ಫಿಟ್ನೆಸ್ ಗೆ ಬಳಸುವ ʼಸಪ್ಲಿಮೆಂಟ್ಸ್ʼ ಯಕೃತ್ತಿಗೆ ಹಾನಿಕರವೆ? ವೈದ್ಯರ ಸಲಹೆ ಇಲ್ಲಿದೆ

ಸಾಂದರ್ಭಿಕ ಚಿತ್ರ | Photo Credit : magnific.com
ಯಾವುದೇ ಇತ್ತೀಚಿಗಿನ ಫಿಟ್ನೆಸ್ ಸಪ್ಲಿಮೆಂಟ್ಸ್ (ಫೂರಕ ಔಷಧಿ) ಸೇವಿಸಿದರೂ ಯಕೃತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯ ಸದಾ ಇರುತ್ತದೆ.
ಸಾಮಾಜಿಕ ಮಾಧ್ಯಮ ಫೀಡ್ ಅನ್ನು ಸ್ಕ್ರಾಲ್ ಮಾಡುವಾಗ ಅನೇಕ ಆರೋಗ್ಯ ಸಲಹೆಗಳು ಸಿಗುತ್ತವೆ. ಪ್ರೊಟೀನ್ ಮೂಲಗಳಿಂದ ಆರಂಭಿಸಿ ಮಾರುಕಟ್ಟೆಯಲ್ಲಿ ಸಿಗುವ ಪೂರಕ ಔಷಧಿಗಳವರೆಗೆ ಫಿಟ್ ಆಗಿರುವುದು ಮತ್ತು ತೂಕ ಇಳಿಸುವುದರ ಬಗ್ಗೆ ಜನರಲ್ಲಿರುವ ಕ್ರೇಝ್ ನಡುವೆ ಸುರಕ್ಷತೆಯ ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ.
ನಿಮ್ಮ ದೇಹಕ್ಕೆ ನೀವು ವಿಶೇಷವಾಗಿ ಆಹಾರದ ಮೂಲಕ ಏನು ನೀಡುತ್ತೀರೋ ಅದು ನಿಮ್ಮ ಆಂತರಿಕ ಅಂಗಗಳ ಮೇಲೂ ನೇರ ಪರಿಣಾಮ ಬೀರುತ್ತದೆ. ಯಾವುದೇ ಇತ್ತೀಚಿಗಿನ ಫಿಟ್ನೆಸ್ ಫೂರಕ ಔಷಧಿ ಸೇವಿಸಿದರೂ ಯಕೃತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯ ಸದಾ ಇರುತ್ತದೆ. ಯಕೃತ್ತು ದೇಹದ ಅತ್ಯಂತ ನಿರ್ಣಾಯಕ ಅಂಗವಾಗಿದ್ದು, ಚಯಾಪಯ, ಡಿಟಾಕ್ಸಿಫಿಕೇಶನ್ ಮತ್ತು ಜೀರ್ಣಕ್ರಿಯೆ ಸೇರಿದಂತೆ 500ಕ್ಕೂ ಅಧಿಕ ಅಗತ್ಯ ಕಾರ್ಯಗಳಿಗೆ ಕಾರಣವಾಗಿದೆ.
ಯಲಹಂಕದ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ಸಲಹೆಗಾರ ಡಾ ಯಶವಂತ್ ಎಚ್ ಎಸ್ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಯಾವುದೇ ಆಹಾರ ಅಥವಾ ಪೂರಕಗಳನ್ನು ಸೇವಿಸಿದರೂ ಯಕೃತ್ತಿನಿಂದಲೇ ಚಯಾಪಚಯಗೊಳ್ಳುತ್ತವೆ ಎಂದು ಎಚ್ಚರಿಸಿದ್ದಾರೆ. ಅವರ ಪ್ರಕಾರ, ಸರಿಯಾದ ಪರಿಗಣನೆಯಿಲ್ಲದೆ ಸ್ವೀಕರಿಸಿದಲ್ಲಿ ಯಕೃತ್ತಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಯಕೃತ್ತಿನ ಮೇಲೆ ಒತ್ತಡ ಹೆಚ್ಚಿಸಬಹುದು ಮತ್ತು ಗಂಭೀರ ತೊಡಕು ಉಂಟು ಮಾಡಬಹುದು.
ಬಹುತೇಕ ಪೂರಕ ಔಷಧಿಗಳನ್ನು ಸಾಮಾನ್ಯ ಔಷಧಿಗಳಂತೆ ನಿಯಂತ್ರಿಸಲಾಗಿರುವುದಿಲ್ಲ. ಅಂದರೆ ಅವುಗಳ ಪದಾರ್ಥಗಳನ್ನು ಸಂಪೂರ್ಣವಾಗಿ ಅಥವಾ ಬಹಿರಂಗಪಡಿಸದೇ ಇರಬಹುದು. ಅವು ಯಕೃತ್ತಿನ ಮೇಲೆ ಒತ್ತಡವನ್ನು ಬೀರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಯಾವ ವಿಚಾರಗಳ ಬಗ್ಗೆ ಜಾಗರೂಕತೆ ವಹಿಸಬೇಕು?
1. ಅತಿಯಾದ ಪ್ರೊಟೀನ್ ಸೇವನೆ
ಪ್ರೊಟೀನ್ ಸೇವನೆ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಸ್ನಾಯುಗಳ ಬೆಳವಣಿಗೆ ಮತ್ತು ರಿಪೇರಿಗೆ ಪ್ರೊಟೀನ್ ಮುಖ್ಯವಾದರೂ ಹೆಚ್ಚು ಸೇವಿಸುವುದರಿಂದ ಒಟ್ಟು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಪ್ರೊಟೀನ್ ಮೂಲ ಯಾವುದು ಎನ್ನುವುದು ಮುಖ್ಯವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಅತಿಯಾದ ಪ್ರೊಟೀನ್ ಮತ್ತು ಮುಖ್ಯವಾಗಿ ಪೂರಕಗಳಿಂದ ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ದೇಹಕ್ಕೆ ಅದು ಅಗತ್ಯವಿಲ್ಲದಿದ್ದರೆ ಕಾಲಾಂತರದಲ್ಲಿ ಚಯಾಪಚಯ ಒತ್ತಡ ಉಂಟು ಮಾಡಬಹುದು. ಹೀಗಾಗಿ ಪೂರಕಗಳ ಅಗತ್ಯವಿಲ್ಲದೆ ಇದ್ದರೆ ಮಿತಿಗೊಳಿಸುವುದು ಉತ್ತಮ. ಔಷಧಿಗಳ ಬದಲಾಗಿ ನೈಸರ್ಗಿಕ ಪ್ರೊಟೀನ್ ಮೂಲ ಬಳಸುವುದು ಉತ್ತಮ ಎಂದು ಯಶವಂತ್ ಹೇಳಿದ್ದಾರೆ.
2. ಕೊಬ್ಬು ಕರಗಿಸುವ ಪೂರಕ ಔಷಧಿಗಳು
ಕೊಬ್ಬು ಕರಗಿಸುವ ಮತ್ತು ವ್ಯಾಯಾಮಕ್ಕೂ ಮುನ್ನ ಸೇವಿಸುವ ಪೂರಕಗಳು ತ್ವರಿತ ಫಲಿತಾಂಶಗಳನ್ನು ಒದಗಿಸುತ್ತವೆ ಮತ್ತು ವ್ಯಾಯಾಮದ ಕಾರ್ಯಕ್ಷಮತೆ ಸುಧಾರಿಸುತ್ತವೆ ಎಂದು ಆಕರ್ಷಿತರಾಗುತ್ತಾರೆ. ಆದರೆ ಅದರಿಂದ ಯಕೃತ್ತಿನ ಮೇಲೆ ಒತ್ತಡ ಬೀಳಬಹುದು. ಕೆಲವು ಪದಾರ್ಥಗಳನ್ನು ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಇತರ ಉತ್ಪನ್ನಗಳ ಜೊತೆಗೆ ಸೇವಿಸಿದಾಗ ಯೃಕೃತ್ತಿನ ಉರಿಯೂತ ಮತ್ತು ವಿಷತ್ವಕ್ಕೆ ಸಂಬಂಧಿಸಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
3. ಅನಿಯಂತ್ರಿತ ಪೂರಕ ಔಷಧಿಗಳು
ತ್ವರಿತ ಫಲಿತಾಂಶ ಪಡೆಯುವ ಭರವಸೆಯಲ್ಲಿ ಬಹು ಪೂರಕಗಳನ್ನು ಮನೆಯಲ್ಲಿ ಜೋಡಿಸಿಡುವ ಪ್ರವೃತ್ತಿ ಹೆಚ್ಚುತ್ತಿದೆ. ಫಿಟ್ನೆಸ್ ನೆಪದಲ್ಲಿ ವೈದ್ಯರ ಸಲಹೆಗಳಿಲ್ಲದೆ ಬಹಳಷ್ಟು ಪೂರಕ ಔಷಧಿಗಳನ್ನು ಸೇವಿಸಲಾಗುತ್ತದೆ. ಇವುಗಳ ಮಿಶ್ರಣ ವಿಶೇಷವಾಗಿ ಕೆಟ್ಟ ಕಂಪನಿಗಳಿಂದ ಬಂದಾಗ ಯೃಕೃತ್ತಿನ ಗಾಯದ ಸಾಧ್ಯತೆ ಹೆಚ್ಚಿಸಬಹುದು.
4. ಪೂರಕ ಔಷಧಿ ಸರಿಯಿಲ್ಲ ಎಂದು ತಿಳಿಯುವುದು ಹೇಗೆ?
ಯೃಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಬಹುದು. ಕೆಲವು ಎಚ್ಚರಿಕೆ ಚಿಹ್ನೆಗಳು ಇತರ ದೈನಂದಿನ ಆರೋಗ್ಯ ಸಮಸ್ಯೆಗಳನ್ನು ಅತಿಕ್ರಮಿಸಬಹುದು ಮತ್ತು ನಿರ್ಲಕ್ಷಿಸುವುದು ತುಂಬಾ ಸುಲಭ. ಆದರೆ ಆರಂಭಿಕ ಹಂತದಲ್ಲಿ ಗೋಚರ ಲಕ್ಷಣಗಳು ಹೊಂದಿರದೆ ಇರುವುದರಿಂದ ಜಾಗರೂಕತೆ ವಹಿಸಬೇಕಾಗುತ್ತದೆ.
• ನಿರಂತರ ಆಯಾಸ
• ತಿನ್ನುವ ಆಸೆ ಇರುವುದಿಲ್ಲ
• ಅನಾರೋಗ್ಯ ಅಥವಾ ಹೊಟ್ಟೆ ನೋವು
• ಹಳದಿ ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು
• ಕಪ್ಪು ಮೂತ್ರ ಅಥವಾ ತೂಕದಲ್ಲಿ ವ್ಯತ್ಯಾಸ
ಅಂತಿಮವಾಗಿ ವೈದ್ಯರ ಪ್ರಕಾರ ಪೂರಕ ಔಷಧಿಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಮತ್ತೊಬ್ಬರು ಬಳಸುತ್ತಾರೆ ಎಂದು ಉತ್ಪನ್ನಗಳನ್ನು ಅನಗತ್ಯ ಅಥವಾ ವಿನಾ ಕಾರಣ ಬಳಸಬಾರದು. ಆರೋಗ್ಯ ಅಥವಾ ಪೌಷ್ಠಿಕಾಂಶದ ಆದ್ಯತೆ ನೀಡುವಾಗ ಆಹಾರದಲ್ಲಿ ಬದಲಾವಣೆ ತರಬೇಕೇ ವಿನಾ ಪೂರಕ ಔಷಧಿಗಳನ್ನಲ್ಲ.
ಸೂಚನೆ: ಈ ಲೇಖನವನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆಯೇ ವಿನಾ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಪ್ರಶ್ನೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಿ.
ಕೃಪೆ: hindustantimes.com






