ಮೀಸಲಾತಿ ಪ್ರಮಾಣ ಶೇ.75ಕ್ಕೆ ಹೆಚ್ಚಿಸುವ ಮಸೂದೆಗೆ ಬಿಹಾರ ವಿಧಾನಸಭೆ ಸರ್ವಾನುಮತದ ಅಂಗೀಕಾರ
► ನಿತೀಶ್ ನಡೆಗೆ ಬೆಚ್ಚಿದ ಬಿಜೆಪಿಯ ಚುನಾವಣಾ ಚಾಣಾಕ್ಷರ ಮುಂದಿನ ಹೆಜ್ಜೆ ಏನು ? ► ಇಂಡಿಯಾ ಮೈತ್ರಿಕೂಟದ ಜಾತಿ ಗಣತಿ ರಣತಂತ್ರಕ್ಕೆ ಬೆದರಿದ ಬಿಜೆಪಿ

ಜಾತಿ ಜನಗಣತಿ ವರದಿ ಬಹಿರಂಗಪಡಿಸಿ ಬಿಜೆಪಿಯನ್ನು ಬೆಚ್ಚಿಬೀಳಿಸಿದ್ದ ಬಿಹಾರದ ನಿತೀಶ್ ಕುಮಾರ್ ಸರ್ಕಾರ ಈಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲೋಕಸಭೆ ಚುನಾವಣೆ ಎದುರಿಗಿರುವಾಗ, ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸುವ ಮಸೂದೆಯನ್ನು ಬಿಹಾರ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.
ನಿತೀಶ್ ಅವರ ಈ ಸಾಮಾಜಿಕ ನ್ಯಾಯದ ಹಿನ್ನೆಲೆಯ ಚಾಣಾಕ್ಷ ನಡೆ ಬಿಜೆಪಿಯ ಚುನಾವಣಾ ಚಾಣಾಕ್ಷರನ್ನು ನಿಸ್ಸಂದೇಹವಾಗಿಯೂ ದಿಗಿಲುಗೊಳಿಸಿದೆ. ನಿತೀಶ್ ಸರ್ಕಾರದ ಈ ಮೀಸಲಾತಿ ಮಸೂದೆ ಬಿಹಾರವನ್ನೂ ಮೀರಿ ಯಾಕೆ ಇಡೀ ದೇಶದ ಮೇಲೆ ಪರಿಣಾಮ ಬೀರಲಿದೆ?
ಮೀಸಲಾತಿಯನ್ನು ಏನೇನೋ ಕಥೆ ಹೇಳಿ ನಿರಾಕರಿಸುತ್ತಲೇ ಬಂದ, ವಿರೋಧಿಸುತ್ತಲೇ ಬಂದವರ ಪಾಲಿಗೆ ಈಗ ಎದುರಾಗಲಿರುವ ರಾಜಕೀಯ ಒತ್ತಡಗಳೇನು?. ಈವರೆಗೆ ಏನೆಲ್ಲಾ ಹೇಳಿ ಅರ್ಹರಿಗೆ ಸರಿಯಾಗಿ ಮೀಸಲಾತಿ ಕೊಡದೆ ವಂಚಿಸುತ್ತಾ ಬರಲಾಯಿತು? ಮತ್ತು ಅದೇ ಕಾರಣದಿಂದಾಗಿ ಅಂಥ ರಾಜಕಾರಣಕ್ಕೆ ಈಗ ಎದುರಾಗಲಿರುವ ಸವಾಲುಗಳೇನು?
ಈಗ ಮೀಸಲಾತಿ ಸರಿಯಾಗಿ ಕೊಡುವಾಗ ಸಹಜವಾಗಿ ಸರಕಾರಿ ಉದ್ಯೋಗ ಹೆಚ್ಚಿಸುವುದೂ ಹೇಗೆ ಅನಿವಾರ್ಯ ಆಗಲಿದೆ ?. ಮೀಸಲಾತಿ ಮೂಲಕ ನ್ಯಾಯ ಒದಗಿಸುವಲ್ಲಿ ಬಿಹಾರ ಇಡೀ ದೇಶಕ್ಕೆ ಹೇಗೆ ಮಾದರಿಯಾಗಲಿದೆ ? ಮತ್ತಿದು ಮೋದಿ ಸರಕಾರದ ಮುಂದೆ ತಂದಿಟ್ಟಿರುವ ಭಯ ಎಂಥದು?
ಎಲ್ಲವನ್ನೂ ಒಂದೊಂದಾಗಿ ನೋಡೋಣ. ಮೀಸಲಾತಿ ಪ್ರಮಾಣ ಹೆಚ್ಚಳದ ಬಿಹಾರ ಮಸೂದೆಯ ಕುರಿತಂತೆ ಕೆಲವು ಮುಖ್ಯ ವಿವರಗಳನ್ನು ಮೊದಲು ಗಮನಿಸುವುದಾದರೆ, ಸಮಾಜದ ದುರ್ಬಲ ವರ್ಗಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ.
ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ ( ಎಸ್ಟಿ), ಅತ್ಯಂತ ಹಿಂದುಳಿದ ವರ್ಗ (ಇಬಿಸಿ), ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡುವ ಮೀಸಲಾತಿಯನ್ನು ಈಗಿನ ಶೇ.50ರಿಂದ ಶೇ.65ಕ್ಕೆ ಹೆಚ್ಚಿಸುತ್ತದೆ. ಇದರೊಂದಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ನೀಡುವ ಶೇ.10ರ ಮೀಸಲಾತಿಯೂ ಸೇರಿ, ಮೀಸಲಾತಿ ಪ್ರಮಾಣ ಶೇ.75 ಆಗಲಿದೆ.
ಕೆಲ ಸಮಯದ ಹಿಂದಷ್ಟೇ ಬಹಿರಂಗಪಡಿಸಿದ್ದ ಜಾತಿ ಜನಗಣತಿ ವರದಿಯ ಆಧಾರದ ಮೇಲೆ ಬಿಹಾರ ಸರ್ಕಾರ ಮೀಸಲಾತಿ ಹೆಚ್ಚಿಸುವ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮಸೂದೆಯ ಪ್ರಕಾರ, ಯಾವ ಯಾವ ಸಮುದಾಯಗಳಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ಸಿಗಲಿದೆ?
ಬಿಹಾರ ಜನಸಂಖ್ಯೆಯ ಶೇ.19.65ರಷ್ಟಿರುವ ಎಸ್ಸಿ ಸಮುದಾಯಗಳಿಗೆ ಈಗಿನ ಶೇ.16ರಿಂದ ಶೇ.20ಕ್ಕೆ ಮೀಸಲಾತಿ ಏರಿಕೆ.
ಜನಸಂಖ್ಯೆಯ ಶೇ.1.68ರಷ್ಟಿರುವ ಎಸ್ಟಿ ಸಮುದಾಯಗಳಿಗೆ ಶೇ.1ರಷ್ಟಿದ್ದ ಮೀಸಲಾತಿ ಶೇ.2ಕ್ಕೆ ಹೆಚ್ಚಳ.
ಜನಸಂಖ್ಯೆಯ ಶೇ.36.01ರಷ್ಟಿರುವ ಇಬಿಸಿ ಸಮುದಾಯಗಳಿಗೆ ಮೀಸಲಾತಿ ಶೇ.18 ಇದ್ದದ್ದು ಶೇ.25ಕ್ಕೆ ಏರಿಕೆಯಾಗಲಿದೆ.
ಜನಸಂಖ್ಯೆಯ ಶೇ.27.12ರಷ್ಟಿರುವ ಒಬಿಸಿ ಸಮುದಾಯಗಳಿಗೆ ಶೇ.12ರಷ್ಟಿದ್ದ ಮೀಸಲಾತಿ ಶೇ.15ಕ್ಕೆ ಏರಿಕೆ.
13.07 ಕೋಟಿ ಜನಸಂಖ್ಯೆಯುಳ್ಳ ಬಿಹಾರದಲ್ಲಿ ಸುಮಾರು 2.97 ಕೋಟಿ ಕುಟುಂಬಗಳಿವೆ.
ಅದರಲ್ಲಿ 94 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಿಂಗಳಿಗೆ 6 ಸಾವಿರ ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯದಲ್ಲಿ ಜೀವನ ಸಾಗಿಸುತ್ತಿವೆ.
ಅಂದರೆ, ಶೇ.34.13ರಷ್ಟು ಕುಟುಂಬಗಳು ಅತಿ ಕಡಿಮೆ ಆದಾಯ ಹೊಂದಿವೆ.
ಶೇ.29.61 ಕುಟುಂಬಗಳು 10 ಸಾವಿರ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿವೆ.
ಶೇ.28 ಕುಟುಂಬಗಳು 10 ಸಾವಿರಕ್ಕಿಂತ ಮೇಲ್ಪಟ್ಟು 50 ಸಾವಿರದವರೆಗೂ ಆದಾಯ ಹೊಂದಿವೆ.
ಕೇವಲ ಶೇ.4ರಷ್ಟು ಕುಟುಂಬಗಳು 50 ಸಾವಿರಕ್ಕಿಂತ ಹೆಚ್ಚಿನ ಆದಾಯ ಹೊಂದಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ.42ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿವೆ.
ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಶೇ33ರಷ್ಟು ಕುಟುಂಬಗಳನ್ನು ಬಡ ಕುಟುಂಬಗಳೆಂದು ವರ್ಗೀಕರಿಸಲಾಗಿದೆ.
ಬಿಹಾರದ ಈ ಚಿತ್ರಣ, ಮತ್ತದಕ್ಕೆ ಅನುಗುಣವಾಗಿ ಈಗ ನಿತೀಶ್ ಕುಮಾರ್ ಸರ್ಕಾರ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ತೆಗೆದುಕೊಂಡಿರುವುದು ಸಾಮಾಜಿಕ ನ್ಯಾಯವನ್ನು ಒದಗಿಸುವ ದೃಷ್ಟಿಯಿಂದ ಬಹು ಮಹತ್ವದ ಹೆಜ್ಜೆ.
ಜೊತೆಗೇ ಅದು ರಾಜಕೀಯವಾಗಿ ಉಂಟುಮಾಡಿರುವ ಸಂಚಲನ ಕೂಡ ಸಣ್ಣದಲ್ಲ. ಇದು ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ತಳಮಳವನ್ನು ಹೆಚ್ಚಿಸುವ ತೀರ್ಮಾನವೂ ಹೌದು. ಭಾರತದಲ್ಲಿ ಮೀಸಲಾತಿ ಜಾರಿಯಾದ ನಂತರ ಮೀಸಲಾತಿಯ ರಾಜಕೀಯ ಬಹಳ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಈಗಲೇ. ಮತ್ತದು ಬಿಹಾರದಿಂದ ಶುರುವಾಗುತ್ತಿದೆ.
ಮೀಸಲಾತಿಯ ವಿಚಾರವಾಗಿ ತಪ್ಪು ಕಲ್ಪನೆಗಳನ್ನೇ ಹರಡುತ್ತ, ಅದರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಅಭಿಯಾನ ನಡೆಸಿ, ಮೀಸಲಾತಿ ಪಡೆಯುವ ಸಮುದಾಯವನ್ನು ಅವಹೇಳನ ಮಾಡುತ್ತ, ಅನುಮಾನದಿಂದ ನೋಡುತ್ತ ಬರಲಾಯಿತು. ಮೀಸಲಾತಿಯಿಂದ ಆ ಸಮುದಾಯ ಪಡೆಯುವ ಸವಲತ್ತುಗಳ ಬಗ್ಗೆ ಕರುಬುತ್ತ, ಇತರರ ಪಾಲನ್ನೂ ತಿನ್ನುತ್ತಿದ್ದಾರೆ ಎಂದು ಬಿಂಬಿಸುತ್ತ ಅಸಹನೆಯನ್ನು ತೋರಿಸಲಾಯಿತು.
ಇಷ್ಟೆಲ್ಲ ಆಗಿಯೂ ಮೀಸಲಾತಿ ಪಡೆಯುವ ವರ್ಗ ವಾಸ್ತವವಾಗಿ ತನ್ನ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಪಡೆಯುತ್ತಿರಲಿಲ್ಲ. ಆದರೆ ಉಳಿದವರು ಪಡೆಯಬೇಕಿರುವುದನ್ನು ಕಸಿದುಕೊಂಡ ಆರೋಪಕ್ಕೆ ಮಾತ್ರ ತುತ್ತಾಗಬೇಕಿತ್ತು.
ನಿಜವಾಗಿಯೂ ಅವರಿಗೆ ಸಲ್ಲಬೇಕಿದ್ದ ಪಾಲನ್ನೇ ಅತಿ ಜಾಣತನದಿಂದ ಬೇರೆಯವರು ಕಸಿದುಕೊಳ್ಳುತ್ತಿದ್ದರು. ಆದರೆ ಕಸಿದುಕೊಳ್ಳುತ್ತಿದ್ದಾರೆ ಎಂಬ ದೂಷಣೆಯನ್ನು ಮಾತ್ರ ಮೀಸಲಾತಿ ಪಡೆಯುವ ವರ್ಗ ಕೇಳಿಸಿಕೊಳ್ಳಬೇಕಿತ್ತು.
ಇಂಥ ಹಲವು ಬಗೆಯ ಕಟು ವಾಸ್ತವಗಳ ಕಡೆ ಗಮನ ಹೋಗುವಂತೆ ಮಾಡಿದ್ದು ಬಿಹಾರ ಸರ್ಕಾರ ಪ್ರಕಟಿಸಿದ ಜಾತಿ ಜನಗಣತಿ ವರದಿ. ಎರಡು ವಿಚಾರಗಳು ಜಾತಿ ಜನಗಣತಿ ವರದಿಯಿಂದ ಸ್ಪಷ್ಟವಾಗಿದ್ದವು. ಮೊದಲನೆಯದಾಗಿ, ಜನಸಂಖ್ಯೆಯ ಅನುಪಾತದಲ್ಲಿ ಕಡಿಮೆ ಮೀಸಲಾತಿ ನೀಡಲಾಗುತ್ತಿದೆ. ಎರಡನೆಯದು, ಮೀಸಲಾತಿ ಪಡೆದ ನಂತರವೂ ಸರ್ಕಾರಿ ಉದ್ಯೋಗಗಳಲ್ಲಿ ಆ ಜನಸಂಖ್ಯೆಯ ಪ್ರಾತಿನಿಧ್ಯ ಹೆಚ್ಚಿಲ್ಲ.
ಜಾತಿ ಜನಗಣತಿ ವರದಿ ಈ ವಿಚಾರವನ್ನು ಬಯಲುಗೊಳಿಸಿತೆಂಬುದೇ ಬಿಜೆಪಿಯನ್ನೂ ಮೋದಿಯವರನ್ನೂ ದಿಗಿಲುಗೊಳಿಸಿತ್ತು. ಜಾತಿ ಜನಗಣತಿ ಬಗೆಗಿನ ಈ ಭಯದಿಂದಲೇ, ಅದನ್ನು ಮಾಡಲು ಮನಸ್ಸಿಲ್ಲದ ಬಿಜೆಪಿ ಸರ್ಕಾರ ನೆಪಗಳನ್ನು ಹೇಳುತ್ತಲೇ, ಅದನ್ನು ಮುಂದೆ ತಳ್ಳುತ್ತಿದೆ.
ಆದರೆ ಬಿಹಾರ ಸರ್ಕಾರ ಜಾತಿಗಣತಿ ವಿವರ ಬಹಿರಂಗಪಡಿಸುವ ಮೂಲಕ, ಜಾತಿ ಜನಗಣತಿ ದೇಶಾದ್ಯಂತ ನಡೆದರೆ ದೇಶದ ಒಟ್ಟಾರೆ ಜಾತಿವಾರು ಜನಸಂಖ್ಯೆಯ ಚಿತ್ರ ಹೇಗಿರಬಹುದು ಎಂಬ ಸುಳಿವು ಸಿಕ್ಕಿತು ಮತ್ತು ಬಿಜೆಪಿಯ ಸುಳ್ಳುಗಳು ದಿಕ್ಕೆಟ್ಟುಹೋದವು. ಅದರ ಬೆನ್ನಲ್ಲೇ ಮೀಸಲಾತಿ ಹೆಚ್ಚಳ ಮಸೂದೆ ಬಿಹಾರದಲ್ಲಿ ಬಿಜೆಪಿಯೂ ಬೆಂಬಲಿಸುವುದರೊಂದಿಗೆ ಅಂಗೀಕಾರಗೊಂಡಿರುವುದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಎದುರು ಬಿಕ್ಕಟ್ಟನ್ನು ತಂದಿಟ್ಟಿದೆ.
ಇದು ನಿಜವಾಗಿಯೂ ಬಿಜೆಪಿಯ ಆತಂಕವನ್ನು ದುಪ್ಪಟ್ಟು ಮಾಡದೆ ಇಲ್ಲ. ಜಾತಿ ಜನಗಣತಿ ವರದಿ ಹೊರಬಿದ್ದಾಗಲೇ ಅದನ್ನು ಜಾತಿ ಹೆಸರಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ಎಂದು ಮೋದಿ ಆರೋಪಿಸಿದ್ದು ತಮ್ಮ ರಾಜಕೀಯ ಆಟಕ್ಕೆ ಸೋಲಾದೀತು ಎಂಬ ಭಯದಿಂದಲೇ. ತಮಗೆ ಬೇಕಾದ ಸಮುದಾಯಗಳ ಸಂಖ್ಯೆಯನ್ನು ಹೆಚ್ಚು ಬರೆಸಲಾಗಿದೆ ಎಂದು ಅಮಿತ್ ಶಾ ಅಪಪ್ರಚಾರ ಮಾಡಲು ಯತ್ನಿಸಿದ್ದರ ಹಿಂದೆಯೂ ಇದೇ ಭಯವಿತ್ತು.
ಈಗ ಮೀಸಲಾತಿ ಹೆಚ್ಚಳವನ್ನೂ ಘೋಷಿಸಿರುವ ಬಿಹಾರ ಸರ್ಕಾರದ ನಡೆ ರಾಜಕೀಯವಾಗಿ ಬಿಜೆಪಿಗೆ ದೊಡ್ಡ ಸವಾಲಾಗಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಇತ್ತೀಚೆಗೆ ಪಾಟ್ನಾದಲ್ಲಿ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ನೇಮಕಾತಿ ಪತ್ರ ನೀಡಲಾಯಿತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ನೌಕರಿಗಳನ್ನು ನೀಡುವ ರೂಢಿ 90ರ ದಶಕದ ನಂತರ ನಿಂತೇ ಹೋಗಿತ್ತು.
ಈಗ ಮತ್ತೆ ಅದು ಶುರುವಾಗಿರುವಾಗ ಸೂಕ್ತ ಮೀಸಲಾತಿಗೂ ಇದು ತಕ್ಕ ಸಮಯವಾಗಿದೆ. ಪ್ರತಿಯೊಂದು ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಬೇಕೆಂಬ ಪ್ರತಿಪಾದನೆ, ಒತ್ತಾಯಗಳು ತೀವ್ರವಾಗುತ್ತಿರುವಾಗ, ಸರ್ಕಾರಿ ಉದ್ಯೋಗಗಳನ್ನೂ ಹೆಚ್ಚಿಸುವುದು ಅಗತ್ಯವೂ ಅನಿವಾರ್ಯವೂ ಆಗಲಿದೆ.
ಉದಾರೀಕರಣದ ಚಮತ್ಕಾರದ ಭಾಗವಾಗಿ ಸರ್ಕಾರಿ ನೌಕರಿಗಳೇ ಕಾಣೆಯಾಗಿದ್ದ ಕಾಲದಲ್ಲಿ, ಸರ್ಕಾರಿ ನೌಕರಿಗಳನ್ನು ಹೆಚ್ಚಿಸಬೇಕಿರುವ ಇಂಥದೊಂದು ಅನಿವಾರ್ಯತೆ ತರಬಹುದಾದ ಸಾಮಾಜಿಕ ಬದಲಾವಣೆಗಳು ಅಸಾಧಾರಣ ಎನ್ನಿಸಬಲ್ಲವು. ಇವತ್ತಿಗೂ ಹೆಸರಿಗೆ ಮಾತ್ರ ಮೀಸಲಾತಿ ಪಡೆಯುವ ವರ್ಗವೆನ್ನಿಸಿ, ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲದವರ ಮುಂದೆ ಹೊಸ ಅವಕಾಶಗಳು ತೆರೆದುಕೊಳ್ಳುವುದು ಸಾಧ್ಯವಾಗಲಿದೆ.
ಕೋಟಿಗಳ ಲೆಕ್ಕದಲ್ಲಿ ಉದ್ಯೋಗಗಳ ಆಸೆ ಹುಟ್ಟಿಸಿ ಅಧಿಕಾರಕ್ಕೆ ಬಂದವರಿಗೆ, ಇರುವ ಉದ್ಯೋಗಗಳನ್ನೂ ಇಲ್ಲವಾಗಿಸಿದವರಿಗೆ ಇಂಥದೊಂದು ಸಾಮಾಜಿಕ ಬದಲಾವಣೆಯ ಸಾಧ್ಯತೆಯೇ ಭಯ ತರಲಿದೆ ಎಂಬುದು ನಿಜ. ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸಿರುವ ಮಸೂದೆಗೆ ಕಾಯಿದೆಯ ರೂಪ ಸಿಗುವ ಹಾದಿ ಸುಗಮವಾಗಲಿದೆಯೆ ಎಂಬ ಪ್ರಶ್ನೆಯೇನೋ ಇದೆ.
ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನಿರ್ಧಾರ ತೆಗೆದುಕೊಂಡಾಗ ರದ್ದಾಗಿತ್ತು. ಆದರೆ ಈ ಬಾರಿ ಬಿಹಾರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಬಲವಾದ ಆಧಾರವಿದೆ. 13 ಕೋಟಿ ಜನಸಂಖ್ಯೆಯ ಸಮೀಕ್ಷೆ ನಡೆಸಿ, ಸಶಕ್ತ ಸಾಮಾಜಿಕ ಆರ್ಥಿಕ ಡೇಟಾ ಆಧಾರದಲ್ಲಿ ತೆಗೆದುಕೊಂಡಿರುವ ತೀರ್ಮಾನ ಇದೆಂದು ಸುಪ್ರೀಂ ಕೋರ್ಟಿನಲ್ಲಿಯೂ ಹೇಳುವುದಕ್ಕೆ ಅವಕಾಶವಿದೆ.
ಪ್ರತಿಯೊಬ್ಬರ ಲಾಭಕ್ಕಾಗಿ ತೆಗೆದುಕೊಂಡ ತೀರ್ಮಾನ ಎಂಬ ವಾದಕ್ಕೆ ಬಲವಿರಲಿದೆ. ಈಗಾಗಲೇ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಜಾತಿ ಜನಗಣತಿಯ ಪರವಾಗಿ ದೊಡ್ಡ ದನಿಯೆತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿ ಜನಗಣತಿ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಗಬೇಕೆಂಬುದು ರಾಹುಲ್ ಗಾಂಧಿಯಂಥ ನಾಯಕರ ಪ್ರತಿಪಾದನೆಯಾಗಿದೆ. ಬಿಹಾರದಲ್ಲಿ ಮೀಸಲಾತಿ ಹೆಚ್ಚಳ ಮಸೂದೆ ಅಂಗೀಕಾರವಾಗಿರುವುದು ಇಂಥ ಪ್ರತಿಪಾದನೆಯನ್ನು ವಾಸ್ತವದಲ್ಲಿ ತರುವ ನಿಟ್ಟಿನ ಹೆಜ್ಜೆಯಾಗಿ ಹೆಚ್ಚು ಮಹತ್ವದ್ದಾಗಿದೆ.
ಇಂಡಿಯಾ ಮೈತ್ರಿಕೂಟ ಇದನ್ನು ಪ್ರಮುಖವಾಗಿ ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿರುವಾಗ, ಬಿಜೆಪಿಗೆ ಖಂಡಿತವಾಗಿಯೂ ಇದು ಸವಾಲಾಗಲಿದೆ. ಮೀಸಲಾತಿ ಪಡೆಯವ ವರ್ಗವನ್ನು ನಿಂದಿಸುತ್ತಲೇ, ಎಲ್ಲ ಕ್ಷೇತ್ರಗಳನ್ನೂ ಆಕ್ರಮಿಸಿಕೊಂಡಿರುತ್ತಿದ್ದ ಮೇಲ್ಜಾತಿಯ ಸಮುದಾಯಗಳು, ಅವುಗಳನ್ನು ನೆಚ್ಚಿಕೊಂಡಿರುವ ಬಿಜೆಪಿ ಕಂಗೆಡುವ ಹೊತ್ತು ಇದು.
ಬರೀ ಭ್ರಮೆಗಳನ್ನು ಸೃಷ್ಟಿಸಿ ಆಳುತ್ತಿದ್ದವರಿಗೆ, ಬಡವರ ಹಸಿವು ನೀಗಿಸಲಾರದೆ, ಭಾವನಾತ್ಮಕ ವಿಚಾರಗಳನ್ನು ಮುಂದೆ ಮಾಡುತ್ತಿದ್ದವರಿಗೆ ಭಯ ಹುಟ್ಟಿರುವ ಹೊತ್ತು ಇದು. ತಮಗೆ ಬೇಕಿರುವುದು ಉದ್ಯೋಗವೇ ಹೊರತು ಹಿಂದೂ-ಮುಸ್ಲಿಂ ವಿಚಾರವಲ್ಲ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳುತ್ತಿರುವಾಗ, ಅವರನ್ನು ಮತ್ತೂ ಮೂರ್ಖರನ್ನಾಗಿಸುವ ಭ್ರಮೆಯಿಂದ ಬಿಜೆಪಿ ಹೊರಬರಬೇಕಿದೆ.
ನಿಜವಾಗಿಯೂ ಅವರಿಗೆ ಬೇಕಿರುವುದು ಉದ್ಯೋಗ ಎಂಬುದನ್ನು ಮನಗಾಣುವ ಮೂಲಕ ಸ್ವಸ್ಥ ಮತ್ತು ದೃಢ ಸಮಾಜವನ್ನು ರೂಪಿಸುವ ಆಡಳಿತ ಇವತ್ತಿನ ಅಗತ್ಯವಾಗಿದೆ. ಬಿಹಾರದಿಂದ ಶುರುವಾಗಿರುವ ಇಂಥದೊಂದು ಧೋರಣೆಯ ನಡೆ ರಾಷ್ಟ್ರಮಟ್ಟದಲ್ಲಿ ಮುಂದುವರಿಯುವುದಕ್ಕೆ ವೇದಿಕೆಗಳು ಸಿದ್ಧವಾಗುತ್ತಿವೆ.
ಮೀಸಲಾತಿಯ ವಿಚಾರವನ್ನೇ ಮಾತನಾಡಲು ಬಯಸದವರಿಗೆ, ಅಂಥ ಎಲ್ಲ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಬಯಸುವವರಿಗೆ ಇದು ತೊಡಕಾಗಿ ಪರಿಣಮಿಸಲಿದೆ. ಬಿಹಾರ ಸರ್ಕಾರ ಬಯಲು ಮಾಡಿರುವ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗಿದೆ ಮತ್ತು ಅದು ತೆಗೆದುಕೊಂಡಿರುವ ಸೂಕ್ತ ಪ್ರಾತಿನಿಧ್ಯದ ನಿರ್ಧಾರದ ಮೂಲಕವೇ ಹೊಸ ಸಾಮಾಜಿಕ ಆರ್ಥಿಕ ಸಾಧ್ಯತೆಯೊಂದು ತೆರೆದುಕೊಳ್ಳಲಿದೆ.
ಬಿಹಾರದ ಈ ನಡೆ ಇಡೀ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಲಿರುವಾಗ, ಜಾತಿ ಸಮೀಕ್ಷೆ ಬಹಿರಂಗಪಡಿಸಿದ್ದ ಸತ್ಯಗಳಿಗೇ ಹೆದರಿದ್ದ, ಅದನ್ನು ವಿರೋಧಿಸಿದ್ದ ಬಿಜೆಪಿ ಇನ್ನಷ್ಟು ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದೆ. ಚುನಾವಣೆಗೆ ಬಹಳ ಸಮಯವಿಲ್ಲದಿರುವ ಹೊತ್ತಿನಲ್ಲಿ ಬಿಜೆಪಿಗೆ ಎದುರಾಗುತ್ತಿರುವ ಈ ಆತಂಕ ಸಣ್ಣದಲ್ಲ.







