ಹಲ್ಲು ಉದುರುವುದು ಮತ್ತು ಅರಿವಿನ ಕೊರತೆಯ ನಡುವೆ ಸಂಬಂಧ; ವೈದ್ಯರು ಹೇಳುವುದೇನು?

ಸಾಂದರ್ಭಿಕ ಚಿತ್ರ | Photo Credit : freepik
ಹಲ್ಲು ಉದುರುವುದನ್ನು ಸಾಮಾನ್ಯವಾಗಿ ವಯಸ್ಸಾಗುವುದು ಅಥವಾ ಬಾಯಿಯ ಆರೋಗ್ಯವನ್ನು ಕಳಪೆಯಾಗಿ ಇರಿಸಿರುವುದರ ಪರಿಣಾಮ ಎಂದು ನಂಬಿಕೊಂಡು ಸುಮ್ಮನಾಗುತ್ತೇವೆ. ಆದರೆ ಯುನೈಟೆಡ್ ಕಿಂಗ್ಡಂನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಸಿದ್ಧ ವೈದ್ಯರಾದ ಡಾ. ಕರಣ್ ರಾಜನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಲ್ಲು ಉದುರುವುದು ಮತ್ತು ಅರಿವಿನ ಸಮಸ್ಯೆಯ ಕುರಿತಂತೆ ವಿವರಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಹಲ್ಲು ಉದುರುವುದು ಎಂದರೆ ಅರಿವಿನ ಕಾರ್ಯದಲ್ಲಿ ದೋಷ ಸಂಭವಿಸುವುದಾಗಿರಬಹುದು.
ಅವರು ತಮ್ಮ ಪೋಸ್ಟ್ನಲ್ಲಿ ಅಮೆರಿಕದಲ್ಲಿ ನಡೆದ ಒಂದು ಸಂಶೋಧನೆಯ ವಿವರಗಳನ್ನು ಮುಂದಿಟ್ಟಿದ್ದಾರೆ. “ಅಮೆರಿಕದಲ್ಲಿ 35,000 ಮಂದಿ ಭಾಗವಹಿಸಿದ ಅಧ್ಯಯನದಲ್ಲಿ ಹಲ್ಲು ಉದುರುವ ಅಪಾಯ ಎದುರಿಸಿದವರನ್ನು ಸಂದರ್ಶಿಸಲಾಗಿದೆ. ಪ್ರತಿ ಉದುರಿದ ಹಲ್ಲಿಗೂ ಶೇ 1.7ರಷ್ಟು ಅರಿವಿನ ಕುಸಿತದ ಸಮಸ್ಯೆ ಎದುರಾಗಿರುವುದು ಪತ್ತೆಯಾಗಿದೆ. ಹಲ್ಲಿನ ಆರೋಗ್ಯದ ಕಾರಣದಿಂದ ಯಾರಾದರೂ ಒಂದು ಹಲ್ಲನ್ನು ಕಳೆದುಕೊಂಡರೆ ಅವರು ಇನ್ನಷ್ಟು ಹಲ್ಲು ಕಳೆದುಕೊಳ್ಳುವ ಅಪಾಯ ಹೊಂದಿರುತ್ತಾರೆ. ಹೀಗಾಗಿ ಒಟ್ಟು ಅಪಾಯವನ್ನು ಲೆಕ್ಕ ಹಾಕಿದಾಗ, ಹಲ್ಲಿನ ನಷ್ಟದಿಂದ ಆಗುವ ಅರಿವಿನ ಕುಸಿತ ಮತ್ತು ಬುದ್ಧಿಮಾಂದ್ಯತೆಯ ಸಮಸ್ಯೆ ಅನೇಕ ಶೇಕಡಾವಾರು ಹೆಚ್ಚಾಗುವ ಸಾಧ್ಯತೆಯಿದೆ.
►ಹಲ್ಲಿನ ನಷ್ಟ ಮತ್ತು ಅರಿವಿನ ಕುಸಿತಕ್ಕೆ ಇರುವ ಸಂಬಂಧವೇನು?
ಕ್ರೌನ್ ಹಬ್ ಡೆಂಟಲ್ ಕ್ಲಿನಿಕ್ನ ಡಾ. ನಿಯತಿ ಅರೋರ ಅವರ ಪ್ರಕಾರ, “ಹಲ್ಲಿನ ನಷ್ಟ ಮತ್ತು ಅರಿವಿನ ಕುಸಿತಕ್ಕೆ ಸಂಬಂಧವಿದೆ. ಹಲ್ಲಿನ ನಷ್ಟ ಮತ್ತು ಅರಿವಿನ ಕುಸಿತದ ಸಂಬಂಧಕ್ಕೆ ಅನೇಕ ಪುರಾವೆಗಳಿವೆ. ವಯಸ್ಸಾದವರಲ್ಲಿ ಅರಿವಿನ ಕ್ಷೀಣತೆಯ ಸಂಭಾವ್ಯ ಆರಂಭಿಕ ಸಂಕೇತ ಹಲ್ಲಿನ ನಷ್ಟವಾಗಿರಬಹುದು. ಚಿಕಿತ್ಸಾತ್ಮಕ ಅಧ್ಯಯನಗಳು ಹಲ್ಲಿನ ನಷ್ಟದಿಂದಾಗಿ ಮೆದುಳಿನ ಮೇಲೆ ಪರಿಣಾಮವಾಗುವುದನ್ನು ಸಾಬೀತು ಮಾಡಿವೆ. ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯು ಹೆಚ್ಚು ಹಲ್ಲು ಉದುರಿರುವ ವ್ಯಕ್ತಿಗಳಲ್ಲಿ ಅರಿವಿನ ಕುಸಿತದ ಅಪಾಯ ಶೇ 48ರಷ್ಟು ಇರುವುದು ಮತ್ತು ಬುದ್ಧಿಮಾಂದ್ಯತೆಯ ಪ್ರಮಾಣ ಶೇ 28ರಷ್ಟು ಇರುವುದಾಗಿ ಹೇಳಿದೆ.
ಹಲ್ಲಿನ ಅನಾರೋಗ್ಯದಿಂದಾಗಿ ಸಂಭವಿಸುವ ಉರಿಯೂತ ಅಥವಾ ಒಸಡು ರೋಗದಂತಹ ಅಂಶಗಳು ಕೂಡ ಅರಿವಿನ ಕುಸಿತಕ್ಕೆ ಕೊಡುಗೆ ನೀಡುತ್ತವೆ. ಕಳಪೆ ಹಲ್ಲುಗಳಿಂದ ಉಂಟಾಗುವ ಉರಿಯೂತ, ತಿನ್ನಲು ಕಷ್ಟವಾಗಿ ಪೌಷ್ಠಿಕಾಂಶದ ಕೊರತೆ ಕಂಡುಬರುವುದು, ಹಲ್ಲಿನ ನಷ್ಟದ ಮಾನಸಿಕ ಪರಿಣಾಮದಿಂದ ಸ್ವಾಭಿಮಾನ ಕುಂದುವುದು ಮತ್ತು ಸಾಮಾಜಿಕ ಸಂವಹನ ಕಷ್ಟವಾಗುವಂತಹ ಮಾನಸಿಕ ಪರಿಣಾಮಗಳು ಅರಿವಿನ ಕುಸಿತಕ್ಕೆ ಕಾರಣವಾಗಬಹುದು.
ಅಲ್ಲದೆ, ಬಾಯಿಯ ಆರೋಗ್ಯದ ಕೊರತೆಯು ಅತಿಯಾದ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಪರಿಣಾಮವಾಗಿ ಒಸಡುಗಳ ಸೋಂಕು ರಕ್ತಪ್ರವಾಹಕ್ಕೆ ಪ್ರವೇಶಿಸಿ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಈ ಪರಿಣಾಮವೇ ಅರಿವಿನ ಕುಸಿತ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
►ಹಲ್ಲುಗಳ ನಷ್ಟ ಪೋಷಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಹಲ್ಲುಗಳನ್ನು ಕಳೆದುಕೊಳ್ಳುವುದರಿಂದ ಒಟ್ಟಾರೆ ಪೋಷಣೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸಮತೋಲಿತ ಆಹಾರವನ್ನು ಅಗಿಯುವುದು ಮತ್ತು ಆನಂದಿಸುವುದು ಕಷ್ಟವಾಗಿ ಪೌಷ್ಠಿಕಾಂಶಗಳ ಕೊರತೆಗೆ ಕಾರಣವಾಗಬಹುದು. ವಿಶೇಷವಾಗಿ ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳಲ್ಲಿ ಕೊರತೆ ಉಂಟಾಗಿ ಮೆದುಳಿನ ಆರೋಗ್ಯ ಸೇರಿದಂತೆ ಒಟ್ಟು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಅಂದರೆ ಅರಿವಿನ ಕಾರ್ಯಕ್ಕೆ ಅಗತ್ಯವಾಗಿರುವ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಒಮೆಗಾ–3 ಕೊಬ್ಬಿನ ಆಮ್ಲಗಳ ಸೇವನೆ ಕಡಿಮೆಯಾಗಿ ಅರಿವಿನ ಕುಸಿತಕ್ಕೆ ಕಾರಣವಾಗಬಹುದು.
ಕಳಪೆ ಪೋಷಕಾಂಶಗಳು ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಸೋಂಕುಗಳನ್ನು ತೊಡೆದು ಹಾಕಲು ಸಾಧ್ಯವಾಗದೆ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮೆದುಳಿನ ಆರೋಗ್ಯಕ್ಕಾಗಿ ಉತ್ತಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ.
►ಹಲ್ಲುಗಳ ರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು?
ವೈದ್ಯರ ಪ್ರಕಾರ ನಿತ್ಯವೂ ಎರಡು ಬಾರಿ ಹಲ್ಲುಜ್ಜುವುದನ್ನು ಖಚಿತಪಡಿಸಬೇಕು. ಪರೀಕ್ಷೆಗಾಗಿ ದಂತಚಿಕಿತ್ಸಕರನ್ನು ಆಗಾಗ್ಗೆ ಭೇಟಿ ಮಾಡುತ್ತಿರಬೇಕು. ಅಗತ್ಯ ಪೋಷಕಾಂಶಗಳು ಇರುವ ಸಮತೋಲಿತ ಆಹಾರ ಸೇವಿಸಬೇಕು. ಚೆನ್ನಾಗಿ ನೀರು ಕುಡಿಯಬೇಕು. ನಿಯಮಿತ ದೈಹಿಕ ವ್ಯಾಯಾಮ ಅಭ್ಯಾಸ ಮಾಡಿಕೊಳ್ಳಬೇಕು. ಮೆದುಳನ್ನು ಸಕ್ರಿಯವಾಗಿರಿಸಬೇಕು. ತಂಬಾಕು ಸೇವನೆ ಕಡಿಮೆ ಮಾಡಬೇಕು. ಮದ್ಯಪಾನವೂ ಮಿತಿಯಲ್ಲಿರಬೇಕು.
ಈ ಕ್ರಮಗಳು ಒಟ್ಟಾಗಿ ಹಲ್ಲಿನ ನಷ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಅರಿವಿನ ಕುಸಿತದ ಅಪಾಯವನ್ನು ಕಡಿಮೆ ಮಾಡುತ್ತವೆ. ಒಟ್ಟು ಯೋಗಕ್ಷೇಮಕ್ಕೂ ಸಹಾಯಕವಾಗುತ್ತವೆ.






