ʼಸಕಾರಾತ್ಮಕ ವಿಚಾರ' ಪ್ರಚಾರದ ಭರವಸೆ ನೀಡಿದ BJP; ಆದರೆ ಹೊಸ IT ಸೆಲ್ ತಂಡದ ಸದಸ್ಯರ ಹಳೇ ಪೋಸ್ಟ್ ಗಳು ಹೇಳುವ ಕಥೆಯೇ ಬೇರೆ!
ಖುಷಿ ಮೆಹ್ರೋತ್ರಾ - newslaundry. com ವರದಿ

Photo Credit: newslaundry.com
BJP ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ದೀಪಕ್ ಮ್ಹಸ್ಕೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, "ನಕಲಿ ವೀಡಿಯೋಗಳನ್ನು ಬಳಸಿ ಸತ್ಯವನ್ನು ತಿರುಚಿ ಜನರನ್ನು ದಾರಿತಪ್ಪಿಸುತ್ತಿರುವ ವಿಪಕ್ಷಗಳ ಹುಸಿ ಪ್ರಚಾರಕ್ಕೆ ಸೂಕ್ತ ಉತ್ತರ ನೀಡುವುದೇ ನನ್ನ ಮುಖ್ಯ ಗುರಿ. ನಾವು ಸಕಾರಾತ್ಮಕ ವಿಷಯಗಳನ್ನು ರಚಿಸಿ ಜನರಿಗೆ ತಲುಪಿಸುತ್ತಿದ್ದೇವೆ, ಅದಕ್ಕೆ ಮತ್ತಷ್ಟು ವೇಗ ನೀಡಲು ನಾನು ಶ್ರಮಿಸುತ್ತೇನೆ" ಎಂದು ಹೇಳಿದ್ದರು.
58 ವರ್ಷದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿದ್ದು ರಾಜಕಾರಣಿಯಾದ ಮ್ಹಸ್ಕೆ, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಪಕ್ಷದ ಐಟಿ ಸೆಲ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ವಿಪಕ್ಷಗಳ ವಿರುದ್ಧ 'ನಕಲಿ ಪ್ರಚಾರ'ದ ಆರೋಪ ಮಾಡಿ, 'ಸಕಾರಾತ್ಮಕ ವಿಚಾರಗಳಿಂದ' ಅದನ್ನು ಎದುರಿಸುವುದಾಗಿ ಭರವಸೆ ನೀಡಿದ್ದರೂ, ಅವರದೇ ರಾಜ್ಯ ಘಟಕದ ಇನ್ಸ್ಟಾಗ್ರಾಮ್ ಖಾತೆಯು ಜೆನ್ ಝೀ (Gen Z) ಯುವಜನತೆಯನ್ನು ಕೋಮುವಾದಿ ಆಧಾರದಲ್ಲಿ ವಿಂಗಡಿಸುವ ಕೆಲಸದಲ್ಲಿ ತೊಡಗಿತ್ತು.
ಅವರ ನೇಮಕಕ್ಕೆ ಮೂರು ವಾರಗಳ ಮೊದಲು, ಛತ್ತೀಸ್ಗಢ BJP ಘಟಕವು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ NEET-UG ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇನ್ಸ್ಟಾಗ್ರಾಮ್ ಕ್ರಿಯೇಟರ್ ಒಬ್ಬರ ವೀಡಿಯೋವನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪಡೆಯುತ್ತಿರುವ ವಿದ್ಯಾರ್ಥಿಯ ಫೋಟೊದ ಪಕ್ಕದಲ್ಲಿ ತೋರಿಸಲಾಗಿತ್ತು. ಆ ವೀಡಿಯೋ ಕ್ರಿಯೇಟರ್ ಅನ್ನು "ಬಾಬರ್ ಪರಂಪರೆಗೆ ಕುಣಿಯುವ Gen Z" ಎಂದು ಮತ್ತು ಪ್ರಶಸ್ತಿ ಪಡೆದ ವಿದ್ಯಾರ್ಥಿಯನ್ನು "ಛತ್ತೀಸ್ಗಢದ ಕೀರ್ತಿ ಹೆಚ್ಚಿಸಿದ Gen Z " ಎಂದು ಬಣ್ಣಿಸಲಾಗಿತ್ತು. ಮುಂಬರುವ ದಿನಗಳಲ್ಲಿ BJP ಐಟಿ ಸೆಲ್ ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದಕ್ಕೆ ಈ ಪೋಸ್ಟ್ ಸ್ಪಷ್ಟ ಉದಾಹರಣೆಯಾಗಿದೆ.
BJP ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಕೈಗೊಂಡ ಪಕ್ಷದ ಕೇಂದ್ರೀಯ ಪದಾಧಿಕಾರಿಗಳ ಪುನರ್ರಚನೆಯ ಭಾಗವಾಗಿ ಮ್ಹಸ್ಕೆ ಅವರನ್ನು ನೇಮಕ ಮಾಡಲಾಗಿದೆ. ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಂಚಾಲಕ ಹುದ್ದೆಯಿಂದ ಅಮಿತ್ ಮಾಳವೀಯ ಅವರನ್ನು ತೆಗೆದುಹಾಕಿ, ಆ ಜಾಗಕ್ಕೆ ಮ್ಹಸ್ಕೆ ಅವರನ್ನು ಕರೆತಂದದ್ದು ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಈ ಪುನರ್ರಚನೆಯಲ್ಲಿ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾಗಿ ಪ್ರೀತಿ ಗಾಂಧಿ, ಅಲೋಕ್ ಭಟ್ ಮತ್ತು ಅರುಣ್ ಯಾದವ್ ಅವರಂತಹ ಪರಿಚಿತ ವ್ಯಕ್ತಿಗಳ ಜೊತೆಗೆ ಶಿವಾನಂದ್ ದ್ವಿವೇದಿ ಅವರಂತಹ ಹೊಸ ಮುಖಕ್ಕೂ ಅವಕಾಶ ನೀಡಲಾಗಿದೆ.
►BJP 'ವಾರ್ ರೂಮ್' ಅನುಭವಿ, ನಬಿನ್ ಆಪ್ತ ಮ್ಹಸ್ಕೆ
2009ರಿಂದಲೇ ಪಕ್ಷದ ಸೇವೆಯಲ್ಲಿ ತೊಡಗಿಸಿಕೊಂಡವರು ಮ್ಹಸ್ಕೆ. ಛತ್ತೀಸ್ಗಢ BJP ಐಟಿ ಸೆಲ್ ರಾಜ್ಯ ಸಂಚಾಲಕ ಮತ್ತು ಅವರ ಆಪ್ತ ಸುನಿಲ್ ಪಿಳ್ಳೈ ಪ್ರಕಾರ, ಮ್ಹಸ್ಕೆ 2009ರಿಂದ 2018ರವರೆಗೆ ಛತ್ತೀಸ್ಗಢ ಐಟಿ ಸೆಲ್ ನ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.
ರಾಜ್ಯ ಐಟಿ ಸೆಲ್ ಸಂಚಾಲಕರಾಗಿ 2013ರ ವಿಧಾನಸಭಾ ಚುನಾವಣೆಯಲ್ಲಿ ಮ್ಹಸ್ಕೆ ಪ್ರಮುಖ ಪಾತ್ರ ವಹಿಸಿದ್ದರು. 2013ರ 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿಯ ಪ್ರಕಾರ, BJP ನಗರ ಪ್ರದೇಶಗಳಲ್ಲಿ ಫೇಸ್ ಬುಕ್ ಮತ್ತು ವಾಟ್ಸಾಪ್ ಮೇಲೆ ಹೆಚ್ಚಿನ ಗಮನ ಹರಿಸಿ, ತನ್ನ ಆನ್ಲೈನ್ ಪ್ರಚಾರವನ್ನು ರೂಪಿಸಲು ತಂತ್ರಜ್ಞರನ್ನು ಕರೆತಂದಿತ್ತು. ಇಂಟರ್ನೆಟ್ ಸಂಪರ್ಕ ಕಡಿಮೆಯಿದ್ದ ಪ್ರದೇಶಗಳಲ್ಲಿ ಮತದಾರರನ್ನು ತಲುಪಲು ವಾಯ್ಸ್ ಕಾಲ್ ಗಳನ್ನು ಬಳಸುವುದಾಗಿ ಅವರು ತಿಳಿಸಿದ್ದರು.
2014ರ ಮಾರ್ಚ್ ವೇಳೆಗೆ, ಛತ್ತೀಸ್ಗಢದಾದ್ಯಂತ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು ಹೈಟೆಕ್ ಕಾಲ್ ಸೆಂಟರ್ ನಡೆಸುವಲ್ಲಿ ಅವರು ನಿರತರಾಗಿದ್ದರು. ಕಾರ್ಯಕರ್ತರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮತ್ತು ಮತದಾರರನ್ನು ತಲುಪಲು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮ್ಹಸ್ಕೆ ಹೇಳಿದ್ದರು.
2018ರ ವಿಧಾನಸಭಾ ಚುನಾವಣೆಗೆ ಮುನ್ನ ಮ್ಹಸ್ಕೆ BJPಯ ಕೆಳಹಂತದ ಸಾಮಾಜಿಕ ಜಾಲತಾಣ ಜಾಲವನ್ನು ವಿಸ್ತರಿಸುವುದನ್ನು ಮುಂದುವರಿಸಿದರು. ಬೆಂಬಲಿಗರನ್ನು "ಸಾಮಾಜಿಕ ಜಾಲತಾಣ ಸ್ವಯಂಸೇವಕರು" ಎಂದು ನೇಮಕ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ ಹಾಗೂ ವಿಭಾಗವಾರು ವಾಟ್ಸಾಪ್ ಗ್ರೂಪ್ ಗಳ ಮೂಲಕ ಸಂಘಟಿಸಲಾಗುತ್ತಿದೆ ಎಂದು 2018ರಲ್ಲಿ 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿತ್ತು. ಸ್ವಯಂಸೇವಕರು ಪಕ್ಷದ "ವಿಚಾರಗಳು ಮತ್ತು ಆಶಯಗಳಿಗೆ" ಪೂರಕವಾಗಿರುವವರೆಗೆ ಸ್ವಂತ ಸಂದೇಶಗಳನ್ನು ರಚಿಸಲು ಅವಕಾಶ ನೀಡಲಾಗುವುದು ಎಂದು ಮ್ಹಸ್ಕೆ ತಿಳಿಸಿದ್ದರು. ನಂತರ 2018ರಲ್ಲಿ ಅವರು BJP ವಕ್ತಾರರಾಗಿ ಮಾಧ್ಯಮ ಸಂಯೋಜನೆಯ ಜವಾಬ್ದಾರಿಯನ್ನೂ ವಹಿಸಿಕೊಂಡರು.
ಮ್ಹಸ್ಕೆ ತಮ್ಮೊಂದಿಗೆ ಮೊದಲಿನಿಂದಲೂ ಕೆಲಸ ಮಾಡಿದ ಜನರ ತಂಡವನ್ನು ಕಟ್ಟಿದ್ದರು ಹಾಗೂ ಸಾಮಾನ್ಯವಾಗಿ ಹೊರಗುತ್ತಿಗೆ ನೀಡಲಾಗುತ್ತಿದ್ದ ಹಲವು ಚುನಾವಣೆ ಸಂಬಂಧಿತ ಕೆಲಸಗಳನ್ನು ಪಕ್ಷದ ಒಳಗಿನಿಂದಲೇ ನಿರ್ವಹಿಸುವಂತೆ ಮಾಡಿದ್ದರು ಎಂದು ಪಿಳ್ಳೈ 'ನ್ಯೂಸ್ಲಾಂಡ್ರಿ'ಗೆ ತಿಳಿಸಿದ್ದಾರೆ. "ಬೂತ್ ನಿರ್ವಹಣೆಯಿಂದ ಹಿಡಿದು ಉನ್ನತ ಮಟ್ಟದವರೆಗೆ ಅವರು ಅತ್ಯುತ್ತಮ ಮ್ಯಾನೇಜರ್" ಎಂದು ಪಿಳ್ಳೈ ಬಣ್ಣಿಸಿದ್ದಾರೆ. ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ BJP ಅಧ್ಯಕ್ಷ ನಬಿನ್ ಅವರ ಮಾರ್ಗದರ್ಶನದಲ್ಲೂ ಮ್ಹಸ್ಕೆ ಕೆಲಸ ಮಾಡಿದ್ದಾರೆ ಎಂದು ಪಿಳ್ಳೈ ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ಮ್ಹಸ್ಕೆ ಅವರ ಕೆಲಸವು ಡಿಜಿಟಲ್ ಮೂಲಸೌಕರ್ಯ ನಿರ್ಮಾಣ, ರಾಜಕೀಯ ಸಂದೇಶ ರವಾನೆ ಮತ್ತು ಚುನಾವಣಾ ನಿರ್ವಹಣೆಗಳನ್ನು ಒಳಗೊಂಡಿತ್ತು. ಕ್ಷೇತ್ರ ಮಟ್ಟದ ಫೇಸ್ ಬುಕ್ ಪುಟಗಳು, ವಾಟ್ಸಾಪ್ ನೆಟ್ವರ್ಕ್ಗಳು ಮತ್ತು ಕಾಲ್ ಸೆಂಟರ್ ಗಳಿಂದ ಪ್ರಾರಂಭವಾದ ಕೆಲಸವು ನಂತರ ಸ್ವಯಂಸೇವಕರ ಸಂಘಟಿತ ಜಾಲವಾಗಿ ಮತ್ತು ರಾಜಕೀಯ ಸಂವಹನವಾಗಿ ಬದಲಾಯಿತು ಎಂದು ಪಿಳ್ಳೈ ವಿವರಿಸಿದರು. ಛತ್ತೀಸ್ಗಢ ಹೊರತುಪಡಿಸಿ, ಗೋವಾ (2022), ಉತ್ತರ ಪ್ರದೇಶ (2022) ಮತ್ತು ಬಿಹಾರ (2025) ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಅವರು ಪಕ್ಷದ ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿದ್ದರು.
ಆರ್ಎಸ್ಎಸ್ ಜೊತೆ ಆಳವಾದ ಸಂಬಂಧ ಹೊಂದಿರುವ ಕುಟುಂಬದಿಂದ ಬಂದ ಮ್ಹಸ್ಕೆ, ಸುಳ್ಳು ಅಥವಾ ದಾರಿತಪ್ಪಿಸುವ ಪ್ರಚಾರಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು ಮತ್ತು BJPಯ ಸಾಧನೆಗಳನ್ನು ಎತ್ತಿಹಿಡಿಯಲು ಒತ್ತು ನೀಡುತ್ತಿದ್ದರು ಎಂದು ಪಿಳ್ಳೈ ಹೇಳಿದ್ದಾರೆ. "ಅವರು ನಕಲಿ ಪ್ರಚಾರದ ವಿರುದ್ಧವಿದ್ದು, 'ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಜನರಿಗೆ ತೋರಿಸಿ' ಎಂದು ಯಾವಾಗಲೂ ಹೇಳುತ್ತಾರೆ" ಎಂದು ಪಿಳ್ಳೈ ನೆನಪಿಸಿಕೊಂಡಿದ್ದಾರೆ.
ನಕಲಿ ಪ್ರಚಾರಗಳ ವಿರುದ್ಧ ಹೋರಾಡುವುದಾಗಿ ಮ್ಹಸ್ಕೆ ಹೇಳಿಕೊಂಡಿದ್ದರೂ, ಅವರದೇ ಖಾತೆಯಲ್ಲಿದ್ದ ಹಳೆಯ ಪೋಸ್ಟ್ ಗಳು ಸುರಕ್ಷಿತವಾಗಿರಲಿಲ್ಲ ಎಂಬುದು ಕಂಡುಬಂದಿದೆ. ಮ್ಹಸ್ಕೆ ಅವರ ನೇಮಕವಾದ ನಂತರ ಕೇವಲ 24 ಗಂಟೆಗಳಲ್ಲಿ ಅವರ '@deepakmhaskey' ಖಾತೆಯಿಂದ 1,342 ಪೋಸ್ಟ್ ಗಳನ್ನು ತೆಗೆದುಹಾಕಲಾಗಿದೆ ಎಂದು 'ಆಲ್ಟ್ ನ್ಯೂಸ್' ಪತ್ತೆಹಚ್ಚಿದೆ. ಆಗಸ್ಟ್ 17ರ ಸಂಜೆ 5:19ಕ್ಕೆ 6,905ರಷ್ಟಿದ್ದ ಪೋಸ್ಟ್ ಗಳ ಸಂಖ್ಯೆ ಮರುದಿನಕ್ಕೆ 5,563ಕ್ಕೆ ಕುಸಿದಿತ್ತು.
►ಪ್ರೀತಿ ಗಾಂಧಿ BJP ರಾಷ್ಟ್ರೀಯ ಸೋಷಿಯಲ್ ಮೀಡಿಯಾ ತಂಡಕ್ಕೆ ಬಂದಿದ್ದು ಹೇಗೆ?
ಪ್ರೀತಿ ಗಾಂಧಿ ಎಕ್ಸ್ನಲ್ಲಿ '@MrsGandhi' ಎಂಬ ಖಾತೆಯಿಂದ ಚಿರಪರಿಚಿತರಾಗಿದ್ದಾರೆ. 2013ರಿಂದ ಮಹಾರಾಷ್ಟ್ರ BJP ಐಟಿ ಸೆಲ್ ನ ಸದಸ್ಯೆಯಾಗಿದ್ದ ಅವರನ್ನು 2018ರಲ್ಲಿ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಂಚಾಲಕಿಯಾಗಿ ನೇಮಿಸಲಾಯಿತು. ಇತ್ತೀಚಿನ ನೇಮಕಾತಿಯವರೆಗೆ ಅವರು ಇದೇ ಹುದ್ದೆಯಲ್ಲಿದ್ದರು. ಆದರೆ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಹ-ಸಂಚಾಲಕಿಯಾಗಿ ನೇಮಕಗೊಂಡ ನಂತರ, ಆಗಸ್ಟ್ 21ರ ವೇಳೆಗೆ ಅವರ ಎಕ್ಸ್ ಖಾತೆಯನ್ನು ಡಿಲೀಟ್ ಮಾಡಲಾಗಿದೆ.
ಡಿಲೀಟ್ ಆಗಿರುವ ಎಕ್ಸ್ ಖಾತೆಯ ಕುರಿತು ಪ್ರತಿಕ್ರಿಯೆ ಕೋರಿ 'ನ್ಯೂಸ್ಲಾಂಡ್ರಿ' ಸಂಸ್ಥೆಯು ಪ್ರೀತಿ ಗಾಂಧಿ ಅವರನ್ನು ಸಂಪರ್ಕಿಸಿದ್ದು, ಈ ವರದಿ ಪ್ರಕಟವಾಗುವವರೆಗೆ ಪ್ರತಿಕ್ರಿಯೆ ಬಂದಿಲ್ಲ.
2013ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ಅವರ ಪ್ರಮುಖ ಬೆಂಬಲಿಗರಾಗಿ ಪ್ರೀತಿ ಗಾಂಧಿ ಗುರುತಿಸಿಕೊಂಡರು. ನಂತರ ಅವರನ್ನು ಮಹಾರಾಷ್ಟ್ರ BJPಯ ಸಂವಹನ ವಿಭಾಗಕ್ಕೆ ಸೇರ್ಪಡೆಗೊಳಿಸಲಾಯಿತು. ಪ್ರೀತಿ ಅವರು ಗೃಹಿಣಿಯಾಗಿದ್ದು, ಮೋದಿ ಮತ್ತು BJPಗೆ ನೀಡುತ್ತಿದ್ದ ತೀವ್ರ ಬೆಂಬಲದ ಮೂಲಕ ದೊಡ್ಡ ಮಟ್ಟದ ಫಾಲೋವರ್ಸ್ ಗಳನ್ನು ಗಳಿಸಿದ್ದರು. ಇದನ್ನು ಗಮನಿಸಿದ ಪಕ್ಷದ ಸಂವಹನ ವಿಭಾಗವು ಅವರನ್ನು ಸಂಪರ್ಕಿಸಿ ಸ್ವಯಂಸೇವಕಿಯಾಗಿ ಸೇರಿಸಿಕೊಂಡಿತ್ತು ಎಂದು 'ದಿ ಎಕನಾಮಿಕ್ ಟೈಮ್ಸ್' ವರದಿ ತಿಳಿಸಿದೆ.
ಗಾಂಧಿ ಅವರ ಸಾಮಾಜಿಕ ಜಾಲತಾಣದ ಚಟುವಟಿಕೆಗಳು ಪದೇ ಪದೇ ಪರಿಶೀಲನೆಗೆ ಒಳಪಟ್ಟಿವೆ. 2012ರ ಅಕ್ಟೋಬರ್ 21ರ ಟ್ವೀಟ್ ಒಂದರ ಸ್ಕ್ರೀನ್ಶಾಟ್ನಲ್ಲಿ ಅವರು, "ಗಾಂಧಿ ಎಂಬ ಸರ್ ನೇಮ್ ಒಂದು ಬೈಗುಳದಂತಿದೆ. ಅದರ ಬದಲು ನಾನು ಮೋದಿ ಅಥವಾ ಗೋಡ್ಸೆ ಆಗಲು ಬಯಸುತ್ತಿದ್ದೆ!!" ಎಂದು ಬರೆದಿದ್ದರು. ಇದಕ್ಕೂ ಎಂಟು ದಿನಗಳ ಮುಂಚಿನ ಸ್ಕ್ರೀನ್ಶಾಟ್ನಲ್ಲಿ ಅವರು ತಮ್ಮನ್ನು "ನಾಥೂರಾಮ್ ಗೋಡ್ಸೆಯ ತೀವ್ರ ಅಭಿಮಾನಿ" ಎಂದು ಕರೆದುಕೊಂಡಿದ್ದರು.
ಅವರ ನೇಮಕಾತಿಯ ನಂತರ ಈ ಸ್ಕ್ರೀನ್ಶಾಟ್ಗಳು ವೈರಲ್ ಆಗಿವೆ. ಹೊಸ ಹುದ್ದೆ ಸಿಕ್ಕ ಬೆನ್ನಲ್ಲೇ ಅವರ ಎಕ್ಸ್ ಖಾತೆ ಕಣ್ಮರೆಯಾಗಿದೆ.
(Screenshot courtesy X/Mohammed Zubair)
2020ರಲ್ಲಿ ಬಲ್ಲಭ್ಗಢದ ಕಾಲೇಜಿನ ಹೊರಗೆ ಮುಸ್ಲಿಂ ಯುವಕನಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ವಿದ್ಯಾರ್ಥಿನಿ ನಿಖಿತಾ ತೋಮರ್ ಸಾವು ಪ್ರಕರಣದಲ್ಲಿ, ಪ್ರೀತಿ ಗಾಂಧಿ ಸೇರಿದಂತೆ BJPಯ ಪ್ರಮುಖ ನಾಯಕರು "ಲವ್ ಜಿಹಾದ್" ಪ್ರಚಾರವನ್ನು ಮಾಡಿದ್ದರು ಎಂದು 'ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್' (CSOH) ಸಂಶೋಧನಾ ನಿರ್ದೇಶಕಿ ಏವಿಯನ್ ಲೈಡಿಗ್ 2021ರ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. 2020ರಲ್ಲಿ 'ಲೋಕಮತ್' ಪ್ರಕಟಿಸಿದ ವರದಿಯ ಪ್ರಕಾರ, ಗಾಂಧಿ ಅವರು 2020ರ ಅಕ್ಟೋಬರ್ 27ರಂದು ಈ ಕುರಿತು ಟ್ವೀಟ್ ಮಾಡಿದ್ದರು.
ಆದರೆ ಈ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಬಲವಂತದ ಮತಾಂತರ ಅಥವಾ ಇತರ ಸಂಬಂಧಿತ ಅಪರಾಧಗಳ ಯಾವುದೇ ಕಾಯ್ದೆಗಳನ್ನು ಸೇರಿಸಲಾಗಿಲ್ಲ ಎಂದು 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಗಾಂಧಿ ಹಂಚಿಕೊಂಡ ಹಲವು ಮಾಹಿತಿಗಳು ನಂತರ ಸುಳ್ಳು ಅಥವಾ ದಾರಿತಪ್ಪಿಸುವಂತದ್ದು ಎಂದು ಸಾಬೀತಾದ ಉದಾಹರಣೆಗಳೂ ಇವೆ. 2014ರ ಮಾರ್ಚ್ ನಲ್ಲಿ, ವಿಕಿಲೀಕ್ಸ್/ಜೂಲಿಯನ್ ಅಸ್ಸಾಂಜ್ ಅವರು ನರೇಂದ್ರ ಮೋದಿ ಅವರನ್ನು "ಭ್ರಷ್ಟಾಚಾರ ರಹಿತ ನಾಯಕ" ಎಂದು ಬೆಂಬಲಿಸಿದ್ದಾರೆ ಎಂಬ ಹುಸಿ ವರದಿಯನ್ನು ಅವರು ಹಂಚಿಕೊಂಡಿದ್ದರು. ಆದರೆ ಅಸ್ಸಾಂಜ್ ಅವರು ಮೋದಿಯವರನ್ನು ಬೆಂಬಲಿಸಿಲ್ಲ ಎಂದು ವಿಕಿಲೀಕ್ಸ್ ನಂತರ ಸ್ಪಷ್ಟಪಡಿಸಿತ್ತು.
2021ರ ನವೆಂಬರ್ನಲ್ಲಿ, ಮುಸ್ಲಿಂ ಧರ್ಮಗುರುವೊಬ್ಬರು ಆಹಾರಕ್ಕೆ "ಉಗುಳುತ್ತಿದ್ದಾರೆಯೇ" ಎಂದು ಪ್ರಶ್ನಿಸುವ ವೀಡಿಯೋ ಒಂದನ್ನು ಅವರು ಹಂಚಿಕೊಂಡಿದ್ದರು. ಈ ವೀಡಿಯೋ ಕೇರಳದ ಮುಸ್ಲಿಂ ಸಮುದಾಯದ ಪ್ರಸಾದ ವಿತರಣೆಗೆ ಸಂಬಂಧಿಸಿದ್ದು ಹಾಗೂ ಕುರಾನ್ ವಾಕ್ಯಗಳನ್ನು ಪಠಿಸಿದ ನಂತರ ಆಶೀರ್ವಾದದ ಸಂಕೇತವಾಗಿ ಆಹಾರದ ಮೇಲೆ ಊದುತ್ತಿರುವುದನ್ನು 'ಆಲ್ಟ್ ನ್ಯೂಸ್' ಸ್ಪಷ್ಟಪಡಿಸಿತ್ತು.
2021ರ ಪಶ್ಚಿಮ ಬಂಗಾಳದ ಚುನಾವಣೆ ನಂತರದ ಹಿಂಸಾಚಾರದ ಸಮಯದಲ್ಲಿ, ಟಿಎಂಸಿ ಚುನಾವಣಾ ಗೀತೆಗೆ ಕತ್ತಿ ಬೀಸುತ್ತಾ ಕುಣಿಯುತ್ತಿರುವ ವೀಡಿಯೋ ಒಂದನ್ನು ಗಾಂಧಿ ಹಂಚಿಕೊಂಡಿದ್ದರು. ಆದರೆ ಅದು 2020ರಲ್ಲಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾದ ವೀಡಿಯೋ ಆಗಿದ್ದು, ಅದಕ್ಕೆ ಬೇರೆ ಸಂಗೀತವನ್ನು ಜೋಡಿಸಿ ಎಡಿಟ್ ಮಾಡಲಾಗಿತ್ತು ಎಂದು 'ನ್ಯೂಸ್ಲಾಂಡ್ರಿ' ವರದಿ ಮಾಡಿತ್ತು. ವೀಡಿಯೋ ನಕಲಿ ಎಂದು ಸಾಬೀತಾದ ಮೇಲೆಯೂ ಗಾಂಧಿ ತಮ್ಮ ಪೋಸ್ಟ್ ಅನ್ನು ತೆಗೆದುಹಾಕಿರಲಿಲ್ಲ.
ಅವರ ಆನ್ಲೈನ್ ಚಟುವಟಿಕೆಗಳು BJP ರಾಜಕೀಯ ಮತ್ತು ಧಾರ್ಮಿಕ ಚರ್ಚೆಗಳ ಸಮ್ಮಿಶ್ರಣವಾಗಿ ಮುಂದುವರಿದಿವೆ. 'ದಿ ಹಿಂದೂ' ವರದಿಯ ಪ್ರಕಾರ, 2025ರ ನವೆಂಬರ್ನಲ್ಲಿ ಹಂಚಿಕೊಂಡ ಪೋಸ್ಟ್ ಒಂದರಲ್ಲಿ, ಭಾರತೀಯ ಕ್ರಿಕೆಟ್ ಪಟು ಜೆಮಿಮಾ ರೊಡ್ರಿಗಸ್ ಭಾರತವನ್ನು ಪ್ರತಿನಿಧಿಸುವ ಚರ್ಚೆಯಲ್ಲಿ ಧರ್ಮವನ್ನು ತಂದಿದ್ದಾರೆ ಎಂದು ಗಾಂಧಿ ಟೀಕಿಸಿದ್ದರು. ಆ ಪೋಸ್ಟ್ನಲ್ಲಿ, ರೊಡ್ರಿಗಸ್ ಭಾರತದ ಜೆರ್ಸಿ ಧರಿಸಿದಾಗ ಭಾರತೀಯರನ್ನು ಪ್ರತಿನಿಧಿಸುತ್ತಾರೆಯೇ ಹೊರತು "ನಿಮ್ಮ ಚರ್ಚ್ ಅನ್ನು ಅಲ್ಲ" ಎಂದು ಕಾಮೆಂಟ್ ಮಾಡಿದ್ದರು.
►2022ರಲ್ಲಿ ಹುದ್ದೆಯಿಂದ ವಜಾ, 2026ರಲ್ಲಿ ಮತ್ತೆ ವಾಪಸ್
ಅರುಣ್ ಯಾದವ್ ಅಕ್ಟೋಬರ್ 2018ರಲ್ಲಿ BJP ಸೇರಿ ಹರಿಯಾಣ ಐಟಿ ಸೆಲ್ ಮುಖ್ಯಸ್ಥರಾಗುವ ಮೊದಲು ಬಹುರಾಷ್ಟ್ರೀಯ ಮತ್ತು ಖಾಸಗಿ ಸಲಹಾ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.
2014ರ ನಂತರ ಡಿಜಿಟಲ್ ಪ್ರಚಾರಕ್ಕೆ ಸಿಕ್ಕ ಪ್ರಾಮುಖ್ಯತೆ ಮತ್ತು ರಾಜಕೀಯದತ್ತ ತಮಗಿದ್ದ ಆಸಕ್ತಿಯಿಂದಾಗಿ ತಾವು ಸಲಹಾ ಉದ್ಯೋಗ ತೊರೆದು ಪಕ್ಷಕ್ಕೆ ಸೇರಿದ್ದಾಗಿ ಅವರು 'ದಿ ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದರು. 2019ರ ಜೀಂದ್ ವಿಧಾನಸಭಾ ಉಪಚುನಾವಣೆ ಅವರ ಮೊದಲ ಪ್ರಮುಖ ಜವಾಬ್ದಾರಿಯಾಗಿದ್ದು, ಇದರಲ್ಲಿ BJP ಅಭ್ಯರ್ಥಿ ಕ್ರಿಷನ್ ಮಿಧ್ಹಾ ಗೆಲುವು ಸಾಧಿಸಿದ್ದರು. ತರುವಾಯ ತಮ್ಮ ತಂಡವು ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ಚುನಾವಣೆಗಳಲ್ಲಿ ಡಿಜಿಟಲ್ ಪ್ರಚಾರವನ್ನು ಸಂಯೋಜಿಸಿತು ಎಂದು ಯಾದವ್ ತಿಳಿಸಿದ್ದಾರೆ.
ಬೆಂಬಲಿಗರನ್ನು BJPಯ ಕಾರ್ಯಸೂಚಿಯೊಂದಿಗೆ ಸಕ್ರಿಯವಾಗಿರಿಸುವುದು ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಸಂಘಟಿಸುವುದು ಅವರ ಕೆಲಸವಾಗಿತ್ತು ಎಂದು 2022ರ 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಹೇಳಿದೆ. ಹರಿಯಾಣದಲ್ಲಿ ವಿಶಾಲವಾದ ಡಿಜಿಟಲ್ ಜಾಲವನ್ನು ನಿರ್ಮಿಸುವುದೂ ಅವರ ಕೆಲಸದ ಭಾಗವಾಗಿತ್ತು. ಆದರೆ ಅವರ ರಾಜಕೀಯ ಸಂದೇಶಗಳು ಹೆಚ್ಚಾಗಿ ಸಾಮಾನ್ಯ ಪಕ್ಷದ ಸಂವಹನದ ಗಡಿಯನ್ನು ದಾಟುತ್ತಿದ್ದವು. ಹಿಂದೂ ದೇವತೆ ಕಾಳಿಯನ್ನು ಅವಮಾನಿಸಿದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಹಾಗೂ ಹಿಂದೂ ದೇವತೆಗಳಿಗೆ ಅವಮಾನ ಮಾಡಿದ ಆರೋಪದ ಮೇಲೆ ಕಾಮಿಡಿಯನ್ ಮುನಾವರ್ ಫಾರೂಕಿ ವಿರುದ್ಧ ಅವರು ದೂರು ದಾಖಲಿಸಿದ್ದರು.
2017ರ ಜುಲೈನಲ್ಲಿ ಹಳೆಯ ಸಾಮಾಜಿಕ ಜಾಲತಾಣ ಪೋಸ್ಟ್ ಒಂದನ್ನು ಆಧರಿಸಿ ಅವರ ಬಂಧನಕ್ಕೆ ಆಗ್ರಹಿಸಿ ಅಭಿಯಾನ ನಡೆದ ನಂತರ, 2022ರ ಜುಲೈ ನಲ್ಲಿ ಯಾದವ್ ಅವರ ಹರಿಯಾಣ ಐಟಿ ಸೆಲ್ ಮುಖ್ಯಸ್ಥ ಹುದ್ದೆ ಕೊನೆಗೊಂಡಿತು. ಹಿಂದೂ ದೇವತೆಗಳನ್ನು ಮದ್ಯಕ್ಕೆ ಲಿಂಕ್ ಮಾಡಿದ್ದರೆನ್ನಲಾದ ಸಮಾಜವಾದಿ ಪಕ್ಷದ ಮಾಜಿ ಸಂಸದರ ಹೇಳಿಕೆಗೆ ಪ್ರತಿಯಾಗಿ ತಾವು ಆ ಪೋಸ್ಟ್ ಮಾಡಿದ್ದಾಗಿ ಅವರು ಪ್ರತಿಪಾದಿಸಿದ್ದರು.
ಅವರ ಸಾಮಾಜಿಕ ಜಾಲತಾಣ ಖಾತೆಯು ದಾರಿತಪ್ಪಿಸುವ ಮಾಹಿತಿಗಳಿಗಾಗಿ ಪದೇ ಪದೇ ಗುರುತಿಸಲ್ಪಟ್ಟಿದೆ. ಅವರ ಪುಟಗಳಲ್ಲಿದ್ದ ಹಲವು ಪೋಸ್ಟ್ ಗಳು ದಾರಿತಪ್ಪಿಸುವಂತಿದ್ದವು ಎಂದು 'ದಿ ಕ್ವಿಂಟ್' ವರದಿ ಮಾಡಿದೆ. ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರಕ್ಕೆ ಪ್ರಾರ್ಥನೆ ಸಲ್ಲಿಸಿದ ನಂತರ ಶಾರುಖ್ ಖಾನ್ ಉಗುಳಿದ್ದಾರೆ ಎಂದು ಬಿಂಬಿಸುವ ವೀಡಿಯೋ, ಕಾಂಗ್ರೆಸ್ ನಾಯಕ ರಶೀದ್ ಆಲ್ವಿ ಅವರ ವೀಡಿಯೋವನ್ನು ಕತ್ತರಿಸಿ ಮೂಲ ಸಂದರ್ಭವನ್ನು ಮರೆಮಾಚಿದ್ದು, ಹಾಗೂ ರಾಹುಲ್ ಗಾಂಧಿ ಮಾಸ್ಕ್ ಧರಿಸಿಯೇ ಆಹಾರ ಸೇವಿಸುತ್ತಿದ್ದಾರೆ ಎಂದು ತಪ್ಪಾಗಿ ತೋರಿಸುವ ಚಿತ್ರಗಳು ಇದರಲ್ಲಿ ಸೇರಿವೆ.
2023ರ ಏಪ್ರಿಲ್ ನಲ್ಲಿ, ಭಿವಾನಿಯಲ್ಲಿರುವ ಇಸ್ಲಾಮಿಕ್ ದರ್ಗಾ ಮತ್ತು ಅದೇ ಸ್ಥಳದಲ್ಲಿದ್ದ ಹನುಮಂತನ ವಿಗ್ರಹದ ಫೋಟೊಗಳನ್ನು ಹಂಚಿಕೊಂಡಿದ್ದ ಯಾದವ್, ಈ ಘಟನೆಯು ಕೆಲವೇ ದಿನಗಳ ಮುಂಚಷ್ಟೇ ನಡೆದಿದೆ ಎಂಬಂತೆ ಬಿಂಬಿಸಿದ್ದರು ಎಂದು 'ನ್ಯೂಸ್ಲಾಂಡ್ರಿ' ವರದಿ ಮಾಡಿತ್ತು. ಆದರೆ ಆ ಫೋಟೊಗಳು 2022ರ ಏಪ್ರಿಲ್ ನಲ್ಲಿ ತೆಗೆದದ್ದಾಗಿತ್ತು. ಬಜರಂಗದಳದ ಕಾರ್ಯಕರ್ತರು ಮಝರ್ ಅನ್ನು ಕೆಡವಿ ಅಲ್ಲಿ ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. 'ನ್ಯೂಸ್ಲಾಂಡ್ರಿ' ಜೊತೆ ಮಾತನಾಡಿದ ನಂತರ, ಸ್ಥಳೀಯ ಗುಂಪಿನಿಂದ ತನಗೆ ಮಾಹಿತಿ ಬಂದಿದ್ದರಿಂದ "ಮಾಹಿತಿಗಾಗಿ ಮಾತ್ರ" ಪೋಸ್ಟ್ ಮಾಡಿದ್ದಾಗಿ ಯಾದವ್ ಆರಂಭದಲ್ಲಿ ಹೇಳಿ, ನಂತರ ತಕ್ಷಣವೇ ಆ ಪೋಸ್ಟ್ ಅನ್ನು ತೆಗೆದುಹಾಕಿದ್ದರು.
(Screenshot courtesy Newslaundry report)
ಸಾಮಾಜಿಕ ಜಾಲತಾಣದ ಪೋಸ್ಟ್ ಗಳ ವಿವಾದದಿಂದಾಗಿ ಐಟಿ ಸೆಲ್ ನಾಯಕತ್ವದ ಹುದ್ದೆಯಿಂದ ತೆಗೆದುಹಾಕಲ್ಪಟ್ಟಿದ್ದ ಯಾದವ್ ಅವರಿಗೆ ಈಗ ಮತ್ತೆ ಹೊಸ ಜವಾಬ್ದಾರಿ ನೀಡಲಾಗಿದೆ. ಹಲವು ಫ್ಯಾಕ್ಟ್-ಚೆಕರ್ ಗಳು ಅವರು ಹಂಚಿಕೊಂಡ ನಕಲಿ ಮತ್ತು ದಾರಿತಪ್ಪಿಸುವ ಮಾಹಿತಿಗಳನ್ನು ಬಹಿರಂಗಪಡಿಸಿರುವುದರಿಂದ ಈ ಬೆಳವಣಿಗೆ ಪ್ರಮುಖ ಎನಿಸಿದೆ.
ಈ ಕುರಿತು ಪ್ರತಿಕ್ರಿಯೆ ಕೋರಿ 'ನ್ಯೂಸ್ಲಾಂಡ್ರಿ' ಸಂಸ್ಥೆಯು ಅವರನ್ನು ಸಂಪರ್ಕಿಸಿದ್ದು, ಇಲ್ಲಿಯವರೆಗೆ ಪ್ರತಿಕ್ರಿಯೆ ಬಂದಿಲ್ಲ.
►ಮೀಸಲಾತಿ ವಿರೋಧಿ, ಮುಸ್ಲಿಂ ವಿರೋಧಿ ಟ್ವೀಟ್ಗಳ ಇತಿಹಾಸ
ಅಲೋಕ್ ಭಟ್ ಅವರ ನೇಮಕವಾದ ಕೆಲವೇ ದಿನಗಳಲ್ಲಿ ಧರ್ಮ, ಮೀಸಲಾತಿ ಮತ್ತು ಐತಿಹಾಸಿಕ ವ್ಯಕ್ತಿಗಳ ಕುರಿತಾದ ಅವರ ಹಳೆಯ ಪೋಸ್ಟ್ ಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಖಾತೆಯೇ ಕಣ್ಮರೆಯಾಗಿದೆ. ಆಗಸ್ಟ್ 21ರ ವೇಳೆಗೆ ಅವರ ಎಕ್ಸ್ ಖಾತೆ ಕಣ್ಮರೆಯಾದ ನಂತರ, ಅವರ ಹಲವಾರು ಹಳೆಯ ಪೋಸ್ಟ್ ಗಳ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಉತ್ತರಾಖಂಡ ಮೂಲದ ಭಟ್, ರಾಜಕೀಯ ವಿಶ್ಲೇಷಕರಾಗಿ ಮತ್ತು ಬರಹಗಾರರಾಗಿ ಸಕ್ರಿಯರಾಗಿದ್ದರು. ಅವರ ಸಾಮಾಜಿಕ ಜಾಲತಾಣ ಖಾತೆಯು ಸಾಮಾನ್ಯ ಶೈಲಿಯ ಮೀಸಲಾತಿ ವಿರೋಧಿ, ಮುಸ್ಲಿಂ ವಿರೋಧಿ ಹೇಳಿಕೆಗಳು ಹಾಗೂ ಮಹಿಳಾ ವಿರೋಧಿ ಭಾಷೆಯ ಪೋಸ್ಟ್ ಗಳನ್ನು ಒಳಗೊಂಡಿತ್ತು. ಈ ಹೊಸ ನೇಮಕಾತಿಗೆ ಮುನ್ನ ಅವರು BJPಯಲ್ಲಿ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿರಲಿಲ್ಲ. ಆದರೆ ತಮ್ಮ ಅಭಿನಂದನಾ ಟ್ವೀಟ್ ನಲ್ಲಿ ನಿರ್ಗಮಿತ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಹೊಸದಾಗಿ ನೇಮಕಗೊಂಡ ಪ್ರತಿಯೊಬ್ಬರೊಂದಿಗೂ "ಕಳೆದ ಒಂದು ದಶಕದಿಂದ ನಿಕಟವಾಗಿ ಕೆಲಸ ಮಾಡಿದ ಹೆಮ್ಮೆ ನನಗಿದೆ" ಎಂದು ತಿಳಿಸಿದ್ದರು.
2012ರ ಪೋಸ್ಟ್ ಒಂದರಲ್ಲಿ ಭಟ್ ಮಹಿಳಾ ರಾಜಕಾರಣಿಯೊಬ್ಬರ ವಿರುದ್ಧ ನಿಂದನಾತ್ಮಕ ಮತ್ತು ಅಸಭ್ಯ ಭಾಷೆ ಬಳಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದು, ಅವರ ನೇಮಕವನ್ನು ಪ್ರಶ್ನಿಸಲಾಗುತ್ತಿದೆ. 2016ರ ಇನ್ನೊಂದು ಪೋಸ್ಟ್ನಲ್ಲಿ "ಮುಸ್ಲಿಂ ವೋಟ್ ಬ್ಯಾಂಕ್ ಮತ್ತು ಮೀಸಲಾತಿ" ಸೇರಿದಂತೆ ಹಲವು ಸಮಸ್ಯೆಗಳಿಗೆ "ಮತದಾನದ ಹಕ್ಕೇ ಮೂಲ ಕಾರಣ" ಎಂದು ಅವರು ಬರೆದಿದ್ದರು. "ಜಿಹಾದಿಸಂ ನಂತರ ಭಾರತವನ್ನು ಪೀಡಿಸುತ್ತಿರುವ ಎರಡನೇ ದೊಡ್ಡ ಕ್ಯಾನ್ಸರ್ ಮೀಸಲಾತಿ" ಎಂಬ ಅವರ ಮತ್ತೊಂದು ಪೋಸ್ಟ್ನ ಸ್ಕ್ರೀನ್ಶಾಟ್ ಕೂಡ ಹರಿದಾಡುತ್ತಿದೆ.
(Screenshot courtesy X/Mohammed Zubair)
ಪೃಥ್ವಿರಾಜ್ ಚೌಹಾಣ್ ಮತ್ತು ಇತರ ರಜಪೂತ ಐತಿಹಾಸಿಕ ವ್ಯಕ್ತಿಗಳ ಕುರಿತು ಅವರು ಮಾಡಿದ್ದ ಹಳೆಯ ಪೋಸ್ಟ್ ಗಳು ಕೂಡ ವೈರಲ್ ಆಗುತ್ತಿವೆ. ಈ ಪೋಸ್ಟ್ ರಜಪೂತ ಸಮುದಾಯದ ಸಾಮಾಜಿಕ ಜಾಲತಾಣ ಖಾತೆಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಕ್ರಿಯೆ ಕೋರಿ 'ನ್ಯೂಸ್ಲಾಂಡ್ರಿ' ಭಟ್ ಅವರನ್ನು ಸಂಪರ್ಕಿಸಿದರೂ, ಅವರು ಮಾತನಾಡಲು ನಿರಾಕರಿಸಿದರು.
BJP ಸಂಶೋಧಕ, ಲೇಖಕರಿಗೆ ಈಗ 'Gen Z'ಯನ್ನು ತಲುಪುವ ಜವಾಬ್ದಾರಿ
ಉತ್ತರ ಪ್ರದೇಶದ ದೇವರಿಯಾ ಮೂಲದ ಶಿವಾನಂದ್ ದ್ವಿವೇದಿ, ರಾಜಕೀಯ ಸಂಶೋಧನೆ, ಬರಹ ಮತ್ತು ಪಕ್ಷದ ಕೆಲಸದ ಹಿನ್ನೆಲೆಯೊಂದಿಗೆ BJPಯ ರಾಷ್ಟ್ರೀಯ ಸಾಮಾಜಿಕ ಜಾಲತಾಣ ತಂಡವನ್ನು ಸೇರಿದ್ದಾರೆ.
ಶ್ಯಾಮಾ ಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ನ 2021ರ ಪ್ರೊಫೈಲ್ ಪ್ರಕಾರ, ಅವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, 'ನ್ಯಾಷನಲಿಸ್ಟ್ ಆನ್ಲೈನ್' ವೆಬ್ ಪೋರ್ಟಲ್ ನ ಸಂಪಾದಕರಾಗಿ ಮತ್ತು ಹಿಂದಿ ದಿನಪತ್ರಿಕೆ, ನಿಯತಕಾಲಿಕಗಳ ಅಂಕಣಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ಮಾಧ್ಯಮಗಳ ಒಲವು, ಸಮಕಾಲೀನ ರಾಜಕೀಯ ಮತ್ತು ಮುಕ್ತ ಮಾರುಕಟ್ಟೆ ಅವರ ಸಂಶೋಧನಾ ಆಸಕ್ತಿಗಳಾಗಿವೆ.
ಫೌಂಡೇಶನ್ ಜೊತೆಗಿನ ಅವರ ಸಂಬಂಧ ಹಲವು ವರ್ಷಗಳಷ್ಟು ಹಳೆಯದು. 2017ರ ವಾರ್ಷಿಕ ವರದಿಯಲ್ಲಿ ದ್ವಿವೇದಿ ಅವರನ್ನು ಸಂಶೋಧನಾ ಸಹೋದ್ಯೋಗಿ ಎಂದು ಗುರುತಿಸಲಾಗಿದೆ. ನರೇಂದ್ರ ಮೋದಿ ಸರ್ಕಾರದ ಯೋಜನೆಗಳ ಕುರಿತು ಅಂದಿನ BJP ಅಧ್ಯಕ್ಷ ಅಮಿತ್ ಶಾ ಗೋರಖ್ಪುರದಲ್ಲಿ ಬಿಡುಗಡೆ ಮಾಡಿದ 'ಪರಿವರ್ತನ್ ಕಿ ಓರ್' ಪುಸ್ತಕದ ಸಹ-ಸಂಪಾದಕರಾಗಿಯೂ ಅವರು ಕೆಲಸ ಮಾಡಿದ್ದರು. ಪಕ್ಷದಲ್ಲಿ ಅಧಿಕೃತ ಜವಾಬ್ದಾರಿ ಸಿಗುವ ಮುಂಚಿನಿಂದಲೂ ತಾವು BJPಯೊಂದಿಗೆ ಸುದೀರ್ಘ ಸಂಬಂಧ ಹೊಂದಿರುವುದಾಗಿ ದ್ವಿವೇದಿ ತಿಳಿಸಿದ್ದಾರೆ.
ನೇಮಕಾತಿಯ ನಂತರ 'ನ್ಯೂಸ್ಲಾಂಡ್ರಿ' ಜೊತೆ ಮಾತನಾಡಿದ ಅವರು, ಬಾಲ್ಯದಿಂದಲೂ BJPಯೊಂದಿಗೆ ಸಂಪರ್ಕದಲ್ಲಿದ್ದು, ಕಳೆದ 12 ವರ್ಷಗಳಿಂದ ಪಕ್ಷದೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡಿರುವುದಾಗಿ ಹೇಳಿದರು. ತಾವು ಪಕ್ಷದ ಕಾರ್ಯಕರ್ತನಾಗಿ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಮತ್ತು ಉತ್ತರ ಪ್ರದೇಶ ಸೇರಿದಂತೆ BJP ಗೆಲುವು ಸಾಧಿಸಿದ ಹಲವು ರಾಜ್ಯಗಳಲ್ಲಿ ಪ್ರಚಾರ ನಡೆಸಿದ್ದಾಗಿ ತಿಳಿಸಿದರು.
ಶ್ಯಾಮಾ ಪ್ರಸಾದ್ ಮುಖರ್ಜಿ ಫೌಂಡೇಶನ್ನಲ್ಲಿ ಹಿರಿಯ ರಾಜಕೀಯ ಸಂಶೋಧಕರಾಗಿ ಮೂರು ಪುಸ್ತಕಗಳನ್ನು ಸಹಸಂಪಾದನೆ ಮಾಡಿದ್ದು, ಅಮಿತ್ ಶಾ ಅವರ ಜೀವನಚರಿತ್ರೆಯನ್ನು ಬರೆದಿರುವುದಾಗಿಯೂ ಅವರು ಹೇಳಿದರು. ಮ್ಹಸ್ಕೆ ಅವರ ನಾಯಕತ್ವದಲ್ಲಿ "ಒಳ್ಳೆಯ ಕೆಲಸ" ಮಾಡುವುದು ಮತ್ತು ಜೆನ್ ಝೀ ಯುವಜನತೆಯನ್ನು ತಲುಪುವುದು ತಮ್ಮ ಮುಖ್ಯ ಉದ್ದೇಶ ಎಂದು ದ್ವಿವೇದಿ ತಿಳಿಸಿದರು. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು 'ಪ್ರೈವೇಟ್' ಮಾಡಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, ತಾವು ಖಾತೆಯಲ್ಲಿ ಎಂದಿಗೂ ಹೆಚ್ಚು ಸಕ್ರಿಯವಾಗಿರಲಿಲ್ಲ ಎಂದಿದ್ದಾರೆ.
ದ್ವಿವೇದಿ ಅವರ ನೇಮಕದ ನಂತರ ಅವರ X ಖಾತೆ (@shiwadwivedi) ಮತ್ತೆ ಸಾರ್ವಜನಿಕರಿಗೆ ಲಭ್ಯವಾಗಿದೆ. ಆದರೆ ಅದರಲ್ಲಿದ್ದ ಪೋಸ್ಟ್ ಗಳ ಸಂಖ್ಯೆ 10,800ರಿಂದ 10,200ಕ್ಕೆ ಅಂದರೆ ಸುಮಾರು 600ರಷ್ಟು ಕಡಿಮೆಯಾಗಿದೆ ಎಂದು 'ಆಲ್ಟ್ ನ್ಯೂಸ್' ವರದಿ ಮಾಡಿದೆ. ಈ ಕುರಿತು ಕೇಳಿದಾಗ, ತಮ್ಮ ಖಾತೆಯಿಂದ ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.
ಪೋಸ್ಟ್ ಗಳ ಸಂಖ್ಯೆ ಕಡಿಮೆಯಾಗಿರುವುದು ಏನನ್ನು, ಯಾವಾಗ ಅಥವಾ ಏಕೆ ಡಿಲೀಟ್ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ. ಆದರೆ "ನಕಲಿ ಪ್ರಚಾರ"ದ ವಿರುದ್ಧ ಹೋರಾಡಲು ರಚಿಸಲಾದ ಈ ಹೊಸ ತಂಡವು, ಹೊಸ ಹುದ್ದೆಗಳನ್ನು ಪಡೆದ ಹಳೆಯ ಡಿಜಿಟಲ್ ಮುಖಗಳ ಮೇಲೆಯೇ ನಿಂತಿದೆ.
ಸೌಜನ್ಯ: newslaundry.com






