ಹೊಸದಾಗಿ ಗಿರಣಿಯಿಂದ ತಂದ ಬಾಸ್ಮತಿಗಿಂತ ಹಳೇ ಬಾಸ್ಮತಿ ಏಕೆ ಉತ್ತಮ?

ಸಾಂದರ್ಭಿಕ ಚಿತ್ರ | Photo Credit : freepik
ಸಾಮಾನ್ಯ ನಂಬಿಕೆಗಳ ಹೊರತಾಗಿಯೂ ಹಳೇ ಬಾಸ್ಮತಿ ಅಕ್ಕಿಯಲ್ಲಿ ಪೋಷಕಾಂಶಗಳು ಹೆಚ್ಚು ಇರುವುದಿಲ್ಲ!
ಭಾರತೀಯ ಅಡುಗೆಮನೆಗಳಲ್ಲಿ ಹಳೆಯ ಬಾಸ್ಮತಿ ಅಕ್ಕಿಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಅಕ್ಕಿ ಹಳೆಯದಾದಷ್ಟು ಪೋಷಕಾಂಶ ಹೆಚ್ಚಿರುತ್ತದೆ ಎನ್ನುವ ಸಾಮಾನ್ಯ ನಂಬಿಕೆ ಇದೆ. ಅಕ್ಕಿಯ ಸುವಾಸನೆ ಮತ್ತು ನಯವಾದ ವಿನ್ಯಾಸಕ್ಕಾಗಿ ಮಾತ್ರವಲ್ಲದೆ, ಅದರ ಆರೋಗ್ಯ ಪ್ರಯೋಜನಗಳಿಗಾಗಿಯೂ ಬಾಸ್ಮತಿ ಬಹಳ ಆದ್ಯತೆಯ ಅಕ್ಕಿಯಾಗಿದೆ. ಆದರೆ ಹೊಸದಾಗಿ ಗಿರಣಿಗೆ ಕೊಟ್ಟು ತಂದ ಅಕ್ಕಿಗಿಂತ ಹಳೇ ಬಾಸ್ಮತಿ ಆರೋಗ್ಯಕರವೆ? ಆಕಾಶ್ ಹೆಲ್ತ್ ಕೇರ್ ನ ಪ್ರಮುಖ ಆಹಾರ ತಜ್ಞರಾಗಿರುವ ಗಿನ್ನಿ ಕಾರ್ಲಾ ಈ ಕುರಿತ ಗೊಂದಲವನ್ನು ನಿವಾರಿಸಿದ್ದಾರೆ.
►ಹಳೆಯ ಬಾಸ್ಮತಿ ಅಕ್ಕಿಯನ್ನು ಭಿನ್ನವಾಗಿಸುವುದೇನು?
ಗಿನ್ನಿ ಕಾರ್ಲಾ ಪ್ರಕಾರ, “ಹೊಸ ಅಕ್ಕಿ ಮತ್ತು ಬಾಸ್ಮತಿ ಅಕ್ಕಿಯನ್ನು ಹೋಲಿಸಿದರೆ ಪ್ರಮುಖ ವ್ಯತ್ಯಾಸ ಅದರ ಹಳೆಯತನದಲ್ಲಿದೆ. ಬಾಸ್ಮತಿ ಅಕ್ಕಿ ಹಳೆಯದಾದಷ್ಟು ಅದರ ತೇವಾಂಶವು ಕಡಿಮೆಯಾಗುತ್ತದೆ ಮತ್ತು ಸ್ಟಾರ್ಚ್ ರಚನೆ ಬದಲಾಗುತ್ತದೆ. ಹೀಗಾಗಿ ಬೇಯಿಸಿದ ನಂತರ ಹೆಚ್ಚು ಜಿಗುಟಿಲ್ಲದ ಹಾಗೂ ಪ್ರತ್ಯೇಕ ಧಾನ್ಯಗಳಿಗೆ ಕಾರಣವಾಗುತ್ತದೆ. ಇದರಿಂದ ರಚನೆ ಮತ್ತು ಜೀರ್ಣಸಾಧ್ಯತೆ ಎರಡೂ ಸುಧಾರಿಸುತ್ತವೆ. ಈ ರಚನಾತ್ಮಕ ಬದಲಾವಣೆಯೇ ಹಳೆಯ ಬಾಸ್ಮತಿಯನ್ನು ಹೊಸದಾಗಿ ಅರೆದ ಅಕ್ಕಿಯಿಂದ ಪ್ರತ್ಯೇಕಿಸುತ್ತದೆ. ಇದು ಬೇಯಿಸಿದಾಗ ಮೃದುವಾಗುವುದರ ಜೊತೆಗೆ ಧಾನ್ಯಗಳು ಪ್ರತ್ಯೇಕವಾಗಿಯೇ ಇರುತ್ತವೆ.”
►ಹಳತಾದಂತೆ ಪೌಷ್ಠಿಕಾಂಶ ಬದಲಾಗುತ್ತದೆಯೆ?
“ಸಾಮಾನ್ಯ ನಂಬಿಕೆಯ ಹೊರತಾಗಿಯೂ ಹಳತಾಗಿರುವುದರಿಂದ ಪೋಷಕಾಂಶಗಳ ಮೌಲ್ಯ ಹೆಚ್ಚಾಗುವುದಿಲ್ಲ. ಹಳತಾಗುವುದರಿಂದ ಅಕ್ಕಿಯಲ್ಲಿರುವ ಪ್ರಮುಖ ಪೋಷಕಾಂಶಗಳು ಬದಲಾಗುವುದಿಲ್ಲ. ಮುಖ್ಯವಾಗಿ ಕಡಿಮೆ ತೇವಾಂಶ ಮತ್ತು ಪುನರ್ರಚನೆಯಾದ ಪಿಷ್ಟದಿಂದ ದೇಹವು ಅದನ್ನು ಹೇಗೆ ಸಂಸ್ಕರಿಸುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎನ್ನುತ್ತಾರೆ ಗಿನ್ನಿ ಕಾರ್ಲಾ.
“ಅಂದರೆ ಸೂಕ್ಷ್ಮ ಚಯಾಪಚಯ ಪ್ರಯೋಜನಗಳು ಇರಬಹುದು. ವಿಶೇಷವಾಗಿ ದೇಹವು ಕಾರ್ಬೋಹೈಡ್ರೇಟ್ ಗಳನ್ನು ಹೇಗೆ ಜೀರ್ಣಿಸಿಕೊಳ್ಳುತ್ತದೆ ಮತ್ತು ಹೀರಿಕೊಳ್ಳುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎಂದು ಅವರು ವಿವರಿಸುತ್ತಾರೆ.
►ಹಳೇ ಬಾಸ್ಮತಿಯನ್ನು ಜೀರ್ಣಿಸುವುದು ಸುಲಭವೆ?
ಕಾರ್ಲಾ ಅವರ ಪ್ರಕಾರ, ಹೊಸದಾಗಿ ಅರೆದ ಅಕ್ಕಿಗೆ ಹೋಲಿಸಿದರೆ ವಯಸ್ಸಾದ ಬಾಸ್ಮತಿ ಅಕ್ಕಿಯನ್ನು ಜೀರ್ಣಿಸಿಕೊಳ್ಳುವುದು ಸುಲಭ. ಏಕೆಂದರೆ ಅದಕ್ಕೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (GI) ಇರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಧಾನವಾಗಿ ಏರಿಕೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಯಸುವವರು ಅಥವಾ ಸೂಕ್ಷ್ಮ ಜೀರ್ಣಕ್ರಿಯೆ ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಬಹುದು. ಆದರೂ ಅದನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ.
►ಬಾಸ್ಮತಿಯಿಂದ ಅನನುಕೂಲತೆ ಇದೆಯೆ?
ಪ್ರಯೋಜನಗಳ ಹೊರತಾಗಿಯೂ ಹಳೆಯ ಬಾಸ್ಮತಿ ಅಕ್ಕಿಯ ಬಗ್ಗೆ ಜಾಗರೂಕತೆ ವಹಿಸಬೇಕು. ಎಷ್ಟೇ ಆದರೂ ಅದು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಗಿರುತ್ತದೆ. “ಮಧುಮೇಹ ಇರುವವರು ಸೇವನೆಯ ಪ್ರಮಾಣದಲ್ಲಿ ನಿಯಂತ್ರಣ ವಹಿಸುವುದು ಅತ್ಯಗತ್ಯ. ಏಕೆಂದರೆ ಅತಿ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು” ಎನ್ನುತ್ತಾರೆ ಕಾರ್ಲಾ.
“ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ತರಕಾರಿಗಳು ಮತ್ತು ನಾರಿನಂಶ ಇಲ್ಲದೆ ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚು ಅವಲಂಬಿಸಿದ್ದರೆ, ಅದು ಒಟ್ಟು ಪೋಷಕಾಂಶದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.






