Apple Pay ಭಾರತದಲ್ಲೂ ಲಭ್ಯ; ನಿಮ್ಮ ಐಫೋನ್ನಲ್ಲಿ ಬಳಸುವುದು ಹೇಗೆ?

Photo Credit : apple.com
ಭಾರತದಲ್ಲಿ ಆಪಲ್ ಪೇ ಸದ್ಯ ಆಕ್ಸಿಸ್ ಬ್ಯಾಂಕ್ ನೀಡುವ ವೀಸಾ ಅಥವಾ ಮಾಸ್ಟರ್ ಕಾರ್ಡ್ ಕ್ರೆಡಿಟ್ ಕಾರ್ಡ್ ಗಳಿಗೆ ಮಾತ್ರ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಆಪಲ್ ಇತರ ಬ್ಯಾಂಕ್ ಗಳಿಗೂ ಸೇವೆ ವಿಸ್ತರಿಸುವ ನಿರೀಕ್ಷೆಯಿದೆ.
ಆಪಲ್ ಕಂಪನಿ ಅಂತಿಮವಾಗಿ ಭಾರತದಲ್ಲಿ ‘ಆಪಲ್ ಪೇ’ (Apple Pay) ಅನ್ನು ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಈ ಸೇವೆಯನ್ನು ಪರಿಚಯಿಸಿದ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ಅಂತಿಮವಾಗಿ ಭಾರತದಲ್ಲೂ ಬಿಡುಗಡೆ ಮಾಡಿದೆ. ಇಂದಿನಿಂದ (ಸೆಪ್ಟೆಂಬರ್ 30) ನಿಮ್ಮ ಐಫೋನ್, ಐಪ್ಯಾಡ್ ಅಥವಾ ಆಪಲ್ ವಾಚ್ ಮೂಲಕ ಭಾರತದಲ್ಲಿ ಪಾವತಿಗಳನ್ನು ಮಾಡಲು ನೀವು ಆಪಲ್ ಪೇ ಅನ್ನು ಬಳಸಬಹುದು. ಆದರೂ ಸದ್ಯಕ್ಕೆ ಈ ಸೇವೆಯು ಆಕ್ಸಿಸ್ ಬ್ಯಾಂಕ್ ನೀಡುವ ವೀಸಾ ಅಥವಾ ಮಾಸ್ಟರ್ಕಾರ್ಡ್ ಕ್ರೆಡಿಟ್ ಕಾರ್ಡ್ಗಳಿಗೆ ಮಾತ್ರ ಸೀಮಿತವಾಗಿದೆ.
ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳುತ್ತಿರುವ ಭಾರತೀಯ ಬಳಕೆದಾರರಿಗೆ ಆಪಲ್ ಪೇ ಉಪಯುಕ್ತವಾಗಲಿದೆ ಎಂದು ಕಂಪನಿ ಹೇಳಿದೆ. ಆಪಲ್ ಪೇಯ ವಿಶೇಷತೆಯೆಂದರೆ ಪಾವತಿ ಮಾಡುವಾಗ ಒಟಿಪಿ ಅಥವಾ ಪಿನ್ ಅಗತ್ಯವಿರುವುದಿಲ್ಲ. “ಆಪಲ್ ಪೇ ದೈನಂದಿನ ಕಾರ್ಡ್ ಪಾವತಿಗಳನ್ನು ಸುಲಭ, ಸುರಕ್ಷಿತ ಮತ್ತು ಖಾಸಗಿಯನ್ನಾಗಿ ಮಾಡುತ್ತದೆ– ಅಂಗಡಿಗಳಲ್ಲಿ ಹೆಚ್ಚುವರಿ ಆ್ಯಪ್, ಪಿನ್ ಅಥವಾ ಒಟಿಪಿ ಇಲ್ಲದೆ ಕೇವಲ ಟ್ಯಾಪ್ ಮಾಡುವ ಮೂಲಕ ಪಾವತಿಸುವುದರಿಂದ ತೊಡಗಿ, ಆನ್ಲೈನ್ನಲ್ಲಿ ಪದೇಪದೇ ಪಾವತಿ ಮಾಹಿತಿ ನಮೂದಿಸದೆ ಪಾವತಿಸುವವರಿಗೆ ಇದು ಅನುಕೂಲಕರವಾಗಲಿದೆ” ಎಂದು ಆಪಲ್ ಪೇ ಮತ್ತು ಆಪಲ್ ವಾಲೆಟ್ನ ಉಪಾಧ್ಯಕ್ಷ ಜೆನ್ನಿಫರ್ ಬೈಲಿ ತಿಳಿಸಿದ್ದಾರೆ.
ಆಪಲ್ ಪೇ ಎಂದರೇನು?
ಇದೊಂದು ಕ್ಯುಪರ್ಟಿನೊ ಮೂಲದ ದಿಗ್ಗಜ ಕಂಪನಿಯ ಸುರಕ್ಷಿತ ಪಾವತಿ ಸೇವೆಯಾಗಿದೆ. ಜಾಗತಿಕವಾಗಿ ಈ ಸೇವೆಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ಗಳನ್ನು ಬಳಸಬಹುದು. ಅಮೆರಿಕದಲ್ಲಿ ಬಳಕೆದಾರರು ಪಾವತಿ ಮಾಡಲು ‘ಆಪಲ್ ಕ್ಯಾಶ್’ ಬಳಸುವ ಆಯ್ಕೆಯೂ ಇದೆ. ಉದಾಹರಣೆಗೆ, ನೆಟ್ ಬ್ಯಾಂಕಿಂಗ್ಗೆ ಹೋಲಿಸಿದರೆ ಪಾವತಿಯನ್ನು ಸಾಧನವೇ ದೃಢೀಕರಿಸುತ್ತದೆ. ಹೀಗಾಗಿ ಪ್ರಕ್ರಿಯೆ ಸುಗಮವಾಗುತ್ತದೆ.
ಭಾರತದಲ್ಲಿ ಆಪಲ್ ಪೇ ಸದ್ಯ ಆಕ್ಸಿಸ್ ಬ್ಯಾಂಕ್ ನೀಡುವ ವೀಸಾ ಅಥವಾ ಮಾಸ್ಟರ್ಕಾರ್ಡ್ ಕ್ರೆಡಿಟ್ ಕಾರ್ಡ್ಗಳಿಗೆ ಮಾತ್ರ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಆಪಲ್ ಇತರ ಬ್ಯಾಂಕ್ಗಳಿಗೂ ಸೇವೆ ವಿಸ್ತರಿಸುವ ನಿರೀಕ್ಷೆಯಿದೆ. UPI ವ್ಯಾಪಕವಾಗಿ ಬಳಕೆಯಲ್ಲಿರುವ ಸಮಯದಲ್ಲಿ ಆಪಲ್ ಪೇ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದೆ. UPI ಮೇಲಿನ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಕಾರಣದಿಂದ ಕೆಲವು ಬಳಕೆದಾರರು ಇತರ ಪಾವತಿ ಆಯ್ಕೆಗಳಿಗೆ ಬದಲಾಗುವ ಸಾಧ್ಯತೆಯಿದೆ.
ಆಪಲ್ ಪೇ ಸೆಟ್ ಮಾಡುವುದು ಹೇಗೆ?
ಭಾರತದಲ್ಲಿ ಆಪಲ್ ಪೇ ಸೆಟ್ ಮಾಡುವುದು ಬಹಳ ಸರಳ. ನಿಮ್ಮ ಐಫೋನ್ನಲ್ಲಿರುವ ವ್ಯಾಲೆಟ್ (Wallet) ಆ್ಯಪ್ ಮೂಲಕ ನೀವು ಅರ್ಹ ಕಾರ್ಡ್ ಸೇರಿಸಬಹುದು. ಈ ಆ್ಯಪ್ನಲ್ಲಿ ನೀವು ಕೇವಲ ‘ಪ್ಲಸ್’ (+) ಚಿಹ್ನೆಯ ಮೇಲೆ ಕ್ಲಿಕ್ ಮಾಡಿ, ನಂತರ ಸೂಚಿಸಲಾದ ಹಂತಗಳನ್ನು ಅನುಸರಿಸಿದರೆ ಸಾಕು. ಪರ್ಯಾಯವಾಗಿ ನೀವು ಆಕ್ಸಿಸ್ ಬ್ಯಾಂಕ್ ಆ್ಯಪ್ ಮೂಲಕವೂ ಕಾರ್ಡ್ ಸೇರಿಸಬಹುದು. ಕಾರ್ಡ್ ಸೇರಿಸಿದ ನಂತರ ಆಪಲ್ ಪೇ ಬಳಸಬಹುದು.
ಆಪಲ್ ಪೇ ಬಳಸಿ ಆಫ್ಲೈನ್ನಲ್ಲಿ ಪಾವತಿ ಮಾಡುವಾಗ ಸಾಧನದ ಬದಿಯ ಬಟನ್ ಅಥವಾ ಹೋಮ್ ಬಟನ್ ಅನ್ನು ಎರಡು ಬಾರಿ ಒತ್ತಬೇಕು. ನಂತರ ಫೇಸ್ ಐಡಿ, ಟಚ್ ಐಡಿ ಅಥವಾ ನಿಮ್ಮ ಸಾಧನದ ಪಾಸ್ಕೋಡ್ ಮೂಲಕ ದೃಢೀಕರಿಸಬೇಕು. ನಂತರ ಪಾವತಿ ಮಾಡಲು ನಿಮ್ಮ ಐಫೋನ್ನ ಮೇಲ್ಭಾಗವನ್ನು ಅಥವಾ ಆಪಲ್ ವಾಚ್ನ ಡಿಸ್ಪ್ಲೇಯನ್ನು ‘ಕಾಂಟ್ಯಾಕ್ಟ್ಲೆಸ್ ರೀಡರ್’ ಹತ್ತಿರ ಹಿಡಿದು ಪಾವತಿಸಬೇಕು.
ಆಪಲ್ ಪೇಯನ್ನು ಬೆಂಬಲಿತ ಆ್ಯಪ್ಗಳು ಮತ್ತು ವೆಬ್ಸೈಟ್ಗಳಲ್ಲೂ ಬಳಸಬಹುದು. ಇದರಿಂದಾಗಿ ಪದೇಪದೇ ಕಾರ್ಡ್ ವಿವರ ಅಥವಾ ಮಾಹಿತಿ ನಮೂದಿಸುವ ಅಗತ್ಯವಿರುವುದಿಲ್ಲ. ಆಪಲ್ ಪೇ ಬಳಸುವುದರಿಂದ ನಿಮ್ಮ ಕಾರ್ಡ್ಗಳಿಗೆ ಸಂಬಂಧಿಸಿದ ರಿವಾರ್ಡ್ಗಳು ಮತ್ತು ಪ್ರಯೋಜನ ಮುಂದುವರಿಸಬಹುದು.
ಆಪಲ್ ಪೇಗೆ ಅರ್ಹವಾದ ಐಫೋನ್ ಮಾದರಿಗಳಲ್ಲಿ iPhone XR ಮತ್ತು ನಂತರದ ಮಾದರಿಗಳು ಸೇರಿವೆ. ಇವು ಕನಿಷ್ಠ ಐಒಎಸ್ 18 ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಇದು watchOS 11 ಅಥವಾ ನಂತರದ ಆವೃತ್ತಿ ಹೊಂದಿರುವ Apple Watch Series 6 ಅಥವಾ ನಂತರದ ಮಾದರಿಗಳಲ್ಲೂ ಲಭ್ಯವಿದೆ.
ಸೇವೆ ಪ್ರಾರಂಭವಾದ ಮೇಲೆ Apple Store ಮಳಿಗೆಗಳು, Blinkit, Chaayos, Comet, Croma, Interflora, Ixigo, Le15 Patisserie, Reliance Brands, Tata 1mg ಮತ್ತು Zomato ಸೇರಿದಂತೆ ವಿವಿಧ ವ್ಯಾಪಾರಿಗಳು Apple Pay ಅನ್ನು ಸ್ವೀಕರಿಸುತ್ತಾರೆ. ಕಾಲಕ್ರಮೇಣ ಇನ್ನೂ ಹೆಚ್ಚಿನ ವ್ಯಾಪಾರಿಗಳು ಹಾಗೂ ಆ್ಯಪ್ಗಳು ಇದರ ವ್ಯಾಪ್ತಿಗೆ ಬರಬಹುದು. ಜಾಗತಿಕವಾಗಿ Apple Pay ಯು 90 ಕ್ಕೂ ಹೆಚ್ಚು ದೇಶಗಳಲ್ಲಿ 11,000 ಕ್ಕೂ ಹೆಚ್ಚು ಬ್ಯಾಂಕ್ ಮತ್ತು ನೆಟ್ವರ್ಕ್ ಪಾಲುದಾರರನ್ನು ಹೊಂದಿದೆ.






