Assam | ಶರ್ಜೀಲ್ ಇಮಾಮ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ವಕ್ತಾರ ರೀತಮ್ ಸಿಂಗ್ ವಿರುದ್ಧ ಆಕ್ರೋಶ
► “ಇದು ಕಾಂಗ್ರೆಸ್ನ ಅಧಿಕೃತ ನಿಲುವೇ?” ಎಂದು ಪ್ರಶ್ನಿಸಿದ ಸಾಮಾಜಿಕ ಕಾರ್ಯಕರ್ತರು ► maktoobmedia. com ವರದಿ

ಶರ್ಜೀಲ್ ಇಮಾಮ್ | Photo Credit : PTI
ಗುವಾಹಟಿ: ವಿಚಾರಣಾಧೀನ ಕೈದಿಯಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಸಂಶೋಧಕ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಹೋರಾಟಗಾರ ಶರ್ಜೀಲ್ ಇಮಾಮ್ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿರುವ ಅಸ್ಸಾಂ ಕಾಂಗ್ರೆಸ್ ವಕ್ತಾರ ರೀತಮ್ ಸಿಂಗ್, ಅವರಿಗೆ ಪೊಲೀಸ್ ಎನ್ಕೌಂಟರ್ ಹಾಗೂ ಚಿತ್ರಹಿಂಸೆ ನೀಡುವಂತೆ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ maktoobmedia.com ವರದಿ ಮಾಡಿದೆ.
ಈ ಆರೋಪಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಶರ್ಜೀಲ್ ಇಮಾಮ್ ಪರವಾಗಿ ಸಹಾನುಭೂತಿ ವ್ಯಕ್ತಪಡಿಸುವವರನ್ನು ‘ಐಸಿಸ್ (ISIS) ಬೆಂಬಲಿಗರು’ ಎಂದು ಕರೆದಿರುವ ಸಿಂಗ್ ವಿರುದ್ಧ ಪತ್ರಕರ್ತರು, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ರಾಜ್ಯ ಕಾಂಗ್ರೆಸ್ ಸಮಿತಿಯ ವಕ್ತಾರರೂ ವಕೀಲರೂ ಆಗಿರುವ ರೀತಮ್ ಸಿಂಗ್, ಇಮಾಮ್ ಬಿಡುಗಡೆಯಾದರೆ ಅಸ್ಸಾಂ ಪೊಲೀಸರು ತಮ್ಮ ‘ಕುಖ್ಯಾತ ಶೈಲಿಯಲ್ಲೇ’ ಅವರೊಂದಿಗೆ ವರ್ತಿಸಬೇಕು ಎಂದು ಹೇಳಿದ್ದಾರೆ. ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಹಿಂಸಾತ್ಮಕವಾಗಿ ನಡೆಸಿಕೊಳ್ಳಬೇಕು ಎಂಬರ್ಥದ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.
‘ದಿ ಪ್ರಿಂಟ್’ ಪ್ರಕಟಿಸಿದ ಅಭಿಪ್ರಾಯ ಲೇಖನವೊಂದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಂಗ್ ಈ ಹೇಳಿಕೆಗಳನ್ನು ನೀಡಿದ್ದಾರೆ. ‘ಶರ್ಜೀಲ್ ಇಮಾಮ್ ನ ಮುಸ್ಲಿಂ ಪರ ಪ್ರಣಾಳಿಕೆ ಮರೆತುಹೋಗಬಹುದು, ಆದರೆ ಉದಾರವಾದಿಗಳ ಮೌನ ಹಾಗೆಯೇ ಉಳಿಯುತ್ತದೆ’ ಎಂಬ ಶೀರ್ಷಿಕೆಯ ಲೇಖನವು ಇಮಾಮ್ ಅವರ ರಾಜಕೀಯ ನಿಲುವುಗಳನ್ನು ಟೀಕಿಸಿತ್ತು. ‘ದಿ ಕ್ವಿಂಟ್’ ಜೊತೆ ಇಮಾಮ್ ಇತ್ತೀಚೆಗೆ ನಡೆಸಿದ ಸಂದರ್ಶನವನ್ನೂ ಲೇಖನದಲ್ಲಿ ಪ್ರಸ್ತಾಪಿಸಲಾಗಿತ್ತು. ಮುಸ್ಲಿಂ ಹೋರಾಟಗಾರನನ್ನು ಸಂಬೋಧಿಸಲು ಲೇಖನದಲ್ಲಿ ಬಳಸಿದ ಪದಪ್ರಯೋಗಗಳು ಅವಹೇಳನಕಾರಿಯಾಗಿವೆ ಎಂದು ಹಲವರು ಆಕ್ಷೇಪಿಸಿದ್ದರು.
ಈ ಚರ್ಚೆಗೆ ಪ್ರತಿಕ್ರಿಯಿಸಿದ ಸಿಂಗ್, ಇಮಾಮ್ ಅವರ ವಿಚಾರಗಳನ್ನು ಬೆಂಬಲಿಸುವವರನ್ನು ‘ಐಸಿಸ್ ಬೆಂಬಲಿಗರು’ ಎಂದು ಕರೆದಿದ್ದಾರೆ. ಇಮಾಮ್ ಅವರ ಹೇಳಿಕೆಗಳು ‘ದೇಶದ್ರೋಹದ’ ಸ್ವರೂಪದ್ದಾಗಿದ್ದು, ಭಾರತದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿವೆ ಎಂದೂ ಆರೋಪಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ, “ಶರ್ಜೀಲ್ ಇಮಾಮ್ ಒಬ್ಬ ಭಯೋತ್ಪಾದಕ. ಭಯೋತ್ಪಾದಕನೊಬ್ಬ ಒಳ್ಳೆಯವನಾಗುವುದು ಅವನು ಭೂಮಿಯ ಆಳದಲ್ಲಿ (ಸಮಾಧಿಯಲ್ಲಿ) ಇದ್ದಾಗ ಮಾತ್ರ” ಎಂದು ಬರೆದಿದ್ದಾರೆ. ಆರು ವರ್ಷಕ್ಕೂ ಹೆಚ್ಚು ಕಾಲ ವಿಚಾರಣಾಧೀನ ಕೈದಿಯಾಗಿರುವ ಇಮಾಮ್ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದಲ್ಲದೆ, ಅವರು ಸತ್ತು ಸಮಾಧಿಯಾಗಬೇಕು ಎಂಬರ್ಥದ ಹೇಳಿಕೆಯನ್ನೂ ನೀಡಿದ್ದಾರೆ.
ಇಮಾಮ್ ಬಗ್ಗೆ ಸಹಾನುಭೂತಿ ತೋರುವುದನ್ನು ದಾವೂದ್ ಇಬ್ರಾಹಿಂ ಹಾಗೂ ನಾಥೂರಾಮ್ ಗೋಡ್ಸೆ ಬಗ್ಗೆ ಸಹಾನುಭೂತಿ ತೋರುವುದಕ್ಕೆ ಸಿಂಗ್ ಹೋಲಿಸಿದ್ದಾರೆ. ಶರ್ಜೀಲ್ ಇಮಾಮ್ ಅವರ ವಿಚಾರಗಳನ್ನು ಬೆಂಬಲಿಸುವವರು ಹಿಂಸೆ ಮತ್ತು ನಿಂದನೆಗಳನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಸಿಲಿಗುರಿ ಕಾರಿಡಾರ್ ಭಾಷಣದ ಬಗ್ಗೆ ಆಕ್ಷೇಪ
2020ರಲ್ಲಿ CAA ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಶರ್ಜೀಲ್ ಇಮಾಮ್ ನೀಡಿದ್ದ ಭಾಷಣವನ್ನು ಸಿಂಗ್ ಆಕ್ಷೇಪಿಸಿದ್ದಾರೆ. ಈ ಭಾಷಣದಲ್ಲಿ ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಭೂಭಾಗವಾದ ಸಿಲಿಗುರಿ ಕಾರಿಡಾರ್ ಅನ್ನು ತಡೆಯುವ ಬಗ್ಗೆ ಇಮಾಮ್ ಮಾತನಾಡಿದ್ದರು. ಈ ಕಾರಿಡಾರ್ ಅನ್ನು ‘ಚಿಕನ್ಸ್ ನೆಕ್’ ಅಥವಾ ‘ಕೋಳಿ ಕುತ್ತಿಗೆ’ ಎಂದೂ ಕರೆಯಲಾಗುತ್ತದೆ.
ಇಮಾಮ್ ಅವರ ಭಾಷಣವು ಈಶಾನ್ಯ ಭಾರತದ ಜನರಿಗೆ ಬೆದರಿಕೆಯಾಗಿದೆ ಎಂದು ಸಿಂಗ್ ವಾದಿಸಿದ್ದಾರೆ. CAA ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದ ಹಿಂಸಾಚಾರ ಹಾಗೂ ಸಾವುಗಳಿಗೆ ಇಮಾಮ್ ಅವರ ಭಾಷಣವನ್ನು ಸಂಬಂಧ ಕಲ್ಪಿಸಿರುವ ಅವರು, ಇಮಾಮ್ ಗೆ ಬೆಂಬಲ ನೀಡುವುದು ಭಾರತದ ವಿಭಜನೆಗೆ ಬೆಂಬಲ ನೀಡಿದಂತೆ ಎಂದು ಹೇಳಿದ್ದಾರೆ.
ಸಾಂವಿಧಾನಿಕ ರಕ್ಷಣೆ ನಿರಾಕರಿಸಲಾಗದು: ರೋಹಿಣಿ ಸಿಂಗ್
ರೀತಮ್ ಸಿಂಗ್ ಅವರ ಹೇಳಿಕೆಗಳನ್ನು ಪತ್ರಕರ್ತೆ ರೋಹಿಣಿ ಸಿಂಗ್ ಟೀಕಿಸಿದ್ದಾರೆ. ಇಮಾಮ್ ಅವರ ರಾಜಕೀಯ ಸಿದ್ಧಾಂತವನ್ನು ವಿರೋಧಿಸುವುದಕ್ಕೂ ಅವರಿಗೆ ಸಾಂವಿಧಾನಿಕ ರಕ್ಷಣೆ ನಿರಾಕರಿಸುವುದಕ್ಕೂ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ.
“ಅವರ ಸಿದ್ಧಾಂತವನ್ನು ಒಪ್ಪದಿರಲು ಸಾಂವಿಧಾನಿಕ ತತ್ವಗಳನ್ನು ತ್ಯಜಿಸುವ ಅಥವಾ ಕಾನೂನುಬಾಹಿರ ಹಿಂಸಾಚಾರವನ್ನು ಅನುಮೋದಿಸುವ ಅಗತ್ಯವಿಲ್ಲ” ಎಂದು ರೋಹಿಣಿ ಸಿಂಗ್ ಎಕ್ಸ್ ನಲ್ಲಿ ಬರೆದಿದ್ದಾರೆ.
“ಸಂವಿಧಾನವು ಅದನ್ನು ತಿರಸ್ಕರಿಸುವವರನ್ನೂ ರಕ್ಷಿಸುತ್ತದೆ. ನೀವು ತಪ್ಪಿಸಿಕೊಂಡಂತೆ ತೋರುವ ಅಂಶ ಅದು” ಎಂದೂ ಅವರು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಹಾಗೂ ರಾಜಕೀಯ ನಿರೂಪಕ ಪ್ರಶಾಂತ್ ಪುಂಡೀರ್ ಅವರು ಕಾಂಗ್ರೆಸ್ ನಲ್ಲಿ ರೀತಮ್ ಸಿಂಗ್ ಅವರ ಸ್ಥಾನವನ್ನು ಪ್ರಶ್ನಿಸಿದ್ದಾರೆ. “ಸಿಂಗ್ ಅಗ್ಗದ ಐಟಿ ಸೆಲ್ ಟ್ರೋಲ್ ನಂತೆ ಧ್ವನಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
ಇತರ ವಿಮರ್ಶಕರು ಸಿಂಗ್ ಇಸ್ಲಾಮೋಫೋಬಿಕ್ ವಾಕ್ಚಾತುರ್ಯವನ್ನು ಸಾಮಾನ್ಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಹೇಳಿಕೆಗಳಿಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಬೆಂಬಲವಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಕಾಂಗ್ರೆಸ್ನ ಅಧಿಕೃತ ನಿಲುವೇ?: ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸೈಫ್ ಪಟೇಲ್ ಅವರು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರನ್ನು ಟ್ಯಾಗ್ ಮಾಡಿ, ರೀತಮ್ ಸಿಂಗ್ ಅವರ ಹೇಳಿಕೆಗಳು ಪಕ್ಷದ ಅಧಿಕೃತ ನಿಲುವನ್ನು ಪ್ರತಿಬಿಂಬಿಸುತ್ತವೆಯೇ ಎಂದು ಪ್ರಶ್ನಿಸಿದ್ದಾರೆ.
“ದಿಲ್ಲಿ ಗಲಭೆಗಳು ಶರ್ಜೀಲ್ ಬಂಧನದ ಒಂದು ತಿಂಗಳ ಬಳಿಕ ನಡೆದವು. ಶರ್ಜೀಲ್ ಈಗ ಆರು ವರ್ಷಗಳಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿದ್ದಾರೆ. ನಿಮ್ಮ ವಕ್ತಾರರು ಈಗಾಗಲೇ ಅವರನ್ನು ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಬಿಜೆಪಿ/RSS ನಮ್ಮ ಬಗ್ಗೆ ಏನು ಯೋಚಿಸುತ್ತದೆ ಎನ್ನುವುದಕ್ಕಿಂತ ಇದು ಹೇಗೆ ಭಿನ್ನವಾಗಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಮುಸ್ಲಿಂ ವಿರೋಧಿ ವಾಕ್ಚಾತುರ್ಯವು ರಾಜಕೀಯ ಪಕ್ಷಗಳ ಗಡಿಗಳನ್ನು ದಾಟುತ್ತದೆ ಎಂದೂ ಸೈಫ್ ಪಟೇಲ್ ಹೇಳಿದ್ದಾರೆ.
“ಶರ್ಜೀಲ್ ಪೊಲೀಸ್ ಎನ್ಕೌಂಟರ್ ನಲ್ಲಿ ಕೊಲ್ಲಲ್ಪಡಬೇಕೆಂದು ಬಯಸುವ ಒಂದು ಮೈಲಿ ಉದ್ದದ ಪೋಸ್ಟ್ ಇದು. ಮುಸ್ಲಿಮರು ತಮ್ಮ ಧಾರ್ಮಿಕ ಗುರುತನ್ನು ಪ್ರತಿಪಾದಿಸಿದಾಗ ಅವರ ವಿರುದ್ಧದ ದ್ವೇಷಕ್ಕೆ ರಾಜಕೀಯ ಪಕ್ಷಗಳ ಭೇದವೂ ಅಡ್ಡಿಯಾಗುವುದಿಲ್ಲ. ತಮ್ಮ ಗುರುತನ್ನು ತೊರೆದು, ಅವರ ಹಿಂದೆ ಕುರುಡಾಗಿ ಸೇರುವ ಮುಸ್ಲಿಮರನ್ನು ಅವರು ಬಯಸುತ್ತಾರೆ. ಒಬ್ಬ ಮುಸ್ಲಿಂ ತನ್ನ ಗುರುತನ್ನು ಪ್ರತಿಪಾದಿಸಿದ ಕ್ಷಣ, ಈ ಜನರು ಆತನನ್ನು ಸಾಯಲು ಬಯಸುತ್ತಾರೆ” ಎಂದು ಅವರು ಬರೆದಿದ್ದಾರೆ.
ಗೀತರಚನೆಕಾರ ಹುಸೇನ್ ಹೈದ್ರಿ ಕೂಡ ಸಿಂಗ್ ಅವರ ಪೋಸ್ಟ್ ಅನ್ನು ಖಂಡಿಸಿದ್ದಾರೆ. “ನಿಮ್ಮ ದೈನಂದಿನ ಸರಾಸರಿ ಮುಸ್ಲಿಂ ರಕ್ತದಾಹವು ಒಂದು ದಿನ ನಿಮ್ಮನ್ನೇ ಮುಳುಗಿಸಲಿ” ಎಂದು ಅವರು ಬರೆದಿದ್ದಾರೆ.
ಅಭಿಪ್ರಾಯ ಲೇಖನದಿಂದ ಆರಂಭವಾದ ವಿವಾದ
ಇಬ್ನ್ ಖಾಲ್ದುನ್ ಭಾರತಿ ಎಂಬ ಗುಪ್ತನಾಮದ ಬರಹಗಾರರು ಅಕ್ಟೋಬರ್ 17ರಂದು ‘ದಿ ಪ್ರಿಂಟ್’ನಲ್ಲಿ ಪ್ರಕಟಿಸಿದ ಅಭಿಪ್ರಾಯ ಲೇಖನವು ಈ ವಿವಾದಕ್ಕೆ ಕಾರಣವಾಗಿದೆ. ಶರ್ಜೀಲ್ ಇಮಾಮ್ ಅವರ ರಾಜಕೀಯ ದೃಷ್ಟಿಕೋನಗಳನ್ನು ಟೀಕಿಸಿದ್ದ ಲೇಖನವು, ಅವರ ಇತ್ತೀಚಿನ ಸಂದರ್ಶನವನ್ನು ‘ಇಸ್ಲಾಮಿಸ್ಟ್ ಪ್ರಣಾಳಿಕೆ’ ಎಂದು ಬಣ್ಣಿಸಿತ್ತು. ಇಮಾಮ್ ಅವರ ಅಭಿಪ್ರಾಯಗಳು ಉದಾರವಾದಿ ವಿರೋಧಿ, ಜಾತ್ಯತೀತ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿವೆ ಎಂದು ಲೇಖನದಲ್ಲಿ ವಾದಿಸಲಾಗಿತ್ತು.
ಇಮಾಮ್ ಅವರ ರಾಜಕೀಯ ನಿಲುವುಗಳನ್ನು ಖಂಡಿಸುವುದು ಒಂದು ವಿಚಾರವಾದರೆ, ಅವರಿಗೆ ಕಾನೂನುಬದ್ಧ ಹಾಗೂ ಸಾಂವಿಧಾನಿಕ ರಕ್ಷಣೆಗಳನ್ನು ನಿರಾಕರಿಸುವುದು ಮತ್ತೊಂದು ವಿಚಾರ ಎಂದು ವಿಮರ್ಶಕರು ಪ್ರತಿಪಾದಿಸಿದ್ದಾರೆ. ರೀತಮ್ ಸಿಂಗ್ ಅವರ ಹೇಳಿಕೆಗಳು ಇಸ್ಲಾಮೋಫೋಬಿಯಾವನ್ನು ಸಾಮಾನ್ಯಗೊಳಿಸುತ್ತಿವೆ ಹಾಗೂ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸುತ್ತಿವೆ ಎಂಬ ಆರೋಪಗಳ ನಡುವೆಯೇ, ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವನ್ನು ಪ್ರತಿಬಿಂಬಿಸುತ್ತವೆಯೇ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.
ಸೌಜನ್ಯ: maktoobmedia.com






