ಹೊಸ ಜೇಮ್ಸ್ ಬಾಂಡ್ ಆಗಿರುವುದು ಜೀವಮಾನದ ಗೌರವ: ರಾಬರ್ಟ್ ಪ್ಯಾಟಿನ್ಸನ್

Photo Credit : X
ಪಾತ್ರ ದೊರೆತಿರುವುದು ನನ್ನ ಕನಸು ನನಸಾದ ಕ್ಷಣ ಎಂದು ಹೇಳಿದರೂ ಕಡಿಮೆಯಾಗುತ್ತದೆ ಎಂದು ‘ಟ್ವಿಲೈಟ್’ ಹೀರೋ ತಮ್ಮ ‘ಬಾಂಡ್’ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಟ್ವಿಲೈಟ್ ಹೀರೋ ಎಂದೇ ಖ್ಯಾತಿ ಪಡೆದಿರುವ ರಾಬರ್ಟ್ ಪ್ಯಾಟಿನ್ಸನ್ ಅವರ ಜೀವನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬ್ಯಾಟ್ಮ್ಯಾನ್ ಪಾತ್ರದ ನಂತರ ಅವರೀಗ ಜೇಮ್ಸ್ ಬಾಂಡ್ ಆಗುತ್ತಿದ್ದಾರೆ!
ಹೌದು, ನಟ ರಾಬರ್ಟ್ ಪ್ಯಾಟಿನ್ಸನ್ ಅವರು ಸಿನಿಮಾ ಜಗತ್ತಿನ ಅತ್ಯಂತ ಅಪೇಕ್ಷಣೀಯ ಪಾತ್ರಗಳಲ್ಲಿ ಒಂದನ್ನು ಗಿಟ್ಟಿಸಿಕೊಂಡಿದ್ದಾರೆ. ಜೇಮ್ಸ್ ಬಾಂಡ್ ಪಾತ್ರಕ್ಕೆ ತಮ್ಮ ಆಯ್ಕೆಯನ್ನು ಅವರು ‘ಜೀವಮಾನದ ಗೌರವ’ ಎಂದು ಬಣ್ಣಿಸಿದ್ದಾರೆ. 40 ವರ್ಷದ ಪ್ಯಾಟಿನ್ಸನ್ ಇದೀಗ ಅಧಿಕೃತವಾಗಿ ಡೇನಿಯಲ್ ಕ್ರೇಗ್ ಅವರ ನಂತರದ ‘ಏಜೆಂಟ್ 007’ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಈ ಐಕಾನಿಕ್ ಬ್ರಿಟಿಷ್ ಗೂಢಚಾರನ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ನಿರ್ವಹಿಸುವ ಏಳನೇ ನಟರಾಗುತ್ತಿದ್ದಾರೆ.
Robert Pattinson is James Bond https://t.co/3GulkhblDp
— James Bond (@007) November 16, 2026
ಅಮೆಝಾನ್ ಎಂಜಿಎಂ ಸ್ಟುಡಿಯೋಸ್ ಅಡಿಯಲ್ಲಿ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ, ಇನ್ನೂ ಹೆಸರಿಡದ 29ನೇ ಅಧಿಕೃತ ಬಾಂಡ್ ಸಿನಿಮಾದಲ್ಲಿ ಪ್ಯಾಟಿನ್ಸನ್ ನಟಿಸುತ್ತಿದ್ದಾರೆ. ಡೆನಿಸ್ ವಿಲ್ಲೆನ್ಯೂವ್ ಸಿನಿಮಾವನ್ನು ನಿರ್ದೇಶಿಸಲಿದ್ದು, ‘ಪೀಕಿ ಬ್ಲೈಂಡರ್ಸ್’ ಸೃಷ್ಟಿಕರ್ತ ಸ್ಟೀವನ್ ನೈಟ್ ಚಿತ್ರಕಥೆ ಬರೆಯಲಿದ್ದಾರೆ. ಆಮಿ ಪಾಸ್ಕಲ್ ಮತ್ತು ಡೇವಿಡ್ ಹೇಮನ್ ಈ ಸಿನಿಮಾ ನಿರ್ಮಿಸಲಿದ್ದಾರೆ.
ಬಾಂಡ್ 007 ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟವಾದ ಹೇಳಿಕೆಯಲ್ಲಿ, ಸಿನಿಮಾ ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಒಂದನ್ನು ನಿರ್ವಹಿಸುವ ಮಹತ್ವದ ಬಗ್ಗೆ ಪ್ಯಾಟಿನ್ಸನ್ ಮಾತನಾಡಿದ್ದಾರೆ. “ಜೇಮ್ಸ್ ಬಾಂಡ್ ಸಿನಿ ಜಗತ್ತಿನಲ್ಲಿ ಪರಂಪರೆಯೊಂದನ್ನು ಸೃಷ್ಟಿಸಿರುವ ಪಾತ್ರವಾಗಿದೆ. ಹೀಗಾಗಿ ನನಗೆ 007 ಪಾತ್ರವನ್ನು ನಿರ್ವಹಿಸುವ ಜವಾಬ್ದಾರಿ ನೀಡಿರುವುದನ್ನು ಜೀವಮಾನದ ಗೌರವವೆಂದು ಪರಿಗಣಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
“ಅಮೆಝಾನ್ ಎಂಜಿಎಂ ಸ್ಟುಡಿಯೊದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿರುವ ಎಲ್ಲರಿಗೂ ಆಭಾರಿಯಾಗಿದ್ದೇನೆ. ಈ ಪಾತ್ರ ದೊರೆತಿರುವುದು ‘ನನ್ನ ಕನಸು ನನಸಾದ ಕ್ಷಣ’ ಎಂದು ಹೇಳಿದರೂ ಕಡಿಮೆಯಾಗುತ್ತದೆ. ಅದ್ಭುತ ತಂಡದ ಜೊತೆಗೆ ಕೆಲಸ ಮಾಡಲು ಮತ್ತು ಹೊಸ ಪ್ರಯಾಣವನ್ನು ಪ್ರಾರಂಭಿಸಲು ಅತ್ಯಂತ ಉತ್ಸುಕನಾಗಿದ್ದೇನೆ” ಎಂದು ನಟ ತಿಳಿಸಿದ್ದಾರೆ.
“ಬಾಂಡ್ ಸಿನಿಮಾಗಳನ್ನು ದಂತಕತೆಯಾಗಿಸಿರುವ ಮೂಲ ಗುಣಲಕ್ಷಣಗಳನ್ನು ಉಳಿಸಿಕೊಂಡು ಅದಕ್ಕೆ ಹೊಸ ಆಯಾಮವನ್ನು ನೀಡುವ ಸಾಮರ್ಥ್ಯ ಪ್ಯಾಟಿನ್ಸನ್ ಅವರಿಗೆ ಇದೆ. ಅವರು 007 ಪಾತ್ರಕ್ಕೆ ಹೊಸ ಸ್ಫೂರ್ತಿಯನ್ನು ತರಲಿದ್ದಾರೆ” ಎಂದು ನಿರ್ದೇಶಕ ವಿಲ್ಲೆನ್ಯೂವ್ ಅಭಿಪ್ರಾಯಪಟ್ಟಿದ್ದಾರೆ.
ಡೇನಿಯಲ್ ಕ್ರೇಗ್ ಅವರ ನಂತರ ಪ್ಯಾಟಿನ್ಸನ್ 007 ಆಗುತ್ತಿದ್ದಾರೆ. ಇದಕ್ಕೂ ಮೊದಲು ಶಾನ್ ಕಾನರಿ, ಜಾರ್ಜ್ ಲಾಜೆನ್ಬಿ, ರೋಜರ್ ಮೂರ್, ತಿಮೊತಿ ಡಾಲ್ಟನ್, ಪಿಯರ್ಸ್ ಬ್ರೋಸ್ನನ್ ಮತ್ತು ಡೇನಿಯಲ್ ಕ್ರೇಗ್ 007 ಆಗಿದ್ದರು. ಈ ಪಾತ್ರ ನಿರ್ವಹಿಸುವ ಏಳನೇ ನಟ ಪ್ಯಾಟಿನ್ಸನ್. ಡೇನಿಯಲ್ ಕ್ರೇಗ್ ಅವರ ಪಯಣವು 2021ರಲ್ಲಿ ‘ನೋ ಟೈಮ್ ಟು ಡೈ’ ಚಿತ್ರದೊಂದಿಗೆ ಕೊನೆಗೊಂಡಿದೆ. ಅವರು ಐದು 007 ಸಿನಿಮಾಗಳಲ್ಲಿ ನಟಿಸಿದ್ದರು.
ಸೋಮವಾರ ಈ ಬಗ್ಗೆ ಅಧಿಕೃತ ಖಾತೆಗಳ ಮೂಲಕ ಘೋಷಿಸಿದ ಬಳಿಕ ಅಮೆಝಾನ್ ಎಂಜಿಎಂ ಸ್ಟುಡಿಯೋಸ್, ಬಾಂಡ್ ನ ಸಾಂಪ್ರದಾಯಿಕ ಟಕ್ಸೆಡೊ ಉಡುಗೆ ಧರಿಸಿದ ಪ್ಯಾಟಿನ್ಸನ್ ಅವರ ಮೊದಲ ನೋಟವನ್ನು ಅನಾವರಣಗೊಳಿಸಿದೆ. ಈ ಪಾತ್ರಕ್ಕಾಗಿ ಜೋಶ್ ಓ'ಕಾನರ್ ಮತ್ತು ಕ್ಯಾಲಂ ಟರ್ನರ್ ತೀವ್ರ ಸ್ಪರ್ಧೆ ಒಡ್ಡಿದ್ದರು ಎಂದು ವರದಿಯಾಗಿದೆ.
ಪ್ಯಾಟಿನ್ಸನ್ ‘ಹ್ಯಾರಿ ಪಾಟರ್ ಆ್ಯಂಡ್ ದಿ ಗೋಬ್ಲೆಟ್ ಆಫ್ ಫೈರ್’ ಮತ್ತು ‘ಟ್ವಿಲೈಟ್’ ಸಾಹಸಗಾಥೆಯೊಂದಿಗೆ ಖ್ಯಾತಿ ಪಡೆದವರು. ನಂತರ ಅನೇಕ ಇತರ ಸಿನಿಮಾಗಳಲ್ಲೂ ನಟಿಸಿದ್ದಾರೆ. 2022ರಲ್ಲಿ ‘ದಿ ಬ್ಯಾಟ್ಮ್ಯಾನ್’ನಲ್ಲಿ ಬ್ರೂಸ್ ವೇಯ್ನ್ ಪಾತ್ರ ನಿರ್ವಹಿಸಿದ್ದರು. 2026ರಲ್ಲಿ ‘ದಿ ಒಡಿಸ್ಸಿ’ಯಲ್ಲಿ ಕಾಣಿಸಿಕೊಂಡರು. 2028ರಲ್ಲಿ ಅವರು ‘ದಿ ಬ್ಯಾಟ್ಮ್ಯಾನ್ II’ನಲ್ಲಿ ಹಿಂತಿರುಗಲಿದ್ದಾರೆ.






