ರೀಡೂ ಫಲಾನುಭವಿಗಳಿಂದ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಅಸಹಕಾರ: ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಡ್ಡಿ

ಸಾಂದರ್ಭಿಕ ಚಿತ್ರ Photo : chatgpt.com
ಬೆಂಗಳೂರು, ಜೂ.17: ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ನಡೆದಿದೆ ಎನ್ನಲಾದ ಅರ್ಕಾವತಿ ಬಡಾವಣೆಯ ರೀಡೂ ಹಗರಣದಲ್ಲಿ ಫಲಾನುಭವಿಗಳಾದ ಜಮೀನುಗಳ ಮಾಲಕರು ಇದೀಗ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಅಸಹಕಾರ ತೋರುತ್ತಿದ್ದಾರೆ. ರೀಡೂ ಮೂಲಕ ತಮ್ಮ ಜಮೀನುಗಳನ್ನು ಉಳಿಸಿಕೊಂಡಿರುವ ಫಲಾನುಭವಿ ಜಮೀನುಗಳ ಮಾಲಕರು ತಂತಿಬೇಲಿ ನಿರ್ಮಾಣ ಮಾಡಿರುವ ಕಾರಣ ಬಡಾವಣೆಗೆ ಸಂಪರ್ಕ ರಸ್ತೆಯೇ ನಿರ್ಮಾಣವಾಗಿಲ್ಲ.
ಜಕ್ಕೂರು, ಸಂಪಿಗೆಹಳ್ಳಿ, ದಾಸರಹಳ್ಳಿ, ಥಣಿಸಂದ್ರ, ಕೆ ನಾರಾಯಣಪುರ, ಅಮೃತಹಳ್ಳಿ, ಚಳ್ಳಕೆರೆ, ಹೆಣ್ಣೂರು, ಗೆದ್ದಲಹಳ್ಳಿಯುದ್ದಕ್ಕೂ ರಚಿಸಿರುವ ಬಡಾವಣೆ ಮಧ್ಯೆಯೇ ರೀಡೂ ಫಲಾನುಭವಿ ಜಮೀನುಗಳ ಮಾಲಕರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದಾರೆ. ಹೀಗಾಗಿ ರೀಡೂ, ಡಿ ನೋಟಿಫಿಕೇಷನ್ ಆದ ಜಮೀನುಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಮಾಡಲು 20 ಎಕರೆ 16.5 ಗುಂಟೆ ಜಮೀನಿಗೆ ಹೊಸ ಭೂ ಸ್ವಾಧೀನ ಕಾಯ್ದೆಯಂತೆ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಡಿಎಗೆ ಎದುರಾಗಿದೆ.
ಒಂದೊಮ್ಮೆ ಸರಕಾರವು ಏನಾದರೂ ಭೂ ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿದ್ದೇ ಆದಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದ ಪ್ರಕಾರ 20 ಎಕರೆ 16.5 ಗುಂಟೆ ಅಂದಾಜು 217.80 ಕೋಟಿ ರೂ. ಗೂ ಅಧಿಕ ಮೊತ್ತದ ಪರಿಹಾರ ನೀಡಬೇಕಿದೆ. ಬಿಡಿಎನ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಪ್ರಕಾರ ಮತ್ತೊಂದು ಆರ್ಥಿಕ ಹೊರೆ ಹೊರುವ ಸಾಧ್ಯತೆಗಳಿವೆ.
ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯಕ್ತ ಮೇಜರ್ ಮಣಿವಣ್ಣನ್ ಅವರು ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿನ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಬಿಡಿಎ ಅಧ್ಯಕ್ಷ ಎನ್.ಎ.ಹಾರೀಸ್ ಅವರ ಜೊತೆ ಬಿಡಿಎ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
2026ರ ಜೂನ್ 8ರಂದು ಬರೆದಿರುವ ಪತ್ರದ ಪ್ರತಿಯು ‘the-file.in'ಗೆ ಲಭ್ಯವಾಗಿದೆ.
ಸಂಪರ್ಕ ರಸ್ತೆ ರಚಿಸಲು ಕಷ್ಟಕರ- ನಡುಗಡ್ಡೆಯಂತಾದ ನಿವೇಶನಗಳು: ಅರ್ಕಾವತಿ ಬಡಾವಣೆಯಲ್ಲಿ 2014ರಲ್ಲಿ ಪ್ರಕಟಗೊಂಡ ಪರಿಷ್ಕೃತ ಅಂತಿಮ ಅಧಿಸೂಚನೆಯಂತೆ ಈಗಾಗಲೇ ಒಟ್ಟು 983 ಎಕರೆ 33 ಗುಂಟೆ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸಿದೆ. ಈ ಜಮೀನುಗಳು ಅರ್ಕಾವತಿ ಬಡಾವಣೆ ರಚನೆಯಾಗಿರುವ ಅಕ್ಕಪಕ್ಕದ ಜಮೀನುಗಳಿಗೆ ಹೊಂದಿಕೊಂಡಿದೆ. ಪ್ರಸ್ತುತ ಬಡಾವಣೆಗೆ ಸಂಪರ್ಕ ರಸ್ತೆಯನ್ನು ರಚಿಸಲು ಕಷ್ಟವಾಗಿದೆ.
ಹಾಗೂ ಕೆಲವು ಕಡೆ ಪ್ರಾಧಿಕಾರದಿಂದ ರಚಿಸಿರುವ ನಿವೇಶನಗಳಿಗೆ ಪೂರ್ಣ ಸಂಪರ್ಕ ಇಲ್ಲದಂತಾಗಿದೆ. ನಡುಗಡ್ಡೆಯ ನಿವೇಶನಗಳಾಗಿವೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಪ್ರಸ್ತುತ ರೀಡೂ/ಡಿ ನೋಟಫೈ ಆದ ಜಮೀನುಗಳ ಅಕ್ಕಪಕ್ಕದ ಪ್ರಾಧಿಕಾರದಿಂದ ನಿರ್ಮಾಣವಾದ ಬಡಾವಣೆಯ ಜಮೀನುಗಳಿಗೆ ಸಂಪರ್ಕ ರಸ್ತೆ ಇಲ್ಲದೇ ಇರುವುದರಿಂದ ಬಡಾವಣೆ ರಚನೆಗೆ ತುಂಬಾ ಅನನುಕೂಲವಾಗಿದೆ. ಅಲ್ಲದೇ ರೀಡೂ ಡಿ ನೋಟಿಫೈ ಆದ ಜಮೀನಿನ ಮಾಲಕರು ತಮ್ಮ ಅನುಭವದಲ್ಲಿರುವ ಜಮೀನುಗಳಿಗೆ ತಂತಿಬೇಲಿ ನಿರ್ಮಿಸಿರುವುದರಿಂದ ಸಂಪರ್ಕ ರಸ್ತೆ ಹೊಂದಲು ಆಗಿರುವುದಿಲ್ಲ. ಆದ್ದರಿಂದ ಈ ಹಿಂದೆ ಭೂಸ್ವಾಧೀನಗೊಂಡ ಪ್ರಸ್ತುತ ರೀಡೂ ಡಿ ನೋಟಿಫೈ ಆದ ಜಮೀನುಗಳಲ್ಲಿನ ಸಂಪರ್ಕ ರಸ್ತೆಗೆ ಬೇಕಾದ ವಿಸ್ತೀರ್ಣವನ್ನು ಅಭಿಯಂತರ ವಿಭಾಗದವರು ಸಲ್ಲಿಸಿರುವ ಮೇರೆಗೆ ಹೊಸ ಭೂಸ್ವಾಧೀನ ಕಾಯ್ದೆಯಂತೆ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನಪಡಿಸಿಬೇಕಾಗಿರುತ್ತದೆ ಎಂದು ಸರ್ಕಾರದ ಗಮನಸೆಳೆದಿರುವುದು ಪತ್ರದಿಂದ ಗೊತ್ತಾಗಿದೆ.
ಅಂತಿಮ ಅಧಿಸೂಚನೆಗೆ ಬೇಕಾಗಿರುವ ವಿವಿಧ ಗ್ರಾಮಗಳ ವಿವಿಧ ಸರ್ವೇ ನಂಬರ್ಗಳಲ್ಲಿ ಸಂಪರ್ಕ ರಸ್ತೆಯು ಬೇಕಾಗಿರುವುದರಿಂದ ಈ ಜಮೀನುಗಳನ್ನು ಸರಕಾರದ 2011ರ ಸುತ್ತೋಲೆಯಂತೆ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡುವ ಬಗ್ಗೆ ನಿರ್ಣಯ ಕೈಗೊಂಡಿದೆ. ಹಾಗೂ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಅಭಿಯಂತರ ವಿಭಾಗದಿಂದ ಇನ್ನು ಮುಂದೆ ರಸ್ತೆ ಸಂಪರ್ಕಕ್ಕಾಗಿ ಪ್ರಸ್ತಾವನೆ ಬಂದಲ್ಲಿ ಈ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕ್ರಮವಹಿಸುವ ಬಗ್ಗೆಯೂ ನಿರ್ಣಯವಾಗಿರುತ್ತದೆ ಎಂದು ಪತ್ರದಲ್ಲಿ ವಿವರಿಸಿದೆ.
ಉದ್ದೇಶಿತ ಈ ಯೋಜನೆಯ ಪ್ರಾಥಮಿಕ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನಿನ ಒಟ್ಟು 20 ಎಕರೆ 16.5 ಗುಂಟೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಈ ಸಂಬಂಧ ಕರಡು ಅಂತಿಮ ಅಧಿಸೂಚನೆಯೊಂದಿಗೆ ಪ್ರಸ್ತಾವ ಸಲ್ಲಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಹೆಣ್ಣೂರಿನಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಅಪಾರ ಬೆಲೆಬಾಳುವ 26 ಎಕರೆ 12 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಬಿಡಿಎಗೆ ಆದೇಶಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಈಚೆಗಷ್ಟೇ ವಜಾಗೊಳಿಸಿತ್ತು. ಇದರಿಂದಾಗಿ ನೂರಾರು ಕೋಟಿ ರೂ. ಮೌಲ್ಯದ ಜಮೀನು ಬಿಡಿಎ ಸುಪರ್ದಿಯಲ್ಲಿ ಉಳಿದಂತಾಗಿತ್ತು. ಭೂ ಮಾಲಕರಾದ ಪ್ರೇಮ್ ಸಿಂಗ್, ಅವರ ಪುತ್ರಿ ಬೀಜಾಕ್ಷರಿ ವರ್ಮನ್ ಮತ್ತು ಪುತ್ರ ಶಾಹಿಲ್ ವರ್ಮನ್ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿತ್ತು.
ಅರ್ಕಾವತಿ ಲೇಔಟ್ ಬಡಾವಣೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಸರಕಾರ 2003 ರ ಫೆ.3 ರಂದು ಪ್ರಾಥಮಿಕ ಮತ್ತು 2004ರ ಫೆ.23ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಂತೆ ಬಿಡಿಎ, ಅರ್ಜಿದಾರರ ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆಗೆ ತಮ್ಮದೇನೂ ಆಕ್ಷೇಪ ಇಲ್ಲ ಹಾಗೂ ಜಮೀನಿಗೆ ಪರಿಹಾರ ಕಲ್ಪಿಸುವಂತೆ ಪ್ರೇಮ್ಸಿಂಗ್ ಅವರ ಪತ್ನಿಯೇ ಬಿಡಿಎಗೆ ತಿಳಿಸಿದ್ದರು.
ಭೂ ಸ್ವಾಧೀನದಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲ: ನ್ಯಾ.ಕೆ.ಎನ್.ಕೇಶವ ನಾರಾಯಣ ಸಮಿತಿ, ಈ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಬೇಕೆಂಬ ಅರ್ಜಿದಾರರ ಮನವಿ ಪರಿಶೀಲಿಸಿ ತಿರಸ್ಕರಿಸಿದೆ. ಈ ಹಂತದಲ್ಲಿ ಅರ್ಜಿದಾರರ ಜಮೀನನ್ನು ಭೂ ಸ್ವಾಧೀನದಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿತ್ತು.






