ಉದ್ಯೋಗ ಕಡಿತಕ್ಕೆ ಮುಂದಾದ Amazon; ಭಾರತೀಯ ಉದ್ಯೋಗಿಗಳಿಗೂ ಪೆಟ್ಟು?

ಸಾಂದರ್ಭಿಕ ಚಿತ್ರ | Photo Credit ; NDTV
ಉದ್ಯೋಗ ಕಡಿತಕ್ಕೆ ಸೂಕ್ತ ಕಾರಣಗಳನ್ನು ನೀಡದೇ ಇದ್ದರೂ, ಕಂಪೆನಿಗಳು ಬಂಡವಾಳ ಮತ್ತು ಉದ್ಯೋಗ ಎರಡನ್ನೂ ಎಐ ಚಾಲಿತ ವ್ಯವಸ್ಥೆಗಳತ್ತ ತಿರುಗಿಸುತ್ತಿರುವುದು ಸ್ಪಷ್ಟವಾಗಿದೆ.
ಇ-ಕಾಮರ್ಸ್ ದೈತ್ಯ ಅಮೆಝಾನ್ ಈ ವಾರ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಸಿದ್ಧವಾಗುತ್ತಿದೆ. ಸುಮಾರು 16,000 ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. 2026ರ ಮಧ್ಯಭಾಗದ ವೇಳೆಗೆ ಒಟ್ಟು 30,000 ಉದ್ಯೋಗಿಗಳನ್ನು ಕಡಿತಗೊಳಿಸುವ ಯೋಜನೆಯಿದೆ. ಮಂಗಳವಾರ, ಜನವರಿ 27ರಂದು, ಈಗಾಗಲೇ ಕೆಲ ಉದ್ಯೋಗಿಗಳಿಗೆ ವಜಾ ಮಾಡಿರುವ ಕುರಿತು ಇಮೇಲ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಾಧಿತ ಉದ್ಯೋಗಿಗಳಿಗೆ ‘ಸಾಂಸ್ಥಿಕ ಬದಲಾವಣೆಗಳು’ ಎಂಬ ಕಾರಣವನ್ನು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಷ್ಟು ಉದ್ಯೋಗಗಳು ಕಡಿತಗೊಳ್ಳಲಿವೆ ಎಂಬ ಚಿಂತೆ ಭಾರತೀಯ ಉದ್ಯೋಗಿಗಳನ್ನು ಕಾಡಲಾರಂಭಿಸಿದೆ. ಭಾರತದಲ್ಲಿ ಅಮೆಝಾನ್ ವೆಬ್ ಸರ್ವಿಸಸ್ ಮತ್ತು ಅಮೆಝಾನ್ ಪ್ರೈಮ್ ವಿಭಾಗಗಳಿಂದ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ. ಹೊಸಬರನ್ನು ನೇಮಕ ಮಾಡುವ ಮಾನವ ಸಂಪನ್ಮೂಲ ವಿಭಾಗದ ಉದ್ಯೋಗಿಗಳೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಅಮೆಝಾನ್ ಮೊದಲ ಬಾರಿ 2025ರ ಅಕ್ಟೋಬರ್ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ನಂತರ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ತೆಗೆದುಹಾಕಿತ್ತು. ಆ ಸಂದರ್ಭದಲ್ಲಿ ಸಿಇಒ ಆಂಡಿ ಜೆಸ್ಸಿ, ಈ ಉದ್ಯೋಗ ಕಡಿತ “ಎಐ ಅಥವಾ ಹಣಕಾಸು ಆಧಾರಿತ ಕಡಿತವಲ್ಲ” ಎಂದು ಸ್ಪಷ್ಟಪಡಿಸಿದ್ದರು. “ಕಂಪೆನಿಯಲ್ಲಿ ಅಧಿಕಾರಶಾಹಿ ಹೆಚ್ಚಾಗಿತ್ತು. ಅದನ್ನು ಸರಿಪಡಿಸಲು ಉದ್ಯೋಗ ಕಡಿತ ಅಗತ್ಯವಾಯಿತು” ಎಂದು ಅವರು ಹೇಳಿದ್ದರು.
ಆರಂಭದಲ್ಲಿ ಭಾರತೀಯ ಕಚೇರಿಗಳಿಗೆ ಹೆಚ್ಚಿನ ಪರಿಣಾಮವಾಗಿರಲಿಲ್ಲ. ಆದರೆ ಈ ಬಾರಿ ಭಾರತದಲ್ಲಿಯೂ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ. ಅಮೆಝಾನ್ ನ ಬಹುತೇಕ ಭಾರತೀಯ ಉದ್ಯೋಗಿಗಳು ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿನ ಉದ್ಯೋಗ ಕಡಿತವು ಕಂಪೆನಿಯ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದದ್ದಾಗಿದೆ. 2022 ಮತ್ತು 2023ರಲ್ಲಿ ಅಮೆಝಾನ್ 27,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು.
ಪ್ರಸ್ತುತ ಜಾಗತಿಕವಾಗಿ ಅಮೆಝಾನ್ ನಲ್ಲಿ ಸುಮಾರು 16 ಲಕ್ಷ ಮಂದಿ ಉದ್ಯೋಗದಲ್ಲಿದ್ದಾರೆ. ತನ್ನ ವಾಣಿಜ್ಯ ಕಾರ್ಯಪಡೆಯಿಂದ ಸುಮಾರು 3,50,000 ಉದ್ಯೋಗಿಗಳನ್ನು ಕಡಿತಗೊಳಿಸುವ ಯೋಜನೆಯೂ ಕಂಪೆನಿಗೆ ಇದೆ.
ಕಳೆದ ವರ್ಷ ಜಾಗತಿಕವಾಗಿ 269 ಕಂಪೆನಿಗಳು ಒಟ್ಟು 1,23,941 ಉದ್ಯೋಗಿಗಳನ್ನು ಕೈಗಾರಿಕೆಗಳಿಂದ ತೆಗೆದುಹಾಕಿವೆ ಎಂದು Layoffs.fyi ದತ್ತಾಂಶ ತಿಳಿಸುತ್ತದೆ. 2024ರಿಂದಲೇ ಉದ್ಯೋಗ ಕಡಿತಗಳು ನಡೆಯುತ್ತಿದ್ದರೂ, ದೊಡ್ಡ ಕಂಪೆನಿಗಳು ಇದೀಗ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಇಂಟೆಲ್, ಸಿಸ್ಕೊ, ಮೈಕ್ರೊಸಾಫ್ಟ್, ಗೂಗಲ್ ಮತ್ತು ಅಮೆಝಾನ್ ಉದ್ಯೋಗ ಕಡಿತದ ವಿಚಾರದಲ್ಲಿ ಸುದ್ದಿಯಾಗಿವೆ.
ಉದ್ಯೋಗ ಕಡಿತಕ್ಕೆ ಸ್ಪಷ್ಟ ಕಾರಣಗಳನ್ನು ನೀಡದೇ ಇದ್ದರೂ, ಹಲವು ಪರಸ್ಪರ ಸಂಬಂಧಿತ ಅಂಶಗಳು ಮೇಲ್ನೋಟಕ್ಕೆ ಗೋಚರಿಸುತ್ತಿವೆ. ಕಂಪೆನಿಗಳು ಬಂಡವಾಳ ಮತ್ತು ಮಾನವ ಸಂಪನ್ಮೂಲ ಎರಡನ್ನೂ ಎಐ ಚಾಲಿತ ವ್ಯವಸ್ಥೆಗಳತ್ತ ದೂಡುತ್ತಿವೆ. ದುಬಾರಿ ವೆಚ್ಚದ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ಗಳು (GPU) ಮತ್ತು ಎಐ ಪ್ರತಿಭೆಗಳತ್ತ ಹೂಡಿಕೆ ಮಾಡಲು ಉದ್ಯೋಗ ಕಡಿತಗಳನ್ನು ಕೈಗೊಳ್ಳಲಾಗುತ್ತಿದೆ. 2020–22ರ ಅವಧಿಯಲ್ಲಿ ಬಹುತೇಕ ಕಂಪೆನಿಗಳು ಅಗತ್ಯಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದವು. ಇದೀಗ ಹೆಚ್ಚಿದ ಬಡ್ಡಿದರಗಳು ಮತ್ತು ಗ್ರಾಹಕ ವೆಚ್ಚದ ಕುಸಿತದಿಂದ ಲಾಭದ ಮಾರ್ಜಿನ್ನ್ನು ಉಳಿಸಿಕೊಳ್ಳಲು ಬಜೆಟ್ಗಳನ್ನು ಬಿಗಿಗೊಳಿಸುತ್ತಿವೆ.
ತಾಂತ್ರಿಕ ಕ್ಷೇತ್ರದ ಈ ಉದ್ಯೋಗ ಕಡಿತದ ಅಲೆಯಿಂದ ಕಲಿಯಬೇಕಾದ ಪಾಠವೆಂದರೆ—ಸಾಮಾನ್ಯ ಕೌಶಲ್ಯಗಳು ಮತ್ತು ನಿಷ್ಕ್ರಿಯ ಉದ್ಯೋಗ ಹುಡುಕಾಟ 2026ರಲ್ಲಿ ಸಾಲದು. ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ಪ್ರಸ್ತುತವಾಗಿರಲು ನೈಜ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅತ್ಯವಶ್ಯ. ಉದ್ಯೋಗಗಳಿಗೆ ಅರ್ಜಿ ಹಾಕುವಾಗ ಹೆಚ್ಚು ಕೌಶಲ್ಯಗಳನ್ನು ಪ್ರದರ್ಶಿಸುವ ಅಗತ್ಯವಿದೆ. ಒಂದೆಡೆ ಉದ್ಯೋಗ ವಜಾಗೊಳಿಸುವ ಸುದ್ದಿಗಳು ಹರಡುತ್ತಿದ್ದರೂ, ಮತ್ತೊಂದೆಡೆ ಸಾವಿರಾರು ಉದ್ಯೋಗಗಳು ಖಾಲಿಯಾಗಿದ್ದು, ಸೂಕ್ತ ಅಭ್ಯರ್ಥಿಗಳಿಗಾಗಿ ಕಂಪೆನಿಗಳು ಕಾಯುತ್ತಿವೆ.
ಕೃಪೆ: Indianexpress







