U.S. Midterm Elections: ವಿವೇಕ್ ರಾಮಸ್ವಾಮಿ ಅವರನ್ನು ಸೋಲಿಸಿ ಒಹಯೊ ರಾಜ್ಯವನ್ನು ಡೆಮೋಕ್ರಾಟ್ ಗಳ ಪಾಲಾಗಿಸಿದ ಆಮಿ ಆಕ್ಟನ್ ಯಾರು?

PhotoCredit : firstpost.com
2006ರಲ್ಲಿ, ಡೆಮೋಕ್ರಾಟ್ ಅಭ್ಯರ್ಥಿ ಟೆಡ್ ಸ್ಟ್ರಿಕ್ಲ್ಯಾಂಡ್ ಅವರು ರಿಪಬ್ಲಿಕನ್ ಅಭ್ಯರ್ಥಿ ಜೆ. ಕೆನೆತ್ ಬ್ಲ್ಯಾಕ್ವೆಲ್ ಅವರನ್ನು ಸೋಲಿಸಿ ಒಹಯೊ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಜಯಗಳಿಸಿದ್ದರು. ಅವರು ಶೇ. 60.5ರಷ್ಟು ಮತಗಳನ್ನು ಪಡೆದರೆ, ಬ್ಲ್ಯಾಕ್ವೆಲ್ ಶೇ. 36.6ರಷ್ಟು ಮತಗಳನ್ನು ಗಳಿಸಿದ್ದರು.
ಒಹಯೊ ರಾಜ್ಯದಲ್ಲಿ ಡೆಮೋಕ್ರಾಟ್ ಪಕ್ಷದ ಅಭ್ಯರ್ಥಿಯೊಬ್ಬರು ಗವರ್ನರ್ ಹುದ್ದೆಯನ್ನು ಗೆದ್ದ ಕೊನೆಯ ಸಂದರ್ಭ ಇದಾಗಿತ್ತು.
ಈಗ, 20 ವರ್ಷಗಳ ನಂತರ, 2026ರ ಯುಎಸ್ ಮಧ್ಯಂತರ ಚುನಾವಣೆಯಲ್ಲಿ (US Midterms) ಡೆಮೋಕ್ರಾಟ್ ಪಕ್ಷದ ಆಮಿ ಆಕ್ಟನ್ ಅವರು ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರನ್ನು ಸೋಲಿಸಿ ಒಹಯೊ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
►ಬಾಲ್ಯದಲ್ಲಿನ ಕಷ್ಟದ ದಿನಗಳಿಂದ ವೈದ್ಯೆಯಾಗುವವರೆಗೆ
1966ರಲ್ಲಿ ಒಹಯೊದ ಯಂಗ್ಸ್ಟೌನ್ ನಲ್ಲಿ ಜನಿಸಿದ ಆಮಿ ಆಕ್ಟನ್ (ಅವರ ಮೊದಲ ಹೆಸರು ಆಮಿ ಸ್ಟರ್ನ್ಸ್), ಆರ್ಥಿಕ ಸಂಕಷ್ಟಗಳಿದ್ದ ಕುಟುಂಬದಲ್ಲಿ ಬೆಳೆದರು. ಫೋರ್ಬ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಅವರು 12 ವರ್ಷ ತುಂಬುವಷ್ಟರಲ್ಲೇ ತಮ್ಮ ಕಿರಿಯ ಸಹೋದರನೊಂದಿಗೆ ಸುಮಾರು 18 ಬಾರಿ ಮನೆ ಬದಲಾಯಿಸಿದ್ದರು.
ಆಮಿ ಅವರ ಬಾಲ್ಯ ಕುಟುಂಬದೊಳಗಿನ ದೌರ್ಜನ್ಯದಿಂದಲೂ ಕೂಡಿತ್ತು. ಅವರಿಗೆ 12 ವರ್ಷವಿದ್ದಾಗ, ಅವರ ಮಲತಂದೆಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಯಿತು. ಇದರ ನಂತರ ಅಧಿಕಾರಿಗಳು ಆಮಿ ಮತ್ತು ಅವರ ಸಹೋದರನನ್ನು ತಾಯಿಯ ವಶದಿಂದ ತೆರವುಗೊಳಿಸಿದರು.
ನಂತರ ಅಕ್ಕ-ತಮ್ಮಂದಿರು ತಮ್ಮ ತಂದೆಯೊಂದಿಗೆ ವಾಸಿಸಲು ತೆರಳಿದರು. ತಮ್ಮ ತಾಯಿ ಮಲತಂದೆಯ ಪರವಾಗಿಯೇ ನಿಂತಿದ್ದರಿಂದ, ತಾಯಿಯೊಂದಿಗೆ ದಶಕಗಳಿಂದ ಯಾವುದೇ ಸಂಪರ್ಕವಿಲ್ಲ ಎಂದು ಆಕ್ಟನ್ ಹೇಳಿದ್ದರು.
ಇಂತಹ ಕಷ್ಟದ ಸನ್ನಿವೇಶಗಳ ನಡುವೆಯೂ, ಆಕ್ಟನ್ ಉನ್ನತ ಶಿಕ್ಷಣವನ್ನು ಮುಂದುವರಿಸಿದರು ಮತ್ತು ಸ್ವತಃ ದುಡಿದು ತಮ್ಮ ವ್ಯಾಸಂಗಕ್ಕೆ ಹಣ ಹೊಂದಿಸಿಕೊಂಡರು. ಯಂಗ್ಸ್ಟೌನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ ಅವರು, 1990ರಲ್ಲಿ ನಾರ್ತ್ಈಸ್ಟ್ ಒಹಯೊ ಮೆಡಿಕಲ್ ಯೂನಿವರ್ಸಿಟಿಯಿಂದ ವೈದ್ಯಕೀಯ ಪದವಿ (MD) ಪಡೆದರು. ಆನಂತರ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಂಡ ಅವರು, ಒಹಯೊ ಸ್ಟೇಟ್ ಯೂನಿವರ್ಸಿಟಿಯಲ್ಲಿ ಇದೇ ವಿಷಯವನ್ನು ಬೋಧಿಸಿದರು.
ಆಕ್ಟನ್ ಅವರು ತಮ್ಮನ್ನು ಸಾಂಪ್ರದಾಯಿಕ ರಾಜಕಾರಣಿಗಿಂತ ಹೆಚ್ಚಾಗಿ ಒಬ್ಬ ವೈದ್ಯೆ ಎಂದೇ ಗುರುತಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ, ತಮ್ಮ ವೃತ್ತಿಪರ ಗುರುತನ್ನು ಎತ್ತಿಹಿಡಿಯಲು ಮತ್ತು ಸಾಂಪ್ರದಾಯಿಕ ರಾಜಕೀಯ ಹಾದಿಯಿಂದ ದೂರವಿರಲು "ನಾನು ವೈದ್ಯೆ, ರಾಜಕಾರಣಿಯಲ್ಲ" ಎಂಬ ಮಾತನ್ನು ಪದೇ ಪದೇ ಬಳಸುತ್ತಿದ್ದರು.
►ಒಹಯೊದಲ್ಲಿ ಅವರು ಮನೆಮಾತಾಗಿದ್ದು ಹೇಗೆ?
ಆಕ್ಟನ್ ಅವರಿಗೆ ಸಾರ್ವಜನಿಕವಾಗಿ ದೊರೆತ ದೊಡ್ಡ ಮಟ್ಟದ ಗುರುತಿಸುವಿಕೆ ಎಂದರೆ 2020ರ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯ. ಆ ಸಂದರ್ಭದಲ್ಲಿ ಜನಾರೋಗ್ಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಪ್ರಮುಖ ನಿರ್ಧಾರಗಳ ಕೇಂದ್ರಬಿಂದುವಾಗಿದ್ದರು. ಒಹಯೊ ರಾಜ್ಯದ ಆರೋಗ್ಯ ನಿರ್ದೇಶಕಿಯಾಗಿ, ಅವರು ರಾಜ್ಯದ ಕೊರೊನಾ ನಿಯಂತ್ರಣ ಕಾರ್ಯಾಚರಣೆಯ ಪ್ರಮುಖ ಮುಖವಾದರು. ಗವರ್ನರ್ ಮೈಕ್ ಡಿವೈನ್ ಅವರೊಂದಿಗೆ ಪ್ರತಿದಿನವೂ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಜನರಿಗೆ ಪರಿಚಿತರಾದರು.
ಮಾರ್ಚ್ 2020ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ತೀವ್ರಗೊಂಡಂತೆ, ಸಾರ್ವಜನಿಕ ಆರೋಗ್ಯ ರಕ್ಷಣೆಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವಲ್ಲಿ ಆಕ್ಟನ್ ಪ್ರಮುಖ ಪಾತ್ರ ವಹಿಸಿದರು. ಶಾಲೆಗಳು ಮತ್ತು ವ್ಯಾಪಾರ ವಹಿವಾಟುಗಳನ್ನು ಮುಚ್ಚುವುದು, ಮನೆಯಲ್ಲೇ ಇರಲು (ಲಾಕ್ ಡೌನ್) ಸೂಚಿಸುವುದು, ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಆದೇಶಗಳಿಗೆ ಅವರೇ ಸಹಿ ಹಾಕಿದ್ದರು. ತಮ್ಮ ತುರ್ತು ಅಧಿಕಾರವನ್ನು ಬಳಸಿ, ನಿಗದಿತ ಮತದಾನದ ಹಿಂದಿನ ದಿನ ಒಹಯೊದ 2020ರ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಯನ್ನು (Presidential Primary) ಕೂಡ ಅವರು ಮುಂದೂಡಿದ್ದರು.
ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಆಕ್ಟನ್, "ನಾವು 1.17 ಕೋಟಿ ಜನರ ಪ್ರಾಣ ಉಳಿಸಲು ಕೈಗೊಂಡ ಪ್ರಯತ್ನದಂತಹ ಅನುಭವಗಳ ಮೂಲಕ ಸಾಗಿದಾಗ, ಜನರೊಂದಿಗೆ ಒಂದು ವಿಶೇಷ ನಂಟು ಬೆಳೆಯುವುದು ಸಹಜ" ಎಂದು ಹೇಳಿದ್ದರು.
ಆದರೆ, ಅವರ ಈ ನಿರ್ಧಾರಗಳಿಗೆ ಭಾರಿ ವಿರೋಧವೂ ವ್ಯಕ್ತವಾಯಿತು. ರಾಜ್ಯ ಶಾಸಕಾಂಗದಲ್ಲಿದ್ದ ರಿಪಬ್ಲಿಕನ್ ನಾಯಕರು ಮತ್ತು ಸಾಂಕ್ರಾಮಿಕ ರೋಗದ ನಿರ್ಬಂಧಗಳನ್ನು ವಿರೋಧಿಸಿದ ನಾಗರಿಕರು, ಸರ್ಕಾರದ ನಿರ್ಧಾರಗಳಲ್ಲಿ ಅವರ ಪಾತ್ರವನ್ನು ತೀವ್ರವಾಗಿ ಟೀಕಿಸಿದರು.
ಅವರು ತಮ್ಮ ಮನೆಯ ಹೊರಗೆ ಪ್ರತಿಭಟನೆಗಳು, ಕಾನೂನು ವ್ಯಾಜ್ಯಗಳು ಮತ್ತು ವೈಯಕ್ತಿಕ ಟೀಕೆಗಳನ್ನು ಎದುರಿಸಬೇಕಾಯಿತು. ಕೆಲವು ವಿರೋಧಿಗಳು ಅವರನ್ನು "ಲಾಕ್ಡೌನ್ ಡಾಕ್ಟರ್" ಎಂದು ಕರೆಯಲು ಪ್ರಾರಂಭಿಸಿದರು. ಇದು ಅವರ ಸಾಂಕ್ರಾಮಿಕ ನಿರ್ವಹಣೆಯ ದಾಖಲೆಯನ್ನು ರಾಜಕೀಯ ಹಿನ್ನಡೆಗೆ ಕಾರಣವಾಗುವಂತೆ ಮಾಡಿತು.
►4 ಮಿಲಿಯನ್ ಡಾಲರ್ ವೆಚ್ಚದ ಜಾಹೀರಾತು ವಿವಾದ
ಒಹಯೊ ಗವರ್ನರ್ ಚುನಾವಣಾ ಪ್ರಚಾರದ ಅತ್ಯಂತ ವಿವಾದಾತ್ಮಕ ಘಟನೆಯೆಂದರೆ ಆಕ್ಟನ್ ಅವರ ತಾಯಿ ಡೊನ್ನಾ ಆರ್ಥರ್ ಅಭಿನಯಿಸಿದ ಜಾಹೀರಾತು. ಈ ಜಾಹೀರಾತಿನ ಹಿಂದೆ ತಾನೇ ಇರುವುದಾಗಿ ಮತ್ತು ಅದನ್ನು ಪ್ರಚಾರ ಮಾಡಲು 4 ಮಿಲಿಯನ್ ಡಾಲರ್ ವೆಚ್ಚ ಮಾಡುವುದಾಗಿ ವಿವೇಕ್ ರಾಮಸ್ವಾಮಿ ಅವರ ಪ್ರಚಾರ ತಂಡ ಅಕ್ಟೋಬರ್ 20ರಂದು ಸ್ಪಷ್ಟಪಡಿಸಿತು. ಈ ವಿಡಿಯೊದಲ್ಲಿ ತಾಯಿ ಡೊನ್ನಾ ಆರ್ಥರ್ ತಮ್ಮ ಮಗಳ ನಂಬಿಕೆಯನ್ನು ಪ್ರಶ್ನಿಸುತ್ತಾ, ಆಕೆಗೆ ಮತ ಹಾಕದಂತೆ ಮತದಾರರಲ್ಲಿ ಮನವಿ ಮಾಡಿದ್ದರು.
ಆ ಜಾಹೀರಾತಿನಲ್ಲಿ, ತಮ್ಮ ಬಾಲ್ಯದ ಅನುಭವಗಳು, ವಿಶೇಷವಾಗಿ ಮನೆಯಿಲ್ಲದೇ ಇರುವಾಗಿನ ಸ್ಥಿತಿ ಮತ್ತು ಟೆಂಟ್ ನಲ್ಲಿ ವಾಸಿಸುತ್ತಿದ್ದ ದಿನಗಳ ಕುರಿತು ಆಕ್ಟನ್ ಸುಳ್ಳು ಹೇಳುತ್ತಿದ್ದಾರೆ ಎಂದು ಆರ್ಥರ್ ಆರೋಪಿಸಿದರು. ಜೊತೆಗೆ ಮಗಳ ಮಾನಸಿಕ ಆರೋಗ್ಯದ ಬಗ್ಗೆಯೂ ಆರೋಪಗಳನ್ನು ಮಾಡಿದರು. "ಒಬ್ಬ ತಾಯಿಯಾಗಿ ಇದನ್ನು ಹೇಳುವುದು ಸುಲಭವಲ್ಲ, ಆದರೆ ಆಮಿಗೆ ಗಂಭೀರ ಸಮಸ್ಯೆಯಿದೆ. ಆಕೆ ಒಬ್ಬ ಸುಳ್ಳುಗಾರ್ತಿ. ಆಕೆ ತನ್ನ ಬದುಕಿನ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ" ಎಂದು ಆರ್ಥರ್ ವಿಡಿಯೊದಲ್ಲಿ ಹೇಳಿದ್ದರು.
ಆದರೆ, ತಾಯಿ ಮತ್ತು ಮಗಳ ನಡುವಿನ ನಂಟು ಕಡಿದುಹೋಗಲು ಕಾರಣವೇನು ಎಂಬುದನ್ನು ಆ ಜಾಹೀರಾತು ಎಲ್ಲೂ ಸ್ಪಷ್ಟಪಡಿಸಲಿಲ್ಲ. ಆಕ್ಟನ್ ಅವರಿಗೆ 12 ವರ್ಷವಿದ್ದಾಗ, ಅವರ ಮಲತಂದೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸಿದರು. ಆ ನಂತರ ಅಧಿಕಾರಿಗಳು ಆಮಿ ಮತ್ತು ಅವರ ಸಹೋದರನನ್ನು ತಾಯಿಯ ವಶದಿಂದ ತೆರವುಗೊಳಿಸಿದ್ದರು. ಮಲತಂದೆ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಆತನ ಮೇಲಿನ ವಿಚಾರಣೆ ನಡೆಯಲಿಲ್ಲ. ಆದರೆ, ತಾಯಿ ಆರ್ಥರ್ ಆತನ ಸಾಯುವವರೆಗೂ ಅವನೊಂದಿಗೇ ವಾಸಿಸುತ್ತಿದ್ದರು.
ಜಾಹೀರಾತಿನಲ್ಲಿದ್ದ ಆರೋಪಗಳನ್ನು 'ಫ್ಯಾಕ್ಟ್ ಚೆಕ್' ಸಂಸ್ಥೆಗಳು ಪರಿಶೀಲಿಸಿದವು. 'FactCheck.org' ನಡೆಸಿದ ಪರಿಶೀಲನೆಯಲ್ಲಿ ಆಕ್ಟನ್ ಕುಟುಂಬ ಗುಡಾರದಲ್ಲಿ ವಾಸಿಸುತ್ತಿದ್ದ ಜಾಗಕ್ಕೂ ಮಲತಂದೆಗೂ ಸಂಬಂಧವಿರುವ ದಾಖಲೆಗಳು ಪತ್ತೆಯಾದವು. ಇದು ತಾಯಿಯ ನಿರಾಕರಣೆಗೆ ವಿರುದ್ಧವಾಗಿತ್ತು. ಜೊತೆಗೆ ಆಕ್ಟನ್ ಅವರ ಹೇಳಿಕೆಯನ್ನು ಬೆಂಬಲಿಸುವ ನ್ಯಾಯಾಲಯದ ದಾಖಲೆಗಳನ್ನು 'ಎನ್ಪಿಆರ್' (NPR) ಸರಿ ಎಂದು ದೃಢಪಡಿಸಿರುವುದಾಗಿ 'ಫೋರ್ಬ್ಸ್' ವರದಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಆಕ್ಟನ್ ಪ್ರಚಾರ ತಂಡವು ಅವರ ಬಾಲ್ಯದ ಕುರಿತು ಸ್ಪಷ್ಟನೆ ನೀಡಿತು ಮತ್ತು ಅವರ ಸಹೋದರ ಫಿಲ್ ಸ್ಟರ್ನ್ಸ್ ಮಾತನಾಡುವ ಜಾಹೀರಾತನ್ನು ಬಿಡುಗಡೆ ಮಾಡಿತು. ತಮ್ಮ ಸಹೋದರಿಯನ್ನು ಸಮರ್ಥಿಸಿಕೊಂಡ ಫಿಲ್, "ನಾನು ಕೂಡ ಸಾಕಷ್ಟು ಕಿರುಕುಳ ಅನುಭವಿಸಿದೆ, ಆದರೆ ಆಮಿ ಅತ್ಯಂತ ಕೆಟ್ಟ ಅನುಭವಗಳನ್ನು ಎದುರಿಸಿದಳು. ನನ್ನನ್ನು ರಕ್ಷಿಸುವ ಉದ್ದೇಶದಿಂದಲೇ ಆಕೆ ಆ ಕಿರುಕುಳವನ್ನು ಸಹಿಸಿಕೊಂಡಳು" ಎಂದು ಹೇಳಿದ್ದಾರೆ.
ಸೌಜನ್ಯ: firstpost.com






