ಅಸ್ಸಾಂ: 12,500 ಕೋಟಿ ರೂ.ಗಳ ಬೃಹತ್ ವಿದ್ಯುತ್ ಹಗರಣ ಬಹಿರಂಗ
► ಮುಂಬರುವ ವರ್ಷಗಳಲ್ಲಿ ತಾನು ಬಳಸಲಾಗದ ಹೆಚ್ಚುವರಿ ವಿದ್ಯುತ್ತಿಗೂ ಆದಾನಿಗೆ ಹಣ ಪಾವತಿಸಲು ಸರಕಾರದ ಅಸ್ತು ►the reporters' collective ವರದಿ

Visual : Nitin Sethi
ಹೊಸದಿಲ್ಲಿ : ಅಸ್ಸಾಮಿನಲ್ಲಿ 12,500 ಕೋಟಿ ರೂ.ಗಳ ಬೃಹತ್ ವಿದ್ಯುತ್ ಹಗರಣವನ್ನು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಬಯಲಿ ಗೆಳೆದಿದೆ. ರಾಜ್ಯವು ತನ್ನಿಂದ ಬಳಸಲು ಸಾಧ್ಯವಾಗದ ಕಲ್ಲಿದ್ದಲು ವಿದ್ಯುತ್ತಿಗೂ ಹಣ ಪಾವತಿಸುವುದಾಗಿ ಅಸ್ಸಾಂ ಸರಕಾರವು ಅದಾನಿ ಗ್ರೂಪ್ ಗೆ
ಭರವಸೆ ನೀಡಿದೆ ಎನ್ನುವುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲಿಸಿರುವ ಆಂತರಿಕ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಸರಕಾರಿ ದಾಖಲೆಗಳು ತೋರಿಸಿವೆ.
ಅಸ್ಸಾಂ ಸರಕಾರವು ಅದಾನಿ ಗ್ರೂಪ್ಗೆ 3,200 ಮೆಗಾ ವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ವಿದ್ಯುತ್ ಸ್ಥಾವರ ಸ್ಥಾಪನೆಗೆ ನವೆಂಬರ್ 2025ರಲ್ಲಿ ಅನುಮತಿಯನ್ನು ನೀಡಿದೆ. ಈ ಸಂಬಂಧ ಮಾಡಿಕೊಳ್ಳಲಾಗಿರುವ ಒಪ್ಪಂದದಡಿ ಸರಕಾರವು ಹೆಚ್ಚುವರಿ ವಿದ್ಯುತ್ತನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಅದಾನಿ ಗ್ರೂಪ್ಗೆ ಐದು ವರ್ಷಗಳಲ್ಲಿ 12,500 ಕೋಟಿಗಳಿಗಿಂತಲೂ ಅಧಿಕ ಹಣವನ್ನು ಪಾವತಿಸಬೇಕಾಗಬಹುದು ಎನ್ನುವುದನ್ನು ಲೆಕ್ಕಾಚಾರಗಳು ತೋರಿಸಿವೆ.
ಈ ಲೆಕ್ಕಾಚಾರಗಳು ಅಸ್ಸಾಂ ಸರಕಾರ ಮತ್ತು ಕೇಂದ್ರ ವಿದ್ಯುತ್ ಪ್ರಾಧಿಕಾರದ (CEA) ದಾಖಲೆಗಳನ್ನು ಆಧರಿಸಿವೆ. ಈ ಅಂದಾಜು ಸೀಮಿತವಾಗಿದ್ದು, ಮುಂಬರುವ ದಶಕದಲ್ಲಿ ರಾಜ್ಯವು ಹೆಚ್ಚಿನ
ಆರ್ಥಿಕ ಬೆಳವಣಿಗೆಯನ್ನು ಸಾಧಿಸಲಿದೆ ಎಂಬ ಸರಕಾರದ ಪ್ರತಿಪಾದನೆಯನ್ನು ಅವಲಂಬಿಸಿದೆ. ಅಸ್ಸಾಮಿನ ಮಹತ್ವಾಕಾಂಕ್ಷೆಯ ಆರ್ಥಿಕ ಬೆಳವಣಿಗೆಯ ಅಂದಾಜುಗಳು ಹುಸಿಯಾದರೆ, ಐದು ವರ್ಷಗಳಲ್ಲಿ ಅದಾನಿ ಗ್ರೂಪ್ ನಿಂದ ಹೆಚ್ಚುವರಿ ವಿದ್ಯುತ್ ಖರೀದಿಸದಿದ್ದರೂ ಸರಕಾರವು ಪಾವತಿಸಬೇಕಾದ ಮೊತ್ತವು 19,000 ಕೋಟಿ ರೂ.ಗಳನ್ನು ತಲುಪಬಹುದು. ಅದಾನಿ ಜೊತೆಗಿನ ಒಪ್ಪಂದದಲ್ಲಿ ಅಸ್ಸಾಂ ತಾನು ಬಳಸದ ವಿದ್ಯುತ್ತಿಗೂ ಹಣವನ್ನು ಪಾವತಿಸಬೇಕು ಎಂಬ ಷರತ್ತು ಇರುವುದನ್ನು ಒಪ್ಪಿಕೊಂಡು ಅಸ್ಸಾಂ ವಿದ್ಯುತ್ ಇಲಾಖೆಯ ಕಾರ್ಯದರ್ಶಿ ಬರೆದಿರುವ ಪತ್ರವೊಂದು ರಿಪೋರ್ಟರ್ಸ್ ಕಲೆಕ್ಟಿವ್ಗೆ ಲಭ್ಯವಾಗಿದೆ.
ಪರಿಶೀಲಿಸಲಾದ ಸಂಪನ್ಮೂಲ ಸಮರ್ಪಕತೆ ಯೋಜನೆಯು (RAP) ಅಸ್ಸಾಂ ಹೆಚ್ಚುವರಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದರೂ ತನ್ನ ಎಲ್ಲ ಇಂಧನ ಅಗತ್ಯಗಳನ್ನು ಪೂರೈಸಲು ಅದಕ್ಕೆ 2035-36ರ ವೇಳೆಗೆ ಕೇವಲ 2,829 ಮೆಗಾ ವ್ಯಾಟ್ ಹೆಚ್ಚುವರಿ ಕಲ್ಲಿದ್ದಲು ವಿದ್ಯುತ್ತಿನ ಅಗತ್ಯವಿದೆ ಎಂದು ಹೇಳುತ್ತಿದೆ. ಇದಕ್ಕೆ ವಿರುದ್ಧವಾಗಿ, ಒಪ್ಪಂದದಡಿ ಅಸ್ಸಾಂ ಈಗ ಅದಾನಿ ಗ್ರೂಪ್ ನಿಂದ 2030ರಿಂದ ಹಂತಹಂತವಾಗಿ 3,200 ಮೆಗಾ ವ್ಯಾಟ್ ವಿದ್ಯುತ್ತನ್ನು ಖರೀದಿಸಲು ಬದ್ಧವಾಗಿದೆ.
ಆರ್ ಎ ಪಿ ಗಳು ರಾಜ್ಯದ ಭವಿಷ್ಯದ ವಿದ್ಯುತ್ ಅಗತ್ಯಗಳನ್ನು ಬಿಂಬಿಸುವ ಕಡ್ಡಾಯ ಮತ್ತು ವಿವರಣಾತ್ಮಕ ವರದಿಗಳಾಗಿವೆ. ಸಿಇಎ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸುವ ಈ ವರದಿಗಳನ್ನು ರಾಜ್ಯಗಳು ವಿದ್ಯುತ್ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಅನುಸರಿಸಬೇಕಾಗುತ್ತದೆ. ಕೇಂದ್ರ ಸರಕಾರದೊಂದಿಗೆ ಸಂವಹನದಲ್ಲಿ ಅಸ್ಸಾಂ ತನ್ನ ವಿದ್ಯುತ್ ಅಗತ್ಯಗಳನ್ನು ಉತ್ಪ್ರೇಕ್ಷಿಸಿತ್ತು
ಎನ್ನುವುದನ್ನು ದಾಖಲೆಗಳು ಬಹಿರಂಗಗೊಳಿಸಿವೆ. ಅಲ್ಲದೆ, ಈ ಟೆಂಡರ್ ವಿಶೇಷ ವಿನಾಯಿತಿಗಳನ್ನೂ ಪಡೆದಿದೆ. ವಿಜೇತ ಬಿಡ್ಡರ್ ಭೂಮಿ ಮತ್ತು ಅರಣ್ಯ ಅನುಮತಿಗಳನ್ನು ಪಡೆದುಕೊಳ್ಳಲು ಪ್ರಮಾಣಿತ ಅಗತ್ಯಗಳನ್ನು ಮನ್ನಾ ಮಾಡಲಾಗಿದ್ದು, ಇದು ಅದಾನಿ ಗ್ರೂಪ್ನ ನಿರ್ಮಾಣ ವೆಚ್ಚವನ್ನು ಇನ್ನಷ್ಟು ತಗ್ಗಿಸುತ್ತದೆ. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವೂ ಒಪ್ಪಂದವನ್ನು ಸುಗಮಗೊಳಿಸಲು ತನ್ನ ಕೊಡುಗೆಯನ್ನು ನೀಡಿದೆ. ನಿಯಮಗಳ ಪ್ರಕಾರ, ಕೇಂದ್ರ ಸರಕಾರದ ನೀತಿಯಡಿ ವಿದ್ಯುತ್ ಸ್ಥಾವರವು ಖಚಿತಪಡಿಸಿದ ಕಲ್ಲಿದ್ದಲು ಪೂರೈಕೆಯನ್ನು ಪಡೆಯಲು ಕಲ್ಲಿದ್ದಲು ಮೂಲಕ್ಕೆ ಸಮೀಪವಿರಬೇಕು. ಆದರೆ ಅದಾನಿ ಗ್ರೂಪ್ ನ ಪ್ರಸ್ತಾವಿತ ನೂತನ ಸ್ಥಾವರವು ಅದರ ಕಲ್ಲಿದ್ದಲು ಮೂಲದಿಂದ ದೂರದಲ್ಲಿದೆ. ಆದರೆ, ಕೇಂದ್ರ ಸರಕಾರವು ಈ ಷರತ್ತನ್ನು ಗಾಳಿಗೆ ತೂರಿದೆ ಮತ್ತು ಅದಾನಿ ಗ್ರೂಪ್ ಗೆ ವಿಶೇಷ ವಿನಾಯಿತಿಯನ್ನು ನೀಡಿದೆ.
ವಿಪರ್ಯಾಸವೆಂದರೆ, ಅಸ್ಸಾಂ ಸರಕಾರದ ಮುಖ್ಯ ಕಾರ್ಯ ದರ್ಶಿ ರವಿ ಕೋಟಾ ಅವರು ಇಂತಹ ದೀರ್ಘಕಾಲೀನ ಬದ್ಧ ಕಲ್ಲಿದ್ದಲು ವಿದ್ಯುತ್ ಖರೀದಿ ಒಪ್ಪಂದಗಳನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.






