ಬ್ಯಾಂಕ್ ಆಫ್ ಬರೋಡಾ ಡೇಟಾ ಸೋರಿಕೆ; ನೀವು ಖಾತೆದಾರರಾಗಿದ್ದರೆ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ!

Photo Credit : bankofbaroda.bank.in , magnific.com
ಬ್ಯಾಂಕ್ ಆಫ್ ಬರೋಡಾವನ್ನು ಹ್ಯಾಕ್ ಮಾಡಲಾಗಿದ್ದು, ಸಾವಿರಾರು ಗ್ರಾಹಕರ ವಿವರಗಳು ಆನ್ಲೈನ್ನಲ್ಲಿ ಉಚಿತವಾಗಿ ಲಭ್ಯವಿದೆ. ನೀವು ಗ್ರಾಹಕರಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ವಿವರ
ಭಾರತದ ಅತಿ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾದ ಸೂಕ್ಷ್ಮ ದತ್ತಾಂಶಗಳನ್ನು ಹ್ಯಾಕ್ ಮಾಡಲಾಗಿದೆ. 1TB ಗಿಂತ ಹೆಚ್ಚಿನ ಸೂಕ್ಷ್ಮ ಗ್ರಾಹಕರ ಡೇಟಾ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ನೀವು ಬ್ಯಾಂಕಿನ ಗ್ರಾಹಕರಾಗಿದ್ದರೆ ಡೇಟಾ ಉಲ್ಲಂಘನೆ ಸಂದರ್ಭ ತಿಳಿದುಕೊಳ್ಳಬೇಕಾದ ಐದು ವಿಷಯಗಳು ಮತ್ತು ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಏನು ಮಾಡಬೇಕು ಎನ್ನುವ ವಿವರ ಇಲ್ಲಿದೆ.
ಡೇಟಾ ಉಲ್ಲಂಘನೆ ಬಗ್ಗೆ ವಿವರ ಹೇಳುವುದಾದರೆ, ಹ್ಯಾಕರ್ ಗಳು ಡೇಟಾವನ್ನು ಡಾರ್ಕ್ ವೆಬ್ ಗೆ ಹಾಕಿದ್ದಾರೆ. ಅಂದರೆ ಖಾತೆ ವಿವರ, ಹೆಸರು, ಆಧಾರ್ ಸಂಖ್ಯೆ, ಸಾಲದ ಅನುಮೋದನೆ, ಆಂತರಿಕ ಲೆಕ್ಕ ಪರಿಶೋಧನೆ ಮತ್ತು ಹೆಚ್ಚಿನ ವೈಯಕ್ತಿಕ ಮಾಹಿತಿ ಇದರಲ್ಲಿದೆ. ಬಹುತೇಕ ವೈಯಕ್ತಿಕ ಮಾಹಿತಿಯಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಈಗ ಯಾರು ಬೇಕಾದರೂ ಈ ಡೇಟಾವನ್ನು ಪ್ರವೇಶಿಸಿ ಮಾಹಿತಿ ಪಡೆಯಬಹುದು!
“ಉದ್ಯೋಗಿಯೊಬ್ಬರ ಇಮೇಲ್ ಹ್ಯಾಕ್ ಮಾಡಿದ ನಂತರ ಕೆಲವು ಡೇಟಾಗೆ ಅನಧಿಕೃತ ಪ್ರವೇಶ ದೊರೆತಿದೆ. ಬ್ಯಾಂಕ್ ನ ಮೂಲ ವ್ಯವಸ್ಥೆಗಳಿಗೆ ಪ್ರವೇಶವಾಗಿಲ್ಲ ಮತ್ತು ಸುರಕ್ಷಿತವಾಗಿದೆ” ಎಂದು ಬ್ಯಾಂಕ್ ಹೇಳಿದೆ. ಅಂದರೆ ನೀವು ಬ್ಯಾಂಕ್ ಆಫ್ ಬರೋಡಾದ ಖಾತೆ ಬಳಸಬಾರದೆ? ಹಾಗೇನಿಲ್ಲ. ನಿಮ್ಮ ಕೆಲವು ಅನುಮಾನಗಳನ್ನು ಇಲ್ಲಿ ಪರಿಹರಿಸಲಾಗಿದೆ.
1. ನನ್ನ ಬ್ಯಾಂಕ್ ಖಾತೆ ಅಪಾಯದಲ್ಲಿದೆಯೆ?
ಸಾಫ್ಟ್ವೇರ್ ಎಂಜಿನಿಯರ್ ಶ್ರೀಕಾಂತ್ ಲಕ್ಷ್ಮಣನ್ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, “ಬ್ಯಾಂಕಿಂಗ್ ವಹಿವಾಟು ವ್ಯವಸ್ಥೆ ಮೇಲೆ ಡೇಟಾ ಉಲ್ಲಂಘನೆಯ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಆದರೆ ಬ್ಯಾಂಕ್ ನ ಆಂತರಿಕ ಫೈಲ್ ಹಂಚಿಕೆಗೆ ಸಮಸ್ಯೆಯಾಗಿದೆ. ಗ್ರಾಹಕರ ಗುರುತಿನ ದಾಖಲೆಗಳು, ಬ್ಯಾಂಕ್ ಸ್ಟೇಟ್ಮೆಂಟ್ ಗಳು ಮತ್ತು ಸಾಲದ ದಾಖಲೆಗಳು ಬಹಿರಂಗವಾಗಿವೆ. ಆದರೆ ಇನ್ನೂ ಸಾಮಾನ್ಯ ವಹಿವಾಟು ಮುಂದುವರಿಸಬಹುದು.”
ಈಗಲ್ ಇನ್ಫಾರ್ಮೇಶನ್ ಸಿಸ್ಟಂನ ಸಿಇಒ ಸುಬೀರ್ ಸಂಗಲ್ ಪ್ರಕಾರ, “ಸ್ಕ್ಯಾಮರ್ ನಿಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುವ ಸಾಧ್ಯತೆಯಿದೆ. ಗುರುತು ಮತ್ತು/ ಅಥವಾ ಖಾತೆ ಮರುಪಡೆಯುವಿಕೆ ಪರಿಶೀಲಿಸಲು ಬಳಸಬಹುದಾದ ಮಾಹಿತಿ ಸೋರಿಕೆಯಾಗಿದ್ದರೆ ಅನಧಿಕೃತ ಪ್ರವೇಶದ ಅಪಾಯವಿದೆ. ಹೀಗಾಗಿ ಪಾಸ್ವರ್ಡ್ ತಕ್ಷಣ ಬದಲಿಸುವುದು ಸೂಕ್ತ. ಲಭ್ಯವಿದ್ದರೆ ಬಹು ಅಂಶದ ದೃಢೀಕರಣ ಆನ್ ಮಾಡುವುದು ಮತ್ತು ಖಾತೆಯ ಚಟುವಟಿಕೆ ಮೇಲೆ ನಿಗಾ ಇಡುವುದು ಸೂಕ್ತ.”
ಖಾತೆಯ ವಿವರಗಳು ಬಹಿರಂಗವಾಗಿದ್ದರೂ ಡೇಟಾ ಬ್ರೀಚ್ ನ ವ್ಯಾಪ್ತಿ ಸ್ಪಷ್ಟವಾಗಿಲ್ಲ. ಈವರೆಗಿನ ಮಾಹಿತಿ ಪ್ರಕಾರ ಗ್ರಾಹಕರ ವಿವರ ಮತ್ತು ಅಡಿಟ್ ಮಾಹಿತಿ ಮಾತ್ರ ಆನ್ಲೈನ್ನಲ್ಲಿ ಲಭ್ಯವಿದೆ. ಪಾಸ್ವರ್ಡ್ ಅಥವಾ ಪಿನ್ಗಳು ಬಹುಶಃ ಲಭ್ಯವಿಲ್ಲ. ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ವ್ಯವಸ್ಥೆ ಸಹ ಜಾರಿಯಲ್ಲಿದೆ. ಹೀಗಾಗಿ ಹ್ಯಾಕರ್ ಅಥವಾ ಮಾಹಿತಿ ಬಳಸುವ ಯಾರೇ ಆದರೂ ಒಟಿಪಿ ಇಲ್ಲದೆ ಖಾತೆ ತೆರೆಯಲು ಸಾಧ್ಯವಿಲ್ಲ. ಆದರೂ ಪಾಸ್ವರ್ಡ್ ಮತ್ತು ಪಿನ್ ಬದಲಿಸುವುದು ಸೂಕ್ತ.
2. ವಿವರ ಸೋರಿಕೆಯಾಗಿದೆಯೇ ಎಂದು ತಿಳಿಯುವುದು ಹೇಗೆ?
ವಿವರ ಡಾರ್ಕ್ ವೆಬ್ ನಲ್ಲಿದೆ. ಟಾರ್ (tor) ಅಥವಾ ಆನಿಯನ್ (the onion) ರೌಟರ್ ಮೂಲಕ ನೀವು ಪ್ರವೇಶಿಸಿ ಪರಿಶೀಲಿಸಬಹುದು. ಬೃಹತ್ ಡೇಟಾದಲ್ಲಿ ಮಾಹಿತಿಯನ್ನು ಒಂದೊಂದಾಗಿ ಪರಿಶೀಲಿಸಬೇಕಾಗುತ್ತದೆ. ಶ್ರೀಕಾಂತ್ ಲಕ್ಷ್ಮಣನ್ ಅವರ ಕ್ಯಾಶ್ಲೆಸ್ಕನ್ಸ್ಯೂಮರ್ ಸೋರಿಕೆಗಾಗಿ ಬ್ರಾಂಚ್ ಚೆಕರ್ ಅನ್ನು ಸೃಷ್ಟಿಸಿದೆ. ಗ್ರಾಹಕರು ತಮ್ಮ ಶಾಖೆಯು ಬಹಿರಂಗಗೊಂಡಿರುವ 1088 ಶಾಖೆಗಳಲ್ಲಿ ಇದೆಯೇ ಎಂದು IFSC ಕೋಡ್ ಬಳಸಿ ಪರಿಶೀಲಿಸಬಹುದು. ತಜ್ಞರ ಪ್ರಕಾರ ಗ್ರಾಹಕರು ಬ್ರಾಂಚ್ ಅನ್ನು ಸಂಪರ್ಕಿಸಿ ವಿವರ ತಿಳಿದುಕೊಳ್ಳಬಹುದು. ಪೀಡಿತ ಗ್ರಾಹಕರನ್ನು ಗುರುತಿಸಿ ಅವರಿಗೆ ಸಲಹೆ ನೀಡುವುದು ಬ್ಯಾಂಕ್ ಜವಾಬ್ದಾರಿಯಾಗಿರುತ್ತದೆ.
3. ನಿಮ್ಮ ಸೋರಿಕೆಯಾದ ಡೇಟಾ ಹೇಗೆ ಬಳಕೆಯಾಗಬಹುದು?
ಸೈಬರ್ ಭದ್ರತೆ ತಜ್ಞ ಮಿನಿಆರೆಂಜ್ ಸಿಇಒ ಅನಿರ್ಬನ್ ಮುಖರ್ಜಿ ಅವರ ಪ್ರಕಾರ, “ಇಮೇಲ್ ಅಥವಾ ಫೋನ್ ಸಂಖ್ಯೆಯು ತಿಳಿದಿರುವ ಉಲ್ಲಂಘನೆಗಳಲ್ಲಿ ಕಾಣಿಸಿಕೊಂಡಿದೆಯೇ ಎಂದು ಪರಿಶೀಲಿಸಲು ಅನೇಕ ಸೇವೆಗಳು ನಿಮಗೆ ಅವಕಾಶ ಕೊಡುತ್ತವೆ. ಅದರಾಚೆಗೆ ಪರಿಚಯವಿಲ್ಲದ ವಹಿವಾಟುಗಳಿಗಾಗಿ ನಿಮ್ಮ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಹೇಳಿಕೆಗಳನ್ನು ಪರಿಶೀಲಿಸುವುದು ಮತ್ತು ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸುವುದು ಉತ್ತಮ ಅಭ್ಯಾಸಗಳಾಗಿವೆ.”
ಈ ಸೋರಿಕೆಯ ಬಗ್ಗೆ ನಿಮ್ಮ ಮನದಲ್ಲಿ ಪ್ರಶ್ನೆಗಳಿದ್ದರೆ ಹಂಚಿಕೊಳ್ಳಲಾದ ಸೋರಿಕೆಯ ಸ್ಕ್ರೀನ್ಶಾಟ್ಗಳನ್ನು ಪರಿಶೀಲಿಸಬಹುದು. ಡೇಟಾ ಸೋರಿಕೆಯಾದ ಕಾರಣ ಗುರುತಿನ ಕಳ್ಳತನ ಸುಲಭವಾಗಬಹುದು. ನಿಮ್ಮನ್ನು ಅನುಕರಿಸಲು ವಿವರ ಬಳಸಿಕೊಳ್ಳುವ ಸಾಧ್ಯತೆಯಿದೆ. ಕೆವೈಸಿ ಸಲ್ಲಿಕೆಗಳನ್ನು ನಕಲಿ ಮಾಡಲು ಪ್ರಯತ್ನಿಸಬಹುದು. ಕದ್ದ ವಿವರ ಬಳಸಿ ಸೈಬರ್ ಅಪರಾಧಿಗಳು ಹೆಚ್ಚು ಗುರಿಯಿಟ್ಟ ಫಿಶಿಂಗ್ ದಾಳಿ, ಹಣಕಾಸು ವಂಚನೆ ಅಥವಾ ಗುರುತಿನ ಕಳ್ಳತನ ಮಾಡಬಹುದು.
4. ಸೋರಿಕೆಯಾದ ಡೇಟಾದಿಂದ ಬ್ಯಾಂಕ್ ಖಾತೆ ಮೀರಿ ಸಮಸ್ಯೆ ಬೆಳೆಯಬಹುದೆ?
2026ರಲ್ಲಿ ಎಲ್ಲವೂ ಡಿಜಿಟಲ್ ಆಗಿ ಸಂಪರ್ಕಗೊಂಡಿದೆ. ಆನ್ಲೈನ್ ನಲ್ಲಿ ಸೋರಿಕೆಯಾಗುವ ವಿಷಯವು ವಿಭಿನ್ನ ವಿಷಯಗಳಲ್ಲಿ ಪರಿಣಾಮ ಬೀರಬಹುದು. ಬ್ಯಾಂಕ್ ಆಫ್ ಬರೋಡಾದ ಡೇಟಾ ಸೋರಿಕೆಯಲ್ಲೂ ಇದೇ ಆಗಬಹುದು. ನಿಮ್ಮ ಆಧಾರ್ ಗೆ ಪ್ರವೇಶ ಪಡೆದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಸೀಮಿತವಾಗಿರದೆ ನಿಮ್ಮ ಸೂಕ್ಷ್ಮ ಮಾಹಿತಿ ಹುಡುಕಲು ಸಾಧ್ಯವಾಗುತ್ತದೆ. ಸರ್ಕಾರಿ ಯೋಜನೆಗಳು, ಪಿಎಫ್ ಖಾತೆಗಳು ಮತ್ತು ಇನ್ನೂ ಹೆಚ್ಚಿನ ವಿವರ ಪಡೆಯಬಹುದು.
ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ವಂಚಿಸಲು ನಕಲಿ ಗುರುತು ಬಳಕೆಯಾಗಬಹುದು. ನಿಮ್ಮ ಸಾಮಾಜಿಕ ಮಾಧ್ಯಮ, ಶಾಪಿಂಗ್, ಇ-ವ್ಯಾಲೆಟ್ ಅಥವಾ ಇತರ ಆನ್ಲೈನ್ ಖಾತೆಗಳ ಮೇಲೆ ದಾಳಿ ಮಾಡಲು ಬಳಸಿಕೊಳ್ಳಬಹುದು. ಒಂದೇ ಪಾಸ್ವರ್ಡ್ ಅನೇಕ ಸ್ಥಳದಲ್ಲಿ ಬಳಸಿದ್ದರೆ ಜಾಗರೂಕರಾಗಿರಬೇಕು. ಒಂದು ಖಾತೆ ಸೋರಿಕೆಯಾದರೆ ಇಮೇಲ್, ಸಾಮಾಜಿಕ ಮಾಧ್ಯಮ ಅಥವಾ ಇತರ ಹಣಕಾಸು ಖಾತೆಗಳ ಸೋರಿಕೆಗೆ ಕಾರಣವಾಗಬಹುದು.
5. ನನ್ನ ಖಾತೆಯನ್ನು ಸುರಕ್ಷಿತವಾಗಿಡಲು ಏನು ಮಾಡಬಹುದು?
ಒಮ್ಮೆ ವಿವರ ಬಹಿರಂಗವಾದರೆ ಮುಕ್ತ ಬಳಕೆಗೆ ಸಿಗುತ್ತದೆ. ಡೇಟಾ ಬಹಿರಂಗವಾದ ಮೇಲೆ ಅದನ್ನು ಸುರಕ್ಷಿತವಾಗಿಡುವುದು ಸಾಧ್ಯವಿಲ್ಲ. ಮೂಲ ಮೂಲವನ್ನು ತೆಗೆದು ಹಾಕಿದರೂ ಪ್ರತಿಗಳು ಆನ್ಲೈನ್ ವೇದಿಕೆಗಳು ಮತ್ತು ಡಾರ್ಕ್ ವೆಬ್ ನಲ್ಲಿ ಹರಡುತ್ತಿರುತ್ತವೆ. ಹೀಗಾಗಿ ನೀವು ಭವಿಷ್ಯದಲ್ಲಿ ಜಾಗರೂಕರಾಗಿರಬೇಕು. ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿ ನಿಮ್ಮ ಖಾತೆಯ ಪಾಸ್ವರ್ಡ್ ಮತ್ತು ಪಿನ್ ಬದಲಿಸಬೇಕು.
ಟ್ರಾನ್ಸಾಕ್ಷನ್ ಅಲರ್ಟ್ ಗಳನ್ನು ಸಕ್ರಿಯಗೊಳಿಸಿ ಮತ್ತು ಪರಿಶೀಲಿಸಿ. ಬ್ಯಾಂಕ್ ಪ್ರತಿನಿಧಿಯೆಂದು ಹೇಳಿಕೊಂಡು ಯಾರಾದರೂ ಮಾತನಾಡಿದರೆ ಅತ್ಯಂತ ಜಾಗರೂಕರಾಗಿರಿ. ನಿಮ್ಮ ಕ್ರೆಡಿಟ್ ಇತಿಹಾಸ ಟ್ರ್ಯಾಕ್ ಮಾಡಬಹುದು. ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆಯೇ ಎಂದು ನೋಡಬಹುದು. ನಿಮ್ಮ ವಿವರ ಬಳಸಿ ನಿಮಗೆ ವಂಚನೆಯ ಇಮೇಲ್ ಕಳುಹಿಸುವುದು ಹೊರತುಪಡಿಸಿ ಏನೂ ಮಾಡಲು ಸಾಧ್ಯತೆ ಇಲ್ಲದೆ ಇದ್ದರೂ, ಸುರಕ್ಷಿತವಾಗಿರುವುದು ಉತ್ತಮ.
ಮಾಹಿತಿ ಕೃಪೆ: India Today






