ಭಿಕ್ಷಾಟನೆ ದಂಧೆ | ರಾಜ್ಯದಲ್ಲಿ 5,000 ಭಿಕ್ಷುಕರು : 10 ಜಿಲ್ಲೆೆಗಳಲ್ಲಿ ವ್ಯಾಪಕ ಪ್ರಕರಣಗಳು

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಭಿಕ್ಷಾಟನೆ ತಡೆಯಲು ರಾಜ್ಯ ಸರಕಾರ ಪ್ರತೀ ವರ್ಷ ಕೋಟ್ಯಂತರ ರೂ. ವ್ಯಯಿಸುತ್ತಿದ್ದರೂ, ಯಾವುದೇ ನಿರೀಕ್ಷಿತ ಬದಲಾವಣೆ ಕಾಣದೆ ರಾಜ್ಯಾದ್ಯಂತ ಭಿಕ್ಷಾಟನೆ ಎನ್ನುವುದು ಬೃಹತ್ ದಂಧೆಯಾಗಿ ಮಾರ್ಪಟ್ಟಿದೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ 5,500ಕ್ಕೂ ಅಧಿಕ ಭಿಕ್ಷುಕರು ಪತ್ತೆಯಾಗಿದ್ದು, ಇವರಲ್ಲಿ ಅತೀ ಹೆಚ್ಚು 947ಕ್ಕೂ ಅಧಿಕ ಮಂದಿ ಬೆಂಗಳೂರಿನಲ್ಲೇ ಇದ್ದಾರೆ ಎಂದು ಅಂದಾಜಿಸಲಾಗಿದೆ. ಉಳಿದಂತೆ ಮೈಸೂರು, ಮಂಡ್ಯ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಭಿಕ್ಷುಕರಿದ್ದಾರೆ. ಅವರಲ್ಲಿ ಒಂದು ವರ್ಗ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿದರೆ ಮತ್ತೊಂದು ವರ್ಗ ದಂಧೆಯ ಜಾಲವಾಗಿದೆ.
ಭಿಕ್ಷಾಟನೆಗೆ ಕಡಿವಾಣ ಹಾಕಲೆಂದೇ ರಾಜ್ಯ ಸರಕಾರವು ಕೇಂದ್ರ ಪರಿಹಾರ ಸಮಿತಿ ಮತ್ತು ನಿರಾಶ್ರಿತರ ಪರಿಹಾರ ಕೇಂದ್ರಗಳ ನಿರ್ವಹಣೆಗಾಗಿ 2021-22ರಿಂದ 2023-24ನೇ ಸಾಲಿನವರೆಗೆ ಒಟ್ಟು 306.21 ಕೋಟಿ ರೂ.ಗಳನ್ನು ವಿನಿಯೋಗಿಸಿದೆ. ಅಲ್ಲದೆ, ಜನರಲ್ಲಿ ಭಿಕ್ಷಾಟನೆ ನಿರ್ಮೂಲನೆಯ ಅರಿವು ಮೂಡಿಸಲು 2024-25ರಲ್ಲಿ ಹೋರ್ಡಿಂಗ್ಸ್, ಬಸ್, ಡಿಜಿಟಲ್ ವಾಲ್ ಪೇಂಟಿಂಗ್, ಎಲ್ಇಡಿ ಡಿಜಿಟಲ್ ಫಲಕಗಳ ಜಾಹೀರಾತು ಪ್ರಕಟನೆಗಾಗಿ ಸುಮಾರು 10ರಿಂದ 15 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, ಇದು ನಿರೀಕ್ಷಿತ ಪರಿಣಾಮವನ್ನು ಬೀರಿಲ್ಲ.
ಕಾಯ್ದೆ ಹೇಳುವುದೇನು? :
ಭಿಕ್ಷಾಟನೆ ಪದ್ಧತಿ ತಡೆದು ಅಂತಹವರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರಕಾರ ‘ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ-1975’ ಅನ್ನು ಜಾರಿ ಮಾಡಿದೆ. ಈ ಕಾಯ್ದೆ ತೀರಾ ಹಳೆಯದಾ
ಗಿದ್ದು, ಪರಿಣಾಮಕಾರಿಯಾಗಿ ಇಲ್ಲದಿರುವುದರಿಂದ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಕೂಗಿದೆ. ಆದರೆ, ಈವರೆಗೆ ಸರಕಾರ ಇದನ್ನು ಮಾಡಿಲ್ಲ. ಕಾಯ್ದೆಯ ಸೆಕ್ಷನ್ 12ರ ಪ್ರಕಾರ ಭಿಕ್ಷಾಟನೆ ಕಾನೂನು ಬಾಹಿರವಾಗಿದ್ದು, 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಭಿಕ್ಷಾಟನೆಯ ವಿರುದ್ಧ ಸಾರ್ವಜನಿಕ ದೂರುಗಳನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ 94823 00400ಗೆ ಕರೆ ಮಾಡಿ ಸಲ್ಲಿಸಬಹುದಾಗಿದೆ.
ಈಗ ಈ ಕಾಯ್ದೆ ಮತ್ತು ನಿಯಮಗಳು ಭಿಕ್ಷುಕರಿಗೆ ದಾನ ನೀಡುವವರಿಗೆ ಅಥವಾ ದಾನ ಮಾಡುವವರಿಗೆ ಯಾವುದೇ ದಂಡವನ್ನು ನಿರ್ದಿಷ್ಟಪಡಿಸಿಲ್ಲ. ದಾನದಲ್ಲಿ ತೊಡಗಿರುವವರು ಅಗತ್ಯವಿರುವವರಿಗೆ ಸಹಾಯ ಮಾಡುತ್ತಾರೆ. ಸರಕಾರಿ ವ್ಯವಸ್ಥೆಗಳು ಭಿಕ್ಷಾಟನೆಯನ್ನು ತಡೆಯಲು ಸಾಧ್ಯವಾದರೆ, ಇಂದು ನಾವು ಬೀದಿಗಳಲ್ಲಿ ಯಾರನ್ನೂ ನೋಡುವುದಿಲ್ಲ. ಯಾರಾದರೂ ಇತರರಿಗೆ ಸಹಾಯ ಮಾಡುವುದನ್ನು ಅವರು ಏಕೆ ತಡೆಯಬೇಕು? ಎಂದು ಬೆಂಗಳೂರಿನ ಹೆಬ್ಬಾಳ ನಿವಾಸಿ ಉಮೇಶ್ ಕೇಳುತ್ತಾರೆ.
ಪುಟ್ಟ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಜಾಲದ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದ ರಾಜ್ಯ ಸರಕಾರ, ಗೃಹ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಜಂಟಿ ಸಮಿತಿ ರೂಪಿಸಿ ಹೆಚ್ಚಿನ ಅಧಿಕಾರ ನೀಡುವುದಾಗಿ ಹೇಳಿತ್ತು. ಇದು ಕೂಡ ಇನ್ನೂ ಚರ್ಚೆಯ ಹಂತಕ್ಕೇ ಸೀಮಿತಗೊಂಡಿದ್ದು, ಇದರ ನಡುವೆ ಇತ್ತೀಚೆಗೆ ರಾಜ್ಯ ಸರಕಾರ ಪೋಷಕರಿಲ್ಲದ ಅನಾಥ ಮಕ್ಕಳನ್ನು ‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್)’ದ ವಸತಿ ಶಾಲೆಗಳಿಗೆ ನೇರವಾಗಿ ಸೇರಿಸಿಕೊಳ್ಳಲು ತೀರ್ಮಾನಿಸಿರುವುದು ಕೊಂಚ ಸಮಾಧಾನದ ವಿಷಯವಾಗಿದೆ.
ಭಿಕ್ಷಾಟನೆ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವ ಪ್ರಕರಣಗಳು ವ್ಯಾಪಕವಾಗುತ್ತಲೇ ಇವೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ವೃತ್ತಗಳು, ದೇವಸ್ಥಾನ ಆವರಣ ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಕೆಲವೆಡೆ ಪೋಷಕರೇ, ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ಮಾಡುತ್ತಾರೆ. ಪ್ರತಿ ಜಿಲ್ಲೆಯಲ್ಲೂ ಇರುವ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಪಾಲನಾ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬಾಲ ಭಿಕ್ಷಾಟನೆ ತಡೆಯುವಲ್ಲಿಯೂ ವಿಫಲವಾಗಿದೆ ಎಂಬ ಆರೋಪವಿದೆ.
ರಾಜಧಾನಿಯಲ್ಲಿ ‘ಹೈಟೆಕ್ ಭಿಕ್ಷಾಟನೆ’ :
ರಾಜಧಾನಿ ಬೆಂಗಳೂರು ಭಿಕ್ಷಾಟನೆಯ ಅಡ್ಡೆಯಾಗಿ ಮಾರ್ಪಟ್ಟಿದ್ದು, ಇಲ್ಲಿನ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಕಬ್ಬನ್ಪಾರ್ಕ್, ಕೆ.ಆರ್.ಮಾರ್ಕೆಟ್ ಸೇರಿದಂತೆ ಜನನಿಬಿಡ ಏರಿಯಾಗಳು, ಪ್ರತಿಷ್ಠಿತ ರಸ್ತೆಗಳು, ಮೇಲ್ಸೇತುವೆಗಳು ಹಾಗೂ ದೇವಸ್ಥಾನಗಳ ಬಳಿ ಇತ್ತೀಚೆಗೆ ವಿಚಿತ್ರ ರೀತಿಯ ಭಿಕ್ಷಾಟನೆಯ ಗ್ಯಾಂಗ್ವೊಂದು ಕಾಣಿಸಿಕೊಂಡಿದೆ. ಈ ಗುಂಪು ನೋಡಲು ಒಳ್ಳೆಯ ಕುಟುಂಬದವರಂತೆ ಕಂಡರೂ 500 ರೂ.ಗಿಂತಲೂ ಮೇಲ್ಪಟ್ಟ ಹಣಕ್ಕೆ ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ.
ರಾಜಸ್ಥಾನ ಮೂಲದ ಈ ‘ಹೈಟೆಕ್ ಭಿಕ್ಷಾಟನೆ ಗ್ಯಾಂಗ್’ನಲ್ಲಿ ಮುಖ್ಯವಾಗಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದಾರೆ. ಇವರು ನಗರದ ಪ್ರತೀ ಸ್ಥಳದಲ್ಲೂ 2-3 ಜನರ ಗುಂಪುಗಳಾಗಿ ಹಂಚಿಕೊಂಡು ಕಾರ್ಯನಿರ್ವಹಿಸುತ್ತಿದ್ದು, ನಗರದ ಹೋಟೆಲ್, ಪಬ್, ಶಾಪಿಂಗ್ ಮಾಲ್ಗಳ ಬಳಿಯಲ್ಲಿ ಯುವಕರು, ಯುವತಿಯರನ್ನೇ ಗುರಿಯಾಗಿಸಿಕೊಂಡು ಭಿಕ್ಷಾಟನೆ ಮಾಡಲಾಗುತ್ತಿರುವುದು ಕಂಡುಬಂದಿದೆ. ಹಣ ಕೊಡದವರನ್ನು ಮುಂದಕ್ಕೆ ಹೋಗಲು ಬಿಡದೇ ದುಂಬಾಲು ಬಿದ್ದು ಕಿರಿಕಿರಿ ಉಂಟುಮಾಡುತ್ತಾ ಭಿಕ್ಷಾಟನೆ ಮಾಡಲಾಗುತ್ತಿದೆ.
ಈ ಭಿಕ್ಷಾಟನೆ ಗುಂಪಿನಲ್ಲಿರುವವರು ಸಾಮಾನ್ಯ ಭಿಕ್ಷುಕರಂತಲ್ಲ. ಇವರು ಅತ್ಯಂತ ಶಿಷ್ಟಚಾರವಾಗಿ ಮಾತನಾಡುತ್ತಾ ಕೈಯಲ್ಲಿ ಫೋನ್ ಪೇ ಕ್ಯೂಆರ್ ಕೋಡ್ ಇರುವ ಸ್ಕ್ಯಾನರ್ ಜತೆಗೆ ಲ್ಯಾಮಿನೇಷನ್ ಮಾಡಲಾದ ಜೆರಾಕ್ಸ್ ಕಾಗದ ಹಿಡಿದು ಬಂದು ಹಣ ಕೇಳುತ್ತಾರೆ. ‘‘ನಾವು ರಾಜಸ್ಥಾನದ ರಾಣಿಪುಲಾ ಗ್ರಾಮದ ನಿರಾಶ್ರಿತರು. ನಮ್ಮ ಊರು ನೈಸರ್ಗಿಕ ವಿಪತ್ತಿಗೆ ಒಳಗಾಗಿ ಮನೆ-ಆಸ್ತಿ ಎಲ್ಲವೂ ನಷ್ಟವಾಗಿದೆ. ನೀವು ಸಹೃದಯರಾದವರು, ದಯವಿಟ್ಟು 500 ಅಥವಾ 1,000 ರೂ. ಸಹಾಯ ಮಾಡಿ’’ ಎಂದು ಭಿಕ್ಷೆ ಬೇಡುತ್ತಾರೆ. ಇದೊಂದೇ ಅಲ್ಲದೆ, ಇನ್ನೂ ಕೆಲವು ಭಿಕ್ಷಾಟನೆಯ ತಂಡಗಳು ನಗೆರದಲ್ಲಿದ್ದು ಇದರ ಮಧ್ಯೆ ಜನರು ಕೂಡ ನಿಜವಾದ ಭಿಕ್ಷುಕರು ಯಾರು ಎಂಬ ಗೊಂದಲಕ್ಕೆ ಬಿದ್ದಂತಾಗಿದೆ.
ಭಾವನಾತ್ಮಕವಾಗಿ ಮೂರ್ಖರನ್ನಾಗಿಸುವ ಭಿಕ್ಷುಕರು..!
ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸುವ ಮೂಲಕ ಭಿಕ್ಷುಕರು ಹಣ ಪೀಕುವ ದಂಧೆ ಮಾಡಿಕೊಂಡಿದ್ದಾರೆ. ಈ ಪದ್ಧತಿ ನಿಷೇಧವಿದ್ದರೂ, ಸಿಗ್ನಲ್, ಬಸ್ ನಿಲ್ದಾಣ, ದೇವಸ್ಥಾನಗಳಲ್ಲಿ ಹಲವು ವಸ್ತುಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ಭಿಕ್ಷೆ ಬೇಡುತ್ತಾರೆ. ಇದರಲ್ಲಿ ಮಕ್ಕಳು, ಮಹಿಳೆಯರು, ವಯೋವೃದ್ಧರೇ ಹೆಚ್ಚು. ಬೆಂಗಳೂರಿನ ನಾವು ಕಟ್ಟುವ ಕಂದಾಯ ಹಣದಲ್ಲಿ ಕನಿಷ್ಠ ಶೇ.3ರಷ್ಟನ್ನು ಭಿಕ್ಷುಕರ ಸೆಸ್ ಅಂತಲೇ ಕಟ್ಟುತ್ತಿದ್ದೇವೆ. ಇದು ನಮ್ಮ ದುರಂತ. ಭಿಕ್ಷಾಟನೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸಂಚುಗಳ ಹಿಂದೆ ಪೋಷಕರಿಲ್ಲದ ಮಕ್ಕಳು ಬಲಿಯಾಗಬಾರದು. ಸರಕಾರ ಈ ದಂಧೆಯನ್ನು ನಿರ್ಮೂಲನೆಗೆ ಮುಂದಾಗಬೇಕು. ಯಾರೂ ಎಲ್ಲೇ ಭಿಕ್ಷೇ ಕೇಳಿದರೂ ನೀವು ಊಟ, ಹಣ್ಣು-ಹಂಪಲು, ಪುಸ್ತಕ ಕೊಡಿ ಎನ್ನುತ್ತಾರೆ ‘ಬೆಂಗಳೂರು ಹುಡುಗರು ತಂಡ’ದ ವಿನೋದ್ ಕರ್ತವ್ಯ.







