ಪತನಕ್ಕೊಳಗಾದ Bombardier Learjet 45 : ಒಂದಲ್ಲ ಎರಡಲ್ಲ ನಾಲ್ಕು ಅಪಘಾತ; ಈ ವಿಮಾನ ಎಷ್ಟು ಸುರಕ್ಷಿತ?

Photo Credit : indiatoday.in
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ Bombardier Learjet 45 ಬುಧವಾರ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲ ಐದು ಜನರು ಮೃತಪಟ್ಟಿದ್ದಾರೆ. ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ, ವಿಟಿ-ಎಸ್ಎಸ್ಕೆ ಎಂದು ನೋಂದಾಯಿಸಿದ ವಿಮಾನವು ಲ್ಯಾಂಡಿಂಗ್ ಗೆ ಪ್ರಯತ್ನಿಸುವಾಗ ಪತನಗೊಂಡಿತು. ಲಿಯರ್ಜೆಟ್ 45 ಅವಳಿ-ಎಂಜಿನ್ ಲೈಟ್ ಬ್ಯುಸಿನೆಸ್ ಜೆಟ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಕಾರ್ಪೊರೇಟ್ ಮತ್ತು ವಿಐಪಿ ಪ್ರಯಾಣಕ್ಕಾಗಿ ಬಳಸಲಾಗುತ್ತದೆ. ಇದರ ಗಾತ್ರ ಮತ್ತು ಹೆಚ್ಚಿನ ವೇಗವು ಬಾರಾಮತಿಯಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ, ಸಣ್ಣ ಮತ್ತು ಮಧ್ಯಮ ವಲಯಗಳಿಗೆ ಸೂಕ್ತವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಜೆಟ್ ಲ್ಯಾಂಡಿಂಗ್ ಹಂತದಲ್ಲಿ ತೊಂದರೆ ಎದುರಿಸಿದೆ. ಆದಾಗ್ಯೂ ಘಟನೆಗಳ ನಿಖರವಾದ ಅನುಕ್ರಮವನ್ನು ಇನ್ನೂ ಪರಿಶೀಲಿಸಲಾಗುತ್ತಿದೆ
ಪತನಗೊಂಡ ಜೆಟ್ Bombardier Learjet 45, ಟೈಲ್ ನಂಬರ್ VT-SSK, ಸೀರಿಯಲ್ ನಂಬರ್ 45-417 ಆಗಿತ್ತು. ಇದು 16 ವರ್ಷ ಹಳೆಯ ವಿಮಾನ. ಈ ವಿಮಾನವು VSR ನಿರ್ವಹಿಸುವ ದೊಡ್ಡ ಫ್ಲೀಟ್ನ ಭಾಗವಾಗಿತ್ತು, ಇದು ಇಂದಿನ ಅಪಘಾತದಲ್ಲಿ ಭಾಗಿಯಾದ ವಿಮಾನ ಸೇರಿದಂತೆ 17 ವಿಮಾನಗಳನ್ನು ನಡೆಸುತ್ತದೆ.
► ವಿಮಾನವು 100% ಸುರಕ್ಷಿತ ಎಂದ VSR ವಿಮಾನಯಾನ ಸಂಸ್ಥೆ
ವಿಮಾನದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು VSR ವೆಂಚರ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಂಡಿಯಾ ಟುಡೇ ಟಿವಿ ಜತೆ ಮಾತನಾಡಿದ ವಿಎಸ್ಆರ್ ನ ಉನ್ನತ ಅಧಿಕಾರಿ ವಿಜಯ್ ಕುಮಾರ್ ಸಿಂಗ್, ವಿಮಾನವು "100% ಸುರಕ್ಷಿತವಾಗಿದೆ". ಸಿಬ್ಬಂದಿ ಸಾಕಷ್ಟು ಅನುಭವಿಗಳು ಎಂದು ಹೇಳಿದ್ದಾರೆ. ಹೊಸದಿಲ್ಲಿ ಮೂಲದ ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಆಗಸ್ಟ್ 2011 ರಲ್ಲಿ ಸ್ಥಾಪನೆಯಾಯಿತು. ಕಂಪನಿಯನ್ನು ವಿಜಯ್ ಕುಮಾರ್ ಸಿಂಗ್ ಮತ್ತು ರೋಹಿತ್ ಸಿಂಗ್ ನಿರ್ವಹಿಸುತ್ತಾರೆ.
ಇದು ಬ್ಯುಸಿನೆಸ್ ಪ್ರಯಾಣ ಮತ್ತು ವೈದ್ಯಕೀಯ ಕಾರ್ಯಾಚರಣೆಗಳಿಗೆ ಚಾರ್ಟರ್ ಸೇವೆಗಳನ್ನು ಒದಗಿಸುತ್ತದೆ. ಇದು ದಿನದ 24 ಗಂಟೆಯೂ ವಾಯುಯಾನ ಸೇವೆ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ
ಕಂಪನಿಯ ಮಾಹಿತಿಯ ಪ್ರಕಾರ, ವಿಎಸ್ಆರ್ 15 ವರ್ಷಗಳಿಗೂ ಹೆಚ್ಚು ಕಾರ್ಯಾಚರಣೆಯ ಅನುಭವವನ್ನು ಹೊಂದಿದೆ. 60 ಕ್ಕೂ ಹೆಚ್ಚು ಪೈಲಟ್ಗಳನ್ನು ನೇಮಿಸಿಕೊಂಡಿದ್ದು 99% ಗ್ರಾಹಕ ತೃಪ್ತಿ ದರವನ್ನು ಹೊಂದಿದೆ. ಇದು ಹೊಸದಿಲ್ಲಿ, ಮುಂಬೈ, ಹೈದರಾಬಾದ್ ಮತ್ತು ಭೋಪಾಲ್ನಿಂದ ಕಾರ್ಯನಿರ್ವಹಿಸುತ್ತದೆ.
ಇದರ ಸೇವೆಗಳಲ್ಲಿ ಏರ್ ಆಂಬ್ಯುಲೆನ್ಸ್ ಕಾರ್ಯಾಚರಣೆಗಳು, ಎಂಪ್ಟಿ ಲೆಗ್ ಫ್ಸೈಟ್, ಖಾಸಗಿ ಜೆಟ್ ಚಾರ್ಟರ್ಗಳು ಮತ್ತು ಖಾಸಗಿ ಜೆಟ್ ಸೇರಿವೆ.
►ವಿಮಾನದ ವಿಶೇಷತೆಗಳು
ಅಪಘಾತಕ್ಕೀಡಾದ ವಿಮಾನವು ಭಾರತದ ಅತಿದೊಡ್ಡ ನಾನ್-ಶೆಡ್ಯೂಲ್ಡ್ ವಿಮಾನ ನಿರ್ವಾಹಕರಲ್ಲಿ ಒಂದಾದ VSR ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಲಿಯರ್ಜೆಟ್ 45XR ವಿಮಾನವಾಗಿದೆ.
ಲಿಯರ್ಜೆಟ್ 45 ಎಂಬುದು ಬೊಂಬಾರ್ಡಿಯರ್ ಏರೋಸ್ಪೇಸ್ (1998-2009) ತಯಾರಿಸಿದ ಮಧ್ಯಮ ಗಾತ್ರದ ಬ್ಯುಸಿನೆಸ್ ಜೆಟ್ ಆಗಿದೆ. ಇದು 2,000-2,235 ನಾಟಿಕಲ್ ಮೈಲುಗಳ ವ್ಯಾಪ್ತಿಯನ್ನು ಹೊಂದಿದೆ.
ಎಂಟು ಪ್ರಯಾಣಿಕರಿಗೆ ಪ್ರಯಾಣಿಸಬಹುದಾದ ಆಸನ ವ್ಯವಸ್ಥೆ ಹೊಂದಿರುವ ಇದು ಅತಿ ವೇಗಕ್ಕೆ ಹೆಸರುವಾಸಿಯಾಗಿದೆ (ಮ್ಯಾಕ್ 0.78-0.81).
ಎರಡು ಹನಿವೆಲ್ TFE731 ಎಂಜಿನ್ಗಳಿಂದ ನಡೆಸಲ್ಪಡುವ ಇದು 51,000 ಅಡಿಗಳವರೆಗೆ ಹಾರಬಲ್ಲದು.
ಈ ಬ್ಯುಸಿನೆಸ್ ಜೆಟ್ ಅನ್ನು ಕಡಿಮೆ ಮತ್ತು ಮಧ್ಯಮ ದೂರದ ವಿಮಾನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ವಿಮಾನವು 47 ಅಡಿಗಳ ರೆಕ್ಕೆಗಳ ವಿಸ್ತೀರ್ಣ ಮತ್ತು 9,752 ಕೆಜಿ ತೂಕವನ್ನು ಹೊಂದಿದೆ.
ಕಂಪನಿಯನ್ನು ವಿಕೆ ಸಿಂಗ್ ಸ್ಥಾಪಿಸಿದರು. ವಿಎಸ್ಆರ್ ವೆಂಚರ್ಸ್ ವಿಮಾನವನ್ನು ನಿರ್ವಹಿಸುತ್ತಿದೆ. ಈ ಸಂಸ್ಥೆಯು ಖಾಸಗಿ ಜೆಟ್ ಚಾರ್ಟರ್ಗಳು, ಹೆಲಿಕಾಪ್ಟರ್ ಬಾಡಿಗೆಗಳು, ವೈದ್ಯಕೀಯ ಸ್ಥಳಾಂತರಿಸುವಿಕೆಗಳು (ಏರ್ ಆಂಬ್ಯುಲೆನ್ಸ್) ಮತ್ತು ವಿಮಾನ ಗುತ್ತಿಗೆಯಲ್ಲಿ ಪರಿಣತಿ ಹೊಂದಿದೆ. ಅವರ ಫ್ಲೀಟ್ನಲ್ಲಿ ಲಿಯರ್ಜೆಟ್ 45XR, ಬೀಚ್ಕ್ರಾಫ್ಟ್ ಸೂಪರ್ ಕಿಂಗ್ ಏರ್ B200 ಮತ್ತು ಅಗಸ್ಟಾ 109 ಹೆಲಿಕಾಪ್ಟರ್ಗಳಂತಹ ವಿಮಾನಗಳಿವೆ.
ಲಿಯರ್ಜೆಟ್ 45 ಅನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಪಂಚದಾದ್ಯಂತ ಬಳಸಲಾಗುತ್ತಿದೆ.
►ಈ ಹಿಂದೆಯೂ ನಡೆದಿತ್ತು ಲಿಯರ್ಜೆಟ್ ಅಪಘಾತ
VSR-ಸಂಬಂಧಿತ ಘಟಕದಿಂದ ನಿರ್ವಹಿಸಲ್ಪಡುವ ಲಿಯರ್ಜೆಟ್ ಅಪಘಾತಕ್ಕೀಡಾಗುತ್ತಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 14, 2023 ರಂದು, VSR ವೆಂಚರ್ಸ್ ಒಡೆತನದ ಲಿಯರ್ಜೆಟ್ 45XR (VT-DBL) ಭಾರೀ ಮಳೆಯ ಸಮಯದಲ್ಲಿ ಗೋಚರತೆ ಕಡಿಮೆ ಆದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ವಿಶಾಖಪಟ್ಟಣಂನಿಂದ ಆಗಮಿಸುತ್ತಿದ್ದ ವಿಮಾನ ಎರಡು ಭಾಗಗಳಾಗಿ ಮುರಿದು ಬೆಂಕಿ ಕಾಣಿಸಿಕೊಂಡಿತು. ಅಪಘಾತದಲ್ಲಿ ಎಂಟು ಮಂದಿ ಪ್ರಯಾಣಿಕರು ಬದುಕುಳಿದರು. ಈ ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ವರದಿ ತಿಳಿಸಿದೆ.
ಸುಮಾರು ಮೂರು ದಶಕಗಳ ಕಾರ್ಯಾಚರಣೆಯಲ್ಲಿ, ಲಿಯರ್ಜೆಟ್ 45/45XR ಜಾಗತಿಕವಾಗಿ ನಾಲ್ಕು ಬಾರಿ ಅಪಘಾತಕ್ಕೊಳಗಾಗಿದೆ. ಮೊದಲನೆಯದು 2003 ರಲ್ಲಿ ಇಟಲಿಯಲ್ಲಿ ಸಂಭವಿಸಿತು. ನಂತರ 2008 ರಲ್ಲಿ ಮೆಕ್ಸಿಕೋ ನಗರದಲ್ಲಿ ದೊಡ್ಡ ಅಪಘಾತ ಸಂಭವಿಸಿತು. ಈ ಅಪಘಾತದಲ್ಲಿ ಅಪಾರ ನಾಶ -ನಷ್ಟ ಉಂಟಾಗಿದೆ. 2021 ರಲ್ಲಿ ಮೆಕ್ಸಿಕೋದಲ್ಲಿ ಮೂರನೇ ಅಪಘಾತ ಸಂಭವಿಸಿದ್ದು ಅದು ಮಿಲಿಟರಿ-ಚಾಲಿತ ಲಿಯರ್ಜೆಟ್ 45XR ಒಳಗೊಂಡಿತ್ತು. ಭಾರತದಲ್ಲಿ ಇದೀಗ ಸಂಭವಿಸಿದ ಅಪಘಾತವು ನಾಲ್ಕನೆಯದ್ದಾಗಿದೆ.
2008 ನವೆಂಬರ್ 4 ರಂದು, ಮೆಕ್ಸಿಕನ್ ಆಂತರಿಕ ಕಾರ್ಯದರ್ಶಿ ಜುವಾನ್ ಕ್ಯಾಮಿಲೊ ಮೌರಿನೊ ಮತ್ತು ಇತರ ಒಂಬತ್ತು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಮಧ್ಯ ಮೆಕ್ಸಿಕೊ ನಗರದಲ್ಲಿ ಪತನಗೊಂಡಿತು. ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸುತ್ತಿರುವಾಗ ಅಪಘಾತ ಸಂಭವಿಸಿದ್ದು ಇದು ಏಳು ಜನರನ್ನು ಬಲಿ ತೆಗೆದುಕೊಂಡಿತು. ಮೆಕ್ಸಿಕೊ ನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ, ಲಿಯರ್ಜೆಟ್ 45 ಬಲವಾದ ಪ್ರಕ್ಷುಬ್ಧತೆಯನ್ನು ಅನುಭವಿಸಿತು. ಇದರಿಂದಾಗಿ, ವಿಮಾನ ಕೆಳಕ್ಕೆ ಬಿದ್ದು ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾದರು.
ಅದೇ ರೀತಿ, 2003 ರಲ್ಲಿ ಇಟಲಿಯ ಮಿಲಾನ್ ಲಿನೇಟ್ ವಿಮಾನ ನಿಲ್ದಾಣದಿಂದ ನಿಗದಿತ ಟೇಕ್ ಆಫ್ ನಂತರ ಈ ವಿಮಾನ ಅಪಘಾತಕ್ಕೀಡಾಯಿತು. ವಿಮಾನವು ನೆಲದಿಂದ ಮೇಲೇರಿದ ಕ್ಷಣಗಳಲ್ಲಿ ಹಕ್ಕಿಗಳ ಹಿಂಡಿಗೆ ಢಿಕ್ಕಿ ಹೊಡೆದಿದೆ.ಈ ಘಟನೆಯಲ್ಲಿ ಇಬ್ಬರೂ ಪೈಲಟ್ಗಳು ಸಾವಿಗೀಡಾದರು. ವಿಮಾನದ ನಿಯಂತ್ರಣವನ್ನು ಪಡೆಯಲು ವಿಫಲವಾದ ಕಾರಣ ಪೈಲಟ್ ವಿಮಾನ ನಿಲ್ದಾಣಕ್ಕೆ ಮರಳಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಅದೃಷ್ಟವಶಾತ್, ವಿಮಾನದಲ್ಲಿ ಬೇರೆ ಯಾವುದೇ ಪ್ರಯಾಣಿಕರಿರಲಿಲ್ಲ.
2021ರಲ್ಲಿ ಮೆಕ್ಸಿಕೋದ ವೆರಾಕ್ರೂಜ್ನಲ್ಲಿ ಟೇಕ್ ಆಫ್ ಆಗುವಾಗ ಲಿಯರ್ಜೆಟ್ 45XR ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಸಾವಿಗೀಡಾಗಿದ್ದರು.
►ಗಂಭೀರವಲ್ಲದ ಅಪಘಾತಗಳು
ಲಿಯರ್ಜೆಟ್ 45/45XR ವಿಶ್ವಾದ್ಯಂತ 40 ಕ್ಕೂ ಹೆಚ್ಚು ಬಾರಿ ಅಪಘಾತಕ್ಕೊಳಗಾಗಿದ್ದು ಇವು ಅಷ್ಟೇನೂ ಗಂಭೀರ ಅಪಘಾತಗಳಲ್ಲ. ಟೆಲ್ಲುರೈಡ್, ಕೊಲೊರಾಡೋ (2009), ಹೂಸ್ಟನ್, ಟೆಕ್ಸಾಸ್ (2018), ಮುಂಬೈ, ಭಾರತ (2023), ಮತ್ತು ಕೈರೋ, ಈಜಿಪ್ಟ್ (2025) ನಲ್ಲಿ ನಡೆದ ಘಟನೆಗಳಲ್ಲಿ ವಿಮಾನಕ್ಕೆ ಹಾನಿಯಾಗಿದ್ದು ಬಿಟ್ಟರೆ ಪ್ರಾಣಾಪಾಯಗಳು ಸಂಭವಿಸಿಲ್ಲ.
ಈ ವಿಮಾನ ಅಪಘಾತ ಇತಿಹಾಸ ನೋಡಿದರೆ ಹೆಚ್ಚಿನ ಘಟನೆಗಳಲ್ಲಿ ಲ್ಯಾಂಡಿಂಗ್ ಗೇರ್-ಸಂಬಂಧಿತ ವೈಫಲ್ಯಗಳು, ಸಮೀಪಿಸುವಾಗ ಅಥವಾ ಇಳಿಯುವಾಗ ಪ್ರತಿಕೂಲ ಹವಾಮಾನ, ನೆಲದ ನಿರ್ವಹಣೆ ಘಟನೆಗಳು ಮತ್ತು ಕಠಿಣ ಲ್ಯಾಂಡಿಂಗ್ಗಳು ಕಾಣಸಿಗುತ್ತವೆ. ಲಿಯರ್ಜೆಟ್ 45/45XR ಒಳಗೊಂಡ ಅಪಘಾತಗಳು ಮತ್ತು ಗಂಭೀರ ಘಟನೆಗಳು ಬಹು ಖಂಡಗಳಲ್ಲಿ ವರದಿಯಾಗಿವೆ. ಇದು ವಿಮಾನದ ವ್ಯಾಪಕ ಜಾಗತಿಕ ಬಳಕೆಯನ್ನು ಪ್ರತಿಬಿಂಬಿಸುತ್ತದೆ. ಉತ್ತರ ಅಮೆರಿಕದಲ್ಲಿ ಹೆಚ್ಚಿನ ಅಪಘಾತ ಸಂಭವಿಸಿದ್ದು, ದಕ್ಷಿಣ ಅಮೆರಿಕಾ, ಯುರೋಪ್, ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿಯೂ ಅಪಘಾತಗಳು ಸಂಭವಿಸಿವೆ.







