ವಾಯು ಮಾಲಿನ್ಯ ಮತ್ತು ಕಣ್ಣಿನ ಆರೋಗ್ಯ; ನೇತ್ರಶಾಸ್ತ್ರಜ್ಞರು ನೀಡುವ ಸಲಹೆಗಳೇನು?

ಸಾಂದರ್ಭಿಕ ಚಿತ್ರ
ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ನಾವು ಉಸಿರಾಡುವ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವೈಯಕ್ತಿಕ ಮುನ್ನೆಚ್ಚರಿಕೆಗಳು ಮತ್ತು ಸಾಮೂಹಿಕ ಪ್ರಯತ್ನಗಳು ಅಗತ್ಯ ಎಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದ ಜನರಲ್ ಆಪ್ತಲ್ಮಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ಸಲಹೆಗಾರರಾದ ನೇತ್ರಶಾಸ್ತ್ರಜ್ಞೆ ಡಾ. ಕೆ. ಸತ್ಯಬಾಲಾ ಡಿಮೊಂಟಿ ಅಭಿಪ್ರಾಯಪಟ್ಟಿದ್ದಾರೆ. ‘ವಾರ್ತಾಭಾರತಿ’ ಜೊತೆಗಿನ ಸಂದರ್ಶನದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದಿಂದ ಕಣ್ಣಿನ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಕುರಿತು ಅವರು ಸಲಹೆಗಳನ್ನು ನೀಡಿದ್ದಾರೆ.
ವಾಯು ಮಾಲಿನ್ಯವು ಕಣ್ಣಿನ ಆರೋಗ್ಯದ ಮೇಲೆ ಏಕೆ ಪರಿಣಾಮ ಬೀರುತ್ತದೆ? ಮಾಲಿನ್ಯಕಾರಿ ಕಣಗಳಿಂದ ಕಣ್ಣುಗಳಿಗೆ ಹೇಗೆ ಅಪಾಯ ಎದುರಾಗುತ್ತದೆ?
ಕಣ್ಣುಗಳು ದೇಹದಲ್ಲಿ ನೇರವಾಗಿ ಬಾಹ್ಯ ಪರಿಸರಕ್ಕೆ ಒಡ್ಡಿಕೊಳ್ಳುವ ಅಂಗಗಳಲ್ಲಿ ಒಂದಾಗಿವೆ. ಇತರ ಅನೇಕ ಅಂಗಗಳಿಗಿಂತ ಭಿನ್ನವಾಗಿ, ಕಣ್ಣಿನ ಹೊರಮೈ ನಿರಂತರವಾಗಿ ಬಾಹ್ಯ ಪರಿಸರಕ್ಕೆ ಒಡ್ಡಿಕೊಳ್ಳುತ್ತದೆ. ಹೀಗಾಗಿ ಕಣ್ಣುಗಳು ವಿಶೇಷವಾಗಿ ವಾಯುಗಾಮಿ ಮಾಲಿನ್ಯಕಾರಕಗಳಿಗೆ ಗುರಿಯಾಗುತ್ತವೆ.
ವಾಯು ಮಾಲಿನ್ಯದಲ್ಲಿ PM2.5 ಮತ್ತು PM10ನಂತಹ ಕಣಗಳು, ವಾಹನಗಳಿಂದ ಹೊರಸೂಸುವ ಹೊಗೆ, ಓಝೋನ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಇತರ ಹಾನಿಕಾರಕ ಅನಿಲಗಳು ಇರುತ್ತವೆ. ಈ ಮಾಲಿನ್ಯಕಾರಕಗಳು ಕಣ್ಣಿನ ಹೊರಮೈಯಲ್ಲಿರುವ ಕಣ್ಣೀರಿನ ಪೊರೆ (tear film), ಕಾಂಜಂಕ್ಟಿವಾ ಮತ್ತು ಕಾರ್ನಿಯಾದೊಂದಿಗೆ ನೇರ ಸಂಪರ್ಕಕ್ಕೆ ಬರುತ್ತವೆ.
ಅವು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಉಂಟುಮಾಡಬಹುದು ಹಾಗೂ ಸಹಜವಾದ ಕಣ್ಣೀರಿನ ಪೊರೆಗೆ ಅಡ್ಡಿಪಡಿಸಬಹುದು. ಇದರಿಂದಾಗಿ ಕಣ್ಣಿನ ಹೊರಮೈಯಲ್ಲಿ ಕಿರಿಕಿರಿ, ಶುಷ್ಕತೆ ಮತ್ತು ಉರಿಯೂತ ಕಂಡುಬರಬಹುದು.
ಸಾಮಾನ್ಯವಾಗಿ ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುವ ಕಣ್ಣೀರಿನ ಪೊರೆಯು ಈ ಮಾಲಿನ್ಯಕಾರಕಗಳಿಗೆ ಒಡ್ಡಿಕೊಂಡಾಗ ಅಸ್ಥಿರವಾಗಬಹುದು. ಮೊದಲೇ ಒಣ ಕಣ್ಣಿನ ಸಮಸ್ಯೆ, ಅಲರ್ಜಿ ಮತ್ತು ಇತರ ಕಣ್ಣಿನ ಹೊರಮೈ ಸಮಸ್ಯೆಗಳನ್ನು ಹೊಂದಿರುವವರಿಗೆ ವಿಶೇಷವಾಗಿ ತೊಂದರೆ ಉಂಟಾಗಬಹುದು.
►ಮಾಲಿನ್ಯದ ಸಂದರ್ಭದಲ್ಲಿ ಜನರು ಅನುಭವಿಸಬಹುದಾದ ಅತ್ಯಂತ ಸಾಮಾನ್ಯ ಕಣ್ಣಿನ ಲಕ್ಷಣಗಳು ಯಾವುವು?
ಅತ್ಯಂತ ಸಾಮಾನ್ಯ ರೋಗಲಕ್ಷಣಗಳು ಎಂದರೆ:
• ಕಣ್ಣುರಿ ಮತ್ತು ಚುಚ್ಚುವಿಕೆ
• ಕಣ್ಣು ಕೆಂಪಾಗುವುದು ಮತ್ತು ಕೆರಳುವಿಕೆ
• ಅತಿಯಾಗಿ ನೀರು ಬರುವುದು ಅಥವಾ ಕಣ್ಣೀರು ಸುರಿಯುವುದು
• ತುರಿಕೆ, ವಿಶೇಷವಾಗಿ ಅಲರ್ಜಿ ಸಮಸ್ಯೆ ಇರುವವರಲ್ಲಿ
• ಕಣ್ಣಿನಲ್ಲಿ ಮರಳು ಅಥವಾ ಧೂಳು ಬಿದ್ದಿದೆಯೇನೋ ಎಂಬ ಭಾವನೆ (Foreign body sensation)
• ಕಣ್ಣು ಒಣಗಿದಂತಾಗುವುದು ಮತ್ತು ಅಸ್ವಸ್ಥತೆ, ವಿಶೇಷವಾಗಿ ದಿನದ ಕೊನೆಯ ಭಾಗದಲ್ಲಿ
• ದೃಷ್ಟಿ ಮಂಜಾಗುವುದು. ಕಣ್ಣುಗಳನ್ನು ಮಿಟುಕಿಸಿದಾಗ ಇದು ತಾತ್ಕಾಲಿಕವಾಗಿ ಸುಧಾರಿಸಬಹುದು.
ದೀರ್ಘಕಾಲ ಹೊರಾಂಗಣ ವಾತಾವರಣದಲ್ಲಿರುವುದು, ವಾಹನ ದಟ್ಟಣೆಯಿಂದ ಉಂಟಾಗುವ ಮಾಲಿನ್ಯ, ಧೂಳು ಮತ್ತು ಹೊಗೆಯಿಂದಾಗಿ ಈ ಲಕ್ಷಣಗಳು ಇನ್ನಷ್ಟು ಉಲ್ಬಣಗೊಳ್ಳಬಹುದು.
►ಯಾವ ರೋಗಲಕ್ಷಣಗಳನ್ನು ಮನೆಯಲ್ಲೇ ನಿರ್ವಹಿಸಬಹುದು ಮತ್ತು ಯಾವ ಎಚ್ಚರಿಕೆಯ ಚಿಹ್ನೆಗಳು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವನ್ನು ಸೂಚಿಸುತ್ತವೆ?
ಕಣ್ಣಿನಲ್ಲಿ ಆಗೊಮ್ಮೆ ಈಗೊಮ್ಮೆ ನೀರು ಬರುವುದು, ತುರಿಕೆ, ಉರಿ ಮತ್ತು ಸ್ವಲ್ಪ ಕೆಂಪಾಗುವಿಕೆಯಂತಹ ಸೌಮ್ಯ ಲಕ್ಷಣಗಳನ್ನು ಸರಳ ಮುನ್ನೆಚ್ಚರಿಕೆಗಳ ಮೂಲಕ ನಿರ್ವಹಿಸಬಹುದು. ಆದರೆ ಕೆಲವು ಎಚ್ಚರಿಕೆಯ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ತಜ್ಞರನ್ನು ಸಂಪರ್ಕಿಸಬೇಕು.
• ಕಣ್ಣಿನಲ್ಲಿ ತೀವ್ರ ನೋವು
• ದೃಷ್ಟಿ ಮಸುಕಾಗುವುದು ಅಥವಾ ಕಡಿಮೆಯಾಗುವುದು
• ತೀವ್ರವಾಗಿ ಕೆಂಪಾಗುವುದು, ಮುಖ್ಯವಾಗಿ ಒಂದು ಕಣ್ಣಿನಲ್ಲಿ ಕಾಣಿಸಿಕೊಳ್ಳುವುದು
• ಬೆಳಕನ್ನು ಸಹಿಸಿಕೊಳ್ಳಲು ಕಷ್ಟವಾಗುವುದು
• ಸಾಮಾನ್ಯ ಉಪಚಾರದ ನಂತರವೂ ಕಿರಿಕಿರಿ ನಿವಾರಣೆಯಾಗದಿರುವುದು
• ಕಣ್ಣಿನಿಂದ ದಪ್ಪನಾದ ಅಥವಾ ಕೀವು ಮಿಶ್ರಿತ ದ್ರವ ಹೊರಬರುವುದು
• ಕಾಂಟ್ಯಾಕ್ಟ್ ಲೆನ್ಸ್ ಬಳಸುವವರಲ್ಲಿ ನೋವು, ಕೆಂಪಾಗುವಿಕೆ ಅಥವಾ ದೃಷ್ಟಿ ಮಸುಕಾಗುವುದು.
ದೃಷ್ಟಿ ಹಠಾತ್ತಾಗಿ ಕಳೆದುಕೊಳ್ಳುವುದು ಅಥವಾ ಕಣ್ಣಿನಲ್ಲಿ ತೀವ್ರ ನೋವು ಕಾಣಿಸಿಕೊಳ್ಳುವುದು ತುರ್ತು ವೈದ್ಯಕೀಯ ತಪಾಸಣೆಯ ಅಗತ್ಯವನ್ನು ಸೂಚಿಸುತ್ತದೆ. ಇಂತಹ ಲಕ್ಷಣಗಳು ಕೇವಲ ಮಾಲಿನ್ಯದಿಂದಲೇ ಉಂಟಾಗಿವೆ ಎಂದು ಭಾವಿಸಬಾರದು.
►ಮಾಲಿನ್ಯದಿಂದ ಉಂಟಾಗುವ ಕಣ್ಣಿನ ಕಿರಿಕಿರಿಯನ್ನು ತಗ್ಗಿಸಲು ಮತ್ತು ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಮನೆಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು?
ಮನೆಯಲ್ಲಿ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಅನೇಕ ಸರಳ ಮತ್ತು ಪರಿಣಾಮಕಾರಿ ಕ್ರಮಗಳಿವೆ.
• ಅನಗತ್ಯವಾಗಿ ಹೊರಾಂಗಣ ಪರಿಸರಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ: ಗಾಳಿಯ ಗುಣಮಟ್ಟ ಸೂಚ್ಯಂಕವನ್ನು (AQI) ಪರಿಶೀಲಿಸುತ್ತಿರಿ. ಮಾಲಿನ್ಯದ ಮಟ್ಟ ಹೆಚ್ಚಾದಾಗ, ವಿಶೇಷವಾಗಿ ವಾಹನ ದಟ್ಟಣೆ ಇರುವ ರಸ್ತೆಗಳ ಬಳಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಿ.
• ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿ: ಕಣ್ಣುಗಳಿಗೆ ಅಂಟಿಕೊಂಡಂತೆ ಹೊಂದಿಕೊಳ್ಳುವ ಸನ್ಗ್ಲಾಸ್ಗಳಿಂದ ಧೂಳು ಮತ್ತು ವಾಯುಗಾಮಿ ಕಣಗಳಿಗೆ ಕಣ್ಣುಗಳು ನೇರವಾಗಿ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬಹುದು.
• ಲ್ಯುಬ್ರಿಕೇಟಿಂಗ್ ಐ ಡ್ರಾಪ್ಸ್ ಬಳಸಿ: ಪ್ರಿಸರ್ವೇಟಿವ್ ಫ್ರೀ ಕೃತಕ ಕಣ್ಣೀರು ಕಣ್ಣಿನ ಹೊರಮೈಯ ತೇವಾಂಶವನ್ನು ಮರುಸ್ಥಾಪಿಸಲು ಮತ್ತು ಕಿರಿಕಿರಿಯನ್ನು ಉಂಟುಮಾಡುವ ಕಣಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
• ಕೋಲ್ಡ್ ಕಂಪ್ರೆಸ್ ಬಳಸಿ: ಶುದ್ಧವಾದ, ತಂಪಾದ ಕಂಪ್ರೆಸ್ಗಳನ್ನು ಮುಚ್ಚಿದ ಕಣ್ಣುರೆಪ್ಪೆಗಳ ಮೇಲೆ ಇಡುವುದರಿಂದ ತುರಿಕೆ ಮತ್ತು ಕಿರಿಕಿರಿಯಿಂದ ಆರಾಮ ದೊರೆಯಬಹುದು.
• ಕಣ್ಣುಗಳನ್ನು ಉಜ್ಜಬೇಡಿ: ಕಣ್ಣುಗಳನ್ನು ಉಜ್ಜುವುದರಿಂದ ಉರಿಯೂತ ಉಲ್ಬಣಗೊಂಡು, ಕಣ್ಣಿನ ಹೊರಮೈಗೆ ಹಾನಿಯಾಗಬಹುದು.
• ಕಣ್ಣಿನ ನೈರ್ಮಲ್ಯ ಕಾಪಾಡಿ: ಕಲುಷಿತ ಪರಿಸರದಿಂದ ಮನೆಗೆ ಹಿಂದಿರುಗಿದ ನಂತರ ಮುಖ ಮತ್ತು ಕಣ್ಣುರೆಪ್ಪೆಗಳನ್ನು ಮೃದುವಾಗಿ ತೊಳೆಯಿರಿ.
• ಒಳಾಂಗಣ ಗಾಳಿಯ ಗುಣಮಟ್ಟವನ್ನು ನಿರ್ವಹಿಸಿ: ಹೊರಾಂಗಣ ಮಾಲಿನ್ಯ ತೀವ್ರವಾಗಿರುವ ಅವಧಿಯಲ್ಲಿ ಕಿಟಕಿಗಳನ್ನು ಮುಚ್ಚಿಡಿ, ಒಳಾಂಗಣದಲ್ಲಿ ಹೊಗೆಯಾಗುವುದನ್ನು ತಪ್ಪಿಸಿ ಮತ್ತು ಸೂಕ್ತವಾದ HEPA ಫಿಲ್ಟರ್ ಹೊಂದಿರುವ ಏರ್ ಪ್ಯುರಿಫೈಯರ್ ಬಳಸುವುದನ್ನು ಪರಿಗಣಿಸಿ.
• ಕಾಂಟ್ಯಾಕ್ಟ್ ಲೆನ್ಸ್ ಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಿ: ಕಣ್ಣಿನ ಕಿರಿಕಿರಿಯನ್ನು ಅನುಭವಿಸುತ್ತಿರುವವರು ಲಕ್ಷಣಗಳು ನಿವಾರಣೆಯಾಗುವವರೆಗೆ ಮತ್ತು ಅಗತ್ಯವಿದ್ದರೆ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವವರೆಗೆ ಕಾಂಟ್ಯಾಕ್ಟ್ ಲೆನ್ಸ್ ಬಳಕೆಯನ್ನು ನಿಲ್ಲಿಸಬೇಕು.
• ಸ್ವಯಂ ಔಷಧೋಪಚಾರ ಮಾಡಬೇಡಿ: ನೇತ್ರಶಾಸ್ತ್ರಜ್ಞರ ಸಲಹೆಯಿಲ್ಲದೆ ಓವರ್ ದಿ ಕೌಂಟರ್ ಸ್ಟಿರಾಯ್ಡ್ ಅಥವಾ ಆ್ಯಂಟಿಬಯಾಟಿಕ್ ಐ ಡ್ರಾಪ್ಸ್ ಬಳಸಬಾರದು.
►ಮಾಲಿನ್ಯಕ್ಕೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಿಗಾಗಿ ಒಬ್ಬ ವ್ಯಕ್ತಿಯು ಯಾವಾಗ ನೇತ್ರತಜ್ಞರನ್ನು ಸಂಪರ್ಕಿಸಬೇಕು?
ಪ್ರಮುಖ ರಕ್ಷಣಾ ಕ್ರಮಗಳನ್ನು ಕೈಗೊಂಡರೂ ಲಕ್ಷಣಗಳು ಮುಂದುವರಿದರೆ, ಆಗಾಗ್ಗೆ ಮರುಕಳಿಸಿದರೆ ಅಥವಾ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟುಮಾಡಿದರೆ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು.
ಮೊದಲೇ ಒಣ ಕಣ್ಣಿನ ಕಾಯಿಲೆ, ಅಲರ್ಜಿಕ್ ಕಾಂಜಂಕ್ಟಿವಿಟಿಸ್, ಕಾಂಟ್ಯಾಕ್ಟ್ ಲೆನ್ಸ್ ಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಇತರ ಕಣ್ಣಿನ ಹೊರಮೈ ಸಮಸ್ಯೆಗಳನ್ನು ಹೊಂದಿರುವವರಿಗೆ ಹೆಚ್ಚಿನ ಮಾಲಿನ್ಯದ ಅವಧಿಯಲ್ಲಿ ಹೆಚ್ಚುವರಿ ಗಮನದ ಅಗತ್ಯವಿರಬಹುದು.
ಪ್ರತಿಯೊಂದು ಕೆಂಪು ಅಥವಾ ಕಿರಿಕಿರಿಯುಂಟಾದ ಕಣ್ಣಿನ ಸಮಸ್ಯೆಯೂ ಮಾಲಿನ್ಯದಿಂದ ಉಂಟಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಸೋಂಕುಗಳು, ಕಾರ್ನಿಯಾದ ಉರಿಯೂತ ಮತ್ತು ಇತರ ಕಣ್ಣಿನ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳಲ್ಲಿಯೂ ಇದೇ ರೀತಿಯ ರೋಗಲಕ್ಷಣಗಳು ಕಂಡುಬರಬಹುದು. ಇವುಗಳಿಗೆ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುತ್ತದೆ.
ನೇತ್ರಶಾಸ್ತ್ರೀಯ (ophthalmological) ಪರೀಕ್ಷೆಯು ಸರಿಯಾದ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
►ಅತಿಯಾದ ಮಾಲಿನ್ಯವಿರುವ ಸಮಯದಲ್ಲಿ ಕಣ್ಣಿನ ಆರೋಗ್ಯವನ್ನು ರಕ್ಷಿಸಿಕೊಳ್ಳಲು ನೀವು ನೀಡುವ ಅತ್ಯಂತ ಪ್ರಮುಖ ಮುನ್ನೆಚ್ಚರಿಕೆ ಅಥವಾ ಸಲಹೆ ಯಾವುದು?
ನನ್ನ ಪ್ರಮುಖ ಸಲಹೆಯೆಂದರೆ, ನಿರಂತರ ಕಣ್ಣಿನ ಕಿರಿಕಿರಿಯನ್ನು ನಿರ್ಲಕ್ಷಿಸಬೇಡಿ ಮತ್ತು ಪ್ರತಿಯೊಂದು ಕೆಂಪು ಕಣ್ಣಿನ ಸಮಸ್ಯೆಗೂ ಸ್ವಯಂ ಔಷಧೋಪಚಾರ ಮಾಡಬೇಡಿ.
ಯಾವಾಗಲೂ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ. ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಮೇಲ್ವಿಚಾರಣೆ ಮಾಡಿ, ಕಲುಷಿತ ಪರಿಸರಕ್ಕೆ ಅನಗತ್ಯವಾಗಿ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ, ಹೊರಾಂಗಣದಲ್ಲಿ ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ ಮತ್ತು ಕಣ್ಣಿನ ನೈರ್ಮಲ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಿ.
ಕೃತಕ ಕಣ್ಣೀರು ಅಗತ್ಯವಿದ್ದಾಗ ಪರಿಹಾರ ನೀಡುತ್ತದೆ. ಆದರೆ ನಿರಂತರ ಲಕ್ಷಣಗಳು ಕಂಡುಬಂದರೆ ಕಣ್ಣಿನ ಪರೀಕ್ಷೆಯ ಅಗತ್ಯವಿದೆ ಎಂಬುದರ ಸೂಚನೆಯಾಗಿರುತ್ತದೆ. ಕಣ್ಣಿನ ಆರೋಗ್ಯವು ಪರಿಸರದ ಆರೋಗ್ಯದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬುದನ್ನು ನಾವು ಗುರುತಿಸಬೇಕು.
ಕೊನೆಯದಾಗಿ, ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ನಾವು ಉಸಿರಾಡುವ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವೈಯಕ್ತಿಕ ಮುನ್ನೆಚ್ಚರಿಕೆಗಳು ಮತ್ತು ಸಾಮೂಹಿಕ ಪ್ರಯತ್ನಗಳು ಅಗತ್ಯವಾಗಿವೆ.






