ಸೆಪ್ಟೆಂಬರ್ 28 ರಿಂದ 30 ರವರೆಗೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಹಿನ್ನೆಲೆ: ರವಿವಾರವೂ ತೆರೆಯಲಿದೆ ಬ್ಯಾಂಕ್ಗಳು
ಬ್ಯಾಂಕ್ ನೌಕರರ ಮುಷ್ಕರಕ್ಕೆ ಕಾರಣವೇನು?

ಸಾಂದರ್ಭಿಕ ಚಿತ್ರ | Photo Credit : PTI
ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೂ ಮುನ್ನ ಗ್ರಾಹಕರಿಗೆ ಅಗತ್ಯ ಬ್ಯಾಕಿಂಗ್ ಸೇವೆಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ರವಿವಾರ (ಸೆಪ್ಟೆಂಬರ್ 27) ಬ್ಯಾಂಕ್ಗಳು ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರ ಬುಧವಾರ ತಿಳಿಸಿದೆ.
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 28 ರಿಂದ 30 ರವರೆಗೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 26 ಮತ್ತು 27 ರಂದು ವಾರಾಂತ್ಯದ ರಜೆಗಳು ಬರುವುದರಿಂದ, ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ದೀರ್ಘಕಾಲಿಕ ವ್ಯತ್ಯಯ ಉಂಟಾಗಬಹುದು ಎಂದು ಸರ್ಕಾರ ತಿಳಿಸಿದೆ.
"ಸೆಪ್ಟೆಂಬರ್ 28 ರಿಂದ 30 ರವರೆಗೆ ಯುುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಮತ್ತು ಸೆಪ್ಟೆಂಬರ್ 26 ಹಾಗೂ 27 ರ ವಾರಾಂತ್ಯದ ರಜೆಗಳು ಒಂದೇ ಸಮಯದಲ್ಲಿ ಬಂದಿರುವುದರಿಂದ, ನಾಗರಿಕರ ಬ್ಯಾಂಕಿಂಗ್ ಅಗತ್ಯಗಳನ್ನು ಕಾಪಾಡಲು ಸರ್ಕಾರವು ಸಕ್ರಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ" ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸಾರ್ವಜನಿಕರ ನಿಜವಾದ ಬ್ಯಾಂಕಿಂಗ್ ಅಗತ್ಯಗಳಿಗೆ ದೀರ್ಘಕಾಲದವರೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು, ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಸೆಪ್ಟೆಂಬರ್ 27 ರವಿವಾರದಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ" ಎಂದು ಸಚಿವಾಲಯ ತಿಳಿಸಿದೆ.
"ಬ್ಯಾಂಕ್ ಗ್ರಾಹಕರ ಕಲ್ಯಾಣ ಮತ್ತು ಸೌಕರ್ಯವೇ ಸರ್ಕಾರದ ಅತ್ಯುನ್ನತ ಪ್ರಾಮುಖ್ಯತೆಯಾಗಿದೆ ಎಂಬುದನ್ನು ಈ ಇಲಾಖೆಯು ಪುನರುಚ್ಚರಿಸುತ್ತದೆ. ಪ್ರಸ್ತಾವಿತ ಮುಷ್ಕರವನ್ನು ಮುಂದೂಡುವಂತೆ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಯೂನಿಯನ್ಗಳಿಗೆ ಮನವಿ ಮಾಡಿವೆ . ಅಗತ್ಯ ಬ್ಯಾಂಕಿಂಗ್ ಸೇವೆಗಳು ಯಾವುದೇ ತೊಂದರೆಯಿಲ್ಲದೆ ಮುಂದುವರಿಯುವಂತೆ ಕ್ರಮಗಳನ್ನು ಕೈಗೊಂಡಿವೆ" ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸೆಪ್ಟೆಂಬರ್ 27 ರಂದು ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ-ಸಂಯೋಜಿತ ಶಾಖೆಗಳು ಮತ್ತು ಕರೆನ್ಸಿ ಚೆಸ್ಟ್ಗಳು ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಅನುಮೋದನೆ ನೀಡಿದೆ.
"2026 ಸೆಪ್ಟೆಂಬರ್ 27 ರವಿವಾರದಂದು ಬ್ಯಾಂಕ್ ಶಾಖೆಗಳು ಮತ್ತು ಕರೆನ್ಸಿ ಚೆಸ್ಟ್ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಸಾರ್ವಜನಿಕರ ನಿಜವಾದ ಬ್ಯಾಂಕಿಂಗ್ ಅಗತ್ಯಗಳಿಗೆ ದೀರ್ಘಕಾಲದವರೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ, ಸೆಪ್ಟೆಂಬರ್ 27 ರವಿವಾರದಂದು ಬ್ಯಾಂಕ್ಗಳ ಶಾಖೆಗಳು, ಕಚೇರಿಗಳು, ಎಟಿಎಂ ಶಾಖೆಗಳು ಮತ್ತು ಕರೆನ್ಸಿ ಚೆಸ್ಟ್ಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ನಮ್ಮ ಅನುಮೋದನೆ ಇದೆ" ಎಂದು ಆರ್ಬಿಐ ತಿಳಿಸಿದೆ.
"ಈ ಸಂಬಂಧ ಪ್ರಸ್ತುತವಿರುವ ಕಾನೂನು ಅವಶ್ಯಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಂಕ್ಗಳಿಗೆ ಸೂಚಿಸಬಹುದು. ಖಾಸಗಿ ವಲಯ ಹಾಗೂ ವಿದೇಶಿ ಬ್ಯಾಂಕ್ಗಳ ಕರೆನ್ಸಿ ಚೆಸ್ಟ್ಗಳ ಪಟ್ಟಿಯನ್ನು ನಿಮಗೆ ಪ್ರತ್ಯೇಕವಾಗಿ ಕಳುಹಿಸಲಾಗಿದೆ" ಎಂದು ಆರ್ಬಿಐ ಹೇಳಿದೆ.
ಬ್ಯಾಂಕ್ ನೌಕರರ ಮುಷ್ಕರಕ್ಕೆ ಕಾರಣವೇನು?
ಸೆಪ್ಟೆಂಬರ್ 28 ರಿಂದ 30 ರವರೆಗೆ ನಡೆಯಲಿರುವ ಮೂರು ದಿನಗಳ ಮುಷ್ಕರದ ಅವಧಿಯಲ್ಲಿ ದೇಶಾದ್ಯಂತ ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಬಹುದು ಎಂದು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ತಿಳಿಸಿದೆ. ವಾರಾಂತ್ಯದ ರಜೆಗಳ ನಂತರ ಮುಷ್ಕರ ಬರುವುದರಿಂದ, ಗ್ರಾಹಕರು ಒಟ್ಟು ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಬೇಕಾದ ಪರಿಸ್ಥಿತಿ ಎದುರಾಗಬಹುದು.
ಸೆಪ್ಟೆಂಬರ್ 30 ರಂದು ಬ್ಯಾಂಕ್ಗಳ ಅರ್ಧ ವಾರ್ಷಿಕ ಮುಕ್ತಾಯ ದಿನವಿರುವುದರಿಂದ ಈ ಸಮಯವು ಮಹತ್ವದ್ದಾಗಿದೆ. ಈ ದಿನದಂದು ಲೆಕ್ಕಪತ್ರ ಹೊಂದಾಣಿಕೆ, ಮೀಸಲು ಹಣ ನಿಗದಿಪಡಿಸುವುದು ಹಾಗೂ ಖಜಾನೆ ಮತ್ತು ಮಾರುಕಟ್ಟೆ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ.
ಬ್ಯಾಂಕಿಂಗ್ ಕಾರ್ಯಪಡೆಯ ಶೇಕಡಾ 90 ರಷ್ಟು ಭಾಗವನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವ ತನ್ನ ಪ್ರಮುಖ ಬೇಡಿಕೆಯ ಕುರಿತು ಯಾವುದೇ ಸ್ಪಷ್ಟ ಪ್ರಗತಿ ಕಂಡುಬಾರದಿದ್ದರೆ ಮುಷ್ಕರವನ್ನು ಮುಂದುವರಿಸುವುದಾಗಿ ತಿಳಿಸಿದೆ.
"ಹಣಕಾಸು ಸೇವೆಗಳ ಇಲಾಖೆ (DFS), ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಮುಷ್ಕರವನ್ನು ಮುಂದೂಡುವಂತೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ, 5 ದಿನಗಳ ಬ್ಯಾಂಕಿಂಗ್ ಜಾರಿಗೆ ತರುವ ನಮ್ಮ ಬೇಡಿಕೆಯ ಈಡೇರಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮತ್ತು ಸಕಾರಾತ್ಮಕ ಬೆಳವಣಿಗೆಯಿದ್ದಲ್ಲಿ ಮಾತ್ರ ನಾವು ಅದನ್ನು ಪರಿಗಣಿಸುತ್ತೇವೆ ಎಂದು ತಿಳಿಸಿದ್ದೇವೆ" ಎಂದು ಉಪ ಮುಖ್ಯ ಕಾರ್ಮಿಕ ಆಯುಕ್ತರೊಂದಿಗಿನ ಸಭೆಯ ನಂತರ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ ಹೇಳಿಕೆಯಲ್ಲಿ ತಿಳಿಸಿದೆ.
ಪಿಂಚಣಿಯನ್ನು ಪರಿಷ್ಕರಿಸಿ ಸುಧಾರಿಸುವುದು, ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ ಸೂತ್ರ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಅಡಿಯಲ್ಲಿ ಬರುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಮುಂತಾದವು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ ನ ಇತರ ಬೇಡಿಕೆಗಳಾಗಿವೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಯುಎಫ್ಬಿಯುಅಡಿಯಲ್ಲಿರುವ ಬ್ಯಾಂಕ್ ನೌಕರರು ಸೆಪ್ಟೆಂಬರ್ 11 ರಂದು ಕೂಡ ದೇಶವ್ಯಾಪಿ ಮುಷ್ಕರ ನಡೆಸಿದ್ದರು.
ಮಂಗಳವಾರ ನಡೆದ ಸಂಧಾನ ಸಭೆಯು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡ ನಂತರ ಈ ಹೇಳಿಕೆ ಹೊರಬಂದಿದೆ. ಇಂತಹ ಯಾವುದೇ ಪ್ರಗತಿ ಕಾಣದ ಕಾರಣ, ಸೆಪ್ಟೆಂಬರ್ 28, 29 ಮತ್ತು 30 ರಂದು ಪ್ರಸ್ತಾವಿತ ಮುಷ್ಕರವನ್ನು ಮುಂದುವರಿಸುವುದು "ಅನಿವಾರ್ಯ"ವಾಗಲಿದೆ ಎಂದು ಯೂನಿಯನ್ ತಿಳಿಸಿದೆ.
ಕೃಪೆ: Times of India






