ಲಡಾಖ್ಗೆ ಆರ್ಟಿಕಲ್ 371 (K)?; ಕೇಂದ್ರ ಸರ್ಕಾರದ ಈ ಇತ್ತೀಚಿನ ಪ್ರಸ್ತಾವನೆ ಏಕೆ ಮಹತ್ವದ್ದಾಗಿದೆ?

ಸಾಂದರ್ಭಿಕ ಚಿತ್ರ | PTI
ಕೇಂದ್ರ ಗೃಹ ಸಚಿವಾಲಯ ಹಾಗೂ ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಪ್ರತಿನಿಧಿಗಳ ನಡುವೆ ಬುಧವಾರ ನಡೆದ ಸಭೆಯ ಬಳಿಕ ಲಡಾಖ್ಗೆ ಹೆಚ್ಚುವರಿ ರಕ್ಷಣೆ ನೀಡಲು ಸಂವಿಧಾನಕ್ಕೆ ಹೊಸದಾದ 371 (K) ವಿಧಿಯನ್ನು ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು 'indianexpress.com' ವರದಿ ಮಾಡಿದೆ.
ಈ ಪ್ರಸ್ತಾವಿತ ವ್ಯವಸ್ಥೆಯು ಭೂಮಿ, ಸಂಸ್ಕೃತಿ ಮತ್ತು ಭಾಷೆ, ಅರಣ್ಯ, ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಕ್ಷೇತ್ರಗಳ ಮೇಲೆ ಶಾಸಕಾಂಗ ಅಧಿಕಾರವನ್ನು ಹೊಂದಿರುವ ನೇರವಾಗಿ ಚುನಾಯಿತವಾದ ಆಡಳಿತ ಮಂಡಳಿಯನ್ನು ಒದಗಿಸುತ್ತದೆ.
ಆದರೆ ಈವರೆಗೆ ಯಾವುದೇ ಕರಡು ಸಿದ್ಧವಾಗಿಲ್ಲ. ಅದೇ ವೇಳೆ ಕಾರ್ಯನಿರ್ವಾಹಕ, ಆರ್ಥಿಕ ಹಾಗೂ ಯೋಜನೆಗೆ ಸಂಬಂಧಿಸಿದ ಅಧಿಕಾರಗಳು ಸೇರಿದಂತೆ ಪೊಲೀಸ್ ಮತ್ತು ಕಾನೂನು-ಸುವ್ಯವಸ್ಥೆಯ ಮೇಲಿನ ನಿಯಂತ್ರಣದಂತಹ ಹಲವು ಪ್ರಮುಖ ಪ್ರಶ್ನೆಗಳು ಇನ್ನೂ ಬಗೆಹರಿಯದೆ ಉಳಿದಿವೆ. ಅಕ್ಟೋಬರ್ನಲ್ಲಿ ಮತ್ತಷ್ಟು ಮಾತುಕತೆಗಳು ನಡೆಯುವ ನಿರೀಕ್ಷೆಯಿದೆ. ಪ್ರಸ್ತಾವಿತ ಮಂಡಳಿಯ ಅಧಿಕಾರಗಳನ್ನು ಸ್ಪಷ್ಟಪಡಿಸುವ ಕರಡು ಇಲ್ಲದೆ ಈ ಕೊಡುಗೆ ಅಪೂರ್ಣವಾಗಿದೆ ಎಂದು ಲಡಾಖ್ ಪ್ರತಿನಿಧಿಗಳು ತಿಳಿಸಿದ್ದಾರೆ.
ಮೇ ಮತ್ತು ಜುಲೈ ತಿಂಗಳುಗಳಲ್ಲಿ ನಡೆದ ಹಿಂದಿನ ಸುತ್ತಿನ ಮಾತುಕತೆಗಳಲ್ಲಿ ಏರ್ಪಟ್ಟಿದ್ದ ತಾತ್ವಿಕ ಒಪ್ಪಂದ (in-principle understanding) ಮೇರೆಗೆ ಈ ಪ್ರಸ್ತಾವನೆಯನ್ನು ರೂಪಿಸಲಾಗಿದೆ. ಆ ಸಂದರ್ಭದಲ್ಲಿ ಕೇಂದ್ರ ಮತ್ತು ಲಡಾಖ್ ಪ್ರತಿನಿಧಿಗಳು ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದು ಮತ್ತು 371 ನೇ ವಿಧಿಯಡಿಯಲ್ಲಿ ತಕ್ಕಂತೆ ರೂಪಿಸಲಾದ ಸಾಂವಿಧಾನಿಕ ರಕ್ಷಣೆಗಳನ್ನು ರಚಿಸುವ ಕುರಿತು ಚರ್ಚಿಸಿದ್ದರು.
ಲಡಾಖ್ಗೆ ಸಾಂವಿಧಾನಿಕ ರಕ್ಷಣೆ ಬೇಕು ಎಂಬ ಬೇಡಿಕೆ ಶುರುವಾಗಿದ್ದು ಯಾಕೆ?
ಜಮ್ಮು ಮತ್ತು ಕಾಶ್ಮೀರದ ಪುನರಾಡಳಿತದ ನಂತರ ಲಡಾಖ್ಗೆ ರಾಜಕೀಯ ಮತ್ತು ಸಾಂವಿಧಾನಿಕ ರಕ್ಷಣೆ ನೀಡಬೇಕೆಂಬ ಬೇಡಿಕೆ 2019ರ ಆಗಸ್ಟ್ನಿಂದ ಆರಂಭವಾಯಿತು.
ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾದಾಗ ಆರಂಭದಲ್ಲಿ, ವಿಶೇಷವಾಗಿ ಲೇಹ್ನಲ್ಲಿ ಭಾರೀ ಉತ್ಸಾಹವಿತ್ತು. ಜಮ್ಮು ಮತ್ತು ಕಾಶ್ಮೀರದ ಹಿಂದಿನ ಸರ್ಕಾರದಿಂದ ತಾವು ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ ಎಂದು ವಾದಿಸುತ್ತಿದ್ದ ಬೌದ್ಧರು ಬಹುಸಂಖ್ಯೆಯಲ್ಲಿರುವ ಲೇಹ್ ಜಿಲ್ಲೆಯು ಬಹಳ ಹಿಂದಿನಿಂದಲೂ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ಕೋರಿತ್ತು.
ಆದರೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಶಾಸಕಾಂಗವನ್ನು ಹೊಂದಿರಲಿದೆ, ಆದರೆ ಲಡಾಖ್ ಹೊಂದಿರುವುದಿಲ್ಲ ಎಂಬುದು ಸ್ಪಷ್ಟವಾದ ಬಳಿಕ ಆ ಉತ್ಸಾಹ ತಗ್ಗಿತು.
ಹಿಂದಿನ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಈ ಪ್ರದೇಶವು ನಾಲ್ಕು ಶಾಸಕರನ್ನು ಹೊಂದಿತ್ತು. 2019ರ ನಂತರ, ಇಲ್ಲಿನ ಆಡಳಿತವು ಚುನಾಯಿತ ಪ್ರತಿನಿಧಿಗಳ ಬದಲಿಗೆ ಬಹುಪಾಲು ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು, ಇದು ರಾಜಕೀಯ ಅಸಮಾನತೆಯ ಭಾವನೆಯನ್ನು ಹೆಚ್ಚಿಸಿತು.
ಜಮ್ಮು ಮತ್ತು ಕಾಶ್ಮೀರದ ನಿವಾಸಿ ನಿಯಮಗಳಲ್ಲಿನ ಬದಲಾವಣೆಗಳು ಲಡಾಖ್ನಲ್ಲಿ ಭೂಮಿ, ಉದ್ಯೋಗ, ಜನಸಂಖ್ಯೆಯ ಸ್ವರೂಪ ಮತ್ತು ಸಾಂಸ್ಕೃತಿಕ ಗುರುತಿನ ಬಗ್ಗೆಯೂ ಕಳವಳವನ್ನು ತೀವ್ರಗೊಳಿಸಿದವು.
ಪ್ರಸ್ತುತ ಈ ಕೇಂದ್ರಾಡಳಿತ ಪ್ರದೇಶವು ಲೇಹ್ ಮತ್ತು ಕಾರ್ಗಿಲ್ನಲ್ಲಿ ಎರಡು ಹಿಲ್ ಕೌನ್ಸಿಲ್ ಹೊಂದಿದೆ. ಆದರೆ ಅವುಗಳಲ್ಲಿ ಯಾವುದೂ ಆರನೇ ಪರಿಚ್ಛೇದದ ವ್ಯಾಪ್ತಿಗೆ ಬರುವುದಿಲ್ಲ. ಅವುಗಳ ಅಧಿಕಾರಗಳು ಸೀಮಿತವಾಗಿವೆ. ಈ ಆತಂಕಗಳು ಅಂತಿಮವಾಗಿ ಪ್ರತ್ಯೇಕ ರಾಜ್ಯದ ಸ್ಥಾನಮಾನ, ಆರನೇ ಪರಿಚ್ಛೇದದಡಿ ಸೇರ್ಪಡೆ ಮತ್ತು ಲಡಾಖ್ ಆಡಳಿತದ ಮೇಲೆ ಹೆಚ್ಚಿನ ಪ್ರಜಾಸತ್ತಾತ್ಮಕ ನಿಯಂತ್ರಣಕ್ಕಾಗಿನ ಬೇಡಿಕೆಗಳಿಗೆ ಕಾರಣವಾದವು.
ಆರನೇ ಪರಿಚ್ಛೇದ ಎಂದರೇನು?
ಸಂವಿಧಾನದ 244ನೇ ವಿಧಿಯಡಿಯಲ್ಲಿ ಬರುವ ಆರನೇ ಪರಿಚ್ಛೇದವು, ಸ್ವಾಯತ್ತ ಜಿಲ್ಲಾ ಮಂಡಳಿಗಳು ಅಥವಾ ಎಡಿಸಿ (Autonomous District Councils) ಎಂದು ಕರೆಯಲ್ಪಡುವ ಸ್ವಾಯತ್ತ ಆಡಳಿತ ವಿಭಾಗಗಳಿಗೆ ಅವಕಾಶ ಕಲ್ಪಿಸುತ್ತದೆ. ಇವು ರಾಜ್ಯದೊಳಗೆ ನಿರ್ದಿಷ್ಟ ಪ್ರಮಾಣದ ಶಾಸಕಾಂಗ, ನ್ಯಾಯಾಂಗ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ಹೊಂದಿರುತ್ತವೆ. ಭೂಮಿ, ಅರಣ್ಯ, ನೀರು, ಕೃಷಿ, ಗ್ರಾಮ ಪಂಚಾಯತ್ಗಳು, ಆರೋಗ್ಯ, ನೈರ್ಮಲ್ಯ, ಆಸ್ತಿ ಹಕ್ಕು, ಸಾಮಾಜಿಕ ಆಚಾರ-ವಿಚಾರಗಳು ಮತ್ತು ಗಣಿಗಾರಿಕೆಯಂತಹ ವಿಷಯಗಳಿಗೆ ಸಂಬಂಧಿಸಿದಂತೆ ಎಡಿಸಿಗಳು ಕಾನೂನುಗಳು, ನಿಯಮಗಳು ಮತ್ತು ವಿನಿಯಮಗಳನ್ನು ರೂಪಿಸಬಹುದು.
ಆರನೇ ಪರಿಚ್ಛೇದವು ಪ್ರಸ್ತುತ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರದ ಬುಡಕಟ್ಟು ಪ್ರದೇಶಗಳಿಗೆ ಅನ್ವಯಿಸುತ್ತದೆ.
ಹೊಸ ಕೇಂದ್ರಾಡಳಿತ ಪ್ರದೇಶವು ಬಹುಪಾಲು ಬುಡಕಟ್ಟು ಜನಾಂಗದವರನ್ನು ಹೊಂದಿದೆ ಮತ್ತು ರಕ್ಷಣೆ ಅಗತ್ಯವಿರುವ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು 2019ರ ಸೆಪ್ಟೆಂಬರ್ನಲ್ಲಿ ಲಡಾಖ್ ಅನ್ನು ಆರನೇ ಪರಿಚ್ಛೇದದಡಿಗೆ ತರಲು ಶಿಫಾರಸು ಮಾಡಿತ್ತು. ಆದರೆ ಈವರೆಗೆ ಈಶಾನ್ಯ ಭಾರತ ಹೊರತುಪಡಿಸಿ ಬೇರೆ ಯಾವುದೇ ಪ್ರದೇಶವನ್ನು ಆರನೇ ಪರಿಚ್ಛೇದದಡಿ ಸೇರಿಸಲಾಗಿಲ್ಲ.
ಅರ್ಟಿಕಲ್ 371 ಯಾವ ರೀತಿಯ ರಕ್ಷಣೆಗಳನ್ನು ನೀಡುತ್ತದೆ?
371 ಮತ್ತು 371-ಎ ನಿಂದ ಜೆ ವರೆಗಿನ ವಿಧಿಗಳು ನಿರ್ದಿಷ್ಟ ರಾಜ್ಯಗಳಿಗೆ "ವಿಶೇಷ ನಿಬಂಧನೆಗಳನ್ನು ಒಳಗೊಂಡಿವೆ. ಈ ನಿಬಂಧನೆಗಳು ರಾಜ್ಯದಿಂದ ರಾಜ್ಯಕ್ಕೆ ಗಮನಾರ್ಹವಾಗಿ ಭಿನ್ನವಾಗಿರುತ್ತವೆ, ಆದರೆ ಸ್ಥಳೀಯ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಅಥವಾ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ವ್ಯಾಪಕವಾಗಿ ಹೊಂದಿವೆ.
ಸಂವಿಧಾನವು ಮೊದಲು ಜಾರಿಗೆ ಬಂದಾಗ, ಮಹಾರಾಷ್ಟ್ರ ಮತ್ತು ಗುಜರಾತ್ನ ಕೆಲವು ಪ್ರದೇಶಗಳಿಗೆ ಅಭಿವೃದ್ಧಿ ಮಂಡಳಿಗಳನ್ನು ರಚಿಸುವುದನ್ನು ಆರ್ಟಿಕಲ್ 371 ಕಡ್ಡಾಯಗೊಳಿಸಿತ್ತು. ಹೊಸ ರಾಜ್ಯಗಳು ರಚನೆಯಾದಂತೆ ಮತ್ತು ನಿರ್ದಿಷ್ಟ ರಾಜಕೀಯ ವ್ಯವಸ್ಥೆಗಳು ರೂಪಗೊಂಡಂತೆ ಹೆಚ್ಚಿನ ನಿಬಂಧನೆಗಳನ್ನು ಸೇರಿಸಲಾಯಿತು.
ಉದಾಹರಣೆಗೆ, ಆರ್ಟಿಕಲ್ 371-ಎ ಅಡಿಯಲ್ಲಿ, ನಾಗಾ ಧರ್ಮ ಅಥವಾ ಸಾಮಾಜಿಕ ಆಚರಣೆಗಳು, ಸಾಂಪ್ರದಾಯಿಕ ಕಾನೂನು ಮತ್ತು ಕಾರ್ಯವಿಧಾನ ಹಾಗೂ ಭೂಮಿ ಮತ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸಂಸತ್ತು ಮಾಡುವ ಕಾನೂನುಗಳು ರಾಜ್ಯ ವಿಧಾನಸಭೆಯು ಒಪ್ಪಿಗೆ ಸೂಚಿಸಿದ ಹೊರತು ನಾಗಾಲ್ಯಾಂಡ್ಗೆ ಸ್ವಯಂಚಾಲಿತವಾಗಿ ಅನ್ವಯಿಸುವುದಿಲ್ಲ. ಆರ್ಟಿಕಲ್ 371-ಜಿ ಅಡಿಯಲ್ಲಿ ಮಿಜೋರಾಂಗೆ ಇದೇ ರೀತಿಯ ರಕ್ಷಣೆಗಳನ್ನು ವಿಸ್ತರಿಸಲಾಗಿದೆ.
ಅರ್ಟಿಕಲ್ 371-ಬಿ ಮತ್ತು 371-ಸಿ ಅಸ್ಸಾಂ ಮತ್ತು ಮಣಿಪುರ ವಿಧಾನಸಭೆಗಳಲ್ಲಿ ವಿಶೇಷ ಸಮಿತಿಗಳಿಗೆ ಅವಕಾಶ ಕಲ್ಪಿಸುತ್ತವೆ, ಆದರೆ ಆರ್ಟಿಕಲ್ 371-ಎಫ್ ಸಿಕ್ಕಿಂ ವಿಧಾನಸಭೆಯಲ್ಲಿ ಪ್ರತಿನಿಧಿತ್ವಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಒದಗಿಸುತ್ತದೆ. ಅರುಣಾಚಲ ಪ್ರದೇಶ ಮತ್ತು ಗೋವಾಕ್ಕೂ ವಿಶೇಷ ನಿಬಂಧನೆಗಳಿವೆ.
ಲಡಾಖ್ಗೆ ಆರ್ಟಿಕಲ್ 371 (K) ಅನ್ವಯಿಸುವುದಾದರೆ, ಅದು ರಾಜ್ಯವಲ್ಲದೆ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ, ಇದು ಈವರೆಗಿನ ವ್ಯವಸ್ಥೆಗಿಂತ ಸಂಪೂರ್ಣ ಭಿನ್ನವಾದ ಹೆಜ್ಜೆಯಾಗಲಿದೆ.
371 (K) ವಿಧಿಯು ಆರನೇ ಪರಿಚ್ಛೇದಕ್ಕಿಂತ ಹೇಗೆ ಭಿನ್ನವಾಗಿರುತ್ತದೆ?
ಆರನೇ ಪರಿಚ್ಛೇದವು ಸಂವಿಧಾನಬದ್ಧವಾಗಿ ವ್ಯಾಖ್ಯಾನಿಸಲಾದ ಅಧಿಕಾರಗಳೊಂದಿಗೆ ಸ್ವಾಯತ್ತ ಜಿಲ್ಲಾ ಮಟ್ಟದ ಸಂಸ್ಥೆಗಳನ್ನು ಸೃಷ್ಟಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಸ್ತಾವಿತ 371 (K) ವಿಧಿಯು ನಿರ್ದಿಷ್ಟ ವಿಷಯಗಳ ಮೇಲೆ ಶಾಸಕಾಂಗ ಅಧಿಕಾರವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶದ ಮಟ್ಟದಲ್ಲಿ ನೇರವಾಗಿ ಚುನಾಯಿತವಾದ ಆಡಳಿತ ಮಂಡಳಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ತೋರುತ್ತದೆ.
ಇದು ಆರನೇ ಪರಿಚ್ಛೇದವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸರಳವಾಗಿ ವಿಸ್ತರಿಸುವುದಕ್ಕಿಂತ ಹೆಚ್ಚಾಗಿ, ಲಡಾಖ್ಗೆ ಪ್ರತ್ಯೇಕ ಸಾಂವಿಧಾನಿಕ ವ್ಯವಸ್ಥೆಯನ್ನು ನೀಡುತ್ತದೆ. ಇದರ ನಿಖರವಾದ ವ್ಯತ್ಯಾಸವು ಅಂತಿಮ ಕರಡಿನಲ್ಲಿ ಬಳಸುವ ಪದಗಳನ್ನು ಅವಲಂಬಿಸಿರುತ್ತದೆ.
ಚುನಾಯಿತ ಮಂಡಳಿಯು ಕಾರ್ಯನಿರ್ವಾಹಕ ಅಧಿಕಾರ, ಬಜೆಟ್ ಮತ್ತು ಯೋಜನೆಗಳ ಮೇಲಿನ ನಿಯಂತ್ರಣ ಹಾಗೂ ಪೊಲೀಸ್ ಮತ್ತು ಕಾನೂನು-ಸುವ್ಯವಸ್ಥೆಯ ಮೇಲಿನ ಅಧಿಕಾರವನ್ನು ಹೊಂದಲಿದೆಯೇ ಎಂಬುದು ಅತ್ಯಂತ ಪ್ರಮುಖವಾದ ಬಗೆಹರಿಯದ ಪ್ರಶ್ನೆಗಳಾಗಿವೆ. ಇವು ಅಂತಿಮಗೊಳ್ಳುವವರೆಗೆ, ಪ್ರಸ್ತಾವಿತ ಮಂಡಳಿಯು ವಾಸ್ತವವಾಗಿ ಎಷ್ಟು ಅಧಿಕಾರವನ್ನು ಚಲಾಯಿಸುತ್ತದೆ ಎಂಬುದು ಸ್ಪಷ್ಟವಾಗುವುದಿಲ್ಲ.
ಕೃಪೆ: indianexpress.com






