ಐಪಿಎಲ್ ಎಂಬ ಅತಿರೇಕದ ಹಿಂದೆ...

ಭಾಗ-1
ದುರಂತ ನಡೆದುಹೋಗಿದೆ. ಈಗ ಅಮಾನತು, ತನಿಖೆ ಏನೇ ನಡೆದರೂ, ಬಲಿಯಾದ ಜೀವಗಳು ಮರಳಿ ಬರುವುದಿಲ್ಲ. ಅವರ ಕುಟುಂಬಸ್ಥರ ಪಾಲಿಗೆ ಇದೊಂದು ಕೊನೆಯಿರದ ಶೋಕ ಮತ್ತು ಸೂತಕ. ಇಂಥ ದುರಂತಕ್ಕೆ ಕ್ರಿಕೆಟ್ ಆಡಳಿತ ನಡೆಸುತ್ತಿರುವವರು ಕೂಡ ಕಾರಣ ಎಂಬುದನ್ನು ನಿರಾಕರಿಸಲು ಹೇಗೆ ಸಾಧ್ಯ? ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಾಯಾಲೋಕದಂತಿರುವ ಐಪಿಎಲ್ ಯಾರನ್ನು ಸಾಕುತ್ತಿದೆ? ಅದರ ಸುತ್ತಲಿನ ಹಗರಣಗಳೆಂಥವು? ಕ್ರಿಕೆಟ್ ಹೆಸರಲ್ಲಿ ನಿಜವಾಗಿಯೂ ನಡೆಯುತ್ತಿರುವುದೇನು?
2008ರಲ್ಲಿ ಶುರುವಾದ ಐಪಿಎಲ್, ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್, ಟಿ 20 ಕ್ರಿಕೆಟ್ ಪಂದ್ಯಾವಳಿಯಿಂದಾಗಿ ಜಾಗತಿಕ ಕ್ರೀಡಾರಂಗದಲ್ಲಿ ದೈತ್ಯ ಸ್ವರೂಪ ಪಡೆದುಬಿಟ್ಟಿದೆ. ಐಪಿಎಲ್ ಎನ್ನುವುದು ಮನರಂಜನೆ, ಸೆಲೆಬ್ರಿಟಿಗಳು, ಚಿಯರ್‌ಲೀಡರ್‌ಗಳು, ಪಾರ್ಟಿಗಳು, ದುಡ್ಡು, ವ್ಯಾಪಾರ ಮತ್ತು ಕ್ರಿಕೆಟ್ ಅನ್ನು ಒಳಗೊಂಡ ಪ್ಯಾಕೇಜ್. ಬೇರೆ ರೀತಿಯಲ್ಲಿ ಹೇಳುವುದಾದರೆ, ಕ್ರಿಕೆಟ್ ಜಾಹೀರಾತುದಾರರು, ಮನರಂಜಕರು, ಚಲನಚಿತ್ರ ತಾರೆಯರು, ವ್ಯವಹಾರ, ಉದ್ಯಮಿಗಳು, ರಾಜಕಾರಣಿಗಳು ಎಲ್ಲವನ್ನೂ ಒಟ್ಟುಗೂಡಿಸುವ ವೇದಿಕೆಯಾಗಿದೆ. ಅದಕ್ಕೆ ತಕ್ಕಂತೆ ಹಗರಣಗಳಿಗೂ ಈ ಐಪಿಎಲ್ ಲೋಕದಲ್ಲಿ ಕೊರತೆಯಿಲ್ಲ.
ಲೀಗ್‌ನ ಬ್ರ್ಯಾಂಡ್ ಮೌಲ್ಯ ಗಗನಕ್ಕೇರಿದೆ. ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ 12 ಬಿಲಿಯನ್ ಡಾಲರ್ ದಾಟಿದೆ. ಅಂದರೆ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯವಿದೆ. ಪ್ರಾರಂಭವಾದಾಗಿನಿಂದಲೂ ಅಚ್ಚರಿದಾಯಕವಾಗಿ ಶೇ. 433ರಷ್ಟು ಏರಿಕೆಯಾಗಿದೆ. ಪ್ರತೀ ಪಂದ್ಯದ ಆಧಾರದ ಮೇಲೆ ವಿಶ್ವಾದ್ಯಂತ ಅತ್ಯಂತ ಲಾಭದಾಯಕ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿ ಬೆಳೆದಿದೆ. ಕ್ರಿಕೆಟ್ ಲೀಗ್‌ಗಳಲ್ಲಿ ಇದೇ ಇಡೀ ಜಗತ್ತಿನಲ್ಲಿ ನಂಬರ್ ಒನ್. ಈ ಹಣಕಾಸಿನ ಆಟ, ಇಲ್ಲಿನ ವಹಿವಾಟುಗಳೆಲ್ಲವೂ ಒಂದೆಡೆಯಾದರೆ, ಇನ್ನೊಂದೆಡೆ ಆಫ್-ಫೀಲ್ಡ್ ಡ್ರಾಮಾದಿಂದ ಲಕ್ಷಾಂತರ ಜನರನ್ನು ಆಕರ್ಷಿಸಿದೆ. ಮಾತ್ರವಲ್ಲದೆ, ಭಾರತದಲ್ಲಿ ಕ್ರೀಡಾ ಮಾರ್ಕೆಟಿಂಗ್‌ನ ಇಡೀ ಸನ್ನಿವೇಶವನ್ನೇ ಬದಲಿಸಿಬಿಟ್ಟಿದೆ.
ಆದರೂ, ಸೆಲೆಬ್ರಿಟಿ ಮಾಲಕರು, ಅಂತರ್‌ರಾಷ್ಟ್ರೀಯ ಸ್ಟಾರ್‌ಗಳು ಮತ್ತು ತುಂಬಿದ ಕ್ರೀಡಾಂಗಣಗಳ ಬೆರಗಿನ ಮರೆಯಲ್ಲಿ, ಬೇರೆಯದೇ ಕಥೆಯೂ ಇದೆ. ವಿವಾದಗಳ ದೊಡ್ಡ ಸುಳಿಯೇ ಇದೆ. ಇಡೀ ಐಪಿಎಲ್ ಯಾನವನ್ನು ಹತ್ತು ಹಲವು ಹಗರಣಗಳ ನೆರಳೇ ಆವರಿಸಿದೆ. ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಥರದವು ಒಂದೆಡೆಯಾದರೆ, ಬೆದರಿಕೆ, ರಾಜಕೀಯ ಪ್ರಭಾವ ಮತ್ತು ಆಡಳಿತಾತ್ಮಕ ಬಿಕ್ಕಟ್ಟುಗಳು ಇನ್ನೊಂದೆಡೆಗಿವೆ. ಸಾಮಾಜಿಕ ವಿವಾದಗಳಿಂದ ಹಿಡಿದು, ಫ್ರಾಂಚೈಸಿಗಳ ನಾಟಕೀಯ ಆರ್ಥಿಕ ಕುಸಿತ, ಹಣಕಾಸಿನ ಅಕ್ರಮಗಳು ಮತ್ತು ತೆರಿಗೆ ಸಂಬಂಧಿ ತಗಾದೆಗಳವರೆಗೆ ಹರಡಿಕೊಂಡಿರುವ ಸಂಕೀರ್ಣ ಜಾಲ ಇದಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಆರಂಭದಿಂದಲೂ ಕಾಡುತ್ತಿರುವ ಪ್ರಮುಖ ಹಗರಣಗಳನ್ನು ಒಮ್ಮೆ ಗಮನಿಸೋಣ.
1. 2012ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ
ಆಟಗಾರರ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಐಪಿಎಲ್‌ನ ಸಮಗ್ರತೆಗೆ ಮೊದಲ ಪ್ರಮುಖ ಹೊಡೆತ ಬಿದ್ದದ್ದು 2012ರಲ್ಲಿ. ಇಂಡಿಯಾ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಐವರು ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದದ್ದು ಬಯಲಾಗಿತ್ತು. ಆರೋಪಿಗಳಾದ ಆಟಗಾರರೆಂದರೆ, ಟಿ.ಪಿ. ಸುಧೀಂದ್ರ (ಡೆಕ್ಕನ್ ಚಾರ್ಜರ್ಸ್), ಮೋಹ್ನಿಶ್ ಮಿಶ್ರಾ (ಪುಣೆ ವಾರಿಯರ್ಸ್), ಅಮಿತ್ ಯಾದವ್, ಶಲಭ್ ಶ್ರೀವಾಸ್ತವ (ಇಬ್ಬರೂ ಕಿಂಗ್ಸ್ ಇಲೆವೆನ್ ಪಂಜಾಬ್) ಮತ್ತು ಆ ಸಮಯದಲ್ಲಿ ಐಪಿಎಲ್ ತಂಡದಲ್ಲಿರದ ದಿಲ್ಲಿ ಕ್ರಿಕೆಟಿಗ ಅಭಿನವ್ ಬಾಲಿ.
ಈ ಆಟಗಾರರು ಹಣಕ್ಕಾಗಿ ಪೂರ್ವನಿರ್ಧರಿತ ನೋ-ಬಾಲ್‌ಗಳನ್ನು ಎಸೆಯಬೇಕು ಎಂಬುದರ ಚರ್ಚೆಯನ್ನು ಆ ಸ್ಟಿಂಗ್ ಆಪರೇಷನ್‌ನ ಟೇಪ್‌ಗಳು ತೋರಿಸಿದ್ದವು. ಬಿಸಿಸಿಐ ತಕ್ಷಣವೇ ಕ್ರಮಕ್ಕೆ ಮುಂದಾಗಿತ್ತು. ಅಂದಿನ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಎಲ್ಲಾ ಐದು ಆಟಗಾರರನ್ನು ತಕ್ಷಣ ಅಮಾನತುಗೊಳಿಸುವುದಾಗಿ ಘೋಷಿಸಿದ್ದರು. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಭ್ರಷ್ಟಾಚಾರ ನಿಗ್ರಹ ಘಟಕದ ಮಾಜಿ ಮುಖ್ಯಸ್ಥ ಮತ್ತು ಬಿಸಿಸಿಐನ ಸ್ವಂತ ಭ್ರಷ್ಟಾಚಾರ ನಿಗ್ರಹ ವಿಭಾಗದ ಮುಖ್ಯಸ್ಥ ರವಿ ಸವಾನಿ ನೇತೃತ್ವದಲ್ಲಿ ಮಂಡಳಿ ಪ್ರಾಥಮಿಕ ತನಿಖೆ ಪ್ರಾರಂಭಿಸಿತ್ತು.
ಟಿ.ಪಿ. ಸುಧೀಂದ್ರ ಅವರ ಮೇಲೆ ಕ್ರಿಕೆಟ್‌ನಿಂದ ಜೀವಮಾನ ನಿಷೇಧ ಹೇರಲಾಯಿತು. ಶಲಭ್ ಶ್ರೀವಾಸ್ತವ ಅವರನ್ನು ಐದು ವರ್ಷಗಳ ಕಾಲ ನಿಷೇಧಿಸಲಾಯಿತು. ಮೋಹ್ನಿಶ್ ಮಿಶ್ರಾ, ಅಮಿತ್ ಯಾದವ್ ಮತ್ತು ಅಭಿನವ್ ಬಾಲಿ ತಲಾ ಒಂದು ವರ್ಷದ ನಿಷೇಧಕ್ಕೆ ಒಳಗಾದರು.
2. 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣ
ಈ ಹಗರಣವಂತೂ ಐಪಿಎಲ್‌ನ ವಿಶ್ವಾಸಾರ್ಹತೆಯನ್ನೇ ಹಾಳು ಮಾಡಿತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಅಧ್ಯಾಯವಾಗಿ ದಾಖಲಾಯಿತು. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ದಿಲ್ಲಿ ಪೊಲೀಸರು ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರಾದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ಅವರನ್ನು ಬಂಧಿಸಿದ್ದರು. ಹಣಕ್ಕಾಗಿ ನಿರ್ದಿಷ್ಟ ಓವರ್‌ಗಳನ್ನು ಕುಶಲತೆಯಿಂದ ನಿರ್ವಹಿಸಲು ಬುಕ್ಕಿಗಳೊಂದಿಗೆ ಶಾಮೀಲಾದ ಆರೋಪ ಅವರ ಮೇಲಿತ್ತು. ನಿಗದಿತ ಓವರ್ ಅನ್ನು ಸೂಚಿಸಲು ಪ್ಯಾಂಟ್‌ಗೆ ಟವಲ್ ಅನ್ನು ಸಿಕ್ಕಿಸಿಕೊಳ್ಳುವಂತಹ ಆನ್-ಫೀಲ್ಡ್ ಸಿಗ್ನಲ್‌ಗಳನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಮೂವರು ಆಟಗಾರರನ್ನು ತಕ್ಷಣವೇ ಬಿಸಿಸಿಐ ಅಮಾನತುಗೊಳಿಸಿತು. ನಂತರ ಜೀವಾವಧಿ ನಿಷೇಧವನ್ನು ವಿಧಿಸಿತು. ಕಡೆಗೆ, ಶ್ರೀಶಾಂತ್ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಮತ್ತು ನಂತರ ಬಿಸಿಸಿಐ ಏಳು ವರ್ಷಗಳಿಗೆ ಇಳಿಸಿದವು. ಅದು 2020ರಲ್ಲಿ ಕೊನೆಗೊಂಡಿತು. ಆದರೆ, ಹಗರಣದ ವ್ಯಾಪ್ತಿ ಈ ಆಟಗಾರರನ್ನು ಮೀರಿ ವಿಸ್ತರಿಸಿತ್ತು.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮುಖ್ಯಸ್ಥ ಮತ್ತು ಅದಕ್ಕಿಂತ ಹೆಚ್ಚಾಗಿ ಆಗಿನ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಅಕ್ರಮ ಬೆಟ್ಟಿಂಗ್, ಪಿತೂರಿ ಮತ್ತು ವಂಚನೆ ಆರೋಪದ ಮೇಲೆ ಮುಂಬೈ ಕ್ರೈಂ ಬ್ರ್ಯಾಂಚ್ ಬಂಧಿಸಿತು. ರಾಜಸ್ಥಾನ ರಾಯಲ್ಸ್‌ನ ಸಹ ಮಾಲಕ ರಾಜ್ ಕುಂದ್ರಾ ಅವರ ವಿಚಾರಣೆಯೊಂದಿಗೆ ಹಗರಣ ಮತ್ತಷ್ಟು ಆಘಾತಕಾರಿ ತಿರುವುಗಳನ್ನು ಪಡೆಯಿತು. ಅವರು ಬುಕ್ಕಿಯ ಮೂಲಕ ತಮ್ಮದೇ ಐಪಿಎಲ್ ತಂಡದ ಮೇಲೆ ಬೆಟ್ಟಿಂಗ್ ಇಟ್ಟಿದ್ದಾಗಿ ಒಪ್ಪಿಕೊಂಡರು. ಬಿಸಿಸಿಐ ಅವರನ್ನು ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಂದ ಅಮಾನತುಗೊಳಿಸಿತು. ತನಿಖೆ ಬುಕ್ಕಿಗಳು ಮತ್ತು ಬಾಲಿವುಡ್ ನಟ ವಿಂದು ದಾರಾ ಸಿಂಗ್ ಅವರನ್ನೊಳಗೊಂಡ ವ್ಯಾಪಕ ಜಾಲವನ್ನು ಕೂಡ ಬಯಲು ಮಾಡಿತು. ಅವರನ್ನು ಸಹ ಬಂಧಿಸಲಾಯಿತು. ಆರೋಪಿಗಳು ದಾವೂದ್ ಇಬ್ರಾಹೀಂ ಮತ್ತು ಛೋಟಾ ಶಕೀಲ್ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ಈ ಹಗರಣ ಎನ್. ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತು. ಭಾರತದ ಸುಪ್ರೀಂ ಸ್ವತಂತ್ರ ತನಿಖೆ ನಡೆಸಲು ಮಾಜಿ ಮುಖ್ಯ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತು. ಮುದ್ಗಲ್ ಸಮಿತಿ ವರದಿಯ ನಂತರ, ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಮತ್ತೊಂದು ಸಮಿತಿಯನ್ನು ನೇಮಿಸಿತು. ಬಿಸಿಸಿಐಗೆ ಶಿಕ್ಷೆ ನಿರ್ಧರಿಸಲು ಮತ್ತು ವ್ಯವಸ್ಥಿತ ಸುಧಾರಣೆಗಳ ಬಗ್ಗೆ ಶಿಫಾರಸು ಮಾಡಲು ಈ ಸಮಿತಿ ನೇಮಿಸಲಾಗಿತ್ತು. 2015 ರಲ್ಲಿ ಮಹತ್ವದ ನಿರ್ಧಾರ ಹೊರಬಿತ್ತು. ಲೋಧಾ ಸಮಿತಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳನ್ನು ಐಪಿಎಲ್‌ನಿಂದ ಎರಡು ವರ್ಷಗಳ ಕಾಲ (2016 ಮತ್ತು 2017) ಅಮಾನತುಗೊಳಿಸಿತು. ಈ ಘಟನೆ ಕಠಿಣ ಶಿಕ್ಷೆಗಳಿಗೆ ಕಾರಣವಾಯಿತು.
3. ಕಪ್ಪು ಹಣದ ಕರಾಳ ಆಟದ ಆರೋಪಗಳು
2012ರ ಸ್ಪಾಟ್ ಫಿಕ್ಸಿಂಗ್ ಭಾಗವಾಗಿ, ಪುಣೆ ವಾರಿಯರ್ಸ್ ಇಂಡಿಯಾ ಆಟಗಾರ ಮೋಹ್ನಿಶ್ ಮಿಶ್ರಾ, ಐಪಿಎಲ್ ಫ್ರಾಂಚೈಸಿಗಳು ಕೆಲ ಆಟಗಾರರಿಗೆ ಅಧಿಕೃತ ಒಪ್ಪಂದದ ಮೊತ್ತಕ್ಕಿಂತ ಹೆಚ್ಚಿನ ನಗದನ್ನು ಕಪ್ಪು ಹಣದ ಮೂಲಕ ಕೊಟ್ಟಿದ್ದರ ಬಗ್ಗೆ ಒಪ್ಪಿಕೊಂಡದ್ದು ಸ್ಟಿಂಗ್ ಆಪರೇಷನ್‌ನಲ್ಲಿ ದಾಖಲಾಗಿದೆ. ಮಿಶ್ರಾ ನಿರ್ದಿಷ್ಟವಾಗಿ ತಮ್ಮ ಫ್ರಾಂಚೈಸ್ ಸಹಾರಾದಿಂದ ಸುಮಾರು ರೂ. 1.2 ಕೋಟಿಯಿಂದ 1.4 ಕೋಟಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಅದು ಆ ಸಮಯದಲ್ಲಿ ನಿಗದಿತ ಮಿತಿಗಿಂತ ತೀರಾ ದೊಡ್ಡ ಮೊತ್ತವಾಗಿತ್ತು. ಆದರೆ, ಅದೆಲ್ಲವೂ ಬಯಲಾಗುತ್ತಲೇ, ಮಿಶ್ರಾ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದರು. ಸಹಾರಾದಿಂದ ಯಾವುದೇ ಹಣ ಸ್ವೀಕರಿಸಿರಲಿಲ್ಲ ಎಂದರು.
ಐಪಿಎಲ್‌ನಲ್ಲಿ ಕಪ್ಪು ಹಣ ಪಾವತಿಗಳ ಸತ್ಯಾಸತ್ಯತೆ ದೃಢಪಟ್ಟಿಲ್ಲವಾದರೂ, ಅದು ಸಂಭಾವ್ಯ ವ್ಯವಸ್ಥಿತ ಆರ್ಥಿಕ ಅಪರಾಧ, ತೆರಿಗೆ ವಂಚನೆ ಮತ್ತು ಐಪಿಎಲ್‌ನಲ್ಲಿ ಆಟಗಾರರ ಸಂಭಾವನೆಯ ಪಾರದರ್ಶಕತೆ ಕೊರತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿತು.
4. ಮ್ಯಾಚ್ ಫಿಕ್ಸಿಂಗ್ ಆರೋಪಗಳು
2013ರ ಹಗರಣದ ನಂತರ ಕಠಿಣ ಕ್ರಮಗಳು ಮತ್ತು ಉನ್ನತ ಮಟ್ಟದ ನಿಷೇಧಗಳ ಹೊರತಾಗಿಯೂ, ಮ್ಯಾಚ್ ಫಿಕ್ಸಿಂಗ್‌ನ ಕಾಟ ತಪ್ಪಿಲ್ಲ. ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೊಸ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಬಂದವು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಎರಡು ರನ್‌ಗಳ ಸೋಲಿನ ನಂತರ ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ (ಆರ್‌ಸಿಎ) ತಾತ್ಕಾಲಿಕ ಸಮಿತಿಯ ಸಂಚಾಲಕ ಜಯದೀಪ್ ಬಿಹಾನಿ, 2008ರ ಚಾಂಪಿಯನ್‌ಗಳು ಅಕ್ರಮವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಐಪಿಎಲ್ ಫ್ರಾಂಚೈಸಿ ಮತ್ತು ಬಿಸಿಸಿಐ ಎರಡೂ ಈ ಆರೋಪಗಳನ್ನು ನಿರಾಕರಿಸಿದವು. ಅದು ಸುಳ್ಳು, ದಾರಿತಪ್ಪಿಸುವ ಮತ್ತು ಆಧಾರರಹಿತ ಆರೋಪ ಎಂದವು.
ಇದೆಲ್ಲವೂ, ಐಪಿಎಲ್ ಅಂತಹ ಆರೋಪಗಳಿಗೆ ನಿರಂತರವಾಗಿ ಗುರಿಯಾಗುವುದನ್ನು ಒತ್ತಿಹೇಳುತ್ತವೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳೊಳಗಿನ ಆಂತರಿಕ ರಾಜಕೀಯ ಹೇಗೆಲ್ಲ ವ್ಯಾಪಿಸಬಹುದೆಂಬುದನ್ನೂ ಇದು ಎತ್ತಿ ತೋರಿಸುತ್ತದೆ. ಇದು ಲೀಗ್‌ನ ಪ್ರತಿಷ್ಠೆಯನ್ನು ಹಾಳು ಮಾಡುತ್ತದೆ. 2013ರ ನಂತರದ ವ್ಯಾಪಕ ಸುಧಾರಣೆಗಳ ನಂತರವೂ, ಇಂಥ ಆರೋಪಗಳು ತಪ್ಪಿಲ್ಲ ಮತ್ತು ಸದಾ ಜಾಗರೂಕತೆಯ ಅಗತ್ಯವಿದೆ ಎಂದು ಈಚಿನ ಈ ಬೆಳವಣಿಗೆಗಳು ಒತ್ತಿ ಹೇಳುತ್ತಿವೆ.
ಹಗರಣಗಳ ಕಳಂಕ ಒಂದೆಡೆಯಾದರೆ, ಐಪಿಎಲ್ ಸುತ್ತಲಿನ ರಾಜಕೀಯ ಮತ್ತೊಂದೆಡೆಗಿದೆ. ಸತತ ರಾಜಕೀಯದ ನೆರಳು, ಆಡಳಿತಾತ್ಮಕ ಬಿಕ್ಕಟ್ಟುಗಳು ಮತ್ತು ಅಧಿಕಾರದ ಆಟಗಳು ಐಪಿಎಲ್ ಒಳಗೆ ತುಂಬಿ ತುಳುಕುತ್ತಿವೆ. ಐಪಿಎಲ್‌ನ ಅಪಾರ ಆರ್ಥಿಕ ಪ್ರಭಾವ ಮತ್ತು ಜನಪ್ರಿಯ ಆಕರ್ಷಣೆ ಎಂಥದೆಂದರೆ, ಅಲ್ಲಿ ಅಧಿಕಾರದಲ್ಲಿರುವುದು ದೊಡ್ಡ ಸಂಗತಿಯಾಗಿದೆ. ಇದೆಲ್ಲವೂ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಕಾಲದಿಂದಲೇ ಶುರುವಾಯಿತೆಂಬುದು ಗಮನಾರ್ಹ.
ಲಲಿತ್ ಮೋದಿ ವಿರುದ್ಧ, ಐಪಿಎಲ್‌ನ ಅಧ್ಯಕ್ಷರಾಗಿದ್ದಾಗ ಕೋಟ್ಯಂತರ ರೂಪಾಯಿಗಳ ದುರುಪಯೋಗದಲ್ಲಿ ಭಾಗಿಯಾಗಿರುವ ಆರೋಪವಿದೆ. ಬಿಸಿಸಿಐ ಉಪಾಧ್ಯಕ್ಷ ಹುದ್ದೆಯಲ್ಲಿದ್ದಾಗ, ಬಿಡ್ಡಿಂಗ್ ಅಕ್ರಮಗಳು ಮತ್ತು ಹಣ ವರ್ಗಾವಣೆ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿತ್ತು. ಫ್ರಾಂಚೈಸಿಗಳ ಬಿಡ್ಡಿಂಗ್‌ನಲ್ಲಿ ದುರುಪಯೋಗ, ಅಶಿಸ್ತು ಮತ್ತು ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಲಲಿತ್ ಮೋದಿಯನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಗಿತ್ತು. ಲಲಿತ್ ಮೋದಿ ಅಧಿಕಾರಾವಧಿಯಲ್ಲಿ ಸರ್ವಾಧಿಕಾರಿ ಶೈಲಿಯಿತ್ತು ಎನ್ನಲಾಗುತ್ತದೆ. ಆರ್ಥಿಕ ಅಕ್ರಮಗಳಂಥ ಹಗರಣಗಳ ಸುಳಿಗೆ ಐಪಿಎಲ್ ಸಿಲುಕಿತು. 2010ರಲ್ಲಿ ಹೊಸ ಫ್ರಾಂಚೈಸಿಗಳ ಹರಾಜಿನ ಸಮಯದಲ್ಲಿ ಬಿಡ್‌ಗಳಲ್ಲಿ ಅಕ್ರಮಗಳನ್ನು ಎಸಗಿದ್ದಾರೆ ಎಂಬುದು ಬಿಸಿಸಿಐ ಲಲಿತ್ ಮೋದಿ ಮೇಲೆ ಹೊರಿಸಿರುವ ಆರೋಪಗಳಲ್ಲಿ ಒಂದಾಗಿದೆ. ನಿರ್ದಿಷ್ಟ ಬಿಡ್‌ದಾರರಿಗೆ ಅನುಕೂಲವಾಗುವಂತೆ ಟೆಂಡರ್ ದಾಖಲೆಗಳಲ್ಲಿ ಭಾರೀ ಷರತ್ತನ್ನು ರಹಸ್ಯವಾಗಿ ಸೇರಿಸಿದ ಆರೋಪವಿತ್ತು. ದೂರದರ್ಶನ ಹಕ್ಕುಗಳನ್ನು ನೀಡುವಲ್ಲಿ ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್‌ಗೆ ಒಲವು ತೋರಿದ್ದಾರೆ, ಇಂಟರ್ನೆಟ್ ಹಕ್ಕುಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳ ಸಂಪರ್ಕ ಬಹಿರಂಗಪಡಿಸಿಲ್ಲ ಮೊದಲಾದ ಅರೋಪಗಳಿವೆ. ಅವರ ಮಲಮಗಳ ಪತಿ ಡಿಜಿಟಲ್ ಹಕ್ಕುಗಳನ್ನು ಗೆದ್ದ ಗ್ಲೋಬಲ್ ಕ್ರಿಕೆಟ್ ವೆಂಚರ್‌ನಲ್ಲಿ ಪಾಲು ಹೊಂದಿದ್ದಾರೆ ಎನ್ನಲಾಗಿತ್ತು. ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಒಪ್ಪಂದಗಳನ್ನು ನೀಡಿದ್ದ ಆರೋಪ ಅವರ ಮೇಲಿತ್ತು. 2010 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯ ಬಿಡ್‌ನ ಸುತ್ತಲಿನ ವಿವಾದ ಪ್ರಮುಖವಾಗಿತ್ತು. ಆಗಿನ ಕೇಂದ್ರ ಸಚಿವ ಶಶಿ ತರೂರ್ ಅವರ ನಿಕಟ ಸಹವರ್ತಿ ಮತ್ತು ನಂತರ ಅವರ ಪತ್ನಿಯಾದ ಸುನಂದಾ ಪುಷ್ಕರ್ ಹೆಸರು ಅಲ್ಲಿ ಬಂದಿತ್ತು. ಕಡೆಗೆ ತರೂರ್ ರಾಜೀನಾಮೆ ಕೊಡಬೇಕಾಗಿ ಬಂತು. ಲಲಿತ್ ಮೋದಿ ಬೇರೆ ಗುಂಪು ಗೆಲ್ಲಬೇಕೆಂದು ಬಯಸಿದ್ದರಿಂದ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಕೊಚ್ಚಿ ಫ್ರಾಂಚೈಸಿ ಆರೋಪಿಸಿತ್ತು.
ಆ ವರ್ಷದ ಐಪಿಎಲ್ ಫೈನಲ್ ಮುಗಿದ ತಕ್ಷಣ ಎಪ್ರಿಲ್ 24, 2010ರಂದು ಮೋದಿ ಅವರನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಯಿತು. ಬಿಸಿಸಿಐ ಶಿಸ್ತು ಸಮಿತಿಯ ಆಂತರಿಕ ತನಿಖೆಯ ನಂತರ, 2013ರಲ್ಲಿ ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಯಾವುದೇ ಹುದ್ದೆಯನ್ನು ಹೊಂದದಂತೆ ಅವರ ಮೇಲೆ ಜೀವಮಾನದ ನಿಷೇಧ ಹೇರಲಾಯಿತು. ಲಲಿತ್ ಮೋದಿ ತಮ್ಮ ವಿರುದ್ಧದ ಈ.ಡಿ. ತನಿಖೆಯ ನಡುವೆಯೆ ಲಂಡನ್‌ಗೆ ಪಲಾಯನ ಮಾಡಿದ್ದರು. ಮಾರ್ಚ್ 2025ರ ಹೊತ್ತಿಗೆ, ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್ ರದ್ದತಿಗೆ ಅರ್ಜಿ ಸಲ್ಲಿಸಿದ್ದಾಗಿಯೂ, ವನವಾಟು ಪೌರತ್ವ ಪಡೆದುಕೊಂಡಿದ್ದಾರೆ ಎಂದೂ ವರದಿಗಳಿದ್ದವು. ಕಡೆಗೆ ವನುವಾಟು ಪಾಸ್‌ಪೋರ್ಟ್ ರದ್ದಾದ ಬಗ್ಗೆಯೂ ಹೇಳಲಾಯಿತು.