2024 ರ ಆಂಧ್ರಪ್ರದೇಶ ಚುನಾವಣೆಯ ಮತಗಳ ಸಂಖ್ಯೆಯಲ್ಲಿ ಅಸಾಮಾನ್ಯ ಏರಿಕೆ; ʼಮೋಸʼ ಅಥವಾ ʼಪವಾಡʼ?

ಡಾ. ಪರಕಾಲ ಪ್ರಭಾಕರ್ (X \ @parakala) , PTI
2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣಾ ಮತದಾನದ ದತ್ತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಡಳಿತ ಮೈತ್ರಿಕೂಟವು 175 ವಿಧಾನಸಭಾ ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗೆಲ್ಲಲು ಕಾರಣವಾದ 'ಪವಾಡ'ದ ಹಿಂದಿನ 'ಮೋಸ' ಏನಿರಬಹುದು ಎಂಬುದು ಗೊತ್ತಾಗುತ್ತದೆ. ಇಲ್ಲಿ ನೀಡಲಾದ ಎಲ್ಲಾ ಅಂಕಿಅಂಶಗಳನ್ನು ಭಾರತದ ಚುನಾವಣಾ ಆಯೋಗ, ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (CEO)ಬಿಡುಗಡೆ ಮಾಡಿದ ಡೇಟಾ, ಅವರ ಅಧಿಕೃತ ಅಧಿಸೂಚನೆಗಳು ಮತ್ತು ಪತ್ರಿಕಾ ಪ್ರಕಟಣೆಗಳಿಂದ ತೆಗೆದುಕೊಳ್ಳಲಾಗಿದೆ.
2024 ಮೇ 13ರ ಸಂಜೆ 5 ಗಂಟೆಯ ಹೊತ್ತಿಗೆ 68.04% ಮತಗಳು ಚಲಾವಣೆಯಾಗಿವೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಘೋಷಿಸಿದರು. "ಹೆಚ್ಚಿನ ಸಂಖ್ಯೆಯ" ಜನರು ಇನ್ನೂ ತಮ್ಮ ಮತ ಚಲಾಯಿಸಲು ಕಾಯುತ್ತಿದ್ದಾರೆ. ಮತದಾನದ ಶೇಕಡಾವಾರು ಪ್ರಮಾಣವು ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದರು.
2024 ಮೇ 13 ರಂದು ಬಿಡುಗಡೆಯಾದ ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ ECI/PN/82/2024 ಪ್ರಕಾರ, ರಾತ್ರಿ 8 ಗಂಟೆಗೆ ಮತದಾನದ ಪ್ರಮಾಣ 68.12% ಆಗಿತ್ತು. 2024 ಮೇ 13 ರಂದು ಅದೇ ದಿನ ರಾತ್ರಿ 11:45 ಕ್ಕೆ, ಮತದಾನದ ಪ್ರಮಾಣ 76.50% ಕ್ಕೆ ಏರಿತು ಎಂದು 2024 ಮೇ 13,ರಂದು ಬಿಡುಗಡೆಯಾದ ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ ECI/PN/84/2024 ತೋರಿಸುತ್ತದೆ.
2024 ಮೇ 17 ರಂದು ಬಿಡುಗಡೆಯಾದ ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ ECI/PN/89/2024 ಪ್ರಕಾರ ಆಂಧ್ರಪ್ರದೇಶದ ಮತದಾನದ ಶೇಕಡಾವಾರು ಪ್ರಮಾಣ 80.66% .
ಆಂಧ್ರ ಪ್ರದೇಶದ ಸಿಇಒ ಈ ಅಂಕಿ ಅಂಶವನ್ನು 81.86% ಎಂದು ಹೇಳಿದ್ದಾರೆ. ಆದರೆ ಇಸಿಐನ ಅಂಕಿಅಂಶಗಳ ವರದಿಯು ಅಂತಿಮ ಅಂಕಿ ಅಂಶವನ್ನು 81.79% ಎಂದು ತೋರಿಸಿದೆ. ಇದರಲ್ಲಿ ಎರಡೂ ಅಂಕಿ ಅಂಶಗಳಲ್ಲಿ ಇವಿಎಂ ಮತಗಳು ಮತ್ತು ಅಂಚೆ ಮತಪತ್ರಗಳು ಸೇರಿವೆ. ಈ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಈ ಬದಲಾವಣೆಗಳಲ್ಲಿನ 'ಮೋಸ' ಸ್ಪಷ್ಟವಾಗಿ ಕಾಣಿಸುತ್ತದೆ.
ಸಿಇಒ ಪ್ರಕಾರ ಮತದಾನದ ದಿನದಂದು ಸಂಜೆ 5 ಗಂಟೆಯವರೆಗೆ 68.04% ಮತದಾನವಾಗಿದ್ದು, ಇದು ಗಂಟೆಗೆ ಸರಾಸರಿ 6.8% ಮತದಾನವಾಗಿದೆ ಎಂದು ಸೂಚಿಸುತ್ತದೆ. ಆಗ, 10 ಗಂಟೆಗಳ ಮತದಾನ ನಡೆದಿತ್ತು.
ರಾತ್ರಿ 8 ಗಂಟೆಯ ಹೊತ್ತಿಗೆ ಅದು 68.12% ಕ್ಕೆ ಏರಿತು.ರಾತ್ರಿ 8 ಗಂಟೆಯವರೆಗೆ, ಅಂದರೆ ಮೂರು ಗಂಟೆಗಳಲ್ಲಿ ಆದ ಹೆಚ್ಚಳ 0.08%.
ಆದಾಗ್ಯೂ, ಮತದಾನದ ದಿನದಂದು ರಾತ್ರಿ 11.45 ರ ವೇಳೆಗೆ ಮತದಾನದ ಶೇಕಡಾವಾರು ಪ್ರಮಾಣವು 76.50% ಕ್ಕೆ ಏರಿತು. ಸಂಜೆ 5 ರಿಂದ ರಾತ್ರಿ 11.45 ರ ನಡುವೆ ಇದು 8.38% ರಷ್ಟು ಹೆಚ್ಚಾಗಿದೆ. 3,500 ಮತಗಟ್ಟೆಗಳಲ್ಲಿ ಮತದಾನ ಇನ್ನೂ ಪ್ರಗತಿಯಲ್ಲಿದೆ ಎಂದು ಸಿಇಒ ಘೋಷಿಸಿದರು.
2024 ಮೇ 17 ರಂದು ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ ECI/PN/89/2024 ಪ್ರಕಾರ, ಈ 3,500 ಬೂತ್ಗಳಲ್ಲಿ ಮಧ್ಯರಾತ್ರಿಯ ನಂತರ ಚಲಾವಣೆಯಾದ ಮತಗಳು ಮತದಾನವನ್ನು (VTR) 4.16% ರಷ್ಟು ಹೆಚ್ಚಿಸಿವೆ. ಹಾಗಾಗಿ ಇದು 80.66% ಕ್ಕೆ ಏರಿದೆ ಎಂದು ಲೆಕ್ಕಹಾಕಲಾಗಿದೆ. ಇದರಲ್ಲಿ ಅಂಚೆ ಮತಪತ್ರಗಳು ಸೇರಿಲ್ಲ.
ಇಲ್ಲಿ ಆ ಶೇಕಡಾವಾರು ಪ್ರಮಾಣವನ್ನು ನಿಜವಾದ ಸಂಖ್ಯೆಗಳಾಗಿ ಪರಿವರ್ತಿಸಿದರೆ, ಅಂದರೆ 3,500 ಬೂತ್ಗಳಲ್ಲಿ, ಮಧ್ಯರಾತ್ರಿಯ ನಂತರ17,19,482 ಮತಗಳು ಚಲಾವಣೆಯಾಗಿವೆ ಎಂದರ್ಥ.
ಅಂದರೆ, ಮಧ್ಯರಾತ್ರಿಯ ನಂತರ ಪ್ರತಿ ಬೂತ್ನಲ್ಲಿ ಸರಾಸರಿ 491 ಮತಗಳು ಚಲಾವಣೆಯಾಗಿವೆ. ಸ್ಪಷ್ಟವಾಗಿ, ಪ್ರತಿ ಬೂತ್ನಲ್ಲಿ ನಿಖರವಾಗಿ 491 ಮತಗಳು ಚಲಾವಣೆಯಾಗಿವೆ ಎಂದು ಹೇಳಲಾಗುವುದಿಲ್ಲ. ಆದರೆ ಕೆಲವು ಬೂತ್ಗಳಲ್ಲಿ 491 ಕ್ಕಿಂತ ಕಡಿಮೆ ಮತಗಳಿದ್ದರೆ, ಮತದಾನವು ಪ್ರತಿ ಬೂತ್ಗೆ ಸರಾಸರಿ 491 ಮತಗಳಾಗಬೇಕಾದರೆ ಇತರ ಕೆಲವು ಬೂತ್ಗಳಲ್ಲಿ 491 ಕ್ಕಿಂತ ಹೆಚ್ಚು ಮತಗಳಿರಬೇಕಾಗಿತ್ತು.
ರಾಜ್ಯಾದ್ಯಂತದ ಎಲ್ಲಾ 46,389 ಬೂತ್ಗಳಲ್ಲಿ ಮತದಾನದ ದಿನದಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಚಲಾಯಿಸಲಾದ ಸರಾಸರಿ ಮತಗಳ ಸಂಖ್ಯೆ ಗಂಟೆಗೆ 60.7 ಮತಗಳಾಗಿತ್ತು. ಮತದಾರರು ಲೋಕಸಭೆಗೆ ಮತ್ತು ವಿಧಾನಸಭೆಗೆ ಮತದಾನ ಮಾಡುತ್ತಿದ್ದು, ತಲಾ ಎರಡು ಮತಗಳನ್ನು ಚಲಾಯಿಸುತ್ತಿದ್ದರು .
ಆದಾಗ್ಯೂ, ಈ 3,500 ಬೂತ್ಗಳಲ್ಲಿ ರಾತ್ರಿ 11.45 ರ ನಂತರವೂ ಇಷ್ಟೊಂದು ಮತಗಳು ಚಲಾವಣೆಯಾಗಿಲ್ಲದಿದ್ದರೆ, ಆ ಬೂತ್ಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 11.45 ರ ನಡುವೆ ಮತದಾನ ತುಂಬಾನೇ ನಿಧಾನವಾಗಿರಬೇಕಿತ್ತು. ಗಂಟೆಗೆ 24 ಮತಗಳಿಗಿಂತ ಹೆಚ್ಚು ಚಲಾವಣೆಯಾಗಿರಲು ಸಾಧ್ಯವಿಲ್ಲ.
ಈ ಅಸಾಧಾರಣ ನಿಧಾನಗತಿಯ ಮತದಾನವನ್ನು ಪರಿಗಣಿಸದೆ, ರಾಜ್ಯದ ಸರಾಸರಿ ಮತದಾನದ ವೇಗವನ್ನು ಪರಿಗಣಿಸಿದರೆ, ಈ 3,500 ಬೂತ್ಗಳಲ್ಲಿ ಮತದಾನವು ಮರುದಿನ ಬೆಳಿಗ್ಗೆ 7 ಅಥವಾ 8 ಗಂಟೆಯವರೆಗೆ ಮುಂದುವರಿಯಬೇಕಿತ್ತು. 491 ಕ್ಕಿಂತ ಹೆಚ್ಚು ಮತಗಳು ಚಲಾವಣೆಯಾದ ಗಮನಾರ್ಹ ಸಂಖ್ಯೆಯ ಬೂತ್ಗಳಲ್ಲಿ, ಮತದಾನವು ಮರುದಿನ ಬೆಳಿಗ್ಗೆ 10 ಅಥವಾ 11 ಗಂಟೆಯವರೆಗೆ ಮುಂದುವರಿಯಬೇಕಿತ್ತು. ಆದರೆ ಹಾಗೆ ಆಗಿಲ್ಲ.
2024 ರ ಮೇ 14 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆಂಧ್ರದ ಸಿಇಒ, ಕೊನೆಯ ಮತವನ್ನು ಮೇ 14 ರಂದು ಬೆಳಗಿನ ಜಾವ 2 ಗಂಟೆಗೆ ಚಲಾಯಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದರರ್ಥ 2024 ರ ಮೇ 13 ರಂದು ರಾತ್ರಿ 11.45 ಕ್ಕೆ ನವೀಕರಣದ ನಂತರ 2 ಗಂಟೆ 15 ನಿಮಿಷಗಳಲ್ಲಿ ಮತದಾನ ಕೊನೆಗೊಂಡಿತು. ಅಂದರೆ 2 ಗಂಟೆ 15 ನಿಮಿಷಗಳಲ್ಲಿ 17,19,482 ಮತಗಳು ಚಲಾಯಿಸಲ್ಪಟ್ಟವು.
ಒಂದು ಮತ ಹಾಕಲು ಕೇವಲ ಒಂದು ನಿಮಿಷ ಬೇಕಾಗುತ್ತದೆ ಎಂದು ಸರಾಸರಿಯನ್ನು ನಾವು ತೆಗೆದುಕೊಂಡರೆ, ಒಂದು ಮತಗಟ್ಟೆಯಲ್ಲಿ 491 ಮತಗಳನ್ನು ಚಲಾಯಿಸಲು ಅದು 491 ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ಅಂದರೆ ಕನಿಷ್ಠ 8 ಗಂಟೆಗಳು. ಪ್ರತಿ ಮತಕ್ಕೆ 2 ನಿಮಿಷಗಳನ್ನು ತೆಗೆದುಕೊಳ್ಳುವುದಾದರೆ ಬೇಕಾದ ಸಮಯ ಸುಮಾರು 16 ಗಂಟೆಗಳು.
17,19,482 ಎಲ್ಲಾ ಮತಗಟ್ಟೆಗಳಲ್ಲಿ ಏಕರೂಪವಾಗಿ ಹರಡಿಕೊಂಡಿಲ್ಲದಿರುವ ಸಾಧ್ಯತೆ ಹೆಚ್ಚು. ಕೆಲವು ಬೂತ್ಗಳಲ್ಲಿ ಇದು 491 ಕ್ಕಿಂತ ಕಡಿಮೆಯಿದ್ದರೆ, ಇತರ ಕೆಲವು ಬೂತ್ಗಳಲ್ಲಿ 491 ಕ್ಕಿಂತ ಹೆಚ್ಚಿರಬೇಕು.
491 ಅಥವಾ ಅದಕ್ಕಿಂತ ಹೆಚ್ಚು ಮತದಾರರು ಮತ ಚಲಾಯಿಸಲು ಕಾಯುತ್ತಿದ್ದ ಆ ಬೂತ್ಗಳಲ್ಲಿ, ಮತದಾನವು ಹೆಚ್ಚು ಸಮಯ ಮುಂದುವರಿಯುತ್ತಿತ್ತು. 491 ಕ್ಕಿಂತ ಕಡಿಮೆ ಮತದಾರರನ್ನು ಹೊಂದಿರುವ ಬೂತ್ಗಳು ಬಹಳ ಮೊದಲೇ ಮತದಾನವನ್ನು ಪೂರ್ಣಗೊಳಿಸುತ್ತಿದ್ದವು. ಆದರೆ ಸಿಇಒ ಕೊನೆಯ ಮತವನ್ನು ಮೇ 14 ರಂದು ಬೆಳಗಿನ ಜಾವ 2:00 ಗಂಟೆಗೆ ಚಲಾಯಿಸಲಾಯಿತು ಎಂದು ದಾಖಲೆಯಲ್ಲಿ ಹೇಳಿದ್ದಾರೆ.
ಅಂದರೆ 491 ಅಥವಾ ಅದಕ್ಕಿಂತ ಹೆಚ್ಚು ಮತದಾರರು ಕಾಯುತ್ತಿದ್ದ ಯಾವುದೇ ಮತಗಟ್ಟೆಗಳು ಬೆಳಗಿನ ಜಾವ 2 ಗಂಟೆಯೊಳಗೆ ಮತದಾನವನ್ನು ಮುಗಿಸಲು ಸಾಧ್ಯವಿಲ್ಲ. ಆದಾಗ್ಯೂ, ಮೇ 14 ರಂದು ನಿಜವಾಗಿಯೂ ಮತದಾನವು ಬೆಳಿಗ್ಗೆ 2 ಗಂಟೆಗೆ ಮುಕ್ತಾಯಗೊಂಡಿದ್ದರೆ, ಅಧಿಕೃತ ಮತದಾನದ ಮುಕ್ತಾಯದ ಸಮಯದ ನಂತರ ಯಾವುದೇ ಮತಗಟ್ಟೆಯಲ್ಲಿ ಕಾಯುತ್ತಿರುವ ಮತದಾರರ ಸಂಖ್ಯೆ 491 ಕ್ಕಿಂತ ಕಡಿಮೆಯಿರಬೇಕು ಎಂದರ್ಥ. ಯಾವುದೇ ಮತಗಟ್ಟೆಯಲ್ಲಿ ಕಾಯುತ್ತಿರುವ ಮತದಾರರ ಸಂಖ್ಯೆ 100 ರಿಂದ 135 ಕ್ಕಿಂತ ಹೆಚ್ಚಿರಬಾರದು.
ಹಾಗಾದರೆ, ಆಂಧ್ರ ಪ್ರದೇಶ ಸಿಇಒ ಘೋಷಿಸಿದ ಆ ಬೆಳಗಿನ ಜಾವ 2 ಗಂಟೆಯ ಸಮಯವು 2024 ಮೇ 13ರಂದು ರಾತ್ರಿ 11:45 ರಿಂದ ಮೇ 14, 2024 ರಂದು ಬೆಳಿಗ್ಗೆ 2 ಗಂಟೆಯ ನಡುವೆ ಮತ ಚಲಾಯಿಸಿದ್ದಾರೆಂದು ಹೇಳಲಾದ 17,19,482 ಸಂಖ್ಯೆಯೊಂದಿಗೆ ಹೇಗೆ ಹೊಂದಿಕೆಯಾಗುತ್ತದೆ?
ನಾವು ಆಂಧ್ರ ಪ್ರದೇಶ ಸಿಇಒ ಅವರು ಹೇಳಿದನುಸಾರ ಬೆಳಿಗ್ಗೆ 2 ಗಂಟೆಯ ಸಮಯವನ್ನು ತೆಗೆದುಕೊಂಡರೆ, 491 ಮತದಾರರನ್ನು ಹೊಂದಿರುವ ಮತಗಟ್ಟೆಯಲ್ಲಿ ನಿಮಿಷಕ್ಕೆ ಸುಮಾರು 3.6 ಮತದಾರರು ಮತ ಚಲಾಯಿಸಬೇಕು. ಅಂದರೆ ಪ್ರತಿ 20 ಸೆಕೆಂಡುಗಳಿಗೊಮ್ಮೆ ಕನಿಷ್ಠ ಒಬ್ಬ ಮತದಾರ ಮತಹಾಕಬೇಕು. ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆದಿತ್ತು. ಅಂದರೆ ಪ್ರತಿಯೊಬ್ಬ ಮತದಾರರು ತಮ್ಮ ಹೆಸರನ್ನು ಪರಿಶೀಲಿಸಬೇಕು, ಸಹಿ ಮಾಡಬೇಕು ಅಥವಾ ಹೆಬ್ಬೆರಳಿನ ಗುರುತು ಹಾಕಬೇಕು, ಬೆರಳಿಗೆ ಶಾಯಿ ಹಾಕಬೇಕು, ಎರಡು ಮತಗಳನ್ನು ಚಲಾಯಿಸಬೇಕು ಒಂದು ಮತಗಟ್ಟೆಯಿಂದ ಇನ್ನೊಂದಕ್ಕೆ ಬರಬೇಕು. ಇದೆಲ್ಲವೂ 20 ಸೆಕೆಂಡುಗಳಲ್ಲಿ ಹೇಗೆ ಆಗುತ್ತದೆ?. ಪ್ರತಿ ಮತ ಚಲಾಯಿಸಿದ ನಂತರ, VVPAT ಸ್ಲಿಪ್ ಹೊರಬರಲು ಪ್ರತಿ 7 ಸೆಕೆಂಡುಗಳು ಬೇಕು. ಎರಡು ಮತ ಆದ ಕಾರಣ ಇದಕ್ಕೆ 14 ಸೆಕೆಂಡುಗಳು ಬೇಕಾಗುತ್ತೆ. ಇನ್ನುಳಿದದ್ದು 6 ಸೆಕೆಂಡು. ಅದರಲ್ಲಿ ಬಾಕಿ ಉಳಿದ ಪ್ರಕ್ರಿಯೆ ಮುಗಿಯಲು ಸಾಧ್ಯವೇ ?
ಇದು ಹೇಗೆ ಸಾಧ್ಯ ಎಂಬುದನ್ನುಚುನಾವಣಾ ಆಯೋಗ ಮಾತ್ರ ವಿವರಿಸಬಲ್ಲದು.
ಚುನಾವಣಾ ಆಯೋಗದ Presiding Officers 2023 (Section 7.1.1) ಪ್ರಕಾರ, ನಿಗದಿತ ಮತದಾನ ಮುಕ್ತಾಯದ ವೇಳೆಗೆ ಸರತಿ ಸಾಲಿನಲ್ಲಿ ಸೇರಿರುವ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ಆದಾಗ್ಯೂ, ಮತದಾನ ಅಧಿಕಾರಿಗಳು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಮತದಾನ ಕೇಂದ್ರದ ಆವರಣದ ಗೇಟ್ ಅನ್ನು ಪೊಲೀಸ್ ಅಧಿಕಾರಿ ಅಥವಾ ಚುನಾವಣಾ ಸಿಬ್ಬಂದಿಯೊಬ್ಬರು ಮುಚ್ಚಬೇಕು.
ಕಾಯುತ್ತಿರುವ ಮತದಾರರಿಗೆ ಟೋಕನ್ಗಳನ್ನು ನೀಡಬೇಕು.
ಸಾಲಿನ ಕೊನೆಯಲ್ಲಿರುವ ಮತದಾರರಿಗೆ ಸಂಖ್ಯೆ 1 ಹೊಂದಿರುವ ಟೋಕನ್ ಮತ್ತು ಸರತಿಯ ಆರಂಭದಲ್ಲಿರುವ ಮತದಾರರಿಗೆ ಕೊನೆಯ ಸಂಖ್ಯೆಯನ್ನು ಹೊಂದಿರುವ ಟೋಕನ್ ನೀಡಬೇಕು.
ಆ ಟೋಕನ್ಗಳನ್ನು ಹೊಂದಿರುವ ಮತದಾರರು ಮತ ಚಲಾಯಿಸಲು ಬಂದಾಗ ಅವುಗಳನ್ನು ಸಂಗ್ರಹಿಸಬೇಕು. ಭವಿಷ್ಯದ ಪರಿಶೀಲನೆಗಾಗಿ ಎಲ್ಲಾ ಟೋಕನ್ಗಳನ್ನು ಸಂರಕ್ಷಿಸಬೇಕು. Videography of Critical Events & in Polling Stations ಮಾರ್ಗಸೂಚಿ ಪ್ರಕಾರ, ಮತದಾನ ವಿಭಾಗದ ಸ್ಥಾನ, ಮತಗಟ್ಟೆ ಏಜೆಂಟ್ಗಳ ಉಪಸ್ಥಿತಿಯಂತಹ ಇತರ ವಿಷಯಗಳ ಜೊತೆಗೆ ಮತದಾನದ ನಿಗದಿತ ಗಂಟೆಯ ಕೊನೆಯಲ್ಲಿ ಹೊರಗೆ ಕಾಯುತ್ತಿರುವ ಮತದಾರರು ಮತ್ತು ಸರದಿಯಲ್ಲಿರುವ ಕೊನೆಯ ಮತದಾರರ ವಿಡಿಯೊ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಅಂದರೆ ಕಾಯುತ್ತಿರುವ ಮತದಾರರ ಮುಖಗಳು ಸ್ಪಷ್ಟವಾಗಿ ಕಾಣುವಂತೆ ಸಂಪೂರ್ಣ ಸರತಿ ಸಾಲಿನ ವಿಡಿಯೊ ಮಾಡಬೇಕು. ಭವಿಷ್ಯದ ಪರಿಶೀಲನೆಗಾಗಿ ಈ ಎಲ್ಲಾ ದಾಖಲೆಗಳನ್ನು ಸಂರಕ್ಷಿಸಬೇಕಾಗಿದೆ. ಮತಗಟ್ಟೆಯ ಅಧಿಕಾರಿ ಈ ಎಲ್ಲಾ ಪ್ರಕ್ರಿಯೆಯನ್ನು ಡೈರಿಯಲ್ಲಿ ದಾಖಲಿಸುವುದು ಅಷ್ಟೇ ಮುಖ್ಯ. ಡೈರಿಯೂ ಪರಿಶೀಲನೆಗೆ ಲಭ್ಯವಿರಬೇಕು.
ಈ ಎಣಿಕೆಗಳ ಕುರಿತು ಪ್ರಶ್ನಿಸಲು ಮತ್ತು ಪರಿಶೀಲನೆಗಾಗಿ ದಾಖಲೆಗಳನ್ನು ತೆರೆಯಲು ಇಸಿಐ ಸಿದ್ಧವಾಗಿದೆಯೇ? ಇಲ್ಲಿ ಏನನ್ನೂ ಮರೆಮಾಚಿಲ್ಲ, ಯಾವುದೇ ಮೋಸ ನಡೆದಿಲ್ಲ ಎಂದಾದರೆ ಅದು ಸಿದ್ಧವಿರಲೇಬೇಕು.
ಸಂಜೆ 5 ರಿಂದ ರಾತ್ರಿ 8 ರವರೆಗಿನ ಮೂರು ಗಂಟೆಗಳಲ್ಲಿ ಮತದಾನದಲ್ಲಿ ಕೇವಲ 0.08% ರಷ್ಟು ಹೆಚ್ಚಳವಾಗಿದೆ ಎಂದು ಗಮನಿಸಿದಾಗ ಅಲ್ಲಿ 'ಪವಾಡ' ಸ್ಪಷ್ಟವಾಗಿ ಕಾಣುತ್ತದೆ. ಆದರೆ ಮತದಾನದ ದಿನದಂದು ರಾತ್ರಿ 8 ರಿಂದ ರಾತ್ರಿ 11.45 ರವರೆಗಿನ ರಾತ್ರಿ 11.45 ರ ವೇಳೆಗೆ, ಅಂದರೆ ಮುಂದಿನ 3 ಗಂಟೆ 45 ನಿಮಿಷಗಳಲ್ಲಿ ಅದು ಅಸಾಧಾರಣ ರೀತಿಯಲ್ಲಿ 8.38% ರಷ್ಟು ಹೆಚ್ಚಾಗಿದೆ.
2024 ಮೇ 17ರಂದು, ಮತದಾನದ ನಾಲ್ಕು ಪೂರ್ಣ ದಿನಗಳ ನಂತರ, ಇಸಿಐ ಹೊಸ ಅಂಕಿಅಂಶವನ್ನು ಬಿಡುಗಡೆ ಮಾಡಿತು. ಅದರಲ್ಲಿ ಶೇಕಡಾವಾರು ಪ್ರಮಾಣ 4.16% ರಷ್ಟು ಹೆಚ್ಚಳವಾಗಿದೆ.
ಸಿಇಒ ಪ್ರಕಾರ ಮತದಾನದ ಶೇಕಡಾವಾರು 68.04%, ಇಸಿಐ ಪ್ರಕಾರ 68.12% ,ಎಪಿ ಸಿಇಒ ಪ್ರಕಾರ 81.86, ಮೇ 17ರಂದು ಇಸಿಐ ಪತ್ರಿಕಾ ಪ್ರಕಟಣೆಯ ಪ್ರಕಾರ 80.66%, ಇಸಿಐನ ಅಂಕಿಅಂಶಗಳ ಮುಖ್ಯಾಂಶಗಳ ಪ್ರಕಾರ 81.79%- ಹೀಗೆ ಮತದಾನದ ಶೇಕಡಾವಾರು ಅಂಕಿಅಂಶಗಳು ವಿಭಿನ್ನ ಮೂಲಗಳಲ್ಲಿ ಬದಲಾಗುತ್ತವೆ.
►ಮತದಾನದ ಶೇಕಡಾವಾರು ಪ್ರಮಾಣದಲ್ಲಿನ ಹೆಚ್ಚಳದ ಸಾರಾಂಶ ಇಲ್ಲಿದೆ
ಎಪಿ ಸಿಇಒ ಪ್ರಕಾರ 2024 ಮೇ 13 ರಂದು ಸಂಜೆ 5 ಗಂಟೆಗೆ 68.04% ಮತದಾನ ಆಗಿತ್ತು.
ಇಸಿಐ ಪ್ರಕಾರ 2024 ಮೇ 13 ರಂದು ರಾತ್ರಿ 8 ಗಂಟೆಗೆ 68.12% ಮತದಾನ ಆಗಿತ್ತು.
ಇಸಿಐ ಪ್ರಕಾರ 2024 ಮೇ 13 ರಂದು ರಾತ್ರಿ 11:45 ಕ್ಕೆ 76.50% ಮತದಾನ ಆಗಿತ್ತು.
ಎಪಿ ಸಿಇಒ ಪ್ರಕಾರ 2024 ಮೇ 17ರಂದು 81.86% ಮತದಾನ ಆಗಿತ್ತು. ಇದರಲ್ಲಿ 1.20% ಅಂಚೆ ಮತಪತ್ರಗಳು ಸೇರಿವೆ.
ಇಸಿಐ ಪ್ರಕಾರ 2024 ಮೇ 17 ರಂದು 80.66% ಮತದಾನ ಆಗಿತ್ತು.
ಎಪಿ ಸಿಇಒ ಮತ್ತು ಇಸಿಐನ ಅಂಕಿಅಂಶಗಳ ನಡುವೆ ಇವಿಎಂ ಮತಗಳು ಮತ್ತು ಅಂಚೆ ಮತಪತ್ರಗಳಲ್ಲಿ ವ್ಯತ್ಯಾಸಗಳಿವೆ.
ವಿಚಿತ್ರವೆಂದರೆ ಇಸಿಐನ ಅಂಕಿಅಂಶಗಳ ಮುಖ್ಯಾಂಶಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಇದು ಒಟ್ಟು ಮತದಾನದ ಅಂಕಿಅಂಶ 81.79%, ಅಂಚೆ ಮತಪತ್ರಗಳು 1.23% ಎಂದು ಹೇಳುತ್ತದೆ . ಆದರೆ ಎಪಿ ಸಿಇಒ ಅಂಚೆ ಮತಪತ್ರಗಳ ಅಂಕಿಅಂಶವು 1.2% ಎಂದು ತೋರಿಸುತ್ತದೆ.
ಈಗ ಟೈಮ್ ಲೈನ್ ಮತ್ತು ಹೆಚ್ಚಳದ ಪ್ರಮಾಣವನ್ನು ನೋಡೋಣ:
2024 ಮೇ 13 ರಂದು ಸಂಜೆ 5 ರಿಂದ ರಾತ್ರಿ 8 ರ ನಡುವೆ, ಅಂದರೆ 3 ಗಂಟೆಗಳಲ್ಲಿ ಮತದಾನ 68.04% ರಿಂದ 68.12% ಕ್ಕೇರಿತ್ತು. ಅಂದರೆ ಹೆಚ್ಚಳ 0.08% . ಸಂಖ್ಯೆಯಲ್ಲಿ ಹೇಳುವುದಾದರೆ ಸುಮಾರು 33,064 ಮತಗಳು.
ಅದೇ ದಿನ ರಾತ್ರಿ 8 ರಿಂದ ರಾತ್ರಿ 11:45 ರ ನಡುವೆ, ಅಂದರೆ, 3 ಗಂಟೆ 45 ನಿಮಿಷಗಳಲ್ಲಿ, ಹೆಚ್ಚಳವು 8.38% ಆಗಿತ್ತು. ಮತದಾನದ ಶೇಕಡಾವಾರು 68.12% ರಿಂದ 76.50% ಕ್ಕೆ ಏರಿತ್ತು . ಸಂಖ್ಯೆಯಲ್ಲಿ ಹೇಳುವುದಾದರೆ ಅದು 34,63,767 ರಷ್ಟಿದೆ. ಈ ಅವಧಿಯಲ್ಲಿ ಸರಾಸರಿ ಮತದಾನವು ಪ್ರತಿ ಮತಗಟ್ಟೆಗೆ 74 ರಿಂದ 75 ಮತಗಳವರೆಗೆ ಇರುತ್ತದೆ. ಮತಗಳು ಎಲ್ಲ ಕಡೆ ಏಕರೂಪವಾಗಿರಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬ ಮತದಾರರು ಒಂದು ವಿಧಾನಸಭೆಗೆ ಮತ್ತು ಇನ್ನೊಂದು ಲೋಕಸಭೆಗೆ ಹೀಗೆ ಎರಡು ಮತಗಳನ್ನು ಚಲಾಯಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ.
ಮತದಾನ ಮುಗಿದ ನಾಲ್ಕು ದಿನಗಳ ನಂತರ, 2024 ಮೇ 17ರ ಹೊತ್ತಿಗೆ, ನೀವು ಎಪಿ ಸಿಇಒ ಸಂಖ್ಯೆಯನ್ನು ಆರಿಸುತ್ತೀರಾ ಅಥವಾ ಇಸಿಐ ಸಂಖ್ಯೆಯನ್ನು ಆರಿಸುತ್ತೀರಾ ಎಂಬುದರ ಆಧಾರದ ಮೇಲೆ 5.16% ಅಥವಾ 4.16% ರಷ್ಟು ಮತ್ತಷ್ಟು ಹೆಚ್ಚಳ ಕಂಡುಬಂದಿದೆ.
ಎಪಿ ಸಿಇಒ ಪ್ರಕಾರ, ಮತದಾನದ ಶೇಕಡಾವಾರು 76.50% ರಿಂದ 81.66% ಕ್ಕೆ ಏರಿದೆ. ಆದರೆ ನೀವು ಇಸಿಐ ಡೇಟಾವನ್ನು ಬಳಸಿದರೆ ಈ ಅಂತಿಮ ಅಂಕಿ ಅಂಶವು 80.66% ಕ್ಕೆ ಇಳಿಯುತ್ತದೆ. ಎರಡೂ ಲೆಕ್ಕಾಚಾರಗಳು ಅಂಚೆ ಮತಪತ್ರಗಳನ್ನು ಹೊರತುಪಡಿಸಿವೆ.
ಎಪಿ ಸಿಇಒ ಬದಲಿಗೆ ಇಸಿಐಯ 80.66% ರ ಕಡಿಮೆ ಅಂಕಿಅಂಶವನ್ನು ಬಳಸಿದರೂ ಸಹ ಒಟ್ಟು ಸಂಖ್ಯೆಯಲ್ಲಿ ಇದು 17,19,482 ರಷ್ಟು ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ. ಏಕೆಂದರೆ ಇಸಿಐ ವಾಸ್ತವವಾಗಿ ಅಂತಿಮ ಅಧಿಕಾರವಾಗಿದೆ.
ಒಟ್ಟು ಮತಗಳ ಸಂಖ್ಯೆ 51,83,249 ರಷ್ಟು ಹೆಚ್ಚಾಗಿದ್ದು, ಮತದಾನದ ದಿನದಂದು (ಮೇ 13, 2024) ಸಂಜೆ 5 ಗಂಟೆಗೆ ಬಿಡುಗಡೆಯಾದ ಆರಂಭಿಕ ಅಂಕಿಅಂಶಗಳು ಮತ್ತು ಮೇ 17, 2024 ರಂದು ಘೋಷಿಸಲಾದ ಅಂತಿಮ ಶೇಕಡಾವಾರುಗಳ ನಡುವೆ ಅಸಾಧಾರಣವಾದ 12.54% ಹೆಚ್ಚಳ ಕಾಣಿಸುತ್ತದೆ.
ಆದ್ದರಿಂದ, ಒಟ್ಟು ಮತದಾನದಲ್ಲಿ ಒಟ್ಟಾರೆ ಹೆಚ್ಚಳವು 51,83,249 ಮತಗಳು. ಈ ಅಂಕಿ ಅಂಶವನ್ನು ರಾಜ್ಯದ ಎಲ್ಲಾ 175 ಕ್ಷೇತ್ರಗಳಲ್ಲೂ ಸಮಾನವಾಗಿ ಹಂಚಿದರೆ, ಅದು ಪ್ರತಿ ಸ್ಥಾನಕ್ಕೆ 29,618 ಮತಗಳಾಗುತ್ತದೆ.ಈ ಹೆಚ್ಚಳದ ಏಕರೂಪದ ಹಂಚಿಕೆ ಅಸಂಭವವಾಗಿದೆ. ಅದನ್ನು ತಳ್ಳಿಹಾಕಬಹುದು. ನಿರ್ದಿಷ್ಟ ಬೂತ್/ಕ್ಷೇತ್ರಗಳಲ್ಲಿ ಹೆಚ್ಚಳವಿದ್ದರೆ, ಇದು ಕೆಲವು ಅಭ್ಯರ್ಥಿಗಳಿಗೆ ಭಾರೀ ಪ್ರಯೋಜನವಾಗುತ್ತದೆ. ಇನ್ನು ಕೆಲವರಿಗೆ ಸೋಲು ತಂದೊಡ್ಡುತ್ತದೆ.
ಆದ್ದರಿಂದ ಈ ಹೆಚ್ಚಳವೇ 2024 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಪಕ್ಷಗಳ/ಅಭ್ಯರ್ಥಿಗಳ ಗೆಲುವು ಮತ್ತು ಇನ್ನು ಕೆಲವರ ಸೋಲಿಗೆ ಕಾರಣವಾಗುತ್ತದೆ.
ಗಮನಾರ್ಹವಾಗಿ, ಈ ಬೃಹತ್ ಹೆಚ್ಚಳವು ಎಲ್ಲೆಡೆ ಗೋಚರಿಸುತ್ತಿತ್ತು, ಇದನ್ನು ECI ಮತ್ತು ಎಪಿ ಸಿಇಒ ಅಧಿಕೃತ ದತ್ತಾಂಶ ಮತ್ತು ಪತ್ರಿಕಾ ಪ್ರಕಟಣೆಗಳಲ್ಲಿ ದಾಖಲಿಸಲಾಗಿದೆ.
ಈಗ ಉಳಿದಿರುವ ಪ್ರಶ್ನೆಗಳೆಂದರೆ:
(1) ಆಂಧ್ರಪ್ರದೇಶದಲ್ಲಿ ಗೆದ್ದ ಅಭ್ಯರ್ಥಿಗಳು, ಇದು ಹೇಗೆ ಸಂಭವಿಸಿತು ಎಂದು ತಿಳಿಯದೆ, ಈ ಹಠಾತ್ ಮತಗಳ ಏರಿಕೆಯಿಂದ ಲಾಭ ಪಡೆದರೇ?
(2)ರಾಜ್ಯದಲ್ಲಿ ಸೋತವರು ಚುನಾವಣೆಯಲ್ಲಿನ ಸೋಲಿಗೆ ಕಾರಣವಾದ ಈ ಬೃಹತ್, ಅನಿರೀಕ್ಷಿತ ಮತದಾನದ ಹೆಚ್ಚಳದ ಮುಗ್ಧ ಬಲಿಪಶುಗಳೇ?
ಸ್ಪಷ್ಟವಾಗಿ, ಆಂಧ್ರಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯಲ್ಲಿ ರಾಜಿಮಾಡಿಕೊಳ್ಳಲಾಗಿದೆ ಎಂದು ಕಾಣುತ್ತದೆ. ಆದಾಗ್ಯೂ, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಆದ್ದರಿಂದ, ಆಂಧ್ರಪ್ರದೇಶ ಚುನಾವಣಾ ಆದೇಶವು ಹೆಚ್ಚು ಪ್ರಶ್ನಾರ್ಹವಾಗಿದೆ. ಮೇಲೆ ಪಟ್ಟಿ ಮಾಡಲಾದ ವ್ಯತ್ಯಾಸಗಳು ಚುನಾವಣೆಯನ್ನು ಕದಿಯಲಾಗಿದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತವೆ. ಇದು 2024 ರ ಲೋಕಸಭಾ ಫಲಿತಾಂಶಗಳ ಸುತ್ತಲಿನ ಅದೇ ಅನುಮಾನಗಳನ್ನು ಪ್ರತಿಧ್ವನಿಸುತ್ತದೆ. ಇಲ್ಲಿ ಎತ್ತಲಾದ ವಿಷಯಗಳಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಪ್ರತಿಕ್ರಿಯೆಗಳು ಮಾತ್ರ ಈ ಆತಂಕಗಳನ್ನು ದೂರ ಮಾಡಬಹುದು. ಅಲ್ಲಿಯವರೆಗೆ, ಅನುಮಾನಗಳು ಉಳಿಯುತ್ತವೆ.
(ಆರ್ಥಿಕ ತಜ್ಞ ಮತ್ತು ದಿ ಕ್ರೂಕೆಡ್ ಟಿಂಬರ್ ಆಫ್ ನ್ಯೂ ಇಂಡಿಯಾದ ಲೇಖಕ ಡಾ. ಪರಕಾಲ ಪ್ರಭಾಕರ್ ಅವರ ವಿಶ್ಲೇಷಣೆ The wire ನಲ್ಲಿ ಪ್ರಕಟವಾಗಿದೆ)







