ಅನಾಥ ಮಕ್ಕಳ ಶಿಕ್ಷಣಕ್ಕೆ ಬೆಂಬಲವಾಗಿ ನಿಂತ ರಾಷ್ಟ್ರಕವಿಯ ಮೊಮ್ಮಗಳು ಅನನ್ಯ
ದೋಣಿಯಲ್ಲಿ ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿ ಅಭಿಯಾನ

ಚಾಮರಾಜನಗರ: ಅನಾಥ ಮಕ್ಕಳ ಭವಿಷ್ಯಕ್ಕಾಗಿ ರಾಷ್ಟ್ರ ಕವಿಯೊಬ್ಬರ ಮೊಮ್ಮಗಳು ಆಫ್ರಿಕಾದ ಕ್ಯಾನರೆ ದ್ವೀಪದಿಂದ ಅಟ್ಲಾಂಟಿಕ ಸಾಗರವನ್ನು ದೋಣಿಯಲ್ಲಿ ಏಕಾಂಗಿಯಾಗಿ ದಾಟಿ ಹುಬ್ಬೇರಿಸುವಂತೆ ಮಾಡಿದ್ದಾರೆ.
ರಾಷ್ಟ್ರಕವಿ ದಿ.ಡಾ.ಜಿ.ಎಸ್.ಶಿವರುದ್ರಪ್ಪರವರ ಪುತ್ರ ಶಿವಪ್ರಸಾದ್ ಮತ್ತು ಡಾ.ಪೂರ್ಣಿಮಾ ಪುತ್ರಿ ಅನನ್ಯ ಪ್ರಸಾದ್ ಬೆಂಗಳೂರಿನಲ್ಲಿ ಜನಿಸಿದ್ದು, ಪ್ರಸ್ತುತ ಇಂಗ್ಲೆಂಡ್ನಲ್ಲಿ ನೆಲೆಸಿದ್ದಾರೆ. ಅವರು ಆಫ್ರಿಕಾದ ಕ್ಯಾನರೆ ದ್ವೀಪದಿಂದ ದೋಣಿಯಲ್ಲಿ 2024ರ ಡಿ.11ರಂದು ಯಾನ ಆರಂಭಿಸಿ 2025ರ ಜ.31ಕ್ಕೆ ಪೂರ್ಣಗೊಳಿಸಿದ್ದಾರೆ. ಒಟ್ಟು 52 ದಿನಗಳ ಕಾಲ ಸುಮಾರು 4,800 ಕಿ.ಮೀ. ದೂರ ಸಮುದ್ರಯಾನ ನಡೆಸಿದ್ದಾರೆ. ಕಠಿಣವಾದ ಈ ಸಮುದ್ರಯಾನವನ್ನು ದೀನಬಂಧು ಶಾಲೆಗಾಗಿ ನಡೆಸಿರುವುದು ಗಮನಾರ್ಹವಾಗಿದೆ.
ಅನಾಥ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಗಡಿಜಿಲ್ಲೆಯ ಸಂಸ್ಥೆಗೆ ಬೆಂಬಲ ನೀಡುವ ಸಲುವಾಗಿ ರಾಷ್ಟ್ರಕವಿಯ ಮೊಮ್ಮಗಳು ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರವನ್ನು ದಾಟಿ ಸಾಧನೆ ಮಾಡಿದ್ದಾರೆ.
ತಂದೆ-ತಾಯಿ ಇಲ್ಲದ, ಶಿಕ್ಷಣಕ್ಕೆ ಪೂರಕವಾದ ವಾತಾವರಣವಿಲ್ಲದ ಮಕ್ಕಳಿಗೆ ಶಿಕ್ಷಣ, ವಸತಿ ನೀಡುತ್ತಿರುವ ಚಾಮರಾಜನಗರದಲ್ಲಿರುವ ದೀನಬಂಧು ಮತ್ತು ಇಂಗ್ಲೆಂಡ್ನ ಮಾನಸಿಕ ಆರೋಗ್ಯ ಪ್ರತಿಷ್ಠಾನಕ್ಕೆ ಬೆಂಬಲ ನೀಡುವ ಸಲುವಾಗಿ ಅನನ್ಯ ಪ್ರಸಾದ್ ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ್ದಾರೆ.
ಚಾಮರಾಜನಗರ-ರಾಮಸಮುದ್ರದಲ್ಲಿ ತನ್ನ ದೊಡ್ಡಪ್ಪ ಜಿ.ಎಸ್. ಜಯದೇವ್ರವರು 1999ರಲ್ಲಿ ದೀನಬಂಧು ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದು, ಎಲ್ಕೆಜಿಯಿಂದ ಎಸೆಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದಾರೆ.
ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪರವರ ಮಗ ಜಿ.ಎಸ್.ಜಯದೇವ್ ದೀನಬಂಧು ಸೇವಾ ಟ್ರಸ್ಟ್ನ ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಇವರ ತಮ್ಮನ ಮಗಳಾದ ಅನನ್ಯಪ್ರಸಾದ್ ಸಮುದ್ರಯಾನದ ಮೂಲಕ ದೀನಬಂಧು ಶಿಕ್ಷಣ ಸಂಸ್ಥೆಗೆ ಬೆಂಬಲ ನೀಡಿದ್ದಾರೆ.
ಮೋಜಿಗಾಗಿ ಸಾಹಸ ಮಾಡುವ ಯುವ ಪೀಳಿಗೆಯ ನಡುವೆ , ಅನಾಥ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ಬೆಂಬಲಕ್ಕಾಗಿ ರಾಷ್ಟ್ರ ಕವಿ ದಿ.ಡಾ.ಜಿ.ಎಸ್.ಶಿವರುದ್ರಪ್ಪರವರ ಮೊಮ್ಮಗಳು ಭಯಾನಕ ಸಾಗರದಲ್ಲಿ ಏಕಾಂಗಿಯಾಗಿ ಸಾಗರಯಾನ ಮಾಡಿ ಜಗ್ಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾರೆ.
ನನ್ನ ತಮ್ಮನ ಮಗಳು ಅನನ್ಯ ಸಾಗರಯಾನ ಮಾಡಲು ನಿರ್ಧರಿಸಿದಾಗ ನಮಗೆ ತುಂಬಾ ಆತಂಕವಿತ್ತು. ಕಠಿಣ ಸವಾಲುಗಳಲ್ಲಿ ಹೋಗಬೇಡ ಎಂದು ನಾವು ಹೇಳಿದ್ದೆವು. ಆದರೂ ಅನನ್ಯ ತನ್ನ ಹಠ ಬಿಡಲಿಲ್ಲ. ಆಗ ಎಲ್ಲರೂ ಅನಿವಾರ್ಯವಾಗಿ ಎಲ್ಲರೂ ಬೆಂಬಲ ನೀಡಲೇಬೇಕಾಯಿತು. ಸುಮಾರು 52 ದಿನಗಳ ಏಕಾಂಗಿಯಾಗಿ ಸಮುದ್ರಯಾನದಲ್ಲಿ ಹಲವು ಸವಾಲುಗಳು ಎದುರಾದರೂ ಹೆದರಲಿಲ್ಲ. ಹೆಣ್ಣುಮಕ್ಕಳು ಇದನ್ನು ಸಾಧಿಸಿ ತೋರಿಸಬೇಕೆಂದು ತೊಟ್ಟ ಪಣವನ್ನು ಪೂರ್ಣಗೊಳಿಸಿದಳು.
- ಪ್ರೊ.ಜಿ.ಎಸ್.ಜಯದೇವ್, ಅನನ್ಯ ದೊಡ್ಡಪ್ಪ