AITA ಚುನಾವಣೆ: ಕಣಕ್ಕಿಳಿದ ಸಾನಿಯಾ ಮಿರ್ಜಾ, ಮಹೇಶ್ ಭೂಪತಿ; ಸ್ಪರ್ಧೆಯಿಂದ ಹೊರಗುಳಿದ ಲಿಯಾಂಡರ್ ಪೇಸ್

ಮಹೇಶ್ ಭೂಪತಿ , ಸಾನಿಯಾ ಮಿರ್ಜಾ| Photo Credit : X
40 ಸದಸ್ಯರ ಪಟ್ಟಿಯಲ್ಲಿ ಟೈರ್ 1 ವಿಭಾಗದಲ್ಲಿರುವ ಏಕೈಕ ಆಟಗಾರ ಲಿಯಾಂಡರ್ ಪೇಸ್ ಆಗಿರುವುದರಿಂದ ಅವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಗಮನಾರ್ಹವಾಗಿದೆ.
ಭಾರತೀಯ ಟೆನಿಸ್ ನ ದಿಗ್ಗಜರಾದ ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಅವರು ನವೆಂಬರ್ 7ರಂದು ನಡೆಯಲಿರುವ ಅಖಿಲ ಭಾರತ ಟೆನಿಸ್ ಸಂಘಟನೆಯ (AITA) ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟು ವಿಭಾಗದಡಿ (SOM) ನಾಮಪತ್ರಗಳನ್ನು ಸಲ್ಲಿಸಿದ್ದಾರೆ. AITA ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ‘ಬೆಂಗಾಲ್ ಟೆನಿಸ್ ಅಸೋಸಿಯೇಶನ್’ ಬೆಂಬಲ ಹೊಂದಿದ್ದ ಲಿಯಾಂಡರ್ ಪೇಸ್ ಅವರ ಹೆಸರು ನಾಮನಿರ್ದೇಶಿತರ ಪಟ್ಟಿಯಲ್ಲಿಲ್ಲ. ಪ್ರಸ್ತುತ ಜಾರಿಯಲ್ಲಿರುವ ಅರ್ಹತಾ ನಿಯಮಗಳ ಪ್ರಕಾರ, ಪಟ್ಟಿಯಲ್ಲಿ ಹೆಸರಿಲ್ಲದಿರುವುದು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯನ್ನು ಕೊನೆಗೊಳಿಸಿದೆ.
40 ಸದಸ್ಯರ ಪಟ್ಟಿಯಲ್ಲಿ ಟೈರ್ 1 ವಿಭಾಗದಲ್ಲಿರುವ ಏಕೈಕ ಆಟಗಾರ ಲಿಯಾಂಡರ್ ಪೇಸ್ ಆಗಿರುವುದರಿಂದ ಅವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಗಮನಾರ್ಹವಾಗಿದೆ. ರಾಜ್ಯ ಮಟ್ಟದ ಟೆನಿಸ್ ಸಂಸ್ಥೆಯೊಂದರಲ್ಲಿ ಪದಾಧಿಕಾರಿಯಾಗಿ ನಿಗದಿತ ಅವಧಿ ಪೂರೈಸದ ಕಾರಣ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವರು SOM ಪ್ರಕ್ರಿಯೆಯ ಮೂಲಕ ಅರ್ಹತೆ ಪಡೆಯಬೇಕಿತ್ತು.
‘ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಮತ್ತು ನಿಯಮಗಳ’ ಪ್ರಕಾರ, ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಹುದ್ದೆಯೊಂದಕ್ಕೆ ಸ್ಪರ್ಧಿಸಲು ಅಭ್ಯರ್ಥಿಯು ರಾಜ್ಯ ಮಟ್ಟದ ಸಂಸ್ಥೆಯೊಂದರಲ್ಲಿ ಕನಿಷ್ಠ ಒಂದು ಅವಧಿಗೆ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರಬೇಕು. ನವೆಂಬರ್ 27ರಂದು ನಡೆಯಲಿರುವ AITA ಚುನಾವಣೆಯಲ್ಲಿ ಲಿಯಾಂಡರ್ ಪೇಸ್ ಅವರು ಬೆಂಗಾಲ್ ರಾಜ್ಯವನ್ನು ಪ್ರತಿನಿಧಿಸಬಹುದಾದರೂ, ಆ ಮಾರ್ಗದ ಮೂಲಕ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಿಲ್ಲ.
ಇದೇ ವೇಳೆ, ಕ್ರೀಡಾ ಆಡಳಿತದಲ್ಲಿ ಉನ್ನತ ಮಟ್ಟದ ಆಟಗಾರರನ್ನು ಸೇರಿಸಿಕೊಳ್ಳುವ ಮಹತ್ವವನ್ನು ಮಹೇಶ್ ಭೂಪತಿ ಒತ್ತಿ ಹೇಳಿದರು. ಕ್ರೀಡಾ ಸಂಸ್ಥೆಗಳ ಮೇಲೆ ಮಾಜಿ ಆಟಗಾರರು ಬೀರಬಲ್ಲ ಪ್ರಭಾವವನ್ನು ಅವರು ಉಲ್ಲೇಖಿಸಿದರು. “ಕ್ರೀಡೆಯನ್ನು ಪರಿವರ್ತಿಸಲು, ಅತ್ಯುನ್ನತ ಮಟ್ಟದಲ್ಲಿ ಆಡಿದ ಆಟಗಾರರು ಪ್ರತಿ ಕ್ರೀಡಾ ಸಂಸ್ಥೆಗೂ ಅಗತ್ಯವೆಂದು ನಾನು ಭಾವಿಸುತ್ತೇನೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಗೋಪಿ ಅವರು ಮಾಡಿರುವ ಕೆಲಸ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅವರು ಕ್ರೀಡೆಯಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ” ಎಂದು ಭೂಪತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಭೂಪತಿ ಮತ್ತು ಸಾನಿಯಾ ಅವರಲ್ಲದೆ, ಇನ್ನೂ ಆರು ಮಂದಿ ಮಾಜಿ ಆಟಗಾರರು SOM ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ಅಂಕಿತಾ ಭಾಂಬ್ರಿ, ಪ್ರಸ್ತುತ ಡೇವಿಸ್ ಕಪ್ ತರಬೇತುದಾರ ಅಶುತೋಷ್ ಸಿಂಗ್, ಗೌರವ್ ನಾಟೆಕರ್, ಜಾನಕಿ ಕೃಷ್ಣಮೂರ್ತಿ, ಶಾಲಿನಿ ಠಾಕೂರ್ ಚಾವ್ಲಾ ಮತ್ತು ಪ್ರಸ್ತುತ ಬಿಲ್ಲಿ ಜೀನ್ ಕಿಂಗ್ ಕಪ್ ತಂಡದ ನಾಯಕ ವಿಶಾಲ್ ಉಪ್ಪಾಲ್ ಸೇರಿದ್ದಾರೆ. ಕಾರ್ಯಕಾರಿ ಸಮಿತಿಯ ನಾಮನಿರ್ದೇಶನ ಪಟ್ಟಿಯಲ್ಲಿ ಭೂಪತಿ, ಸಾನಿಯಾ, ಅಂಕಿತಾ, ಜಾನಕಿ ಮತ್ತು ಉಪ್ಪಾಲ್ ಎಂಬ ಐವರು ಅಭ್ಯರ್ಥಿಗಳಿದ್ದಾರೆ.
AITA ಸಂವಿಧಾನದಲ್ಲಿ ತಿದ್ದುಪಡಿ ತರಲಾಗಿದ್ದು, ಅದರ ಪ್ರಕಾರ ಸಾಮಾನ್ಯ ಮಂಡಳಿಯಲ್ಲಿ SOMನಿಂದ ನಾಲ್ವರು ಪ್ರತಿನಿಧಿಗಳಿರಬೇಕು. ಇದರಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯವಿರುತ್ತದೆ. ಅಲ್ಲದೆ, 15 ಸದಸ್ಯರ ಕಾರ್ಯಕಾರಿ ಸಮಿತಿಗೆ SOMನಿಂದ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ.






