ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಜೊತೆಗೆ ಬಿಲ್ ಗೇಟ್ಸ್ ಫೋಟೋ ಏಕೆ? ಎಪಿಸ್ಟೇನ್ ಕಡತಗಳ ಬಿಡುಗಡೆಗೆ ಡೆಮಾಕ್ರಟ್ಸ್ ಆಗ್ರಹ

Photo Credit : firstpost.com
ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಜೊತೆಗೆ ಅಮೆರಿಕದ ಪ್ರಮುಖ ಉದ್ಯಮಿಗಳು ಮತ್ತು ಇತರ ಕ್ಷೇತ್ರಗಳ ಖ್ಯಾತನಾಮರು ಇರುವ ಫೋಟೋಗಳನ್ನು ಡೆಮಾಕ್ರಟ್ಸ್ ಬಿಡುಗಡೆ ಮಾಡಿದ್ದಾರೆ.
ಶಿಕ್ಷಗೆ ಒಳಗಾಗಿರುವ ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಅವರ ಎಸ್ಟೇಟ್ ನಿಂದ ಅಮೆರಿಕದ ಸಂಸತ್ತಿನ ಡೆಮಾಕ್ರಾಟ್ ಗಳು ಗುರುವಾರ ಡಿಸೆಂಬರ್ 18ರಂದು ಹೊಸ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಬಿಲಿಯನೇರ್ ಬಿಲ್ಗೇಟ್ಸ್, ಚಲನಚಿತ್ರ ನಿರ್ಮಾಪಕ ವುಡಿ ಅಲೆನ್ ಮತ್ತು ತತ್ವಜ್ಞಾನಿ ನೋಮ್ ಚೋಮ್ಸ್ಕಿ ಮೊದಲಾದವರಿದ್ದಾರೆ. ಆದರೆ ಈ ಫೋಟೋಗಳ ದಿನಾಂಕ ಮತ್ತು ವಿವರ ಪತ್ತೆಯಾಗಿಲ್ಲ.
ವಿವಾದಾತ್ಮಕ ‘ಲೊಲಿಟ’ ಕಾದಂಬರಿಯ ಸಾಲುಗಳನ್ನು ಮಹಿಳೆಯ ದೇಹದ ವಿವಿಧ ಭಾಗಗಳಲ್ಲಿ ಬರೆದಿರುವಂತಹ ಚಿತ್ರಗಳನ್ನೂ ಡೆಮಾಕ್ರಾಟ್ ಗಳು ಬಿಡುಗಡೆ ಮಾಡಿದ್ದಾರೆ. ಅಮೆರಿಕದ ಸಂಸತ್ತು ಎಪಿಸ್ಟೇನ್ ನ ಎಸ್ಟೇಟ್ನಿಂದ ಪಡೆದ 95,000 ಚಿತ್ರಗಳಲ್ಲಿ ಇವುಗಳು ಸೇರಿವೆ. ಈ ಚಿತ್ರಗಳಿಂದಾಗಿ ಎಪಿಸ್ಟೇನ್ ಗೆ ಸಂಬಂಧಿಸಿದ ಕಡತಗಳನ್ನು ಡಿಸೆಂಬರ್ 19ರ ಅಂತಿಮ ಗಡುವಿಗೆ ಮೊದಲು ಬಹಿರಂಗಪಡಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಒತ್ತಡ ಬಿದ್ದಿದೆ.
ಪ್ರಭಾವಿ ವ್ಯಕ್ತಿಗಳ ಚಿತ್ರಗಳ ಬಿಡುಗಡೆ
ಅನೇಕ ಪ್ರಭಾವಿ ಮತ್ತು ಜನಪ್ರಿಯ ವ್ಯಕ್ತಿಗಳ ಫೋಟೋಗಳು ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ನ್ ನ ಎಸ್ಟೇಟ್ನಿಂದ ದೊರಕಿದೆ. ಅಮೆರಿಕ ಸಂಸತ್ತಿನ ಪ್ರಮುಖ ತನಿಖಾ ಮಂಡಳಿಯಾದ ಹೌಸ್ ಓವರ್ಸೈಟ್ ಕಮಿಟಿಯಲ್ಲಿರುವ ಡೆಮಾಕ್ರಾಟ್ಗಳು ಈ ಫೋಟೋಗಳನ್ನು ಪ್ರಕಟಿಸಿದ್ದಾರೆ. ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮುಖ ಮರೆ ಮಾಡಿರುವ ಮಹಿಳೆಯರ ಜೊತೆಗೆ ಫೋಟೋದಲ್ಲಿರುವುದನ್ನು ತೋರಿಸಲಾಗಿದೆ. ಪ್ರಸಿದ್ಧ ಭಾಷಾ ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ನೋವಮ್ ಚೋಮ್ಸ್ಕಿ ಅವರು ಖಾಸಗಿ ವಿಮಾನದಲ್ಲಿ ಎಪಿಸ್ಟೇನ್ ಜೊತೆಗೆ ಕುಳಿತಿರುವ ಚಿತ್ರವನ್ನೂ ಬಿಡುಗಡೆ ಮಾಡಲಾಗಿದೆ.
ಬಿಲ್ ಗೇಟ್ಸ್ ಮತ್ತು ಚೋಮ್ಸ್ಕಿ ಅವರು ಎಪಿಸ್ಟೇನ್ ನ ಪರಿಚಿತರು ಎನ್ನುವ ಊಹಾಪೋಹಗಳು ಹರಿದಾಡಿದ್ದವು. ಗೇಟ್ಸ್ ಈ ಮೊದಲಿಗೆ ಎಪಿಸ್ಟೇನ್ ಅನ್ನು ಭೇಟಿಯಾಗಿರುವುದು ಜೀವನದ ಅತಿದೊಡ್ಡ ತಪ್ಪು ಎಂದು ಹೇಳಿಕೆ ನೀಡಿದ್ದರು. ಅವರು ಸಿಎನ್ಎನ್ ಗೆ ಹೇಳಿರುವ ಪ್ರಕಾರ, “ದತ್ತಿ ಕಾರ್ಯಕ್ರಮವೊಂದಕ್ಕಾಗಿ ಎಪಿಸ್ಟೇನ್ ಜೊತೆಗೆ ಅನೇಕ ಬಾರಿ ಭೋಜನ ಕೂಟದಲ್ಲಿ ಭಾಗವಹಿಸಿದ್ದೆ. ಆದರೆ ಆ ಕಾರ್ಯಕ್ರಮ ನಡೆಯದ ಕಾರಣ ಸಂಬಂಧ ಅಲ್ಲಿಗೇ ಮುಕ್ತಾಯವಾಗಿತ್ತು.”
ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬನಾನ್ ಎಪಿಸ್ಟೇನ್ನ ಪಕ್ಕದ ಡೆಸ್ಕ್ನಲ್ಲಿ ಕುಳಿತಿರುವುದು ಸೆರೆಹಿಡಿಯಲಾಗಿದೆ.
ನ್ಯೂಯಾರ್ಕ್ ಟೈಮ್ಸ್ ಲೇಖಕ ಮತ್ತು ಅಂಕಣಕಾರ ಡೇವಿಡ್ ಬ್ರೂಕ್ಸ್ ಅವರೂ ಅನೇಕ ಫೋಟೋಗಳಲ್ಲಿ ಎಪಿಸ್ಟೇನ್ ನ ಜೊತೆಗೆ ಫೋಟೋದಲ್ಲಿ ಪತ್ತೆಯಾಗಿದ್ದಾರೆ. ಯಾವುದೋ ಭೋಜನ ಕೂಟದಲ್ಲಿ ಅವರು ಗೂಗಲ್ ಸಹಸಂಸ್ಥಾಪಕ ಸರ್ಜಿ ಬ್ರಿನ್ ಪಕ್ಕದಲ್ಲಿ ಅವರು ಕುಳಿತಿದ್ದರು. ನ್ಯೂಯಾರ್ಕ್ಟೈಮ್ಸ್ ಈ ಬಗ್ಗೆ ಹೇಳಿಕೆ ನೀಡಿದ್ದು, “ಭೋಜನ ಕೂಟ 2011ರಲ್ಲಿ ನಡೆದಿತ್ತು. ಎಪಿಸ್ಟೇನ್ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದಲ್ಲಿ ಶಿಕ್ಷೆಗೊಳಗಾದ ಮೂರು ವರ್ಷಗಳ ನಂತರ ಈ ಫೋಟೋ ತೆಗೆಯಲಾಗಿದೆ. ಬ್ರೂಕ್ಸ್ಗೆ ಎಪಿಸ್ಟೇನ್ ನ ಜೊತೆಗೆ ನಂತರ ಯಾವುದೇ ಸಂಪರ್ಕ ಇರಲಿಲ್ಲ. ಪತ್ರಕರ್ತರಾಗಿ ಡೇವಿಡ್ ಬ್ರೂಕ್ಸ್ ತಮ್ಮ ಅಂಕಣಕ್ಕೆ ಮಾಹಿತಿ ಪಡೆಯಲು ನಿಯಮಿತವಾಗಿ ಪ್ರಮುಖ ಉದ್ಯಮಿಗಳನ್ನು ಬೇಟಿಯಾಗುತ್ತಾರೆ. 2011ರ ಕಾರ್ಯಕ್ರಮವೂ ಅಂತಹುದೇ ಒಂದು ಭೋಜನ ಕೂಟವಾಗಿತ್ತು. ಬ್ರೂಕ್ಸ್ ಅವರಿಗೆ ಅದಕ್ಕಿಂತ ಮೊದಲು ಅಥವಾ ನಂತರ ಎಪಿಸ್ಟೇನ್ ಜೊತೆಗೆ ಯಾವುದೇ ಸಂಪರ್ಕವಿರಲಿಲ್ಲ” ಎಂದು ತಿಳಿಸಿದೆ.
ಕಳೆದ ವಾರ ಬಿಡುಗಡೆ ಮಾಡಲಾಗಿರುವ ಎಪಿಸ್ಟೇನ್ ಎಸ್ಟೇಟ್ ಫೋಟೋಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಸಿನಿಮಾ ನಿರ್ದೇಶಕ ವುಡಿ ಅಲೆನ್, ಮಾಜಿ ಅಮೆರಿಕದ ಕೋಶಾಧಿಕಾರಿ ಲ್ಯಾರಿ ಸಮನ್ಸ್, ವಕೀಲರಾದ ಅಲನ್ ಡೆರ್ಶೊವಿಟ್ಜ್, ಮಾಜಿ ಬ್ರಿಟಿಷ್ ರಾಜಕುಮಾರ ಆಂಡ್ರ್ಯೂ ಮೌಂಟ್ಬ್ಯಾಟನ್-ವಿಂಡ್ಸರ್ ಮತ್ತು ಇತರರು ಇದ್ದಾರೆ. ಈ ಚಿತ್ರಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದು ಊಹಿಸುವುದು ಸರಿಯಲ್ಲ.
*ಚಿತ್ರಗಳಲ್ಲಿ ಇನ್ನೇನು ವಿವರಗಳಿದ್ದವು?
ಹೌಸ್ ಓವರ್ಸೈಟ್ ಕಮಿಟಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ವ್ಲಾದಿಮಿರ್ ನಬೊಕೊವ್ನ ಕಾದಂಬರಿ ‘ಲೊಲಿತ’ದಿಂದ ತೆಗೆದುಕೊಂಡ ವಾಕ್ಯಗಳನ್ನು ಮಹಿಳೆಯ ದೇಹದ ವಿವಿಧ ಭಾಗಗಳಲ್ಲಿ ಬರೆದಿರುವುದನ್ನು ತೋರಿಸಲಾಗಿದೆ. ಒಂದು ಫೋಟೋಗ್ರಾಫ್ ನ ಹಿನ್ನೆಲೆಯಲ್ಲಿ ಪುಸ್ತಕ ಇರಿಸಿರುವುದನ್ನು ಕಾಣಬಹುದು. ಈ ಪುಸ್ತಕದಲ್ಲಿ ವ್ಯಕ್ತಿಯೊಬ್ಬ ಮಗುವಿನ ಕುರಿತಾದ ಲೈಂಗಿಕ ಗೀಳು ಸಂಬಂಧಿತ ಕತೆಯನ್ನು ನಿರೂಪಿಸಲಾಗಿದೆ. ಒಂದು ಫೋಟೋದಲ್ಲಿ ಮಹಿಳೆಯ ಎದೆಯ ಮೇಲೆ ಬರಹಗಳು ಇವೆ. ಇನ್ನೊಂದು ಚಿತ್ರದಲ್ಲಿ ಮಹಿಳೆಯ ಕಾಲಿನ ಮೇಲೆ ಬರಹಗಳು ಇವೆ.
ಅನೇಕ ವಿದೇಶಿ ಪಾಸ್ಪೋರ್ಟ್ ಗಳ ಚಿತ್ರಗಳೂ ಇವೆ. ಲಿಥೂವಾನಿಯ, ರಷ್ಯಾ, ಝೆಕ್ ರಿಪಬ್ಲಿಕ್ ಮತ್ತು ಉಕ್ರೇನ್ನಂತಹ ದೇಶಗಳ ಮಹಿಳೆಯರ ಪಾಸ್ಪೋರ್ಟ್ಗಳ ಫೋಟೋಗಳಿವೆ. “ನನಗೆ ಒಬ್ಬ ಸ್ಕೌಟ್ ಪರಿಚಯವಿದೆ. ಆಕೆ ಕೆಲವು ಹುಡುಗಿಯರನ್ನು ಕಳುಹಿಸಿದ್ದಾಳೆ. ಆದರೆ ಒಂದು ಹುಡುಗಿಗೆ 1000 ಡಾಲರ್ ಹೇಳುತ್ತಾರೆ”. ಮೊದಲಾಗಿ 18 ವರ್ಷ ವಯಸ್ಸಿನ ಯುವತಿಯ ಕುರಿತ ಮಾತುಕತೆಯ ವಿವರಗಳ ಸ್ಕ್ರೀನ್ಶಾಟ್ಗಳು ಇವೆ.
ಮತ್ತೊಂದು ಫೋಟೋದಲ್ಲಿ ಎಪಿಸ್ಟೇನ್ ಮುಖ ಮರೆಮಾಡಿದ ಮಹಿಳೆಯರ ಜೊತೆಗೆ ಆಪ್ತವಾಗಿ ಕುಳಿತಿರುವುದನ್ನು ಕಾಣಬಹುದು.
ಎಪಿಸ್ಟೇನ್ ಕಡತಗಳ ಬಿಡುಗಡೆಗೆ ಒತ್ತಡ
ಅಮೆರಿಕ ಹೌಸ್ ಓವರ್ಸೈಟ್ ಕಮಿಟಿಯಲ್ಲಿರುವ ಡೆಮಾಕ್ರಟ್ಗಳು ಫೋಟೋಗಳ ಸಂದರ್ಭದ ವಿವರ ನೀಡಲಿಲ್ಲ. ಆದರೆ ಇತ್ತೀಚೆಗಿನ ಚಿತ್ರಗಳು “ಜೆಫ್ರಿ ಎಪಿಸ್ಟೇನ್ ಮತ್ತು ಆತನ ಜೊತೆಗಾರರು ತೊಡಗಿಸಿಕೊಂಡಿರುವ ಮಹಿಳೆಯರ ಪಾಸ್ಪೋರ್ಟ್ಗಳಾಗಿವೆ. ಎಪಿಸ್ಟೇನ್ ಕಕ್ಷೆಯಲ್ಲಿದ್ದ ಶ್ರೀಮಂತ ಮತ್ತು ಪ್ರಭಾವೀ ಪುರುಷರ ಫೋಟೋಗಳು ಮತ್ತು ಎಪಿಸ್ಟೇನ್ಗೆ ಮಹಿಳೆಯರನ್ನು ನೇಮಿಸುತ್ತಿರುವ ಸಂಬಂಧಿತ ಪಠ್ಯದ ಸಂದೇಶಗಳು” ಎಂದು ವಿವರ ನೀಡಿದ್ದಾರೆ.
ಎಪಿಸ್ಟೇನ್ನ ಜಾಲ ಮತ್ತು ಆತನ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಡೆಮಾಕ್ರಟ್ಸ್ ತಿಳಿಸಿದ್ದಾರೆ. “ಕಮಿಟಿಯ ಬಳಿ ಇಂತಹ ಸಾವಿರಾರು ಫೋಟೋಗಳು ಇವೆ. ಹೊಸ ಫೋಟೋಗಳಿಂದ ನ್ಯಾಯಾಂಗ ಇಲಾಖೆಯ ಬಳಿ ಏನಿದೆ ಎನ್ನುವ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಶ್ವೇತ ಭವನ ಇವರನ್ನು ರಕ್ಷಿಸಲು ನೋಡುವುದನ್ನು ನಾವು ತಡೆಯಬೇಕಿದೆ. ಇದೀಗ ಎಪಿಸ್ಟೇನ್ನ ಕಡತಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು” ಎಂದು ಅವರು ಹೇಳಿದ್ದಾರೆ.
ಆದರೆ ಕಮಿಟಿಯಲ್ಲಿ ಬಹುಸಂಖ್ಯಾತಾಗಿರುವ ರಿಪಬ್ಲಿಕನ್ಸ್ ಪ್ರಕಾರ, “ಡೆಮಾಕ್ರಟ್ ಗಳು ಕೆಲವೊಂದು ಫೋಟೋಗಳನ್ನು ಆರಿಸಿ ಡೊನಾಲ್ಡ್ ಟ್ರಂಪ್ ಕುರಿತಂತೆ ಕಪೋಲಕಲ್ಪಿತ ನಿರೂಪಣೆಗೆ ಹೊರಟಿದ್ದಾರೆ.”
ಆದರೆ ಇತ್ತೀಚೆಗೆ ಬಿಡುಗಡೆ ಮಾಡಿದ ಫೋಟೋಗಳು ಕಡತಗಳನ್ನು ಅಂತಿಮ ಗಡುವಿಗೆ ಮೊದಲು ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಿದೆ. ನ್ಯಾಯಾಂಗ ಇಲಾಖೆ ಶುಕ್ರವಾರದ ಮೊದಲು ಕಡತಗಳನ್ನು ಬಿಡುಗಡೆ ಮಾಡಲಿದೆಯೇ ಎನ್ನುವ ಬಗ್ಗೆ ತುಟಿಪಿಟಿಕ್ ಎನ್ನದೆ ಮೌನವಾಗಿದೆ.







