ಭಾರತದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ BMC; ಆದಾಯ ಹೇಗೆ ಬರುತ್ತೆ? ಖರ್ಚು ಎಷ್ಟಿರುತ್ತೆ?

Photo Credit : NDTV
ಮಹಾರಾಷ್ಟ್ರದ ಇಪ್ಪತ್ತೊಂಬತ್ತು ಪುರಸಭೆಗಳು ಜನವರಿ 15 ರಂದು ನಡೆಯಲಿರುವ ಬೃಹನ್ಮುಂಬಯಿ ಮಹಾನಗರಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ತಮ್ಮ ಹೊಸ ಮೇಯರ್ ಅನ್ನು ಆಯ್ಕೆ ಮಾಡಲಿವೆ. ಚುನಾವಣೆಗೆ 12 ದಿನಗಳು ಬಾಕಿ ಇರುವಾಗ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ 68 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಾಮಪತ್ರ ಹಿಂಪಡೆಯುವಿಕೆ ಅವಧಿ ಮುಗಿದ ನಂತರ, ಪ್ರತಿಸ್ಪರ್ಧಿ ಪಕ್ಷಗಳ ಹಲವಾರು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹಲವಾರು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡ ಕಾರಣ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧೆಯಿಲ್ಲದೆ ಗೆಲ್ಲುವಂತಾಯಿತು. ಅವಿರೋಧವಾಗಿ ಗೆದ್ದು ಗೊಂಡಿರುವ
68 ಸ್ಥಾನಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಪಡೆದುಕೊಂಡಿದೆ. ಥಾಣೆ ಜಿಲ್ಲೆಯ ಕಲ್ಯಾಣ್-ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಷನ್ನಿಂದ ಹೆಚ್ಚಿನ ಪಾಲು ಬಂದಿದ್ದು, ಪುಣೆ, ಪಿಂಪ್ರಿ ಚಿಂಚ್ವಾಡ್, ಪನ್ವೇಲ್, ಭಿವಾಂಡಿ, ಧುಲೆ, ಜಲಗಾಂವ್ ಮತ್ತು ಅಹಲ್ಯಾನಗರದಿಂದಲೂ ಹೆಚ್ಚು ಸೀಟುಗಳು ಬಿಜೆಪಿಗೆ ಸಿಕ್ಕಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 22 ಸ್ಥಾನಗಳಲ್ಲಿ ಅವಿರೋಧ ಗೆಲುವು ಸಾಧಿಸಿದರೆ, ಅಜಿತ್ ಪವಾರ್ ಅವರ ಎನ್ಸಿಪಿ ಎರಡು ಸ್ಥಾನಗಳನ್ನು ಗೆದ್ದಿದೆ.
►ಭಾರತದ ಅತ್ಯಂತ ಶ್ರೀಮಂತ ಪುರಸಭೆ
ಬಿಎಂಸಿ ದೇಶದ ಅತ್ಯಂತ ಶ್ರೀಮಂತ ಪುರಸಭೆ ಬೃಹನ್ಮುಂಬಯಿ ಮಹಾನಗರಪಾಲಿಕೆ (BMC). 2024-25ರ ಹಣಕಾಸು ವರ್ಷದಲ್ಲಿ, ಅದರ ಅಂದಾಜು ಬಜೆಟ್ ಇತರ ಎರಡು ಮಹಾನಗರಗಳಾದ ದೆಹಲಿ ಮತ್ತು ಬೆಂಗಳೂರಿನ ಬಜೆಟ್ಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ ಬಿಎಂಸಿ 59,954.7 ಕೋಟಿ ರೂ. ಬಜೆಟ್ ಅನ್ನು ಮಂಡಿಸಿತ್ತು. ಅದೇ ವೇಳೆ ದೆಹಲಿ ಪುರಸಭೆ (MCD) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗಾಗಿ ಬಜೆಟ್ಗಳು ಕ್ರಮವಾಗಿ 16,683 ಕೋಟಿ ರೂ. ಮತ್ತು 12,369 ಕೋಟಿ ರೂ. ಆಗಿವೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ನ ಹಣಕಾಸು ವರ್ಷದ ಬಜೆಟ್ 5,166.5 ಕೋಟಿ ರೂ.ಗಳಷ್ಟಿತ್ತು. ಕೇವಲ 10 ವರ್ಷಗಳಲ್ಲಿ ಬಿಎಂಸಿ ತನ್ನ ಬಜೆಟ್ ನ್ನು ದ್ವಿಗುಣಗೊಳಿಸಿದ್ದು 2024-25ರ ಹಣಕಾಸು ವರ್ಷದಲ್ಲಿ ಇದು ₹51,000 ಕೋಟಿ ಬೃಹತ್ ಮೊತ್ತವನ್ನು ತಲುಪಿದೆ. 2015-16ರ ಹಣಕಾಸು ವರ್ಷದಲ್ಲಿ 20,500 ಕೋಟಿ ರೂ.ಗಳಷ್ಟಿದ್ದ ಖರ್ಚು ಈ ವರ್ಷ 44,500 ಕೋಟಿ ರೂ.ಗಳಿಗೆ ಏರಿದೆ.
►ಬಿಎಂಸಿಯ ಆದಾಯ ಎಷ್ಟು ?
ಕಳೆದ ಒಂದು ದಶಕದಲ್ಲಿ ಬಿಎಂಸಿಯ ಆದಾಯವು ಸ್ಥಿರವಾಗಿ ಏರಿಕೆಯಾಗಿದೆ. ಸ್ಥಿರ ಠೇವಣಿಯು ಅದರ ವಾರ್ಷಿಕ ಆದಾಯದ ಒಂದು ಭಾಗವಾಗಿದೆ. ಆರ್ಥಿಕ ವರ್ಷ 2025 ರಲ್ಲಿ, ಬಿಎಂಸಿಯ ಆದಾಯವು 81,774 ಕೋಟಿ ರೂ ಆಗಿತ್ತು. ಬಿಎಂಸಿಯ ಆದಾಯದ ಅತಿದೊಡ್ಡ ಮೂಲವೆಂದರೆ ವಿವಿಧ ಸೇವೆಗಳು, ಪರವಾನಗಿಗಳು ಮತ್ತು ಬಳಕೆಗಳಿಗೆ ಶುಲ್ಕಗಳು. ಇನ್ನುಳಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆದ ಅನುದಾನಗಳು ಮತ್ತು ಸಬ್ಸಿಡಿಗಳು, ತೆರಿಗೆಗಳು ಮತ್ತು ಹೂಡಿಕೆಯ ಮೇಲಿನ ಆದಾಯ ಮತ್ತು ಬಡ್ಡಿಗಳು ಕೂಡಾ ಆದಾಯದ ಮೂಲಗಳಾಗಿವೆ.
2016 ಮತ್ತು 2025 ರ ನಡುವೆ ನಿಗಮವು ಬಳಕೆದಾರರಿಂದ ಪಡೆಯುವ ಶುಲ್ಕಗಳಿಂದ 94,600 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇದು ನೋಂದಣಿ ಶುಲ್ಕ, ಪ್ರವೇಶ ಶುಲ್ಕ, ಸೇವಾ ಪರವಾನಗಿ ನವೀಕರಣ ಶುಲ್ಕ, ಈಜುಕೊಳ ಕಾಯ್ದಿರಿಸುವಿಕೆ ಶುಲ್ಕ, ಕೆಡವುವಿಕೆ ಶುಲ್ಕ, ಜಾಹೀರಾತು ಶುಲ್ಕ, ನೀರಿನ ಸಂಪರ್ಕ ಶುಲ್ಕ ಇತ್ಯಾದಿಗಳನ್ನೊಳಗೊಂಡಿದೆ.
ವಿವಿಧ ಸರ್ಕಾರಿ ಯೋಜನೆಗಳಿಗೆ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಪರವಾಗಿ ಒದಗಿಸಲಾದ ಸೇವೆಗಳಿಗೆ ಪಡೆದ ಆದಾಯ ಅನುದಾನಗಳು ಮತ್ತು ಸಬ್ಸಿಡಿಗಳಿಂದ 86,700 ಕೋಟಿ ರೂಗಳನ್ನು ಬಿಎಂಸಿ ಗಳಿಸಿದೆ. ಉದಾಹರಣೆಗೆ, 2023-24 ರ ಹಣಕಾಸು ವರ್ಷದಲ್ಲಿ ಬಾಂದ್ರಾ-ಕುರ್ಲಾ ರಸ್ತೆಗಳನ್ನು ಸ್ವಚ್ಛಗೊಳಿಸಲು ಬಿಎಂಸಿ, ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಗೆ 61.7 ಕೋಟಿ ರೂ.ಗಳನ್ನು ವಿಧಿಸಿದೆ.
ಆರ್ಥಿಕ ವರ್ಷ 2016 ಮತ್ತು 2025 ರ ನಡುವೆ ಮುಂಬೈ ನಗರ ಆಡಳಿತಾಧಿಕಾರಿಗಳು ಬೀದಿ ತೆರಿಗೆ, ರಂಗಮಂದಿರ ತೆರಿಗೆ, ವಿದ್ಯುತ್ ತೆರಿಗೆ, ಆಸ್ತಿ ತೆರಿಗೆ, ನೀರಿನ ತೆರಿಗೆ ಇತ್ಯಾದಿ ತೆರಿಗೆಗಳಿಂದ 75,800 ಕೋಟಿ ರೂ.ಗಳನ್ನು ಗಳಿಸಿದ್ದಾರೆ
►ಬಿಎಂಸಿಯ ಖರ್ಚು ವೆಚ್ಟ
ರಸ್ತೆಗಳು, ಸೇತುವೆಗಳು, ಒಳಚರಂಡಿ ಮಾರ್ಗಗಳು, ಸಾರ್ವಜನಿಕ ಆರೋಗ್ಯ ನಿರ್ವಹಣೆ, ಶಿಕ್ಷಣ, ಭದ್ರತೆ, ನೌಕರರ ವೇತನ ಮತ್ತು ಪಿಂಚಣಿಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿಯು ಬಿಎಂಸಿಯ ಖರ್ಚಿನ ಅತಿದೊಡ್ಡ ಭಾಗವನ್ನು ಹೊಂದಿದೆ. ಕಳೆದ 10 ವರ್ಷಗಳಲ್ಲಿ ನಗರದ ನಿರ್ವಹಣೆ ಮತ್ತು ನವೀಕರಣಕ್ಕಾಗಿ ಬಿಎಂಸಿ 11,1600 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಈ ಅವಧಿಯಲ್ಲಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಗ್ರಂಥಾಲಯಗಳಿಗೆ ಅನುದಾನ ಮತ್ತು ವಿವಿಧ ನಿಧಿಗಳು ಮತ್ತು ಯೋಜನೆಗಳಿಗೆ ಕೊಡುಗೆಯಾಗಿ 10,700 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಅದೇ ರೀತಿ, ಸಾರ್ವಜನಿಕ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ 36,300 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಅಧಿಕೃತ ದಾಖಲೆಗಳ ಪ್ರಕಾರ ನಗರವು ಆಡಿಟ್, ವಿಮೆ, ಕಾನೂನು ವೆಚ್ಚಗಳು, ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ, ಇಂಧನ, ಪ್ರಯಾಣ, ಸರಕು ಸಾಗಣೆ ಮತ್ತು ವಾಹನಗಳು ಮುಂತಾದ ಆಡಳಿತಾತ್ಮಕ ಕಾರ್ಯಗಳಿಗಾಗಿ 8,600 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸಾರ್ವಜನಿಕ ಆರೋಗ್ಯ ಉಪಕ್ರಮಗಳಿಗಾಗಿ ಬಿಎಂಸಿಹೆಚ್ಚು ಖರ್ಚು ಮಾಡುತ್ತದೆ. 2025ರಲ್ಲಿ ಇದು ಸಾಂಕ್ರಾಮಿಕ ರೋಗಗಳು ಮತ್ತು ಕೀಟನಾಶಕಗಳನ್ನು ನಿಯಂತ್ರಿಸಲು 99.5 ಕೋಟಿ ರೂ.ಗಳನ್ನು ಮತ್ತು ಇಲಿ, ಹೆಗ್ಗಣಗಳ ನಿಯಂತ್ರಣಕ್ಕೆ 12.8 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
►ಮಹಾಯುತಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ವಾರ್ಡ್ಗಳಿಗೆ ಹೆಚ್ಚು ನಿಧಿ ಹಂಚಿಕೆ
ಕಳೆದ ಮೂರು ವರ್ಷಗಳಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಭಿವೃದ್ಧಿ ಕಾರ್ಯಗಳಿಗಾಗಿ ಹಂಚಿಕೆ ಮಾಡಿದ ನಿಧಿಯ ಶೇ 99 ಕ್ಕಿಂತ ಹೆಚ್ಚು ಹಣವನ್ನು ಮಹಾಯುತಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ವಾರ್ಡ್ಗಳಿಗೆ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಮಾಹಿತಿ ಹಕ್ಕು (RTI) ಕಾಯ್ದೆಯಡಿಯಲ್ಲಿ ಪಡೆದ ದಾಖಲೆಗಳ ತನಿಖೆಯಿಂದ ತಿಳಿದುಬಂದಿದೆ.
ಫೆಬ್ರವರಿ 2023 ಮತ್ತು ಅಕ್ಟೋಬರ್ 2025 ರ ನಡುವೆ ರಸ್ತೆ ದುರಸ್ತಿ, ಒಳಚರಂಡಿ ನವೀಕರಣ, ಆರೋಗ್ಯ ಸೌಲಭ್ಯಗಳು, ನಗರವನ್ನು ಸುಂದರಗೊಳಿಸುವ ಕಾರ್ಯಗಳು ಸೇರಿದಂತೆ ನಾಗರಿಕ ಅಭಿವೃದ್ಧಿಗಾಗಿ ಬಿಎಂಸಿ 1,490.66 ಕೋಟಿ ರೂ.ಗಳಿಗಿಂತ ಹೆಚ್ಚು ಮಂಜೂರು ಮಾಡಿದೆ ಎಂದು ದಾಖಲೆಗಳು ತೋರಿಸುತ್ತವೆ.
ಇದರಲ್ಲಿ1,476.92 ಕೋಟಿ ರೂಪಾಯಿ ಬಿಜೆಪಿ, ಅಜಿತ್ ಪವಾರ್ ನೇತೃತ್ವದ NCP ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾದ ಆಡಳಿತ ಮೈತ್ರಿಕೂಟದ ಶಾಸಕರು, MLC ಗಳು ಮತ್ತು ಸಂಸದರ ಅಧೀನದಲ್ಲಿರುವ ಪ್ರದೇಶಗಳಿಗೆ ಹೋಗಿವೆ ಎಂದು ದಾಖಲೆಗಳು ತೋರಿಸುತ್ತವೆ. ಈ ಪೈಕಿ ಬಿಜೆಪಿ ಶಾಸಕರು ರೂ. 1076.7 ಕೋಟಿಯಷ್ಟು ನಿಧಿ ಪಡೆದಿದ್ದು ಶಿಂಧೆ ನೇತೃತ್ವದ ಶಿವಸೇನಾ ರೂ. 372.7 ಕೋಟಿ ಪಡೆದಿದೆ .ಈ ಅವಧಿಯಲ್ಲಿ ವಿರೋಧ ಪಕ್ಷಕ್ಕೆ ಕೇವಲ 13.74 ಕೋಟಿ ಅಥವಾ ಶೇ. 0.9 ರಷ್ಟು ಮಾತ್ರ ನೀಡಲಾಯಿತು . ದಕ್ಷಿಣ ಮುಂಬೈನಲ್ಲಿರುವ ಅಲ್ಪಸಂಖ್ಯಾತರ ಗಣನೀಯ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರವಾದ ಮುಂಬಾದೇವಿಯನ್ನು ಪ್ರತಿನಿಧಿಸುವ ಕಾಂಗ್ರೆಸ್ನ ಶಾಸಕ ಅಮೀನ್ ಪಟೇಲ್ಗೆ ಇದನ್ನು ನೀಡಲಾಗಿದೆ. ಉಳಿದವರಲ್ಲಿ ಶಿವಸೇನಾದ (ಯುಬಿಟಿ) ಎಲ್ಲಾ ಹತ್ತು ಶಾಸಕರು, ಕಾಂಗ್ರೆಸ್ನ ಇಬ್ಬರು ಶಾಸಕರು ಮತ್ತು ಸಮಾಜವಾದಿ ಪಕ್ಷದ ಒಬ್ಬ ಶಾಸಕ ಯಾವುದೇ ಹಣವನ್ನು ಪಡೆದಿಲ್ಲ.
ಈ ರೀತಿ ನಿಧಿಯ ಹಂಚಿಕೆ ಭಾರತದ ಅತ್ಯಂತ ಶ್ರೀಮಂತ ಪುರಸಭೆಯಲ್ಲಿ ನ್ಯಾಯಯುತ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ, ಇಲ್ಲಿಯವರೆಗೆ 360 ಕೋಟಿ ರೂ.ಗಳನ್ನು ವಿತರಿಸಲಾಗಿದೆ . ಆದರೆ ಇದೆಲ್ಲವೂ ಸಿಕ್ಕಿದ್ದು ಆಡಳಿತ ಶಾಸಕರಿಗೆ.
ಏತನ್ಮಧ್ಯೆ, ಫೆಬ್ರವರಿ 2023 ರಲ್ಲಿ ಪರಿಚಯಿಸಲಾದ ನೀತಿಯೇ ನಿಧಿ ಹಂಚಿಕೆಯಲ್ಲಿನ ಅಸಮತೋಲನಕ್ಕೆ ಕಾರಣ. ಮಾರ್ಚ್ 2022 ರಲ್ಲಿ ಬಿಎಂಸಿಯ ಚುನಾಯಿತ ಕಾರ್ಪೊರೇಟರ್ಗಳ ಮಂಡಳಿಯನ್ನು ಅದರ ಅವಧಿಯ ಕೊನೆಯಲ್ಲಿ ವಿಸರ್ಜಿಸಿ ರಾಜ್ಯದಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿಗೆ ಅಧಿಕಾರ ನೀಡಲಾಗಿತ್ತು. ಅದೇ ವೇಳೆ ಚುನಾಯಿತ ಕಾರ್ಪೊರೇಟರ್ಗಳ ಅನುಪಸ್ಥಿತಿಯಲ್ಲಿ, ಶಾಸಕರು ಮತ್ತು ಸಂಸದರಿಗೆ 227 ವಾರ್ಡ್ಗಳಿಗೆ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಲು ಅಧಿಕಾರ ನೀಡಲಾಯಿತು .
ಆದಾಗ್ಯೂ, ಪ್ರಾಯೋಗಿಕವಾಗಿ ಈ ನೀತಿಯು ಶಾಸಕರು ಮತ್ತು ಸಂಸದರು ಎತ್ತಿರುವ ಬೇಡಿಕೆಗಳ ಆಧಾರದ ಮೇಲೆ ಹಣವನ್ನು ನೀಡುವ ಅಧಿಕಾರವನ್ನು 2023- 24ರಲ್ಲಿ ಶಿವಸೇನಾದ ದೀಪಕ್ ಕೇಸರ್ಕರ್ (ನಗರ) ಮತ್ತು ಬಿಜೆಪಿಯ ಮಂಗಲ್ ಪ್ರಭಾತ್ ಲೋಧಾ (ಉಪನಗರ) ಅವರಿಗೂ 2025 ಜನವರಿಯಿಂದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (ನಗರ) ಮತ್ತು ಬಿಜೆಪಿಯ ಆಶಿಶ್ ಶೆಲಾರ್ (ಉಪನಗರ) ಅವರಿಗೆ ಈ ಅಧಿಕಾರ ನೀಡಿತು.
ಈ ಬಗ್ಗೆ ಪ್ರತಿಕ್ರಿಯೆಗಾಗಿ ಶೆಲಾರ್ ಅವರನ್ನು ಸಂಪರ್ಕಿಸಿದಾಗ ಎಲ್ಲಾ ನಿಧಿ ಹಂಚಿಕೆಗಳನ್ನು ಬಿಎಂಸಿ ಮಾನದಂಡಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ನಡೆಸಲಾಗಿದೆ. ಇಲ್ಲಿ ಯಾವುದೇ ಪಕ್ಷಪಾತದ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಆದಾಗ್ಯೂ ಶಿಂಧೆ ಅಥವಾ ಅವರ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.







