ಚರಿತ್ರೆಯ ನೆನಪುಗಳ ಮೇಲೆ ದಾಳಿ...

ಆಧುನಿಕ ಭಾರತ ಪುರಾಣ ಭಾರತಕ್ಕಿಂತಲೂ ಭಿನ್ನವಾಗಿಲ್ಲ. ಬುದ್ಧ ಗುರುದೇವನನ್ನು ಈ ನೆಲದಿಂದ ಓಡಿಸಿದವರು, ಬುದ್ಧನ ನೆನಪು ಯುವಕರಿಗೆ ಆಗಬಾರದೆಂದು ಬುದ್ಧಪೂರ್ಣಿಮೆಯಂದು ಪೋಕ್ರಾನ್ ಅಣುಪ್ರಯೋಗದ ಮೂಲಕ ಅದನ್ನು ಅಳಿಸುವ ಪ್ರಯತ್ನ ಮಾಡಿದರು. ಡಿಸೆಂಬರ್ ಆರು ಡಾ.ಬಾಬಾಸಾಹೇಬರ ಪರಿನಿರ್ವಾಣದ ದಿನವನ್ನು ಬಾಬರಿ ಮಸೀದಿ ಕೆಡವಲು ಆರಿಸಿಕೊಂಡರು. ಗಾಂಧಿ ಎಂದರೆ ಶಾಂತಿ, ಸಹನೆ, ಅಹಿಂಸೆ ಈ ಮೌಲ್ಯಗಳಿಗೆ ಸನಾತನ ಹಿಂದೂ ಕೋಮುವಾದದ ಆಳದಲ್ಲಿಯೇ ವಿರೋಧವಿದೆ. ಹೀಗಾಗಿ ಇಂದು ಸರ್ವೋದಯ, ಗಾಂಧೀಜಿಯ ಮೌಲ್ಯಗಳನ್ನು ನಾಶಗೊಳಿಸಲು ಮುಂದಾಗಿದೆ.
ಹಿಂದುತ್ವದ ಹಿಡನ್ ಅಜೆಂಡಾ ಇಂದು ಬಯಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಜವಾದ ಮುಖ ಇಂದು ಕಾಣಿಸುತ್ತಿದೆ. ಇಲ್ಲಿಯವರೆಗೂ ಮುಸ್ಲಿಮ್ ವಿರೋಧಿತನವನ್ನು ಕೇಂದ್ರವಾಗಿಸಿಕೊಂಡು ಧರ್ಮದ ಹೆಸರಿನಲ್ಲಿ ಯುವಕರನ್ನು ಸೆಳೆಯುತ್ತ ಬಂದಿತು. ಇಂದು ಯುವಕರ ನೆನಪುಗಳ ಮೇಲೆ ದಾಳಿ ಮಾಡುವುದಕ್ಕೆ ಮುಂದಾಗಿದೆ. ವೈದಿಕ ಧರ್ಮದ ಧರ್ಮಗ್ರಂಥ ಮನುಸ್ಮತಿಯ ವಿಚಾರಗಳನ್ನು ಒಂದೊಂದಾಗಿ ಜಾರಿಗೊಳಿಸುವ ಪ್ರಯತ್ನಗಳನ್ನು ಕಳೆದ ಹದಿನೈದು ವರ್ಷಗಳಿಂದ ಮಾಡುತ್ತ ಯಶಸ್ಸನ್ನು ಕಂಡಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ಚರಿತ್ರೆಯ ನೆನಪುಗಳನ್ನು ಒಂದೊಂದಾಗಿ ಅಳಿಸುತ್ತ ಬಂದಿರುವ ಕ್ರೌರ್ಯ ನಮಗೆ ಕಾಣದೆ ಹೋಯಿತು. ಅದರ ಮುಂದುವರಿಕೆಯೇ ಯಾವುದೇ ಚರ್ಚೆಯಿಲ್ಲದೆ ಸರ್ವಾಧಿಕಾರಿತನದಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಬದಲಿಸಿದೆ. ಹಿಂಸೆಯನ್ನು, ಅಸಮಾನತೆಯನ್ನು ಉಸಿರಾಗಿಸಿಕೊಂಡಿರುವ, ಸಂವಿಧಾನವನ್ನು ಒಪ್ಪದ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಯಂತ್ರಣದಲ್ಲಿರುವ ಕೇಂದ್ರ ಸರಕಾರದ ಕಾನೂನುಗಳಿಗೆ ಮೂಲ ಮನುಸ್ಮತಿಯೆಂಬುದು ಅದರ ಆಡಳಿತ ವೈಖರಿಯಿಂದ ಜಗಜ್ಜಾಹೀರಾಗಿದೆ.
ಬಿಜೆಪಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ತಕ್ಷಣ ಅದರ ವೈರಿಗಳಾರು ಎಂಬುದನ್ನು ಗುರುತಿಸಿಕೊಂಡು ಅವುಗಳ ಮೇಲೆ ದಾಳಿ ಮಾಡುತ್ತ ಬಂದಿತು. ಸ್ವಾತಂತ್ರ್ಯಾನಂತರ ಹುಟ್ಟಿದವರಿಗೆ ರಾಷ್ಟ್ರೀಯ ನಾಯಕರು, ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದವರ ಕುರಿತು ಇತಿಹಾಸದ ಪಠ್ಯಗಳು ಮತ್ತು ನಮ್ಮ ಹಿರಿಯರ ಅನುಭವದ ಮಾತುಗಳು ದೇಶಪ್ರೇಮ, ತ್ಯಾಗ, ಬಲಿದಾನ ಮಾಡಿದವರ ಕುರಿತು ರೂಪಗೊಂಡ ಚಿತ್ರಗಳ ಎದೆಯಾಳದಲ್ಲಿ ಹಸಿರಾಗಿದ್ದವು. ಈ ನೆನಪುಗಳನ್ನು ಅಳಿಸುವ ಕೆಲಸವನ್ನು ಬಹುಸೂಕ್ಷ್ಮವಾಗಿ ಸರಕಾರದ ಮೂಲಕವೇ ಹಿಂದುತ್ವದ ಉಸಿರಾಗಿರುವ ಮನುಸ್ಮತಿಯ ವಿಚಾರಗಳು, ಸಿದ್ಧಾಂತಗಳು ಯುವಕರ ಚರಿತ್ರೆಯ ನೆನಪುಗಳ ಮೇಲೆ ದಾಳಿ ಮಾಡುತ್ತಿವೆ. ದೇಶದಲ್ಲಿನ ಯಾವುದೇ ಸಂಘ ಸಂಸ್ಥೆಗಳ ಯಾವುದೇ ನೋಂದಣಿಯಿಲ್ಲದೆ, ಸಾರ್ವಜನಿಕರು ಯಾವುದೇ ರೂಪದಲ್ಲಿ, ಹೆಸರಿನಲ್ಲಿ ನೀಡುವ ಹಣದ ಕುರಿತು ಸರಕಾರಕ್ಕೆ ದೇಶವಾಸಿಗಳಿಗೆ ಉತ್ತರದಾಯಿಯಾಗಿರಬೇಕಾಗಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಕಡ್ಡಾಯವಾಗಿರಬೇಕು. ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ದೇಶದ ಮೂಲೆ ಮೂಲೆಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳಿಗೆ ಬೃಹತ್ ಕಟ್ಟಡಗಳನ್ನು ಹೊಂದಿರುವ, ಸಂಘ ಪರಿವಾರದ ಆರ್ಥಿಕ ಮೂಲವನ್ನು ಬಹಿರಂಗಗೊಳಿಸುವುದು ಅದರ ನೈತಿಕ ಹೊಣೆಗಾರಿಕೆ. ಯಾವುದೇ ಪಕ್ಷದ ಸರಕಾರವಿದ್ದರೂ ಅದು ತನ್ನ ಕಾನೂನಿನ ಚೌಕಟ್ಟಿಗೆ ಒಳಪಡಿಸಿಕೊಳ್ಳಬೇಕು. ಯಾವುದೇ ಸಂಸ್ಥೆ ಸಂಘಗಳಿಗೆ ಸದಸ್ಯರುಗಳು ದಕ್ಷಿಣೆಯಾಗಿ, ವಂತಿಗೆಯಾಗಿ ನೀಡುವ ಹಣದ ಮೂಲವು ಸರಕಾರದ ಕಾನೂನಿನಡಿಯಲ್ಲಿ ಇರಬೇಕಲ್ಲವೆ? ಕಾಳಸಂತೆಕೋರರು, ದೇಶದ್ರೋಹಿಗಳು, ಕಳ್ಳರು, ದರೋಡೆಕೋರರು ಒಳಗಿನ ಹೊರಗಿನವರು ಗುರುದಕ್ಷಿಣೆಯೆಂದೋ, ದೇಣಿಗೆಯೆಂದೋ ನೀಡುವ ಹಣ ದೇಶದ ಭದ್ರತೆಗೆ ಮುಂದೊಂದು ದಿನ ಸಂಚಕಾರ ತರುವುದಿಲ್ಲವೆಂದು ಏನು ಗ್ಯಾರಂಟಿಯೆಂದು ಸಾಮಾನ್ಯ ನಾಗರಿಕರು ಪ್ರಶ್ನಿಸಿದರೆ ಉತ್ತರ ಸರಕಾರ, ಸಂಘ ಸಂಸ್ಥೆಗಳು ನೀಡಬೇಕಾಗುತ್ತವೆ.
ಕಳೆದ ಹದಿನೈದು ವರ್ಷಗಳಿಂದ ಸನಾತನ ವೈದಿಕ ಸಿದ್ಧಾಂತವನ್ನು ಅಂತರ್ಗತ ಮಾಡಿಕೊಂಡಿರುವ ಬಿಜೆಪಿ ಸರಕಾರದ ಯೋಜನೆಗಳ ಹೆಸರುಗಳನ್ನು ಮತ್ತು ಅದು ಆಯ್ಕೆ ಮಾಡಿಕೊಂಡ ದಿನವನ್ನು ಗಮನಿಸಿದರೆ ಅದರ ಉದ್ದೇಶ ಸ್ಪಷ್ಟವಾಗುತ್ತದೆ. ಬುದ್ಧ, ಗಾಂಧಿ, ನೆಹರೂ, ಸರದಾರ್ ವಲ್ಲಭಭಾಯಿ ಪಟೇಲ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದವರ ಕುರಿತು ನಮ್ಮ ಭಾವ ಮತ್ತು ಬುದ್ಧಿಕೋಶದಲ್ಲಿರುವ ನೆನಪುಗಳನ್ನು ನಾಶಮಾಡುವ ಪ್ರಯತ್ನದಲ್ಲಿ ಒಂದಿಷ್ಟು ಸಫಲವಾಗಿದೆ. ಎರಡು ಸಾವಿರದೀಚೆಗೆ ಹುಟ್ಟಿದವರಿಗೆ ಬುದ್ಧಿಭಾವಗಳಲ್ಲಿ ಪ್ರಜಾಪ್ರಭುತ್ವದ ಅರಿವು, ಸಂವಿಧಾನದ ಮಹತ್ವ, ಬಹುತ್ವದ ಸೌಂದರ್ಯ, ಸಹಬಾಳ್ವೆ, ಸಮಾನತೆಯ ವಾಸ್ತವತೆಯ ಕುರಿತು ಶಿಕ್ಷಣದ ಮೂಲಕ, ಸಮಾಜದ ಮೂಲಕ ಹೇಳಬೇಕಾದವುಗಳನ್ನು ಹೇಳದ ವಾತಾವರಣವನ್ನು ಸರಕಾರ ಮೂಡಿಸಿದೆ.
ನಮ್ಮ ಮತ್ತು ನಮ್ಮ ಹಿರಿಯರ ನೆನಪುಗಳಲ್ಲಿ, ಆಚರಣೆಗಳಲ್ಲಿ, ಕಥೆಗಳಲ್ಲಿ, ಹಾಡುಗಳಲ್ಲಿ, ಕುಣಿತಗಳಲ್ಲಿ, ಸೀತಾಮಾತೆ, ಶ್ರೀರಾಮಚಂದ್ರನ ಪರಿವಾರದ ಚಿತ್ರಗಳು ಇದ್ದವು. ಪೌರಾಣಿಕವೋ, ಐತಿಹಾಸಿಕವೋ ಎಂಬುದಕ್ಕಿಂತಲೂ ಮೌಲ್ಯವಾಗಿ ರಾಮಾಯಣದ ಪಾತ್ರಗಳನ್ನು ಮನೆ ಮತ್ತು ಮನದಲ್ಲಿ ಪೂಜಿಸುತ್ತಿದ್ದರು ಮತ್ತು ಹಾಗೇ ಬದುಕುವ ಪ್ರಯತ್ನವನ್ನು ಮಾಡುತ್ತಿದ್ದರು. ಹಿರಿಯಣ್ಣನೆಂದರೆ ಶ್ರೀರಾಮಚಂದ್ರನಂತಿರಬೇಕು, ಹೆಂಡತಿಯೆಂದರೆ ಸೀತಾಮಾತೆಯಂತಿರಬೇಕು, ತಮ್ಮನೆಂದರೆ ಲಕ್ಷ್ಮಣ, ಭರತ, ಶತೃಘ್ನರ ಹಾಗಿರಬೇಕು. ಭಕ್ತಿಗೆ ಹನುಮನನ್ನು ಸಮೀಕರಿಸಿ ಪರಿವಾರಸಹಿತ ಇದ್ದ ಚಿತ್ರಪಟವನ್ನು ಮನೆಯ ಜಗಲಿಯ ಮೇಲೆ ಇಟ್ಟು ಭಾರತ ಪೂಜಿಸುತ್ತಿತ್ತು. ಇದು ಕೇವಲ ಚಿತ್ರವಾಗಿರಲಿಲ್ಲ. ಭಾರತದ ಬಹುತ್ವದ ಸಂಕೇತವಾಗಿತ್ತು. ಇಂದು ಈ ನೆನಪುಗಳನ್ನು ಅಳಿಸಿಹಾಕುವ ಪ್ರಯತ್ನ ನಡೆದಿದೆ. ಯುವಕರು ಈ ಬಹುತ್ವ ಭಾರತದ ಚಿತ್ರಪಟದಿಂದಲೇ ದೂರ ಸರಿದಿರುವರು. ಪುರುಷೋತ್ತಮ ರಾಮನನ್ನು ಒರಗಿಕೊಂಡೇ ವನವಾಸಕ್ಕೆ ಹೋದ ಸೀತೆಯನ್ನು ಸಂಘದ ಪಿತೃಸತ್ತೆ ದೂರ ಮಾಡಿದೆ. ಲಕ್ಷ್ಮಣನನ್ನು ಚಿತ್ರಪಟದಿಂದ ಅಳಿಸಿಹಾಕಿ ಸಹೋದರತ್ವದ ಮೌಲ್ಯವನ್ನು ನಾಶಗೊಳಿಸಲಾಗಿದೆ. ರಾಮಬಂಟ ಹನುಮಂತನನ್ನು ಓಡಿಸುವುದರ ಮೂಲಕ ಹಿಂದುಳಿದ, ಬುಡಕಟ್ಟು ಸಮುದಾಯಗಳನ್ನು ಚಿತ್ರದಲ್ಲಾದರೂ ಜಗಲಿಯ ಮೇಲಿಟ್ಟು ಪೂಜಿಸುವುದನ್ನು ಸಹಿಸದ ಸನಾತನ ಮನಸ್ಸುಗಳು ಅವರನ್ನು ಬೀದಿಯಲ್ಲಿ ನಿಲ್ಲಿಸಿ ಘನತೆಯ ಬದುಕನ್ನು ಕಿತ್ತುಕೊಂಡಿದೆ. ಈಗೇನಿದ್ದರೂ ಬಾಣ ಹಿಡಿದು ಯುದ್ಧ ಸನ್ನದ್ಧವಾಗಿರುವ ಬೀಭತ್ಸ ರಾಮನ ಚಿತ್ರವನ್ನು ಹಾದಿಬೀದಿಯಲ್ಲಿ ನಿಲ್ಲಿಸಿ ಮಹಿಳೆಯರನ್ನು, ಆದಿವಾಸಿಗಳನ್ನು, ಸಹೋದರ ಸಂಬಂಧದ ಸಮುದಾಯಗಳನ್ನು ಬೆದರಿಸುವ ತಂತ್ರಗಾರಿಕೆಯಲ್ಲಿ ಒಂದಿಷ್ಟು ಯಶಸ್ಸು ಕಂಡಿರುವರು. ಪರಿವಾರದ ಶ್ರೀರಾಮಚಂದ್ರನ ಕೌಟುಂಬಿಕ ಸಹನೆ, ಸಹಬಾಳ್ವೆ, ಸಹೋದತ್ವ, ಪ್ರಜಾಪ್ರಿಯತೆ, ನಿಷ್ಠೆ, ಪ್ರಾಮಾಣಿಕತೆ ಎನ್ನುವ ಮೌಲ್ಯಗಳನ್ನೆಲ್ಲ ನಾಶಗೊಳಿಸಲೆಂದೇ ಯುದ್ಧದಾಹಿ ರಾಮನನ್ನು ಚಿತ್ರಿಸಿ ಯುವಕರ ಮನಸ್ಸಿನಲ್ಲಿ ಯುದ್ಧೋತ್ಸಾಹವನ್ನು ತುಂಬಲು ಸನಾತನದ ಹೆಸರಿನ ಮತೀಯ ಶಕ್ತಿಗಳು ರಾಜಕಾರಣ ಮಾಡುತ್ತಿವೆ. ಇದು ಪುರಾಣ ಭಾರತದಿಂದ ಸಮಾಜದಲ್ಲಿ ಜೀವಂತವಿದ್ದ ಮೌಲ್ಯಗಳನ್ನು ನಾಶಗೊಳಿಸಿ ವ್ಯಕ್ತಿಕೇಂದ್ರಿತ ಭಾರತ ಶ್ರೇಷ್ಠ ಭಾರತವೆಂದು ಕೂಗಲು ಇದೇ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತನ ವಾರಸುದಾರರನ್ನು ಬಳಸಿಕೊಳ್ಳುತ್ತಿರುವರು.
ಆಧುನಿಕ ಭಾರತ ಪುರಾಣ ಭಾರತಕ್ಕಿಂತಲೂ ಭಿನ್ನವಾಗಿಲ್ಲ. ಬುದ್ಧ ಗುರುದೇವನನ್ನು ಈ ನೆಲದಿಂದ ಓಡಿಸಿದವರು, ಬುದ್ಧನ ನೆನಪು ಯುವಕರಿಗೆ ಆಗಬಾರದೆಂದು ಬುದ್ಧಪೂರ್ಣಿಮೆಯಂದು ಪೋಕ್ರಾನ್ ಅಣುಪ್ರಯೋಗದ ಮೂಲಕ ಅದನ್ನು ಅಳಿಸುವ ಪ್ರಯತ್ನ ಮಾಡಿದರು. ಡಿಸೆಂಬರ್ ಆರು ಡಾ.ಬಾಬಾಸಾಹೇಬರ ಪರಿನಿರ್ವಾಣದ ದಿನವನ್ನು ಬಾಬರಿ ಮಸೀದಿ ಕೆಡವಲು ಆರಿಸಿಕೊಂಡರು. ಗಾಂಧಿ ಎಂದರೆ ಶಾಂತಿ, ಸಹನೆ, ಅಹಿಂಸೆ ಈ ಮೌಲ್ಯಗಳಿಗೆ ಸನಾತನ ಹಿಂದೂ ಕೋಮುವಾದದ ಆಳದಲ್ಲಿಯೇ ವಿರೋಧವಿದೆ. ಹೀಗಾಗಿ ಇಂದು ಸರ್ವೋದಯ, ಗಾಂಧೀಜಿಯ ಮೌಲ್ಯಗಳನ್ನು ನಾಶಗೊಳಿಸಲು ಮುಂದಾಗಿದೆ. ಮೊದಲ ಅವಧಿಯಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ತಕ್ಷಣ ಮಾಡಿದ ಮುಖ್ಯ ಕೆಲಸ ಗಾಂಧಿ ವಿಚಾರಧಾರೆಯನ್ನು ಯುವಕರ ನೆನಪಿನಾಳದಲ್ಲಿ ಇಳಿಯದ ಹಾಗೇ ಬಹುಸೂಕ್ಷ್ಮವಾಗಿ ಯುವಕರ ಮೆದುಳಿಗೆ ಕೈಹಾಕಿ ಅಹಿಂಸೆ, ಶಾಂತಿ, ಸಹಿಷ್ಣುತೆಯ ಮೌಲ್ಯಗಳ ಸಂಕೇತಗಳನ್ನು ಒಂದೊಂದಾಗಿ ನಾಶಪಡಿಸಿದರು. ಗಾಂಧೀಜಿಗೂ ಅವರ ಕನ್ನಡಕಕ್ಕೂ ಅವಿನಾಭಾವ ಸಂಬಂಧವಿದೆ. ಗಾಂಧೀಜಿಯ ಕಣ್ಣುಗಳೆಂದರೆ ಅವರ ದೃಷ್ಟಿಕೋನ, ವಿಚಾರಧಾರೆ. ಸನಾತನ ಹಿಂದೂಗಳಿಗೆ ಗಾಂಧೀಜಿ ಬಹುದೊಡ್ಡ ವೈರಿ. ಹೀಗಾಗಿ ಅವರ ದೃಷ್ಟಿಕೋನವನ್ನು, ವಿಚಾರಗಳನ್ನು ಬಿಂಬಿಸುವ ಸಂಕೇತಗಳನ್ನು ಕಿತ್ತುಕೊಂಡು ಅವುಗಳಿಗೆ ಬೇರೆ ನಾಮಕರಣ ಮಾಡಿದರು. ಚರಿತ್ರೆಯ ದಿನಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಸನಾತನ ಹಿಂದುತ್ವದ ಹಿತವನ್ನು ದಿನಗಳಲ್ಲಿ ಪ್ರತಿಷ್ಠಾಪಿಸುವುದರಲ್ಲಿ ಜನರು ನೀಡಿದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವರು. ಸ್ವಾತಂತ್ರ್ಯ ಪೂರ್ವದ ಭಾರತವಾಗಲಿ, ಪುರಾಣ ಭಾರತವಾಗಲಿ ಯುವಕರ ಮೆದುಳಿನಲ್ಲಿ ಉಳಿಯಲೇಬಾರದೆಂಬ ಬಹುದೊಡ್ಡ ಕುತಂತ್ರದಿಂದ ಇತಿಹಾಸದ ದಿನಗಳನ್ನು ಎಚ್ಚರಿಕೆಯಿಂದಲೇ ಆರಿಸಿಕೊಂಡು ದಾಳಿ ಮಾಡುತ್ತಿರುವರು.
ಅಕ್ಟೋಬರ್ ಎರಡು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅಂದು ವಿಶ್ವದಲ್ಲಿ ಶಾಂತಿಯ ದಿನವೆಂದು ಜನರು ಸಂಭ್ರಮಿಸುವರು. ಸಂಭ್ರಮವನ್ನು ಯುವಕರು ನೋಡಬಾರದು, ಆಚರಿಸಬಾರದು ಎಂಬ ದುಷ್ಟತನದಿಂದ ಆ ದಿನವನ್ನು ಬಿಜೆಪಿ ಆಡಳಿತದ ಕೇಂದ್ರ ಸರಕಾರ ಮೊದಲನೇ ಹಂತದಲ್ಲಿ ಗಾಂಧೀಜಿಯ ಕನ್ನಡಕವನ್ನು ಕಿತ್ತುಕೊಂಡದ್ದಷ್ಟೇ ಅಲ್ಲ ಅವರು ಹುಟ್ಟಿದ ದಿನದ ನೆನಪನ್ನು ಅಳಿಸಲೆಂದೇ ಅಕ್ಟೋಬರ್ ಎರಡರಂದು ಸ್ವಚ್ಛ ಭಾರತ ಯೋಜನೆಯನ್ನು ಜಾರಿಗೊಳಿಸಿ ಗಾಂಧೀಜಿಯ ಕನ್ನಡಕದ ಒಂದು ಕಣ್ಣಿನಲ್ಲಿ ಸ್ವಚ್ಛ ಇನ್ನೊಂದು ಕಣ್ಣಿನಲ್ಲಿ ಭಾರತವೆಂದು ಬರೆದು ಗಾಂಧೀಜಿಯ ಕನ್ನಡಕವನ್ನು ಸ್ವಚ್ಛ ಭಾರತದ ಸಂಕೇತವಾಗಿ ಬಳಕೆಯಲ್ಲಿ ತಂದಿತು. ಇಡೀ ದೇಶದುದ್ದಕ್ಕೂ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಹಳ್ಳಿ ನಗರವೆನ್ನದೆ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಕ್ಟೋಬರ್ ಎರಡರಂದು ಊರು ತುಂಬ ಗಾಂಧಿ ಫೋಟೊ ಹಿಡಿದುಕೊಂಡು ಮೆರವಣಿಗೆ ಮಾಡುತ್ತಿದ್ದರು. ಗಾಂಧೀಜಿಯವರ ಬದುಕು, ಅವರ ಮೌಲ್ಯಗಳು, ದೇಶಪ್ರೇಮ, ಸ್ವಾವಲಂಬನೆ, ಶಾಂತಿ, ಜಾತ್ಯತೀತ ಮೌಲ್ಯಗಳ ಕುರಿತು ಭಾಷಣ ಮಾಡುತ್ತಿದ್ದರು. ಹೀಗೆ ಮಾಡುವುದರ ಮೂಲಕ ಊರು, ದೇಶದ ತುಂಬ ಗಾಂಧೀಜಿಯವರ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ರವಾನಿಸುವ ಕೆಲಸವಾಗುತ್ತಿತ್ತು. ಆದರೆ ಇಂದು ಶಾಲೆ ಕಾಲೇಜುಗಳನ್ನು ಒಳಗೊಂಡೇ ಸ್ವತಃ ಪ್ರಧಾನಮಂತ್ರಿಯೇ ಕೈಯಲ್ಲಿ ಕಸಬರಿಗೆ ಹಿಡಿದು ಬೀದಿಗುಡಿಸಿ ಸ್ವಚ್ಛಗೊಳಿಸುವ ನಾಟಕ ಮಾಡುತ್ತಿರುವರು. ಈ ನಾಟಕದ ಕಥಾವಸ್ತು ನಿರ್ದೇಶನ, ನಿರ್ಮಾಣ ಎಲ್ಲವೂ ವೈದಿಕ ಧರ್ಮದ, ಸನಾತನಿಗಳ ಕೈಯಲ್ಲಿಯೇ ಇದೆ. ಕೇವಲ ನಟರು ಮಾತ್ರ ಸರಕಾರದ ಹುದ್ದೆಗಳಲ್ಲಿರುವರು. ಈ ಕಾರ್ಯವನ್ನು, ಚಿತ್ರವನ್ನು ಸಹಿಸಿಕೊಳ್ಳದ ಸನಾತನಿಗಳು, ವೈದಿಕ ಹಿತಾಸಕ್ತಿಗಳು ಅವೈದಿಕ ಪ್ರಧಾನಮಂತ್ರಿಯ ಮೂಲಕವೇ ಗಾಂಧೀಜಿಯ ಮೌಲ್ಯಗಳ ಕತ್ತು ಹಿಸುಕಿಸುವ ಕೆಲಸವನ್ನು ಮಾಡುತ್ತಿರುವುದು ಚರಿತ್ರೆಯ ವ್ಯಂಗ್ಯ.
ಶ್ರೀರಾಮನ ಪರಮಭಕ್ತ ಗಾಂಧೀಜಿಯವರನ್ನು ಅವರ ಸಂದೇಶವನ್ನು ಸಾರುವ ಒಂದೊಂದೇ ಸಂಕೇತಗಳನ್ನು, ದಿನಗಳನ್ನು ಸನಾತನ ಹಿಂದುತ್ವದ ಅಜೆಂಡಾಗಳ ಹೇರಿಕೆಗಾಗಿ ಬಳಸಿಕೊಳ್ಳುತ್ತಿದೆ. ಗಾಂಧಿ, ಅಂಬೇಡ್ಕರ್ ಅವರನ್ನು ಯುವಕರ ನೆನಪಿನಿಂದ ದೂರ ಸರಿಸುತ್ತಿರುವವರು ಪಟೇಲರನ್ನು ಬಿಡುವರೆ? ಉಕ್ಕಿನ ಮನುಷ್ಯನೆಂದು ಪಠ್ಯದ ಮೂಲಕ ಇಲ್ಲಿಯವರೆಗೂ ಎಲ್ಲರ ನೆನಪಿನ ಕೋಶದಲ್ಲಿದ್ದ ಪಟೇಲರನ್ನು ಮೂರ್ತಿಯಾಗಿಸಿದ್ದರ ಹಿಂದೆಯೂ ಒಂದು ಲೆಕ್ಕಾಚಾರವಿದೆ. ಈಗಿನ ಮಕ್ಕಳಿಗೆ ಪರೀಕ್ಷೆಯಲ್ಲಿ ಡಿಸೆಂಬರ್ ಆರು ಎಂದರೆ ಬಾಬರಿ ಮಸೀದಿ ಕೆಡವಿದ ದಿನ, ಅಕ್ಟೋಬರ್ ಎರಡು ಎಂದರೆ ಸ್ವಚ್ಛ ಭಾರತ ದಿನ, ಉಕ್ಕಿನ ಮನುಷ್ಯ ಸರದಾರ್ ವಲ್ಲಭಭಾಯಿ ಪಟೇಲರ ಮೂರ್ತಿ ಪ್ರವಾಸಿಗರನ್ನು ಸೆಳೆಯುವ ಬೃಹತ್ ಮೂರ್ತಿಯಾಗಿ ನಿಂತಿದೆ. ಇದರ ಹಿಂದೆ ಗುಜರಾತಿನ ವೋಟ್ ಬ್ಯಾಂಕಿನ ಲೆಕ್ಕಾಚಾರವೂ ಇದೆ. ಬಡವರಿಗಾಗಿ, ಅವರ ದುಡಿಮೆಯ, ಘನತೆಯ ಬದುಕನ್ನು ಎತ್ತಿಹಿಡಿಯುವ ಮಹತ್ವದ ‘‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ‘ಜಿ ರಾಮ್ ಜಿ’ ಎಂದು ಬದಲಿಸುವುದರ ಮೂಲಕ ರಾಮನನ್ನು ಮತ್ತು ದುಡಿಯುವ ವರ್ಗವನ್ನು ಅಪಮಾನಿಸಿದ್ದಾರೆ. ಉದ್ಯೋಗ ಮೂಲಭೂತ ಹಕ್ಕು ಎಂಬುದನ್ನು ಕಿತ್ತುಕೊಂಡು, ಸಂವಿಧಾನದ ಆಶಯಗಳಿಗೆ ಅಪಚಾರವನ್ನು ಮಾಡಿರುವರು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿರುವರು. ಒಂದು ಬಡವರ ಹೊಟ್ಟೆಯ ಮೇಲೆ ಹೊಡೆಯುವುದಾದರೆ ಇನ್ನೊಂದು ಬಡವರ ರಾಗಿರಾಮ(ರಾಘವ)ನನ್ನು ಮುಂದಿಟ್ಟುಕೊಂಡು ನಮ್ಮ ನೆನಪುಗಳಲ್ಲಿ ಭಕ್ತಿಯ ನೆಲೆಯಲ್ಲಿದ್ದ ಪರಿವಾರದ ಶ್ರೀ ರಾಮನನ್ನು ಯುದ್ಧದಾಹಿ, ಬಿಲ್ಲುಬಾಣ ಹಿಡಿದ ರಾಮನನ್ನಾಗಿಸಿರುವುದರ ಹಿಂದೆ ಬಹುದೊಡ್ಡ ವೈದಿಕ ಹಿತಾಸಕ್ತಿ ಅಡಗಿದೆ.







