ಭಾರತದಲ್ಲಿ ಬೇಸಗೆಯನ್ನು ಆಕರ್ಷಕಗೊಳಿಸುವ ಏಳು ಪಕ್ಷಿಗಳ ವಿವರ ಇಲ್ಲಿದೆ

ಸಾಂದರ್ಭಿಕ ಚಿತ್ರ
ದೀರ್ಘ ಹಗಲುಗಳು, ಹೂಬಿಡುವ ಮರಗಳು, ಹಣ್ಣುಗಳು ಮತ್ತು ನೀರಿನ ಮೂಲಗಳ ಕಾರಣದಿಂದ ನಗರದ ಉದ್ಯಾನವನಗಳು, ಕಾಡುಗಳು, ಜೌಗು ಪ್ರದೇಶಗಳು ಮತ್ತು ವಸತಿ ನೆರೆಹೊರೆಗಳಲ್ಲಿ ಪಕ್ಷಿಗಳು ಹೆಚ್ಚು ಗೋಚರಿಸುತ್ತವೆ.
ಭಾರತದಲ್ಲಿ ಬೇಸಗೆ ಎಂದರೆ ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ರೋಮಾಂಚಕಾರಿ ಋತುವಾಗುತ್ತದೆ. ದೀರ್ಘ ಹಗಲುಗಳು, ಹೂಬಿಡುವ ಮರಗಳು, ಹಣ್ಣುಗಳು ಮತ್ತು ನೀರಿನ ಮೂಲಗಳ ಕಾರಣದಿಂದ ನಗರದ ಉದ್ಯಾನವನಗಳು, ಕಾಡುಗಳು, ಜೌಗು ಪ್ರದೇಶಗಳು ಮತ್ತು ವಸತಿ ಪ್ರದೇಶಗಳಲ್ಲಿ ಪಕ್ಷಿಗಳು ಹೆಚ್ಚು ಗೋಚರಿಸುತ್ತವೆ. ಬೇಸಗೆಯಲ್ಲಿ ಭಾರತದಾದ್ಯಂತ ಸಾಮಾನ್ಯವಾಗಿ ಕಂಡುಬರುವ ಪಕ್ಷಿ ಪ್ರಭೇದಗಳ ವಿವರ ಇಲ್ಲಿದೆ.
ಏಷ್ಯನ್ ಕೋಗಿಲೆ
ಭಾರತದಲ್ಲಿ ಬೇಸಗೆಯಲ್ಲಿ ಗುರುತಿಸಬಹುದಾದ ಪಕ್ಷಿಗಳಲ್ಲಿ ಏಷ್ಯನ್ ಕೋಗಿಲೆಯ ಕೂಗು ಪ್ರಮುಖವಾಗಿದೆ. ಈ ಹೊಳಪುಳ್ಳ ಕಪ್ಪು ಪಕ್ಷಿಯನ್ನು ಮರಗಳ ನಡುವೆ ಕಂಡುಹಿಡಿಯುವುದು ಬಹಳ ಕಷ್ಟ. ಕೆಂಪು ಕಣ್ಣುಗಳಿರುವ ಕೋಗಿಲೆ ಸಂತಾನೋತ್ಪತ್ತಿ ಅವಧಿಯಲ್ಲಿ ಹೆಚ್ಚು ಶಬ್ದ ಮಾಡುತ್ತದೆ. ಗಂಡು ಕೋಗಿಲೆಗಳು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುತ್ತವೆ. ಆದರೆ ಹೆಣ್ಣು ಕೋಗಿಲೆಗಳು ಬಿಳಿ ಚುಕ್ಕೆಗಳು ಮತ್ತು ಗೆರೆಗಳಿರುವ ಕಂದು ಬಣ್ಣದ ಪುಕ್ಕಗಳನ್ನು ಹೊಂದಿರುತ್ತವೆ. ಹೆಚ್ಚಿನ ಹಣ್ಣಿನ ಮರಗಳು, ಉದ್ಯಾನವನಗಳು ಮತ್ತು ನಗರ ನೆರೆಹೊರೆಗಳ ಬಳಿ ಇವು ಕಾಣಸಿಗುತ್ತವೆ.
ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್
ಸೊಗಸಾದ ಉದ್ದವಾದ ಬಿಳಿ ಬಾಲ ಮತ್ತು ಆಕರ್ಷಕ ಹಾರಾಟಕ್ಕೆ ಹೆಸರುವಾಸಿಯಾದ ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಬೇಸಿಗೆಯಲ್ಲಿ ಕಂಡುಬರುವ ಅತ್ಯಂತ ಅದ್ಭುತ ಪಕ್ಷಿಗಳಲ್ಲಿ ಒಂದಾಗಿದೆ. ಸಂತಾನೋತ್ಪತ್ತಿ ಅವಧಿಯಲ್ಲಿ ಗಂಡು ಪಕ್ಷಿಗಳು ರಿಬ್ಬನ್ ಮಾದರಿಯ ಉದ್ದ ಬಾಲಗಳನ್ನು ಬೆಳೆಸಿಕೊಳ್ಳುತ್ತವೆ. ಹೆಣ್ಣು ಪಕ್ಷಿಗಳು ಚಿಕ್ಕ ಬಾಲಗಳನ್ನು ಹೊಂದಿದ್ದು ಚೆಸ್ಟ್ನಟ್-ಕಂದು ಬಣ್ಣದಲ್ಲಿರುತ್ತವೆ. ಸಾಮಾನ್ಯವಾಗಿ ಕಾಡು ಪ್ರದೇಶಗಳು, ಅರಣ್ಯದ ಅಂಚುಗಳು, ತೋಟಗಳು ಮತ್ತು ಉದ್ಯಾನವನಗಳಲ್ಲಿ ಕಂಡುಬರುತ್ತವೆ. ಗಾಳಿಯಲ್ಲಿ ಹಾರುವ ಕೀಟಗಳನ್ನು ಹಿಡಿಯುವ ಕಾರಣ ಅವುಗಳಿಗೆ ಫ್ಲೈಕ್ಯಾಚರ್ ಎಂಬ ಹೆಸರು ಬಂದಿದೆ.
ಬಿಳಿ ಗಂಟಲಿನ ಮಿಂಚುಳ್ಳಿ
Photo : singaporebirds.com
ಹೆಸರಿನ ಹೊರತಾಗಿಯೂ ಮಿಂಚುಳ್ಳಿ ಕೇವಲ ನೀರಿನ ಬಳಿ ಮಾತ್ರ ಕಂಡುಬರುವುದಿಲ್ಲ. ಪ್ರಕಾಶಮಾನವಾದ ನೀಲಿ ರೆಕ್ಕೆಗಳು, ಕಂದು ತಲೆ ಮತ್ತು ಎದ್ದು ಕಾಣುವ ಕೆಂಪು ಕೊಕ್ಕನ್ನು ಹೊಂದಿರುವ ಈ ಪಕ್ಷಿ ಸಾಮಾನ್ಯವಾಗಿ ವಿದ್ಯುತ್ ತಂತಿಗಳು, ಮರಗಳು ಮತ್ತು ಬೇಲಿಗಳ ಮೇಲೆ ಕುಳಿತಿರುತ್ತದೆ. ಮಿಂಚುಳ್ಳಿಗಳು ಕೀಟಗಳು, ಕಪ್ಪೆಗಳು, ಹಲ್ಲಿಗಳು ಮತ್ತು ಸಣ್ಣ ಮೀನುಗಳನ್ನು ತಿನ್ನುತ್ತವೆ. ನಗರ ಪ್ರದೇಶಗಳು, ಹಳ್ಳಿಗಳು, ಜೌಗು ಪ್ರದೇಶಗಳು ಮತ್ತು ಕೃಷಿ ಹೊಲಗಳಲ್ಲಿ ಇವು ಕಂಡುಬರುತ್ತವೆ.
ರೋಸ್ ರಿಂಗ್ಡ್ ಪ್ಯಾರಕೀಟ್
ಈ ಹಸಿರು ಗಿಳಿಗಳು ನಗರ ಮತ್ತು ಪಟ್ಟಣಗಳಲ್ಲಿ ಚಿರಪರಿಚಿತ ಪಕ್ಷಿಗಳಾಗಿವೆ. ಬೇಸಗೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ವಿಶೇಷವಾಗಿ ಸಕ್ರಿಯವಾಗಿರುತ್ತವೆ. ರೋಸ್ ರಿಂಗ್ಡ್ ಪ್ಯಾರಕೀಟ್ ಗಳು ಹೆಚ್ಚಾಗಿ ನಗರದ ಉದ್ಯಾನವನಗಳು ಮತ್ತು ಕೃಷಿ ಭೂಮಿಗಳಲ್ಲಿ ಕಂಡುಬರುತ್ತವೆ. ಅವು ಮುಖ್ಯವಾಗಿ ಹಣ್ಣುಗಳು, ಬೀಜಗಳು ಮತ್ತು ಹೂಬಿಡುವ ಮರಗಳ ಸುತ್ತ ಆಹಾರ ಹುಡುಕುತ್ತಿರುತ್ತವೆ.
ಇಂಡಿಯನ್ ಪಿಟ್ಟಾ
Photo ; Indian Pitta - eBird
ಇಂಡಿಯನ್ ಪಿಟ್ಟಾ ಪಕ್ಷಿಗೆ ‘ನವರಂಗ್’ ಎಂಬ ಹೆಸರೂ ಇದೆ. ಹಲವು ಬಣ್ಣಗಳ ರೆಕ್ಕೆಗಳನ್ನು ಹೊಂದಿರುವ ಈ ಪಕ್ಷಿ, ಪಕ್ಷಿ ವೀಕ್ಷಕರ ಅಚ್ಚುಮೆಚ್ಚಿನದು. ಈ ವಲಸೆ ಪಕ್ಷಿ ಬೇಸಗೆಯಲ್ಲಿ ಭಾರತದಾದ್ಯಂತ ಕಂಡುಬರುತ್ತದೆ. ಅರಣ್ಯಗಳು, ಉದ್ಯಾನವನಗಳು ಮತ್ತು ಮರಗಳು ದಟ್ಟವಾಗಿರುವ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ. ಕೀಟಗಳು ಮತ್ತು ಹುಳುಗಳನ್ನು ಹುಡುಕಿ ತಿನ್ನುತ್ತದೆ.
ಪರ್ಪಲ್ ಸನ್ಬರ್ಡ್
ಪರ್ಪಲ್ ಸನ್ ಬರ್ಡ್ ಗಳು ಬೇಸಗೆಯಲ್ಲಿ ಹೂಬಿಡುವ ಸಸ್ಯಗಳ ಸುತ್ತ ತಿರುಗುತ್ತಿರುತ್ತವೆ. ಗಂಡು ಪಕ್ಷಿಗಳು ಸಂತಾನೋತ್ಪತ್ತಿ ಅವಧಿಯಲ್ಲಿ ಹೊಳೆಯುವ ನೇರಳೆ-ನೀಲಿ ಗರಿಗಳನ್ನು ಪ್ರದರ್ಶಿಸುತ್ತವೆ. ಹೆಣ್ಣು ಪಕ್ಷಿಗಳು ಆಲಿವ್-ಹಳದಿ ಬಣ್ಣದಲ್ಲಿರುತ್ತವೆ. ಇವು ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಉದ್ಯಾನವನಗಳು ಮತ್ತು ಬಾಲ್ಕನಿಗಳಲ್ಲಿ ಕಂಡುಬರುತ್ತವೆ.
ನವಿಲು
Photo : ndtv
ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ದೇಶದ ಅನೇಕ ಭಾಗಗಳಲ್ಲಿ ಕಾಣಸಿಗುತ್ತದೆ. ಗಂಡು ನವಿಲುಗಳು ಸಂಗಾತಿಗಳನ್ನು ಆಕರ್ಷಿಸಲು ಗರಿಗಳನ್ನು ಚಾಚಿ ಪ್ರದರ್ಶಿಸುವುದನ್ನು ಕಾಣಬಹುದು. ಅರಣ್ಯದ ಅಂಚುಗಳು, ಕೃಷಿ ಹೊಲಗಳು, ಹಳ್ಳಿಗಳ ಹೊರವಲಯ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ.






