10 ವರ್ಷಗಳಲ್ಲಿ 18 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ಸಾಲ ಮನ್ನಾ ; 2026ನೇ ಆರ್ಥಿಕ ವರ್ಷದಲ್ಲಿ ಶೇ.8.2ರಷ್ಟು ಇಳಿಕೆ

Photo Credit: PTI
ಬ್ಯಾಂಕ್ಗಳ ಬ್ಯಾಲೆನ್ಸ್ ಶೀಟ್ಗಳಿಂದ ವಸೂಲಾಗದ ಕೆಟ್ಟ ಸಾಲಗಳನ್ನು (Bad loans) ತೆಗೆದುಹಾಕುವ ಪ್ರಮಾಣ ಕಡಿಮೆಯಾಗುತ್ತಿರುವ ಸೂಚನೆ ಸಿಕ್ಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂಕಿಅಂಶಗಳ ಪ್ರಕಾರ, 2025-26ನೇ ಆರ್ಥಿಕ ವರ್ಷದಲ್ಲಿ ಭಾರತೀಯ ಬ್ಯಾಂಕ್ಗಳು ಮನ್ನಾ ಮಾಡಿದ ಸಾಲದ ಮೊತ್ತವು ಶೇ.8.2ರಷ್ಟು ಇಳಿಕೆಯಾಗಿ 1.44 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. 2024-25ರಲ್ಲಿ ಈ ಮೊತ್ತ 1.57 ಲಕ್ಷ ಕೋಟಿ ರೂಪಾಯಿ ಮತ್ತು 2023-24ರಲ್ಲಿ 1.70 ಲಕ್ಷ ಕೋಟಿ ರೂಪಾಯಿಯಷ್ಟಿತ್ತು.
ಕಳೆದ 10 ವರ್ಷಗಳ ಅವಧಿಯನ್ನು ಗಮನಿಸಿದರೆ, ಬ್ಯಾಂಕ್ಗಳು 18.08 ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಈ ಕ್ರಮವು ಬ್ಯಾಂಕ್ಗಳ ವಸೂಲಾಗದ ಸಾಲದ (NPA) ಪ್ರಮಾಣವನ್ನು ಕಡಿಮೆ ತೋರಿಸಲು ನೆರವಾಗಿದ್ದರೂ, ಸುಸ್ತಿದಾರರಿಗೆ ನೀಡಿದ ಸಾರ್ವಜನಿಕರ ಹಣವನ್ನು ವಾಪಸ್ ಪಡೆಯುವ ಬಗ್ಗೆ ಪ್ರಶ್ನೆಗಳು ಇನ್ನೂ ಉಳಿದುಕೊಂಡಿವೆ.
ಸಮಾಧಾನಕರ ಸಂಗತಿಯೆಂದರೆ, 2018-19ನೇ ಆರ್ಥಿಕ ವರ್ಷದಲ್ಲಿ 2.39 ಲಕ್ಷ ಕೋಟಿ ರೂಪಾಯಿಯ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಸಾಲ ಮನ್ನಾ ಪ್ರಮಾಣ, 2023-24ರ ನಂತರ ನಿರಂತರವಾಗಿ ಇಳಿಕೆಯಾಗುತ್ತಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ 'ದಿ ಇಂಡಿಯನ್ ಎಕ್ಸ್ಪ್ರೆಸ್' ಸಲ್ಲಿಸಿದ್ದ ಅರ್ಜಿಗೆ ಆರ್ಬಿಐ ನೀಡಿರುವ ಉತ್ತರದಲ್ಲಿ ಈ ಅಂಕಿಅಂಶಗಳು ಬಹಿರಂಗವಾಗಿವೆ. ಬ್ಯಾಂಕಿಂಗ್ ವ್ಯವಸ್ಥೆಯು ಕೆಟ್ಟ ಸಾಲಗಳನ್ನು ನಿಭಾಯಿಸುತ್ತಿರುವ ರೀತಿ, ಸುಸ್ತಿದಾರರ ಮಾಹಿತಿಯ ಗೌಪ್ಯತೆ ಮತ್ತು ಸಾಲ ವಸೂಲಾತಿ ವ್ಯವಸ್ಥೆಯ ಕಾರ್ಯಕ್ಷಮತೆಯ ಮೇಲೆ ಈ ವರದಿ ಬೆಳಕು ಚೆಲ್ಲಿದೆ.
ಆರ್ಬಿಐ ಮಾಹಿತಿಯಂತೆ, 2016-17 ರಿಂದ 2025-26ರ ನಡುವಿನ ಹತ್ತು ಆರ್ಥಿಕ ವರ್ಷಗಳಲ್ಲಿ ವಾಣಿಜ್ಯ ಬ್ಯಾಂಕ್ಗಳು (SCBs) ಒಟ್ಟು 18,07,812 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿವೆ. ಬ್ಯಾಂಕ್ಗಳು ತಮ್ಮ ಲೆಕ್ಕಪತ್ರಗಳಿಂದ ಈ ಭಾರೀ ಮೊತ್ತದ ಕೆಟ್ಟ ಸಾಲಗಳನ್ನು ತೆಗೆದುಹಾಕುವ ಮೂಲಕ ಎನ್ಪಿಎ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿವೆ. ಆದರೆ, ಇದರಿಂದ ಸಾಲ ಪಡೆದವರ ಮೇಲಿರುವ ಮರುಪಾವತಿಯ ಹೊಣೆಗಾರಿಕೆ ರದ್ದಾಗುವುದಿಲ್ಲ.
2018-19ನೇ ಆರ್ಥಿಕ ವರ್ಷದಲ್ಲಿ 2.39 ಲಕ್ಷ ಕೋಟಿ ರೂಪಾಯಿಯ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಸಾಲ ಮನ್ನಾ ಪ್ರಮಾಣವು, ನಂತರದ ಎರಡು ಆರ್ಥಿಕ ವರ್ಷಗಳಲ್ಲೂ 2 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿತ್ತು ಎಂದು ಅಂಕಿಅಂಶಗಳು ತೋರಿಸುತ್ತವೆ. ಬಳಿಕ ಏರಿಳಿತ ಕಂಡ ಈ ಪ್ರಮಾಣವು 2024-25ರಲ್ಲಿ 1.57 ಲಕ್ಷ ಕೋಟಿ ರೂಪಾಯಿ ಇದ್ದದ್ದು, 2025-26ರಲ್ಲಿ 1.44 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಆದರೆ, ವಾರ್ಷಿಕ ಸಾಲ ಮನ್ನಾ ಪ್ರಮಾಣ ಕಡಿಮೆಯಾದ ಮಾತ್ರಕ್ಕೆ ವಸೂಲಾಗದ ಕೆಟ್ಟ ಸಾಲಗಳ ಮೂಲ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿದೆ ಎಂದರ್ಥವಲ್ಲ.
ಬ್ಯಾಂಕ್ಗಳು ಭಾರೀ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಿದ ಪರಿಣಾಮವಾಗಿ, ಒಟ್ಟು ವಸೂಲಾಗದ ಸಾಲದ (Gross NPA) ಪ್ರಮಾಣವು ಹಿಂದಿನ ವರ್ಷದಲ್ಲಿದ್ದ 4.32 ಲಕ್ಷ ಕೋಟಿ ರೂಪಾಯಿಯಿಂದ 2025-26ನೇ ಆರ್ಥಿಕ ವರ್ಷದಲ್ಲಿ 3.86 ಲಕ್ಷ ಕೋಟಿ ರೂಪಾಯಿಗೆ (ಒಟ್ಟು ಸಾಲದ ಶೇ.1.73) ಇಳಿದಿದೆ. ಬ್ಯಾಂಕಿಂಗ್ ವಲಯದಲ್ಲಿ ಎನ್ಪಿಎ ಸಮಸ್ಯೆ ತೀವ್ರವಾಗಿದ್ದ 2017-18ರಲ್ಲಿ 10.40 ಲಕ್ಷ ಕೋಟಿ ರೂಪಾಯಿ (ಒಟ್ಟು ಸಾಲದ ಶೇ.11.18) ಇದ್ದ ಎನ್ಪಿಎಗೆ ಹೋಲಿಸಿದರೆ, ಇದು ಶೇ.63ರಷ್ಟು ಇಳಿಕೆಯಾಗಿದೆ.
ಒಟ್ಟು ಸಾಲ ಮನ್ನಾದಲ್ಲಿ ಸರಕಾರಿ ಬ್ಯಾಂಕ್ಗಳೇ ಮುಂದು
ಅತಿ ಹೆಚ್ಚು ಸಾಲವನ್ನು ಮನ್ನಾ ಮಾಡಿದ ಬ್ಯಾಂಕ್ಗಳ ಪಟ್ಟಿಯಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೊದಲ ಸ್ಥಾನದಲ್ಲಿದೆ. 2016-17 ರಿಂದ 2025-26ರ ನಡುವಿನ 10 ವರ್ಷಗಳ ಅವಧಿಯಲ್ಲಿ ಎಸ್ಬಿಐ 3,03,160 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ನಂತರದ ಸ್ಥಾನಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (1,31,170 ಕೋಟಿ ರೂಪಾಯಿ) ಮತ್ತು ಬ್ಯಾಂಕ್ ಆಫ್ ಬರೋಡಾ (1,14,701 ಕೋಟಿ ರೂಪಾಯಿ) ಇವೆ ಎಂದು ಆರ್ಬಿಐ ಅಂಕಿಅಂಶಗಳು ತಿಳಿಸಿವೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 1,13,112 ಕೋಟಿ ರೂಪಾಯಿ ಹಾಗೂ ಕೆನರಾ ಬ್ಯಾಂಕ್ 1,03,949 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿವೆ. ಈ ಐದು ಸರಕಾರಿ ಸ್ವಾಮ್ಯದ ಬ್ಯಾಂಕ್ಗಳು ಒಟ್ಟಾಗಿ 7,66,093 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದು, ಸರಕಾರಿ ಬ್ಯಾಂಕ್ಗಳು ಕೆಟ್ಟ ಸಾಲಗಳ ಸಮಸ್ಯೆಗೆ ಎಷ್ಟರಮಟ್ಟಿಗೆ ಸಿಲುಕಿವೆ ಎಂಬುದನ್ನು ಇದು ತೋರಿಸುತ್ತದೆ.
ಆರ್ಬಿಐ ಮಾಹಿತಿಯ ಪ್ರಕಾರ, ಈ 10 ವರ್ಷಗಳ ಅವಧಿಯಲ್ಲಿ ಅಗ್ರ 10 ಬ್ಯಾಂಕ್ಗಳೇ 11.73 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿವೆ. ಈ ಪಟ್ಟಿಯಲ್ಲಿ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಜೊತೆಗೆ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಕೂಡ ಸೇರಿವೆ. ವಾಣಿಜ್ಯ ಬ್ಯಾಂಕ್ಗಳು ಮನ್ನಾ ಮಾಡಿದ ಒಟ್ಟು 18,07,812 ಕೋಟಿ ರೂಪಾಯಿಗಳಲ್ಲಿ, ಈ 10 ಬ್ಯಾಂಕ್ಗಳ ಪಾಲು ಬರೋಬ್ಬರಿ 11,73,070 ಕೋಟಿ ರೂಪಾಯಿ (ಸುಮಾರು ಶೇ.65) ಆಗಿದೆ.
ನೀಡಲಾದ ಮಾಹಿತಿಯ ಪ್ರಕಾರ, ಒಟ್ಟು ಸಾಲ ಮನ್ನಾ ಪ್ರಕ್ರಿಯೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಪಾಲು ಸುಮಾರು ಶೇ.63ರಷ್ಟಿದೆ. ಇಷ್ಟು ದೊಡ್ಡ ಮೊತ್ತದ ಸಾಲವು ಕೆಲವೇ ಬ್ಯಾಂಕ್ಗಳಲ್ಲಿ ಕೇಂದ್ರೀಕೃತವಾಗಿರುವುದು, ಅವುಗಳ ಸಾಲ ನೀಡುವ ನಿರ್ಧಾರಗಳು, ಅಪಾಯದ ಮೌಲ್ಯಮಾಪನ, ಉತ್ತರದಾಯಿತ್ವ ಮತ್ತು ದೊಡ್ಡ ಮೊತ್ತದ ಸಾಲ ಪಡೆದು ಸುಸ್ತಿದಾರರಾದವರು ಎದುರಿಸುವ ಪರಿಣಾಮಗಳ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಾರ್ಷಿಕ ಅಂಕಿಅಂಶಗಳು ಈ ಪ್ರಕ್ರಿಯೆಯ ವ್ಯಾಪ್ತಿಯನ್ನು ಸ್ಪಷ್ಟಪಡಿಸುತ್ತವೆ. ಬ್ಯಾಂಕ್ಗಳು 2016-17ರಲ್ಲಿ 1.08 ಲಕ್ಷ ಕೋಟಿ ರೂಪಾಯಿ, 2017-18ರಲ್ಲಿ 1.62 ಲಕ್ಷ ಕೋಟಿ ರೂಪಾಯಿ ಮತ್ತು 2018-19ರಲ್ಲಿ 2.39 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿವೆ. 2019-20ರಲ್ಲಿ 2.34 ಲಕ್ಷ ಕೋಟಿ ರೂಪಾಯಿ ಹಾಗೂ 2020-21ರಲ್ಲಿ 2.03 ಲಕ್ಷ ಕೋಟಿ ರೂಪಾಯಿಯೊಂದಿಗೆ ಈ ಪ್ರಮಾಣ ಹೆಚ್ಚಿನ ಮಟ್ಟದಲ್ಲೇ ಉಳಿದಿತ್ತು. 2025-26ನೇ ಆರ್ಥಿಕ ವರ್ಷದಲ್ಲಿ ಎಲ್ಲಾ ವಾಣಿಜ್ಯ ಬ್ಯಾಂಕ್ಗಳು ಒಟ್ಟಾಗಿ 1.44 ಲಕ್ಷ ಕೋಟಿ ರೂಪಾಯಿ ಸಾಲವನ್ನು ಲೆಕ್ಕದಿಂದ ಕೈಬಿಟ್ಟಿದ್ದು, ಇದು 2024-25ರಲ್ಲಿ 1.57 ಲಕ್ಷ ಕೋಟಿ ರೂಪಾಯಿಯಷ್ಟಿತ್ತು.
ಇಲ್ಲಿ ಒಂದು ಪ್ರಮುಖ ವ್ಯತ್ಯಾಸವನ್ನು ಗಮನಿಸಬೇಕು. ವಾರ್ಷಿಕ ಸಾಲ ಮನ್ನಾ ಪ್ರಮಾಣ ಕಡಿಮೆಯಾದ ಮಾತ್ರಕ್ಕೆ ಸಾಲ ವಸೂಲಾತಿ ಸುಧಾರಿಸಿದೆ ಅಥವಾ ಹೊಸ ಸುಸ್ತಿದಾರರ ಸಂಖ್ಯೆ ಅದೇ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದರ್ಥವಲ್ಲ. "ಭಾರತೀಯ ಬ್ಯಾಂಕ್ಗಳು ಮಾಡುವ ತಾಂತ್ರಿಕ ಸಾಲ ಮನ್ನಾವು ಅಸಮಾನತೆಯಿಂದ ಕೂಡಿದ್ದು, ಇದನ್ನು ನಿಲ್ಲಿಸಬೇಕು. ಸಣ್ಣ ಸಾಲಗಳನ್ನು ಮನ್ನಾ ಮಾಡುವುದು ತೀರಾ ಅಪರೂಪ ಇವುಗಳಲ್ಲಿ ಹೆಚ್ಚಿನವು ದೊಡ್ಡ ಸಾಲಗಳೇ ಆಗಿರುತ್ತವೆ" ಎಂದು ಆರ್ಬಿಐನ ಮಾಜಿ ಡೆಪ್ಯುಟಿ ಗವರ್ನರ್ ಹೇಳಿದ್ದಾರೆ.
ಸಾಲದ ಅಸಲು ಅಥವಾ ಬಡ್ಡಿ ಪಾವತಿಯು 90 ದಿನಗಳವರೆಗೆ ಬಾಕಿ ಉಳಿದಾಗ ಅದನ್ನು ವಸೂಲಾಗದ ಸಾಲ (NPA) ಎಂದು ಪರಿಗಣಿಸಲಾಗುತ್ತದೆ. ಖಾತೆಯನ್ನು ಎನ್ಪಿಎ ಎಂದು ವರ್ಗೀಕರಿಸಿದ ನಂತರ, ಸಂಭವನೀಯ ನಷ್ಟವನ್ನು ಭರಿಸಲು ಬ್ಯಾಂಕ್ಗಳು ಪ್ರತ್ಯೇಕ ಹಣವನ್ನು ಮೀಸಲಿಡಬೇಕಾಗುತ್ತದೆ. ಈ ಮೀಸಲು ಮೊತ್ತ ಹೆಚ್ಚಾದಂತೆ ಮತ್ತು ಸಾಲ ವಸೂಲಾಗುವ ಸಾಧ್ಯತೆ ಕ್ಷೀಣಿಸಿದಂತೆ, ಬ್ಯಾಂಕ್ಗಳು ತಮ್ಮ ನೀತಿಗಳಿಗೆ ಅನುಗುಣವಾಗಿ ಬಾಕಿ ಇರುವ ಮೊತ್ತವನ್ನು ಮನ್ನಾ ಮಾಡುತ್ತವೆ.
ಹಿಂದಿನ ಐದು ವರ್ಷಗಳಲ್ಲಿ ಮನ್ನಾ ಮಾಡಲಾದ ಸಾಲಗಳಲ್ಲಿ ಬ್ಯಾಂಕ್ಗಳು ಕೇವಲ ಶೇ.13 ರಿಂದ ಶೇ.15ರಷ್ಟು ಅಂದರೆ 1.32 ಲಕ್ಷ ಕೋಟಿ ರೂಪಾಯಿಯನ್ನು ಮಾತ್ರ ವಸೂಲಿ ಮಾಡಿವೆ. ಜುಲೈ 2023ರ ಮಾಹಿತಿಯಂತೆ, ಸಾಲ ಮನ್ನಾ ಮಾಡಲಾದ ಸಾಲಗಳಿಂದ 2020-21ರಲ್ಲಿ 30,104 ಕೋಟಿ ರೂಪಾಯಿ, 2021-22ರಲ್ಲಿ 33,534 ಕೋಟಿ ರೂಪಾಯಿ ಹಾಗೂ 2022-23ರಲ್ಲಿ 45,548 ಕೋಟಿ ರೂಪಾಯಿ ವಸೂಲಾಗಿತ್ತು. ಸಾಲ ಮನ್ನಾ ಪ್ರಕ್ರಿಯೆಯನ್ನು ಮೌಲ್ಯಮಾಪನ ಮಾಡುವಾಗ ಕೇವಲ ಲೆಕ್ಕಪತ್ರದ ಹೊಂದಾಣಿಕೆಗಿಂತ ಸಾಲ ವಸೂಲಾತಿಯ ಕಾರ್ಯಕ್ಷಮತೆಯೇ ಮುಖ್ಯವಾಗಬೇಕು ಎಂಬುದನ್ನು ಈ ಅಂಕಿಅಂಶಗಳು ಒತ್ತಿಹೇಳುತ್ತವೆ.
ಸಾಲ ಮನ್ನಾ ಎಂದರೇನು?
ಬ್ಯಾಂಕ್ಗಳು ಮಾಡುವ ಸಾಲ ಮನ್ನಾ ಕೇವಲ ಒಂದು ಲೆಕ್ಕಪತ್ರದ ದಾಖಲಾತಿ ಮಾತ್ರ. ಇದರಲ್ಲಿ ಬ್ಯಾಂಕ್ನ ಬ್ಯಾಲೆನ್ಸ್ ಶೀಟ್ನಲ್ಲಿರುವ ಸಾಲದ ಮೊತ್ತವನ್ನು ಅದರಿಂದ ಹೊರತೆಗೆದು, 'ವಸೂಲಾತಿಗೆ ಬಾಕಿ ಇರುವ ಮುಂಗಡಗಳು' (Advances Under Collection) ಎಂಬ ಪ್ರತ್ಯೇಕ ವಿಭಾಗದಲ್ಲಿ ಇರಿಸಲಾಗುತ್ತದೆ.
ಇದಾದ ನಂತರ ವಿಶೇಷ ತಂಡಗಳು ಸಾಲ ವಸೂಲಾತಿಗಾಗಿ ನಿರಂತರ ಪ್ರಯತ್ನ ನಡೆಸುತ್ತವೆ. ಇದರಿಂದ ಸಾಲ ಮರುಪಾವತಿಸುವ ಗ್ರಾಹಕರ ಹೊಣೆಗಾರಿಕೆಯಾಗಲಿ ಅಥವಾ ಸಾಲ ವಸೂಲಿ ಮಾಡುವ ಬ್ಯಾಂಕ್ನ ಹಕ್ಕಾಗಲಿ ಯಾವುದೇ ರೀತಿಯಲ್ಲಿ ಕಡಿಮೆಯಾಗುವುದಿಲ್ಲ. ಇದು ಕೇವಲ ಬ್ಯಾಲೆನ್ಸ್ ಶೀಟ್ ನಿರ್ವಹಣೆಯ ಒಂದು ಪ್ರಕ್ರಿಯೆಯಷ್ಟೇ ಆಗಿದೆ.
ಸಾಲವನ್ನು ಮನ್ನಾ ಮಾಡಿದ ತಕ್ಷಣ ಸಾಲಗಾರರ ಮರುಪಾವತಿಯ ಹೊಣೆಗಾರಿಕೆ ತನ್ನಿಂತಾನೇ ರದ್ದಾಗುವುದಿಲ್ಲ. ಕಾನೂನು ಮಾರ್ಗಗಳು ಮತ್ತು ಲಭ್ಯವಿರುವ ಇತರ ವ್ಯವಸ್ಥೆಗಳ ಮೂಲಕ ಬ್ಯಾಂಕ್ಗಳು ಸಾಲ ವಸೂಲಾತಿ ಪ್ರಕ್ರಿಯೆಯನ್ನು ಮುಂದುವರಿಸಬೇಕಾಗುತ್ತದೆ. ಬ್ಯಾಲೆನ್ಸ್ ಶೀಟ್ಗಳನ್ನು ಸ್ವಚ್ಛಗೊಳಿಸಲು ಮತ್ತು ತೆರಿಗೆ ದಕ್ಷತೆಯನ್ನು ಸುಧಾರಿಸಲು ಮಾಡುವ ಲೆಕ್ಕಪತ್ರದ ಒಂದು ಪ್ರಕ್ರಿಯೆ ಇದಾಗಿದೆ ಎಂದು ಆರ್ಬಿಐ ತಾಂತ್ರಿಕ ಸಾಲ ಮನ್ನಾವನ್ನು ವಿವರಿಸಿದೆ.
ಈ ಇಡೀ ಪ್ರಕ್ರಿಯೆಯಲ್ಲಿ ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ನೀಡಲಾದ ಮಾಹಿತಿಯಲ್ಲಿ ಸಾಲಗಾರರ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೇ ಇರುವುದು. ಒಟ್ಟು ಅಂಕಿಅಂಶಗಳು ಮನ್ನಾ ಮಾಡಲಾದ ಸಾಲದ ಬೃಹತ್ ಪ್ರಮಾಣವನ್ನು ತೋರಿಸುತ್ತವೆಯಾದರೂ, ಇಷ್ಟು ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಹೆಸರುಗಳನ್ನು ಅವು ಗುರುತಿಸುವುದಿಲ್ಲ.






