ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣದ ನಾಯಕತ್ವ ಯಾರಿಗೆ?

ಅಜಿತ್ ಪವಾರ್ | Photo Credit : PTI
ಜನವರಿ 28ರ ಬುಧವಾರ ಬೆಳಿಗ್ಗೆ 8.45ಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ಲಿಯರ್ಜೆಟ್–45 ಖಾಸಗಿ ವಿಮಾನವು ಬಾರಾಮತಿಯಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ. ಜಿಲ್ಲಾ ಪಂಚಾಯತ್ ಚುನಾವಣೆಯ ಪ್ರಚಾರಕ್ಕಾಗಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ‘ದಾದಾ’ (ಸಹೋದರ) ಎಂದೇ ಜನಪ್ರಿಯರಾಗಿದ್ದ ಅಜಿತ್ ಪವಾರ್ ಅವರ ಸಾವು, ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಎನ್ಸಿಪಿಯ ಭವಿಷ್ಯದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎಬ್ಬಿಸಿದೆ.
ಪವಾರ್ ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳ ನಡುವೆಯೂ, ಪವಾರ್ ರಾಜಕೀಯ ಸಾಮ್ರಾಜ್ಯದ ದಿಟ್ಟ ನಾಯಕನಾಗಿ ಪರಿಗಣಿಸಲ್ಪಟ್ಟಿದ್ದ ಅಜಿತ್ ಪವಾರ್ ಅವರು ಆರು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಎನ್ಸಿಪಿ ವಿಭಜನೆಯಾದ ನಂತರ, ಅವರು ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
►ಕುಟುಂಬ ರಾಜಕೀಯ – ಎನ್ಸಿಪಿಯ ಭವಿಷ್ಯ
ಇಬ್ಬಾಗವಾಗಿದ್ದ ಎನ್ಸಿಪಿ ಮತ್ತೆ ಒಂದಾಗಲಿದೆ, ಪವಾರ್ ಕುಟುಂಬ ಪುನಃ ಒಂದಾಗಲಿದೆ ಎಂಬ ನಿರೀಕ್ಷೆಗಳು ಮೂಡುತ್ತಿದ್ದ ಹೊತ್ತಲ್ಲೇ ಈ ದುರಂತ ಸಂಭವಿಸಿದೆ. ಮುಂಬೈ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸೇರಿದಂತೆ 29 ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಗಳ ಸಂದರ್ಭದಲ್ಲಿ, ಎನ್ಸಿಪಿಯ ಎರಡು ಬಣಗಳು ಒಂದಾಗುವ ಲಕ್ಷಣಗಳು ಕಂಡುಬಂದಿದ್ದವು.
ಜುಲೈ 2023ರಲ್ಲಿ ಅಜಿತ್ ಪವಾರ್ ಬಿಜೆಪಿ–ಶಿವಸೇನಾ ನೇತೃತ್ವದ ‘ಮಹಾಯುತಿ’ ಸರ್ಕಾರವನ್ನು ಸೇರಿ, ಪಕ್ಷದ ಹೆಸರು ಹಾಗೂ ‘ಗಡಿಯಾರ’ ಚಿಹ್ನೆಯನ್ನು ತಮ್ಮ ಬಣದ ವಶಕ್ಕೆ ಪಡೆದುಕೊಂಡಿದ್ದರು. ಆದರೂ ಇತ್ತೀಚಿನ ದಿನಗಳಲ್ಲಿ ಎರಡು ಬಣಗಳು ಹಲವು ಸ್ಥಳೀಯ ಮಟ್ಟದ ವಿಚಾರಗಳಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಲು ಆರಂಭಿಸಿತ್ತು.
ಜನವರಿ 15ರಂದು ನಡೆದ ಪುಣೆ ಮತ್ತು ಪಿಂಪ್ರಿ–ಚಿಂಚ್ವಾಡ್ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಚ್ಚರಿಯ ಹೆಜ್ಜೆಯಾಗಿ, ಎರಡೂ ಬಣಗಳು ಏಕೀಕೃತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದವು. ಆದರೆ ಈ ಒಗ್ಗಟ್ಟಿನ ಪ್ರಯತ್ನದ ಹೊರತಾಗಿಯೂ, ಅಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ.
ಈ ಮಧ್ಯೆ, ಚಿಕ್ಕಪ್ಪ ಶರದ್ ಪವಾರ್ ಮತ್ತು ಅಜಿತ್ ಪವಾರ್ ಒಟ್ಟಾಗಿ ಮೂಲ ಎನ್ಸಿಪಿ ಪಕ್ಷವಾಗಿ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅಜಿತ್ ಪವಾರ್ ಅವರೇ ಎನ್ಸಿಪಿಯ ಮುಖ್ಯಸ್ಥರಾಗಲಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿತ್ತು.
ಅಜಿತ್ ಪವಾರ್ ಮತ್ತು ಅವರ ಸಂಬಂಧಿ ಸುಪ್ರಿಯಾ ಸುಳೆ ಜಂಟಿ ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡಿ, ಎರಡೂ ಬಣಗಳ ತಳಮಟ್ಟದ ಕಾರ್ಯಕರ್ತರು ಔಪಚಾರಿಕ ಪುನರ್ಮಿಲನವನ್ನು ಬಯಸುತ್ತಿರುವುದನ್ನು ಒಪ್ಪಿಕೊಂಡಿದ್ದರು. ಪವಾರ್ ಕುಟುಂಬದ ಸದಸ್ಯರು ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದುದೂ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿತ್ತು.
ಈ ತಿಂಗಳ ಆರಂಭದಲ್ಲಿ Times of India ಗೆ ನೀಡಿದ ಸಂದರ್ಶನದಲ್ಲಿ, ಎನ್ಸಿಪಿಯ ಎರಡು ಬಣಗಳ ನಡುವಿನ ಕಹಿ ಕಡಿಮೆಯಾಗಿದೆ ಎಂದು ಅಜಿತ್ ಪವಾರ್ ಒಪ್ಪಿಕೊಂಡಿದ್ದರು. ತಮ್ಮ ಚಿಕ್ಕಪ್ಪನ ಪಕ್ಷದೊಂದಿಗೆ ಸಂಭಾವ್ಯ ಪುನರ್ಮಿಲನದ ಬಗ್ಗೆ ಸುಳಿವು ನೀಡಿದ ಅವರು, ‘ಕಳೆಯುವಿಕೆಯಲ್ಲ, ಸೇರ್ಪಡೆಯ ರಾಜಕೀಯದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ’ ಎಂದಿದ್ದರು. ‘ಪವಾರ್ ಸಾಹೇಬ್ ಅವರೊಂದಿಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಆದರೆ ರಾಜಕೀಯದಲ್ಲಿ ಶಾಶ್ವತ ಶತ್ರುಗಳಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದರು.
►ಅಜಿತ್ ನೇತೃತ್ವದ ಎನ್ಸಿಪಿ ಬಣವನ್ನು ಮುನ್ನಡೆಸುವವರಾರು?
ಅಜಿತ್ ಪವಾರ್ ಅವರ ಸಾವಿನ ನಂತರ ಉದ್ಭವಿಸಿರುವ ಪ್ರಮುಖ ಪ್ರಶ್ನೆ ಎಂದರೆ, ಮಹಾಯುತಿ ಸರ್ಕಾರದೊಳಗೆ 41 ಶಾಸಕರನ್ನು ಹೊಂದಿರುವ ಅವರ ಎನ್ಸಿಪಿ ಬಣವನ್ನು ಮುಂದಿನ ದಿನಗಳಲ್ಲಿ ಯಾರು ಮುನ್ನಡೆಸುತ್ತಾರೆ ಎಂಬುದಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಸಂಖ್ಯಾಬಲದ ದೃಷ್ಟಿಯಿಂದ ಆರಾಮದಾಯಕ ಸ್ಥಿತಿಯಲ್ಲಿದ್ದರೂ, ಅಜಿತ್ ನೇತೃತ್ವದ ಎನ್ಸಿಪಿಗೆ ಸೂಕ್ತ ನಾಯಕತ್ವ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಸ್ವಾಭಾವಿಕವಾಗಿ ಮೊದಲು ಕೇಳಿಬರುವ ಹೆಸರು ಕುಟುಂಬದೊಳಗಿನಿಂದಲೇ. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಸಂಸದೆಯಾಗಿ ತಮ್ಮದೇ ಆದ ರಾಜಕೀಯ ಗುರುತನ್ನು ಹೊಂದಿದ್ದಾರೆ. ಅವರು ಎನ್ಸಿಪಿ ಹಾಗೂ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ. ನಾಯಕತ್ವದ ಹೋರಾಟದಲ್ಲಿ ಮಕ್ಕಳಾದ ಪಾರ್ಥ್ ಮತ್ತು ಜಯ್ ಪವಾರ್ ಹೆಸರುಗಳೂ ಚರ್ಚೆಯಲ್ಲಿವೆ. ಪಾರ್ಥ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ, ತಂದೆಯ ಸ್ಥಳೀಯ ರಾಜಕೀಯ ಪರಂಪರೆಯ ಉತ್ತರಾಧಿಕಾರಿಯಾಗಿ ಅವರು ಮುಂದಕ್ಕೆ ಬರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮೂಲತಃ ಮರಾಠವಾಡದ ಧರಶಿವ ಜಿಲ್ಲೆಗೆ ಸೇರಿದ ಸುನೇತ್ರಾ ಪವಾರ್ ಅವರು ರಾಜಕೀಯವಾಗಿ ಪ್ರಭಾವಶಾಲಿ ಕುಟುಂಬದಿಂದ ಬಂದವರು. ಅವರು ಮಾಜಿ ರಾಜ್ಯ ಸಚಿವ ಹಾಗೂ ಲೋಕಸಭಾ ಸಂಸದ ಪದಮ್ಸಿಂಹ ಪಾಟೀಲ್ ಅವರ ಸಹೋದರಿ.
1985ರಲ್ಲಿ ಅಜಿತ್ ಪವಾರ್ ಅವರನ್ನು ವಿವಾಹವಾದ ಬಳಿಕ, ಸುನೇತ್ರಾರನ್ನು ‘ಪವಾರ್ ಬಹು’ ಎಂದು ಕರೆಯಲಾಗುತ್ತಿತ್ತು. ಇತ್ತೀಚಿನವರೆಗೂ ಅವರು ರಾಜಕೀಯದಿಂದ ಬಹುತೇಕ ದೂರವೇ ಉಳಿದಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್ ಅವರ ಮಗಳು, ತಮ್ಮ ಅತ್ತಿಗೆ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿದ ಬಳಿಕವೇ ಅವರು ನೇರ ರಾಜಕೀಯಕ್ಕೆ ಬಂದರು. ಈ ಚುನಾವಣೆಯಲ್ಲಿ ಅವರು ಸುಮಾರು 1.5 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದರು.
ರಾಜಕೀಯವಾಗಿ ಸಕ್ರಿಯವಾಗಿರದಿದ್ದರೂ, ಬಾರಾಮತಿ ಮತ್ತು ಮರಾಠವಾಡ ಪ್ರದೇಶದಲ್ಲಿ ಸುನೇತ್ರಾ ಪವಾರ್ ಉತ್ತಮ ಸಂಪರ್ಕಗಳನ್ನು ಹೊಂದಿದ್ದಾರೆ. ಕೃಷಿ–ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಅವರು ಸಮಾಜಸೇವಕಿ, ಕೈಗಾರಿಕೋದ್ಯಮಿ ಹಾಗೂ ಶೈಕ್ಷಣಿಕ ಆಡಳಿತಾಧಿಕಾರಿಯಾಗಿ ಸಹ ಕೆಲಸ ಮಾಡುತ್ತಿದ್ದಾರೆ.
ಪ್ರಸ್ತುತ ಅವರು ಬಾರಾಮತಿ ಜವಳಿ ಕಂಪೆನಿಯ ಅಧ್ಯಕ್ಷೆಯಾಗಿದ್ದು, ಮಹಾರಾಷ್ಟ್ರದ ಆರ್ಥಿಕತೆಗೆ ಪ್ರಮುಖವಾದ ಈ ವಲಯದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದಾರೆ. 2010ರಿಂದ ‘ಎನ್ವಿರಾನ್ಮೆಂಟಲ್ ಫೋರಮ್ ಆಫ್ ಇಂಡಿಯಾ’ (ಇಎಫ್ಒಐ) ಎಂಬ ಎನ್ಜಿಒಗೆ ನೇತೃತ್ವ ವಹಿಸುತ್ತಿದ್ದು, ಸಾವಯವ ಕೃಷಿ, ಪರಿಸರ ಗ್ರಾಮಗಳು ಮತ್ತು ಸಂರಕ್ಷಣಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದಾರೆ. ಸುಸ್ಥಿರ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಅವರಿಗೆ ‘ಗ್ರೀನ್ ವಾರಿಯರ್’ ಪ್ರಶಸ್ತಿಯೂ ಲಭಿಸಿದೆ. 2011ರಿಂದ ಫ್ರಾನ್ಸ್ನಲ್ಲಿರುವ ವಿಶ್ವ ಉದ್ಯಮಶೀಲತಾ ವೇದಿಕೆಯ ಚಿಂತಕರ ಮಂಡಳಿಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಶರದ್ ಪವಾರ್ ಸ್ಥಾಪಿಸಿದ ವಿದ್ಯಾ ಪ್ರತಿಷ್ಠಾನ ಶೈಕ್ಷಣಿಕ ಟ್ರಸ್ಟ್ನ ಟ್ರಸ್ಟಿಯಾಗಿಯೂ ಸುನೇತ್ರಾ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರತಿಷ್ಠಾನವು 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. 2017ರಿಂದ ಅವರು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದು, ಉನ್ನತ ಶಿಕ್ಷಣ ನೀತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
►ಪವಾರ್ ಕುಟುಂಬದಲ್ಲಿ ಕೇಳಿಬರುವ ಇನ್ನೊಂದು ಹೆಸರು: ರೋಹಿತ್ ಪವಾರ್
ಪವಾರ್ ಕುಟುಂಬದಲ್ಲಿ ಮತ್ತೊಂದು ಪ್ರಮುಖವಾಗಿ ಕೇಳಿಬರುವ ಹೆಸರು ರೋಹಿತ್ ಪವಾರ್. ಅವರು ಶರದ್ ಪವಾರ್ ಅವರ ಸಹೋದರನ ಮೊಮ್ಮಗ. 2023ರ ಎನ್ಸಿಪಿ ವಿಭಜನೆಯ ಸಂದರ್ಭದಲ್ಲಿ ರೋಹಿತ್ ಪವಾರ್ ಅವರು ಪಿತೃಪಕ್ಷಕ್ಕೆ ನಿಷ್ಠರಾಗಿಯೇ ಉಳಿದಿದ್ದರು. ಬಾರಾಮತಿ ಆಗ್ರೋ ಸೇರಿದಂತೆ ಪವಾರ್ ಕುಟುಂಬದ ಸಕ್ಕರೆ ಕಾರ್ಖಾನೆ ಸಾಮ್ರಾಜ್ಯದ ಹಲವು ಘಟಕಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಅವರು ವಹಿಸಿಕೊಂಡಿದ್ದಾರೆ.
ಅವರು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್ಎಂಎ)ದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಘಟನಾ ಅನುಭವ, ಆರ್ಥಿಕ ವಲಯದ ಹಿಡಿತ ಮತ್ತು ಸ್ಥಳೀಯ ರಾಜಕೀಯದಲ್ಲಿ ನೆಲೆ ಹೊಂದಿರುವ ಕಾರಣ, ಭವಿಷ್ಯದ ನಾಯಕತ್ವದ ಚರ್ಚೆಯಲ್ಲಿ ಅವರ ಹೆಸರೂ ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ.
ಸುಪ್ರಿಯಾ ಸುಳೆ ಅವರನ್ನು ಶರದ್ ಪವಾರ್ ಅವರ ರಾಷ್ಟ್ರೀಯ ರಾಜಕೀಯ ಪರಂಪರೆಯ ಸ್ಪಷ್ಟ ಉತ್ತರಾಧಿಕಾರಿಯಾಗಿ ನೋಡಲಾಗುತ್ತಿದೆ. ಆದರೆ ಬಾರಾಮತಿ ರಾಜಕೀಯದ ಹಿಡಿತವನ್ನು ಪವಾರ್ ಕುಟುಂಬದಲ್ಲೇ ಉಳಿಸಿಕೊಳ್ಳಬೇಕೆಂದರೆ, ರೋಹಿತ್ ಪವಾರ್ ಅಥವಾ ಅಜಿತ್ ಪವಾರ್ ಅವರ ಪುತ್ರರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಬೇಕಾಗುತ್ತದೆ ಎಂಬ ಚರ್ಚೆಯೂ ಪಕ್ಷದೊಳಗೆ ನಡೆಯುತ್ತಿದೆ.
85 ವರ್ಷದ ಶರದ್ ಪವಾರ್ ಅವರು 2026ರ ಅಂತ್ಯದ ವೇಳೆಗೆ ರಾಜಕೀಯದಿಂದ ನಿವೃತ್ತರಾಗುವ ಸುಳಿವುಗಳನ್ನು ನೀಡಿದ್ದಾರೆ. ಆದರೆ ದಶಕಗಳ ಕಾಲ ಮಾರ್ಗದರ್ಶನ ನೀಡಿದ್ದ ತಮ್ಮ ಅಣ್ಣನ ಮಗನ ಅಕಾಲಿಕ ಸಾವು, ಅವರ ನಿವೃತ್ತಿಯ ನಿರ್ಧಾರವನ್ನು ಮುಂದೂಡುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಶರದ್ ಪವಾರ್ ಪಕ್ಷದ ಸಂಪೂರ್ಣ ಏಕೀಕರಣಕ್ಕೆ ಕರೆ ನೀಡುವ ಸಾಧ್ಯತೆಯೂ ಇದೆ.
ಮೊಮ್ಮಕ್ಕಳಾದ ಪಾರ್ಥ್ ಮತ್ತು ಜಯ್ ಪವಾರ್ ಅವರನ್ನು ಮತ್ತೆ ಎನ್ಸಿಪಿ (ಶರದ್ಚಂದ್ರ ಪವಾರ್) ಬಣದ ತೆಕ್ಕೆಗೆ ಕರೆತರುವ ಮೂಲಕ, ಕುಟುಂಬ ರಾಜಕೀಯದಲ್ಲಿನ ಬಿರುಕನ್ನು ಶಾಶ್ವತವಾಗಿ ಮುಚ್ಚುವ ಪ್ರಯತ್ನಕ್ಕೂ ಅವರು ಮುಂದಾಗಬಹುದು. ಆದರೆ ಅಜಿತ್ ಪವಾರ್ ಅವರ ಬೆಂಬಲಿಗರು ವಿಲೀನಕ್ಕೆ ಒಪ್ಪುತ್ತಾರೆಯೇ, ಅಥವಾ ಬಿಜೆಪಿಯೊಂದಿಗೆ ಮೈತ್ರಿಯನ್ನು ಮುಂದುವರಿಸಲು ಬಯಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
►ಸ್ನೇಹಿತರನ್ನು ಪರಿಗಣಿಸುವುದಾದರೆ?
►ಪ್ರಫುಲ್ ಪಟೇಲ್:
ಎನ್ಸಿಪಿಯ ಅತ್ಯಂತ ಅನುಭವಿ ತಂತ್ರಜ್ಞರಲ್ಲಿ ಒಬ್ಬರಾದ ಪ್ರಫುಲ್ ಪಟೇಲ್, ಪಕ್ಷದ ಸ್ಥಾಪಕ ನಾಯಕರಲ್ಲಿಯೂ ಪ್ರಮುಖರು. ಮಾಜಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದ ಅವರು, ದಿಲ್ಲಿಯಲ್ಲಿ ಶರದ್ ಪವಾರ್ ಅವರ ದೀರ್ಘಕಾಲದ ಸಮಾಲೋಚಕರಾಗಿಯೂ ಕಾರ್ಯನಿರ್ವಹಿಸಿದ್ದರು.
2023ರ ವಿಭಜನೆಯ ಸಂದರ್ಭದಲ್ಲಿ ಅವರು ಅಜಿತ್ ಪವಾರ್ ಅವರ ಬಣವನ್ನು ಸೇರಿದ್ದರು. ಮೈತ್ರಿ ನಿರ್ವಹಣೆ, ರಾಷ್ಟ್ರೀಯ ಶಕ್ತಿ ಕೇಂದ್ರಗಳೊಂದಿಗೆ ಸಂಪರ್ಕ ಮತ್ತು ಪಕ್ಷದ ದೀರ್ಘಕಾಲೀನ ಕಾರ್ಯತಂತ್ರಗಳ ಬಗ್ಗೆ ಆಳವಾದ ಅರಿವು ಹೊಂದಿರುವ ಪಟೇಲ್, ಬಿಕ್ಕಟ್ಟಿನ ಸಮಯದಲ್ಲಿ ಪಕ್ಷವನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಬಲ್ಲ ನಾಯಕನಾಗಿ ವ್ಯಾಪಕವಾಗಿ ಗೌರವಿಸಲ್ಪಡುತ್ತಾರೆ.
►ಸುನಿಲ್ ತತ್ಕರೆ:
ರಾಯಗಡ ಜಿಲ್ಲೆಯ ಸ್ಥಳೀಯ ರಾಜಕೀಯದಿಂದ ಬೆಳೆಯುತ್ತ ಬಂದ ತತ್ಕರೆ, ಕೊಂಕಣ ಪ್ರದೇಶದಲ್ಲಿ ಎನ್ಸಿಪಿಯ ಪ್ರಬಲ ನೆಲೆಯನ್ನು ಸಹಕಾರಿ ವಲಯ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ನಿರ್ಮಿಸಿದ್ದಾರೆ. ಸಚಿವರಾಗಿದ್ದಾಗ ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.
2023ರ ವಿಭಜನೆಯ ನಂತರ ಅವರು ಅಜಿತ್ ಪವಾರ್ ನೇತೃತ್ವದ ಬಣದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದರು. ಪಕ್ಷದ ಸಂಘಟನಾ ಉಸ್ತುವಾರಿ ವಹಿಸಿಕೊಂಡಿದ್ದ ಅವರು, ಕಾರ್ಯಕರ್ತರು ಹಾಗೂ ಜಿಲ್ಲಾ ಮಟ್ಟದ ಚಟುವಟಿಕೆಗಳ ಮೇಲೆ ಹಿಡಿತ ಹೊಂದಿದ್ದಾರೆ. ಆದರೆ ಅವರ ರಾಜಕೀಯ ಪ್ರಭಾವ ಬಹುತೇಕ ಕೊಂಕಣ ಪ್ರದೇಶಕ್ಕೆ ಸೀಮಿತವಾಗಿದೆ.
►ಹೊರಗಿನವರಾದರೆ ಯಾರಾಗಬಹುದು?
►ಧನಂಜಯ್ ಮುಂಡೆ:
ಅಜಿತ್ ಪವಾರ್ ಬಣದಲ್ಲಿ ಜನಪ್ರಿಯರಾಗಿರುವ ಕೆಲವೇ ನಾಯಕರಲ್ಲಿ ಧನಂಜಯ್ ಮುಂಡೆ ಒಬ್ಬರು. ಅವರು ಅಜಿತ್ ಪವಾರ್ ಅವರ ಆಪ್ತ ವಲಯಕ್ಕೆ ಸೇರಿದವರು. ಒಬಿಸಿ ಹಿನ್ನೆಲೆಯುಳ್ಳ ಮುಂಡೆ, ಮರಾಠಾ ಮತದಾರರ ಪ್ರಾಬಲ್ಯ ಇರುವ ಎನ್ಸಿಪಿಯಲ್ಲಿ ಎಷ್ಟರ ಮಟ್ಟಿಗೆ ಸ್ವೀಕಾರ ಪಡೆಯುತ್ತಾರೆ ಎಂಬ ಪ್ರಶ್ನೆಗಳು ಇವೆ.
ಬೀಡ್ ಜಿಲ್ಲೆಗೆ ಮಾತ್ರ ಸೀಮಿತವಾದ ಅವರ ಪ್ರಾದೇಶಿಕ ಪ್ರಭಾವ ಮತ್ತು ಜನವರಿ 2025ರಲ್ಲಿ ಬೀಡ್ ಸರಪಂಚ್ ಸಂತೋಷ್ ದೇಶಮುಖ್ ಹತ್ಯೆ ಪ್ರಕರಣದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸೇರಿದಂತೆ ಹಲವು ವಿವಾದಗಳು, ಅವರ ನಾಯಕತ್ವದ ಸಾಧ್ಯತೆಯನ್ನು ಕುಗ್ಗಿಸುತ್ತವೆ.
►ಛಗನ್ ಭುಜಬಲ್:
ಮಹಾರಾಷ್ಟ್ರದ ಅತ್ಯಂತ ಹಿರಿಯ ಒಬಿಸಿ ನಾಯಕರಲ್ಲಿ ಒಬ್ಬರಾದ ಛಗನ್ ಭುಜಬಲ್, ಮೊದಲಿಗೆ ಶಿವಸೇನಾದಲ್ಲಿದ್ದು ಬಳಿಕ ಎನ್ಸಿಪಿಗೆ ಸೇರಿದ್ದರು. ಉಪಮುಖ್ಯಮಂತ್ರಿಯಾಗಿ ಹಾಗೂ ಪಿಡಬ್ಲ್ಯೂಡಿ, ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಅನುಭವಿಸಿದ್ದ ಭುಜಬಲ್, ಎನ್ಸಿಪಿ ವಿಭಜನೆಯ ಬಳಿಕ ಅಜಿತ್ ಪವಾರ್ ಬಣವನ್ನು ಸೇರಿದರು. ಉತ್ತರ ಮಹಾರಾಷ್ಟ್ರದಲ್ಲಿ ಅವರ ಒಬಿಸಿ ನೆಲೆ ಹಾಗೂ ಆಡಳಿತಾತ್ಮಕ ಅನುಭವ ಅವರನ್ನು ನಾಯಕ ಸ್ಥಾನಕ್ಕೆ ಅರ್ಹರನ್ನಾಗಿಸುತ್ತದೆ. ಆದರೆ ವಯಸ್ಸು ಮತ್ತು ಹಿಂದಿನ ವಿವಾದಗಳು ಅವರ ಭವಿಷ್ಯದ ನಾಯಕತ್ವಕ್ಕೆ ಮಿತಿ ವಿಧಿಸುತ್ತವೆ.
►ಎನ್ಸಿಪಿ ವಿಭಜನೆ ಹೇಗೆ ಸಂಭವಿಸಿತು?
ಅಜಿತ್ ಪವಾರ್ ಅವರನ್ನು ಶರದ್ ಪವಾರ್ ಅವರ ಸಹಜ ಉತ್ತರಾಧಿಕಾರಿಯೆಂದೇ ಕಾಣಲಾಗುತ್ತಿತ್ತು. ಆದರೆ ಶರದ್ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ರಾಜಕೀಯದಲ್ಲಿ ಪ್ರಭಾವಿ ಪಾತ್ರ ವಹಿಸುತ್ತಿದ್ದಂತೆ, ಅಜಿತ್ ಪವಾರ್ ಮತ್ತು ಶರದ್ ಪವಾರ್ ನಡುವಿನ ಅಂತರ ಸ್ಪಷ್ಟವಾಗತೊಡಗಿತು.
2019ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಚುನಾವಣೋತ್ತರ ಅವಧಿಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಲು ನಿರಾಕರಿಸಿದಾಗ, ದೇವೇಂದ್ರ ಫಡ್ನವೀಸ್ ಎನ್ಸಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದರು. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಈ ಸರ್ಕಾರ ಕೇವಲ 80 ಗಂಟೆಗಳಷ್ಟೇ ಮುಂದುವರಿಯಿತು. ಶರದ್ ಪವಾರ್ ಅವರ ಮನವಿಗೆ ಸ್ಪಂದಿಸಿದ ಅಜಿತ್, ಎನ್ಸಿಪಿ–ಶಿವಸೇನಾ–ಕಾಂಗ್ರೆಸ್ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿಗೆ ಮರಳಿದರು.
ಒಂದು ವರ್ಷದ ಬಳಿಕ, ಅಜಿತ್ ಪವಾರ್ ಎನ್ಸಿಪಿಯನ್ನು ವಿಭಜಿಸಿ, ಬಹುಸಂಖ್ಯಾತ ಶಾಸಕರ ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವನ್ನು ಸೇರಿದರು. 2024ರ ಚುನಾವಣೆಯ ನಂತರವೂ ಅವರು ಉಪಮುಖ್ಯಮಂತ್ರಿಯಾಗಿ ಮುಂದುವರಿದರು. ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಮಂತ್ರಿಯಾದರು.
►ಮುಂದೇನು?
ಅಜಿತ್ ಪವಾರ್ ಅವರ ಸಾವು, ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಎನ್ಸಿಪಿಯ ಸಮ್ಮಿಶ್ರ ಮಹಾಯುತಿ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಜಿತ್ ಪವಾರ್ ಅವರ ಅಗಲಿಕೆ, ದೇವೇಂದ್ರ ಫಡ್ನವೀಸ್ ಅವರಿಗೆ ವೈಯಕ್ತಿಕವಾಗಿಯೂ ರಾಜಕೀಯವಾಗಿಯೂ ದೊಡ್ಡ ಹೊಡೆತವಾಗಬಹುದು.
ಅಜಿತ್ ಪವಾರ್ ಅವರನ್ನು ಎನ್ಡಿಎಗೆ ಸೇರಿಸಿಕೊಳ್ಳುವುದು ಸಂಪೂರ್ಣವಾಗಿ ಫಡ್ನವೀಸ್ ಅವರ ರಾಜಕೀಯ ನಡೆ ಆಗಿತ್ತು. ಬಿಜೆಪಿ ಕೇಂದ್ರ ನಾಯಕತ್ವ ಈ ವಿಷಯದಲ್ಲಿ ಅಷ್ಟಾಗಿ ಉತ್ಸಾಹ ತೋರಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಅಜಿತ್ ಪವಾರ್ ಅವರನ್ನು ಟೀಕಿಸಿದ ಬಳಿಕವೇ ಅವರು ಎನ್ಡಿಎ ಸೇರಿದ್ದರು.
ಬಿಜೆಪಿ ನಾಯಕತ್ವವು ಶರದ್ ಪವಾರ್ ಅವರನ್ನು ತಮ್ಮ ಶಿಬಿರಕ್ಕೆ ಸೆಳೆಯಲು ಸದಾ ಉತ್ಸುಕವಾಗಿತ್ತು ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಎನ್ಸಿಪಿಯಿಂದ ಮುಂದಿನ ಉಪಮುಖ್ಯಮಂತ್ರಿ ಯಾರು ಎಂಬುದರ ಜೊತೆಗೆ, ಎನ್ಸಿಪಿಯ ಎರಡು ಬಣಗಳು ವಿಲೀನಗೊಳ್ಳುವವೆಯೇ ಎಂಬುದೇ ಈಗಿನ ಅತಿದೊಡ್ಡ ರಾಜಕೀಯ ಪ್ರಶ್ನೆಯಾಗಿದೆ.







