ಬಾಂಗ್ಲಾದೇಶದಿಂದ ಕಳವಾದ ಎರಡು ಲೇಮರ್ ಗಳು ವಂತಾರಾ ಮೃಗಾಲಯದಲ್ಲಿ ಪತ್ತೆ: ತಮ್ಮ ದೇಶದಿಂದ ಕದ್ದು ತಂದಿದ್ದಾಗಿ ಬಾಂಗ್ಲಾ ಆರೋಪ
ಅಲಿಶಾ ರೆಹಮಾನ್ ಸರ್ಕಾರ್ - independent.co. uk ವರದಿ

Photo Credit : X
ಬಾಂಗ್ಲಾದೇಶದ ಸಫಾರಿ ಪಾರ್ಕ್ ನಿಂದ ಕಳವಾಗಿದ್ದ ಎರಡು ರಿಂಗ್-ಟೇಲ್ಡ್ ಲೇಮರ್ ಗಳು ಭಾರತದ ಅತ್ಯಂತ ಶ್ರೀಮಂತ ಕುಟುಂಬ ನಡೆಸುತ್ತಿರುವ ಮೃಗಾಲಯದಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ. 2025ರ ಮಾರ್ಚ್ ನಲ್ಲಿ ಗಾಝಿಪುರ್ ಸಫಾರಿ ಪಾರ್ಕ್ ನಿಂದ ಕಳುವಾಗಿದ್ದ ಮೂರು ಲೇಮರ್ ಗಳ ಪೈಕಿ ಇವು ಕೂಡ ಸೇರಿದ್ದವು ಮತ್ತು ಇವುಗಳನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಬಾಂಗ್ಲಾದೇಶದ ಅಪರಾಧ ತನಿಖಾ ಇಲಾಖೆ ತಿಳಿಸಿದೆ.
ಆಫ್ರಿಕಾದ ಮಡಗಾಸ್ಕರ್ ಮೂಲದ ಲೇಮರ್ ಗಳು ತೀವ್ರ ಅಳಿವಿನಂಚಿನಲ್ಲಿರುವ ಪ್ರಾಣಿಗಳಾಗಿವೆ.
ಕಳವಾದ ಈ ಲೇಮರ್ ಗಳನ್ನು 2018ರಲ್ಲಿ ಕಸ್ಟಮ್ಸ್ ಗೆ ಸುಳ್ಳು ಘೋಷಣೆ ನೀಡಿ ಢಾಕಾ ವಿಮಾನ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಕರೆತರಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅವುಗಳನ್ನು ರಕ್ಷಿಸಿ ಸಫಾರಿ ಪಾರ್ಕ್ ಗೆ ಸ್ಥಳಾಂತರಿಸಲಾಗಿತ್ತು.
ಪ್ರಾಣಿಗಳ ಗುರುತನ್ನು ಪರಿಶೀಲಿಸಲು ಮೈಕ್ರೋಚಿಪ್ ಗಳು, ವಿಶಿಷ್ಟ ಗುರುತಿನ ಸಂಖ್ಯೆಗಳು ಅಥವಾ DNA ಪ್ರೊಫೈಲ್ ಗಳಿಲ್ಲದಿರುವುದರಿಂದ ಮರಳಿ ಕರೆತರುವ ಪ್ರಕ್ರಿಯೆಯು ಜಟಿಲಗೊಂಡಿದ್ದು, ಢಾಕಾ ಈಗ ಇಂಟರ್ ಪೋಲ್ ಸಹಾಯವನ್ನು ಕೋರಿದೆ ಎಂದು ಬಾಂಗ್ಲಾದೇಶದ ‘ಆಜ್ಕೇರ್ ಪತ್ರಿಕಾ’ ದಿನಪತ್ರಿಕೆ ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿರುವ ಮರಿ ಲೇಮರ್ ನೊಂದಿಗೆ ಕಳ್ಳಸಾಗಣೆಯಾದ ಇತರ ಎರಡು ಪ್ರಾಣಿಗಳ ರಕ್ತದ ಸಂಬಂಧವನ್ನು ಪತ್ತೆಹಚ್ಚಲು ಅಧಿಕಾರಿಗಳು DNA ಪ್ರೊಫೈಲಿಂಗ್ ಮಾಡಲು ಮುಂದಾಗಿದ್ದಾರೆ.
ಚುವಾದಂಗಾದ ದರ್ಶನಾ ಗಡಿಯ ಮೂಲಕ ಈ ಲೇಮರ್ ಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದ್ದು, ಸುಮಾರು 48 ಲಕ್ಷ ರೂಪಾಯಿಗೆ (ಸುಮಾರು 504,000 ಪೌಂಡ್ ಗಳು) ಮಾರಾಟ ಮಾಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಭದ್ರತಾ ಸಿಬ್ಬಂದಿಯ ಸಹಾಯದಿಂದ ಈ ಪ್ರಾಣಿಗಳನ್ನು ಕಳವು ಮಾಡಲಾಗಿದ್ದು, ಗಡಿ ಪ್ರದೇಶದ ಲೈನ್ಮನ್ ಒಬ್ಬರ ನೆರವಿನಿಂದ ಭಾರತಕ್ಕೆ ಕರೆತರಲಾಗಿದೆ ಎಂದು ತನಿಖಾಧಿಕಾರಿಗಳು ತಪ್ಪೊಪ್ಪಿಗೆಯ ಹೇಳಿಕೆಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಪಶ್ಚಿಮ ಭಾರತದ ಜಾಮ್ ನಗರ ನಗರವನ್ನು ತಲುಪುವವರೆಗೆ ಅವು ಕೈಯಿಂದ ಕೈಗೆ ಬದಲಾಗಿವೆ. ಅಲ್ಲಿ ವಂತಾರಾ ವನ್ಯಜೀವಿ ಕೇಂದ್ರಕ್ಕೆ ಸಂಬಂಧಿಸಿದ ಸಂಸ್ಥೆಗೆ ಅವುಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕಳ್ಳಸಾಗಣೆ ಪ್ರಕರಣದಲ್ಲಿ ಶಂಕಿತರಾಗಿರುವ ಎಂಟು ಮಂದಿಯ ಪೈಕಿ ಆರು ಮಂದಿ ಸ್ಥಳೀಯ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಂತಾರಾದಲ್ಲಿರುವ ಲೇಮರ್ ಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಬಳಿಕ ಬಾಂಗ್ಲಾದೇಶದ ಅಧಿಕಾರಿಗಳಿಗೆ ಈ ವಿಷಯ ತಿಳಿದುಬಂದಿದ್ದು, ಪ್ರಾಣಿಗಳನ್ನು ಮರಳಿ ಪಡೆಯಲು ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಪ್ರತಿಕ್ರಿಯೆ ಕೋರಿ ‘ದಿ ಇಂಡೆಪೆಂಡೆಂಟ್’ ವಂತಾರಾವನ್ನು ಸಂಪರ್ಕಿಸಿದರೂ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿಯ ಬೆಂಬಲವಿರುವ ರಾಧಾ ಕೃಷ್ಣ ಟೆಂಪಲ್ ಎಲಿಫೆಂಟ್ ವೆಲ್ಫೇರ್ ಟ್ರಸ್ಟ್, ಗುಜರಾತ್ ನಲ್ಲಿ 3,500 ಎಕರೆ ವಿಸ್ತೀರ್ಣದ ವಂತಾರಾ ಮೃಗಾಲಯವನ್ನು ನಡೆಸುತ್ತಿದೆ.
ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ಅವರ ಕನಸಿನ ಕೂಸು ಇದಾಗಿದೆ.
2025ರ ಮಾರ್ಚ್ ನಲ್ಲಿ ಈ ಮೃಗಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ವಂತಾರಾ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಹಾಗೂ ಅಪರೂಪದ ಪ್ರಾಣಿ ಜಾತಿಗಳು ಮತ್ತು ಭವ್ಯ ಮೂಲಸೌಕರ್ಯಗಳ ಮೇಲೆ ಹೆಚ್ಚು ಗಮನಹರಿಸುತ್ತಿರುವುದನ್ನು ಗಮನಿಸಿರುವ ಪ್ರಾಣಿ ಹಕ್ಕು ಹೋರಾಟಗಾರರು, ಇದು ನಿಜವಾದ ಸಂರಕ್ಷಣಾ ಯೋಜನೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಂದ ಖಾಸಗಿ ಮೃಗಾಲಯಕ್ಕೆ ಪ್ರಾಣಿಗಳನ್ನು ಸ್ಥಳಾಂತರಿಸಿರುವುದರಿಂದ ಸಾರ್ವಜನಿಕ ಮೃಗಾಲಯಗಳ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮೃಗಾಲಯವು ಪ್ರಾಣಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡಿದೆ ಎಂಬ ಆರೋಪಗಳು ಕೂಡ ಕೇಳಿಬಂದಿದ್ದು, ಇದು ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟದ ಅಧಿಕಾರಿಗಳ ತನಿಖೆಗೆ ಕಾರಣವಾಗಿದೆ.
ಇದು “ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿವೆ” ಎಂದ ವಂತಾರಾ ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ.
ಸೌಜನ್ಯ: independent.co.uk






