OpenAI ಏಜೆಂಟ್ನಿಂದ ಆಸ್ಟ್ರೇಲಿಯಾದ ಸರ್ಕಾರಿ ವೆಬ್ಸೈಟ್ ಹ್ಯಾಕ್ ಆಗಿದ್ದು ಹೇಗೆ?
►ಸೌಮ್ಯರೇಂದ್ರ ಬಾರಿಕ್, ಅನಘಾ ಜಯಕುಮಾರ್ - indianexpress. com ವರದಿ

Photo Credit : AAP/Mick Tsikas via REUTERS
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಇತಿಹಾಸದಲ್ಲೇ ಹೊಸ ಆತಂಕವೊಂದು ಎದುರಾಗಿದೆ. OpenAI ಕಂಪೆನಿಯ ಕೃತಕ ಬುದ್ಧಿಮತ್ತೆ ಏಜೆಂಟ್, ಸಾಮಾನ್ಯ ಸಂಶೋಧನಾ ಕೆಲಸದಲ್ಲಿ ನಿರತವಾಗಿದ್ದಾಗ ಜೂನ್ ತಿಂಗಳಲ್ಲಿ ಆಸ್ಟ್ರೇಲಿಯಾ ಸರ್ಕಾರದ ವೆಬ್ ಸೈಟ್ ಗೆ ಅನಧಿಕೃತವಾಗಿ ನುಗ್ಗಿ, ಸಾರ್ವಜನಿಕ ಹಾಗೂ ಆಂತರಿಕ ಫೈಲ್ ಗಳನ್ನು ಪ್ರವೇಶಿಸಿದೆ. ಸರ್ಕಾರಿ ನೆಟ್ವರ್ಕ್ ಅನ್ನು AI ವ್ಯವಸ್ಥೆಯೊಂದು ಹ್ಯಾಕ್ ಮಾಡಿರುವ ಜಗತ್ತಿನ ಮೊದಲ ಪ್ರಕರಣ ಇದಾಗಿದೆ. ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಬುಧವಾರ (ಸೆಪ್ಟೆಂಬರ್ 23) ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಸರ್ವೀಸಸ್ ಆಸ್ಟ್ರೇಲಿಯಾ ನಿರ್ವಹಿಸುವ ಸಾರ್ವಜನಿಕ ಮೆಡಿಕೇರ್ ಸ್ಟ್ಯಾಟಿಸ್ಟಿಕ್ಸ್ ರಿಪೋರ್ಟಿಂಗ್ ಸರ್ವೀಸ್ ಪೋರ್ಟಲ್ನಲ್ಲಿ ಈ ಘಟನೆ ನಡೆದಿದೆ. ಈ ಪೋರ್ಟಲ್ನಲ್ಲಿ ಖರ್ಚು-ವೆಚ್ಚ ಹಾಗೂ ಇತರ ಅಂಕಿಅಂಶಗಳಂತಹ ಸೂಕ್ಷ್ಮವಲ್ಲದ ಮಾಹಿತಿಗಳು ಮಾತ್ರ ಇವೆ ಎಂದೂ, ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಸದ್ಯಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದೂ ಅಲ್ಬನೀಸ್ ಸ್ಪಷ್ಟಪಡಿಸಿದ್ದಾರೆ.
ಈ ಹ್ಯಾಕಿಂಗ್ ಬಗ್ಗೆ ಸರ್ಕಾರಕ್ಕೆ ತಕ್ಷಣ ಮಾಹಿತಿ ನೀಡುವಲ್ಲಿ ಕಂಪೆನಿ ವಿಫಲವಾಗಿರುವುದಕ್ಕೆ ಸಂಬಂಧಿಸಿದಂತೆ, ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್ ಅವರ ಬಳಿ ತಾನು ತೀವ್ರ ಕಳವಳ ವ್ಯಕ್ತಪಡಿಸಿರುವುದಾಗಿ ಅಲ್ಬನೀಸ್ ತಿಳಿಸಿದ್ದಾರೆ.
AI ವ್ಯವಸ್ಥೆಯೊಂದು ತನ್ನ ಮಿತಿ ಮೀರಿ, ತನಗೆ ಹೇಳದ ಕೆಲಸಗಳನ್ನು ಮಾಡುತ್ತಿರುವ ಮತ್ತೊಂದು ನಿದರ್ಶನವಿದು. ಇಂತಹ ಅನಿರೀಕ್ಷಿತ ವರ್ತನೆಗಳ ಬಗ್ಗೆ ವರದಿ ಮಾಡಲು ಓಪನ್ಎಐ ಕಳೆದ ವಾರವಷ್ಟೇ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಆದರೆ ಜೂನ್ನಲ್ಲಿ ನಡೆದಿದ್ದ ಈ ಆಸ್ಟ್ರೇಲಿಯಾದ ಘಟನೆ ಅದರಲ್ಲಿ ಇರಲಿಲ್ಲ. ತನಗೆ ಆಗಸ್ಟ್ನಲ್ಲಿ ಮಾತ್ರ ಈ ಬಗ್ಗೆ ತಿಳಿಯಿತು ಎಂದು ಓಪನ್ಎಐ ಹೇಳಿಕೊಂಡಿದ್ದು, ಸೆಪ್ಟೆಂಬರ್ 10ರಂದು ಆಸ್ಟ್ರೇಲಿಯಾದ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.
ಈ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಆಂಥ್ರೊಪಿಕ್ ಮತ್ತು ಓಪನ್ಎಐನಂತಹ ಕೆಲವು ಕಂಪೆನಿಗಳೇ AI ಅಭಿವೃದ್ಧಿಯ ವೇಗವನ್ನು ನಿಯಂತ್ರಿಸುವಂತೆ ಕರೆ ನೀಡುತ್ತಿರುವ ಹಿನ್ನೆಲೆಯಲ್ಲಿಯೇ ಈ ಘಟನೆ ವರದಿಯಾಗಿದೆ.
OpenAI ಏಜೆಂಟ್ ಮೆಡಿಕೇರ್ ಪೋರ್ಟಲ್ ಅನ್ನು ಭೇದಿಸಿದ್ದು ಹೇಗೆ?
ಸಾರ್ವಜನಿಕ ಹಾಗೂ ಸಾರ್ವಜನಿಕವಲ್ಲದ ಎರಡೂ ಫೈಲ್ ಗಳನ್ನು ಈ ಏಜೆಂಟ್ ಪ್ರವೇಶಿಸಿದೆ ಎಂದು ಅಲ್ಬನೀಸ್ ತಿಳಿಸಿದ್ದಾರೆ. ಜೊತೆಗೆ, ಸರ್ಕಾರದ ಇತರ ವ್ಯವಸ್ಥೆಗಳ ಮೇಲೆ ಇದರ ಏನಾದರೂ ಪ್ರಭಾವವಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ದೇಶದಲ್ಲಿ ಫಾರೆನ್ಸಿಕ್ ತನಿಖೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಂತದಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲಾಗಿದೆ ಎಂದು ನಂಬಲಾಗಿಲ್ಲ, ಆದರೆ ತನಿಖೆ ಮುಂದುವರೆದಿದೆ. ಸರ್ವೀಸಸ್ ಆಸ್ಟ್ರೇಲಿಯಾ ನೆಟ್ವರ್ಕ್ ಗೆ ಯಾವುದೇ ದೊಡ್ಡ ಮಟ್ಟದ ಧಕ್ಕೆಯಾಗಿಲ್ಲ ಎಂಬುದಕ್ಕೆ ಪ್ರಸ್ತುತ ಲಭ್ಯವಿರುವ ಸಾಕ್ಷ್ಯಗಳು ಸೂಚಿಸುತ್ತವೆ. ಆದರೆ, ಈ ಪರಿಸ್ಥಿತಿಯು ಸ್ಪಷ್ಟವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದಂಥದ್ದು ಎಂದು ಅಲ್ಬನೀಸ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಮಾಧ್ಯಮಗಳ ಪ್ರಕಾರ, ಮೆಡಿಕೇರ್ ಪ್ಲಾಟ್ಫಾರ್ಮ್ ನಲ್ಲಿರುವ ದತ್ತಾಂಶವು ಬಲ್ಕ್ ಬಿಲ್ಲಿಂಗ್ ಅಂಕಿಅಂಶಗಳು, ಲಸಿಕೆಗಳ ಮಾಹಿತಿ, ಅಂಗದಾನಿಗಳ ನೋಂದಣಿ ವಿವರಗಳು ಮತ್ತು ವಾರ್ಷಿಕ ವರದಿಗಳನ್ನು ಒಳಗೊಂಡಿದೆ. ಇದು ಒಟ್ಟುಗೂಡಿಸಿದ ರೂಪದಲ್ಲಿ ಲಭ್ಯವಿದ್ದು, ಅಂದರೆ ಇದು ನೇರವಾಗಿ ವ್ಯಕ್ತಿಗಳನ್ನು ಗುರುತಿಸುವುದಿಲ್ಲ.
ತನಿಖೆ ಇನ್ನೂ ಮುಂದುವರಿದಿದ್ದರೂ, ಹ್ಯಾಕಿಂಗ್ ಅನ್ನು ಬೇರೆ ದೇಶಗಳ ಅಥವಾ ದುಷ್ಕರ್ಮಿಗಳ ಗುಂಪು ಮಾಡಿದ್ದಾ? ಅಥವಾ AI ಏಜೆಂಟ್ ತನ್ನ ಮಿತಿ ಮೀರಿ ವರ್ತಿಸಿದ್ದಾ? ಎಂಬ ಪ್ರಶ್ನೆಗೆ ಪ್ರಧಾನಿ ಅಲ್ಬನೀಸ್ ಉತ್ತರಿಸಿದ್ದಾರೆ. ಓಪನ್ಎಐ ಸಂಸ್ಥೆಯೇ AI ಬಳಸಿ ಸಂಶೋಧನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಏಜೆಂಟ್ ತನಗೆ ಹೇಳಿದ ಕೆಲಸವನ್ನು ಮಾಡಿಲ್ಲ ಅಥವಾ ಮಾಡಿದರೂ, ಅದಕ್ಕೆ ತಡೆ ಒಡ್ಡಿದಾಗ ಆ ತಡೆಗೋಡೆಗಳನ್ನು ದಾಟಲು ಬೇರೆ ದಾರಿಗಳನ್ನು ಹುಡುಕಿಕೊಂಡಿದೆ. ಇದನ್ನು ನೋಡಿದರೆ ಹಾಗೂ AI ಬಳಸಿರುವುದನ್ನು ಗಮನಿಸಿದರೆ ಇದರ ಹಿಂದೆ ಯಾವುದೇ ದುರುದ್ದೇಶವಿರುವಂತೆ ಕಾಣುತ್ತಿಲ್ಲ. ಇದೊಂದು ಸಂಶೋಧನಾ ಕ್ಷೇತ್ರವಾಗಿದೆ. ಇಲ್ಲಿ ಯಾವುದೇ ವಿದೇಶಿ ಕೈವಾಡದ ಸುಳಿವಿಲ್ಲ. ಇದು ಕೇವಲ ತಾನು ಹೋಗಬಾರದ ಜಾಗಗಳಿಗೆ ನುಗ್ಗಿರುವ ಒಂದು ಸಂಶೋಧನಾ ಯೋಜನೆಯಷ್ಟೇ ಎಂದು ಅಲ್ಬನೀಸ್ ಹೇಳಿದ್ದಾರೆ.
ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಪಾಲ್ಗೊಂಡಿದ್ದ ವೇಳೆ ನಡೆದ ಪತ್ರಿಕಾಗೋಷ್ಠಿಯ ವರದಿಯ ಪ್ರಕಾರ ಅಲ್ಬನೀಸ್ ಹೀಗೆ ಹೇಳಿದ್ದಾರೆ:
" OpenAI ಸಂಸ್ಥೆಗೆ ತಾವು ಉತ್ತಮ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಈ ಅಪಾಯಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ ಕಂಪೆನಿಗಳಲ್ಲಿ ಅವರೂ ಒಬ್ಬರು. ಇಲ್ಲಿರುವ ನಿಜವಾದ ಅಪಾಯವೆಂದರೆ, ನಾವು ಕಲಿಯಬಲ್ಲ ಹೊಸ ತಂತ್ರಜ್ಞಾನವೊಂದನ್ನು ಸೃಷ್ಟಿಸುತ್ತಿದ್ದೇವೆ. ಈ ಪ್ರಕರಣದಲ್ಲಿ, ತಾನೇ ಸ್ವತಃ ಬರೆಯಬಲ್ಲ ಹಾಗೂ ವೆಬ್ಸೈಟ್ ನಲ್ಲಿ ಸೂಕ್ತ ಕಾರಣಗಳಿಗಾಗಿ ಹಾಕಲಾಗಿದ್ದ ಭದ್ರತಾ ತಡೆಗಳನ್ನು ಮೀರಿ ಮುನ್ನಡೆಯಬಲ್ಲ ತಂತ್ರಜ್ಞಾನವನ್ನು ನಾವು ರೂಪಿಸಿದ್ದೇವೆ."
►ಮೆಡಿಕೇರ್ ಉಲ್ಲಂಘನೆ ಏಕೆ ಮಹತ್ವದ್ದು?
ಈ ಪೋರ್ಟಲ್ ನಲ್ಲಿ ವೈಯಕ್ತಿಕ ವೈದ್ಯಕೀಯ ದಾಖಲೆಗಳ ಬದಲಿಗೆ ಒಟ್ಟುಗೂಡಿಸಿದ ಮೆಡಿಕೇರ್ ಅಂಕಿಅಂಶಗಳು ಮಾತ್ರ ಇದ್ದವು ಮತ್ತು ಯಾವುದೇ ವೈಯಕ್ತಿಕ ಮಾಹಿತಿ ಪ್ರವೇಶಿಸಲ್ಪಟ್ಟಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.
ಹ್ಯಾಕಿಂಗ್ ಕೃತ್ಯವು ಸೀಮಿತವಾಗಿದ್ದರೂ, ಅದು ನಡೆದ ರೀತಿಯೇ ಇದರ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಪ್ರಧಾನಿ ಅಲ್ಬನೀಸ್ ಅವರ ಪ್ರಕಾರ, OpenAI ಏಜೆಂಟ್ ಸಾಮಾನ್ಯ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದಾಗ ವೆಬ್ಸೈಟ್ ನಲ್ಲಿ ತಡೆಗಳನ್ನು ಎದುರಿಸಿತು. ಆದರೆ ಅದು ನಿಲ್ಲುವ ಬದಲು, ಆ ಮಾಹಿತಿಯನ್ನು ಪಡೆಯಲು ಪರ್ಯಾಯ ಮಾರ್ಗಗಳನ್ನು ಹುಡುಕಿತು. ಪರಿಣಾಮವಾಗಿ, ಅದು ಸಾರ್ವಜನಿಕವಲ್ಲದ ಫೈಲ್ ಗಳಿಗೆ ಅನಧಿಕೃತವಾಗಿ ನುಗ್ಗಿ ಸರ್ವರ್ ನಲ್ಲಿನ ಫೈಲ್ ಗಳನ್ನು ಪ್ರವೇಶಿಸಿತು.
ಮತ್ತೊಂದು ಕಳವಳಕಾರಿ ಸಂಗತಿಯೆಂದರೆ, ಈ ಪೋರ್ಟಲ್ ಅತ್ಯಂತ ಸಂವೇದನಾಶೀಲ ಸರ್ಕಾರಿ ಮಾಹಿತಿಯನ್ನು ರಕ್ಷಿಸಲು ವಿನ್ಯಾಸಗೊಳಿಸಲ್ಪಟ್ಟಿರಲಿಲ್ಲ. ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಇದರ ಭದ್ರತೆಯನ್ನು "ಕೋಟೆ"ಗಿಂತ ಹೆಚ್ಚಾಗಿ "ಬೇಲಿ"ಗೆ ಹೋಲಿಸಿದ್ದಾರೆ. ಇದು ಒಂದು ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಿದೆ. ಸಾರ್ವಜನಿಕವಾಗಿ ಲಭ್ಯವಿರುವ ಅನೇಕ ಸರ್ಕಾರಿ ವ್ಯವಸ್ಥೆಗಳು ಅತ್ಯಂತ ಸಂವೇದನಾಶೀಲವಲ್ಲದ ಮಾಹಿತಿಯನ್ನು ಹೊಂದಿರಬಹುದು, ಆದರೆ ಪ್ರವೇಶ ನಿಯಂತ್ರಣಗಳನ್ನು ಪದೇ ಪದೇ ಮೀರಬಲ್ಲ ಸ್ವಾಯತ್ತ ಸಾಫ್ಟ್ವೇರ್ ಗಳನ್ನು ಎದುರಿಸಲು ಅವುಗಳನ್ನು ವಿನ್ಯಾಸಗೊಳಿಸಲಾಗಿರಲಿಲ್ಲ.
AI ಸಂಬಂಧಿತ ಸೈಬರ್ ಘಟನೆಗಳಿಗೆ ತಮ್ಮ ಅಸ್ತಿತ್ವದಲ್ಲಿರುವ ಪ್ರಕ್ರಿಯೆಗಳು ಸಾಕಾಗುತ್ತವೆಯೇ ಎಂಬುದನ್ನು ಪರಿಶೀಲಿಸಲು ಆಸ್ಟ್ರೇಲಿಯಾ ಈಗ ಕಾರ್ಯಪಡೆಯೊಂದನ್ನು ರಚಿಸಿದೆ. ಇಂತಹ ಉಲ್ಲಂಘನೆಗಳನ್ನು ಹೇಗೆ ಗುರುತಿಸುವುದು ಮತ್ತು ವರದಿ ಮಾಡುವುದು ಎಂಬ ಬಗ್ಗೆಯೂ ಇದು ಪರಿಶೀಲಿಸಲಿದೆ.
AI ಕಂಪೆನಿಗಳು ನಿಯಂತ್ರಣ ಕಳೆದುಕೊಳ್ಳುವ ಬಗ್ಗೆ ಏಕೆ ಎಚ್ಚರಿಸುತ್ತಿವೆ?
ಅಲ್ಬನೀಸ್ ಈ ವಿಚಾರಗಳನ್ನು ಬಹಿರಂಗಪಡಿಸುತ್ತಿದ್ದಂತೆಯೇ, OpenAI ಸಿಇಒ ಸ್ಯಾಮ್ ಆಲ್ಟ್ಮನ್ ಮತ್ತು ಆಂಥ್ರೊಪಿಕ್ ಸಿಇಒ ಡಾರಿಯೊ ಅಮೊಡೆ ಅವರು ಹೆಚ್ಚು ಸಮರ್ಥವಾಗುತ್ತಿರುವ AI ವ್ಯವಸ್ಥೆಗಳಿಂದ ಉಂಟಾಗುವ ಅಪಾಯಗಳ ಕುರಿತು ಚರ್ಚಿಸಲು ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಹಾಜರಾದರು.
"ನಾವು ಭವಿಷ್ಯದ ನಿಯಂತ್ರಣವನ್ನು AI ಪಾಲಿಗೆ ಕಳೆದುಕೊಳ್ಳಬಹುದು" ಎಂದು ಆಲ್ಟ್ಮನ್ ಮಂಡಳಿಗೆ ತಿಳಿಸಿದರು. ಜೊತೆಗೆ, ಈ ತಂತ್ರಜ್ಞಾನದ ಕುರಿತ ನಿರ್ಧಾರಗಳನ್ನು ಕೇವಲ AI ಕಂಪೆನಿಗಳಿಗೆ ಮಾತ್ರ ಬಿಡಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು. AI ಪ್ರಜಾಸತ್ತಾತ್ಮಕ ಆಗಿರಬೇಕಾದರೆ, ಅತ್ಯಂತ ಪ್ರಮುಖ ನಿರ್ಧಾರಗಳನ್ನು ಕೇವಲ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಪ್ರಯೋಗಾಲಯಗಳು ಮಾತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದ ಆಲ್ಟ್ಮನ್, ಸುಧಾರಿತ AI ವ್ಯವಸ್ಥೆಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಮತ್ತು ನಿಯೋಜಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಸರ್ಕಾರಗಳು ಪಾತ್ರವಹಿಸಬೇಕು ಎಂದು ಕರೆ ನೀಡಿದರು.
ಅಮೊಡೆ ಎಚ್ಚರಿಕೆ ನೀಡುತ್ತಾ, "ಸರಿಯಾಗಿ ನಿರ್ವಹಿಸದಿದ್ದರೆ, AI ಇಡೀ ಮಾನವಕುಲಕ್ಕೇ ಗಂಡಾಂತರವಾಗಬಹುದು ಎಂದು ನಾನು ನಂಬುತ್ತೇನೆ" ಎಂದರು. AI ಸಂಬಂಧಿತ ಜೈವಿಕ ಬೆದರಿಕೆಗಳನ್ನು ಎದುರಿಸುವುದು ಮತ್ತು ನಿಯಂತ್ರಣ ಕಳೆದುಕೊಳ್ಳುವ ಅಪಾಯಗಳಿಗಾಗಿ ಅತ್ಯಾಧುನಿಕ ಮಾದರಿಗಳನ್ನು ಪರೀಕ್ಷಿಸುವುದು ಸೇರಿದಂತೆ AI ಸುರಕ್ಷತೆಯ ಕುರಿತು ಅಂತರರಾಷ್ಟ್ರೀಯ ಸಹಕಾರಕ್ಕೆ ಅವರು ಕರೆ ನೀಡಿದರು.
ಸೈಬರ್ ಭದ್ರತಾ ಮೌಲ್ಯಮಾಪನಗಳ ವೇಳೆ AI ವ್ಯವಸ್ಥೆಗಳು ಅನಿರೀಕ್ಷಿತ ರೀತಿಯಲ್ಲಿ ವರ್ತಿಸಿದ ಸರಣಿ ಘಟನೆಗಳ ಬೆನ್ನಲ್ಲೇ ಮೆಡಿಕೇರ್ ಉಲ್ಲಂಘನೆಯೂ ಸಂಭವಿಸಿದೆ.
ಓಪನ್ಎಐ (OpenAI): ಸುಧಾರಿತ ಸೈಬರ್ ಭದ್ರತಾ ಸಾಮರ್ಥ್ಯಗಳಿಗಾಗಿ ಮೌಲ್ಯಮಾಪನಕ್ಕೊಳಪಡುತ್ತಿದ್ದ ಮಾದರಿಗಳು ತಮ್ಮ ನಿರ್ಬಂಧಿತ ಪರೀಕ್ಷಾ ವಾತಾವರಣದಿಂದ ತಪ್ಪಿಸಿಕೊಂಡು ಮುಕ್ತ ಇಂಟರ್ನೆಟ್ ಅನ್ನು ಪ್ರವೇಶಿಸಿದ್ದವು ಎಂದು ಓಪನ್ಎಐ ಜುಲೈನಲ್ಲಿ ಬಹಿರಂಗಪಡಿಸಿತು. ಅವು ಪ್ಯಾಕೇಜ್-ರಿಜಿಸ್ಟ್ರಿಯನ್ನು ಪ್ರಾಕ್ಸಿಯಾಗಿ ಬಳಸುತ್ತಿದ್ದ ಸಾಫ್ಟ್ವೇರ್ ನಲ್ಲಿನ ಹಿಂದೆಂದೂ ತಿಳಿಯದ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡವು ಮತ್ತು ತರುವಾಯ AI ಡೆವಲಪರ್ ಪ್ಲಾಟ್ಫಾರ್ಮ್ ಆದ ಹಗ್ಗಿಂಗ್ ಫೇಸ್ಗೆ (Hugging Face) ಸೇರಿದ ವ್ಯವಸ್ಥೆಗಳಿಗೆ ಪ್ರವೇಶ ಪಡೆದವು.
ಆಂಥ್ರೊಪಿಕ್ (Anthropic): ಸೈಬರ್ ಭದ್ರತಾ ಮೌಲ್ಯಮಾಪನಗಳ ವೇಳೆ ಕ್ಲೌಡ್ (Claude) ಮಾದರಿಗಳು ನೈಜ ಸಂಸ್ಥೆಗಳಿಗೆ ಸೇರಿದ ಮೂಲಸೌಕರ್ಯಗಳನ್ನು ಪ್ರವೇಶಿಸಿದ ಮೂರು ನಿದರ್ಶನಗಳನ್ನು ಆಂಥ್ರೊಪಿಕ್ ನಂತರ ಬಹಿರಂಗಪಡಿಸಿತು. ಕಾನ್ಫಿಗರೇಶನ್ ಸಮಸ್ಯೆಯೊಂದು ನೈಜ ಇಂಟರ್ನೆಟ್ ವ್ಯವಸ್ಥೆಗಳನ್ನು ಮಾದರಿಗಳಿಗೆ ಮುಕ್ತಗೊಳಿಸಿತು ಮತ್ತು ಆ ಗುರಿಗಳು ತಮ್ಮ ಪರೀಕ್ಷಾ ವಾತಾವರಣದ ಭಾಗವಾಗಿವೆ ಎಂದು ಮಾದರಿಗಳು ನಂಬಿದವು. ತಮಗೆ ನೀಡಲಾಗಿದ್ದ ಸೈಬರ್ ಭದ್ರತಾ ಸವಾಲುಗಳನ್ನು ಎದುರಿಸುವ ಭರದಲ್ಲಿ ಕ್ಲೌಡ್ ದುರ್ಬಲ ಪಾಸ್ವರ್ಡ್ ಗಳು ಹಾಗೂ ಭದ್ರತೆ ಇಲ್ಲದ ಎಂಡ್ಪಾಯಿಂಟ್ ಗಳನ್ನು ದುರುಪಯೋಗಪಡಿಸಿಕೊಂಡಿತು.
ಮೆಟಾ (Meta): ಈ ವರ್ಷದ ಆರಂಭದಲ್ಲಿ ಸ್ವತಂತ್ರ ಪರೀಕ್ಷಾ ಸಂಸ್ಥೆಯೊಂದು ನಡೆಸಿದ ಮೌಲ್ಯಮಾಪನದ ವೇಳೆ, ಕಾನ್ಫಿಗರೇಶನ್ ದೋಷವೊಂದರಿಂದ ಅದರ ಒಂದು ಮಾದರಿಗೆ ಆಕಸ್ಮಿಕವಾಗಿ ಇಂಟರ್ನೆಟ್ ಪ್ರವೇಶ ಸಿಕ್ಕಿತು ಎಂದು ಮೆಟಾ ತಿಳಿಸಿದೆ. ಬಳಿಕ ಆ ಮಾದರಿಯು ಮೂರನೇ ವ್ಯಕ್ತಿಯ ಸೇವೆಯೊಂದರಲ್ಲಿದ್ದ ಭದ್ರತಾ ದೋಷವನ್ನು ದುರುಪಯೋಗಪಡಿಸಿಕೊಂಡಿತು. ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಮೆಟಾ ಹೇಳಿದೆ.
ಸೌಜನ್ಯ: indianexpress.com






