Nvidia CEO ವಿವಾಹೇತರ ಸಂಬಂಧ ಪ್ರಕರಣ: ಆರೋಪ ಮತ್ತು ಪ್ರತ್ಯಾರೋಪಗಳೇನು?

Photo Credit : indianexpress.com
ಎನ್ವಿಡಿಯಾ (Nvidia) ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (CEO) ಜೆನ್ಸೆನ್ ಹುವಾಂಗ್ ಅವರ ವಿವಾಹೇತರ ಸಂಬಂಧದ ವಿಚಾರವು ಚೀನಾದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ತಿರುಗಿದೆ. ಕಂಪೆನಿಯ ಮಾಜಿ ಅಧಿಕಾರಿಯೊಬ್ಬರ ಮೂಲಕ ಚೀನಾದ ಗುಪ್ತಚರ ಸಂಸ್ಥೆಯು ಜೆನ್ಸೆನ್ ಹುವಾಂಗ್ ಅವರನ್ನು ಗುರಿಯಾಗಿಸಿಕೊಂಡಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ, ಚಿಪ್ ತಯಾರಿಕಾ ದೈತ್ಯ ಎನ್ವಿಡಿಯಾ ತನಿಖೆಗೆ ಆದೇಶಿಸಿದೆ. ಸಿಂಗಾಪುರ ಮೂಲದ ಡೇಟಾ ಸೆಂಟರ್ ಆಪರೇಟರ್ ಮೆಗಾಸ್ಪೀಡ್ (Megaspeed) ಕಂಪನಿಯ ಮೇಲೂ ಈ ಬೆಳವಣಿಗೆಯಿಂದಾಗಿ ಹೊಸ ಅನುಮಾನಗಳು ಹಾಗೂ ತನಿಖೆಯ ಬಿಸಿ ತಟ್ಟಿದೆ. ಅಮೆರಿಕದ ನಿರ್ಬಂಧಗಳನ್ನು ಮೀರಿ ಚೀನಾಗೆ ನಿರ್ಬಂಧಿತ ಕೃತಕ ಬುದ್ಧಿಮತ್ತೆ (AI) ಚಿಪ್ಗಳನ್ನು ಪಡೆದುಕೊಳ್ಳಲು ಈ ಕಂಪೆನಿ ಸಹಾಯ ಮಾಡುತ್ತಿದೆ ಎಂದು 2024ರಿಂದಲೇ ಅಮೆರಿಕದ ಅಧಿಕಾರಿಗಳು ಶಂಕಿಸಿದ್ದಾರೆ.
ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಾನು ಈ ಬಗ್ಗೆ ಅವರೊಂದಿಗೆ ಮಾತನಾಡಲಾರೆ. ಅವರು ಒಳ್ಳೆಯ ವ್ಯಕ್ತಿ ಎಂದಷ್ಟೇ ನನಗೆ ತಿಳಿದಿದೆ, ಆದರೆ ತೆರೆಮರೆಯಲ್ಲಿ ಏನೆಲ್ಲಾ ನಡೆಯುತ್ತಿರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. "ಎಲ್ಲವೂ ಸರಿಯಾಗಿರುತ್ತದೆ ಎಂದು ಭಾವಿಸುತ್ತೇನೆ" ಎಂದಿರುವ ಟ್ರಂಪ್, ಹುವಾಂಗ್ ಒಬ್ಬ ಗೌರವಾನ್ವಿತ ವ್ಯಕ್ತಿ ಮತ್ತು "ಅವರು ತಮ್ಮ ನಡೆಗೆ ಸ್ಪಷ್ಟನೆ ನೀಡಬಹುದು, ಮೊದಲು ಅವರ ಮಾತುಗಳನ್ನು ಕೇಳಬೇಕು" ಎಂದಿದ್ದಾರೆ.
ಸಿಂಗಾಪುರದಲ್ಲಿ ನೋಂದಾಯಿಸಲ್ಪಟ್ಚಿದ್ದರೂ, ಮೆಗಾಸ್ಪೀಡ್ ಕಂಪೆನಿಯ ಚೀನಾ ಮೂಲ, ಬಿಲಿಯನ್ಗಟ್ಟಲೆ ಡೌಲರ್ ಮೌಲ್ಯದ ಎನ್ವಿಡಿಯಾ ಉಪಕರಣಗಳ ಖರೀದಿ ಹಾಗೂ ಚೀನಾದ ಪ್ರಮುಖ ತಂತ್ರಜ್ಞಾನ ದಿಗ್ಗಜ ಅಲಿಬಾಬಾದಿಂದ ಈ ಕಂಪೆನಿ ಹಣಕಾಸಿನ ನೆರವು ಪಡೆದಿದೆ ಎಂಬ ಆರೋಪಗಳು ಈಗ ಮುನ್ನೆಲೆಗೆ ಬಂದಿವೆ.
ಮೂರನೇ ದೇಶಗಳಲ್ಲಿರುವ ಡೇಟಾ ಸೆಂಟರ್ಗಳ ಮೂಲಕ ಚೀನಾದ ಕಂಪೆನಿಗಳು ಅತ್ಯಾಧುನಿಕ AI ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಪಡೆದುಕೊಳ್ಳುವುದನ್ನು ಅಮೆರಿಕದ ರಫ್ತು ನಿರ್ಬಂಧಗಳು ಪರಿಣಾಮಕಾರಿಯಾಗಿ ತಡೆಯಬಲ್ಲವೇ ಎಂಬ ಆತಂಕವೂ ಅಮೆರಿಕದಲ್ಲಿ ವ್ಯಕ್ತವಾಗಿದೆ.
ಜೆನ್ಸೆನ್ ಹುವಾಂಗ್ ಮೇಲಿರುವ ಆರೋಪಗಳೇನು?
ಹುವಾಂಗ್ ಅವರು ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ತಿಳಿಸಿದ್ದವು. ರವಿವಾರ (ನವೆಂಬರ್ 8) ಬಿಡುಗಡೆ ಮಾಡಿದ ಸಂದೇಶದಲ್ಲಿ ಇದನ್ನು ಖಚಿತಪಡಿಸಿರುವ ಜೆನ್ಸೆನ್ ಹುವಾಂಗ್, "ನಾನು ನನ್ನ ಪತ್ನಿಗೆ ದ್ರೋಹ ಬಗೆದಿದ್ದೇನೆ. ನನ್ನ ಈ ಕೃತ್ಯದಿಂದ ನನ್ನ ಪತ್ನಿ ಮತ್ತು ಮಕ್ಕಳಿಗೆ ನೋವಾಗಿದೆ. ನಾನು ಮಾಡಿದ್ದಕ್ಕೆ ಯಾವುದೇ ಸಮರ್ಥನೆಯೂ ಇಲ್ಲ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ" ಎಂದು ತಿಳಿಸಿದ್ದಾರೆ.
ಅದೇ ದಿನ, ಎನ್ವಿಡಿಯಾ ಕಂಪನಿಯು ಸ್ವತಂತ್ರ ನಿರ್ದೇಶಕರ ಸಮಿತಿಯೊಂದು ಹೊರಗಿನ ಕಾನೂನು ಸಲಹೆಗಾರರ ನೆರವಿನೊಂದಿಗೆ ಈ ಆರೋಪಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ಘೋಷಿಸಿತು. ಕಂಪೆನಿಯ ರಹಸ್ಯಗಳು ಅಥವಾ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಯಾವುದೇ ಧಕ್ಕೆಯಾಗಿದೆ ಎಂಬುದನ್ನು ನಂಬಲು ಬಲವಾದ ಕಾರಣವಿಲ್ಲದಿದ್ದರೂ, ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ಮಂಡಳಿ ತಿಳಿಸಿದೆ.
ಈ ಆರೋಪಗಳು ಎನ್ವಿಡಿಯಾದ ಚಿಪ್ ರಫ್ತಿನ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಜೆನ್ಸೆನ್ ಹುವಾಂಗ್ ನಡೆಸುತ್ತಿದ್ದ ಲಾಭಿಯ ಮೇಲೂ ಹೊಸ ಅನುಮಾನಗಳನ್ನು ಹುಟ್ಟುಹಾಕಿವೆ. ಚೀನಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸಲು ಅಮೆರಿಕದ ಅತ್ಯಾಧುನಿಕ AI ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಸಂಸದರು ಮತ್ತು ರಾಷ್ಟ್ರೀಯ ಭದ್ರತಾ ಅಧಿಕಾರಿಗಳಿಂದ ಈ ನಿಲುವಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಚೀನಾಗೆ ಕಡಿಮೆ ಗುಣಮಟ್ಟದ ಚಿಪ್ಗಳನ್ನು ಪೂರೈಸುವುದರಿಂದ ಅಲ್ಲಿನ ಸ್ಥಳೀಯ ಉದ್ಯಮಗಳು ಮತ್ತು ನಾವೀನ್ಯತೆಯ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹುವಾಂಗ್ ಪದೇ ಪದೇ ವಾದಿಸುತ್ತಿದ್ದರು.
ಚೀನಾದ ಗುಪ್ತಚರ ಸಂಸ್ಥೆಯ ಶಂಕಿತ ಗೂಢಚಾರಿಣಿಯೊಬ್ಬಳಿಗೆ ಹುವಾಂಗ್ ಅವರೊಂದಿಗೆ ವೈಯಕ್ತಿಕ ಸಂಪರ್ಕವಿತ್ತು ಎಂಬ ಊಹೆಗಳಿರುವುದರಿಂದ, ಈ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಅವರ ಮೇಲಿದ್ದ ಚೀನಾದ ಪ್ರಭಾವ ಎಷ್ಟು ಎಂಬ ಬಗ್ಗೆ ಆತಂಕಗಳು ಇನ್ನಷ್ಟು ಹೆಚ್ಚಾಗಿವೆ.
ಅಮೆರಿಕದ ರಫ್ತು ನಿಯಂತ್ರಣಗಳು ಚೀನಾಗೆ ಕೆಲವು ಅತ್ಯಾಧುನಿಕ ಚಿಪ್ಗಳ ಅನಧಿಕೃತ ರವಾನೆಯನ್ನು ನಿಷೇಧಿಸುತ್ತವೆಯಾದರೂ, ಚೀನಾದ ಕಂಪೆನಿಗಳು ಇತರ ದೇಶಗಳಲ್ಲಿರುವ ಡೇಟಾ ಸೆಂಟರ್ಗಳ ಮೂಲಸೌಕರ್ಯವನ್ನು ಬಾಡಿಗೆಗೆ ಪಡೆಯುವ ಮೂಲಕ ಅಷ್ಟೇ ಸಾಮರ್ಥ್ಯದ ಕಂಪ್ಯೂಟಿಂಗ್ ಶಕ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಇಂತಹ ವ್ಯವಸ್ಥೆಗಳು ಕಾನೂನುಬಾಹಿರವಲ್ಲದಿದ್ದರೂ, ಚೀನಾದ ಎಐ ಸಾಮರ್ಥ್ಯವನ್ನು ತಡೆಯಲು ವಾಷಿಂಗ್ಟನ್ ನಡೆಸುತ್ತಿರುವ ಪ್ರಯತ್ನಗಳನ್ನು ಇದು ಸಂಕೀರ್ಣಗೊಳಿಸಿದೆ.
ಜಾಗತಿಕ ಎಐ ಕ್ರಾಂತಿಯು ಎನ್ವಿಡಿಯಾವನ್ನು ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದನ್ನಾಗಿ ಮಾಡಿದೆ (ಪ್ರಸ್ತುತ ಇದರ ಮೌಲ್ಯ 4.5 ಟ್ರಿಲಿಯನ್ ಡಾಲರ್ಗೂ ಅಧಿಕ). ಮೈಕ್ರೋಸಾಫ್ಟ್, ಗೂಗಲ್, ಮೆಟಾ ಮತ್ತು ಅಮೆಝಾನ್ನಂತಹ ತಂತ್ರಜ್ಞಾನ ದೈತ್ಯರು ಇದರ ಅತ್ಯಾಧುನಿಕ ಚಿಪ್ಗಳನ್ನು ಬಳಸಿಕೊಂಡು ಎಐ ಮೂಲಸೌಕರ್ಯವನ್ನು ನಿರ್ಮಿಸಲು ಬಿಲಿಯನ್ಗಟ್ಟಲೆ ಡಾಲರ್ ವೆಚ್ಚ ಮಾಡುತ್ತಿವೆ. ಎನ್ವಿಡಿಯಾದ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ಗಳು (GPUs) ಸಂಕೀರ್ಣ AI ಮಾಡೆಲ್ಗಳನ್ನು ನಿರ್ಮಿಸಲು ಮತ್ತು ನಡೆಸಲು ಅತ್ಯಗತ್ಯವಾಗಿದ್ದು, ಎಐ ಕಂಪ್ಯೂಟಿಂಗ್ ಹಾರ್ಡ್ವೇರ್ ಮಾರುಕಟ್ಟೆಯಲ್ಲಿ ಕಂಪೆನಿಯು ಪ್ರಮುಖ ಸ್ಥಾನ ಪಡೆದುಕೊಂಡಿದೆ.
ಏನಿದು ಮೆಗಾಸ್ಪೀಡ್? ಚೀನಾದೊಂದಿಗೆ ಇದಕ್ಕಿರುವ ಸಂಬಂಧವೇನು?
ಮೆಗಾಸ್ಪೀಡ್ ಎಂಬುದು ಸಿಂಗಾಪುರದಲ್ಲಿ ನೋಂದಾಯಿತ ಕಂಪೆನಿಯಾಗಿದ್ದು, ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ಡೇಟಾ ಸೆಂಟರ್ಗಳ ಮೂಲಕ ಎಐ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ. ಮೂಲತಃ ಇದು ಚೀನಾದ ಗೇಮಿಂಗ್ ಮತ್ತು ಕ್ಲೌಡ್-ಕಂಪ್ಯೂಟಿಂಗ್ ಕಂಪೆನಿಯಾದ 7Roadಗೆ ಸೇರಿದ್ದಾಗಿದೆ. ಈ ಕಂಪೆನಿಗೆ ಚೀನಾ ಸರಕಾರದೊಂದಿಗೆ ಸಂಬಂಧವಿದೆ ಎಂದು ಅಮೆರಿಕದ ಸಂಸದರು ಹೇಳಿದ್ದಾರೆ. ಮೆಗಾಸ್ಪೀಡ್ 2023ರಲ್ಲಿ ತನ್ನ ಪ್ರಸ್ತುತ ಹೆಸರನ್ನು ಪಡೆದುಕೊಳ್ಳುವ ಮೊದಲು 7Road ಇಂಟರ್ ನ್ಯಾಷನಲ್ ಎಂದು ನೋಂದಾಯಿಸಲ್ಪಟ್ಟಿತ್ತು.
ಮೆಗಾಸ್ಪೀಡ್ ಕಂಪೆನಿಯಲ್ಲಿ ಚೀನಾದ ಯಾವುದೇ ಷೇರುದಾರರಿಲ್ಲ ಮತ್ತು ಇದು ಚೀನಾದ ಹೊರಗೆ ಕಾರ್ಯನಿರ್ವಹಿಸುತ್ತಿದೆ ಎಂದು ಎನ್ವಿಡಿಯಾ ಸಮರ್ಥಿಸಿಕೊಂಡಿದ್ದರೂ, ಇದರ ವ್ಯವಹಾರಗಳು ಚೀನಾದ ತಂತ್ರಜ್ಞಾನ ಕಂಪೆನಿಗಳೊಂದಿಗಿನ ನಿಕಟ ಬಾಂಧವ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದಿ ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿರುವ ವ್ಯಾಪಾರ ದಾಖಲೆಗಳ ಪ್ರಕಾರ, ಮೆಗಾಸ್ಪೀಡ್ನ ಮಲೇಷ್ಯಾದ ಅಂಗಸಂಸ್ಥೆಯು ಜೂನ್ 2024 ಮತ್ತು ಫೆಬ್ರವರಿ 2026 ರ ನಡುವೆ ಎನ್ವಿಡಿಯಾ ತಂತ್ರಜ್ಞಾನವನ್ನು ಹೊಂದಿರುವ ಕನಿಷ್ಠ 4.8 ಬಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ AI ಉಪಕರಣಗಳನ್ನು ಖರೀದಿಸಿದೆ. ಈ ಕಂಪೆನಿಯು ಅಲಿಬಾಬಾ ಮತ್ತು ಇತರ ಚೀನೀ ಉದ್ಯಮಗಳಿಗೆ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಪೂರೈಸಿದೆ ಎಂದು ವರದಿಯಾಗಿದೆ. ಇದು ಚೀನಾದ ಹೊರಗೆ ನೆಲೆಗೊಂಡಿರುವ ಎನ್ವಿಡಿಯಾ ಚಾಲಿತ ಮೂಲಸೌಕರ್ಯವನ್ನು ಚೀನೀ ಕಂಪನಿಗಳು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಹುವಾಂಗ್ ಅವರೊಂದಿಗಿನ ಚೀನಾದ ಗುಪ್ತಚರ ಕಾರ್ಯಾಚರಣೆಯ ವಿಚಾರ ಬೆಳಕಿಗೆ ಬರುವುದಕ್ಕೂ ಮುನ್ನವೇ ಅಮೆರಿಕದ ಅಧಿಕಾರಿಗಳು ಮೆಗಾಸ್ಪೀಡ್ನ ಚಟುವಟಿಕೆಗಳನ್ನು ತನಿಖೆ ಮಾಡಲು ಪ್ರಾರಂಭಿಸಿದ್ದರು.
ಅಮೆರಿಕದ ವಾಣಿಜ್ಯ ಇಲಾಖೆಯು 2024ರ ಕೊನೆಯಲ್ಲಿ ಕಂಪೆನಿಯ ತನಿಖೆಯನ್ನು ಪ್ರಾರಂಭಿಸಿತು. ಮಲೇಷ್ಯಾದಲ್ಲಿರುವ ಅದರ ಡೇಟಾ ಸೆಂಟರ್ಗೆ ಭೇಟಿ ನೀಡಿದ ಅಧಿಕಾರಿಯೊಬ್ಬರಿಗೆ ಎನ್ವಿಡಿಯಾ ಉಪಕರಣಗಳು ಇನ್ನೂ ಬಾಕ್ಸ್ಗಳಲ್ಲಿ ಇಟ್ಟಿರುವುದು ಕಂಡುಬಂದಿತ್ತು. ಈ ಚಿಪ್ಗಳನ್ನು ಅಲ್ಲಿ ಬಳಸುವ ಬದಲು ಬೇರೆಡೆಗೆ ರವಾನಿಸುವ ಶಂಕೆ ಇದರಿಂದ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ, ಮೆಗಾಸ್ಪೀಡ್ ಕಂಪೆನಿಯು ಅಮೆರಿಕದ ರಫ್ತು ನಿಯಂತ್ರಣಗಳನ್ನು ಉಲ್ಲಂಘಿಸಿ ಚೀನಾಗೆ ಚಿಪ್ಗಳನ್ನು ಕಳುಹಿಸುತ್ತಿದೆಯೇ ಎಂಬುದನ್ನು ಅಮೆರಿಕದ ಅಧಿಕಾರಿಗಳು ತನಿಖೆ ನಡೆಸಿದರು. ಈ ವರ್ಷದ ಆರಂಭದಲ್ಲಿ ಈ ತನಿಖೆಯನ್ನು ಅಮೆರಿಕದ ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಲಾಯಿತು.
2025 ಅಕ್ಟೋಬರ್ ನಲ್ಲಿ, ರಿಪಬ್ಲಿಕನ್ ಸೆನೆಟರ್ ಟಾಮ್ ಕಾಟನ್ ಅವರು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲಟ್ನಿಕ್ ಅವರಿಗೆ ಪತ್ರ ಬರೆದು, ಮೆಗಾಸ್ಪೀಡ್ನ ಮಾಲೀಕತ್ವ, ಸಂಬಂಧಗಳು ಮತ್ತು ರಫ್ತು ನಿಯಂತ್ರಣಗಳ ಉಲ್ಲಂಘನೆಯ ಬಗ್ಗೆ ತನಿಖೆಗೆ ಒತ್ತಾಯಿಸಿದರು. ಅಮೆರಿಕದ ಕಪ್ಪುಪಟ್ಟಿಗೆ ಸೇರ್ಪಡೆಯಾಗಿರುವ ಇನ್ಸ್ಪುರ್ (Inspur) ಎಂಬ ಚೀನೀ ತಂತ್ರಜ್ಞಾನ ಕಂಪೆನಿಯ ಅಮೆರಿಕದ ಅಂಗಸಂಸ್ಥೆಯ ಮೂಲಕ ಎನ್ವಿಡಿಯಾ ಉಪಕರಣಗಳನ್ನು ಬೇರೆಡೆಗೆ ರವಾನಿಸುತ್ತಿರುವುದನ್ನು ಕಾಟನ್ ಪ್ರಸ್ತಾಪಿಸಿದ್ದರು.
ಎನ್ವಿಡಿಯಾ ಹಾಗೂ ಮೆಗಾಸ್ಪೀಡ್ ನ ವಾದವೇನು?
ಆಯಾ ದೇಶದ ನಿಯಮಗಳ ಉಲ್ಲಂಘನೆಯ ಶಂಕೆಯ ಮೇಲೆ ಮೆಗಾಸ್ಪೀಡ್ ಸಂಸ್ಥೆಯ ವಿರುದ್ಧ ತನಿಖೆ ನಡೆಯುತ್ತಿರುವುದನ್ನು ಸಿಂಗಾಪುರ ಸರಕಾರ ದೃಢಪಡಿಸಿದೆ. ಆದರೆ, ಮೆಗಾಸ್ಪೀಡ್ ಕಂಪನಿಯು ಚೀನಾಗೆ ಅಕ್ರಮವಾಗಿ ಚಿಪ್ಗಳನ್ನು ರವಾನಿಸಿದೆ ಎಂಬುದನ್ನು ಅಮೆರಿಕ ಅಥವಾ ಸಿಂಗಾಪುರದ ತನಿಖಾ ಸಂಸ್ಥೆಗಳು ಸಾರ್ವಜನಿಕವಾಗಿ ಇನ್ನೂ ಸಾಬೀತುಪಡಿಸಿಲ್ಲ. ಮೆಗಾಸ್ಪೀಡ್ ಸಂಸ್ಥೆಯು ಯಾವುದೇ ತಪ್ಪು ಮಾಡಿಲ್ಲ ಎಂದು ನಿರಾಕರಿಸಿದ್ದರೆ, ಇತ್ತ ಎನ್ವಿಡಿಯಾ ಕಂಪನಿಯು ತನ್ನ ತನಿಖೆಯಲ್ಲಿ ಚಿಪ್ಗಳ ರವಾನೆಯಾದ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ತಿಳಿಸಿದೆ.
2026ರ ಮೇ ತಿಂಗಳಿನಲ್ಲಿ 'ಕಲ್ಪ್ರ್ ರಿಸರ್ಚ್' ಎಂಬ ಶಾರ್ಟ್-ಸೆಲ್ಲಿಂಗ್ ಸಂಸ್ಥೆಯು ವರದಿಯೊಂದನ್ನು ಪ್ರಕಟಿಸಿತು. ಮೆಗಾಸ್ಪೀಡ್ ಚೀನಾ ಮಾಲೀಕತ್ವದಲ್ಲಿದೆ ಎಂಬುದನ್ನು ನಿರಾಕರಿಸಲಾಗಿದ್ದರೂ, ಮಧ್ಯವರ್ತಿ ಕಂಪೆನಿಗಳ ಮೂಲಕ ಅದು ಅಲಿಬಾಬಾದಿಂದ ಹಣಕಾಸಿನ ನೆರವು ಪಡೆದುಕೊಂಡಿದೆ ಎಂದು ವರದಿ ಆರೋಪಿಸಿತ್ತು.
ಕಾರ್ಪೊರೇಟ್ ದಾಖಲೆಗಳನ್ನು ಉಲ್ಲೇಖಿಸಿದ ಕಲ್ಪ್ರ್ ಸಂಸ್ಥೆಯು, ಮೆಗಾಸ್ಪೀಡ್ ಕಂಪೆನಿಯ ಆಸ್ತಿ ಮೌಲ್ಯವು 2023ರ ಕೊನೆಯಲ್ಲಿ 33 ಮಿಲಿಯನ್ ಡಾಲರ್ನಷ್ಟಿದ್ದು, 2024 ರ ವೇಳೆಗೆ 3 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ ಎಂದು ತಿಳಿಸಿದೆ. ಮೂಲ ತಿಳಿಯದ ವ್ಯಕ್ತಿಯೊಬ್ಬರಿಂದ ಸಿಕ್ಕ 2.9 ಬಿಲಿಯನ್ ಡಾಲರ್ ಹಿಂತಿರುಗಿಸಬಹುದಾದ ಠೇವಣಿಯೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.
ಮೆಗಾಸ್ಪೀಡ್ನ ಮಲೇಷ್ಯಾದ ಅಂಗಸಂಸ್ಥೆಯಾದ ಸ್ಪೀಡ್ಮ್ಯಾಟ್ರಿಕ್ಸ್, ಸಿಂಗಾಪುರ ಮೂಲದ ಅಪೆಕ್ಸ್ ಎಂಟರ್ಪ್ರೈಸ್ ಸೊಲ್ಯೂಷನ್ಸ್ ಕಂಪೆನಿಗೆ ತನ್ನ ವ್ಯವಹಾರವನ್ನು ಒತ್ತೆಯಾಗಿ ಇಟ್ಟಿರುವುದನ್ನು ಈ ವರದಿ ತೋರಿಸಿತ್ತು. ಈ ಅಪೆಕ್ಸ್ ಸಂಸ್ಥೆಯ ಮೂಲ ಕಂಪೆನಿ ಅಲಿಬಾಬಾ ಆಗಿದೆ. ಈ ಒಪ್ಪಂದಗಳ ಮೂಲಕ ಅಲಿಬಾಬಾಗೆ ಸಂಬಂಧಿಸಿದ ಹಣವನ್ನು ಎನ್ವಿಡಿಯಾ ಚಾಲಿತ ಸರ್ವರ್ಗಳ ಖರೀದಿಗೆ ಬಳಸಲಾಗಿದೆ ಎಂದು ಕಲ್ಪ್ರ್ ಆರೋಪಿಸಿದೆ.
ಆಗ್ನೇಯ ಏಷ್ಯಾದ ಮಧ್ಯವರ್ತಿಗಳು ಮತ್ತು ಅಕ್ರಮ ಚಿಪ್ ರವಾನೆಯ ಮೂಲಕವೇ ಎನ್ವಿಡಿಯಾದ 2026ರ ಹಣಕಾಸು ವರ್ಷದ ಒಟ್ಟು ಆದಾಯದ ಶೇಕಡಾ 20ಕ್ಕಿಂತ ಹೆಚ್ಚು ಭಾಗ ಚೀನಾದ ಬೇಡಿಕೆಯಿಂದಲೇ ಬಂದಿದೆ ಎಂದು ಕಲ್ಪ್ರ್ ದೂರಿದೆ. ತಾನು ಎನ್ವಿಡಿಯಾ ಷೇರುಗಳಲ್ಲಿ ಶಾರ್ಟ್ ಪೊಸಿಷನ್ ಹೊಂದಿರುವುದಾಗಿ ಈ ಸಂಸ್ಥೆ ಬಹಿರಂಗಪಡಿಸಿದೆ (ಅಂದರೆ ಎನ್ವಿಡಿಯಾ ಷೇರು ಬೆಲೆ ಕುಸಿದರೆ ಈ ಸಂಸ್ಥೆಗೆ ಲಾಭವಾಗುತ್ತದೆ). ಹೀಗಾಗಿ ಈ ಆರೋಪಗಳು ಇನ್ನೂ ಸಾಬೀತಾಗಿಲ್ಲ.
ಚೀನಾದ ಗೂಢಚರ್ಯೆ ಆರೋಪಗಳು
ಇತ್ತೀಚಿನ ಆರೋಪಗಳು ಆಲಿಸ್ ಹುವಾಂಗ್ (ಹುವಾಂಗ್ ಲೇ ಎಂದೂ ಕರೆಯಲ್ಪಡುವ) ಎಂಬ ಮಹಿಳೆಯ ಸುತ್ತಲಿದೆ. ಈಕೆ ಚೀನಾ ಪ್ರಜೆಯಾಗಿದ್ದು, ಮೆಗಾಸ್ಪೀಡ್ ಸಂಸ್ಥೆಯ ಮಾಜಿ ಅಧಿಕಾರಿಯಾಗಿದ್ದರು. ಈಕೆ ಬೀಜಿಂಗ್ಗೆ ಮಾಹಿತಿ ರವಾನಿಸುತ್ತಿದ್ದರು ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಈಕೆ ಎನ್ವಿಡಿಯಾ ಸಿಇಒ ಜೊತೆಗೆ ನಿಕಟ ಬಾಂಧವ್ಯ ಬೆಳೆಸಿಕೊಂಡಿದ್ದರು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಹುವಾಂಗ್ ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ಚಿಪ್ ರಫ್ತು ವಿಚಾರದಲ್ಲಿ ಅವರ ನಿಲುವಿನ ಮೇಲೆ ಪ್ರಭಾವ ಬೀರಲು ಚೀನಾದ ರಾಜ್ಯ ಭದ್ರತಾ ಸಚಿವಾಲಯ ಈಕೆಯನ್ನು ನೇಮಿಸಿಕೊಂಡಿದೆ ಎಂದು ವರದಿಗಳು ಸೂಚಿಸಿವೆ. ಎನ್ವಿಡಿಯಾ ನೌಕರರಿಗೆ ಕಳುಹಿಸಿದ ಸಂದೇಶದಲ್ಲಿ ಹುವಾಂಗ್ ಕ್ಷಮೆಯಾಚಿಸಿದ್ದು, ತಮ್ಮ ನಡವಳಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆದರೆ ತಮ್ಮ ಹೇಳಿಕೆಯಲ್ಲಿ ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಅವರು ಉಲ್ಲೇಖಿಸಿಲ್ಲ.
ಚೀನಾ ಈ ಗೂಢಚಾರಿಕೆ ಆರೋಪಗಳನ್ನು ತಳ್ಳಿಹಾಕಿದೆ. ಇನ್ನೊಂದೆಡೆ, ಆಲಿಸ್ ಹುವಾಂಗ್ ಅವರ ಶಂಕಿತ ಗೂಢಚಾರಿಕೆ ಸಂಪರ್ಕದ ಬಗ್ಗೆ ತಾವು ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಸಿಂಗಾಪುರ ಸ್ಪಷ್ಟಪಡಿಸಿದೆ. ಮೆಗಾಸ್ಪೀಡ್ ವಿರುದ್ಧ ನಡೆಯುತ್ತಿರುವ ತನಿಖೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಸಿಂಗಾಪುರ ಸ್ಪಷ್ಟಪಡಿಸಿದೆ..
ದೇಶದ ಕಾನೂನು ಉಲ್ಲಂಘನೆಯ ಶಂಕೆಯ ಮೇಲೆ ಸಿಂಗಾಪುರ ಅಧಿಕಾರಿಗಳು ಮೆಗಾಸ್ಪೀಡ್ ವಿರುದ್ಧ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಆದರೆ ಸಿಂಗಾಪುರ ಪೊಲೀಸರು ತನಿಖೆ ನಡೆಸುತ್ತಿರುವ ನಿರ್ದಿಷ್ಟ ಅಪರಾಧಗಳ ಬಗ್ಗೆ ವಿವರ ನೀಡಿಲ್ಲ. ಅಮೆರಿಕದ ರಫ್ತು ನಿರ್ಬಂಧಗಳನ್ನು ಸಿಂಗಾಪುರ ಕಡ್ಡಾಯವಾಗಿ ಜಾರಿಗೊಳಿಸುವುದಿಲ್ಲ, ಆದರೆ ವಂಚನೆಯ ಮೂಲಕ ವಿದೇಶಿ ನಿಯಂತ್ರಣಗಳನ್ನು ತಪ್ಪಿಸಲು ಸಿಂಗಾಪುರವನ್ನು ಬಳಸಿಕೊಳ್ಳುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಕ್ಟೋಬರ್ 31ರಂದು ಸ್ಪಷ್ಟನೆ ನೀಡಿದ್ದ ಸಿಂಗಾಪುರ, ಮೆಗಾಸ್ಪೀಡ್ ತನಿಖೆಗೂ ಮತ್ತು ಚೀನಾ ಗುಪ್ತಚರ ಸಂಸ್ಥೆಯೊಂದಿಗೆ ಮಾಜಿ ಅಧಿಕಾರಿ ಆಲಿಸ್ ಹುವಾಂಗ್ಗೆ ಇದೆ ಎನ್ನಲಾದ ಸಂಪರ್ಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಅಮೆರಿಕ-ಚೀನಾ AI ಸ್ಪರ್ಧೆಯಲ್ಲಿ ಇದು ಏಕೆ ಮುಖ್ಯ?
ಅಮೆರಿಕ ತಂತ್ರಜ್ಞಾನವನ್ನು ಚೀನಾ ಪಡೆದುಕೊಳ್ಳುವುದನ್ನು, ವಿಶೇಷವಾಗಿ ಮಿಲಿಟರಿ ಮತ್ತು ಗುಪ್ತಚರ ಕ್ಷೇತ್ರಕ್ಕೆ ಬಳಕೆಯಾಗಬಹುದಾದ ಎನ್ವಿಡಿಯಾದ ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ಗಳನ್ನು ತಡೆಯಲು ವಾಷಿಂಗ್ಟನ್ ಪ್ರಯತ್ನಿಸುತ್ತಿರುವ ನಡುವೆಯೇ ಈ ವಿವಾದ ಎದುರಾಗಿದೆ. ಟ್ರಂಪ್ ಜೊತೆ ಹುವಾಂಗ್ ಹೊಂದಿರುವ ನಿಕಟ ಬಾಂಧವ್ಯ ಮತ್ತು ಚಿಪ್ ರಫ್ತು ನಿರ್ಬಂಧ ಸಡಿಲಿಕೆಗೆ ಅವರು ನಡೆಸಿದ ಲಾಭಿ ಈಗ ತನಿಖೆಯ ವ್ಯಾಪ್ತಿಯಲ್ಲಿದೆ.
ಅಮೆರಿಕದ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಚೀನಾ ಪಡೆದುಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಜನಪ್ರತಿನಿಧಿ ಸಭೆಯ ಮೂವರು ರಿಪಬ್ಲಿಕನ್ ಸಮಿತಿ ಅಧ್ಯಕ್ಷರು ನವೆಂಬರ್ 18 ರಂದು ಹುವಾಂಗ್ ಅವರಿಂದ ವಿವರಣೆ ಕೋರಿದ್ದಾರೆ.






