ಸೋನಿಯಾ ಗಾಂಧಿ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಭರ್ಜರಿ ಮಾರಾಟ; ಹ್ಯಾರಿ ಪಾಟರ್ ಬಳಿಕ ಪುಸ್ತಕ ಲೋಕ ಕಂಡ ಅತಿದೊಡ್ಡ ಕ್ರೇಝ್

ನ. 10ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ, ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ಏಕಕಾಲಕ್ಕೆ ಮಾರಾಟಕ್ಕೆ ಲಭ್ಯವಾಯಿತು. ಪುಸ್ತಕ ಮಾರಾಟಗಾರರು ಹಾಗೂ ಓದುಗರಿಂದ ಈ ಕೃತಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಪುಸ್ತಕವನ್ನು ಕೊಂಡುಕೊಳ್ಳಲು ಮಳಿಗೆಗಳ ಮುಂದೆ ಓದುಗರು ಮತ್ತು ಪತ್ರಕರ್ತರು ಸಾಲುಗಟ್ಟಿ ನಿಂತಿದ್ದರೆ, ಆನ್ ಲೈನ್ ಮಳಿಗೆಗಳಲ್ಲಿ ದಾಖಲೆಯ ಪ್ರಮಾಣದ ಆರ್ಡರ್ ಗಳು ದಾಖಲಾಗಿವೆ. ಈ ಮೂಲಕ ‘ಬಿಲಾಂಗಿಂಗ್’ ಕಳೆದೊಂದು ದಶಕದ ಅತಿದೊಡ್ಡ ಪಬ್ಲಿಷಿಂಗ್ ಈವೆಂಟ್ ಆಗಿ ಹೊರಹೊಮ್ಮಿದೆ.
ಸೋನಿಯಾ ಗಾಂಧಿ ಅವರ ಜೀವನದಷ್ಟೇ ಈ ಪುಸ್ತಕದ ಪಯಣವೂ ಕುತೂಹಲಕಾರಿಯಾಗಿದೆ. ಇದರಲ್ಲಿನ ವಿಷಯ ಮತ್ತು ಪ್ರಕಟಣೆಯ ಹಾದಿಯ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಚರ್ಚೆ ಹಾಗೂ ನಿರೀಕ್ಷೆಗಳಿದ್ದವು. ಬಿಡುಗಡೆಯ ದಿನವೇ ಈ ಕೃತಿಗೆ ಸಿಕ್ಕಿರುವ ಭರ್ಜರಿ ಪ್ರತಿಕ್ರಿಯೆಯು ಸೋನಿಯಾ ಅವರ ಬದುಕಿನ ಕಥೆಯನ್ನು ತಿಳಿಯಲು ಜನರಿಗಿರುವ ತೀವ್ರ ಆಸಕ್ತಿಗೆ ಸಾಕ್ಷಿಯಾಗಿದೆ. ಸುದ್ದಿಗಳ ಆಚೆಗಿನ ಅವರ ಬದುಕಿನ ಅಪರೂಪದ ನೋಟವನ್ನು ಈ ಕೃತಿ ಓದುಗರಿಗೆ ಕಟ್ಟಿಕೊಡಲಿದೆ ಎಂದು ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಪ್ರಕಾಶಕರಾದ ಹಾರ್ಪರ್ ಕಾಲಿನ್ಸ್ ಇಂಡಿಯಾ ನ. 12ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್’ ಕೃತಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಭಾರೀ ಚರ್ಚೆಗಳಾಗುತ್ತಿವೆ. ಪುಸ್ತಕಕ್ಕೆ ಮುಂಗಡವಾಗಿ ಆರ್ಡರ್ ಮಾಡಿ ಕಾಯುತ್ತಿರುವವರು, ಪುಸ್ತಕ ಈಗಾಗಲೇ ಕೈ ಸೇರಿದವರು, ಓದಲು ಶುರು ಮಾಡಿದವರು, ಓದಿ ಮುಗಿಸಿದವರು, ಪುಸ್ತಕವನ್ನು ಇಷ್ಟಪಟ್ಟವರು, ಟೀಕಿಸುವವರು ಹೀಗೆ ಈ ಪುಸ್ತಕ ಸಾಮಾಜಿಕ ಮಾಧ್ಯಮಗಳಲ್ಲಿ 'ಹವಾ' ಸೃಷ್ಟಿಸಿದೆ.
ಪುಸ್ತಕವನ್ನು ಓದುತ್ತಿರುವ ಫೋಟೊ ಹಂಚಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯ ಮೊದಲ ಕೆಲವು ಪುಟಗಳನ್ನು ತಿರುವಿ ಹಾಕುತ್ತಿದ್ದೇನೆ. ಇದು ಪ್ರೀತಿ, ನೋವು, ಬದುಕಿನ ಸವಾಲುಗಳನ್ನು ಎದುರಿಸಿ ನಿಂತ ಛಲ ಮತ್ತು ಆತ್ಮೀಯತೆಯ ಕಥೆ. ಭಾರತವನ್ನೇ ತನ್ನ ಮನೆಯನ್ನಾಗಿಸಿಕೊಂಡು, ವೈಯಕ್ತಿಕ ನಿಲುವುಗಳು ಹಾಗೂ ಸಾರ್ವಜನಿಕ ಜವಾಬ್ದಾರಿಗಳ ನಡುವೆ ರೂಪುಗೊಂಡ ಮಹಿಳೆಯೊಬ್ಬರ ಬದುಕಿನ ಅನುಭವಗಳನ್ನು ಅವರ ಈ ಪಯಣ ಪ್ರತಿಬಿಂಬಿಸುತ್ತದೆ. ಅಪರೂಪದ ಈ ಜೀವನಯಾನದ ಕುರಿತು ಅವರೇ ಹಂಚಿಕೊಂಡಿರುವ ಮನದಾಳದ ಮಾತುಗಳನ್ನು ಓದಲು ಉತ್ಸುಕನಾಗಿದ್ದೇನೆ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ದಿಲ್ಲಿಯ ಖಾನ್ ಮಾರ್ಕೆಟ್ ನ 'ಫಕೀರ್ ಚಂದ್' ಪುಸ್ತಕ ಮಳಿಗೆಯಲ್ಲಿ ಇದೇ ಪುಸ್ತಕ ಪೂರ್ಣ ಬೆಲೆಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. "ಮೊದಲ ದಿನ ನಾವು ಸುಮಾರು 500 ಪ್ರತಿಗಳನ್ನು ತರಿಸಿದ್ದೆವು. ಮೊದಲ ದಿನವೇ 100ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು" ಎನ್ನುತ್ತಾರೆ ಮಳಿಗೆಯ ಮಾಲೀಕರ ಕುಟುಂಬದ 28 ವರ್ಷದ ಅಭಿನವ್ ಬಮ್ಹಿ. ಓದುಗರ ಈ ಸ್ಪಂದನೆ ಕಂಡು ಮಳಿಗೆಯವರು ಹೆಚ್ಚುವರಿಯಾಗಿ ಇನ್ನೂ 350 ಪ್ರತಿಗಳಿಗೆ ಆರ್ಡರ್ ಮಾಡಿದ್ದಾರೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಈ ಯೋಜನೆಯಿಂದ ಹಿಂದೆ ಸರಿದ ಬಳಿಕ ಹಾರ್ಪರ್ ಕಾಲಿನ್ಸ್ ಸಂಸ್ಥೆಯು ಭಾರತದಲ್ಲಿ ಈ ಕೃತಿಯನ್ನು ಪ್ರಕಟಿಸಿದೆ. ನಕಲಿ ಪಿಡಿಎಫ್ (PDF) ಪ್ರತಿಗಳ ಮೂಲಕವೋ ಅಥವಾ ಪುಸ್ತಕ ಮಳಿಗೆಗಳಿಗೆ ತೆರಳಿಯೋ, ಒಟ್ಟಿನಲ್ಲಿ ಓದುಗರು ಪುಸ್ತಕವನ್ನು ಪಡೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.
►‘ಇದುವರೆಗಿನ ಅತಿದೊಡ್ಡ ಕ್ರೇಝ್’
'ಹ್ಯಾರಿ ಪಾಟರ್ ಅಂಡ್ ದಿ ಡೆತ್ಲಿ ಹ್ಯಾಲೋಸ್' ಬಿಡುಗಡೆಯಾದಾಗ ತಮ್ಮ ಬಾಲ್ಯದಲ್ಲಿ ಕಂಡಿದ್ದಂತಹ ಸಂಭ್ರಮವನ್ನು ಈಗ ಮತ್ತೆ ನೋಡುತ್ತಿರುವುದಾಗಿ ಬಮ್ಹಿ ಹೇಳುತ್ತಾರೆ. "ಅಂದು ಬೆಳಿಗ್ಗೆ 7 ಗಂಟೆಗೇ ಅಂಗಡಿಯ ಹೊರಗೆ ದೊಡ್ಡ ಸಾಲು ಇತ್ತು. ತಿಂಗಳುಗಟ್ಟಲೆ ಕಾದಿದ್ದ ಜನರು ಪುಸ್ತಕಕ್ಕಾಗಿ ಕಾತರರಾಗಿದ್ದರು. ಆ ನಂತರ ಓದುಗರಲ್ಲಿ ಇಷ್ಟೊಂದು ಉತ್ಸಾಹವನ್ನು ನಾನು ನೋಡುತ್ತಿರುವುದು ಇದೇ ಮೊದಲು. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಅರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಸೇರಿದಂತೆ ಯಾವ ಕೃತಿಯೂ ಇದರ ಹತ್ತಿರಕ್ಕೂ ಬಂದಿರಲಿಲ್ಲ" ಎಂದಿದ್ದಾರೆ.
ದೇಶದ 47 ನಗರಗಳಲ್ಲಿ 150 ಮಳಿಗೆಗಳನ್ನು ಹೊಂದಿರುವ 'ಕ್ರಾಸ್ವರ್ಡ್ ಬುಕ್ಸ್ಟೋರ್ಸ್' ಸಿಇಒ ಆಕಾಶ್ ಗುಪ್ತಾ, "ಹ್ಯಾರಿ ಪಾಟರ್ ಗೆ ಯಾವುದನ್ನೂ ಹೋಲಿಸಲು ಸಾಧ್ಯವಿಲ್ಲ. ಆದರೆ ಇದುವರೆಗೆ ನಾವು ಕಂಡ ಅತಿದೊಡ್ಡ ಕ್ರೇಝ್ ಎಂದರೆ ಅದು ಸೋನಿಯಾ ಗಾಂಧಿ ಅವರ ಪುಸ್ತಕದ್ದು. ಈ ವರ್ಷ ಬಿಡುಗಡೆಯಾದ 'ಒಡಿಸ್ಸಿ', 'ಡ್ಯೂನ್' ಮತ್ತು ಸಾರಾ ಜೆ. ಮಾಸ್ ಅವರ ಹೊಸ ಕೃತಿಗಳಿಗಿಂತಲೂ ಇದು ಮೇಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪುಸ್ತಕದ ಬಿಡುಗಡೆಯು ಮಳಿಗೆಗಳ ಪಾಲಿಗೆ ಸಾಗಾಟ ಮತ್ತು ವಿತರಣೆಯ ದೊಡ್ಡ ಸವಾಲಾಗಿತ್ತು. ಕಟ್ಟುನಿಟ್ಟಿನ ಗೌಪ್ಯತೆಯ ನಿಯಮದಂತೆ ಬೆಳಿಗ್ಗೆ 10 ಗಂಟೆಗೆ ಮುನ್ನ ಯಾವುದೇ ಬಾಕ್ಸ್ ಗಳನ್ನು ತೆರೆಯುವಂತಿರಲಿಲ್ಲ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪುಸ್ತಕವನ್ನು ಕಪಾಟುಗಳಲ್ಲಿ ಇರಿಸಲಾಗಿತ್ತು. ಕೆಲವು ನಗರಗಳಲ್ಲಿ ಸಾರಿಗೆ ವಿಳಂಬವಾದ ಕಾರಣ ಅಂದು ಸಂಜೆ ಅಥವಾ ಮರುದಿನ ಪುಸ್ತಕ ತಲುಪಿದೆ. ಬಹುತೇಕ ಮಳಿಗೆಗಳು ತೆರೆಯುವ ಮುನ್ನವೇ ಓದುಗರು ಹೊರಗೆ ಕಾಯುತ್ತಿದ್ದರು ಎಂದು ಗುಪ್ತಾ ವಿವರಿಸಿದ್ದಾರೆ.
ಕ್ರಾಸ್ ವರ್ಡ್ ವೆಬ್ ಸೈಟ್ ನಲ್ಲಿ 1,000ದಿಂದ 2,000 ಮುಂಗಡ ಆರ್ಡರ್ ಗಳು ಬಂದಿದ್ದು, ಈಗಾಗಲೇ ಎರಡು ಬಾರಿ ಹೆಚ್ಚುವರಿ ಪ್ರತಿಗಳನ್ನು ತರಿಸಲಾಗಿದೆ. ಮಾರಾಟವು 8,000ದ ಗಡಿಯತ್ತ ಸಾಗುತ್ತಿದ್ದು, ಮುಂದಿನ ವಾರದಲ್ಲಿ 10,000 ದಾಟುವ ನಿರೀಕ್ಷೆಯಿದೆ. "ಹೆಚ್ಚು ರಾಜಕೀಯ ಆಸಕ್ತಿ ಇರುವ" ನಗರ ಪ್ರದೇಶದ ಮಳಿಗೆಗಳು ಹಾಗೂ ಉತ್ತರ ಭಾರತದಲ್ಲಿ ಬೇಡಿಕೆ ಅತಿ ಹೆಚ್ಚಾಗಿದೆ. ಜೊತೆಗೆ ಕೇರಳದಲ್ಲೂ ಪುಸ್ತಕ ಉತ್ತಮವಾಗಿ ಮಾರಾಟವಾಗುತ್ತಿದೆ ಎಂದು ಗುಪ್ತಾ ಹೇಳಿರುವುದಾಗಿ 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಉಲ್ಲೇಖಿಸಿದೆ.
ಪುಸ್ತಕಕ್ಕೆ ಅಭೂತಪೂರ್ವ ಬೇಡಿಕೆ ಇದೆ. ಇತ್ತೀಚೆಗೆ ಅರುಂಧತಿ ರಾಯ್ ಅವರ ಆತ್ಮಕಥನ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕಕ್ಕೂ ಬಹಳ ದೊಡ್ಡ ಮಟ್ಟದ ಬೇಡಿಕೆ ಇತ್ತು. ಆದರೆ ಅದಕ್ಕೂ ಮೀರಿ 'ಬಿಲಾಂಗಿಂಗ್' ಮಾರಾಟವಾಗುತ್ತಿದೆ. ಆಕೃತಿ ಲ್ಯಾಬಿರಿಂತ್ ನಲ್ಲಿ ಬಿಡುಗಡೆಯ ಮೊದಲ ಎರಡು ದಿನಗಳಲ್ಲೇ ಸುಮಾರು 70 ಪ್ರತಿಗಳನ್ನು ಮಾರಾಟ ಮಾಡಿದ್ದೇವೆ. ಇನ್ನೂ ಹಲವು ಕಡೆಗಳಿಂದ ಆರ್ಡರ್ ಬರುತ್ತಲೇ ಇದೆ. ರಾಜಕಾರಣಿಯೊಬ್ಬರ ಆತ್ಮಕಥೆಯನ್ನು ಜನರು ಇಷ್ಟು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿ ಓದುತ್ತಿರುವುದನ್ನು ನನ್ನ 15 ವರ್ಷಗಳ ಪುಸ್ತಕ ಮಾರಾಟದ ಅನುಭವದಲ್ಲಿ ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಬೆಂಗಳೂರಿನ ಆಕೃತಿ ಲ್ಯಾಬಿರಿಂತ್ ಬುಕ್ ಸ್ಟೋರ್ ನ ಮಾಲೀಕ ಹಾಗೂ ಪ್ರಕಾಶಕ ಗುರುಪ್ರಸಾದ್ ಡಿ.ಎನ್. ಹೇಳುತ್ತಾರೆ.
►ಯಾರು ಖರೀದಿಸುತ್ತಿದ್ದಾರೆ?
1,299 ರೂ. ಬೆಲೆಯ ಈ ಹಾರ್ಡ್ಕವರ್ ಪುಸ್ತಕವನ್ನು ಯಾರೂ ಸುಮ್ಮನೆ ಆಸಕ್ತಿಗೆಂದು ತಕ್ಷಣಕ್ಕೆ ಕೊಂಡುಕೊಳ್ಳುವುದಿಲ್ಲ. "ಸಾಕಷ್ಟು ಯುವಕರು ಪುಸ್ತಕ ಕೊಳ್ಳಲು ಬರುತ್ತಿದ್ದಾರೆ. ಆದರೆ ಬೆಲೆ ನೋಡಿ ಕೆಲವರು ಅಲ್ಲೇ ಇಟ್ಟು ಹೋಗುತ್ತಾರೆ. ಆಮೇಲೆ ತೆಗೆದುಕೊಳ್ಳುತ್ತೇವೆ ಅಥವಾ ಬೇರೆ ಕಡೆಯಿಂದ ಪಡೆಯುತ್ತೇವೆ ಎನ್ನುತ್ತಾರೆ" ಎಂದು ಬಮ್ಹಿ ಹೇಳುತ್ತಾರೆ. ಅವರ ಪ್ರಕಾರ, ಖರೀದಿದಾರರಲ್ಲಿ ಹೆಚ್ಚಿನವರು 25ರಿಂದ 40 ವರ್ಷದೊಳಗಿನವರು. ಮುಖ್ಯವಾಗಿ ಉದ್ಯೋಗಿಗಳು, ಕಾರ್ಪೊರೇಟ್ ವಲಯದವರು ಮತ್ತು ವಕೀಲರು. ಇವರ ಜೊತೆಗೆ ಕೆಲವು ಹಿರಿಯ ಓದುಗರೂ ಇದ್ದಾರೆ.
ಯುವ ಭಾರತೀಯರಲ್ಲಿರುವ ರಾಜಕೀಯ ಆಸಕ್ತಿಯೂ ಇದಕ್ಕೆ ಕಾರಣ ಎನ್ನುತ್ತಾರೆ ಬಮ್ಹಿ. "ಪ್ರತಿಯೊಬ್ಬರೂ ರಾಜಕೀಯ ವಿದ್ಯಮಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಖುದ್ದಾಗಿ ಎಲ್ಲೂ ಹೋಗದಿದ್ದರೂ, ಮಾನಸಿಕವಾಗಿಯಾದರೂ ರಾಜಕೀಯವಾಗಿ ಜಾಗೃತರಾಗಿದ್ದಾರೆ. ಇದು ಈ ಪುಸ್ತಕಕ್ಕೆ ಪೂರಕ ವಾತಾವರಣ ಸೃಷ್ಟಿಸಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಆತ್ಮಕಥೆಯೊಂದಕ್ಕೆ ಭಾರತದಲ್ಲಿ ಇಷ್ಟೊಂದು ಬೇಡಿಕೆ ಬಂದಿರುವುದು ಇದೇ ಮೊದಲು. ಪಾಶ್ಚಿಮಾತ್ಯ ದೇಶಗಳಲ್ಲಿ ರಾಜಕೀಯ ಆತ್ಮಕಥೆಗಳಿಗೆ ದೊಡ್ಡ ಮಾರುಕಟ್ಟೆಯಿದೆ. ಆದರೆ ಭಾರತದಲ್ಲಿ, ಅದರಲ್ಲೂ ಅಗ್ರಗಣ್ಯ ರಾಜಕಾರಣಿಗಳಿಂದ ಇಂತಹ ಕೃತಿಗಳು ಬರುವುದು ಅಪರೂಪ ಎನ್ನುತ್ತಾರೆ ಗುಪ್ತಾ. "ಅವರ ಬಾಯಿಂದಲೇ ಸತ್ಯವನ್ನು ಕೇಳಲು ಪ್ರತಿಯೊಬ್ಬರೂ ಕಾಯುತ್ತಿದ್ದ ಪುಸ್ತಕವಿದು" ಎಂದಿದ್ದಾರೆ.
'ಬಿಲಾಂಗಿಂಗ್' ಪುಸ್ತಕದ ಮಾರಾಟ ಚೆನ್ನಾಗಿ ಆಗುತ್ತಿದೆ. ಮುಂಗಡ ಆರ್ಡರ್ ಗಳೂ ಉತ್ತಮವಾಗಿ ಬಂದಿದ್ದವು. ನೇಪಾಳ, ಮಧ್ಯಪ್ರದೇಶ, ಗುಜರಾತಿನಿಂದಲೂ ನಮಗೆ ಆರ್ಡರ್ ಬಂದಿದೆ. ನಮ್ಮ ಅಂಗಡಿಯಲ್ಲಿ ಇಂಗ್ಲಿಷ್ ಪುಸ್ತಕಗಳು ಕಡಿಮೆ. ಆದರೂ ಈ ಪುಸ್ತಕಕ್ಕೆ ಆನ್ಲೈನ್ ನಲ್ಲಿ ನಮಗೆ ಹೆಚ್ಚಿನ ಬೇಡಿಕೆ ಬಂದಿದೆ. ಇಲ್ಲಿಯವರೆಗೆ ಎಪ್ಪತ್ತಕ್ಕಿಂತಲೂ ಹೆಚ್ಚು ಪ್ರತಿಗಳು ನಮ್ಮಲ್ಲಿ ಮಾರಾಟವಾಗಿವೆ ಎಂದು ಬೆಂಗಳೂರಿನ ವಿಜಯನಗರದಲ್ಲಿರುವ ಬೀಟೆಲ್ ಬುಕ್ ಶಾಪ್ಸ್ ನ ಧನಂಜಯ್ ಹೇಳುತ್ತಾರೆ.
►ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ ಪಿಡಿಎಫ್
ಈ ಪುಸ್ತಕದ ಉಚಿತ ಆವೃತ್ತಿಯೂ ಲಭ್ಯವಿದೆ. ಯಾವುದೇ ವಾಟರ್ಮಾರ್ಕ್ ಇಲ್ಲದ ಈ ಪುಸ್ತಕದ ನಕಲಿ ಪಿಡಿಎಫ್ ಪ್ರತಿ ವ್ಯಾಪಕವಾಗಿ ಹರಿದಾಡುತ್ತಿದೆ ಎಂದು ಚಂಡೀಗಢದ 'ಬ್ರೌಸರ್' ಪುಸ್ತಕ ಮಳಿಗೆಯ ಮಾಲೀಕ ಪಂಕಜ್ ಪಿ. ಸಿಂಗ್ ತಿಳಿಸಿದ್ದಾರೆ.
ಪಿಡಿಎಫ್ ಎಷ್ಟೇ ಹರಿದಾಡಿದ್ದರೂ ಅದು ಎಲ್ಲರ ಬಳಿಯೂ ಇಲ್ಲ. ಜೊತೆಗೆ, ಇಂತಹ ಪುಸ್ತಕಕ್ಕೆ ಬೆಲೆ ಒಂದು ವಿಷಯವೇ ಅಲ್ಲದ ಕಾರಣ ಜನರು ಈಗಲೂ ದೊಡ್ಡ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಆದರೆ ಈ ಭರಾಟೆ ಹೆಚ್ಚು ದಿನ ಇರುವುದಿಲ್ಲ ಎಂಬುದು ಅವರ ಅಂದಾಜು. "ಇದು ತಕ್ಷಣಕ್ಕೆ ಚರ್ಚೆಯಾಗುವಂತಹ ಪುಸ್ತಕ. ಮುಂದಿನ ಕೆಲವು ವಾರಗಳಲ್ಲಿ ಮಾರಾಟ ಇಳಿಮುಖವಾಗುವ ಸಾಧ್ಯತೆಯಿದೆ" ಎಂದು ಅವರು ಹೇಳಿದ್ದಾರೆ.
ನಕಲಿ ಪ್ರತಿ ಅಥವಾ ಕ್ವಿಕ್ ಕಾಮರ್ಸ್ ರಿಯಾಯಿತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರತಿಕ್ರಿಯಿಸಿಲ್ಲ.
►ಕ್ಷಣಿಕ ಸಂಭ್ರಮವೋ ಅಥವಾ ಮಾರುಕಟ್ಟೆಯೋ?
ಪುಸ್ತಕ ಮಳಿಗೆಗಳ ಮುಂದೆ ಸಾಲು ಇರುವವರೆಗೂ ಮಾರಾಟಗಾರರು ಈ ಸಂಭ್ರಮವನ್ನು ಆನಂದಿಸುತ್ತಿದ್ದಾರೆ. ಡಿಸೆಂಬರ್ ನಲ್ಲಿ 'ಹ್ಯಾರಿ ಪಾಟರ್' ಟಿವಿ ಸರಣಿ ಬರುತ್ತಿರುವುದರಿಂದ ಮತ್ತೊಮ್ಮೆ ಗ್ರಾಹಕರ ದಂಡು ಹರಿದುಬರಲಿದೆ ಎಂಬ ನಿರೀಕ್ಷೆಯಲ್ಲಿ ಗುಪ್ತಾ ಇದ್ದಾರೆ.
"ಹ್ಯಾರಿ ಪಾಟರ್ ಪುಸ್ತಕ ಮಳಿಗೆಗಳ ಪಾಲಿಗೆ ಒಂದು ದೊಡ್ಡ ವಿದ್ಯಮಾನವಾಗಿತ್ತು. ಅದರ ಅರ್ಧದಷ್ಟು ಸಂಭ್ರಮ ಅಡಗಿದ್ದೇ ಮಳಿಗೆಗಳಿಗೆ ಬಂದು ಪುಸ್ತಕ ಕೊಳ್ಳುವುದರಲ್ಲಿ" ಎಂದು ಅವರು ಸ್ಮರಿಸಿದ್ದಾರೆ. ಈ ವಾರದ ಕೆಲವು ದಿನಗಳ ಮಟ್ಟಿಗೆ ಸೋನಿಯಾ ಗಾಂಧಿ ಅವರ ಆತ್ಮಕಥೆಯೂ ಅಂತಹದ್ದೇ ಸಂಭ್ರಮ ಸೃಷ್ಟಿಸಿದೆ.






