ಫ್ರಾನ್ಸ್, ಇಟಲಿಯಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರಿಂದ ಹಾನಿ: ಪೋಷಕರೇ ಹೊಣೆ?
ಎಡ್ನಾ ಮೊಹಮ್ಮದ್ - Aljazeera. com ವರದಿ

Photo Credit : aljazeera.com
ಫ್ರಾನ್ಸ್ ನಲ್ಲಿ ಕಳೆದ ತಿಂಗಳು ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಗಳು ಆರಂಭವಾದಾಗ, ಕೋಪಗೊಂಡ ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಟನಾ ಸ್ಥಳಗಳಿಂದ ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.
ಇಟಲಿಯಲ್ಲಿ ಈ ವಾರ ಇದೇ ರೀತಿಯ ಕ್ರಮ ಜಾರಿಗೆ ಬಂದ ಬೆನ್ನಲ್ಲೇ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಅಥವಾ ಧ್ವಂಸಗೊಳಿಸುವ ಮಕ್ಕಳ ಪೋಷಕರಿಗೆ ದಂಡ ವಿಧಿಸುವ ಯೋಜನೆಗಳನ್ನು ಫ್ರಾನ್ಸ್ ಕೂಡ ಪರಿಗಣಿಸುತ್ತಿದೆ. ಹೀಗಾಗಿ, ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಟನಾ ಸ್ಥಳಗಳಿಂದ ದೂರ ಕರೆದೊಯ್ಯಲು ಸೂಕ್ತ ಕಾರಣವಿರಬಹುದು.
ಫ್ರಾನ್ಸ್ನಲ್ಲಿ ಯುವ ಪ್ರತಿಭಟನಾಕಾರರ ಜತೆಗೆ ಜೀವನ ವೆಚ್ಚದ ಏರಿಕೆ ಮತ್ತು ಪ್ರಸ್ತಾವಿತ ಸಾರ್ವಜನಿಕ ವೆಚ್ಚ ಕಡಿತದ ಬಗ್ಗೆ ಆಕ್ರೋಶಗೊಂಡ ಇತರರೂ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಇಟಲಿಯ ನಗರಗಳಲ್ಲೂ ಇದೇ ರೀತಿಯ ಯುವ ನೇತೃತ್ವದ ಪ್ರತಿಭಟನೆಗಳು ಆರಂಭವಾಗಿವೆ. ಪ್ರತಿಭಟನಾಕಾರರು ಬ್ಯಾರಿಕೇಡ್ಗಳಿಗೆ ಬೆಂಕಿ ಹಚ್ಚಿದ್ದು, ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದಿವೆ. ಪೊಲೀಸರು ಬಲಪ್ರಯೋಗ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.
ಫ್ರಾನ್ಸ್, ಇಟಲಿ ಪ್ರತಿಭಟನೆಗಳ ಹಿನ್ನೆಲೆ ಏನು?
ಸೆಪ್ಟೆಂಬರ್ ಕೊನೆಯ ವಾರದಲ್ಲಿ, ಪ್ಯಾರಿಸ್ನ ಉತ್ತರ ಉಪನಗರವಾದ ಸೈನ್-ಸೆಂಟ್-ಡೆನಿಸ್ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಶಾಲಾ ಕಟ್ಟಡಗಳ ದುಸ್ಥಿತಿ ಮತ್ತು ಶಿಕ್ಷಕರ ಕೊರತೆಯನ್ನು ವಿರೋಧಿಸಿ ಪ್ರತಿಭಟನೆ ಆರಂಭಿಸಿದರು. ಸಾರ್ವಜನಿಕ ವೆಚ್ಚದಲ್ಲಿ ಲಕ್ಷಾಂತರ ಯುರೋಗಳಷ್ಟು ಕಡಿತ ಮಾಡುವ ಪ್ರಸ್ತಾವಿತ ಸರ್ಕಾರದ ಬಜೆಟ್ ಬಗ್ಗೆಯೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಕ್ಟೋಬರ್ನ ಮೊದಲ ವಾರದಲ್ಲಿ ಪ್ಯಾರಿಸ್ನಲ್ಲಿ ಹಾಗೂ ಬಳಿಕ ಫ್ರಾನ್ಸ್ನ ಇತರ ನಗರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗಳ ಸುತ್ತಲೂ ಬ್ಯಾರಿಕೇಡ್ಗಳನ್ನು ನಿರ್ಮಿಸಿದರು. ಇದರಿಂದ ನೂರಾರು ಶಾಲೆಗಳು ಮುಚ್ಚುವಂತಾಯಿತು.
ಯೋಜಿತ ವೇತನ ಸ್ಥಂಭನವನ್ನು ವಿರೋಧಿಸಿ ಸಾರ್ವಜನಿಕ ವಲಯದ ನೌಕರರು ಪ್ರತಿಭಟನೆಗೆ ಸೇರಿಕೊಂಡ ಬಳಿಕ ಈ ಹೋರಾಟ ದೇಶಾದ್ಯಂತ ಹರಡಿತು. ಈಗ ಪ್ರತಿಭಟನೆಗಳು ಮತ್ತಷ್ಟು ವಿಸ್ತಾರಗೊಂಡಿದ್ದು, ಜೀವನ ವೆಚ್ಚದ ಏರಿಕೆ, ಪೆಟ್ರೋಲ್ ಕೊರತೆ ಮತ್ತು ಇಂಧನ ಬೆಲೆಯಿಂದ ಬೇಸತ್ತವರೂ ಪಾಲ್ಗೊಳ್ಳುತ್ತಿದ್ದಾರೆ. ಈ ಪ್ರತಿಭಟನೆಗಳು ಆಗಾಗ್ಗೆ ಗಲಭೆ, ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳಿಗೆ ತಿರುಗುತ್ತಿವೆ.
ಹಿಂಸಾಚಾರವನ್ನು 'ಯಾವುದೂ ಸಮರ್ಥಿಸುವುದಿಲ್ಲ' ಎಂದು ಕಳೆದ ವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರಾನ್ ಹೇಳಿದ್ದರು. ಸ್ಥಳೀಯ ಅಧಿಕಾರಿಗಳು ಅಗತ್ಯವೆಂದು ಪರಿಗಣಿಸಿದರೆ ಕೆಲವು ಬೀದಿ ಸಭೆಗಳನ್ನು ನಿಷೇಧಿಸಬಹುದು ಎಂದಿದ್ದರು. ಫ್ರೆಂಚ್ ಅಧಿಕಾರಿಗಳು ರಾತ್ರಿ ಕರ್ಫ್ಯೂಗಳನ್ನೂ ಘೋಷಿಸಿದ್ದಾರೆ.
ಆದರೆ, ಕಳೆದ ಶನಿವಾರ ಫ್ರಾನ್ಸ್, ಇಟಲಿ, ಸ್ಪೇನ್, ಬೆಲ್ಜಿಯಂ ಮತ್ತು ಪೋರ್ಚುಗಲ್ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಲಕ್ಷಾಂತರ ಪ್ರತಿಭಟನಾಕಾರರು ಪೂರ್ವಯೋಜಿತವಲ್ಲದ ಪ್ರತಿಭಟನೆಗಳಲ್ಲಿ ಭಾಗವಹಿಸಿದರು.
ಮಿಲಾನ್ನಲ್ಲಿ ವಾರಾಂತ್ಯದಲ್ಲಿ ಆರಂಭದಲ್ಲಿ ಶಾಂತಿಯುತವಾಗಿದ್ದ ಪ್ರತಿಭಟನೆಗಳು ಬಳಿಕ ಗಲಭೆಗೆ ತಿರುಗಿದವು. ಮುಖ್ಯವಾಗಿ ಯುವಕರ ಗುಂಪುಗಳು ಅಂಗಡಿಗಳನ್ನು ಲೂಟಿ ಮಾಡಿದವು, ಕಿಟಕಿಗಳನ್ನು ಒಡೆದವು ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆಸಿದವು. ಮುಖವಾಡ ಧರಿಸಿದ್ದ ಪ್ರತಿಭಟನಾಕಾರರು ಗಲಭೆ ನಿಯಂತ್ರಣ ಪೊಲೀಸರ ಮೇಲೆ ಕಲ್ಲು, ಇಟ್ಟಿಗೆ ಮತ್ತು ಇತರ ವಸ್ತುಗಳನ್ನು ಎಸೆದರು. ಬ್ಯಾರಿಕೇಡ್ಗಳಿಗೂ ಬೆಂಕಿ ಹಚ್ಚಿದರು.
ಇಟಲಿಯ ಬೊಲೊಗ್ನಾ ಮತ್ತು ಟುರಿನ್ ನಗರಗಳಲ್ಲೂ ಗಲಭೆಗಳು ವರದಿಯಾಗಿವೆ.
ಫ್ರಾನ್ಸ್ ಮತ್ತು ಇಟಲಿ ಎರಡರಲ್ಲೂ ಪ್ರತಿಭಟನೆಗಳಿಂದ ಉಂಟಾಗಿರುವ ಹಾನಿಯ ಅಂದಾಜು ವೆಚ್ಚದ ಕುರಿತು ಅಧಿಕೃತ ಅಂಕಿ-ಅಂಶಗಳು ಇನ್ನೂ ಪ್ರಕಟವಾಗಿಲ್ಲ.
*ಇಟಲಿ ಏನು ಘೋಷಿಸಿದೆ?
ಮಂಗಳವಾರ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸರ್ಕಾರವು ಈ ಅಶಾಂತಿಗೆ ಪ್ರತಿಕ್ರಿಯೆಯಾಗಿ ಹಲವು ಕ್ರಮಗಳನ್ನು ಅನುಮೋದಿಸಿತು. ಇದರಡಿ ವರ್ಷದ ಅಂತ್ಯದವರೆಗೆ ಮಿಲಾನ್ಗೆ 500 ಸೈನಿಕರನ್ನು ಕಳುಹಿಸುವುದು ಮತ್ತು ದರೋಡೆ ಹಾಗೂ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಮಕ್ಕಳ ಪೋಷಕರ ಆರ್ಥಿಕ ಜವಾಬ್ದಾರಿಯನ್ನು ಹೆಚ್ಚಿಸುವುದು ಸೇರಿದೆ.
ಹೊಸ ನಿಯಮಗಳ ಪ್ರಕಾರ, ಪ್ರತಿಭಟನೆಗಳ ಸಂದರ್ಭದಲ್ಲಿ ಕನಿಷ್ಠ ಐದು ಜನರ ಗುಂಪಿನಲ್ಲಿ ಭಾಗವಹಿಸಿ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುವವರು ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 20,000 ಯುರೋ (22,460 ಡಾಲರ್) ದಂಡವನ್ನು ಎದುರಿಸಬೇಕಾಗುತ್ತದೆ.
14ರಿಂದ 18 ವರ್ಷ ವಯಸ್ಸಿನ ಪ್ರತಿಭಟನಾಕಾರರು ಅಪರಾಧ ಎಸಗದಿದ್ದರೂ, ಅವರು ಅಪಾಯ ಉಂಟುಮಾಡುತ್ತಾರೆ ಎಂಬುದಕ್ಕೆ ಸಾಕ್ಷ್ಯವಿದ್ದರೆ ಅವರನ್ನು ಆಡಳಿತಾತ್ಮಕ ಬಂಧನಕ್ಕೆ ಒಳಪಡಿಸಬಹುದು. ಈ ಮೂಲಕ ಈ ಹಿಂದೆ ವಯಸ್ಕರಿಗೆ ಮಾತ್ರ ಅನ್ವಯಿಸುತ್ತಿದ್ದ ಅಧಿಕಾರವನ್ನು ವಿಸ್ತರಿಸಲಾಗಿದೆ.
'ನೀವು ಹಾಳು ಮಾಡಿದರೆ, ನೀವೇ ಖರೀದಿಸಿ' (You break it, you buy it) ಎಂಬ ನುಡಿಗಟ್ಟನ್ನು ಒಳಗೊಂಡಿರುವ ಈ ತೀರ್ಪಿನ ಭಾಗವಾಗಿ, ಮಕ್ಕಳಿಂದ ಉಂಟಾಗುವ ಕ್ರಿಮಿನಲ್ ಹಾನಿಗೆ ಪೋಷಕರನ್ನು ಜವಾಬ್ದಾರರನ್ನಾಗಿ ಮಾಡುವ ಕಾನೂನನ್ನು ಇಟಲಿ ಮತ್ತಷ್ಟು ಬಲಪಡಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳು ಅಥವಾ ತಮ್ಮೊಂದಿಗೆ ವಾಸಿಸುವ ಪಾಲನೆಗೆ ಒಳಪಟ್ಟ ವ್ಯಕ್ತಿಗಳು ಎಸಗುವ 'ಕಾನೂನುಬಾಹಿರ ಕೃತ್ಯಗಳಿಂದ' ಉಂಟಾಗುವ ಹಾನಿಗೆ ಪೋಷಕರು ಮತ್ತು ರಕ್ಷಕರು ಜವಾಬ್ದಾರರಾಗಿರುತ್ತಾರೆ ಎಂದು ಇಟಲಿಯ ಸಿವಿಲ್ ಕೋಡ್ನ 2048ನೇ ವಿಧಿ ಈಗಾಗಲೇ ಹೇಳುತ್ತದೆ. ಇದೇ ನಿಯಮ ದತ್ತು ಪೋಷಕರಿಗೂ ಅನ್ವಯಿಸುತ್ತದೆ.
ಇಟಲಿಯಲ್ಲಿ ಅಧಿಕಾರಿಗಳು ಆಸ್ತಿ ಮತ್ತು ವೇತನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಈ ಕಾನೂನುಗಳನ್ನು ಜಾರಿಗೊಳಿಸಬಹುದು.
ಹೊಸ ಕ್ರಮವು ಪೋಷಕರಿಗೆ ನೇರವಾಗಿ ದಂಡ ವಿಧಿಸಲು ಅಥವಾ ಉಂಟಾದ ನಷ್ಟಕ್ಕೆ ಪರಿಹಾರ ಪಡೆಯಲು ಅವರ ಆಸ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಕ್ಕೆ ಅವಕಾಶ ನೀಡುತ್ತದೆ. ಕುಟುಂಬಕ್ಕೆ ದೊರೆಯುವ ಸಾರ್ವಜನಿಕ ಸಬ್ಸಿಡಿಗಳಿಂದಲೂ ಪರಿಹಾರದ ಮೊತ್ತವನ್ನು ವಸೂಲಿ ಮಾಡಬಹುದು.
ಫ್ರಾನ್ಸ್ ನಲ್ಲಿ ಪರಿಸ್ಥಿತಿ ಹೇಗಿದೆ?
ಫ್ರೆಂಚ್ ಸಿವಿಲ್ ಕೋಡ್ನ 1242ನೇ ವಿಧಿಯ ಪ್ರಕಾರ, ತಮ್ಮ ಮಕ್ಕಳೊಂದಿಗೆ ವಾಸಿಸುವ ಮತ್ತು ಅವರ ಮೇಲೆ ಪಾಲಕ ಅಧಿಕಾರ ಹೊಂದಿರುವ ಪೋಷಕರು, ಮಕ್ಕಳು ಉಂಟುಮಾಡುವ ಹಾನಿಗೆ ಸಿವಿಲ್ ಹೊಣೆಗಾರಿಕೆ ಹೊಂದಿರುತ್ತಾರೆ.
'ಪೋಷಕರು, ಪಾಲಕ ಅಧಿಕಾರ ಹೊಂದಿರುವವರಾಗಿ, ತಮ್ಮ ಅಪ್ರಾಪ್ತ ಮಕ್ಕಳು ಉಂಟುಮಾಡುವ ಹಾನಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಜವಾಬ್ದಾರರಾಗಿರುತ್ತಾರೆ. ಆದರೆ, ಆಡಳಿತಾತ್ಮಕ ಅಥವಾ ನ್ಯಾಯಾಂಗ ನಿರ್ಧಾರದ ಮೂಲಕ ಮಕ್ಕಳನ್ನು ಮೂರನೇ ವ್ಯಕ್ತಿಯ ವಶಕ್ಕೆ ಒಪ್ಪಿಸಿದ ಸಂದರ್ಭಗಳು ಇದಕ್ಕೆ ಹೊರತಾಗಿವೆ' ಎಂದು ಕಾನೂನು ಹೇಳುತ್ತದೆ.
ಕಳೆದ ವರ್ಷ, ಯುವ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಪೋಷಕರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ 1242ನೇ ವಿಧಿಗೆ ತಿದ್ದುಪಡಿ ತರಲಾಯಿತು. ಸಿವಿಲ್ ಹೊಣೆಗಾರಿಕೆ ಅನ್ವಯಿಸಲು ಪೋಷಕರು ಮಕ್ಕಳೊಂದಿಗೆ ವಾಸಿಸುತ್ತಿರಬೇಕೆಂಬ ಷರತ್ತನ್ನು ಈ ತಿದ್ದುಪಡಿ ತೆಗೆದುಹಾಕಿತು.
ಫ್ರಾನ್ಸ್ನಲ್ಲಿ ಮಕ್ಕಳು ಉಂಟುಮಾಡುವ ಹಾನಿಗೆ ಪೋಷಕರಿಂದ ಪರಿಹಾರ ವಸೂಲಿ ಮಾಡಲು ಸಿವಿಲ್ ಪ್ರಕ್ರಿಯೆಗಳನ್ನು ಬಳಸಬಹುದು. ಪಾಲಿಸಿ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿ, ಗೃಹ ವಿಮೆಗೆ ಸಂಬಂಧಿಸಿದ ಸಿವಿಲ್ ಹೊಣೆಗಾರಿಕೆ ವಿಮೆಯಡಿ ಪರಿಹಾರ ದೊರೆಯದಿದ್ದರೆ, ಪೋಷಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದೂ ಇದರಲ್ಲಿ ಸೇರಿದೆ.
ಶುಕ್ರವಾರ ಫ್ರೆಂಚ್ ರೇಡಿಯೊ ಕೇಂದ್ರ RFI ವರದಿ ಮಾಡಿದಂತೆ, ಹಿಂಸಾತ್ಮಕ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಫ್ರಾನ್ಸ್ ಸರ್ಕಾರವು 'ಗಲಭೆಕೋರರೇ ಹಣ ಪಾವತಿಸಬೇಕು' ಎಂಬ ಹೊಸ ಮಸೂದೆಯನ್ನು ಪ್ರಸ್ತಾಪಿಸುತ್ತಿದೆ.
ಅಕ್ಟೋಬರ್ 27ರಂದು ಈ ಕರಡು ಮಸೂದೆಯ ಕುರಿತು ಸರ್ಕಾರ ಚರ್ಚೆ ನಡೆಸಲು ನಿಗದಿಪಡಿಸಲಾಗಿದೆ.
ಈ ಕಾನೂನು ಜಾರಿಗೆ ಬಂದರೆ, ವಿಧ್ವಂಸಕ ಕೃತ್ಯಗಳಿಗೆ ಕಾರಣರೆಂದು ಗುರುತಿಸಲ್ಪಟ್ಟವರು 10,000 ಯುರೋಗಳವರೆಗೆ (11,200 ಡಾಲರ್) ಪರಿಹಾರ ಪಾವತಿಸಬೇಕಾಗಬಹುದು. ಅಪ್ರಾಪ್ತ ವಯಸ್ಕರಿಂದ ಕ್ರಿಮಿನಲ್ ಹಾನಿ ಸಂಭವಿಸಿದರೆ ಅವರ ಪೋಷಕರನ್ನು ಜವಾಬ್ದಾರರನ್ನಾಗಿ ಮಾಡಬಹುದು.
ಈ ಮಸೂದೆಯ ಮತ್ತೊಂದು ನಿಬಂಧನೆಯು ಸಾಮೂಹಿಕ ಸಿವಿಲ್ ಹೊಣೆಗಾರಿಕೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇದರಡಿ, ಹಾನಿಯನ್ನು ನೇರವಾಗಿ ಉಂಟುಮಾಡದಿದ್ದರೂ, ಹಾನಿಗೆ ಕಾರಣವಾದ ಗುಂಪಿನಲ್ಲಿರುವ ವ್ಯಕ್ತಿಯೂ ಹಾನಿ ಮಾಡಿದವರಷ್ಟೇ ಹಣಕಾಸಿನ ಹೊಣೆಗಾರಿಕೆ ಹೊರಬೇಕಾಗಬಹುದು ಎಂದು RFI ವರದಿ ಮಾಡಿದೆ.
ಪ್ರತಿಭಟನೆಗಳಿಂದ ಉಂಟಾಗುವ ಹಾನಿಗೆ ತೆರಿಗೆದಾರರು ಹಣ ಪಾವತಿಸದಂತೆ ತಡೆಯಲು ಈ ಕಾನೂನು 'ಅತ್ಯಂತ ಅವಶ್ಯಕ' ಎಂದು ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಹೇಳಿದ್ದಾರೆ.
ಇದೇ ರೀತಿಯ ಕಾನೂನುಗಳು ಬೇರೆ ದೇಶಗಳಲ್ಲಿವೆಯೇ?
ಮಕ್ಕಳು ಉಂಟುಮಾಡುವ ಹಾನಿಗೆ ಇತರ ಕೆಲವು ದೇಶಗಳೂ ಪೋಷಕರನ್ನು ಆರ್ಥಿಕವಾಗಿ ಜವಾಬ್ದಾರರನ್ನಾಗಿ ಮಾಡುತ್ತವೆ.
ಉದಾಹರಣೆಗೆ, ಸ್ವೀಡನ್ನಲ್ಲಿ ಅಪರಾಧ ಎಸಗುವ ಮಗುವಿನಿಂದ ಉಂಟಾಗುವ ನಿರ್ದಿಷ್ಟ ಗಾಯಗಳು ಅಥವಾ ಆಸ್ತಿ ಹಾನಿಗೆ ಸಂಬಂಧಿಸಿದಂತೆ, ಕಾನೂನಿನ ಷರತ್ತುಗಳು ಮತ್ತು ಮಿತಿಗಳಿಗೆ ಒಳಪಟ್ಟು ಪೋಷಕರು ಅಥವಾ ಕಾನೂನುಬದ್ಧ ರಕ್ಷಕರನ್ನು ಆರ್ಥಿಕವಾಗಿ ಜವಾಬ್ದಾರರನ್ನಾಗಿ ಮಾಡಬಹುದು.
ಅಮೆರಿಕದಲ್ಲಿ, ಆಯಾ ರಾಜ್ಯಗಳ ಕಾನೂನುಗಳಲ್ಲಿರುವ ಷರತ್ತುಗಳು ಮತ್ತು ಮಿತಿಗಳಿಗೆ ಒಳಪಟ್ಟು, ಅಪ್ರಾಪ್ತ ವಯಸ್ಕರು ಸಾರ್ವಜನಿಕ ಆಸ್ತಿ, ವ್ಯಾಪಾರ ಮಳಿಗೆಗಳು ಅಥವಾ ವಾಹನಗಳನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದರೆ, ಸಂತ್ರಸ್ತರು ಅಥವಾ ಸ್ಥಳೀಯ ಸರಕಾರವು ಸಿವಿಲ್ ನ್ಯಾಯಾಲಯದಲ್ಲಿ ಪೋಷಕರ ವಿರುದ್ಧ ಮೊಕದ್ದಮೆ ಹೂಡಬಹುದು. ಪೋಷಕರ ಹೊಣೆಗಾರಿಕೆಗೆ ಸಂಬಂಧಿಸಿದ ಕಾನೂನುಗಳು ಇದಕ್ಕೆ ಅವಕಾಶ ಕಲ್ಪಿಸುತ್ತವೆ.
ಸೌಜನ್ಯ: Aljazeera.com






