ಹಿಮಾಲಯದ ಒಡಲು ಕೊರೆಯುವ ಯೋಜನೆಗಳಲ್ಲಿ ಎಚ್ಚರ ತಪ್ಪಲಾಗುತ್ತಿದೆಯೇ?

Photo: PTI
ಉತ್ತರಕಾಶಿಯ ಬಾರ್ಕೋಟ್-ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ಎದುರಿನ ಆತಂಕದ ಇನ್ನೂ ಸ್ಥಿತಿ ಕೊನೆಗೊಂಡಿಲ್ಲ. ಪ್ರಧಾನ ಮಂತ್ರಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ನೇತೃತ್ವದ ನಿಯೋಗವು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿತ್ತು. ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರನ್ನು ಸ್ಥಳಾಂತರಿಸಲು ಎಲ್ಲಾ ಸಂಘಟಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕಳೆದ ವಾರ ಸರಕಾರ ಭರವಸೆ ನೀಡಿತ್ತು. ಉನ್ನತ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದ ಖುಲ್ಬೆ, ಕಾರ್ಮಿಕರನ್ನು ರಕ್ಷಿಸಲು ಐದು, ಆರು ಅಥವಾ ಏಳು ದಿನಗಳು ತೆಗೆದುಕೊಳ್ಳಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ನಾವು ಒಂದೇ ಯೋಜನೆಗೆ ಬದಲಾಗಿ ಐದು ಅಂಶಗಳ ಕಾರ್ಯತಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದರು. ಪರ್ವತವನ್ನು ವಿವಿಧ ಸ್ಥಳಗಳಲ್ಲಿ ಲಂಬವಾಗಿ ಮತ್ತು ಅಡ್ಡಲಾಗಿ ಕೊರೆಯಲಾಗುತ್ತದೆ. ನೆದರ್ಲ್ಯಾಂಡ್ಸ್ನಿಂದ ಯಂತ್ರವನ್ನು ತರಲಾಗಿದೆ. ಇದು ಬೆಟ್ಟವನ್ನು ಅಡ್ಡಲಾಗಿ ಕೊರೆಯಲು ಸಹಾಯ ಮಾಡುತ್ತದೆ ಎಂದು ಅವರು ವಿವರ ನೀಡಿದ್ದರು.
ಉತ್ತರಾಖಂಡದ ಚಾರ್ ಧಾಮ್ ಮಹಾಮಾರ್ಗ ಪರಿಯೋಜನೆಯ ಭಾಗವಾಗಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ ನವೆಂಬರ್ 12ರ ಮುಂಜಾನೆ ಕುಸಿಯಿತು. ಕಾರ್ಮಿಕರ ಜೀವನ್ಮರಣದ ಪ್ರಶ್ನೆ ಎದುರಾಯಿತು. ಕೆಲಸಗಾರರಿಗೆ ಆಹಾರ, ಆಮ್ಲಜನಕ ಮತ್ತು ನೀರನ್ನು ಪೂರೈಸಲು ಪೈಪ್ಗಳನ್ನು ಅಳವಡಿಸಲಾಗಿದ್ದು, ಸರಕಾರವು ಯಂತ್ರಗಳನ್ನು ಬಳಸಿ ಅವರನ್ನು ಹೊರತರಲು ಯತ್ನಿಸಿದೆ. ಅಮೆರಿಕನ್ ಆಗರ್ ಡ್ರಿಲ್ ಅಂತಹ, 70 ಮೀಟರ್ ಬಂಡೆಯನ್ನು ಕತ್ತರಿಸಬಲ್ಲ ಯಂತ್ರಗಳನ್ನೂ ಬಳಸಲಾಯಿತು. ಆದರೆ ಈ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ನವೆಂಬರ್ 18ರಂದು ಕೊರೆಯುವಿಕೆಯನ್ನು ಕೂಡಾ ನಿಲ್ಲಿಸಲಾಗಿತ್ತು.
ಹಾಗಾಗಿ, ಸರಕಾರದ ಭರವಸೆಯ ಹೊರತಾಗಿಯೂ, ಸಿಕ್ಕಿಹಾಕಿಕೊಂಡಿರುವವರ ಸಂಬಂಧಿಕರು ಆತಂಕಗೊಳ್ಳುವಂತಾಗಿತ್ತು. ಇದು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಮುಖ್ಯವಾಗಿ, ಸಿಕ್ಕಿಬಿದ್ದ ಕಾರ್ಮಿಕರಿಗೆ ಏಕೆ ಹೊರಬರುವ ದಾರಿಯಿರಲಿಲ್ಲ? ಅದರ ನಿರ್ಮಾಣದ ಸಮಯದಲ್ಲಿ ಯಾವ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಯಿತು? ಎಂಬ ಪ್ರಶ್ನೆಗಳಿದ್ದವು.
ತಜ್ಞರು ಈಗ ರಾಜ್ಯದಲ್ಲಿನ ಎಲ್ಲಾ ಹೊಸ ಮತ್ತು ನಡೆಯುತ್ತಿರುವ ಯೋಜನೆಗಳ ವಿಚಾರದಲ್ಲಿ ಸುರಕ್ಷತಾ ಕ್ರಮಗಳಿಗೆ ಒತ್ತುಕೊಡಲು ಕರೆ ನೀಡಿದ್ದಾರೆ.
ಈಗಿನ ಅವಘಡದಲ್ಲಿ ತಪ್ಪಾದದ್ದು ಎಲ್ಲಿ? ಅಪಾಯ ಸಂಭವಿಸಿದಾಗ ಪಾರಾಗುವ ದಾರಿ ಎಲ್ಲಿತ್ತು? ಚಾರ್ ಧಾಮ್ ಮಹಾಮಾರ್ಗ ಪರಿಯೋಜನೆ ಉತ್ತರಾಖಂಡ ಸರಕಾರದ ಕನಸಿನ ಸರ್ವಋತು ಹೆದ್ದಾರಿ ಯೋಜನೆಯಾಗಿದೆ. ಡಿಸೆಂಬರ್ 2016ರಲ್ಲಿ 12,000 ಕೋಟಿ ರೂ. ವೆಚ್ಚದಲ್ಲಿ ಇದನ್ನು ಉದ್ಘಾಟಿಸಲಾಯಿತು. ಬಾರ್ಕೋಟ್-ಸಿಲ್ಕ್ಯಾರಾ ಸುರಂಗ ಯೋಜನೆಯನ್ನು 2018ರಲ್ಲಿ ಘೋಷಿಸಲಾಯಿತು. 4.5 ಕಿಮೀ ಉದ್ದದ, ದ್ವಿಪಥದ, ಉಭಯದಿಕ್ಕಿನ ಈ ಸುರಂಗ, ಗಂಗೋತ್ರಿ ಮತ್ತು ಯಮುನೋತ್ರಿ ನಡುವಿನ ಅಂತರವನ್ನು ಸುಮಾರು 20 ಕಿಮೀ ಕಡಿಮೆ ಮಾಡುತ್ತದೆ. 1,383 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.
ಈ ಯೋಜನೆಯು ಸರಕಾರಿ ಸ್ವಾಮ್ಯದ ಕಂಪೆನಿಯಾದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಎನ್ಎಚ್ಐಡಿಸಿಎಲ್) ವ್ಯಾಪ್ತಿಯಲ್ಲಿದೆ. ಜೂನ್ 2018ರಲ್ಲಿ, ನಿಗಮವು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪೆನಿಯೊಂದಿಗೆ ಇಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣಕ್ಕಾಗಿ 853.79 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಮಹಾರಾಷ್ಟ್ರದಲ್ಲಿ ಸಮೃದ್ಧಿ ಎಕ್ಸ್ಪ್ರೆಸ್ವೇ ನಿರ್ಮಾಣದ ಉಪ ಗುತ್ತಿಗೆದಾರ ಕಂಪೆನಿಗಳಲ್ಲಿ ನವಯುಗ ಕೂಡ ಒಂದು. ಅಲ್ಲಿಯೂ ಆಗಸ್ಟ್ನಲ್ಲಿ ಕ್ರೇನ್ ಕುಸಿದು 17 ಜನರು ಸಾವನ್ನಪ್ಪಿದ್ದರು.
ಈಗಿನ ಬಿಕ್ಕಟ್ಟಿನಲ್ಲಿ, ನವೆಂಬರ್ 12 ರಂದು ಮುಂಜಾನೆ 5:30ಕ್ಕೆ ಕುಸಿತ ಸಂಭವಿಸಿದಾಗ ಕಾರ್ಮಿಕರು ಮರುಸಂಪರ್ಕ ಕಾಮಗಾರಿಯಲ್ಲಿ ತೊಡಗಿದ್ದರು ಎಂದು ಸರಕಾರದ ಪ್ರಕಟಣೆ ಹೇಳುತ್ತದೆ. ಇದು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ.
ಉತ್ತರಾಖಂಡದ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾನಿಲಯದ ಭೂವಿಜ್ಞಾನಿ ಮತ್ತು ಪರಿಸರ ವಿಜ್ಞಾನದ ಪ್ರಾಧ್ಯಾಪಕ ಎಸ್.ಪಿ. ಸತಿ ಪ್ರಕಾರ, ‘‘ನಿರ್ಮಾಣ ಕಂಪೆನಿಗಳು ತಮ್ಮ ಕೆಲಸದಲ್ಲಿ ಸ್ಫೋಟಕಗಳನ್ನು ಬಳಸುವುದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಆದರೂ, ಈ ಹಿಂದೆ ಪದೇ ಪದೇ ಇಂಥ ಉಲ್ಲಂಘನೆಗಳನ್ನು ನೋಡಿದ್ದೇವೆ. ಇಲ್ಲಿಯೂ ಹೀಗೆಯೇ ಆಗಿದೆ. ಈ ಬಗ್ಗೆ ತನಿಖೆಯಾಗಬೇಕು. ಭಾರೀ ಸ್ಫೋಟಕಗಳ ಬಳಕೆಯನ್ನು ತಳ್ಳಿಹಾಕಲಾಗದು.’’
ಸುರಂಗದೊಳಕ್ಕೆ ಪಾರಾಗುವ ದಾರಿ ಏಕಿರಲಿಲ್ಲ? ಬಹುಮುಖ್ಯವಾಗಿ, ಫೆಬ್ರವರಿ 2018ರಲ್ಲಿ ಸರಕಾರವು ಸುರಂಗ ಯೋಜನೆಯನ್ನು ಮಂಜೂರು ಮಾಡಿದಾಗ, ಅದು ಪಾರಾಗುವ ದಾರಿಯನ್ನು ಒಳಗೊಂಡಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿತ್ತು. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಮಾಜಿ ನಿರ್ದೇಶಕ ಪಿ.ಸಿ. ನವನಿ, ‘‘ತಪ್ಪಿಸಿಕೊಳ್ಳುವ ಮಾರ್ಗಗಳಿಲ್ಲದೆ ಇಂತಹ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ’’ ಎನ್ನುತ್ತಾರೆ. ಈಗ ಅಗತ್ಯವಿರುವಂತೆ, ಜೀವಗಳನ್ನು ಉಳಿಸಲು ಮತ್ತು ರಕ್ಷಣಾ ಕಾರ್ಯವನ್ನು ಸುಗಮಗೊಳಿಸಲು ಇಂಥ ಪಾರಾಗುವ ಮಾರ್ಗಗಳು ಬೇಕಾಗುತ್ತವೆ ಎನ್ನುತ್ತಾರೆ ಅವರು.
ಹಿಮಾಲಯದ ಸೂಕ್ಷ್ಮತೆ
ಯುರೋಪ್, ಚೀನಾ ಮತ್ತು ಅಮೆರಿಕದಂಥ ದೇಶಗಳಲ್ಲಿ ಸುರಂಗಗಳು ರಸ್ತೆ, ರೈಲು ಮತ್ತು ಜಲವಿದ್ಯುತ್ ಯೋಜನೆಗಳ ಅತ್ಯಗತ್ಯ ಭಾಗವಾಗುತ್ತಿವೆ. ಭಾರತದಲ್ಲಿಯೂ, ಅವು ಹಿಮಾಲಯದಾದ್ಯಂತ ಯೋಜನೆಗಳಲ್ಲಿ ಹೆಚ್ಚತೊಡಗಿವೆ. 16,000 ಕೋಟಿ ರೂ. ವೆಚ್ಚದ ಹೃಷಿಕೇಶ-ಕರ್ಣಪ್ರಯಾಗ ಯೋಜನೆಯು ಒಂದು ಡಜನ್ಗೂ ಹೆಚ್ಚು ಸುರಂಗಗಳನ್ನು ಒಳಗೊಂಡಿರುತ್ತದೆ, ಅವುಗಳಲ್ಲಿ ದೇಶದಲ್ಲೇ ಅತಿ ಉದ್ದದ 15 ಕಿ.ಮೀ. ಸುರಂಗವೂ ಒಂದಾಗಿದೆ.
ಆದರೆ ಹಿಮಾಲಯವು ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸರಿಯಾದ ಕಾಳಜಿ ಅತ್ಯಗತ್ಯ. ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್’ನ ಮಾಜಿ ನಿರ್ದೇಶಕರೂ ಆಗಿರುವ ನವನಿ, ‘‘ಯುರೋಪ್ ಅನೇಕ ದೊಡ್ಡ ಸುರಂಗಗಳನ್ನು ಹೊಂದಿದೆ. ಏಕೆಂದರೆ ಅದು ಕಡಿಮೆ ಟೆಕ್ಟೋನಿಕ್ ಚಟುವಟಿಕೆ ಮತ್ತು ಸ್ಥಿರವಾದ ಪರ್ವತಗಳನ್ನು ಹೊಂದಿವೆ. ಆದರೆ ನಾವು ಭೂತಾನ್, ನೇಪಾಳ, ಈಶಾನ್ಯ ಭಾರತ, ಉತ್ತರಾಖಂಡ ಮತ್ತು ಪಾಕಿಸ್ತಾನ ಸೇರಿದಂತೆ ಹಿಮಾಲಯ ಪ್ರದೇಶಗಳಲ್ಲಿ ಸುರಂಗಗಳನ್ನು ಮಾಡಿದ್ದೇವೆ. ನಾವು ಪ್ರಪಂಚದಾದ್ಯಂತ ಬಳಸುತ್ತಿರುವ ಅದೇ ತಂತ್ರಜ್ಞಾನವನ್ನು ಬಳಸುತ್ತೇವೆ ಆದರೆ ಭಾರತದಲ್ಲಿ ಇವೆಲ್ಲವೂ ನಿರ್ದಿಷ್ಟ ತಜ್ಞರ ನೇತೃತ್ವದಲ್ಲಿ ಆಗುತ್ತಿಲ್ಲ ಎನ್ನುತ್ತಾರೆ’’.
‘‘ಉದಾಹರಣೆಗೆ, ಈ ಯೋಜನೆಗಳಿಗೆ ಪರಿಣಿತ ಇಂಜಿನಿಯರಿಂಗ್ ಭೂವಿಜ್ಞಾನಿಗಳ ಮೇಲ್ವಿಚಾರಣೆಯ ಅಗತ್ಯವಿದೆ. ಆದರೆ ಆಗಾಗ ಯಾವುದೇ ಜ್ಞಾನವಿಲ್ಲದ ಗುತ್ತಿಗೆದಾರರು ಕೆಲಸವನ್ನು ನಿರ್ವಹಿಸುತ್ತಾರೆ. ಅವರು ಸಾಮಾನ್ಯವಾಗಿ ತಮ್ಮಖರ್ಚಿನ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಮತ್ತು ಅದರಿಂದ ಸಮಸ್ಯೆ ಪ್ರಾರಂಭವಾಗುತ್ತದೆ’’ ಎಂದು ನವನಿ ಹೇಳುತ್ತಾರೆ.
ಭೂವಿಜ್ಞಾನಿ ನವೀನ್ ಜುಯಲ್ ಅವರು ಅಹಮದಾಬಾದ್ನ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಹಿರಿಯ ವಿಜ್ಞಾನಿಯಾಗಿದ್ದು, ಚಾರ್ ಧಾಮ್ ಯೋಜನೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಸದಸ್ಯರಾಗಿದ್ದರು. ಅವರು ಹೇಳುವಂತೆ, ‘‘ಸುರಂಗವು ಕೆಲವು ರೀತಿಯಲ್ಲಿ ರಸ್ತೆಗಳಿಗಿಂತ ಸುರಕ್ಷಿತವಾಗಿದೆ. ಏಕೆಂದರೆ ಇದು ರಸ್ತೆಗಳನ್ನು ವಿಸ್ತರಿಸುವುದರಿಂದ ಉಂಟಾಗುವ ಅಸ್ಥಿರತೆಯ ಕಾರಣದಿಂದಾಗಿ ರಸ್ತೆಗಳ ನಿರ್ಮಾಣದ ಸಮಯದಲ್ಲಿ ಎದುರಿಸುತ್ತಿರುವ ಹಾನಿಯನ್ನು ತಪ್ಪಿಸುತ್ತದೆ.’’
ಆದರೂ ಹಿಮಾಲಯವು ಅಸ್ಥಿರವಾಗಿದೆ ಎಂಬುದು ಜುಯಲ್ ಅವರ ಆತಂಕ. ಹೀಗಾಗಿ, ಸುರಂಗ ಮಾರ್ಗದ ಮೊದಲು ಕಲ್ಲಿನ ದ್ರವ್ಯರಾಶಿಯ ವಿವರವಾದ ಅಧ್ಯಯನ ಅಗತ್ಯ ಎನ್ನುತ್ತಾರೆ ಅವರು.
‘‘ಕೆಲವು ಯೋಜನೆಗಳಲ್ಲಿ ಸರಿಯಾದ ಭೂವೈಜ್ಞಾನಿಕ ಮತ್ತು ಭೂತಾಂತ್ರಿಕ ಸಮೀಕ್ಷೆಯ ಅಗತ್ಯವಿದೆ. ಸರಿಯಾದ ಅಧ್ಯಯನವನ್ನು ಮಾಡಿದ್ದರೆ, ಈ ಪರ್ವತದಲ್ಲಿನ ಬಂಡೆಗಳ ದೌರ್ಬಲ್ಯದ ಬಗ್ಗೆ ನಮಗೆ ತಿಳಿಯುತ್ತದೆ ಎಂಬುದು ಸ್ಪಷ್ಟ’’ ಎನ್ನುತ್ತಾರೆ ಜುಯಲ್.
ಸುರಂಗದ ವ್ಯಾಸ ಮತ್ತು ಆಕಾರವು ಸುರಕ್ಷತೆಯ ಮೇಲೂ ಪರಿಣಾಮ ಬೀರಬಹುದು. ಬಾರ್ಕೋಟ್-ಸಿಲ್ಕ್ಯಾರಾ ಸುರಂಗವು 13 ಮೀಟರ್ ಅಗಲ ಮತ್ತು ಒಂಭತ್ತು ಮೀಟರ್ ಎತ್ತರವಿದೆ. ಜನರು ಸಾಮಾನ್ಯವಾಗಿ ಸುರಂಗದ ಉದ್ದದ ಬಗ್ಗೆ ಮಾತ್ರ ಯೋಚಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಆದರೆ ಆಕಾರ ಮತ್ತು ವ್ಯಾಸವನ್ನು ಸಹ ಗಮನಿಸಬೇಕಿರುವುದು ಮುಖ್ಯ. ಇದು ವೃತ್ತಾಕಾರದ ಸುರಂಗವೇ ಅಥವಾ ಕುದುರೆಗಾಡಿಯ ಆಕಾರದ್ದೆ? ಬಂಡೆ ಸ್ಥಿರವಾಗಿರಲಿ ಇಲ್ಲದಿರಲಿ, ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ನಾವು ನಿರಂತರವಾಗಿ ಗಮನಿಸುತ್ತಿರಬೇಕು. ಸುರಂಗದ ವ್ಯಾಸವು ಒಂದೇ ಆಗಿದೆಯೇ ಅಥವಾ ಕುಗ್ಗುತ್ತಿದೆಯೆ, ಉಪಕರಣಗಳು ಸರಿಯಾದ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಎಂಬುದನ್ನು ಗಮನಿಸಬೇಕಾಗುತ್ತದೆ. ಆದರೆ ಅಂತಹ ಸಣ್ಣ ಯೋಜನೆಗಳಲ್ಲಿ, ಈ ವಿವರಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಅವರ ಕಳವಳ.
ಸುರಕ್ಷತಾ ಅಂಶಗಳ ಭಾಗವಾಗಿ, ಪ್ರದೇಶದ ಜಲವಿಜ್ಞಾನದ ಬಗ್ಗೆಯೂ ಎಚ್ಚರಿಕೆಯ ಅಧ್ಯಯನದಂತಹ ಅಗತ್ಯ ಇದೆಯೆನ್ನುತ್ತಾರೆ ಅವರು. ಅಂತಹ ಸಮೀಕ್ಷೆ ಆಗದೇ ಇದ್ದಾಗ, ಕೊರೆಯುವ ವೇಳೆಯಲ್ಲಿ ನೀರಿನ ಮೂಲವೇ ಒಡೆದುಕೊಳ್ಳಬಹುದು. ಆಗ ಅದು ದುರಂತಕ್ಕೆ ಕಾರಣವಾಗುತ್ತದೆ. ಒಮ್ಮೆ ನೀರಿನ ಮೂಲ ಒಡೆದುಕೊಂಡಿತೆಂದರೆ, ಸುರಂಗದಿಂದ ನೀರು ಹೊರಬರಲು ಪ್ರಾರಂಭಿಸುತ್ತದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನೀರಿನ ಮೂಲಗಳನ್ನು ಖಾಲಿ ಮಾಡುತ್ತದೆ. ಆದರೆ ಅವು ದುರ್ಬಲವಾದ ಬಂಡೆಗಳಿಂದ ಮಾಡಲ್ಪಟ್ಟಿದ್ದರೆ ಛಾವಣಿ ಮತ್ತು ಪಕ್ಕದ ಗೋಡೆಗಳ ಮೇಲೆ ಕುಸಿಯಲು ಕಾರಣವಾಗಬಹುದು ಎನ್ನುತ್ತಾರೆ ಜುಯಲ್.
ಇದು ನಿರ್ಣಾಯಕವಾಗಿದೆ. ಏಕೆಂದರೆ ಬಂಡೆಯ ಸ್ವರೂಪ ಮತ್ತು ಸಾಮರ್ಥ್ಯವು ಯೋಜನೆಯ ಉದ್ದಕ್ಕೂ ಒಂದೇ ಆಗಿರುವುದಿಲ್ಲ. ಕೊರೆಯುವುದು ಮತ್ತು ಕತ್ತರಿಸುವ ರೀತಿಯಲ್ಲಿ ವಿವಿಧ ಹಂತಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆದರೆ ಯೋಜನೆಯನ್ನು ಬೇಗ ಪೂರ್ಣಗೊಳಿಸುವ ತರಾತುರಿಯಲ್ಲಿ ಈ ಮಾನದಂಡಗಳನ್ನು ಕಡೆಗಣಿಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತದೆ.
ಬಲವಾದ ಬಂಡೆಯನ್ನೇ ಕೊರೆದರೂ, ಹೆಚ್ಚು ವಿರೂಪಗೊಂಡ ದುರ್ಬಲ ವಲಯ ಕೂಡ ಅದರಲ್ಲಿರುತ್ತದೆ. ಕೊರೆಯುವಾಗ ದುರ್ಬಲ ವಲಯ ಎದುರಾದರೆ, ಆಗ ಕೊರೆಯಬೇಕಾದ ರೀತಿ ವಿಭಿನ್ನವಾಗಿರುತ್ತದೆ. ಆಗ ಯಾವುದೇ ಸ್ಫೋಟ ಮಾಡಕೂಡದು. ಆ ಪ್ರದೇಶದಲ್ಲಿ ಒಂದು ಮೀಟರ್ಗಿಂತ ಹೆಚ್ಚು ಆಳ ಕೊರೆಯುವಂತಿಲ್ಲ. ತಕ್ಷಣವೇ ಬಂಡೆಗಳಿಗೆ ಹೆಚ್ಚುವರಿ ಬೆಂಬಲವನ್ನು ಒದಗಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಾಮಗಾರಿಯ ಪ್ರಗತಿ ನಿಧಾನವಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಮತ್ತು ಯೋಜನೆಯು ನಿಗದಿತ ಮಾನದಂಡಗಳಿಗೆ ಬದ್ಧವಾಗಿರದೆ ಸಾಂಪ್ರದಾಯಿಕ ರೀತಿಯಲ್ಲಿ ಮುಂದುವರಿದರೆ, ಅದು ಯಾವತ್ತಿದ್ದರೂ ಅಪಾಯಕ್ಕೆ ಎಡೆ ಮಾಡಿಕೊಡುವುದರಲ್ಲಿ ಅನುಮಾನವಿಲ್ಲ. ಆಗ, ಇಂಥದೇ ಅವಘಡಗಳು ಸಂಭವಿಸಬಹುದು ಎಂಬುದು ಅವರು ನೀಡುವ ಎಚ್ಚರಿಕೆ.
(ಕೃಪೆ:newslaundry.com)







