Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆ...

ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆ ಮತ್ತು ನಿಯಮ 349: ಸದನದಲ್ಲಿ ರಾಹುಲ್ ಗಾಂಧಿ ಭಾಷಣವನ್ನು ಸ್ಪೀಕರ್ ತಡೆದಿದ್ದೇಕೆ?

ರಶ್ಮಿ ಕಾಸರಗೋಡುರಶ್ಮಿ ಕಾಸರಗೋಡು4 Feb 2026 9:36 AM IST
share
ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆ ಮತ್ತು ನಿಯಮ 349: ಸದನದಲ್ಲಿ ರಾಹುಲ್ ಗಾಂಧಿ ಭಾಷಣವನ್ನು ಸ್ಪೀಕರ್ ತಡೆದಿದ್ದೇಕೆ?

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯೊಂದನ್ನು ಉಲ್ಲೇಖಿಸಿ ಭಾಷಣ ಶುರು ಮಾಡಿದಾಗ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಪುಸ್ತಕವನ್ನು ಉಲ್ಲೇಖಿಸಿದ ದಿ ಕ್ಯಾರವಾನ್ ಲೇಖನವನ್ನು ರಾಹುಲ್ ಗಾಂಧಿಯವರು ಉಲ್ಲೇಖಿಸದಂತೆ ಲೋಕಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮ 349 ಮತ್ತು 353 ಅನ್ನು ಉಲ್ಲೇಖಿಸಿ ಭಾಷಣ ಮುಂದುವರಿಸಲು ಅವಕಾಶ ನೀಡಲಿಲ್ಲ.

ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಜನರಲ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ‘Four Stars of Destiny’ಯ ಆಯ್ದ ಭಾಗಗಳನ್ನು ಉಲ್ಲೇಖಿಸಿ ತಮ್ಮ ಭಾಷಣವನ್ನು ಪ್ರಾರಂಭಿಸಿದಾಗ ಗದ್ದಲ ಶುರುವಾಯಿತು. ರಾಹುಲ್ ಗಾಂಧಿ ಉಲ್ಲೇಖಿಸುತ್ತಿದ್ದ ನಿಯತಕಾಲಿಕೆ ಸದನದ ವ್ಯವಹಾರಗಳ ಹೊರಗಿನದ್ದಾಗಿದ್ದು, ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿಲ್ಲ ಎಂದು ವಿಷಯವನ್ನು ಬದಲಿಸುವಂತೆ ಸೂಚಿಸಲಾಯಿತು. ರಾಹುಲ್ ತಮ್ಮ ಭಾಷಣದಲ್ಲಿ “ಡೋಕ್ಲಾಮ್‌ನಲ್ಲಿ ಚೀನೀ ಟ್ಯಾಂಕ್‌ಗಳು” ಎಂದು ಹೇಳುತ್ತಿದ್ದಂತೆಯೇ ಸದನದಲ್ಲಿ ಭಾರೀ ವಿರೋಧ ವ್ಯಕ್ತವಾಯಿತು.

ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದರೂ ಮೌನವಾಗಿ ನೋಡುತ್ತಿದ್ದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಅಪ್ರಕಟಿತ ಪುಸ್ತಕದ ಉಲ್ಲೇಖಗಳು ಸಂಸದೀಯ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ವಾದಿಸಿದರು. ಈ ವಿಷಯ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದ್ದಲ್ಲವೆಂದೂ, ಅಪ್ರಕಟಿತ ಪುಸ್ತಕವನ್ನು ಉಲ್ಲೇಖಿಸುವಂತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದರು.

ನಂತರ ರಿಜಿಜು ನಿಯಮ 349 ಅನ್ನು ಉಲ್ಲೇಖಿಸಿ, ರಾಹುಲ್ ಗಾಂಧಿಯವರು ಸಭಾಪತಿಯ ತೀರ್ಪು ಮತ್ತು ಸದನದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಸ್ಪೀಕರ್ ಓಂ ಬಿರ್ಲಾ ಮಧ್ಯಪ್ರವೇಶಿಸಿ, ಅದೇ ನಿಯಮವನ್ನು ಅನ್ವಯಿಸಿ ಅಂತಹ ವಿಷಯವನ್ನು ದೃಢೀಕರಿಸದ ಅಥವಾ ಔಪಚಾರಿಕವಾಗಿ ಸದನದ ಮುಂದೆ ಇಡದ ಹೊರತು ಓದಬಾರದು ಎಂದು ರಾಹುಲ್ ಅವರಿಗೆ ನಿರ್ದೇಶಿಸಿದರು.

ನಿಯಮ 349 ಏನು ಹೇಳುತ್ತದೆ?

ಸಂಸತ್ತಿನ ಸದಸ್ಯರು ಚರ್ಚೆಗಳ ಸಮಯದಲ್ಲಿ ಅನುಸರಿಸಬೇಕಾದ ನಡವಳಿಕೆ ಮತ್ತು ಕಾರ್ಯವಿಧಾನದ ಮಾನದಂಡಗಳನ್ನು ನಿಯಮ 349 ಸೂಚಿಸುತ್ತದೆ. ನಿಯಮದ ಷರತ್ತು (i) ಸದನದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊರತುಪಡಿಸಿ ಯಾವುದೇ ಪುಸ್ತಕ, ಪತ್ರಿಕೆ ಅಥವಾ ಪತ್ರವನ್ನು ಸದಸ್ಯರು ಓದಬಾರದು ಎಂದು ಹೇಳುತ್ತದೆ. ಆದಾಗ್ಯೂ, ನಿಯಮ 349 ಪ್ರಕಟಿತ ಅಥವಾ ಪ್ರಕಟಿಸದ ವಸ್ತುಗಳ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖ ನೀಡುವುದಿಲ್ಲ. ಈ ಪ್ರಕರಣದಲ್ಲಿ ಅನ್ವಯವಾಗುವ ಇತರ ನಿಯಮಗಳು 352 ಮತ್ತು 353.

ನಿಯಮ 352 ಸಂಸದರು ಸದನದಲ್ಲಿ ಮಾತನಾಡುವಾಗ ಆಕ್ಷೇಪಾರ್ಹ ಭಾಷೆಯನ್ನು ಬಳಸುವುದನ್ನು ನಿಷೇಧಿಸುತ್ತದೆ. ಸಂಸತ್ತಿನ ಅಥವಾ ಯಾವುದೇ ರಾಜ್ಯ ಶಾಸಕಾಂಗದ ನಡವಳಿಕೆ ಅಥವಾ ಕಾರ್ಯಕಲಾಪಗಳ ಬಗ್ಗೆ ಸದಸ್ಯರು ಅಗೌರವದ ಹೇಳಿಕೆಗಳನ್ನು ನೀಡಲು ಅನುಮತಿಸಲಾಗುವುದಿಲ್ಲ. ಚರ್ಚೆಗಳು ಸಭ್ಯ ರೀತಿಯಲ್ಲಿರಬೇಕು. ವೈಯಕ್ತಿಕ ದಾಳಿಗಳು ಅಥವಾ ಅವಹೇಳನಕಾರಿ ಕಾಮೆಂಟ್‌ಗಳಿಗಿಂತ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಬೇಕು. ಸದಸ್ಯರು ಮಾತನಾಡುವಾಗ ಸಂಸತ್ತಿನ ಅಥವಾ ಯಾವುದೇ ರಾಜ್ಯ ಶಾಸಕಾಂಗದ ನಡವಳಿಕೆ ಅಥವಾ ಕಾರ್ಯಕಲಾಪಗಳ ಬಗ್ಗೆ ಆಕ್ಷೇಪಾರ್ಹ ಅಭಿವ್ಯಕ್ತಿಗಳನ್ನು ಬಳಸಬಾರದು ಎಂದು ನಿಯಮ ಹೇಳುತ್ತದೆ.

ಮತ್ತೊಂದೆಡೆ, ನಿಯಮ 353 ಮಾನನಷ್ಟ ಅಥವಾ ದೋಷಾರೋಪಣೆಯ ಸ್ವಭಾವದ ಆರೋಪಗಳನ್ನು ನಿಯಂತ್ರಿಸುತ್ತದೆ. ಅಂತಹ ಯಾವುದೇ ಆರೋಪವನ್ನು ಮೊದಲು ಸ್ಪೀಕರ್ ಮತ್ತು ಸಂಬಂಧಪಟ್ಟ ಸಚಿವರಿಗೆ ಸಲ್ಲಿಸಬೇಕು; ಸಚಿವರು ತನಿಖೆ ನಡೆಸಿ ಸೂಕ್ತವಾಗಿ ಪ್ರತಿಕ್ರಿಯಿಸಲು ಅವಕಾಶ ನೀಡಬೇಕು ಎಂದು ಅದು ಹೇಳುತ್ತದೆ.

ಈ ನಿಯಮದಡಿಯಲ್ಲಿ, ಸದನದ ಘನತೆಗೆ ಕುಂದುಂಟುಮಾಡಿದರೆ ಅಥವಾ ಯಾವುದೇ ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸದಿದ್ದರೆ ಸದಸ್ಯರು ಯಾವುದೇ ಆರೋಪ ಮಾಡುವುದನ್ನು ನಿಷೇಧಿಸುವ ಅಧಿಕಾರವನ್ನು ಸ್ಪೀಕರ್ ಹೊಂದಿದ್ದಾರೆ.

ಸದನದ ವ್ಯವಹಾರಕ್ಕೆ ಸಂಬಂಧಿಸಿದ್ದರೆ ಸದಸ್ಯರು ಇವುಗಳಲ್ಲಿ ಯಾವುದನ್ನಾದರೂ ಉಲ್ಲೇಖಿಸಬಹುದು ಎಂದರ್ಥ. ನಿಯಮವು “ಋಣಾತ್ಮಕವಾಗಿ ರೂಪಿಸಲ್ಪಟ್ಟಿದ್ದರೂ” ಇದು “ಧನಾತ್ಮಕ ಅರ್ಥ”ವನ್ನು ಹೊಂದಿದೆ. ಇದು ಸದಸ್ಯರು ಸದನದ ವ್ಯವಹಾರಕ್ಕೆ ಪ್ರಸ್ತುತವಾಗಿದ್ದರೆ ದಾಖಲೆಯಿಂದ ಉಲ್ಲೇಖಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ ಹೇಳಿದ್ದಾರೆ.

ಸದನದಲ್ಲಿ ಏನನ್ನಾದರೂ ಉಲ್ಲೇಖಿಸಲು ಬಯಸುವ ಸದಸ್ಯರು ಅದನ್ನು ದೃಢೀಕರಿಸಬೇಕು ಎಂದು ಸ್ಪೀಕರ್ ಈ ಹಿಂದೆ ತೀರ್ಪು ನೀಡಿದ್ದಾರೆ. ದಾಖಲೆಯನ್ನು ದೃಢೀಕರಿಸಿದ ನಂತರ ಸ್ಪೀಕರ್ ಸದಸ್ಯರಿಗೆ ಅದನ್ನು ಉಲ್ಲೇಖಿಸಲು ಅವಕಾಶ ನೀಡುತ್ತಾರೆ. ನಂತರ ಪ್ರತಿಕ್ರಿಯಿಸುವುದು ಸರ್ಕಾರದ ಜವಾಬ್ದಾರಿಯಾಗುತ್ತದೆ. ಇಲ್ಲಿ ಸ್ಪೀಕರ್ ಅವರ ಪಾತ್ರ ಕೊನೆಗೊಳ್ಳುತ್ತದೆ. ಸದನಕ್ಕೆ ಸತ್ಯವನ್ನು ಮಾತ್ರ ತಿಳಿಸಬೇಕು. ತಪ್ಪಾದ ಅಥವಾ ನಕಲಿ ದಾಖಲೆಯಿಂದ ಉಲ್ಲೇಖಿಸಿದ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಸದಸ್ಯರ ವಿರುದ್ಧ ಹಕ್ಕುಚ್ಯುತಿ ಮಂಡಿಸಬಹುದು ಎಂದು ಆಚಾರ್ಯ ವಿವರಿಸಿದ್ದಾರೆ.

ಈ ಪ್ರಕರಣದಲ್ಲಿ ಈ ನಿಯಮ ಯಾಕೆ?

ರಾಹುಲ್ ಗಾಂಧಿಯವರು ಕೇವಲ ಒಂದು ನಿಯತಕಾಲಿಕೆಯ ಲೇಖನವನ್ನೇ ಅಲ್ಲದೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯನ್ನೂ ಉಲ್ಲೇಖಿಸಿದ್ದಾರೆ ಎಂಬ ಆಧಾರದ ಮೇಲೆ ಖಜಾನೆ ಪೀಠಗಳು ಆಕ್ಷೇಪ ವ್ಯಕ್ತಪಡಿಸಿದವು. ಇದು ರಾಷ್ಟ್ರೀಯ ಭದ್ರತೆ ಮತ್ತು ಸಂಸತ್ತಿನ ಔಚಿತ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದರು.

ಸದನದ ತಕ್ಷಣದ ವ್ಯವಹಾರಗಳಿಗೆ ಸಂಬಂಧವಿಲ್ಲದ ನಿಯತಕಾಲಿಕೆ ಅಥವಾ ವೃತ್ತಪತ್ರಿಕೆ ಲೇಖನಗಳನ್ನು ಉಲ್ಲೇಖಿಸಲಾಗುವುದಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿ, ಚರ್ಚೆಗಳನ್ನು ಸ್ಥಾಪಿತ ನಿಯಮಗಳಿಗೆ ಅನುಸಾರವಾಗಿ ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಪುನರುಚ್ಚರಿಸಿದರು. ಇದು ಸದನದಲ್ಲಿ ಪದೇಪದೇ ಅಡಚಣೆಗಳು ಮತ್ತು ಮುಂದೂಡಿಕೆಗಳಿಗೆ ಕಾರಣವಾಯಿತು.

ನಿಯಮ 349 ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆಯೇ?

ಇಲ್ಲ. ನಿಯಮವು ಸಂಪೂರ್ಣ ನಿಷೇಧವನ್ನು ವಿಧಿಸುವುದಿಲ್ಲ. ಚರ್ಚಿಸಲಾಗುತ್ತಿರುವ ವ್ಯವಹಾರಕ್ಕೆ ಸ್ಪಷ್ಟವಾಗಿ ಸಂಪರ್ಕ ಹೊಂದಿದ್ದರೆ, ಸವಲತ್ತು, ರಾಷ್ಟ್ರೀಯ ಭದ್ರತಾ ಕಾಳಜಿಗಳು ಅಥವಾ ಸ್ಥಾಪಿತ ಸಂಸದೀಯ ಸಂಪ್ರದಾಯಗಳನ್ನು ಉಲ್ಲಂಘಿಸದಿದ್ದರೆ ಸದಸ್ಯರು ಪುಸ್ತಕಗಳು, ವರದಿಗಳು ಅಥವಾ ಪತ್ರಿಕೆಗಳನ್ನು ಉಲ್ಲೇಖಿಸಬಹುದು. ಉಲ್ಲೇಖ ಸ್ವೀಕಾರಾರ್ಹವೇ ಎಂಬುದನ್ನು ಅಂತಿಮವಾಗಿ ಸ್ಪೀಕರ್ ನಿರ್ಧರಿಸುತ್ತಾರೆ.

ನಿಯಮ 349 ಏಕೆ ಮುಖ್ಯ?

ನಿಯಮ 349 ಸಾರ್ವಜನಿಕರ ಗಮನ ಸೆಳೆಯುವುದು ಅಪರೂಪ. ಆದರೆ ಇಂತಹ ಘಟನೆಗಳು ಸಂಸತ್ತಿನ ಕಲಾಪಗಳಲ್ಲಿ ಕ್ರಮ, ಸತ್ಯಾಸತ್ಯತೆ ಮತ್ತು ಶಿಸ್ತು ಕಾಪಾಡಿಕೊಳ್ಳುವಲ್ಲಿ ಅದರ ಮಹತ್ವವನ್ನು ಎತ್ತಿ ತೋರಿಸುತ್ತವೆ. ರಾಷ್ಟ್ರೀಯ ಭದ್ರತೆ, ಅಪ್ರಕಟಿತ ದಾಖಲೆಗಳು ಅಥವಾ ರಾಜಕೀಯವಾಗಿ ಸೂಕ್ಷ್ಮ ಮೂಲಗಳು ಒಳಗೊಂಡಿರುವಾಗ ಯಾವ ವಿಷಯವನ್ನು ಉಲ್ಲೇಖಿಸಬಹುದು ಎಂಬುದನ್ನು ನಿಯಂತ್ರಿಸಲು ಸ್ಪೀಕರ್‌ಗೆ ವಿವೇಚನಾ ಅಧಿಕಾರವನ್ನು ಇದು ನೀಡುತ್ತದೆ.

ನರವಾಣೆ ಅವರ ಆತ್ಮಚರಿತ್ರೆ

ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಖಂದ್ ನರವಾಣೆ ಅವರ ಪುಸ್ತಕವನ್ನು ಇನ್ನೂ ಏಕೆ ಪ್ರಕಟಿಸಲಾಗಿಲ್ಲ ಎಂಬ ಪ್ರಶ್ನೆಗಳನ್ನು ಈ ವಿವಾದ ಹುಟ್ಟುಹಾಕಿತು. 1954ರ ಸೇನಾ ನಿಯಮಗಳ ಸೆಕ್ಷನ್ 21ರ ಅಡಿಯಲ್ಲಿ, ಸೇವೆಯಲ್ಲಿ ಇರುವ ಮಿಲಿಟರಿ ಸಿಬ್ಬಂದಿಗೆ ಅನುಮತಿಯಿಲ್ಲದೆ ಸೇವಾ ಸಂಬಂಧಿತ ಅಥವಾ ರಾಜಕೀಯ ಮಾಹಿತಿಯನ್ನು ಪ್ರಕಟಿಸುವುದನ್ನು ಅಥವಾ ಸಂವಹನ ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ನಿವೃತ್ತ ಅಧಿಕಾರಿಗಳ ಬಗ್ಗೆ ನಿಯಮಗಳು ಕಡಿಮೆ ಸ್ಪಷ್ಟವಾಗಿವೆ. ಹಿರಿಯ ರಕ್ಷಣಾ ಅಧಿಕಾರಿಗಳ ಹಸ್ತಪ್ರತಿಗಳು ಯಾವುದೇ ಸೂಕ್ಷ್ಮ ಕಾರ್ಯಾಚರಣೆ ಅಥವಾ ವರ್ಗೀಕೃತ ಮಾಹಿತಿಯನ್ನು ಬಹಿರಂಗಪಡಿಸದಂತೆ ಆಂತರಿಕ ಪರಿಶೀಲನಾ ಪ್ರಕ್ರಿಯೆಗೆ ಒಳಗಾಗುತ್ತವೆ.

ಸದನದಲ್ಲಿ ಏನಾಯಿತು?

ರಾಹುಲ್ ಗಾಂಧಿಯವರು ತಮ್ಮ ಭಾಷಣವನ್ನು ನರವಾಣೆ ಅವರ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಒಳಗೊಂಡಿರುವ ದಿ ಕ್ಯಾರವಾನ್ ಲೇಖನದಿಂದ ಉಲ್ಲೇಖಿಸುತ್ತಿರುವುದಾಗಿ ಹೇಳುತ್ತಾ ಪ್ರಾರಂಭಿಸಿದರು.

“ಇದು ಸೇನಾ ಮುಖ್ಯಸ್ಥ ನರವಾಣೆ ಅವರ ಆತ್ಮಚರಿತ್ರೆಯ ಭಾಗ. ನೀವು ಚೆನ್ನಾಗಿ ಕೇಳಬೇಕೆಂದು ನಾನು ಬಯಸುತ್ತೇನೆ. ಯಾರು ದೇಶಭಕ್ತರು ಮತ್ತು ಯಾರು ಅಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ. ಇದು ನಾಲ್ಕು ಚೀನೀ ಟ್ಯಾಂಕ್‌ಗಳು ಭಾರತೀಯ ಪ್ರದೇಶವನ್ನು ಪ್ರವೇಶಿಸುತ್ತಿದ್ದಾಗ, ಅವು ಡೋಕ್ಲಾಮ್‌ನಲ್ಲಿ ಒಂದು ಪರ್ವತವನ್ನು ಅಗೆಯುತ್ತಿದ್ದಾಗ ಸೇನಾ ಮುಖ್ಯಸ್ಥರು ಬರೆಯುತ್ತಾರೆ. ನಾನು ಅವರ ಪುಸ್ತಕದ ಬಗ್ಗೆ ಇರುವ ಲೇಖನದಿಂದ ಇದನ್ನು ಉಲ್ಲೇಖಿಸುತ್ತೇನೆ. ‘ಟ್ಯಾಂಕ್‌ಗಳು ಕೈಲಾಶ್ ಶ್ರೇಣಿಯಿಂದ ಕೆಲವು ನೂರು ಮೀಟರ್‌ಗಳ ಒಳಗೆ ಇದ್ದವು’ ಎಂದು ಹೇಳಿ ರಾಹುಲ್ ಭಾಷಣ ಆರಂಭಿಸಿದರು.

ಪುಸ್ತಕವನ್ನು ಪ್ರಕಟಿಸಿದ್ದರೆ ಅದನ್ನು ಉಲ್ಲೇಖಿಸಬಹುದು, ಆದರೆ ಅದು ಪ್ರಕಟವಾಗಿಲ್ಲದಿದ್ದರೆ ಅದನ್ನು ಉಲ್ಲೇಖಿಸಲಾಗುವುದಿಲ್ಲ” ಎಂದು ರಕ್ಷಣಾ ಸಚಿವ ಸಿಂಗ್ ಹೇಳಿದರು.

ಗೃಹ ಸಚಿವ ಅಮಿತ್ ಶಾ ಕೂಡ ಎದ್ದು ನಿಂತು ನರವಾಣೆ ಅವರ ಪುಸ್ತಕ ಪ್ರಕಟವಾಗಿದೆಯೇ ಎಂದು ತಿಳಿಸಲು ಒತ್ತಾಯಿಸಿದರು. “ಒಂದು ನಿಯತಕಾಲಿಕೆ ಏನನ್ನಾದರೂ ಬರೆಯಬಹುದು; ಪುಸ್ತಕ ಪ್ರಕಟವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು (ರಾಹುಲ್ ಗಾಂಧಿ) ಸ್ಪಷ್ಟಪಡಿಸಬೇಕು” ಎಂದರು.

ಅಧಿಕೃತವಲ್ಲದ ವೃತ್ತಪತ್ರಿಕೆ ತುಣುಕುಗಳನ್ನು ಉಲ್ಲೇಖಿಸುವ ಯಾವುದೇ ಉಲ್ಲೇಖಗಳನ್ನು ಮಾಡಲಾಗುವುದಿಲ್ಲ ಎಂದು ಸಭಾಪತಿ ಓಂ ಬಿರ್ಲಾ ಹೇಳಿದರು.

ಸರ್ಕಾರ ತಮ್ಮ ಆತ್ಮಚರಿತ್ರೆ ಪ್ರಕಟಿಸಲು ಅವಕಾಶ ನೀಡುತ್ತಿಲ್ಲ ಎಂದು ನರವಾಣೆ ಹೇಳಿದ್ದಾರೆ. ರಾಜನಾಥ್ ಸಿಂಗ್ ಮತ್ತು ಮೋದಿ ಬಗ್ಗೆ ನರವಾಣೆ ಮಾತನಾಡಿರುವ ಐದು ಸಾಲುಗಳನ್ನು ಮಾತ್ರ ನಾನು ಓದಲು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.

ಪುಸ್ತಕ ಪ್ರಕಟವಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ ನಂತರ, ಆದ್ದರಿಂದ ಪುಸ್ತಕವನ್ನು ಸದನದಲ್ಲಿ ಉಲ್ಲೇಖಿಸಲಾಗುವುದಿಲ್ಲ ಎಂದು ಅಮಿತ್ ಶಾ ಹೇಳಿದರು. ಅದು ಪ್ರಕಟವಾಗಿದ್ದರೂ ಸಹ ಅದನ್ನು ಸದನದಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಬಿರ್ಲಾ ಹೇಳಿದರು.

ರಾಷ್ಟ್ರಪತಿ ಭಾಷಣವು ಅಮೆರಿಕ ಮತ್ತು ಚೀನಾದೊಂದಿಗಿನ ಭಾರತದ ಸಂಬಂಧಕ್ಕೆ ಸಂಬಂಧಿಸಿದೆ. ತಾನು ಉಲ್ಲೇಖಿಸಲು ಪ್ರಯತ್ನಿಸಿದ ದಿ ಕ್ಯಾರವಾನ್ ಲೇಖನವು ಭಾರತದ ಚೀನಾದೊಂದಿಗಿನ ಸಂಬಂಧದ ವಿವರಣೆ ಎಂದು ರಾಹುಲ್ ಗಾಂಧಿ ಹೇಳಿದರೂ, ಲೇಖನವನ್ನು ಓದಲು ಅವರಿಗೆ ಅವಕಾಶ ನೀಡಲಾಗಲಿಲ್ಲ.

“ಸರ್ಕಾರ ಹೆದರುತ್ತಿದೆ. ಅವರು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರು ಒಂದು ಉಲ್ಲೇಖಕ್ಕೆ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ? ಅಲ್ಲಿ ಬರೆದಿರುವುದರ ಬಗ್ಗೆ ಅವರು ಹೆದರಿದ್ದಾರೆ; ಹಾಗಾಗಿಯೇ ಅವರು ನನಗೆ ಅದನ್ನು ಓದಲು ಬಿಡುತ್ತಿಲ್ಲ” ಎಂದು ರಾಹುಲ್ ಪ್ರತಿಕ್ರಿಯಿಸಿದರು.

ಸ್ಪೀಕರ್‌ಗೆ ಪತ್ರ ಬರೆದ ರಾಹುಲ್

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ರಾಷ್ಟ್ರೀಯ ಭದ್ರತೆಯ ವಿಷಯದ ಕುರಿತು ಸದನದಲ್ಲಿ ಮಾತನಾಡುವ ತಮ್ಮ ಹಕ್ಕನ್ನು ನಿರಾಕರಿಸಲಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಭದ್ರತೆಯ ವಿಷಯದ ಕುರಿತು ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಮಾತನಾಡಲು ನನಗೆ ಅವಕಾಶ ನೀಡಲಾಗಿಲ್ಲ ಎಂದು ರಾಹುಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡದಂತೆ ನನ್ನನ್ನು ತಡೆಯುವುದು ಈ ಸಂಪ್ರದಾಯವನ್ನು ಉಲ್ಲಂಘಿಸುವುದಲ್ಲದೆ, ವಿರೋಧ ಪಕ್ಷದ ನಾಯಕನಾಗಿ ರಾಷ್ಟ್ರೀಯ ಭದ್ರತೆಯ ವಿಷಯಗಳ ಬಗ್ಗೆ ಮಾತನಾಡದಂತೆ ನನ್ನನ್ನು ತಡೆಯಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಕಳವಳಕ್ಕೂ ಕಾರಣವಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.

ರಾಷ್ಟ್ರೀಯ ಭದ್ರತೆಯು ರಾಷ್ಟ್ರಪತಿಗಳ ಭಾಷಣದ ಪ್ರಮುಖ ಭಾಗವಾಗಿದೆ. ಆದ್ದರಿಂದ ಸಂಸತ್ತಿನಲ್ಲಿ ಚರ್ಚೆಗೆ ಅರ್ಹವಾಗಿದೆ. ಸದನದ ನಿಷ್ಪಕ್ಷಪಾತ ರಕ್ಷಕನಾಗಿ, ವಿರೋಧ ಪಕ್ಷದವರು ಸೇರಿದಂತೆ ಪ್ರತಿಯೊಬ್ಬ ಸದಸ್ಯರ ಹಕ್ಕುಗಳನ್ನು ರಕ್ಷಿಸುವುದು ಸ್ಪೀಕರ್ ಅವರ ಸಾಂವಿಧಾನಿಕ ಮತ್ತು ಸಂಸದೀಯ ಜವಾಬ್ದಾರಿಯಾಗಿದೆ. ವಿರೋಧ ಪಕ್ಷದ ನಾಯಕ ಮತ್ತು ಪ್ರತಿಯೊಬ್ಬ ಸದಸ್ಯರಿಗೂ ಮಾತನಾಡುವ ಹಕ್ಕು ನಮ್ಮ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದ ಆದೇಶದ ಮೇರೆಗೆ ರಾಷ್ಟ್ರಪತಿಗಳ ಭಾಷಣದ ಕುರಿತು ವಿರೋಧ ಪಕ್ಷದ ನಾಯಕ ಮಾತನಾಡದಂತೆ ತಡೆಯಲು ಸ್ಪೀಕರ್ ಅವರನ್ನು ಒತ್ತಾಯಿಸಲಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಬಿದ್ದ ಕಪ್ಪು ಚುಕ್ಕೆ; ಇದರ ವಿರುದ್ಧ ನಾನು ಪ್ರತಿಭಟನೆಯನ್ನು ದಾಖಲಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tags

AutobiographyArmy ChiefRahul Gandhi
share
ರಶ್ಮಿ ಕಾಸರಗೋಡು
ರಶ್ಮಿ ಕಾಸರಗೋಡು
Next Story
X