ಗೋದಾಮುಗಳಲ್ಲೇ ಧೂಳು ತಿನ್ನುತ್ತಿರುವ 65 ಕೋಟಿ ರೂ. ಮೌಲ್ಯದ ಪುಸ್ತಕಗಳು

ಸಾಂದರ್ಭಿಕ ಚಿತ್ರ | Photo credit : AI
ಬೆಂಗಳೂರು : ಸಾರ್ವಜನಿಕ ಗ್ರಂಥಾಲಯ ಇಲಾಖೆಯು 5 ವರ್ಷಗಳಲ್ಲಿ ಖರೀದಿಸಿರುವ 65 ಕೋಟಿ ರೂ. ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ವಿತರಣೆಯನ್ನೇ ಮಾಡಿಲ್ಲ. ಖರೀದಿಸಿರುವ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ವಿತರಣೆ ಮಾಡದ ಕಾರಣ ಗೋದಾಮುಗಳಲ್ಲೇ ಧೂಳು ತಿನ್ನುತ್ತಿವೆ !.
ಪುಸ್ತಕಗಳನ್ನು ಖರೀದಿಸುತ್ತಿಲ್ಲ, ಖರೀದಿಸಿದ ಪುಸ್ತಕಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಕಾಶಕರು ಮತ್ತು ಹಲವು ಲೇಖಕರು ಆರೋಪಿಸುತ್ತಿರುವ ನಡುವೆಯೇ 65 ಕೋಟಿ ರೂ. ಮೌಲ್ಯದ ಪುಸ್ತಕಗಳು ವಿತರಣೆಯಾಗದೇ ಗೋದಾಮುಗಳಲ್ಲೇ ಧೂಳು ತಿನ್ನುತ್ತಿರುವುದು ಮುನ್ನೆಲೆಗೆ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಕೆ.ಆರ್.ಜಗದೀಶ್ ಎಂಬವರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. 2026ರ ಅಕ್ಟೋಬರ್ 30ರಂದು ನೀಡಿರುವ ದೂರಿನ ಪ್ರತಿಯು ‘the-file.in' ಗೆ ಲಭ್ಯವಾಗಿದೆ.
ಗ್ರಂಥಾಲಯ ಇಲಾಖೆಯಲ್ಲಿ ಖರೀದಿಸುವ ಪುಸ್ತಕಗಳನ್ನು ಅದೇ ವರ್ಷದಲ್ಲಿ ವಿತರಣೆ ಮಾಡಬೇಕಿದ್ದರೂ ಸಕಾಲದಲ್ಲಿ ವಿತರಣೆ ಮಾಡುತ್ತಿಲ್ಲ. ಪುಸ್ತಕಗಳು ವಿತರಣೆಯಾಗದೇ ಗೋದಾಮುಗಳಲ್ಲಿ ಧೂಳು ತಿನ್ನುತ್ತಿದ್ದರೂ ಕೋಟ್ಯಂತರ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ ಎಂದು ಕೆ.ಆರ್.ಜಗದೀಶ್ ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
65 ಕೋಟಿ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಿರುವ ಗ್ರಂಥಾಲಯ ಇಲಾಖೆಯು ವಿತರಣೆ ಮಾಡದಿರುವ ಕುರಿತು ಕೆ.ಆರ್.ಜಗದೀಶ್ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದಿರುವ ಹಲವು ಮಾಹಿತಿ ಮತ್ತು ಧೂಳು ಹಿಡಿದಿರುವ ಪುಸ್ತಕಗಳ ಫೋಟೊಗಳನ್ನೂ ದೂರಿನಲ್ಲಿ ನೀಡಿರುವುದು ಗೊತ್ತಾಗಿದೆ.
ದೂರಿನಲ್ಲೇನಿದೆ? :
2022ರಿಂದ 2026-27ನೇ ಸಾಲಿನವರೆಗೆ ಬೆಂಗಳೂರು ನಗರದಲ್ಲಿ ಐದು ವಲಯಗಳಲ್ಲಿ ಒಟ್ಟು 65 ಕೋಟಿ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಿದೆ. ಆದರೆ ಇದುವರೆಗೂ ಪುಸ್ತಕಗಳನ್ನು ವಿತರಣೆ ಮಾಡಿಲ್ಲ. ಗೋದಾಮುಗಳಲ್ಲಿ ಧೂಳು ತಿನ್ನುತ್ತಿವೆ. ಹೀಗಾಗಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ನಷ್ಟವುಂಟಾಗಿದೆ. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪವೇ ಕಾರಣ ಎಂದು ದೂರಿನಲ್ಲಿ ಕೆ.ಆರ್.ಜಗದೀಶ್ ಅವರು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ. ಬೆಂಗಳೂರಿನ ಪ್ರತೀ ವಲಯಗಳಲ್ಲಿ 2022-23ನೇ ಸಾಲಿನಲ್ಲಿ 5 ಕೋಟಿ ರೂ.ಗೂ ಹೆಚ್ಚು ಮೊತ್ತದ ಪುಸ್ತಕಗಳನ್ನು ಖರೀದಿಸಲಾಗಿದೆ. 2023-24ನೇ ಸಾಲಿನಲ್ಲಿ 6.5 ಕೋಟಿ ರೂ., 2024-25ನೇ ಸಾಲಿನಲ್ಲಿ 3.5 ಕೋಟಿ ರೂ., 2026-27ನೇ ಸಾಲಿನಲ್ಲಿ 3 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ. ಪ್ರತೀ ವಲಯ ಕಚೇರಿಗಳಿಂದ ಒಟ್ಟು ಅಂದಾಜು 65 ಕೋಟಿ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ ಎಂದು ದೂರಿನಲ್ಲಿ ವಿವರಗಳನ್ನು ಒದಗಿಸಿರುವುದು ಗೊತ್ತಾಗಿದೆ.
ಸರಕಾರದ ಬೊಕ್ಕಸಕ್ಕೆ ನಷ್ಟ :
ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಇಡಲು ಸ್ಥಳಾವಕಾಶ ಇಲ್ಲ. ಆದರೂ ಪ್ರತೀ ವರ್ಷ ಪುಸ್ತಕಗಳನ್ನು ಖರೀದಿ ಮಾಡಲಾಗುತ್ತಿದೆ. ಆದರೆ ಸಕಾಲದಲ್ಲಿ ವಿತರಣೆ ಮಾಡುತ್ತಿಲ್ಲ. ಇದರಿಂದ ಪುಸ್ತಕ ಖರೀದಿ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ. 2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಖರೀದಿಸಲಾಗಿದೆಯಾದರೂ ಗ್ರಂಥಾಲಯಗಳಿಗೆ ವಿತರಣೆ ಮಾಡಿಲ್ಲ. ಈ ಪುಸ್ತಕಗಳು ಈಗ ಹಳೆಯದಾಗಿವೆ. ಮಾರುಕಟ್ಟೆಗೆ ಹೊಸ ಪಠ್ಯಕ್ರಮದ ಪುಸ್ತಕಗಳು ಬಂದಿವೆ. ಸಕಾಲದಲ್ಲಿ ವಿತರಣೆ ಮಾಡದ ಕಾರಣ ಪುಸ್ತಕಗಳು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದಂತಾಗಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.






