ಭದ್ರಾ ಅಭಯಾರಣ್ಯದ ಅಪರೂಪದ ಅತಿಥಿ ಕಪ್ಪು ಚಿರತೆ

ಚಿಕ್ಕಮಗಳೂರು: ಬಂಡಿಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಭದ್ರಾ ಹುಲಿ ಅಭಯಾರಣ್ಯದ ವ್ಯಾಪ್ತಿಯ ಲಕ್ಕವಳ್ಳಿ ಹಾಗೂ ಮುತ್ತೋಡಿ ಅಭಯಾರಣ್ಯಕ್ಕೆ ಪ್ರಾಣಿ ಪ್ರಿಯರು ದಾಂಗುಡಿ ಇಡುತ್ತಿದ್ದಾರೆ. ಅದರಲ್ಲೂ ನಿರಂತರವಾಗಿ ಕಳೆದೊಂದು ವಾರದಿಂದ ಕಪ್ಪು ಚಿರತೆ - ಚುಕ್ಕಿ ಚಿರತೆ ಗೋಚರಿಸುತ್ತಿರುವುದರಿಂದ ಸಹಜವಾಗಿಯೇ ಸಫಾರಿ ಪ್ರಿಯರ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ಕರ್ನಾಟಕದ ಪಶ್ಚಿಮ ಘಟ್ಟದ ಹೃದಯ ಭಾಗದಲ್ಲಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಅಪಾರ ವನ್ಯಜೀವಿಗಳ ಆವಾಸಸ್ಥಾನ. 500 ಚದರ ಕಿ.ಮೀ.ಗಳಷ್ಟು ವಿಸ್ತಾರವಾಗಿ ವ್ಯಾಪಿಸಿರುವ ಈ ಅಭಯಾರಣ್ಯ ಜೀವ ವೈವಿಧ್ಯತೆಯ ಆಗರವಾಗಿದೆ. ಇದು ಹುಲಿ ಸೇರಿದಂತೆ ವಿವಿಧ ಪ್ರಾಣಿ ಮತ್ತು ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ. ಪರಿಣಾಮಕಾರಿ ಸಂರಕ್ಷಣ ಕ್ರಮಗಳಿಂದಾಗಿ ಜೀವ ವೈವಿಧ್ಯತೆ, ಪರಿಸರ ಪ್ರವಾಸೋದ್ಯಮದ ಅವಕಾಶಗಳು ತೆರೆದುಕೊಂಡಿವೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಮಾನವ ರಹಿತ ವನ್ಯಜೀವಿಗಳ ಆವಾಸಸ್ಥಾನವಾಗಿ ಮಾರ್ಪಟ್ಟು, ಮಾದರಿ ಅಭಯಾರಣ್ಯವಾಗಿ 25 ವರ್ಷಗಳು ತುಂಬಿದ್ದು, ಈ ಕಾನನದಲ್ಲಿ ಆನೆ ಸೇರಿದಂತೆ ಹುಲಿ, ಚಿರತೆ, ಕಾಟಿ, ಜಿಂಕೆಗಳ ಜತೆಗೆ ಹುಲಿ ಬೆಕ್ಕು, ಕೆನ್ನಾಯಿ, ನರಿ, ಕರಡಿ, ಕಾಡು ಕುರಿ, ಕಾಡು ಹಂದಿ, ಕಡವೆ, ಮುಸೆಯಾ, ಕಾಡು ಪಾಪ ಮತ್ತು ಅಪರೂಪದ ಕೆಂದಳಿಲು, ಹಾರುವ ಓತಿ, ಮುಳ್ಳು ಹಂದಿ, ನೀರು ನಾಯಿ, ಪುನುಗಿನ ಬೆಕ್ಕು, ಮೊಸಳೆಯಂತಹ ಅಪಾರ ವನ್ಯಸಂಪತ್ತನ್ನು ಹೊಂದಿದೆ. ಶೋಲಾ ಕಾಡುಗಳು ಸೇರಿದಂತೆ ಎಲೆ ಉದುರುವ ಕಾಡು, ನಿತ್ಯಹರಿದ್ವರ್ಣದ ಕಾಡು, ಹುಲ್ಲುಗಾವಲಿನಿಂದ ಈ ಕಾನನ ಆವರಿಸಿದ್ದು, ವರ್ಷವಿಡೀ ಕಾಡು ಪ್ರಾಣಿಗಳ ಆಶ್ರಯತಾಣವಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 33ಕ್ಕೂ ಹೆಚ್ಚು ಹುಲಿಗಳು, 445 ಆನೆ, 119 ಚಿರತೆ ಸೇರಿದಂತೆ ಕಾಡುಕೋಣ ಸಂತತಿಯೂ ಇತ್ತೀಚೆಗೆ ಹೆಚ್ಚಾಗಿದ್ದು, ಈ ಕಾನನದತ್ತ ಈಗ ಪ್ರಾಣಿ ಪ್ರಿಯರ ಚಿತ್ತ ನೆಟ್ಟಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕಾಡಂಚಿನಲ್ಲಿ ಕೆಲ ತಿಂಗಳುಗಳ ಹಿಂದೆ ಹುಲಿ ದಾಳಿ ಹೆಚ್ಚಿದ ಪರಿಣಾಮವಾಗಿ ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ, ಚಾರಣವನ್ನು ನ.7ರಿಂದ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆಯಂತೆ ಬಂದ್ ಮಾಡಲಾಗಿದೆ. ಇದರ ಪರಿಣಾಮ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಫಾರಿಗೆ ಅವಕಾಶ ಇರುವುದರಿಂದ ಮುತ್ತೋಡಿ, ಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿರುವ ಲಕ್ಕವಳ್ಳಿ ವಿಭಾಗದಲ್ಲಿ ಕಳೆದ ಎರಡು ತಿಂಗಳುಗಳಿಂದ ಪ್ರಾಣಿ ಪ್ರಿಯರು ಸೇರಿದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಸಾಲು ಸಾಲು ರಜೆ, ವಾರಂತ್ಯಗಳಲ್ಲಿ ಪ್ರಾಣಿ ಪ್ರಿಯರ ದಂಡು ಭದ್ರಾದತ್ತ ನೆಟ್ಟಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರೂ ಇತ್ತ ಆಗಮಿಸುತ್ತಿದ್ದಾರೆ.
ಚುಕ್ಕಿ ಚಿರತೆ-ಕರಿಚಿರತೆ ಜೋಡಿ :
ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಆಗಾಗ ಕರಿ ಚಿರತೆ ಪತ್ತೆಯಾಗುತ್ತಿತ್ತು. ಆ ಸಂದರ್ಭದಲ್ಲಿ ವನ್ಯಜೀವಿ ಛಾಯಾಗ್ರಾಹಕರು ಸೇರಿದಂತೆ ಸಾವಿರಾರು ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿದ್ದರು. ಆದರೆ, ಕಳೆದ ಕೆಲ ತಿಂಗಳುಗಳಿಂದ ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಿಭಾಗದಲ್ಲಿ ಚುಕ್ಕಿ ಚಿರತೆಯ ಜತೆಗೆ ಕರಿ ಚಿರತೆ ಪ್ರತ್ಯಕ್ಷವಾಗುತ್ತಿರುವುದರಿಂದ ವನ್ಯಜೀವಿ ಛಾಯಾಗ್ರಾಹಕರು ಸೇರಿದಂತೆ ಪ್ರಾಣಿಪ್ರಿಯರು ಹೆಚ್ಚು ಆಗಮಿಸುತ್ತಿದ್ದಾರೆ. ಇದರ ಪರಿಣಾಮ ಇಲ್ಲಿನ ಅರಣ್ಯ ವಿಭಾಗದ ಪ್ರವಾಸೋದ್ಯಮದಲ್ಲಿಯೂ ಚೇತರಿಕೆ ಕಂಡಿದ್ದು, ಪ್ರವಾಸಿಗರ ಸಂಖ್ಯೆ ಸ್ವಲ್ಪ ದಿನಗಳವರೆಗೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.







