ವಂದೇ ಬಾರತ್ ಸ್ಲೀಪರ್ ರೈಲುಗಳಲ್ಲಿ ವಿಮಾನದಂತಹ ಊಟದ ವ್ಯವಸ್ಥೆ; ಕಡಿತಗೊಂಡ ಮೆನು

Photo Credit : Ismail, varthabharati
ಪ್ರಾಯೋಗಿಕ ಯೋಜನೆಯಡಿ ಒದಗಿಸಲಾಗುವ ವಿಮಾನದಂತಹ ಶೈಲಿಯ ಆಹಾರವನ್ನು ರೈಲ್ವೆ ಇಲಾಖೆ ಅಥವಾ ಅದರ ಅಸ್ತಿತ್ವದಲ್ಲಿರುವ ಅಡುಗೆ ಗುತ್ತಿಗೆದಾರರು ತಯಾರಿಸುತ್ತಿಲ್ಲ, ಬದಲಾಗಿ, ದೊಡ್ಡ ಪ್ರಮಾಣದ ‘ಕ್ಲೌಡ್ ಕಿಚನ್’ಗಳ ಮೂಲಕ ಸಿದ್ಧಪಡಿಸಲಾಗುತ್ತಿದೆ.
ಭಾರತೀಯ ರೈಲ್ವೆಯು ದೂರದ ಪ್ರಯಾಣದಲ್ಲಿ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಸಾಮಾನ್ಯ. ಈ ನಿಟ್ಟಿನಲ್ಲಿ ರೈಲ್ವೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. 25 ರೈಲುಗಳಲ್ಲಿ ಇ-ಪ್ಯಾಂಟ್ರಿ ಸೇವೆಯನ್ನು ಇದೇ ಫೆಬ್ರವರಿಯಲ್ಲಿ ಪ್ರಾರಂಭಿಸಲಾಗಿದೆ. ಸ್ವಿಗಿ ಕಂಪನಿಯ ‘ಫುಡ್ ಆನ್ ಟ್ರೈನ್’ ಸೇವೆಯು 201 ರೈಲುಗಳಿಗೆ ವಿಸ್ತರಣೆಯಾಗಿದೆ. ಕಳೆದ ಜೂನ್ನಲ್ಲಿ ರೈಲು ಪ್ರಯಾಣಿಕರಿಗಾಗಿ ತಯಾರಿಸುವ ಊಟವನ್ನು ಮೇಲ್ವಿಚಾರಣೆ ಮಾಡಲು ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಬಳಸಲು ನಿರ್ಧರಿಸಲಾಗಿದೆ. ಇಷ್ಟಾದರೂ ದೂರುಗಳು ಬರುತ್ತಲೇ ಇರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಹೊಸ ಆಹಾರ ವ್ಯವಸ್ಥೆ ತಂದಿದೆ!
ಭಾರತೀಯ ರೈಲ್ವೆಯು ದೂರದ ಪ್ರಯಾಣದ ರೈಲುಗಳಲ್ಲಿ ಕಡಿಮೆ ಬಗೆಯ, ಆದರೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವತ್ತ ಹೆಜ್ಜೆ ಇಡುತ್ತಿದೆ ಎಂದು ಹೇಳಿಕೊಂಡಿದೆ. ಪ್ರಾಯೋಗಿಕ ಯೋಜನೆಯ ಭಾಗವಾಗಿ ಮೂರು ‘ವಂದೇ ಭಾರತ್ ಸ್ಲೀಪರ್’ ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಮೆನುವನ್ನು ಕಡಿತಗೊಳಿಸಲಾಗಿದೆ. ಇದರಡಿಯಲ್ಲಿ ಉಪಹಾರ, ಮದ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ನೀಡಲಾಗುವ ಖಾದ್ಯಗಳ ಸಂಖ್ಯೆ ಕಡಿಮೆಯಾಗಿದೆ.
ಇದೀಗ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ವಿಮಾನಗಳಲ್ಲಿ ನೀಡಲಾಗುವ ಊಟದ ಮಾದರಿಯಲ್ಲೇ ಸೀಮಿತ ಖಾದ್ಯಗಳನ್ನು ಒಳಗೊಂಡ ‘ಕಾಂಪ್ಯಾಕ್ಟ್ ಮೆನು’ (ಸಂಕ್ಷಿಪ್ತ ಆಹಾರ ಪಟ್ಟಿ)ಯನ್ನು ಪರಿಚಯಿಸಿದೆ. ದೂರದ ರೈಲುಗಳಲ್ಲಿನ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತಾದ ದೂರುಗಳನ್ನು ಪರಿಹರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಮುಂಬೈ-ಬೆಂಗಳೂರು, ಹೌರಾ-ಕಾಮಾಖ್ಯ ಮತ್ತು ಹೊಸದಿಲ್ಲಿ-ವಾರಣಾಸಿ ಮಾರ್ಗಗಳಲ್ಲಿ ಸಂಚರಿಸುವ ಮೂರು ‘ವಂದೇ ಭಾರತ್ ಸ್ಲೀಪರ್’ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಈ ಪ್ರಾಯೋಗಿಕ ಯೋಜನೆಯಡಿ ಒದಗಿಸಲಾಗುವ ಆಹಾರವನ್ನು ರೈಲ್ವೆ ಇಲಾಖೆ ಅಥವಾ ಅದರ ಅಸ್ತಿತ್ವದಲ್ಲಿರುವ ಅಡುಗೆ ಗುತ್ತಿಗೆದಾರರು ತಯಾರಿಸುತ್ತಿಲ್ಲ; ಬದಲಾಗಿ, ದೊಡ್ಡ ಪ್ರಮಾಣದ ‘ಕ್ಲೌಡ್ ಕಿಚನ್’ಗಳ ಮೂಲಕ ಇದನ್ನು ಸಿದ್ಧಪಡಿಸಲಾಗುತ್ತಿದೆ. “ನಾವು ಕಾಮಾಖ್ಯ ಮಾರ್ಗಕ್ಕಾಗಿ ‘ಮೇಫೇರ್ ಗ್ರೂಪ್’ ಜೊತೆಗೂ ಹೌರಾ ಮಾರ್ಗಕ್ಕಾಗಿ ‘ತಾಜ್ಸ್ಯಾಟ್ಸ್’ ಜೊತೆಗೂ ಹಾಗೂ ಉಳಿದ ಎರಡು ವಂದೇ ಭಾರತ್ ರೈಲುಗಳಿಗಾಗಿ ‘ಸರೋವರ್ ಪೋರ್ಟಿಕೋ ಗ್ರೂಪ್’ ಜೊತೆಗೂ ಕೆಲಸ ಮಾಡುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮುಂಬೈ ಬೆಂಗಳೂರು ಮಾರ್ಗದಲ್ಲಿ ಕಡಿತಗೊಂಡ ಮೆನು
ಮುಂಬೈ-ಬೆಂಗಳೂರು ಮಾರ್ಗದಲ್ಲಿ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಆಯ್ಕೆಗಳನ್ನು ಕಡಿತಗೊಳಿಸಲಾಗಿದೆ. ಇನ್ನು ಮುಂದೆ ಮುಂಬೈ-ಬೆಂಗಳೂರು ಸ್ಲೀಪರ್ ರೈಲಿನಲ್ಲಿ ಉಪಹಾರಕ್ಕಾಗಿ ಇಡ್ಲಿ ನೀಡಲಾಗುತ್ತದೆ. ಮಧ್ಯಾಹ್ನದ ಮತ್ತು ರಾತ್ರಿಯ ಊಟದಲ್ಲಿ ಚಪಾತಿ, ಅನ್ನ, ಬೇಳೆ ಸಾರು (ದಾಲ) ಹಾಗೂ ಒಂದು ಮುಖ್ಯ ಖಾದ್ಯ (ಚಿಕನ್ ಅಥವಾ ತರಕಾರಿ ಖಾದ್ಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು) ಇರಲಿದೆ.
ಇದರ ಜೊತೆಗೆ ಪ್ರಯಾಣದ ವೇಳೆ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಮೆನುವಿನಲ್ಲಿದ್ದ ಅನೇಕ ಆಯ್ಕೆಗಳನ್ನು IRCTC ಕೈಬಿಟ್ಟಿದೆ. ಕಡಿತಗೊಂಡವುಗಳಲ್ಲಿ ಉಪಾಹಾರದ ಮೆನುವಿನಲ್ಲಿದ್ದ ಸೂಪ್, ಎಗ್ ಆಮ್ಲೆಟ್, ಎಗ್ ಆಮ್ಲೆಟ್ ಸ್ಯಾಂಡ್ವಿಚ್, ವೆಜ್ ಸ್ಯಾಂಡ್ವಿಚ್, ಮಜ್ಜಿಗೆ ಮತ್ತು ಚಾಕೋಲೇಟ್ಗಳು. ಮದ್ಯಾಹ್ನ ಮತ್ತು ರಾತ್ರಿಯ ಊಟದ ಮೆನುವಿನಲ್ಲಿದ್ದ ಒಣ ತರಕಾರಿ ಪಲ್ಯ, ಮೊಸರು, ಸಲಾಡ್, ಉಪ್ಪಿನಕಾಯಿ ಮತ್ತು ಸಿಹಿತಿನಿಸುಗಳು ಸೇರಿವೆ.
ಒಟ್ಟಿನಲ್ಲಿ ಒಂದು ಹೊತ್ತಿನ ಊಟದ ತೂಕವು 700-750 ಗ್ರಾಂಗಳಿಂದ 450-500 ಗ್ರಾಂಗಳಿಗೆ ಇಳಿದಿವೆ. ಹಾಗಿದ್ದರೂ, ಪ್ರತಿ ಖಾದ್ಯದ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. IRCTC ಪಶ್ಚಿಮ ವಲಯದ ಗ್ರೂಪ್ ಜನರಲ್ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ ಹೊಸ ವ್ಯವಸ್ಥೆಯಡಿ ಕ್ಲೌಡ್ ಕಿಚನ್ಗಳು ಊಟವನ್ನು ಪೂರೈಸಲು ಪ್ರಾರಂಭಿಸಿದ ಮೇಲೆ ದೂರುಗಳ ಸಂಖ್ಯೆ ಶೇ 10ರಷ್ಟು ಇಳಿದಿವೆ. ಈ ಪ್ರಾಯೋಗಿಕ ವ್ಯವಸ್ಥೆ ಯಶಸ್ವಿಯಾದರೆ ಪ್ರೀಮಿಯಂ ರೈಲುಗಳು ಸೇರಿದಂತೆ ಇತರ ದೂರದ ರೈಲು ಸೇವೆಗಳಿಗೂ ಸಂಕ್ಷಿಪ್ತ ಮೆನು ಮಾದರಿ ವಿಸ್ತರಿಸುವುದನ್ನು IRCTC ಪರಿಗಣಿಸಬಹುದು.






