ಪ್ರಮುಖ ಹಣಕಾಸು ವ್ಯವಸ್ಥೆಗಳಿಗೆ AI ಬೆದರಿಕೆ: ಮುನ್ನೆಚ್ಚರಿಕೆ ವಹಿಸುತ್ತಿರುವ ನಿಯಂತ್ರಕ ಸಂಸ್ಥೆಗಳು
✍️ ಆಕಾಶ್ ಮಂಡಲ್ - indianexpress. com ವರದಿ

ಸಾಂದರ್ಭಿಕ ಚಿತ್ರ | Photo Credit : magnific.com
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಆಗಮನದಿಂದಾಗಿ ಸೈಬರ್ ಭದ್ರತಾ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, RBI ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಹಣಕಾಸು ವ್ಯವಸ್ಥೆಯ ಪ್ರಮುಖ ವಿಭಾಗಗಳ ರಕ್ಷಣೆಗೆ ಹೆಚ್ಚಿನ ಗಮನ ಹರಿಸುತ್ತಿದ್ದು, ತಮ್ಮ ಕಾವಲನ್ನು ಮತ್ತಷ್ಟು ಬಿಗಿಗೊಳಿಸಿವೆ.
ಉದಾಹರಣೆಗೆ, ಸೆಬಿ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳಿಗಾಗಿ (ಷೇರು ವಹಿವಾಟು ನಡೆಸುವ ಸ್ಟಾಕ್ ಎಕ್ಸ್ಚೇಂಜ್ ಗಳು ಹಾಗೂ ಕ್ಲಿಯರಿಂಗ್ ಕಾರ್ಪೊರೇಷನ್ಗಳಂತಹ ಸಂಸ್ಥೆಗಳು) ಸೋಮವಾರ ‘ಐಟಿ ರಿಸಿಲಿಯನ್ಸ್ ಇಂಡೆಕ್ಸ್’ (ITRI) ಅನ್ನು ಪರಿಚಯಿಸಿದೆ. “ಈ ಸಂಸ್ಥೆಗಳ ಐಟಿ ವ್ಯವಸ್ಥೆಗಳಲ್ಲಿ ಯಾವುದೇ ರೀತಿಯ ಅಡಚಣೆ, ದಕ್ಷತೆಯ ಕೊರತೆ ಅಥವಾ ಭದ್ರತಾ ಧಕ್ಕೆಯುಂಟಾದರೆ, ಅದು ಮಾರುಕಟ್ಟೆಯ ಪ್ರಮುಖ ಕಾರ್ಯಾಚರಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಹಾಗೂ ಷೇರು ಮಾರುಕಟ್ಟೆಯ ಮೇಲಿನ ನಂಬಿಕೆಗೆ ಧಕ್ಕೆ ತರಬಹುದು” ಎಂದು ಸೆಬಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಮತ್ತೊಂದೆಡೆ, ರಿಸರ್ವ್ ಬ್ಯಾಂಕ್ ಕಳೆದ ತಿಂಗಳ ಅಂತ್ಯದಲ್ಲಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗಾಗಿ ಸಮಗ್ರ ಸೈಬರ್ ಭದ್ರತಾ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದ್ದು, ‘ಕಿಲ್ ಸ್ವಿಚ್’ (Kill Switch) ಜಾರಿಗೆ ತರುವ ಸಾಧ್ಯತೆಯನ್ನೂ ಸೂಚಿಸಿದೆ.
ಎಐ ತಂತ್ರಜ್ಞಾನದಿಂದಾಗಿ ವಂಚನೆಗಳು ಹೆಚ್ಚು ಸುಲಭ ಹಾಗೂ ವ್ಯಾಪಕವಾಗುತ್ತಿರುವುದರಿಂದ, ಎರಡೂ ನಿಯಂತ್ರಕ ಸಂಸ್ಥೆಗಳು ಸೈಬರ್ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿವೆ. ಕೆವೈಸಿ ಪ್ರಕ್ರಿಯೆಯನ್ನು ತಪ್ಪಿಸಲು ಸೈಬರ್ ಕಳ್ಳರು ಡೀಪ್ಫೇಕ್ (Deepfake) ಧ್ವನಿಗಳನ್ನು ಬಳಸುವುದು ಸೇರಿದಂತೆ, ಪ್ರಮುಖ ಹಣಕಾಸು ಸಂಸ್ಥೆಗಳ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಸಂಕೀರ್ಣ ಸೈಬರ್ ದಾಳಿಗಳು ನಡೆಯುತ್ತಿವೆ. ವಾಸ್ತವವಾಗಿ, 2026ರಲ್ಲಿ ಈಗಾಗಲೇ ಕೆಲವು ಬ್ಯಾಂಕುಗಳಲ್ಲಿ ಸೈಬರ್ ಬೆದರಿಕೆಯ ಘಟನೆಗಳು ಕಂಡುಬಂದಿವೆ.
ಸೈಬರ್ ಭದ್ರತಾ ಕಾವಲು ಹೆಚ್ಚಿಸಿದ ನಿಯಂತ್ರಕ ಸಂಸ್ಥೆಗಳು
ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳಿಗಾಗಿ (MIIs) ಸೆಬಿ ಜಾರಿಗೆ ತಂದಿರುವ ‘ಐಟಿ ರಿಸಿಲಿಯನ್ಸ್ ಇಂಡೆಕ್ಸ್’ ಸೈಬರ್ ಸಿದ್ಧತೆಯನ್ನು ಅಳೆಯಲು ಮತ್ತು ಅದನ್ನು ಸ್ಪಷ್ಟ ರೂಪಕ್ಕೆ ತರಲು ನೆರವಾಗುತ್ತದೆ. ಈ ಸೂಚ್ಯಂಕವು ಒಟ್ಟು ಒಂಭತ್ತು ಮಾನದಂಡಗಳನ್ನು ಹೊಂದಿದೆ. ಲಭ್ಯತೆ ಮತ್ತು ಭದ್ರತೆಗೆ ಶೇಕಡಾ 20ರಷ್ಟು, ಸಮಗ್ರತೆ, ಆಡಳಿತ, ನಂಬಿಕಾರ್ಹತೆ ಮತ್ತು ಮೇಲ್ವಿಚಾರಣೆ, ಮಾಡ್ಯುಲಾರಿಟಿ ಮತ್ತು ನಮ್ಯತೆ ಹಾಗೂ ವ್ಯವಹಾರ ಮುಂದುವರಿಕೆಗೆ ತಲಾ ಶೇಕಡಾ 10ರಷ್ಟು ತೂಕ ನೀಡಲಾಗಿದೆ. ಹಾಗೆಯೇ ವಿಸ್ತರಣಾ ಸಾಮರ್ಥ್ಯ ಮತ್ತು ಇತರೆ ಅಗತ್ಯತೆಗಳಿಗೆ ತಲಾ ಶೇಕಡಾ 5ರಷ್ಟು ತೂಕ ನೀಡಲಾಗಿದೆ.
“ಸೆಬಿಯ ಐಟಿ ರಿಸಿಲಿಯನ್ಸ್ ಇಂಡೆಕ್ಸ್ ಈ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಸೈಬರ್ ಸಾಮರ್ಥ್ಯವನ್ನು ಅಳೆಯಲು, ಹೋಲಿಕೆ ಮಾಡಲು ಮತ್ತು ಅಂತಿಮವಾಗಿ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲು ಇದು ಸಹಕಾರಿಯಾಗುತ್ತದೆ” ಎಂದು ಸಾಯಿ ಕೃಷ್ಣ ಆಂಡ್ ಅಸೋಸಿಯೇಟ್ಸ್ ಸಂಸ್ಥೆಯ ಪಾಲುದಾರ ಹಿಮಾಂಶು ಬಗಾಯ್ ಹೇಳಿದ್ದಾರೆ.
2027ರ ಆರಂಭದಿಂದ ಜಾರಿಗೆ ಬರಲಿರುವ ಈ ನೂತನ ಚೌಕಟ್ಟು ‘ಪೂರ್ವ ಎಚ್ಚರಿಕೆ ವ್ಯವಸ್ಥೆ’ ಮತ್ತು ಆಪತ್ತುಗಳನ್ನು ಬೇಗನೇ ಗುರುತಿಸಲು ಸತತ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ. “ಮಾರುಕಟ್ಟೆ ಸಂಸ್ಥೆಗಳು ಪ್ರತಿ ಅರ್ಧವರ್ಷಕ್ಕೊಮ್ಮೆ, ಆ ಅವಧಿ ಮುಗಿದ 60 ದಿನಗಳ ಒಳಗಾಗಿ ಐಟಿಆರ್ಐ ಲೆಕ್ಕಾಚಾರ ಮಾಡಬೇಕು. ಜೊತೆಗೆ ಸತತ ಎರಡು ಅರ್ಧವರ್ಷಗಳ ಹೋಲಿಕೆ ವರದಿ ಹಾಗೂ ಕೈಗೊಂಡ ಸರಿಪಡಿಸುವ ಕ್ರಮಗಳನ್ನು ಸಲ್ಲಿಸಬೇಕು” ಎಂದು ಸೆಬಿಯ ಸುತ್ತೋಲೆ ತಿಳಿಸಿದೆ.
ನಿಯಂತ್ರಿತ ಸಂಸ್ಥೆಗಳ ಸೈಬರ್ ಘಟನೆಗಳ ವರದಿ ಸಲ್ಲಿಕೆಯ ಪೋರ್ಟಲ್ ಅನ್ನು “ಫಾರ್ಮ್ಯಾಟ್ ಫಾರ್ ಇನ್ಸಿಡೆಂಟ್ ರಿಪೋರ್ಟಿಂಗ್ ಎಕ್ಸ್ಚೇಂಜ್” ಅಥವಾ ‘ಫೈರ್’ (FIRE) ಮಾದರಿಗೆ ಜೋಡಿಸಿರುವುದಾಗಿ ಸೆಬಿ ಸೋಮವಾರ ಹೇಳಿದೆ. “ಆರಂಭಿಕ ವರದಿಯ ಸಮಯದಲ್ಲಿ ಕೆಲವು ಮಾಹಿತಿಗಳು ಲಭ್ಯವಿಲ್ಲದಿರಬಹುದು ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಘಟನೆ ವರದಿಯಾದ ಹಂತದಿಂದ ಹಿಡಿದು ಮಧ್ಯಂತರ ಅಪ್ಡೇಟ್ಗಳು ಮತ್ತು ಅಂತಿಮ ಮುಕ್ತಾಯದವರೆಗಿನ ಎಲ್ಲಾ ಹಂತಗಳ ವರದಿ ಸಲ್ಲಿಕೆಗೆ ಇದು ಅನುಕೂಲ ಮಾಡಿಕೊಡುತ್ತದೆ” ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ.
ಮಾರುಕಟ್ಟೆಯಲ್ಲಿ ಎಐ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಗಾಗಿ ಶೀಘ್ರದಲ್ಲೇ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸೆಬಿ ಕಳೆದ ವಾರ ಹೇಳಿತ್ತು. ಪ್ರಸ್ತುತ ಅನುಮಾನಾಸ್ಪದ ವಹಿವಾಟುಗಳನ್ನು ಗುರುತಿಸಲು ಸೆಬಿ ಬಳಿ ಎಐ ಮಾದರಿಗಳ ಮೇಲ್ವಿಚಾರಣಾ ವ್ಯವಸ್ಥೆ ಇದೆ. ಇದರ ಜೊತೆಗೆ, ಕಾರ್ಪೊರೇಟ್ ತನಿಖೆಗಳಿಗೆ ಸಂಬಂಧಿಸಿದಂತೆ ಎಐ ಮಾದರಿಗಳ ಮೇಲೆ ಕೆಲಸ ಮಾಡಲು ಸೆಬಿ ಒಂದು ವಿಶೇಷ ತಂಡವನ್ನು ರಚಿಸಿದೆ ಎಂದು ಸಂಸ್ಥೆಯ ಪೂರ್ಣಾವಧಿ ಸದಸ್ಯ ಕಾಮ್ಲೇಶ್ ಚಂದ್ರ ವರ್ಷ್ನೆ ಕಳೆದ ವಾರ ಸುಳಿವು ನೀಡಿದ್ದಾರೆ.
ತಂತ್ರಜ್ಞಾನವು ನಿರಂತರವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ಸವಾಲಿನ ವ್ಯಾಪ್ತಿಯನ್ನು ಮನಗಂಡಿರುವ ಸೆಬಿ ಈಗ ಎಲ್ಲ ಸಾರ್ವಜನಿಕ ವೇದಿಕೆಗಳಲ್ಲೂ ಎಐ ಸಂಬಂಧಿತ ಅಪಾಯಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವನ್ನು ಪ್ರತಿಪಾದಿಸುತ್ತಿದೆ.
ರಿಸರ್ವ್ ಬ್ಯಾಂಕ್ ಸಹ ಸೈಬರ್ ಮೇಲ್ವಿಚಾರಣೆಯನ್ನು ಬಲಪಡಿಸಲು ಮತ್ತು ವಂಚನೆಗೆ ಒಳಗಾದ ಸಂತ್ರಸ್ತರ ಕುಂದುಕೊರತೆಗಳನ್ನು ಪರಿಹರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ, ಆರ್ಬಿಐ ಮತ್ತು ಸೆಬಿ ಎರಡೂ ‘ಕಿಲ್ ಸ್ವಿಚ್’ ವ್ಯವಸ್ಥೆಯನ್ನು ಜಾರಿಗೆ ತರಲು ಪರಿಶೀಲಿಸುತ್ತಿವೆ. ವಂಚನೆ ಸಂಭವಿಸಿದಾಗ ಗ್ರಾಹಕರು ತಮ್ಮ ಖಾತೆಯಿಂದ ನಡೆಯುವ ಎಲ್ಲಾ ಹಣಕಾಸು ವಹಿವಾಟುಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಆರ್ಬಿಐ ಅವಕಾಶ ನೀಡಲಿದ್ದು, ಸೆಬಿ ತನ್ನ ಎಐ ಮಾರ್ಗದರ್ಶಿ ಸೂತ್ರಗಳ ಭಾಗವಾಗಿ ಇಂತಹುದೇ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡುತ್ತಿದೆ.
ಕಳೆದ ತಿಂಗಳ ಅಂತ್ಯದಲ್ಲಿ ಆರ್ಬಿಐ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗಾಗಿ ನೂತನ ಸಮಗ್ರ ಸೈಬರ್ ಭದ್ರತಾ ಚೌಕಟ್ಟನ್ನು ಬಿಡುಗಡೆ ಮಾಡಿದೆ. ಈ ನಿಯಮಾವಳಿಯು ಸೈಬರ್ ಅಪಾಯಗಳ ಹೊಣೆಗಾರಿಕೆಯನ್ನು ಮಂಡಳಿಯ ಹಂತಕ್ಕೆ ವಹಿಸುವುದು, ಐಟಿ ಅಪಾಯಗಳ ಮೇಲ್ವಿಚಾರಣೆಗೆ ಸಂಸ್ಥೆಗಳ ಒಳಗೆ ನಿರ್ದಿಷ್ಟ ಸಮಿತಿಗಳನ್ನು ರಚಿಸುವುದು ಮತ್ತು ಸೈಬರ್ ಘಟನೆ ನಡೆದ 6 ಗಂಟೆಗಳ ಒಳಗಾಗಿ ಕಡ್ಡಾಯವಾಗಿ ವರದಿ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಜೊತೆಗೆ, ಜೂನ್ ತಿಂಗಳಿನಲ್ಲಿ ಆರ್ಬಿಐ ವಂಚನೆಗೊಳಗಾದ ಗ್ರಾಹಕರಿಗೆ ನೀಡುವ ಪರಿಹಾರದ ನಿಯಮಗಳನ್ನು ಪರಿಷ್ಕರಿಸಿದೆ. ಪರಿಹಾರ ಪಡೆಯಬಹುದಾದ ಸಂತ್ರಸ್ತರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದ್ದು, ಆಧುನಿಕ ಡಿಜಿಟಲ್ ವಂಚನೆಗಳನ್ನೂ ಇದರ ವ್ಯಾಪ್ತಿಗೆ ಸೇರಿಸಲಾಗಿದೆ.
ಮುಂದಿರುವ ಸವಾಲುಗಳು
ನಿಯಂತ್ರಕ ಸಂಸ್ಥೆಗಳು ಸೈಬರ್ ನಿಯಮಗಳನ್ನು ಆಧುನಿಕಗೊಳಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೂ, ಹಲವು ಸವಾಲುಗಳು ಹಾಗೆಯೇ ಉಳಿದಿವೆ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಮಾದರಿಯ ಬೆದರಿಕೆಗಳು ಎದುರಾಗುತ್ತಿದ್ದು, ನಿಯಂತ್ರಕರು ಸಹ ಅಷ್ಟೇ ಚುರುಕಾಗಿ ಕಾರ್ಯನಿರ್ವಹಿಸಬೇಕಾಗಿದೆ.
“ಎಐ ತಂತ್ರಜ್ಞಾನವು ಭದ್ರತಾ ಬೆದರಿಕೆಯ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಿರುವುದು ಪ್ರಮುಖ ಸವಾಲಾಗಿದೆ. ಸಾಂಪ್ರದಾಯಿಕ ಸೈಬರ್ ಭದ್ರತಾ ವ್ಯವಸ್ಥೆಗಳನ್ನು ಮಾನವ ಚಾಲಿತ ದಾಳಿಗಳು ಮತ್ತು ನಿಯತಕಾಲಿಕ ಪರಿಶೀಲನೆಗಳನ್ನು ಆಧರಿಸಿ ರೂಪಿಸಲಾಗಿತ್ತು. ಆದರೆ ಎಐ ತಂತ್ರಜ್ಞಾನವು ಆಟೋಮೇಟೆಡ್ ದಾಳಿಗಳು, ಅತ್ಯಂತ ವೈಯಕ್ತೀಕರಿಸಿದ ಫಿಶಿಂಗ್, ಡೀಪ್ಫೇಕ್, ಗುರುತಿನ ವಂಚನೆ ಮತ್ತು ಸ್ವಾಯತ್ತ ಸೈಬರ್ ದಾಳಿಗಳ ಮೂಲಕ ದಾಳಿಯ ವೇಗ ಮತ್ತು ತೀವ್ರತೆಯನ್ನು ತೀವ್ರವಾಗಿ ಹೆಚ್ಚಿಸಬಲ್ಲದು” ಎಂದು ಸಾಯಿ ಕೃಷ್ಣ ಆಂಡ್ ಅಸೋಸಿಯೇಟ್ಸ್ ಸಂಸ್ಥೆಯ ಬಗಾಯ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ಆದ್ದರಿಂದ ನಿಯಂತ್ರಕ ಸಂಸ್ಥೆಗಳು ಎಐ ಆಧಾರಿತ ಬೆದರಿಕೆಗಳ ಮಾದರಿಗಳನ್ನು ಗುರುತಿಸುವುದು, ನಿರಂತರ ತಪಾಸಣೆ ನಡೆಸುವುದು, ಥರ್ಡ್ ಪಾರ್ಟಿ ಮತ್ತು ಕ್ಲೌಡ್ ಅಪಾಯಗಳನ್ನು ತಡೆಯುವುದು, ಎಐ ಡೇಟಾದ ನಿಖರತೆಯನ್ನು ಕಾಯ್ದುಕೊಳ್ಳುವುದು ಹಾಗೂ ಪ್ರಮುಖ ನಿರ್ಧಾರಗಳಲ್ಲಿ ಮಾನವ ಹೊಣೆಗಾರಿಕೆಯನ್ನು ನಿಗದಿಪಡಿಸುವುದರ ಮೇಲೆ ಗಮನ ಹರಿಸಬೇಕು ಎಂದು ಬಗಾಯ್ ಅಭಿಪ್ರಾಯಪಟ್ಟಿದ್ದಾರೆ.
“ಯಂತ್ರದ ವೇಗದಲ್ಲಿ ನಡೆಯುವ ಎಐ ಆಧಾರಿತ ವಂಚನೆಗಳು ಮತ್ತು ಮಾರುಕಟ್ಟೆ ದುರ್ಬಳಕೆಯನ್ನು ತಡೆಯುವ ಸಾಮರ್ಥ್ಯವನ್ನು ಮೇಲ್ವಿಚಾರಣಾ ವ್ಯವಸ್ಥೆಯು ಹೊಂದಿರಬೇಕು. ತಂತ್ರಜ್ಞಾನ ಮುಂದುವರಿದಂತೆ ಹಳೆಯದಾಗುವ ಕಟ್ಟುನಿಟ್ಟಿನ ನಿಯಮಗಳನ್ನು ಹೇರುವುದಕ್ಕಿಂತ, ತಾಂತ್ರಿಕ ಭದ್ರತೆಯ ಬೆಂಬಲದೊಂದಿಗೆ ತಂತ್ರಜ್ಞಾನತಟಸ್ಥ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಸೂಕ್ತ” ಎಂದು ಸುಪ್ರೀಂ ಕೋರ್ಟ್ ವಕೀಲ ತುಷಾರ್ ಕುಮಾರ್ ತಿಳಿಸಿದ್ದಾರೆ.
ಹೀಗಾಗಿ, ನಿಯಂತ್ರಕ ಸಂಸ್ಥೆಗಳು ತಮ್ಮ ಸೈಬರ್ ಚೌಕಟ್ಟುಗಳನ್ನು ನಿರಂತರವಾಗಿ ಆಧುನಿಕಗೊಳಿಸುತ್ತಾ ಸಮಗ್ರಗೊಳಿಸಬೇಕಿದೆ. ಅದರೊಂದಿಗೆ ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಅಷ್ಟೇ ಚುರುಕಾಗಿ ಸ್ಪಂದಿಸುವುದು ಅತ್ಯಗತ್ಯ.
ಸೌಜನ್ಯ: indianexpress.com






