡೇಟಾ, ನಗರಗಳು ಮತ್ತು ಇಂಟರ್ನೆಟ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರಶಿಸ್ತೀಯ ಸಂಶೋಧಕ ಶ್ರೀನಿವಾಸ್ ಕೊಡಾಲಿ ಹೇಳಿದ್ದಾರೆ. ಉದಾಹರಣೆಗೆ, ಬೀದಿಗಳಲ್ಲಿ ಗಸ್ತು ತಿರುಗುವ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಕಾರ್ಯಕ್ಕಾಗಿ ಅವರು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಏಜೆಂಟ್ ಗಳನ್ನು ಬಳಸುತ್ತಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳು ಬೀದಿಗಳಲ್ಲಿದ್ದರೂ, ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಎಂದು ಕರೆಯಲ್ಪಡುವ ಕೇಂದ್ರೀಕೃತ ಡೇಟಾ ಕೇಂದ್ರದಲ್ಲಿ ಕುಳಿತು ನಗರದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯನ್ನು ಪಡೆಯಬಹುದು. ಕಣ್ಗಾವಲು ಮತ್ತು ಗುರುತಿಸುವಿಕೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ನಿಯೋಜಿಸುವುದರ ಜೊತೆಗೆ, ಅಪರಾಧ ಪ್ರಮಾಣ, ಸಂವಹನ ಮತ್ತು ಪರಿಶೋಧನೆಯನ್ನು ನಿಗ್ರಹಿಸುವಂತಹ ಇತರ ಕಾರ್ಯಾಚರಣೆಗಳಿಗೂ ಪೊಲೀಸರು AI-ಚಾಲಿತ ಸಾಧನಗಳನ್ನು ಬಳಸುತ್ತಿದ್ದಾರೆ.
ನವೆಂಬರ್ 2025ರಲ್ಲಿ ದಿಲ್ಲಿ ಪೊಲೀಸರು ಜನಸಂದಣಿ ನಿಯಂತ್ರಣ ಮತ್ತು ಸಂಚಾರ ನಿಯಂತ್ರಣದಂತಹ ಕಾರ್ಯಗಳಿಗಾಗಿ ಇಂದಿರಾ ಗಾಂಧಿ ದಿಲ್ಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ 75 ಡ್ರೋನ್ಗಳನ್ನು ಪಡೆದಿದ್ದರು.
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPRD) 2022ರ ‘AI in the Service of Law Enforcement — An Introduction’ ಎಂಬ ದಾಖಲೆಯ ಪ್ರಕಾರ, ಅಪರಾಧ ಮಾದರಿಗಳನ್ನು ಗುರುತಿಸಲು, ಅನುಮಾನಾಸ್ಪದ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ಅಪರಾಧ ಸ್ಥಳಗಳನ್ನು ಊಹಿಸಲು ಅಲ್ಗಾರಿದಮ್ಗಳ ಬಳಕೆಯನ್ನು ಒಳಗೊಂಡ ಮಹಾಕ್ರೈಮ್ OS AI ಅನ್ನು ಆರಂಭಿಸಲಾಗಿದೆ.
ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆಗಾಗಿ ಪೊಲೀಸರು AI ಪರಿಕರಗಳನ್ನು ನಿಯೋಜಿಸುತ್ತಿದ್ದಾರೆ. ಮೇ 2025ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ವಿಷಯವನ್ನು ಪತ್ತೆಹಚ್ಚಲು AI-ಚಾಲಿತ ವೇದಿಕೆಯನ್ನು ಪ್ರಾರಂಭಿಸುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದರು.
ಈ ಎಲ್ಲಾ ವ್ಯವಸ್ಥೆಗಳಿಗೆ ತರಬೇತಿ ನೀಡಲು ಅಗತ್ಯವಿರುವ ಡೇಟಾದ ಪ್ರಮುಖ ಮೂಲವೆಂದರೆ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ಸಿಸ್ಟಮ್ಸ್ (CCTNS). 2008ರ ಮುಂಬೈ ದಾಳಿಯ ನಂತರ 2009ರಲ್ಲಿ ಆಗಿನ ಗೃಹ ಸಚಿವ ಪಿ. ಚಿದಂಬರಂ ಈ ಯೋಜನೆಯನ್ನು ಪ್ರಾರಂಭಿಸಿದ್ದರು. ದೇಶಾದ್ಯಂತದ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಇತರ ಪೊಲೀಸ್ ಸಂಸ್ಥೆಗಳಲ್ಲಿ ಡೇಟಾ ಮತ್ತು ಮಾಹಿತಿಯ ಸಂಗ್ರಹಣೆ, ಶೇಖರಣೆ, ಮರುಪಡೆಯುವಿಕೆ, ವಿಶ್ಲೇಷಣೆ, ವರ್ಗಾವಣೆ ಮತ್ತು ಹಂಚಿಕೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ರೂಪಿಸಲಾಗಿತ್ತು.
ಪೊಲೀಸ್ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ AI ಬಳಕೆ; ಕಳವಳಗಳೇನು?
ಈ AI ಪರಿಕರಗಳು ಕೆಲವು ಸಮುದಾಯಗಳನ್ನು ಅನ್ಯಾಯವಾಗಿ ಮತ್ತು ತಪ್ಪಾಗಿ ಗುರಿಯಾಗಿಸಬಹುದು. ಏಕೆಂದರೆ AI ಈಗಾಗಲೇ ಇರುವ ಪೊಲೀಸ್ ಡೇಟಾವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಈ ಡೇಟಾ ಪಕ್ಷಪಾತದಿಂದ ಕೂಡಿರಬಹುದು ಎಂಬುದು ತಜ್ಞರ ಕಳವಳ.
ಆದಾಗ್ಯೂ, ಇದು ಕೇವಲ ವೈಯಕ್ತಿಕ ದೃಷ್ಟಿಕೋನವಲ್ಲ; ಸಮಾಜದ ಮೇಲೆ ಒಟ್ಟಾರೆಯಾಗಿ ಉಂಟಾಗುವ ಪರಿಣಾಮವನ್ನು ಗಮನಿಸುವ ಅಗತ್ಯವಿದೆ. ಉದಾಹರಣೆಗೆ, ಪೊಲೀಸ್ ವ್ಯವಸ್ಥೆಯಲ್ಲಿ AI ಬಳಕೆ ಅಧಿಕಾರದ ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ. AI ಸ್ಥಳೀಯ ಪೊಲೀಸ್ ಕಾರ್ಯಾಚರಣೆಯನ್ನು ನೇರವಾಗಿ ನಡೆಸುವುದಿಲ್ಲ; ಇದು ಮಾಹಿತಿಯ ಆಧಾರದ ಮೇಲೆ, ಎಲ್ಲೋ ಒಂದು ದೊಡ್ಡ ಕೇಂದ್ರೀಕೃತ ಡೇಟಾ ಕೇಂದ್ರದಿಂದ ಕಾರ್ಯನಿರ್ವಹಿಸುತ್ತದೆ. ಇದರಿಂದ ಪೊಲೀಸ್ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ.
AI ಪರಿಕರಗಳ ಬಳಕೆಯು ಅತಿಯಾದ ಪೊಲೀಸ್ ವ್ಯವಸ್ಥೆಗೆ ಕಾರಣವಾಗಬಹುದು. ಉದಾಹರಣೆಗೆ, BPRDಯ ಮತ್ತೊಂದು ದಾಖಲೆ ಪ್ರಕಾರ, ಒಂದು ಸಿಸಿಟಿವಿ ಕ್ಯಾಮೆರಾ 100 ಪೊಲೀಸರಿಗೆ ಸಮಾನ. ಹೈದರಾಬಾದ್ ನಗರದಲ್ಲಿ ಸುಮಾರು ಒಂದು ಮಿಲಿಯನ್ ಕ್ಯಾಮೆರಾಗಳಿದ್ದು, ಇವು 100 ಮಿಲಿಯನ್ ಪೊಲೀಸ್ ಸಿಬ್ಬಂದಿಗೆ ಸಮಾನವಾದ ಮೇಲ್ವಿಚಾರಣೆಯನ್ನು ಒದಗಿಸುತ್ತವೆ ಎಂದು ತಜ್ಞರು ಸೂಚಿಸುತ್ತಾರೆ.
2024ರ World Urbanisation Prospects ವರದಿ ಪ್ರಕಾರ, ಹೈದರಾಬಾದ್ನಲ್ಲಿ ಸುಮಾರು 11 ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಅಂದರೆ, ಡಿಜಿಟಲ್ ಪೊಲೀಸ್ ಉಪಸ್ಥಿತಿ ನಗರದಲ್ಲಿ ವಾಸಿಸುವ ಜನರ ನಿಜವಾದ ಸಂಖ್ಯೆಯಿಗಿಂತ ಹೆಚ್ಚಾಗಿದೆ.
ಅತಿಯಾದ ಪೊಲೀಸ್ ಗಿರಿಯು ನಾಗರಿಕರ ಮೂಲಭೂತ ಹಕ್ಕುಗಳನ್ನು, ವಿಶೇಷವಾಗಿ ಪ್ರತಿಭಟನೆ ಮಾಡುವ ಹಕ್ಕನ್ನು ದುರ್ಬಲಗೊಳಿಸುತ್ತದೆ. AI ಪರಿಕರಗಳ ಮೂಲಕ ಪೊಲೀಸರು ಪ್ರತಿಭಟನಾಕಾರರನ್ನು ಸುಲಭವಾಗಿ ಪತ್ತೆಹಚ್ಚಿ ಬಂಧಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಹಿಂದೆ, ಏನಾದರೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದರೆ ಈಗಾಗಲೇ ಅಪರಾಧ ಎಸಗಿದವರು ಅಥವಾ ಮರುಮರು ಅಪರಾಧಗಳಲ್ಲಿ ತೊಡಗಿದವರನ್ನು ಪೊಲೀಸರು ಮುಂಚಿತವಾಗಿ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಪ್ರಮಾಣದ ದೃಷ್ಟಿಯಿಂದ ಇದು ಸೀಮಿತವಾಗಿತ್ತು. ಆದರೆ ಈಗ ಎಲ್ಲರೂ ಶಂಕಿತರಾಗಿದ್ದು, ಎಲ್ಲವೂ ಅನುಮಾನಾಸ್ಪದವಾಗಿವೆ.
ನಗರದಾದ್ಯಂತ ಲಕ್ಷಾಂತರ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ನಾಗರಿಕರಿಗೆ ಸುರಕ್ಷತೆಯ ಭಾವನೆ ಸಿಗುವುದಿಲ್ಲ. ಬದಲಾಗಿ ಅವರು ಯಾವಾಗಲೂ ಕಣ್ಗಾವಲಿನಡಿ ಇದ್ದಾರೆ ಎಂಬ ಭಾವನೆ ಉಂಟಾಗುತ್ತದೆ. ಮಾನವ ಸಂಪರ್ಕದ ಕೊರತೆ ಹೆಚ್ಚುತ್ತದೆ. ಯಾವುದೇ ಸಮಸ್ಯೆ ಎದುರಾದಾಗ ಸಹಾಯ ಮಾಡಲು ಸುತ್ತಲೂ ಯಾರೂ ಇಲ್ಲ ಎಂಬ ಅನುಭವ ಮೂಡುತ್ತದೆ.
ಈ AI ಪರಿಕರಗಳನ್ನು ಬಳಸುವುದರಿಂದ ಅಧಿಕಾರಿಗಳು ಸುರಕ್ಷಿತ ಸಮಾಜವನ್ನು ನಿರ್ಮಿಸುತ್ತಿಲ್ಲ; ಬದಲಾಗಿ ನಾಗರಿಕರನ್ನು ಒಂದು ಅಘೋಷಿತ ಜೈಲಿನಲ್ಲಿ ಇರಿಸುತ್ತಿದ್ದಾರೆ ಎಂದು ಥಾಪರ್ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್ನ ಸಹಾಯಕ ಪ್ರಾಧ್ಯಾಪಕಿ ಡಾ. ಶಿವಾಂಗಿ ನಾರಾಯಣ್ ಹೇಳಿದ್ದಾರೆ.
ಪೊಲೀಸ್ ವ್ಯವಸ್ಥೆಗೆ AI ಪರಿಕರಗಳನ್ನು ನಿಯೋಜಿಸುವುದರಿಂದ ಪಾರದರ್ಶಕತೆಯ ಕೊರತೆ ಉಂಟಾಗಬಹುದು. ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು ಬಳಸುವ ಕೈಪಿಡಿಗಳಿಗಿಂತ ಭಿನ್ನವಾಗಿ, ಕಾರ್ಯನಿರ್ವಹಿಸುತ್ತಿರುವ AI ವ್ಯವಸ್ಥೆಗಳಿಗೆ ಇನ್ನೂ ಸ್ಪಷ್ಟವಾದ ನಿಯಮ ಪುಸ್ತಕವಿಲ್ಲ.
2023ರಲ್ಲಿ ತೆಲಂಗಾಣದ ಮೇದಕ್ ನಲ್ಲಿ ಮೊಹಮ್ಮದ್ ಖಾದೀರ್ ಖಾನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಶಂಕಿತ ಸರಗಳ್ಳನ ಮುಖದ ಲಕ್ಷಣಗಳು ಖಾನ್ ಅವರ ಮುಖಕ್ಕೆ ಹೋಲುತ್ತವೆ ಎಂಬ ಕಾರಣಕ್ಕೆ ಈ ಬಂಧನ ನಡೆದಿತ್ತು. ಬಂಧನದ ವೇಳೆ ಪೊಲೀಸರ ದೌರ್ಜನ್ಯದಿಂದ ಗಂಭೀರ ಗಾಯಗೊಂಡ ಖಾನ್ ಕೊನೆಗೆ ಸಾವನ್ನಪ್ಪಿದ್ದರು.
ತೆಲಂಗಾಣದ ಸತ್ಯಶೋಧನಾ ಸಮಿತಿಯು ಸಿಸಿಟಿವಿ ದೃಶ್ಯಾವಳಿಗಳು ಮುಖ ಮುಚ್ಚಿಕೊಂಡ ಕಳ್ಳನನ್ನು ಮಾತ್ರ ತೋರಿಸುತ್ತಿವೆ ಎಂದು ಕಂಡುಹಿಡಿದಿತ್ತು. ಪೊಲೀಸರು ವಾರಂಟ್ ಇಲ್ಲದೆ ಖಾನ್ ಅವರ ಕರೆ ದಾಖಲೆಯ ಡೇಟಾವನ್ನು ಬಳಸಿ ಅವರನ್ನು ಪತ್ತೆಹಚ್ಚಿದ್ದರು. ತಾನು ಮಾಡದ ತಪ್ಪಿಗೆ ಒಬ್ಬ ವ್ಯಕ್ತಿ ಶಿಕ್ಷೆ ಅನುಭವಿಸಿ, ಜೀವವನ್ನೇ ಕಳೆದುಕೊಳ್ಳಬೇಕಾಯಿತು.
ಪೊಲೀಸ್ ವ್ಯವಸ್ಥೆಯಲ್ಲಿ AI ಬಳಕೆಯ ನಿಯಂತ್ರಣ ಹೇಗೆ?
ಪೊಲೀಸ್ ವ್ಯವಸ್ಥೆಯಲ್ಲಿ AI ಬಳಕೆಯನ್ನು ನಿಯಂತ್ರಿಸಲು ಸ್ಪಷ್ಟವಾದ ಕಾನೂನು ಚೌಕಟ್ಟನ್ನು ರೂಪಿಸಬೇಕೆಂಬ ಒತ್ತಾಯಗಳು ಕೇಳಿಬಂದಿವೆ. ಉದಾಹರಣೆಗೆ, ಈ ಚೌಕಟ್ಟು 2023ರಲ್ಲಿ ಆಗಿನ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶದಿಂದ ಸೂಚನೆಗಳನ್ನು ಪಡೆಯಬಹುದು. ಈ ಆದೇಶವು AI ಕಂಪೆನಿಗಳು ತಮ್ಮ ಉಪಕರಣಗಳನ್ನು ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಿಸಿ, ಸಾರ್ವಜನಿಕ ಬಿಡುಗಡೆಗೆ ಮೊದಲು ಅದರ ಫಲಿತಾಂಶಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶಿಸುತ್ತದೆ.
ಆದರೆ Predictive Policing and the Construction of the Criminal: An Ethnographic Study of Delhi Police (2023) ಪುಸ್ತಕದ ಲೇಖಕ ಡಾ. ನಾರಾಯಣ್ ಅವರ ಪ್ರಕಾರ, ಇಂತಹ ಕ್ರಮಗಳು ಕಾನೂನು ವ್ಯವಸ್ಥೆಯನ್ನು ಸುಲಭವಾಗಿ ದುರ್ಬಲಗೊಳಿಸಬಹುದು. ನಿಯಮಗಳು ಕೇವಲ ಕಾನೂನು ಮತ್ತು ಅನುಸರಣೆಯ ಮಿತಿಯೊಳಗೆ ಸೀಮಿತವಾಗದೆ, ಸಮಾಜದ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸಬೇಕು. ಎಲ್ಲರಿಗೂ ಉದ್ಯೋಗ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸುರಕ್ಷಿತ ಸಮಾಜವನ್ನು ನಿರ್ಮಿಸುವುದೇ ಮುಖ್ಯ.
ಅಪರಾಧ ನಿಯಂತ್ರಣದಲ್ಲಿ ಪೊಲೀಸ್ ಮತ್ತು ಕಣ್ಗಾವಲು ಕ್ರಮಗಳು ತಾತ್ಕಾಲಿಕವಾಗಿ ಸಹಾಯ ಮಾಡಬಹುದು. ಆದರೆ ಸಂಸ್ಥಾತ್ಮಕ ಸುಧಾರಣೆಗಳಿಲ್ಲದೆ ಕೇವಲ ತಂತ್ರಜ್ಞಾನದಲ್ಲಿ ದೀರ್ಘಕಾಲೀನ ಹೂಡಿಕೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ.
AI ನಿಯಂತ್ರಣಕ್ಕಿಂತ ಪೊಲೀಸ್ ಸುಧಾರಣೆಗಳ ಅಗತ್ಯ ಹೆಚ್ಚು. ಹಿಂದಿನ ಫಿಂಗರ್ಪ್ರಿಂಟ್ ಹೊಂದಾಣಿಕೆ ತಂತ್ರಜ್ಞಾನಗಳಂತೆ, AI ಯನ್ನೂ ಪೊಲೀಸರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ AI ಬಳಕೆಯಿಂದ ಉಂಟಾಗುವ ಅಪಾಯಗಳನ್ನು ಕಡಿಮೆ ಮಾಡಲು ಪ್ರಸ್ತುತ ಕಾನೂನುಗಳನ್ನು ಸುಧಾರಿಸಬೇಕಾಗಿದೆ.
ಉದಾಹರಣೆಗೆ, ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಕಾಯ್ದೆ, 2022, ಪೊಲೀಸರಿಗೆ ಯಾವುದೇ ಆರೋಪಿಯ ಬೆರಳಚ್ಚುಗಳು, ರೆಟಿನಾ ಸ್ಕ್ಯಾನ್ ಗಳು ಮತ್ತು ಜೈವಿಕ ಮಾದರಿಗಳಂತಹ ಡೇಟಾವನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ. ಯಾರಾದರೂ ಅಪರಾಧ ಸ್ಥಳದಲ್ಲಿದ್ದರೆ ಮತ್ತು ಸಿಸಿಟಿವಿ ಕ್ಯಾಮೆರಾ ಅವರ ಚಿತ್ರವನ್ನು ಸೆರೆಹಿಡಿದರೆ, ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಪೊಲೀಸರು ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬಹುದು.
ಇದು ಬದಲಾಗಬೇಕಾಗಿದೆ, ಏಕೆಂದರೆ ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕು. ಪೊಲೀಸರಿಗೆ ಯಾರೊಬ್ಬರ ಅರಿವಿಲ್ಲದೆ ಅವರ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವ ಅಧಿಕಾರ ಇರಬಾರದು.







